ಅಂಕಣ

ಕರ್ನಾಟಕದಲ್ಲಿ ಕನ್ನಡ

ಭಾಷಾವಾರು ಪ್ರಾಂತಗಳ ವಿಲೀನದ ನ೦ತರ ಹುಟ್ಟಿದ ನಮ್ಮ ಕರುನಾಡಲ್ಲಿಯೇ ಕನ್ನಡ ಭಾಷೆಯ ಉಳಿವಿಗಾಗಿ ಹೊರಡುವ ಪರಿಸ್ಥಿತಿ ಬಂದೊದಗಿದ್ದು ಒಂದು ವಿಪರ್ಯಾಸವೇ ಸರಿ! ಕನ್ನಡದ ಇಂದಿನ ಸ್ಥಿತಿಗತಿಗೆ ಯಾರು ಕಾರಣ?  ಕನ್ನಡಿಗರ ಉದಾರತೆ, ಉದಾಸೀನತೆ, ಅತಿಯಾದ ಪರಭಾಷಾ ಪ್ರೇಮ ಹಾಗೂ ನಮ್ಮ ರಾಜಕಾರಣಿಗಳ ಇಚ್ಛಾ ಶಕ್ತಿಯ ಕೊರತೆ.

ಒಬ್ಬ ವ್ಯಕ್ತಿಯನ್ನು ಮನುಷ್ಯನನ್ನಾಗಿ ಮಾಡಿ ಅವನ ವ್ಯಕ್ತಿತ್ತ್ವವನ್ನು ವಿಕಸನಗೊಳಿಸೋದು ಶಿಕ್ಷಣದಿಂದ ಸಾಧ್ಯ.ಇತ್ತೀಚಿನ ದಿನಗಳಲ್ಲಿ ಇಂಗ್ಲೀಷ್ ಭಾಷೆಯ ವ್ಯಾಮೋಹ ನಮ್ಮನ್ನೆಲ್ಲ ಒಂದು ಪ್ರಪಾತಕ್ಕೆ ತಳ್ಳುತ್ತಾ ಇದೆ. ನಾವೆಲ್ಲಾ ತಿಳಿದೋ ತಿಳಿದೇನೋ ಈ ಮಹಾಕೂಪಕ್ಕೆ ಬೀಳ್ತಾ ಇದ್ದೇವೆ. ಇದಕ್ಕೆಲ್ಲಾ ಯಾರು ಹೊಣೆ? ನಮ್ಮಲ್ಲಿರುವ ತಪ್ಪು ಕಲ್ಪನೆ,ಕೀಳರಿಮೆ, ಅತಿಯಾದ ಇಂಗ್ಲೀಷ್ ವ್ಯಾಮೋಹ ಮತ್ತು ನಮ್ಮ ಮಾತೃ ಭಾಷೆಯ ಬಗೆಗಿನ ತಾತ್ಸಾರ ಮನೋಭಾವ. ಜಗತ್ತಿನ ಇತಿಹಾಸದ ಪುಟಗಳನ್ನು ತಿರುವಿದರೆ ನಮಗೆ ಇದರ ಅರಿವಾದಿತೇನೋ! ವಿಶ್ವದಲ್ಲಿ ಎಲ್ಲರನ್ನು ಹಿಂದಿಕ್ಕಿ  ತಂತ್ರಜ್ಞಾನದಲ್ಲಿ ಅತ್ಯ೦ತ ಮುಂಚೂಣಿಯಲ್ಲಿರುವ ಜಪಾನ್ ದೇಶದಲ್ಲಿ ಉನ್ನತ ಶಿಕ್ಷಣ ಕೂಡ ಕಲಿಸಲ್ಪಡುವದು ಅವರ ಮಾತೃ ಭಾಷೆಯಲ್ಲೇ. ಒಂದು ಮಗು ಹುಟ್ಟಿದ ತಕ್ಷಣ ಯಾವ ಭಾಷೆಯನ್ನು ತನ್ನ ತಾಯಿಯಿಂದ ಮತ್ತು ಮನೆಯ ಪರಿಸರದಿಂದ ಕಲಿಯುತ್ತದೆಯೋ ಆ ಭಾಷೆಯಲ್ಲಿ ಏನು ಕಲಿಸಿದರೂ ಅದಕ್ಕೆ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇರುತ್ತದೆ. ಇದನ್ನು ಧೃಡೀಕರಿಸಲು ಯಾವ ಆರ್ಕಿಮಿಡಿಸನ ತತ್ವವಾಗಲಿ ಅಥವಾ ಐನಸ್ಟೀನರ ಥೇರಿ ಆಫ್ ರಿಲೇಟಿವಿಟಿಯಾಗಲಿ ಬೇಕಾಗಿಲ್ಲ.