Featured ಅಂಕಣ

ಕರೆದರೂ ಕೇಳದೆ….

1977ರಲ್ಲಿ ಬಿಡುಗಡೆಯಾದ ವರನಟ ಡಾ|ರಾಜಕುಮಾರ್ ಅಭಿನಯದ ಸನಾದಿ ಅಪ್ಪಣ್ಣ ಎಂಬ ಚಲನಚಿತ್ರದಲ್ಲಿ ಜಿ.ಕೆ. ವೆಂಕಟೇಶ್ ಸಂಗೀತ ನಿರ್ದೇಶನದಲ್ಲಿ, ಖ್ಯಾತ ಗಾಯಕಿ ಎಸ್. ಜಾನಕಿಯವರು ಹಾಡಿದ ಈ ಹಾಡನ್ನು ಸಾಮಾನ್ಯವಾಗಿ ನಾವೆಲ್ಲರೂ ಆಸ್ವಾದಿಸಿದ್ದೇವೆ. ಹಾಡಿನ ಮಧ್ಯೆ ಬರುವ ಶೆಹನಾಯಿ ಎಂಬ ವಾದ್ಯದ ವಾದನ ನನ್ನನ್ನು ಕಾಡಿದ, ಇಂದಿನ ಲೇಖನದ ವಸ್ತು. ಅಂದ ಹಾಗೆ ಇಂದು, ಆ ಚಿತ್ರದಲ್ಲಿ ಶೆಹನಾಯಿ ವಾದನ ಮಾಡಿದ ಭಾರತರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನರ 103ನೆಯ ಜನ್ಮದಿನ. ಕರೆದರೂ ಕೇಳದಿರುವ ಲೋಕದಲ್ಲಿರುವ ಅವರ ಜೀವನ ಚರಿತ್ರೆ ಈಗ ನಿಮ್ಮ ಮುಂದಿದೆ. ಅವರಿಗಾಗಿ ನಮ್ಮ ಮುಂದಿನ ಒ೦ದೆರಡು ನಿಮಿಷಗಳನ್ನು ವ್ಯಯಿಸಿ ಕೃತಾರ್ಥರಾಗೋಣವೇ ?

