ಕೊಳಲನೂದುತ ಬಂದ
ನಂದಗೋಪನ ಕಂದ
ಅವನ ಮೊಗದರವಿಂದ
ನೋಡುವರಿಗಾನಂದ||
ತೋರಿದನು ಜಗವನ್ನು
ತೆರೆದ ಬಾಯೊಳಗೆ
ನಗುನಗುತ ಬೆರೆತಿಹನು
ನಮ್ಮ ನಿಮ್ಮೊಳಗೆ||
ಮಾಡುವನು ಮೋಡಿಯನು ಕೊಳಲನೂದುತ್ತ
ಸೆಳೆಯುವನು ಎಲ್ಲರನು ಬಿಡದೆ ತನ್ನತ್ತ..
ಇಹುವಂತೆ ಇವನ ಲೀಲೆಗಳು ನೂರಾರು
ನೀ ಹೇಳೆ ಗೋಪಮ್ಮ ನಿಜಕು ಇವನಾರು?||
ಕೊಳಲ ನಾದಕೆ ನಲಿವ ಗೋಪಿಯರ ದಂಡು..
ತಲೆಯದೂಗುತ ನಿಂದ ಗೋವುಗಳ ಹಿಂಡು..
ಕುಣಿದಿಹುದು ಎನ್ನ ಮನ ಈ ದೃಶ್ಯ ಕಂಡು
ಸಾರ್ಥಕ್ಯ ಬಂತೆನ್ನ ಅಸ್ತಿತ್ವಕೆಂದು..||