ಇವತ್ತು ನಾವು ನಮ್ಮ ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಏನಾದರೂ ಕಠಿಣ ಶಬ್ದ ಅಥವಾ ಆಡು ಭಾಷೆಯ ನುಡಿಗಟ್ಟನ್ನು ಹೇಳ ಹೋದರೆ, ಆ ಮಕ್ಕಳ ಉತ್ತರ… ಅಲ್ಲ ಮರು ಪ್ರಶ್ನೆ “ಹಂಗ ಅಂದ್ರ ಏನು?” ಆಮೇಲೆ ನಾವು ಅದನ್ನು, ಅವರಿಗೆ ತಿಳಿದಿರುವ ಹರಕು ಮುರಕು ಇಂಗ್ಲೀಷಿನಲ್ಲಿ ಅರ್ಥ ಮಾಡಿಸೋದರಲ್ಲಿ ಸುಸ್ತಾಗಿ ಹೋಗ್ತೀವಿ.    ಅದೇ ಆ ಮಗು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ಕಲಿತಿದ್ದರೆ ಎಲ್ಲವನ್ನು ಸರಾಗವಾಗಿ   ತಿಳಿದುಕೊಳ್ಳೋ ಸಾಮರ್ಥ್ಯ ಅದರಲ್ಲಿ ತನ್ನಷ್ಟಕ್ಕೆ ತಾನೇ ಬರುವದು. ಎಲ್ಲಿಯವರೆಗೆ ಮಕ್ಕಳಿಗೆ ಇಂಗ್ಲೀಷ್ (ಗ್ರಾಮರ್) ಕಲಿಸೋ ಶಿಕ್ಷಕರು ಚೆನ್ನಾಗಿ ಸಿಗುವದಿಲ್ಲವೋ ಅವರು ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತರೂ ಅವರ ವಾಕ್ಯ ರಚನೆ, ಅವರು ಪ್ರಯೋಗಿಸುವ ವ್ಯಾಕರಣ ಅತ್ಯ0ತ ಕನಿಷ್ಟ ಗುಣಮಟ್ಟದ್ದಾಗಿರುತ್ತದೆ.  ವ್ಯಾಕರಣವಾಗಲಿ ಭಾಷೆಯ ಮೇಲಿನ ಪ್ರಭುತ್ವವಾಗಲಿ ಒಂದು ಹಂತದ ಮಟ್ಟಿಗೆ ಹಿಡಿತಕ್ಕೆ ಬರಬೇಕೆಂದರೆ ಅದು ಕೇವಲ ಮಾತೃ ಭಾಷೆಯಲ್ಲಿನ ಶಿಕ್ಷಣದಿಂದ ಮಾತ್ರ ಸಾಧ್ಯ. ಯಾವ ವ್ಯಕ್ತಿ ಮಾತೃ ಭಾಷೆಯಲ್ಲಿ ಎಲ್ಲವನ್ನೂ ಅರ್ಥೈಸಿಕೊಳ್ಳೋ ಸಾಮರ್ಥ್ಯವನ್ನು ಹೊಂದಿರುತ್ತಾನೋ ಆ ವ್ಯಕ್ತಿ ಜಗತ್ತಿನ ಬೇರೆ ಯಾವ ಭಾಷೆಯನ್ನಾದರೂ ಕಲಿಯಬಲ್ಲ.

ಕನ್ನಡ ಮಾಧ್ಯಮದಲ್ಲೇ ಓದಿ ಇಂಗ್ಲೀಷ ಸಹಿತವಾಗಿ ಅನೇಕ ಭಾಷೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಕನ್ನಡಿಗರ ಸಂಖ್ಯೆ ಕೂಡ ಸಾಕಷ್ಟಿದೆ.

