ನಾವು ಚಿಕ್ಕವರಿದ್ದಾಗ ಎಪ್ರಿಲ್ ೧ರಂದು ಒಬ್ಬರನ್ನೊಬ್ಬರು ಫೂಲ್ ಮಾಡಲು ಹೊಸಬರನ್ನು ಪ್ರಶ್ನಿಸುತ್ತಿದ್ದುದು ಹೀಗೆ… ಮೊದಲು ತಿ ತಿ ತಿ ಎಷ್ಟು ತಿ? ಎಂದು ಕೇಳುತ್ತಿದ್ದೆವು. ಆಗ ಅವರಿಗೆ ಗೊತ್ತಾಗದಿದ್ದರೆ ನಾವೇ ಮೂರುತಿ ಎನ್ನಬೇಕು ಎಂದು ಉದಾಹರಿಸಿ ನಂತರದ ಪ್ರಶ್ನೆಯಾಗಿ ಖ ಖ ಖ ಎಷ್ಟು ಖ… ? ಆಗ ಅಭ್ಯಾಸ ಬಲದಿಂದ ಅವರು ಮೂರುಖ ಎಂದರೆ ನೀನೇ ಮೂರ್ಖ ಎಂದು ಗೋಳು ಹೊಯ್ಯುತ್ತಿದ್ದುದು ಮನಸ್ಸಿನಲ್ಲಿ ಅಚ್ಚಳಿಯದ ಪುಟವಾಗಿದೆ. ಆದರೆ ಈಗಿನ ಕಾಲಕ್ಕೆ ಇದು ಅಪ್ರಸ್ತುತವೊ ಏನೊ.. ಫೇಸ್ ಬುಕ್ ಹಾಗೂ ವಾಟ್ಸಪ್’ಗಳಂತಹ ಆಧುನಿಕ ತಾಣಗಳಿಂದ ದಿನಾ ಪುನರಾವರ್ತಿತಗೊಳ್ಳುವ ಜೋಕುಗಳಿಂದ ಮನಸ್ಸು ಹಳಸಿ ಹೋಗಿ, ಮೇಲಿನ ಮುಗ್ಧ ಹಾಸ್ಯ ನಮ್ಮನ್ನೆಲ್ಲ ನಗಲಾರದಂತೆ ಮಾಡಿವೆ.
ಕೆಲವು ಚಾರಿತ್ರಿಕ ದಾಖಲೆಗಳ ಪ್ರಕಾರ ಏಪ್ರಿಲ್ ಫೂಲ್ ಪರಂಪರೆಯ ಆದಿಯನ್ನು 1582ರ ಫ್ರಾನ್ಸ್ ಇತಿಹಾಸದಲ್ಲಿ ಗುರುತಿಸಲಾಗುತ್ತದೆ. 1581ರ ಹೊಸ ವರ್ಷದ ಸಂದರ್ಭವನ್ನು ಎಂಟು ದಿನಗಳ ಕಾಲ ಆಚರಿಸಲಾಗಿತ್ತು. ಏಪ್ರಿಲ್ 1ರಂದು ಕೊನೆಯ ದಿನವಾಗಿತ್ತು. ಚಾರ್ಲ್ಸ್ ದೊರೆಯು ಗ್ರಿಗೋರಿಯನ್ ಕ್ಯಾಲೆಂಡರನ್ನು ಜಾರಿಗೊಳಿಸಿದ ನಂತರ ಹೊಸ ವರ್ಷಾಚರಣೆಯನ್ನು ಜನವರಿ 1 ಕ್ಕೆ ಬದಲಾಯಿಸಲಾಗಿತ್ತು. ಅಂದಿನ ಕಾಲದಲ್ಲಿ ಸಂಪರ್ಕ ಮಾಧ್ಯಮ ಸೀಮಿತವಾಗಿದ್ದ ಪರಿಣಾಮ ಈ ಬದಲಾವಣೆಯ ಸುದ್ದಿ ಅನೇಕ ದೇಶಗಳಿಗೆ ತಲುಪಲು ಹಲವು ವರ್ಷಗಳೇ ಬೇಕಾಯಿತು. ಕೆಲವು ಸಂಪ್ರದಾಯಸ್ಥರು ಹೊಸ ಕ್ಯಾಲೆಂಡರ್ ಅನ್ನು ಒಪ್ಪಿಕೊಳ್ಳದೆ ಏಪ್ರಿಲ್ 1ರಂದೇ ಹೊಸ ವರ್ಷಾಚರಣೆ ಮಾಡುತ್ತಿದ್ದರು. ಈ ಜನತೆಯನ್ನು ಸಾರ್ವಜನಿಕರು ಮೂರ್ಖರೆಂದು ಕರೆಯಲಾರಂಭಿಸಿದರು. ಈ ಸಮುದಾಯಗಳು ಜನರಿಂದ ಅಪಹಾಸ್ಯಕ್ಕೀಡಾದವು. ಈ ಜನರು ಹಾಸ್ಯದ ವಸ್ತುಗಳಾಗಿ ಪರಿಣಮಿಸಿದರು.
