ಅಂಕಣ

ಕಗ್ಗಕೊಂದು ಹಗ್ಗ ಹೊಸೆದು..

ಕಗ್ಗಕೊಂದು ಹಗ್ಗ ಹೊಸೆದು
ಮಗ್ಗದ ನೂಲಲಿ ಬೆಸೆದು
ಹಿಗ್ಗಿಸಿ ಸುತನಾಂತಃಕರಣ
ಕೊಡಲುಡುಗೊರೆಯಾಭರಣ ||

ವಿಶ್ವ ಚಿತ್ತ ಬ್ರಹ್ಮಾಂಡ ಸತ್ಯ
ಬದುಕಿನ ಸತ್ವಗಳೆಲ್ಲವ ನಿತ್ಯ
ಅರಿವಾಗಿಸುತೆಲೆ ಚಿಗುರಲೆ
ಬೇರಾಗಬಹುದು ಎಳಸಲೆ ||

ಬಿಚ್ಚಿಡಲು ಗಂಟು ಗಂಟದಲ್ಲ
ಗಂಟಲಿನಾಳಕಿಳಿಸೆ ಸರಳವಲ್ಲ
ಗರಳದಂತಿದ್ದರು ಮೆಟರೆಗಿಡೆ
ನೀಲಕಂಠನಂತೆ ನೆಲೆಸಿಬಿಡೆ ||

ಅರಿತವರಾರು ಅದರೆಲ್ಲ ಆಳ
ಅರಿತಷ್ಟು ಉದುರಲದೆ ಸಕಲ
ಕುದುರಿದಷ್ಟು ಮುದುರದೆ ದೆಶೆ
ಸ್ವಾದಿಸಲ್ಹಳೆ ದ್ರಾಕ್ಷಾರಸ ಮೂಸೆ ||

ಕಲಿಸಬಯಸಿ ಹೊರಟ ಲೆಕ್ಕ
ಕಲಿಯುವ ಸ್ವತಃ ಜತೆ ಸಮತೂಕ
ಕಲಿತು ಕಲಿಸಿ ಕಲಿಯದ ಕಡ
ಕಲಿಸುವರಿಹರದ ಹುಡುಕಾಡ ||