ಶೆಹನಾಯಿ ಇದು ಒಂದು ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ಉಪಯೋಗದಲ್ಲಿರುವ ಒಂದು ಪೀಪಿ ವಾದ್ಯ. ಇದನ್ನು ಉತ್ತರ ಭಾರತದ ಸಂಪ್ರದಾಯಿಕ ಮನೆತನದವರು ಮಂಗಳಕರ ಸಂದರ್ಭಗಳಲ್ಲಿ ಬಳಸುತ್ತಾರೆ. ಇದು ಉತ್ತರ ಭಾರತ,ಪಾಕಿಸ್ತಾನ,ಇರಾನ್ ಮುಂತಾದ ದೇಶಗಳಲ್ಲಿ ಬಳಕೆಯಲ್ಲಿದೆ. ದಕ್ಷಿಣ ಭಾರತದ ನಾದಸ್ವರವನ್ನು ಹೋಲುವ ಧ್ವನಿ ಹೊಮ್ಮಿಸುವ ಶೆಹನಾಯಿಯನ್ನು ಹಿಂದೆ ಶಂಖದಂತೆ ಮಂಗಳ ವಾದ್ಯವೆಂದು ಪರಿಗಣಿಸಿದ್ದರು. ಹಾವಾಡಿಗರು ಊದುತ್ತಿದ್ದ ಪುಂಗಿಯೇ ಸ್ವಲ್ಪ ರೂಪಾಂತರ ಹೊಂದಿ ಶೆಹನಾಯಿಯೆಂದು ಪ್ರಸಿದ್ಧವಾಯಿತಂತೆ. ಶೆಹನಾಯಿ ಎಂಬ ಶಬ್ದ ಸ್ವರ ಕೊಳವೆ ಎಂಬ ಅರ್ಥದಿಂದ ಹುಟ್ಟಿಕೊಂಡಿದೆ. ಕನ್ನಡದಲ್ಲಿ `ಸನಾದಿ~ ಎಂದು ಹೆಸರಿರುವ ಇದನ್ನು ನುಡಿಸುವವರನ್ನು ಸಾಮಾನ್ಯವಾಗಿ ಭಜ೦ತ್ರಿಗಳೆ೦ದು ಕರೆಯುವರು. ಮುಖ್ಯವಾಗಿ ಮರದ ನಾಲ್ಕು ನಳಿಗೆಯಾಕಾರದ ಕೊಳವೆಗಳು ಜೋಡಿಸಲ್ಪಟ್ಟಂತೆ ವಿನ್ಯಾಸಗೊಂಡಿರುವ ಇದರ ತುದಿ ಲೋಹದ ಮುಚ್ಚಳಿಕೆಯನ್ನು ಹೊಂದಿದೆ. ಕೊಳಲಿನಂತೆ ಕೊಳವೆಗಳಲ್ಲಿ ಆರರಿಂದ ಒಂಭತ್ತು ತೂತುಗಳಿವೆ. ಉಸಿರಿನ ನಿಯಂತ್ರಣದಲ್ಲಿ ತುಟಿಯನ್ನು ತುದಿಗೆ ಒತ್ತಿ ಹಿಡಿದು ತೂತುಗಳನ್ನು ಬೆರಳುಗಳಿಂದ ಮುಚ್ಚಿ ತೆಗೆಯುವುದರ ಮೂಲಕ ಲಯಬದ್ಧವಾಗಿ ಇದನ್ನು ನುಡಿಸಲು ಸಾಧ್ಯ. 12 ಇಂಚು ಉದ್ದವಿರುವ ಶೆಹನಾಯಿಯ ಊದುವ ಭಾಗಕ್ಕೆ `ಜೀವಾಳ~ವನ್ನು ಸಿಕ್ಕಿಸಿ ಊದಿದಾಗ ನಾದೋತ್ಪನ್ನವಾಗುತ್ತದೆ. ಈ ವಾದ್ಯವನ್ನು ಬೆಳಕಿಗೆ ತಂದು ಪ್ರಸಿದ್ಧರಾದ ವಾದಕರಲ್ಲಿ ಮೊದಲಿಗರು ಉಸ್ತಾದ್ ಬಿಸ್ಮಿಲ್ಲಾ ಖಾನ್.

ಒಂದು ನಿರ್ದಿಷ್ಟ ಪಂಗಡದ ಸಾಂಪ್ರದಾಯಿಕ ಆಚರಣೆಗೆ ನುಡಿಸುತ್ತಿದ್ದ ಸಾಧನವಾಗಿದ್ದ ಶೆಹನಾಯಿ ಎಂಬ ವಾದ್ಯವನ್ನು ಪ್ರಸಿದ್ಧ ಶಾಸ್ತ್ರೀಯ ಸಂಗೀತ ವಾದ್ಯವನ್ನಾಗಿಸಿದ ಕೀರ್ತಿ ಭಾರತ ರತ್ನ ಪ್ರಶಸ್ತಿ ವಿಜೇತ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರದು. 1937ರಲ್ಲಿ ಕೊಲ್ಕೋತ್ತಾದಲ್ಲಿ ನಡೆದ ಅಖಿಲ ಭಾರತ ಸಂಗೀತ ಸಮ್ಮೇಳನದಲ್ಲಿ ಇವರು ಮೊತ್ತಮೊದಲ ಬಾರಿ ಮಾಡಿದ ಶೆಹನಾಯಿ ವಾದನ ಕಛೇರಿ ಈ ವಾದ್ಯವನ್ನು ಪ್ರಮುಖ ವಾದ್ಯಗಳ ಸಾಲಿನಲ್ಲಿ ತಂದು ನಿಲ್ಲಿಸಿತು ಎಂದರೆ ತಪ್ಪಾಗಲಾರದು.

