ಅದೆಷ್ಟು ವರ್ಷಗಳಿಂದ ಮಹಾತಪಸ್ಸಿನಂತೆ ಸುಪ್ತವಾಗಿ ವಿಜ್ಞಾನವನ್ನು ಪಸರಿಸುವ ಕಾಯಕದಲ್ಲಿ ತೊಡಗಿತ್ತೋ ನಮ್ಮ ನೆಚ್ಚಿನ ಯುವರಾಜ ಕಾಲೇಜು, ಇದೇ ನಾಲ್ಕು ವರುಷಗಳ ಹಿಂದೆ ಹತ್ತಾರು ವಿದ್ಯಾರ್ಥಿಗಳ ಸ್ಮೃತಿಯಲ್ಲಿ ಚಿಗುರೊಡೆದ ಒಂದು ಸಸಿ ಇಂದು ಬೃಹತ್ ವೃಕ್ಷವಾಗಿ ತಲೆಯೆತ್ತಿ ನಿಂತು ಸಾಂಸ್ಕೃತಿಕ ನಗರಿಯ ವೈಜ್ನಾನಿಕ ಪ್ರಪಂಚಕ್ಕೆ ಕೈಬೀಸಿ ಕರೆಯಲು ಸಜ್ಜಾಗಿದೆ. ಆ ಚಿಗುರು ಮತಾವುದೂ ಅಲ್ಲಾ..ಯುರೇಕಾ.ಇತ್ತೀಚಿಗಷ್ಟೇ ದೇಶದ ಪ್ರತಿಷ್ಟಿತ ಸಂಸ್ಥೆ “ನ್ಯಾಕ್” ನಿಂದ “ಎ” ಗ್ರೇಡ್ ಮಾನ್ಯತೆಯನ್ನು ಪಡೆದಿರುತ್ತದೆ. ಈ ಮಾನ್ಯತೆಯು ಯುವರಾಜನಿಗೆ ಕಿರೀಟವಾದರೆ ‘ಯುರೇಕಾ’ ಇದು ವಜ್ರದ ಹರಳಿದ್ದಂತೆ
ಹೌದು ! ಕಾಲೇಜಿನ ಎತ್ತರವಾದ ಗೋಡೆಗಳ ಮಧ್ಯೆ ದಿನಾಲೂ ಪಾಠ ಕೇಳುತ್ತಿದ್ದ ಒಂದಿಷ್ಟು ಚತುರಮತಿಗಳು ಯಾವುದೇ ಕಾಲೇಜಿನಲ್ಲಿ ಸ್ಪರ್ದೆಗಳು ನಡೆದರೂ. ಭಾಗವಹಿಸಿ ಬಹುಮಾನ ಗೆದ್ದು ಬೀಗುತ್ತಿದ್ದರು. ಆದರೆ ಕರ್ನಾಟಕದ ಪ್ರತಿಷ್ಠಿತ ವಿಜ್ಞಾನ ಕಾಲೇಜುಗಳಲ್ಲಿ ಅಗ್ರ ಪಂಕ್ತಿಯಲ್ಲಿ ನಿಲ್ಲುವ ನಮ್ಮ ಯುವರಾಜಾ ಕಾಲೇಜು ತನ್ನದೇ ವಿಶಿಷ್ಟವಾದ ಸೊಗಡನ್ನು ಬೀರುತ್ತಾ ವಿಜ್ನಾನ ಹಬ್ಬವನ್ನು ಆಚರಿಸಬೇಕೆಂದು ನಾಲ್ಕು ವರುಷಗಳ ಹಿಂದೆ “ಯುರೇಕಾ” ಎಂಬುದಕ್ಕೆ ನಾಂದಿ ಹಾಡಿತು. ಈ ಶಬ್ದೋತ್ಪತ್ತಿಯು ಸ್ನಾನಗೃಹದಲ್ಲಿ “Eureka” ಎಂದು ಕೂಗುತ್ತಾ ಹೊರಬಂದ ಆರ್ಕಿಮಿಡೀಸ್’ನ ಸಂಭೋದನೆಯ ಜೊತೆ ನಮ್ಮ ಯುವರಾಜಾ ಕಾಲೇಜು ಸೇರಿ ಸಂಯೋಗಗೊಂಡು “Yureka” ಆಗಿ ಮಾರ್ಪಟ್ಟಿತು.