ಜನರನ್ನು ಅಪಹಾಸ್ಯಕ್ಕೀಡುಮಾಡುವ ಈ ವ್ಯವಸ್ಥೆಯೇ ಕ್ರಮೇಣ ಒಂದು ಪರಂಪರೆಯಾಗಿ ಬೆಳೆದು ಏಪ್ರಿಲ್ ಒಂದನೆಯ ತಾರೀಖು ಜನರನ್ನು ಮೂರ್ಖರನ್ನಾಗಿ ಮಾಡುವ ದಿನವನ್ನಾಗಿ ಆಚರಿಸಲಾಯಿತು. ಈ ಸಂಪ್ರದಾಯವೇ 18ನೆಯ ಶತಮಾನದಲ್ಲಿ ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡಿಗೂ ವಿಸ್ತರಣೆಗೊಂಡು, ಬ್ರಿಟಿಷ್ ಮತ್ತು ಫ್ರೆಂಚ್ ವಸಾಹತುಗಳಲ್ಲೂ ಬೆಳೆಯಿತು. ಹಾಗಾಗಿ ಏಪ್ರಿಲ್ ಫೂಲ್ಸ್ ದಿನಾಚರಣೆ ಜಾಗತಿಕ ಹಾಸ್ಯ ಹಬ್ಬವಾಗಿ ಪರಿಣಮಿಸಿ ವಿವಿಧ ದೇಶಗಳಲ್ಲಿ ವಿಭಿನ್ನ ಸ್ವರೂಪಗಳಲ್ಲಿ ವ್ಯಕ್ತವಾಗತೊಡಗಿತು. ಕಾಲಕ್ರಮೇಣ ಏಪ್ರಿಲ್ 1 ರಂದು ಸ್ನೇಹಿತರನ್ನು, ಜನ ಸಾಮಾನ್ಯರನ್ನು ಕುಚೇಷ್ಟೆ ಮಾಡುವುದು ಸರ್ವವ್ಯಾಪಿಯಾಗತೊಡಗಿತು.
ಏನೇ ಆದರೂ, ಏಪ್ರಿಲ್ ಫೂಲ್ ದಿನಾಚರಣೆ ಸಾಮಾನ್ಯ ಜನರಿಗಷ್ಟೇ ಏಪ್ರಿಲ್ ಒಂದರಂದು ಬರುತ್ತದೆ. ಆಳ್ವಿಕರಿಗೆ, ರಾಜಕಾರಣಿಗಳಿಗೆ ದಿನನಿತ್ಯವೂ ಏಪ್ರಿಲ್ ಫೂಲ್ ದಿನವೇ. ಯಾವುದಾದರೂ ಒಂದು ರೀತಿಯಲ್ಲಿ ಜನರನ್ನು ಫೂಲ್ ಮಾಡುತ್ತಲೇ ಇರುತ್ತಾರೆ. ಜನಸಾಮಾನ್ಯರೂ ಮೂರ್ಖರಾಗುತ್ತಲೇ ಇರುತ್ತಾರೆ….ಏನಂತೀರಾ??
ಎರಡು ಹಾಸ್ಯ ಪ್ರಸಂಗಗಳು ನಿಮಗಾಗಿ..