ನಮ್ಮ ಸರಕಾರ ಎಚ್ಚೆತ್ತು ಕೆಲ ಕಠಿಣಕ್ರಮಗಳನ್ನು ಜಾರಿ ತರುವಲ್ಲಿ ಕಾರ್ಯಪ್ರಯುಕ್ತವಾಗಬೇಕು ಹಾಗೂ ಸಮಸ್ತ ಕನ್ನಡಿಗರೂ ನಾಡಿನ ನೆಲದ ಋಣ ತೀರಿಸಲು ಕಟಿಬದ್ಧರಾಗಬೇಕು   ಅಂದಾಗ ಮಾತ್ರ ಕನ್ನಡದ ಬೆಳವಣಿಗೆ ಪೂರಕ ವಾತಾವರಣವನ್ನು ಸೃಷ್ಟಿಸಬಹುದು.

  • ಮೊದಲನೆಯದಾಗಿ ಕನಿಷ್ಠ ಪಕ್ಷ ಪ್ರಾಥಮಿಕ ಹಂತದ ವರೆಗಿನ  ಶಿಕ್ಷಣ  ಕನ್ನಡದಲ್ಲೇ ಆಗಬೇಕು. ಅವಶ್ಯಕ ಸಂವಿಧಾನ ತಿದ್ದುಪಡಿ ತರಲು  ಬೇರೆ ರಾಜ್ಯಗಳ ಸಹಯೋಗದೊಂದಿಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೆರಬೇಕು.
  • ಇಂಗ್ಲೀಷ್ ಕೂಡ ಒಂದು ವಿಷಯವಾಗಿ ಒಂದನೆಯ ತರಗತಿಯಿಂದಲೇ ಕಲಿಸಲ್ಪಡಬೇಕು ಮತ್ತು ಇಂಗ್ಲೀಷ್ ಕಲಿಸುವ ಶಿಕ್ಷಕರ ಗುಣಮಟ್ಟ ಉತ್ಕೃಷ್ಟವಾಗಿರಬೇಕು.
  • ಕರ್ನಾಟಕದಲ್ಲಿರುವ ಎಲ್ಲ ಸರಕಾರಿ (ಕೇಂದ್ರ ಮತ್ತು ರಾಜ್ಯ) ಹಾಗೂ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ೧ನೇ ತರಗತಿಯಿಂದ    ಕನ್ನಡವನ್ನು ಎರಡನೆಯ ಭಾಷೆಯಾಗಿ ಕಲಿಯುವ ಆಯ್ಕೆ ಲಭ್ಯವಾಗಬೇಕು. ಕೆಲ ಕೇಂದ್ರೀಯ ವಿದ್ಯಾಲಯಗಳಲ್ಲಿ ಮತ್ತು ಖಾಸಗಿ  ಶಾಲೆಗಳಲ್ಲಿ ಇಂದಿಗೂ ಈ ಆಯ್ಕೆಯ ಅವಕಾಶ ಲಭ್ಯವಿರದ ಕಾರಣ ಮಕ್ಕಳು ೧ನೇ ತರಗತಿಯಿಂದ ಹಿಂದಿಯನ್ನು ಎರಡನೆಯ ಭಾಷೆಯಾಗಿ ಕಲಿಯುವ ಅನಿವಾರ್ಯತೆ ಇದೆ.
  • ಎಲ್ಲ ಸರಕಾರಿ ಬಸಗಳಲ್ಲಿ ಟಿಕೆಟ್ ಮೇಲಿನ ಸಂಖ್ಯೆಗಳು ಕನ್ನಡದಲ್ಲಿರಬೇಕು. ಪ್ರಸ್ತುತ ಹಿಂದೂ-ಅರೆಬಿಕ ಅಂಕೆಗಳನ್ನು ಬಳಸಲಾಗುತ್ತಿದೆ. ನೆರೆಯ ಮಹಾರಾಷ್ಟ್ರದಲ್ಲಿ ಅನೇಕ ದಶಕಗಳಿಂದ ಕೇವಲ ಮರಾಠಿ ಅಂಕೆಗಳನ್ನು ಮಾತ್ರ ಟಿಕೇಟಗಳ ಮೇಲೆ ನಮೂದಿಸಲಾಗುತ್ತಿದೆ ಹಾಗೂ ಬಹುತೇಕ ಬಸಗಳ ಫಲಕಗಳೂ ಮರಾಠಿಯಲ್ಲೇ ಇವೆ.
  • ಎಲ್ಲ ಸರಕಾರಿ ಸೇವೆಗಳಿಗೆ  ಸಲ್ಲಿಸುವ ಅರ್ಜಿ ಕಡ್ಡಾಯವಾಗಿ ಕನ್ನಡದಲ್ಲಿರಬೇಕು.
  • ಎಲ್ಲ ತರಹದ ಮಳಿಗೆಗಳ ಮೇಲೆ ನಾಮ ಫಲಕ ಕಡ್ಡಾಯವಾಗಿ ಕನ್ನಡದಲ್ಲಿಬೇಕು.
  • ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಅಭಿವೃದ್ಧಿಗಾಗಿ ಶ್ರಮಿಸುವ ಸಂಸ್ಥೆಗಳಿಗೆ ಸಹಕಾರ ನೀಡಬೇಕು.
  • ಕರ್ನಾಟಕ ಸರಕಾರದ ಜಾಲತಾಣಗಳಲ್ಲಿ ಕನ್ನಡ ಯೂನಿಕೋಡ್ ಅಳವಡಿಸಿಕೊಳ್ಳಬೇಕು. ಪ್ರಸ್ತುತವಾಗಿ ನುಡಿಯ ಸಹಾಯವಿಲ್ಲದೆ ಯಾವುದೇ ಸರಕಾರಿ ವೆಬ್ ಸೈಟಗಳನ್ನು ವೀಕ್ಷಿಸಲು ಸಾಧ್ಯವಿಲ್ಲ.
  • ಸಮಸ್ತ ಕನ್ನಡಿಗರು ಮನೆಯಲ್ಲಿ ಕನ್ನಡದಲ್ಲೇ ಮಾತನಾಡಿ ಕನಿಷ್ಠ ಪಕ್ಷ ಒಂದಾದರೂ ಕನ್ನಡ ದಿನ ಪತ್ರಿಕೆ ಓದಿ ಮಕ್ಕಳಿಗೂ ಓದಲು ಪ್ರೋತ್ಸಾಹಿಸಬೇಕು.