ಹೀಗೆ ಮೂರು ವರುಷಗಳ ಅಲ್ಪ ಇತಿಹಾಸವುಳ್ಳ ನಮ್ಮ ನೆಚ್ಚಿನ “ಯುರೇಕಾ” ಈ ಬಾರಿ ರಾಜ್ಯಮಟ್ಟದಲ್ಲಿ ಆಯೋಜಿತವಾಗಿದೆ.ಎಲ್ಲಾ ತರಹದ ವಿದ್ಯಾರ್ಥಿಗಳ ಜ್ಞಾನತೃಷೆಯನ್ನು ನೀಗಿಸುವ ಗುರಿಯನ್ನು ಹೊಂದಿದೆ.ಇದೊಂದು ವಿಜ್ಞಾನ ಹಬ್ಬವಾದರೂ ಇಲ್ಲಿ ಸಾಮಾನ್ಯ ಜ್ಞಾನವುಳ್ಳ ಸಾಮಾನ್ಯನೂ ಭಾಗವಹಿಸಿ ಆನಂದಿಸಿ ಸಿಹಿ ಅನುಭವವನ್ನು ಪಡೆಯಬಹುದಾಗಿದೆ. ವಿಜ್ಞಾನವನ್ನು ಅರಿಯಬೇಕಾದವರು ಕೇವಲ ವಿಜ್ಞಾನ ವಿದ್ಯಾರ್ಥಿಗಳಲ್ಲ , ಎಲ್ಲರಿಗೂ “ವಿ(ಶೇಷ)ಜ್ಞಾನ” ಅತ್ಯವಶ್ಯ. ಅಂತೆಯೇ ಯುರೇಕಾ-2k16 ಕೂಡ ಸಾಂಸ್ಕೃತಿಕ, ಭಾಷ್ಯ, ವೈಜ್ಞಾನಿಕ, ವೈಚಾರಿಕ ಮತ್ತು ತಾರ್ಕಿಕ ನೆಲೆಗಟ್ಟಿನಲ್ಲಿ ಹದಿನೈದಕ್ಕೂ ಹೆಚ್ಚಿನ ಸ್ಪರ್ದೆಗಳನ್ನು ಆಯೋಜಿಸಿದೆ. ಇವೆಲ್ಲಾ ಪ್ರತಿ ಸ್ಪರ್ಧಿಯನ್ನು ಹಿಂದಿಕ್ಕಿ ಬಹುಮಾನ ಗೆಲ್ಲುವ ಜೂಜಾಟವಾದರೆ ಮತ್ತೊಂದು ಜನಾಕರ್ಷಣೀಯ ಹಾಗೂ ಜ್ಞಾನದ ಬುತ್ತಿಯಂತಿರುವ “ವಸ್ತು ಪ್ರದರ್ಶನ”ವನ್ನು ಬೇರೆ ಬೇರೆ ಸಂಶೋಧನಾ ಸಂಸ್ಥೆಗಳಿಂದ , ವಿಜ್ಞಾನ ಸಂಘಗಳಿಂದ, ಕಾಲೇಜುಗಳ ಸಹಯೋಗದೊಂದಿಗೆ ಏರ್ಪಡಿಸಿದ್ದು ನಮ್ಮ ಯುವರಾಜ ಕಾಲೇಜಿನ ಪುರಾತನ ಹಾಗೂ ಬೃಹತ್ ಮೂರು ಮ್ಯೂಸಿಯಮ್ ಸರ್ವರ ಮನಸೂರೆಗೊಳ್ಳುವಲ್ಲಿ ಎರಡು ಮಾತೇ ಇಲ್ಲಾ..
