Featured ಅಂಕಣ

ಡಿ.ವಿ.ಜಿ : ಬರೆದಂತೆಯೇ ಬದುಕಿದ ಅಭಿನವ ವೇದಾಂತಿ

ಅದು ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದ ಕಾಲ. ಮೈಸೂರು ದಸರಾ ವರದಿ ಮಾಡಲು ಬಂದಿದ್ದ ಪತ್ರಕರ್ತರಿಗೆ 250 ರೂಪಾಯಿ ಸಂಭಾವನೆ ನೀಡಬೇಕೆಂದು ವಿಶ್ವೇಶ್ವರಯ್ಯನವರು ಆದೇಶಿಸಿದ್ದರು. ಇದರಂತೆ ಪ್ರಸಿದ್ದ ಪತ್ರಿಕೆ “ ಕರ್ಣಾಟಕ” ಪತ್ರಿಕೆಯ ವರದಿಗಾರರಿಗೂ ದಿವಾನರ ಕಾರ್ಯಾಲಯದಿಂದ ಬಂದ 250 ರುಪಾಯಿಯ ಚೆಕ್ ಕೈ ಸೇರಿತು. ಇದು ಯಾವುದು ಎಂದು ಆ ಪತ್ರಕರ್ತರು ಪ್ರಶ್ನಿಸಿದಾಗ ದಸರೆಗೆ ಬಂದ ಪತ್ರಕರ್ತರಿಗೆ ಕೊಟ್ಟ ಸಂಭಾವನೆ ಎಂಬ ಉತ್ತರ ದಿವಾನರ ಕಚೇರಿಯಿಂದ ಬಂದಿತು. ಇದಕ್ಕೆ ತೃಪ್ತಿಯಾಗದ ಆ ಪತ್ರಕರ್ತ ವಿಶ್ವೇಶ್ವರಯ್ಯನವರನ್ನು ಭೇಟಿ ಮಾಡಿ ಪ್ರಶ್ನೆ ಮಾಡಿದರು. ಇದಕ್ಕೆ ನಗು ಮುಖದಿಂದ ಉತ್ತರಿಸಿದ ದಿವಾನರು ಇದು ಸರ್ಕಾರ ಪತ್ರಕರ್ತರಿಗೆ ನೀಡಿರುವ ಗೌರವ ತಾವು ಸ್ವೀಕರಿಸಬೇಕೆಂದು ತಿಳಿಸಿದರು. ಇದಕ್ಕೂ ಸಮಾಧಾನವಾಗದ ಪತ್ರಕರ್ತ, ಯಾವುದೇ ಪತ್ರಿಕೆಯಾಗಲಿ, ಪತ್ರಕರ್ತರಾಗಲಿ ಇಂತಹ ಸರ್ಕಾರಿ ಸಂಭಾವನೆಗಳನ್ನು ಸ್ವೀಕರಿಸಬಾರದು. ಇದು ಪತ್ರಕರ್ತರು ಪ್ರಭುತ್ವದ ಹಂಗಿಗೊಳಗಾದಂತೆ, ಸ್ವತಂತ್ರವಾದ ವರದಿಗಳನ್ನು ಮಾಡದೇ ಆಳುವವರ ಮೂಗಿನ ನೇರಕ್ಕೆ ವಾರ್ತೆಯನ್ನು ತಿದ್ದುವಂತೆ ದುಷ್ಪರಿಣಾಮಕಾರಿ. ನನಗೆ ಹಣ ಬೇಡವೇ ಬೇಡ ಎಂದು ಹೇಳಿ ಚೆಕ್ ಹಿಂದಿರುಗಿಸಿದರು. ಕೊನೆಗೆ ದಿವಾನರು ಪತ್ರಕರ್ತರ ಮಾತಿಗೆ ಸೋಲಬೇಕಾಯಿತು. ಹೀಗೆ ದಿವಾನರಿಗೆ ಸೆಡ್ಡು ಹೊಡೆದ ಧೀಮಂತ ಪತ್ರಕರ್ತನ ಹೆಸರು ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ.