1. ನೀರು ಹೊತ್ತು ಬಿದ್ದೆ ಬೇಸ್ತು
ನಾನು ಬಿ.ಇ. ಪ್ರಥಮ ವರ್ಷದಲ್ಲಿದ್ದಾಗ ನಡೆದ ಘಟನೆ. ಪ್ರತಿ ತಿಂಗಳ ಮೊದಲ ವಾರ ಇಂಟರ್ನಲ್ ಪರೀಕ್ಷೆಗಳು ನಡೆಯುತ್ತಿದ್ದವು. ಹಾಗೆ ಓದಿ ಓದಿ ಸುಸ್ತಾಗಿದ್ದ ನಾನು ತೂಕಡಿಸುತ್ತ ಮೇಜಿನಲ್ಲೇ ಪವಡಿಸಿದ್ದೆ. ಆಗ ಹೊರಗಡೆಯ ಕಾರಿಡಾರಿನಿಂದ ಏದುಸಿರು ಬಿಡುತ್ತಾ ಒಳ ಬಂದ ನನ್ನ ರೂಮಿನ ಗೆಳತಿ ನನ್ನನ್ನು ಎಬ್ಬಿಸುತ್ತಾ “ ಈಗ ತಾನೆ ಪಕ್ಕದ ಹಾಸ್ಟೇಲಲ್ಲಿ ನೀರು ನಿಂತು ಹೋಯ್ತಂತೆ ಕಣೆ, ಸುಮಾ ಅರ್ಧ ಸ್ನಾನದಲ್ಲಿದ್ದಾಳಂತೆ. ಕಡೇ ಪಕ್ಷ ಅರ್ಧಬಕೆಟ್ ನೀರಾದರೂ ಬೇಕಂತೆ. ಸೀನಿಯರ್ಸ್ ರೇಗಿಸುವ ಮೊದಲೆ ಕೊಟ್ಟು ಬಿಡು ಬೇಗ ಹೋಗು” ಎಂದು ಒಂದೇ ಉಸಿರಲ್ಲಿ ಹೇಳಿ ಮುಗಿಸಿದಾಗ ನನಗೆ ದಿಕ್ಕೇ ತೋಚಲಿಲ್ಲ. ಕೆಲವೊಮ್ಮೆ ನೀರು ನಿಂತಾಗ ಆಗುವ ಫಜೀತಿ ನನಗೂ ಅಲ್ಪ ಸ್ವಲ್ಪ ಅನುಭವವಿತ್ತು. ಪಿಯುಸಿಯಲ್ಲಿ ನನ್ನ ಬೆಂಚಲ್ಲೇ ಕುಳಿತು ಕಲಿತವಳು ಇಂದು ಆ ಸ್ಥಿತಿಯಲ್ಲಿರಬೇಕಾದರೆ ಸಹಾಯ ಮಾಡುವುದು ಸಮಂಜಸವೆನಿಸಿದ್ದೇ ತಡ ನಮ್ಮ ಹಾಸ್ಟೆಲಿನ ಬಾತ್ರೂಮಿನಿಂದ ನನ್ನ ಬಕೇಟಲ್ಲೇ ನೀರು ಹಿಡಿದು ಪಕ್ಕದ ಕಟ್ಟಡದಲ್ಲಿದ್ದ ಅವಳ ರೂಮಿನತ್ತ ಧಾವಿಸಿದೆ. ಅಲ್ಲಿದ್ದವರೆಲ್ಲಾ ಪ್ರಶ್ನಾರ್ಥಕವಾಗಿ ನನ್ನನ್ನು ನೋಡಿದಾಗ ಮಂಪರು ಪೂರ್ತಿಯಾಗಿ ಹರಿದು ದಿಗಿಲಾಯಿತು. ಸುಮಾಳ ರೂಮಿನತ್ತ ನಡೆದ ನನಗೆ ಅಲ್ಲಿನ ಬಾತ್ ರೂಮುಗಳಲ್ಲಿ ನೀರು ಬರುತ್ತಿರುವ ಶಬ್ದ ಕೇಳಿಸ ಹತ್ತಿತು. ನೋಡಿದರೆ ಸುಮಾ ಗಾಢ ನಿದ್ದೆಯಲ್ಲಿದ್ದಳು. ಎಬ್ಬಿಸುವ ಮನಸ್ಸಾಗದೆ ಸಿಟ್ಟಾಗಿ ಬಕೇಟು ನೀರನ್ನು ಅಲ್ಲೇ ಚೆಲ್ಲಿ ಬಂದ ದಾರಿಗೆ ಸುಂಕವಿಲ್ಲವೆನ್ನುವಂತೆ ಖಾಲಿ ಬಕೇಟಿನೊಂದಿಗೆ ವಾಪಸ್ಸಾದಾಗ ನನ್ನ ರೂಮಲ್ಲಿ ಕಂಡದ್ದೇನು. ನನ್ನ ಬರವನ್ನೇ ಕಾಯುತ್ತಿದ್ದ ಗೆಳತಿಯರೆಲ್ಲಾ ಸೇರಿ ‘ಎಪ್ರೀಲ್ ಫೂಲ್ ‘ ಎಂದು ನಗುತ್ತಿದ್ದರು. ಶಾಕ್ ಹೊಡೆದಂತಾಗಿ ಗೋಡೆಯಲ್ಲಿದ್ದ ಕ್ಯಾಲೆಂಡರಿನತ್ತ ದೃಷ್ಠಿ ಹಾಯಿಸಿದೆ, ಅಲ್ಲಿ ಎಪ್ರಿಲ್ 1 ನಗುತ್ತಿತ್ತು .