ಯುರೇಕಾದ ಮೊದಲ ದಿನ ರಾತ್ರಿ ಮೈಸೂರಿನ ನವ ಕಲಾವಿದರ ಸಂಗೀತ ತಂಡವಾದ “ನಾವು” ಅವರು ಹಲವಾರು ಜಾನಪದ ಹಾಡುಗಳು ಮತ್ತು ಗಾನಸುಧೆಗೆ ನಾವೆಲ್ಲಾ ಸಾಕ್ಷಿಯಾಗಲಿದ್ದೇವೆ.ತದ ನಂತರ ರಾತ್ರಿ ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳೊಡನೆ ಲೇಸರ್ ಬೆಳಕಿನಿಂದ ಆಟವಾಡುತ್ತಾ, ದೂರದರ್ಶಕದ ಮೂಲಕ ಆಕಾಶಕಾಯಗಳನ್ನು ವೀಕ್ಷಿಸುವ ಎಲ್ಲಾ ನಕ್ಷತ್ರಗಳ ಹೆಸರನ್ನು ತಿಳಿಯುತ್ತಾ ಕಾಲ ಕಳೆಯುವ “ನಕ್ಷತ್ರ ವೀಕ್ಷಣೆ” ಕಾರ್ಯಕ್ರಮ ಮಾತ್ರ ಎಲರನ್ನೂ ಒಮ್ಮೆ ಚಕಿತಗೊಳಿಸುವುದಂತೂ ದಿಟ. ಯಾಕೆಂದರೆ ಅಪರಿಚಿತರಂತೆ ಗೋಚರಿಸುವ ರಾತ್ರಿ ಯುರೇಕಾ ನಂತರ ನಿಮಗೆ ಪರಿಚಿತವಾದಂತೆ ಭಾಸವಾಗಿ ನಿಮ್ಮ ಸ್ನೇಹಿತರಿಗೂ ನಕ್ಷತ್ರಗಳ ಪರಿಚಯ ಮಾಡಿಕೊಡಲೂ ಮುಂದಾಗುತ್ತೀರಿ ಎಂಬುದು ಅನುಭವ ಸತ್ಯ.
“ಪವಾಡ ಭಂಜಕ” ಹುಲಿಕಲ್ ನಟರಾಜ್ ಅವರು ಬೆಂಕಿಯ ಕೆಂಡದ ಮೇಲೆ ಸ್ವತಃ ತಾವೇ ನಡೆದರಂತೆ ಸಜೀವ ಸಮಾಧಿಯಾಗಿ ಮೂರು ದಿನದ ನಂತರ ಮತ್ತೆ ಪ್ರತ್ಯಕ್ಷವಾದರಂತೆ.ಕಮರಟ್ಟು ಗ್ರಾಮದ ಭೂತ ಬಿಡಿಸಿದರಂತೆ ಎಂದೆಲ್ಲಾ ನೀವು ಒಂದೆಲ್ಲಾ ಒಂದು ದಿನಪತ್ರಿಕೆಯಲ್ಲೋ, ಟಿವಿಯಲ್ಲೋ ಕೇಳಿದ್ದೀರಿ ಅಥವಾ ನೋಡಿದ್ದೀರಿ.ಆದರೆ ನಮ್ಮ ಅದೃಷ್ಟ ನೋಡಿ..ಯುರೇಕಾದ ಆಕರ್ಷಣಾ ಕೇಂದ್ರವಾಗಿ ಸಾಕ್ಷಾತ್ ಹುಲಿಕಲ್ ನಟರಾಜ್ ಅವರೇ ಎಲ್ಲರನ್ನುದ್ದೇಶಿಸಿ ಪ್ರಯೋಗಗಳ ಮುಖೇನ ಪವಾಡ ಎಂದು ನಂಬಿರುವ ಚಾಣಾಕ್ಷ್ಯತನದ ಹಿಂದಿರುವ ವಿಜ್ನಾನವನ್ನು ಬಯಲು ಮಾಡಲಿದ್ದಾರೆ. ನಾವು ಗಮನಿಸಬೇಕಿರುವುದು ಜಗತ್ತು ಎಷ್ಟೇ ಮುಂದುವರೆದರೂ, ವಿಜ್ಞಾನ ಎಷ್ಟೇ ಮುನ್ನುಗ್ಗುತ್ತಿದ್ದರೂ ನಮ್ಮೊಳಗೆ ಒಂದಿಷ್ಟು ಮೂಢನಂಬಿಕೆಗಳು ಗಾಢವಾಗಿ ಉಳಿದುಬಿಟ್ಟಿದೆ. ಇವುಗಳಿಗೆಲ್ಲಾ ವೈಜ್ಞಾನಿಕವಾಗಿ ಉತ್ತರ ದೊರಕಿಸಿಕೊಡುವುದೇ ನಮ್ಮ ಮುಖ್ಯಗುರಿ.ಅದೇ ದಿನ ಸಾಯಂಕಾಲ ಬೆಂಗಳೂರಿನ ಅಪ್ರತಿಮ ಕಲಾ ಸಾನ್ನಿಧ್ಯವುಳ್ಳ “ನಾದ ಕಲರವ” ಎಂಬ ಖ್ಯಾತ ಸಂಗೀತ ತಂಡದಿಂದ ಸಂಗೀತ ಸಂಜೆ ನಡೆಯಲಿದೆ.