ಇತ್ತೀಚೆಗೆ ಡೀವಿಜಿಯವರ ಮಂಕುತಿಮ್ಮನ ಕಗ್ಗದ ಕೆಲವು ಪದ್ಯಗಳನ್ನು ಓದಿ ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಒಂದೆಡೆ ಮೇಲ್ನೋಟಕ್ಕೆ ಸುಲಭವಾಗಿ ಗ್ರಹಿಸಲಾಗದ ಮಥಿತಾರ್ಥದ ಕೆಲವು ತುಣುಕುಗಳು ಗೋಚರವಾಗುತ್ತಿದ್ದರೆ ಮತ್ತೊಂದೆಡೆ ಅದರ ವಿಹಂಗಮ ವ್ಯಾಪ್ತಿ ಬರಿಯ ಕಾವ್ಯಾತ್ಮಕ ನೆಲೆಗಟ್ಟಿನಲ್ಲಿ ಮಾತ್ರವಲ್ಲದೆ ನೈತಿಕ, ಆಧ್ಯಾತ್ಮಿಕ, ವೈಜ್ಞಾನಿಕ ಪರಿಧಿಗಳನ್ನೆಲ್ಲ ಸವರಿ ಜನನಸಾಮಾನ್ಯರ ಜೀವನ ದರ್ಶನದತ್ತಲೂ ಕಣ್ಣು ಹಾಯಿಸಿ ವಿಹರಿಸುವುದು ಕಂಡು ಬಂತು. ಕೆಲವೊಮ್ಮೆ ಒಂದೇ ಪದ್ಯವನ್ನು ಮತ್ತೆ ಓದಿದಾಗ ಸ್ಪುರಿಸುವ ವಿವಿಧಾರ್ಥಗಳು ಕೂಡ ವಿಶೇಷವೆನಿಸಿತು. ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಸಲುವಾಗಿ ಪ್ರತಿ ಪದ್ಯವನ್ನು ಓದಿದಾಗ, ನನಗನಿಸಿದ್ದನೆಲ್ಲವನ್ನು ಸ್ಥೂಲವಾಗಿ ‘ಟಿಪ್ಪಣಿ’ ಮಾಡಿಕೊಳ್ಳತೊಡಗಿದೆ. ನನ್ನ ಗ್ರಹಿಕೆ ಸರಿಯಿತ್ತೊ, ಇಲ್ಲವೊ, ಆದರೆ ಆ ಹೊತ್ತಿನಲ್ಲಿ ನನ್ನ ದೃಷ್ಟಿಕೋನದಲ್ಲಿ ಕಂಡ ಅನಿಸಿಕೆಗಳು ಇತರರ ಕಾಣ್ಕೆಯ ಜತೆ ತಾಳೆಯಾಗಬಹುದು ಅಥವಾ ಅಲ್ಲಿ ಕಾಣಿಸಿಕೊಂಡಿರದ ಕೆಲವು ತುಣುಕುಗಳು ಇಲ್ಲಿ ಇಣುಕಬಹುದು. ಅದೇ ತರಹ ಇತರರು ಗ್ರಹಿಸಿದ ಕೆಲವು ಒಳನೋಟಗಳು ನನ್ನ ಗ್ರಹಿಕೆಗೆ ಸಿಕ್ಕದೆ ಬಿಟ್ಟು ಹೋಗಲೂಬಹುದು. ಅದೆಂತೆ ಇರಲಿ, ಹೀಗೆ ಟಿಪ್ಪಣಿ ಮಾಡಿಕೊಳ್ಳುವ ಹವಣಿಕೆ, ಆ ಪದ್ಯಗಳ ಅಂತರಾರ್ಥವನ್ನರಿಯಲು ಒಂದು ಸೂಕ್ತ ಹಾದಿಯೆನಿಸಿ ಆರಂಭಿಸಿಯೆಬಿಟ್ಟೆ. ಬಹುಶಃ ಅದೇ ಟಿಪ್ಪಣಿ ಇತರರಿಗು ಉಪಯೋಗವಾಗಬಹುದೇನೊ ಅನಿಸಿ ಇಲ್ಲಿ ಪ್ರಕಟಿಸುತ್ತಿದ್ದೇನೆ. ಎಷ್ಟು ಪದ್ಯಗಳನ್ನು ಅರ್ಥೈಸಬಲ್ಲೇನೊ ಗೊತ್ತಿಲ್ಲವಾದರೂ, ಅರ್ಥೈಸಿದಷ್ಟನ್ನು ಇಲ್ಲಿ ಹಂಚಿಕೊಳ್ಳಲು ಯತ್ನಿಸುತ್ತೇನೆ.

ಈ ಮೊದಲೆ ಸಾಕಷ್ಟು ಜನ ಈ ಪದ್ಯಗಳಿಗೆ ವಿವರಣೆಯೀವ ಸಾಹಸ ಮಾಡಿ ಯಶಸ್ವಿಯಾಗಿದ್ದಾರೆ. ಅದರ ನಡುವೆ ನನ್ನ ಟಿಪ್ಪಣಿ ಪೇಲವವೆನಿಸಬಹುದಾದರು, ಈ ಮೊದಲೆ ನುಡಿದಂತೆ – ನನ್ನ ಸ್ವಯಂ ಅರ್ಥೈಸಿಕೊಳ್ಳುವಿಕೆ ಮತ್ತು ಕಲಿಕೆ ಇದರ ಪ್ರಮುಖ ಉದ್ದೇಶವಾದ ಕಾರಣ, ತುಸು ಅಳುಕಿದ್ದರು ಮುಂದಡಿಯಿಡುತ್ತಿದ್ದೇನೆ – ಕೆಲವರಿಗೆ ಉಪಯೋಗವಾದರೂ ಆದೀತು ಎಂಬ ಜತೆಯನಿಸಿಕೆಯಲ್ಲಿ. ಅರ್ಥೈಸುವಿಕೆಯ ಟಿಪ್ಪಣಿಯಲ್ಲಿ, ಗ್ರಹಿಕೆಯಲ್ಲಿ ದೋಷವಿದ್ದರೆ ಅದು ಬರಿಯ ನನ್ನ ಗ್ರಹಿಕೆಯ ದೋಷ ಮಾತ್ರವಷ್ಟೆ – ಅದಕ್ಕೆ ಕ್ಷಮೆಯಿರಲಿ ಎಂದು ಕೋರುವೆ ಮತ್ತು ತಿದ್ದುವ ಸಹನೆಯೂ ಇದ್ದರೆ ನಾನು ಚಿರ ಕೃತಜ್ಞ.