ಇಂದು ಮಾತೃ ಭಾಷೆಯಲ್ಲಿ ಶಿಕ್ಷಣ ಸಾಧ್ಯವಾಗದೇ  ಹೋದರೆ ನಾಳೆ ನಮ್ಮ ದಾಸ ಸಾಹಿತ್ಯ ಹಾಗೂ ವಚನ ಸಾಹಿತ್ಯದ ಪರಂಪರೆಯನ್ನು  ಅಭ್ಯಸಿಸಿ ಇಡೀ ವಿಶ್ವಕ್ಕೆ ನಮ್ಮ ಮಹಾನ್  ಸಾಧಕರ ಸಾಧನೆಯನ್ನು ಬಿತ್ತರಿಸುವ  ಕನಸನ್ನು  ನನಸು (ಅಲ್ಲಾ ಕರ್ತವ್ಯ)  ಮಾಡುವವರಾರು? ನಮ್ಮ ಮುಂದಿನ ಪೀಳಿಗೆಯಿಂದ ನಾವು ಆಪೇಕ್ಷಿಸುವದಾದರು ಏನು? ನಮ್ಮ ಈ ನೀರೀಕ್ಷೆಗಳೆಲ್ಲವೂ ಹುಸಿಯಾಗದಂತೆ ನೋಡಿಕೊಳ್ಳ ಬೇಕಾದರೆ ನಮ್ಮ ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣವನ್ನು ಕೊಡಿಸಲೇ ಬೇಕು. ಯಾವ ರೀತಿ ಜನನಿ ಮತ್ತು ಜನ್ಮ ಭೂಮಿ ಪವಿತ್ರವೋ, ಮಾತೃ ಭಾಷೆಯೂ ಅಷ್ಟೇ ಪವಿತ್ರವಾದದ್ದು. ಕನ್ನಡದ  ಕಂಪನ್ನು ಉಳಿಸಲು ಬೆಳೆಸಲು ಮಾತೃ ಭಾಷೆಯಲ್ಲಿ ಶಿಕ್ಷಣ ಅತ್ಯಗತ್ಯ .

ಶ್ರೀನಿವಾಸ .ನಾ. ಪಂಚಮುಖಿ

snpanchmukhi@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!