ಈ ಕಾರ್ಯಕ್ರಮವು ದ್ವಿತೀಯ ದಿನ ಮತ್ತು ಯುರೇಕಾದ ಸಮಾಪ್ತಿಯಂತಿದ್ದು ಸರ್ವ ಜನಮನ ತಣಿಸುವುದಂತೂ ಖಚಿತ.ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಭಾರತೀಯ ವಿಜ್ಞಾನ ಸಂಸ್ಥೆಯ ಡಾ.ಕೆ.ಜೆ.ರಾವ್ ಅವರು ಆಗಮಿಸಲಿದ್ದು ಬಹುಮಾನ ವಿತರಣೆ ಮತ್ತು ನಮ್ಮದೇ ಕಾಲೇಜಿನ ವಿದ್ಯಾರ್ಥಿ ಒಬ್ಬನ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮಗಳು ವಂದನಾರ್ಪಣೆಯ ಸಂದರ್ಭದಲ್ಲಿ ನೆರವೇರಲಿದೆ
ಭಾರತೀಯ ಆಹಾರ ತಂತ್ರಜ್ನಾನ ಸಂಸ್ಥೆಯಾದ (CFTRI) ಇದು ಆಧುನಿಕ ಅಹಾರ ತಂತ್ರಜ್ನಾನದ ಜೊತೆಗೆ ಹಲವು ತಿಂಡಿ-ತಿನಿಸುಗಳ ಹೂರಣವನ್ನೇ ಪ್ರೇಕ್ಷಕರಿಗೆ ಉಣ ಬಡಿಸಲಿದೆ.ಹಾಗೆಯೇ ಮೈಸೂರಿನ ಪ್ರತಿಷ್ಠಿತ ಸಂಸ್ಥೆಗಳಾದ ಮೈಸೂರು ಸೈನ್ಸ್ ಫ಼ೌಂಡೇಷನ್,ವಿವೇಕಾನಂದ ಯುತ್ ಫ಼ೌಂಡೇಷನ್ ಮತ್ತು ಪ್ರಾದೇಶಿಕ ಶಿಕ್ಷಣ ಸಂಸ್ಥೆ (RIE) ಗಳಿಂದ ವಿಜ್ಞಾನ ಮತ್ತು ಗಣಿತದ ಮಾದರಿಗಳನ್ನು ಪ್ರದರ್ಶಿಸಲಿದ್ದಾರೆ.ಮೈಸೂರು ಆಯುರ್ವೇದ ಕಾಲೇಜಿನ ಸುಮಾರು ಮೂವತ್ತು ಜಾತಿಯ ವಿವಿಧ ಔಷಧಿ ಸಸ್ಯಗಳನ್ನು ಪ್ರದರ್ಶಿಸಲಿದ್ದು ಅವುಗಳ ಉಪಯೋಗ ಮತು ಇತರ ಮಹತ್ವವನನ್ನು ನೀಡಲು ಯುರೇಕಾ ತಯಾರಾಗಿದೆ.ಮೈಸೂರು ಅರಣ್ಯ ಇಲಾಖೆ, ಮೈಸೂರು ರೈಲ್ವೆ ಮ್ಯೂಸಿಯಮ್ ಮತ್ತು ನ್ಯಾಚುರಲ್ ಹಿಸ್ಟರಿ ಮ್ಯೂಸಿಯಮ್ ಹಾಗೂ ನಮ್ಮದೇ ಕಾಲೇಜಿನ ಸಸ್ಯ ಶಾಸ್ತ್ರ, ಪ್ರಾಣಿ ಶಾಸ್ತ್ರ ಮತ್ತು ಭೂಗರ್ಭ ಶಾಸ್ತ್ರ ವಿಭಾಗಗಳ ಪುರಾತನ ಮತ್ತು ಅಮೂಲ್ಯವಾದ ಮ್ಯೂಸಿಯಮ್’ಗಳು ವಿಜ್ನಾನ ಹಬ್ಬದಂದು ಸರ್ವರಿಗೂ ವೀಕ್ಷಿಸಲು ಮುಕ್ತವಾಗಿರುತ್ತದೆ.ಹಾಗೆಯೇ ಜೆ.ಎಸ್.ಎಸ್ ವೈದ್ಯಕೀಯ ಕಾಲೇಜಿನ ಶರೀರ ಶಾಸ್ತ್ರ ವಿಭಾಗದ ಪ್ರಾತ್ಯಕ್ಷಿಕೆಗಳು, ಎನ್.ಐ.ಈ. ಕಾಲೇಜಿನ ಜೈವಿಕ ಇಂಧನ ತಯಾರಿಕಾ ಕಾರ್ಯನಿರ್ವಾಹಕ ಘಟಕ ಮತ್ತು ಶ್ರೀ ಜಯಚಾಮರಾಜೇಂದ್ರ ತಾಂತ್ರಿಕ ವಿದ್ಯಾಲಯದ ಪರಿಸರ ಸ್ನೇಹಿ ಶೌಚಗೃಹ ಇವುಗಳು ನಮ್ಮ ವಸ್ತು ಪ್ರದರ್ಶನಕ್ಕೆ ಮೆರಗು ತರುತ್ತಿವೆ.