ಡಿ ವಿ ಜಿ ಅವರು 1887, ಮಾರ್ಚ್ 17 ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ಅವರ ಪೂರ್ವಿಕರು ತಮಿಳುನಾಡಿನ ತಿರುಚಿನಾಪಳ್ಳಿಯ ಕಡೆಯವರು. ಅವರ ತಂದೆ ವೆಂಕಟರಮಣಯ್ಯ, ತಾಯಿ ಅಲಮೇಲಮ್ಮ. ತಮ್ಮ ಪ್ರಾರ್ಥಮಿಕ ಶಿಕ್ಷಣವನ್ನು ಡಿ.ವಿ.ಜಿ ಮುಳಬಾಗಿಲಿನಲ್ಲಿ ಮುಗಿಸಿದರು. ಮುಂದೆ ಹೈಸ್ಕೂಲ್ ಶಿಕ್ಷಣವನ್ನು ಮೈಸೂರಿನಲ್ಲಿ ಮುಂದುವರೆಸಿದರು. ಆದರೆ 1905ರಲ್ಲಿ ಮೆಟ್ರಿಕ್ಯುಲೇಷನ್’ನಲ್ಲಿ ಅವರು ತೇರ್ಗಡೆಯಾಗಲಿಲ್ಲ. ಅಲ್ಲಿಗೆ ಶಾಲಾ ಶಿಕ್ಷಣವನ್ನು ನಿಲ್ಲಿಸಿದರು. ಕೆ.ಜಿ.ಎಫ್.’ನಲ್ಲಿ ಒಂದು ಸೋಡಾ ಫ್ಯಾಕ್ಟರಿಯಲ್ಲಿ ಡಿ.ವಿ.ಜಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು. ಒಂದು ವರ್ಷದ ನಂತರ ಬೆಂಗಳೂರಿಗೆ ಬಂದು ಫ್ಯಾಕ್ಟರಿಯೊಂದರಲ್ಲಿ ದುಡಿದರು. ಜೊತೆಗೆ ಮನೆ ಪಾಠ ಹೇಳಿ ಸ್ವಲ್ಪ ಹಣ ಸಂಪಾದಿಸುತ್ತಿದ್ದರು.

ಡಿ.ವಿ.ಜಿ’ಯವರಿಗೆ ಆಗ ವಯಸ್ಸು ಹದಿನೇಳು. ಅಷ್ಟು ಚಿಕ್ಕ ವಯಸ್ಸಿಗೇ ಅವರು ಇಂಗ್ಲೀಷ್’ನಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು, ಬರೆಯುತ್ತಿದ್ದರು. ಆಗಲೇ “ಈವನಿಂಗ್ ಮೇಲ್”, “ಮೈಸೂರ್ ಸ್ಟ್ಯಾಂಡರ್ಡ್”, “ಸೂರ್ಯೋದಯ ಪ್ರಕಾಶಿಕೆ” ಮುಂತಾದ ಪತ್ರಿಕೆಗಳಿಗೆ ಕನ್ನಡ ಮತ್ತು ಇಂಗ್ಲೀಷಿನಲ್ಲಿ ಲೇಖನಗಳನ್ನು ಬರೆಯಲು ಶುರು ಮಾಡಿದರು. ಮುಂದೆ ಕೃಷ್ಣ ಸ್ವಾಮಿ ಎಂಬ ಸ್ನೇಹಿತರ ಜೊತೆ ಸೇರಿ “ಭಾರತಿ” ಎಂಬ ಕನ್ನಡದ ದಿನಪತ್ರಿಕೆ ಆರಂಭಿಸಿದರು. ಅನಿವಾರ್ಯ ಕಾರಣಗಳಿಂದ ಭಾರತಿ ಪತ್ರಿಕೆಯನ್ನು ನಿಲ್ಲಿಸಿದ ಡಿವಿಜಿ “ಮೈಸೂರು ಟೈಮ್ಸ್” ಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿದರು. ಪತ್ರಿಕಾ ಧರ್ಮದ ವಿರುದ್ದ ಪತ್ರಿಕೆ ನಡೆದುಕೊಂಡಾಗ ಅದನ್ನು ವಿರೋಧಿಸಿದ ಡಿವಿಜಿ ಮೈಸೂರು ಟೈಮ್ಸ್ ಪತ್ರಿಕೆಗೆ ರಾಜೀನಾಮೆ ನೀಡಿ “ಕರ್ಣಾಟಕ” ಎಂಬ ಇಂಗ್ಲಿಷ್ ಪತ್ರಿಕೆಯನ್ನು ತಾವೇ ಆರಂಭಿಸಿದರು. ಈ ಪತ್ರಿಕೆ ಬಹು ಬೇಗನೇ ಪ್ರಸಿದ್ದವಾಯಿತು. ಡಿವಿಜಿ ಈ ಪತ್ರಿಕೆಯಲ್ಲಿ ನಿಷ್ಪಕ್ಷಪಾತವಾಗಿ ವರದಿಗಳನ್ನು ಪ್ರಕಟಿಸುತ್ತಿದ್ದರು. ವಿಶ್ವೇಶ್ವರಯ್ಯನವರು ಡಿ.ವಿ,ಜಿಯವರ ಈ ಕಾರ್ಯವೈಖರಿಯನ್ನು ಪ್ರಶಂಸಿಸಿ ಅವರಿಂದ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದರು.