ಸಂಗೀತ ಲೋಕವನ್ನು ತಮ್ಮ ಶೆಹನಾಯಿಯ ನಾದದಿಂದ ತುಂಬಿದ ಮಹಾನ್ ಚೇತನರಾದ ಬಿಸ್ಮಿಲ್ಲಾಖಾನರು 1913ರ ಮಾರ್ಚ್ 21ರಂದು ಬಿಹಾರ ರಾಜ್ಯದ ದುಮ್ರಾನ್ ಎಂಬಲ್ಲಿ ಪೈಗಂಬರ್ ಖಾನ್ ಮತ್ತು ಮಿತ್ತನ್’ರಿಗೆ ಎರಡನೆಯ ಮಗನಾಗಿ ಜನಿಸಿದರು. ಅಜ್ಜ ಹಾಗೂ ತಂದೆಯವರ ಶೆಹನಾಯಿ ವಾದನದಿಂದ ಪ್ರಭಾವಿತರಾದ ಇವರು ಮೂಲತಃ ಮುಸ್ಲಿಮರಾದರೂ ಹಿಂದೂ ಧರ್ಮೀಯರ ಪರಿಸರದಲ್ಲಿ ಬೆಳೆದರು. ವಾರಣಾಸಿಯ ವಿಶ್ವನಾಥ ದೇವಾಲಯದಲ್ಲಿ ಶೆಹನಾಯಿ ವಾದನ ನಡೆಸುತ್ತಿದ್ದ ಚಿಕ್ಕಪ್ಪ ಆಲಿಬಕ್ಸ್ ವಿಲಾಯಿತ್’ರ ಬಳಿ ಅಭ್ಯಸಿಸಿದ ಬಳಿಕ ಇವರು ಎಲ್ಲೆಡೆ ಕಛೇರಿ ಕೊಡಲಾರಂಭಿಸಿದರು. ಸ್ವಾತಂತ್ರ್ಯ ಪೂರ್ವದಲ್ಲೆ ಹಿಂದು ಮುಸ್ಲಿಂ ಸಾಮರಸ್ಯದ ಸಂಕೇತವಾಗಿ ಶೆಹನಾಯಿ ವಾದನವನ್ನು ಅವಿಚ್ಥಿನ್ನವಾಗಿ ಭಕ್ತಿಪೂರ್ವಕವಾಗಿ ನುಡಿಸಿದ ಪರಿಣಾಮ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಒಮ್ಮೆ ಬಿಸ್ಮಿಲ್ಲಾ ಖಾನರು ಕುಂಭಮೇಳದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ರೈಲಿನಲ್ಲಿ ಪಯಣಿಸುತ್ತಿದ್ದಾಗ ಅವರ ಬದುಕಿನಲ್ಲಿ ಒಂದು ಅವಿಸ್ಮರಣೀಯ ಘಟನೆ ನಡೆಯಿತು. ಒಂದು ನಿಲ್ದಾಣದಲ್ಲಿ ರೈಲು ನಿಂತಾಗ ಒಬ್ಬ ಗೋಪಾಲ ಬಾಲಕನು ಇವರಿರುವ ರೈಲಿನ ಡಬ್ಬಿಗೆ ಬಂದು ಇವರ ಮುಂದೆ ಸುಶ್ರಾವ್ಯವಾಗಿ ಕೊಳಲು ನುಡಿಸಲಾರಂಭಿಸಿದನಂತೆ. ಅವರಿಗೆ ಆ ಹುಡುಗ ನುಡಿಸುತ್ತಿದ್ದ ರಾಗದ ಅರಿವು ಕೂಡಾ ಇರಲಿಲ್ಲ. ಆ ದನಿಗೆ ಮಾರುಹೋದ ಬಿಸ್ಮಿಲ್ಲಾ ಖಾನರು ನಾನು ನಿನಗೆ ಒಂದು ನಾಣ್ಯ ಕೊಡುತ್ತೇನೆ ಇನ್ನೊಮ್ಮೆ ನುಡಿಸು ಎಂದು ಪ್ರಾರ್ಥಿಸಿದರು. ಹೀಗೆ ಮತ್ತೊಮ್ಮೆ, ಮಗದೊಮ್ಮೆ ಎಂದು ಮುಂದುವರೆದು ಅವರಲ್ಲಿದ್ದ ನಾಣ್ಯಗಳೆಲ್ಲಾ ಮುಗಿದವು. ಬಿಸ್ಮಿಲ್ಲಾ ಖಾನರಿಗೆ ಆ ಹುಡುಗ ಕೃಷ್ಣ ಪರಮಾತ್ಮನಾಗಿ ಕಂಡನಂತೆ. ಅಂದಿನ ಕಾರ್ಯಕ್ರಮದಲ್ಲಿ ಅನೇಕ ಮಹಾನ್ ಪಂಡಿತರ ಎದುರಿನಲ್ಲಿ ಬಿಸ್ಮಿಲ್ಲಾ ಖಾನರು ಈ ರಾಗವನ್ನು ನುಡಿಸಿದರು. ಆ ರಾಗಕ್ಕೆ ಪುನಃ ಪುನಃ ಪ್ರೇಕ್ಷಕರಿಂದ ಬೇಡಿಕೆ ಬಂತು. ಸಭಿಕರನ್ನು ಮಂತ್ರಮುಗ್ಧವಾಗಿಸಿದ್ದ ಆ ರಾಗ ಯಾವುದು ಎಂಬುದು ಅಲ್ಲಿದ್ದ ಯಾವ ಪಂಡಿತರಿಗೂ ತೋಚಲಿಲ್ಲ. ಬಿಸ್ಮಿಲ್ಲಾ ಖಾನರನ್ನು ಕೇಳಿದಾಗ ಅದು ‘ಕನ್ಹೇರ ರಾಗ’(ಕನ್ನಯ್ಯ -ಕೃಷ್ಣ) ಎಂದು ನುಡಿದರಂತೆ. ಹೊಸ ರಾಗವೊಂದು ಉದ್ಭವವಾದ ಪರಿ ನೋಡಿ.