ನಮ್ಮ ವಿಜ್ನಾನ ಹಬ್ಬದ ಮನೋರಂಜನಾತ್ಮಕ ಸ್ಪರ್ಧೆಗಳನ್ನೊಮ್ಮೆ ಅವಲೋಕಿಸಿದರೆ ಅಲ್ಲಿ ನಡೆಯುವ ನಿಧಾನಗತಿ ಸೈಕ್ಲಿಂಗ್, ಮೆಹಂದಿ, ಮಡಿಕೆ ಒಡೆಯುವುದು, ಸ್ಥಳದಲ್ಲೇ ಮುಖ ಚಿತ್ರ ಬರೆಯುವುದು,ಸೆಲ್ಫಿ ಕ್ರೇಜಿ, ಹೆಡ್ಸಪ್ ಮತ್ತು ಹಲವಾರು ಕಂಪ್ಯೂಟರ್ ಗೇಮ್’ಗಳು ಎಲ್ಲಾ ವಯಸ್ಸಿನವರಿಗೂ ಮುಕ್ತವಾಗಿದ್ದು ಹಬ್ಬದ ವಾತಾವರಣವು ರಂಗು ರಂಗಾಗಿರುವಂತೆ ಕಾಪಾಡಿಕೊಳ್ಳಲಿದೆ.
ಸುಮಾರು ನೂರು ಜನರಷ್ಟು ಸ್ವಯಂ ಸೇವಕರು ಯುರೇಕಾಗೋಸ್ಕರ ಭಾರೀ ತಯಾರಿಯಲ್ಲಿದ್ದು ಯುರೇಕಾದ ಎರಡು ದಿನಗಳಲ್ಲಿ ಯುವರಾಜನು ಸಂಪೂರ್ಣ ವಿಜ್ಞಾನಮಯವಾಗಿ, ಕಂಗೊಳಿಸಲು ಸಜ್ಜಾಗುತ್ತಿದ್ದಾನೆ.ಯುರೇಕಾದ ಎರಡು ದಿನಗಳ ಅಲಂಕೃತ ದೃಶ್ಯವನ್ನು ಈಗಾಗಲೇ ಕಲ್ಪಿಸಿಕೊಂಡು ಒಮ್ಮೆ ನಮ್ಮ ಮನ ಪುಳುಕಿತಗೊಂಡಿತ್ತು. ಇದು ಬಹಳ ನೈಜವಾಗಿ ಮತ್ತು ಕ್ರೀಯಾತ್ಮಕವಾಗಿ ಮೂಡಿಬರಲಿದೆ. ಯುರೇಕಾದ ಎಲ್ಲಾ ಸ್ಪರ್ಧಿಗಳು ಮತ್ತು ವೀಕ್ಷಕರು ಮುಂದಿನ ಯುರೆಕಾಗೆ ಬರುವವರೆಗೂ ಮೆಲಕು ಹಾಕಲು ಸಾಕಾಗುವಷ್ಟು ನೆನಪುಗಳನ್ನು ಹೊತ್ತೊಯ್ಯ ಬೇಕೆಂಬುದೆ ನಮ್ಮ ಆಕಾಂಕ್ಷೆ.