2. ಅಪರಿಚಿತನಿಂದ ಫೂಲ್
ಅಂದು ತರಗತಿಯ ಪಾಠ ಮುಗಿಸಿ ಹೊರ ಬಂದಿದ್ದ ನನಗೆ ವಿದ್ಯಾರ್ಥಿಗಳ ಕಲಿಕೆಯಲ್ಲಿನ ಅಸಡ್ಡೆಯಿಂದ ವಿಪರೀತ ಸಿಟ್ಟು ಬಂದಿತ್ತು. ತಿಂಗಳ ಕೊನೆಯಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಬಹಳ ಕೆಟ್ಟದಾಗಿ ಮಾಡಿದ್ದ ಅವರನ್ನು ಚೆನ್ನಾಗಿ ಬೈದು ಮನಸ್ಸು ಹಾಳು ಮಾಡಿಕೊಂಡಿದ್ದ ನಾನು ಮನಶ್ಶಾಂತಿಗಾಗಿ ಮನೆಯ ಪಕ್ಕದಲ್ಲೆ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮಕ್ಕೆ ಹೋಗಲು ನಿರ್ಧರಿಸಿದೆ. ಸುಮಾರು ಕುರ್ಚಿಗಳು ಖಾಲಿ ಹೊಡೆಯುತ್ತಿದ್ದುದರಿಂದ ಮುಂದಿನ ಸಾಲಿನಲ್ಲೆ ಹೋಗಿ ಆಸೀನಳಾದೆ. ಸ್ವಲ್ಪ ಸುಧಾರಿಸಿದ ನಂತರ ಹಾಡುತ್ತಿರುವವಳನ್ನು ಗಮನಿಸಲಾರಂಭಿಸಿದೆ. ಸ್ವರವೇಕೊ ಕರ್ಕಶ ಅನಿಸಿದ್ದರಿಂದ ಪಕ್ಕದವರೊಂದಿಗೆ ಮಾತಿಗಿಳಿದೆ.
“ಸ್ವಾಮೀ ಧ್ವನಿ ಬಹಳ ಕರ್ಕಶವಾಗಿದೆ. ಕಿವಿ ಮುಚ್ಚಿಕೊಳ್ಳೋಣ ಎಂದೆನಿಸುತ್ತಿದೆಯಲ್ಲವೆ?”
ಆ ಅಪರಿಚಿತ ನನ್ನತ್ತ ತಿರುಗಿ “ಹಾಡುತ್ತಿರುವುದು ನನ್ನ ಪತ್ನಿ” ಅಂದ.
ಇಂಗು ತಿಂದ ಮಂಗನಂತಾದರೂ ಸಾವರಿಸಿಕೊಂಡು ನಾನು , “ಓ, ಅಲ್ಲಾ ಹಾಡಿನ ಸಾಲುಗಳೇ ಲಯಬದ್ಧವಾಗಿಲ್ಲ, ಆದ್ದರಿಂದ ಚೆನ್ನಾಗಿ ಹಾಡಲಾಗುತ್ತಿಲ್ಲ…” ಎಂದೆ.
ಆತ ತಣ್ಣಗೆ, “ಆ ಹಾಡು ಬರೆದವನು ನಾನು” ಎನ್ನಬೇಕೆ?