ಈ ಹೊತ್ತಿಗೆ ಡಿ.ವಿ.ಜಿಯವರ ಹೆಸರು ಪತ್ರಿಕೋದ್ಯಮದಲ್ಲಿ ಮನೆ ಮಾತಾಗಿತ್ತು. ಒಮ್ಮೆ ಪಂಜಾಬಿನ “ ಹೆರಾಲ್ಡ್ ಟ್ರಿಬ್ಯೂನ್” ಎಂಬ ಪತ್ರಿಕೆಗೆ ಸಂಪಾದಕರು ಬೇಕಾಯಿತು. ದಿವಾನ್ ವಿಶ್ವೇಶ್ವರಯ್ಯನವರು ಈ ಸ್ಥಾನಕ್ಕೆ ಡಿವಿಜಿಯವರ ಹೆಸರನ್ನು ಸೂಚಿಸಿದರು.ಆದರೆ ಡಿವಿಜಿ ಸಂಪಾದಕರಾಗಲು ಒಪ್ಪಲಿಲ್ಲ. “ ನನಗೆ ದೊಡ್ಡ ಪದವಿ, ಪ್ರತಿಷ್ಠೆಗಳು ಬೇಡ” ಎಂದು ನಿರಾಕರಿಸಿದರು. ಬಹು ದೊಡ್ಡ ಪತ್ರಿಕೆಯ ಸಂಪಾದಕರಾಗಿ ಅವರು ಹಣ, ಪ್ರಸಿದ್ದಿಯನ್ನು ಪಡೆಯಬಹುದಿತ್ತು. ಆದರೆ ಅವರು ಹಾಗೇ ಮಾಡಲಿಲ್ಲ. ಹಣ, ಅಧಿಕಾರ, ಪ್ರಭಾವ ಇವುಗಳಿಗೆ ದೂರದಿಂದಲೇ ಕೈ ಮುಗಿದ ಡಿ.ವಿ.ಜಿ ಶ್ರೀಮಂತರಾಗಿರಲಿಲ್ಲ. ಆರ್ಥಿಕವಾಗಿ ಬಹಳ ಕಷ್ಟದಲ್ಲಿದ್ದರು. ಆದರೂ ಅವರು ಎಂದಿಗೂ ತಮ್ಮ ಕಷ್ಟವನ್ನು ಹೇಳಿಕೊಂಡವರಲ್ಲ. ಸದಾ ನಗುನಗುತ್ತಾ ಇರುತ್ತಿದ್ದರು.

1932ರ ಹೊತ್ತಿಗೆ ಡಿವಿಜಿ ಸಾಹಿತ್ಯ ಕ್ಷೇತ್ರದಲ್ಲಿಯೂ ವಿಶೇಷವಾದ ಕೆಲಸವನ್ನು ಮಾಡಿದ್ದರು. ಅವರು ದಿವಾನ್ ರಂಗಾಚಾರ್ಲು, ಗೋಪಾಲ ಕೃಷ್ಣ ಗೋಖಲೆ, ಉಮರನ ಒಸಗೆ, ವಸಂತ ಕುಸುಮಾಂಜಲಿ, ನಿವೇದನ ಮುಂತಾದ ಕೃತಿಗಳನ್ನು ರಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಯಲ್ಲಿಯೂ ಸಹ ಡಿವಿಜಿ ಶ್ರಮಿಸಿದ್ದರು. ಇದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ ಅವರನ್ನು ಗೌರವಿಸಲು ಸಾಹಿತ್ಯ ಸಮ್ಮೆಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ಸುಮಾರು 50ಕ್ಕೂ ಹೆಚ್ಚು ಗ್ರಂಥಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇಂಗ್ಲೀಷಿನಲ್ಲಿ ಅವರು ಸುಮಾರು ಮೂವತ್ತು ಕೃತಿಗಳನ್ನು ಬರೆದಿದ್ದಾರೆ.

