ಕವಿತೆ

ನನ್ನೊಡಲ ನೋವ

ಹೆಣ್ಣು ಹಡದಿನಿ ನಾನು
ಮುದ್ದಾದ ಹೆಣ್ಣು ಮಗುವ
ಮುದ್ದಾದ ಹೆಣ್ಣು ಮಗುವ ತಾಯೀ
ಬಾಳ ಚಲುವಿ ಐತಿ ನನ ಕೂಸವ್ವ |

ಬಿದಿಗೆ ಚಂದ್ರಂಗೈತಿ ನನ ಬಂಗಾರ
ಹೂವಿನಂಗ ಐತಿ ಬಾಳ ಸುಂದರ
ಹೂವಿನಂಗ ಐತಿ ಬಾಳ ಸುಂದರ ತಾಯೀ
ಕಣ್ಣು ಮೂಗಿಲೆ ಬಾಳ ಚಲುವಿ ನನ ಕೂಸವ್ವ |

ಹೆಂಗ ತೋರಿಸಲೊ ಶಿವನ
ನನ್ನ ಕರುಳ ಕುಡಿಯ ಈ ಜಗಕ
ನನ್ನ ಕರುಳ ಕುಡಿಯ ಈ ಜಗಕ ತಾಯೀ
ಮನ ಹೆದರ್ತೈತಿ, ಜೀವಾ ನಡುಗ್ತೈತಿ, ನನ್ನವ್ವ

ದಿನಾ ಕೆಳ್ತೀನಿ, ಟಿ ವಿ ಯಾಗ ನೋಡ್ತಿನಿ
ಹೆಣ್ಣು ಹೆತ್ತವರ ಕಣ್ಣೀರ
ಹೆಣ್ಣು ಹೆತ್ತವರ ಕಣ್ಣೀರ ತಾಯೀ
ಹೆಣ್ಣಿನಮ್ಯಾಲ ನಡೆಯೊ ಅತ್ಯಾಚಾರ, ನನ್ನವ್ವ |

ಕರುಳ ಕುಡಿ ನನ ಹೆಣ್ಣ ಮಗಳ
ಯಾರ್ಯಾರ ಕಣ್ಣಿಂದ ಕಾಪಾಡ್ಲಿ
ಯಾರ್ಯಾರ ಕಣ್ಣಿಂದ ಕಾಪಾಡ್ಲಿ ತಾಯೀ
ಕಾಮಾಂಧರು ಇರುವ ಈ ಜಗದಾಗ, ನನ್ನವ್ವ |

ಏನಂತ ಹೇಳಲಿ ಹೆಣ್ಣಿನ ನೊವ ನಿಮಗ
ಕಾಮಂಧರು ಸುತ್ತಾ ಕಾಯ್ತಾ ಇರತ್ಯಾರ
ಕಾಮಂಧರು ಸುತ್ತಾ ಕಾಯ್ತಾ ಇರತ್ಯಾರ ತಾಯೀ
ಹಸಿದ ರಣಹದ್ದಿನಂತೆ ಹರಿಹರಿದು ತಿಂತಾರ ನನ್ನವ್ವ

ಮುದ್ದಿನ ಗಿಣಿಯ ಸಾಕಿದಂಗ ಸಾಕಿ
ಹೊಂಚು ಹಾಕುವ ಗಿಡುಗ ಕಣ್ಣ ತಪ್ಪಿಸಿ
ಹೊಂಚು ಹಾಕುವ ಗಿಡುಗ ಕಣ್ಣ ತಪ್ಪಿಸಿ ತಾಯೀ
ಹ್ಯಾಂಗ ಕಾಪಾಡಲಿ ನನ್ನ ಹೆಣ್ಣು ಕಂದನ ನನ್ನವ್ವ |

ಅತ್ಯಾಚಾರ,ಲೈಂಗಿಕ ದೌರ್ಜನ್ಯ
ಮಾನಸೀಕ ದೈಹಿಕ ತ್ರಾಸ ಕೊಡ್ತಾರ
ಮಾನಸೀಕ ದೈಹಿಕ ತ್ರಾಸ ಕೊಡ್ತಾರ ತಾಯೀ
ಮಾನವತೆಯನ್ನ ಮರಿತ ಕಾಮಪಿಶಾಚಿ ಇವರವ್ವ |

ಏನಂತ ಹೇಳಲಿ ಮಗಳೇ
ಬೇಡವ್ವ ಬದುಕು ಈ ಜಗದಾಗ
ಬೇಡವ್ವ ಬದುಕು ಈ ಜಗದಾಗ ಮಗಳೇ
ಹೆಣ್ಣಿಗ ಪಕ್ಕಾ ಸುರಕ್ಷತೆ ಕೊಡುವರೆಗೆ ನನ್ನವ್ವ |

ಹೆಣ್ಣಿನ ಮಾನಕ್ಕೆ ಬೆಲೆಕೊಡದ ದೂರ್ತರು
ಅಟ್ಟಹಾಸದಿ ನಗತಾ ಮೆರಿತಾರ
ಅಟ್ಟಹಾಸದಿ ನಗತಾ ಮೆರಿತಾರ ಕಾಮುಕರು
ಅಳುತಾಳ ಅವರವ್ವ ಕಾಮಂಧರಿಗೆ ಜನ್ಮವಕೊಟ್ಟ |

ಹಡೆದ ಹೆಣ್ಣು ಕೂಸ ತಬ್ಬಿ-ತಬ್ಬಿ
ರಾತ್ರಿ ಹಾಸಿಗ್ಯಾಗ ಕುಂತು ಅಳತೀನಿ
ರಾತ್ರಿ ಹಾಸಿಗ್ಯಾಗ ಕುಂತು ಅಳತೀನಿ ತಾಯೀ
ಕೆಳ್ತೀನಿ ಶಿವನ ” ಎಂಥಾ ಕೂಸಿನ ಕೊಟ್ಟೆಪ್ಪ” !!??

ಸೌಮ್ಯ ಪ್ರಕಾಶ ತದಡಿಕರ
tadadikar.prakash51@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!