1947ರ ಭಾರತದ ಸ್ವಾತಂತ್ರ್ಯದ ಸಂಧರ್ಭದಲ್ಲಿ ಕೆಂಪು ಕೋಟೆಯಲ್ಲಿ ಬಿಸ್ಮಿಲ್ಲಾರ ಸಂಗೀತ ಕಛೇರಿ ಆಯೋಜಿಸಲಾಗಿತ್ತು. 1950, ಜನವರಿ 26ರ ಪ್ರಥಮ ಗಣರಾಜ್ಯೋತ್ಸವದ ಸಂದರ್ಭದಲ್ಲೂ ಇವರು ಕಾಫಿ ರಾಗದಲ್ಲಿ ದೆಹಲಿಯ ಕೆಂಪುಕೋಟೆಯಿಂದ ತಮ್ಮ ನಾದ ಲಹರಿಯನ್ನು ಹರಿಸಿ ಅಪಾರ ಜನಮನ್ನಣೆ ಗಳಿಸಿದರು. ಬಿಸ್ಮಿಲ್ಲಾ ಖಾನ್ ಎಂದರೆ ಶೆಹನಾಯಿ ಎನ್ನುವಷ್ಟು ಶೆಹನಾಯಿ ವಾದನದಲ್ಲಿ ಹೆಸರು ಗಳಿಸಿದ್ದರು. ಖಾನ್’ರವರು ವಿದೇಶಗಳಲ್ಲೂ ಪ್ರಸಿದ್ಧರು. ಈ ಸಾಧನೆಗೆ 2001ರಲ್ಲಿ ಭಾರತದ ಪರಮೋಚ್ಛ ಪ್ರಶಸ್ತಿ ಭಾರತ ರತ್ನ ಇವರ ಮುಡಿಗೇರಿತು. ಕೀರ್ತಿ ಉತ್ತುಂಗಕ್ಕೇರಿದ್ದರೂ ಉಸ್ತಾದ್ ಬಿಸ್ಮಿಲ್ಲಾರು ವಾರಣಾಸಿಯಲ್ಲಿ ಸಾಮಾನ್ಯ ಜನರಂತೆ ಜೀವನ ನಡೆಸಿದ್ದರು. ಸರಳ ಜೀವನದ ಸಂದೇಶದ ಜೊತೆಗೆ ತಾವೂ ಜೀವನದ ಕೊನೆಯವರೆಗೂ ಓಡಾಟಕ್ಕಾಗಿ ಸೈಕಲ್ ರಿಕ್ಷಾವನ್ನೆ ಅವಲಂಬಿಸಿದ್ದರು. ಬಿಸ್ಮಿಲ್ಲಾರು ತಮ್ಮ ಪತ್ನಿಯ ಸಾವಿನ ಬಳಿಕ ಶೆಹನಾಯಿಯನ್ನೆ ತಮ್ಮ ಬೇಗಂ ಎಂದು ಕರೆಯುತ್ತ ತನ್ಮಯತೆಯಿಂದ ಗಂಟೆಗಟ್ಟಲೆ ಕಛೇರಿ ನಡೆಸುತ್ತ ಭಾವಪರವಶರಾಗಿರುತ್ತಿದ್ದರು. ಹೀಗೆ ಸಂಗೀತ ಲೋಕದಲ್ಲಿ ಹೊಸ ಹಾದಿಯನ್ನೆ ಸೃಷ್ಟಿಸಿ ಸಾಧನೆಗೈದ ಶೆಹನಾಯಿ ವಾದನದ ಮಾಂತ್ರಿಕ ಭಾರತರತ್ನ ಬಿಸ್ಮಿಲ್ಲಾ ಖಾನ್ 2006ರಲ್ಲಿ ಈ ಲೋಕವನ್ನಗಲಿದರು. ಈ ಮಹಾನ್ ಸರಸ್ವತೀ ಪುತ್ರ, ಶ್ರೀಕೃಷ್ಣ ಪ್ರೀತಿಪಾತ್ರ ಸಂಗೀತ ತಪಸ್ವಿಗಳು ಹರಿಸಿದ ಸಂಗೀತ, ಬೆಳಕಿಗೆ ತಂದ ಆ ವಾದ್ಯ ಶೆಹನಾಯಿ ಮಾತ್ರ ಎಂದೆಂದೂ ಚಿರಂತನ.