ಇಲ್ಲಿ ಬಳಸಿಕೊಂಡ ಪದ್ಯಗಳೆಲ್ಲವನ್ನು ಡೀವಿಜಿಯವರ ‘ಮಂಕುತಿಮ್ಮನ ಕಗ್ಗ’ದ ಪುಟಾಣಿ ಪುಸ್ತಕದಿಂದ ಆಯ್ದುಕೊಂಡಿದ್ದು. ಅರ್ಥೈಸಿಕೊಳ್ಳುವ ತೊಡಕುಂಟಾದಾಗೆಲ್ಲ ಅಂತರ್ಜಾಲ, ಪದಕೋಶಾದಿ ಇತರ ಮೂಲಗಳನ್ನು ಬಳಸಿಕೊಂಡಿದ್ದೇನೆ. ಇಲ್ಲಿನ ಟಿಪ್ಪಣಿ ಮಾತ್ರ ನನ್ನ ಗ್ರಹಿಕೆಯ ವಿವರಣೆ; ಡೀವಿಜಿಯವರ ಮೂಲ ಪದ್ಯಗಳನ್ನೆ ಮೂಲಾಧಾರವಾಗಿ ಮತ್ತು ಗ್ರಹಿಕೆಯನುಕೂಲಕ್ಕಾಗಿ ಜತೆಗೂಡಿಸಿದ್ದೇನೆ. ಈ ಮೂಲಕ ಆ ಮಹಾನ್ ಚೇತನಕ್ಕೊಂದು ನಮನ ಸಲ್ಲಿಸುತ್ತಲೆ ಜೀವನ ದರ್ಶನ ಮಾಡಿಕೊಳ್ಳಬಹುದೆಂಬ ಆಶಯದೊಂದಿಗೆ, ಇದೊ ಕಗ್ಗದ ಮೊದಲ ಪದ್ಯದ ನನ್ನ ಟಿಪ್ಪಣಿಯನ್ನು ತಮ್ಮ ಮುಂದಿಡುತ್ತಿದ್ದೇನೆ.

ಟಿಪ್ಪಣಿ ಮಂಕುತಿಮ್ಮನ ಕಗ್ಗ – ೦೦೧
______________________________

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ |
ದೇವ ಸರ್ವೇಶ ಪರಬೊಮ್ಮನೆಂದು ಜನಂ ||
ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ |
ಆ ವಿಚಿತ್ರಕೆ ನಮಿಸೊ – ಮಂಕು ತಿಮ್ಮ || || ೦೦೧ ||

