ತಂದೆ ಮಹಾದೇವನೇ, ನೀನೆಲ್ಲಿರುವೆ
ನೀನಿರುವ ಊರು,ಗಲ್ಲಿ,ಬೀದಿ ವಿಳಾಸ
ನನಗೆ ಗೊತ್ತಿಲ್ಲ, ಆದರೇ ಬಲ್ಲವರು ಹೇಳುವರು
ಎಲ್ಲೆಲ್ಲೂ ನೀನೇ-ಕಲ್ಲಲ್ಲೂ ನೀನೇ
ತನುವಲ್ಲಿ,ಮನದಲ್ಲಿ,ಮನೆಯಲ್ಲಿ,ಭೂವಿಯಲ್ಲಿ,
ಬಾನಲ್ಲಿ, ಎಲ್ಲೆಲ್ಲೂ ನೀನೇ !
ಅದಕೆ ಕಳಿಸುತಿರುವೆ ಈ ಮನವಿ
ದಯವಿಟ್ಟು ಕೇಳು ಕೊಟ್ಟು ನಿನ್ನ ಕಿವಿ !
ಈ ದಿನ ಉಪವಾಸ-ಜಾಗರಣೆಯ ಶಿವರಾತ್ರಿ
ಉಪ-ವಾಸ ಅಂದರೇ, ನಿನ್ನ ಜೊತೆ ಇರುವದು
ಅದು ಸಾದ್ಯವೇ ? ಒಂದು ಕ್ಷಣ ನಮ್ಮೊಡನೆ
ನಾವಿರದವರು,ನಿನ್ನೊಡನೆ-ನಿನ್ನ ನಾಮದ ಜಪದೊಡಣೆ !!
ಉಪವಾಸವೆಂದು ಹೇಳಿ,ಸಂಧ್ಯಾಕಾಲದಿ ನಿನಗೊಂದು ದೂಪ ಹಚ್ಚಿ, ಕರ್ಜೂರ-ಫಲ
ಇತ್ಯಾದಿ ಎರಡರಷ್ಟು ತಿಂದು ಉಪವಾಸದ ಸೇಡು
ತೀರಿಸಿಕೊಳ್ಳುವ ನಮ್ಮಯ ಪರಿ ನಿನಗಿಷ್ಟವೇ?
ಹೊಟ್ಟೆ ಬೀರಿಯುವಂತೆ ತಿಂದು ನಿನ್ನ ನೆನೆದರೂ
ನೀನೊಲಿದು-ಕಾಪಾಡುವೆ.
ನಿನ್ನ ಈ ಅನನ್ಯ ಜಗದಿ ಮನುಜನ ಹೊರತು ಮನುಜನೊಬ್ಬನೇ ಆಚರಿಸುವ
ವೃತ-ಏಕಾದಶಿ-ಉಪವಾಸ !
ನಿನ್ನ ಸೃಷ್ಟಿಯ ಯಾವ ಜೀವಿಯು ಮಾಡದು ಉಪವಾಸ.
ನಿತ್ಯ ಎರಡು ತುತ್ತು ಅನ್ನಕ್ಕಾಗಿ ಹೋರಾಡುತಿವೆ ಲಕ್ಷೋಪೋಲಕ್ಷ ಕೈಗಳು, ಮಾಡಬಾರದ ಕೆಲಸಗಳನು ಮಾಡಿ,ಮಾಡುತಿವೆ ಜಗದಲಿ ವಾಸ-ವನವಾಸ-ನಿತ್ಯ ಉಪವಾಸ !!!
ಉಳ್ಳವರು ತಿಂದು ಬಿಸುಡಿದ ಎಲೆಯನಾಯ್ದು
ಹಸಿವನಿಂಗಿಸುವ ಕೈ-ಬಾಯ್ಗಳು ಶಪಿಸುತಿವೆ ನಿನ್ನ ನೆನೆದು (ಬೈದು).
ಓ ಮುಕ್ಕಣ್ಣನೇ ಈಗಲಾದರೂಕಣ್ತೆರದು ನೋಡು,
ಹೇಗಾಗಿದೆ ನಿನ್ನ ಸೃಷ್ಟಿಯ ಈ ಬೀಡು !
ಉಳ್ಳವರಿಗಾಗಿದೆ ಸ್ವರ್ಗದ ಗೂಡು !
ಇಲ್ಲದವರು ಅಲೆಯುವರು ನೆಲೆಗಾಗಿ ಕಾಡು-ಮೇಡು
ಶಿವನೇ ಏನಾದರೂ ಮಾಡು,
ಇಲ್ಲದಿರೇ, ಜರಿಯದಿರು, ಅನ್ನಕಾಗಿ ಕದಿಯುವರೆಂದು,
ತಮ್ಮ ಮೈ ತಾವು ಮಾರಿದರೆಂದು.
ನಿನ್ನ ಶಿವರಾತ್ರಿಯ ಉಪವಾಸ ನಿಮಿತ್ತ
ಉಳಿಯುವ ಸಹಸ್ರ ಸಹಸ್ರ ಟನ್ ಆಹಾರವನ್ನು
ನೀನೇ ಬಂದು ಹಸಿದ ಹೊಟ್ಟೆಗೆ ಬಡಿಸು
ವರ್ಷಾನುವರ್ಷಗಳ ಅವರ ಉಪವಾಸವ ಬಿಡಿಸು
ಹಸಿವೆಗೆ ಮುಕ್ತಿಯನು ಕೊಡಿಸು.
ನಿನ್ನ ಸಮಸ್ತ ಜೀವರಾಶಿಗಳು ಸವಿಯಬೇಕು ನಿತ್ಯ ಭೋಜನ
ಆಗ ನೀನು ಜಪ-ತಪ-ವೃತಾಚರಣೆಗೆ ಭಾಜನ !
ಬಾ ದೇವರ ದೇವ ಮಹಾದೇವ
ನಿನ್ನ ಜಗದ ದಿನ-ರಾತ್ರಿಗಳನು ಸರಿಪಡಿಸು
ಎಲ್ಲ ಉದರಗಳನು ತುಂಬಿಸು,
ನೋಡಾಗ ಪ್ರತಿ ಮನ-ಮನೆಯು ಆದಾವು ಶಿವಾಲಯ
ಪ್ರತಿ ರಾತ್ರಿಯು ಆದೀತು ಶಿವರಾತ್ರಿ.
– ಎನ್ ವಾಯ್ ಯಂಕಣ್ಣವರ
ಎಲ್ ಐ ಸಿ ಆಪ್ ಇಂಡಿಯಾ ಗೋಕಾಕ