“ಕರೆದರೂ ಕೇಳದೆ…..” ಹಾಡು ಆಸ್ವಾದಿಸಲು ಈ ಲಿ೦ಕ್ ನೋಡಿ

Facebook ಕಾಮೆಂಟ್ಸ್

ಲೇಖಕರ ಕುರಿತು

Shylaja Kekanaje

ಶೈಲಜಾ ಕೇಕಣಾಜೆ ಮೂಲತಃ ದಕ್ಷಿಣ ಕನ್ನಡದ ವಿಟ್ಲದವರು. ಬಿ .ಇ. ಪದವೀಧರೆಯಾಗಿದ್ದು ಸದ್ಯ ಬೆಂಗಳೂರು ವಾಸಿ. ಲೇಖನ, ಕವನಗಳ ರಚನೆಯಲ್ಲಿ ಹವ್ಯಾಸಿ. ಅದರಲ್ಲೂ ಛಂದೋಬದ್ದ ಕವನಗಳನ್ನು ರಚಿಸುವ ತುಡಿತ. ಮಕ್ಕಳ ಪಾಕ್ಷಿಕ ಬಾಲಮಂಗಳದಲ್ಲೊಂದು ಸರಣಿ ಲೇಖನ ಯಶಸ್ವಿಯಾಗಿ ಮೂಡಿ ಬರುತ್ತಾ ಇದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!