ಈ ಸಕಲ ವಿಶ್ವ ಸೃಷ್ಟಿಗೆ ಮೂಲ ಕಾರಣ ಸರ್ವ ಶಕ್ತ ಭಗವಂತ. ಮಾಯಾಲೋಲನಾದ ಅವನದು ಮಾತಿನಲ್ಲಿ ವರ್ಣಿಸಲಾಗದ ಅಪರಿಮಿತತೆ. ಎಲ್ಲರ ದೇವ, ಸರ್ವರೊಡೆಯನಾದ ಸರ್ವೇಶ, ಚರಾಚರಕೆಲ್ಲ ಮೂಲ ಜಡ ಚೇತನವಾದ ಪರಬ್ರಹ್ಮ ಎಂದೆಲ್ಲ ಕರೆಸಿಕೊಂಡು, ಸ್ವತಃ ಕಣ್ಣಿಗೆ ಕಾಣಿಸದಿದ್ದರೂ ಅದರ ಅಸ್ತಿತ್ವದ ಕುರಿತು ಇನಿತೂ ಸಂಶಯಿಸದೆ ಜನರೆಲ್ಲರಿಂದ ಆರಾಧಿಸಲ್ಪಟ್ಟ ಮಹಾನ್ ಶಕ್ತಿ, ಮಹಾನ್ ವಿಶ್ವ ಪ್ರಜ್ಞೆ .

ತಾವು ಕಾಣಲಾಗದ ಶಕ್ತಿಯನ್ನು ವಿಶ್ವ ಸೃಷ್ಟಿಯ ಮೂಲ, ಪರಮ ಶಕ್ತ, ಇಹಲೋಕದ ಮಾಯಾಲೀಲೆಗಳ ಕಾರಣಕರ್ತ, ಸರ್ವರಿಗೂ ಒಡೆಯನಾದ ಪರಬ್ರಹ್ಮ ಎಂದೆಲ್ಲ ನಂಬುತ್ತಾರೆ ಸಾಮಾನ್ಯ ಜನರು. ಆ ನಂಬಿಕೆ ಎಷ್ಟು ಸಹಜವೆಂದರೆ ಅಲ್ಲಿ ಭಯ, ಭೀತಿ, ಸಂಶಯಗಳಿಗೆ ಬದಲು ಪ್ರಶ್ನಾತೀತ ಭಕ್ತಿ, ಪ್ರೀತಿಗಳ ಶರಣಾಗತ ಭಾವವಿದೆ. ಇಷ್ಟೆಲ್ಲಾ ಜನರು ತಾವು ಕಾಣದ ಶಕ್ತಿಯ ಮೇಲೆ ಅಷ್ಟೊಂದು ನಂಬಿಕೆಯಿಟ್ಟಿರಬೇಕಾದರೆ ಅದೊಂದು ಅದ್ಭುತ ವಿಚಿತ್ರವೆ ಇರಬೇಕಲ್ಲವೆ?

ಯಾವ ಮಹಾನ್ ಶಕ್ತಿಯನ್ನು ಕಾಣಲಾಗದೊ, ಅರಿಯಲಾಗದಿದ್ದರು ಅದರ ಅಸ್ತಿತ್ವವನ್ನು ಇಲ್ಲವೆ ಇಲ್ಲವೆಂದು ಸಾಕ್ಷ್ಯಾಧಾರಸಮೇತ ಸಾರಾಸಗಟಾಗಿ ಅಲ್ಲಗಳೆಯಲಾಗದೊ , ಅದರ ಇರುವಿಕೆಯ ಅನುಭೂತಿಯನ್ನು ತಿರಸ್ಕರಿಸಲಾಗದೊ – ಅಂತಹ ಮಹಾನ್ ಶಕ್ತಿಯ ಕುರಿತು ನಂಬಿಕೆ ಇದೆ-ಇಲ್ಲವೆನ್ನುವ ಜಿಜ್ಞಾಸೆಯನ್ನು ಬದಿಗಿಟ್ಟು, ಆ ಅಪರಿಮಿತದ ವೈಚಿತ್ರಕ್ಕೆ ಬೆರಗಾಗಿ ಕನಿಷ್ಠ ತಲೆಬಾಗಿ ನಮಿಸಿಯಾದರೂ, ನಮಗರಿವಾಗದದಾವುದೊ ‘ಏನೊ’ ಇದೆಯೆಂದು ಒಪ್ಪಿಕೊಳ್ಳುವ ಸೌಜನ್ಯವನ್ನಾದರೂ ತೋರಬೇಕೆಂಬ ಭಾವ ಇಲ್ಲಿನ ಆಂತರ್ಯದಲ್ಲಿ ಅಡಗಿದೆ.