“ ಮಂಕುತಿಮ್ಮನ ಕಗ್ಗ “ ಡಿವಿಜಿಯವರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಅತ್ಯುತ್ತಮ ಕೃತಿ. ಈ ಕೃತಿ ಡಿವಿಜಿಯವರಿಗೆ “ಆಧುನಿಕ ಸರ್ವಜ್ಞ“ ಎಂಬ ಹೆಸರನ್ನು ತಂದುಕೊಟ್ಟಿದೆ. ಮನುಷ್ಯ, ಪ್ರಕೃತಿ, ಬಾಳ್ವೆ, ಭೋಗ, ಯೋಗ, ಕರ್ಮ, ಸುಖ, ದುಃಖ, ಕ್ಷಮೆ, ತಾಳ್ಮೆ ಮುಂತಾದ ವಿಚಾರಗಳ ಕುರಿತು ಮಂಕುತಿಮ್ಮನ ಕಗ್ಗ ಸುಂದರವಾಗಿ ನಿರೂಪಿಸುತ್ತದೆ. ಡಿವಿಜಿ ಭಗವದ್ಗೀತೆಯ ಕುರಿತು “ ಶ್ರೀಮದ್ಭಗವದ್ಗೀತಾ ತಾತ್ಪರ್ಯ ಅಥವಾ ಜೀವನ ಧರ್ಮ ಯೋಗ” ಎಂಬ ಕೃತಿಯನ್ನೂ ರಚಿಸಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲೂ ಅವರು ಸಲ್ಲಿಸಿದ ಸೇವೆ ಅಸಾಮಾನ್ಯವಾದದ್ದು. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯನ್ನು ಸ್ಥಾಪಿಸಿ ಅವರು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ.

ಡಿವಿಜಿ 1975 ಅಕ್ಟೋಬರ್ 7 ರಂದು ಕಣ್ಮರೆಯಾದರು. ಡಿವಿಜಿಯವರ ಜೀವನವೇ ಅವರು ಬರೆದ ಎಲ್ಲ ಕೃತಿಗಳನ್ನು ಮೀರಿಸುವಂತದ್ದು. ತಾವು ಬದುಕಿದಷ್ಟು ದಿನವೂ ಯಾವುದೇ ಹಣ, ಅಧಿಕಾರಗಳಿಗೆ ಆಸೆಪಡದೆ ಬರೆದಂತೆಯೇ ಬದುಕಿದವರು. ಅವರು ಕಣ್ಮರೆಯಾದರೂ ಅವರ ಶ್ರೇಷ್ಠ ವ್ಯಕ್ತಿತ್ವ ಕನ್ನಡಿಗರ ನೆನಪಿನ ಬುತ್ತಿಯಲ್ಲಿ ಆಡಗಿದೆ. ಇಂದು ಅವರು ಜನಿಸಿದ ದಿನ. ಡಿವಿಜಿಯವರ ತತ್ವ ಆದರ್ಶಗಳು ನಮಗೆ ಸ್ಪೂರ್ತಿಯಾಗಲಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Raviteja Shastri

ಗೌರಿಬಿದನೂರು ಸ್ವಂತ ಊರು. ಈಗ ಬೆಂಗಳೂರಿನಲ್ಲಿ ವಾಸ. ಅಕೌಂಟೆಂಟ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ. ಓದು ಬರವಣಗೆ, ದೇಶಸೇವೆ, ಸಮಾಜ ಸೇವೆ ನನ್ನ ಹವ್ಯಾಸಗಳು. ಉತ್ತಿಷ್ಠ ಭಾರತ ಎಂಬ ಸಂಘಟನೆಯ ಸಕ್ರಿಯ ಕಾರ್ಯಕರ್ತ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!