ಎಲ್ಲಕ್ಕಿಂತ ಹೆಚ್ಚು ಇಲ್ಲಿ ಆಪ್ತವಾಗುವುದು ತತ್ವ ವೇದಾಂತ ಅನುಭವದ ಸೊಗಡನ್ನು ಹೂವಿಂದ ಸೂಸುವ ಪರಿಮಳದಂತೆ ತೆರೆದಿಡುವ ಕವಿ ಭಾವ. ಏನನ್ನೊ ಹುಡುಕಿ ಹೊರಟು, ಕೊನೆಗೂ ಕಂಡು ಹಿಡಿಯಲಾಗದೆ ಸೋತೆ ಎನ್ನುವ ವಿಷಾದಕ್ಕಿಳಿಯದೆ, ತಡಕಾಡಿದರೂ ಬಿಡಿಸಲಾಗದ ಒಗಟಿನ ಸರ್ವಶಕ್ತತೆಯನ್ನು ಸುಮ್ಮನೆ ಒಪ್ಪಿ ಆರಾಧಿಸುತ್ತಿರುವ ಸಾಮಾನ್ಯ ಜನ ಕೇವಲ ಮೂರ್ಖತೆಯಿಂದ ಹಾಗೆ ಮಾಡದೆ, ಅರಿಯುವುದೆ ಅಸಂಭವವೆನ್ನುವ ಅಂತರ್ಪ್ರಜ್ಞೆಯ ಸರಳ ವಿವೇಕದಿಂದ, ಆ ಶರಣಾಗತಿಯ ಪಥ ಹಿಡಿದಿದ್ದಾರೆಂದು ಅರಿವು ಮೂಡಿದ ಕವಿಪ್ರಜ್ಞೆಯೂ ಇಲ್ಲಿ ಮಿಳಿತವಾಗಿದೆ. ಒಟ್ಟಾರೆ ಪ್ರಶ್ನಿಸದೆ ನಂಬಿಕೆಯಿಡುವ ಸಾಮಾನ್ಯನು ತಲುಪಿದ ತೀರ್ಮಾನವನ್ನೆ ತರ್ಕಬದ್ದವಾಗಿ ವಿಶ್ಲೇಷಿಸಿ ಸಾಕ್ಷಿಯ ಮೂಲಕ ನಂಬಬೇಕೆಂದು ಹುಡುಕಿಕೊಂಡು ಹೊರಟ ಪ್ರಜ್ಞಾವಂತ ಚಿಂತಕನು ತಲುಪುವುದು ಇಲ್ಲಿನ ಸ್ವಾರಸ್ಯ. ಆದರೆ ಆ ಹಾದಿಯಲ್ಲಿ ಜಿಜ್ಞಾಸೆ, ಖೇದ, ವಿಷಾದಾದಿ ಭಾವಗಳೆಲ್ಲ ಅನುಭವದ ಮೂಸೆಯಲ್ಲಿ ಅರಳಿ ನರಳಿ ವಿಸ್ತರಿಸಿ ಯಾವುದೊ ವಿಸ್ಮೃತಿಯ ವಿಭ್ರಾಂತ ಲೋಕಕ್ಕೊಯ್ದು ಕೊನೆಗೆ ತಾನರಿತದ್ದು ಸಾಮಾನ್ಯ ಮನುಜನ ಅರಿವಿನಾಳಕ್ಕಿಂತ ಹೆಚ್ಚಿನದೇನಲ್ಲ ಎಂಬ ಜ್ಞಾನೋದಯವಾದಾಗ ವ್ಯರ್ಥ ಪ್ರಯತ್ನ ಬಿಟ್ಟು ಆ ಶಕ್ತಿಗೆ ನಮಿಸಿ ಸುಮ್ಮನಿರುವುದು ಸೂಕ್ತ ಎನ್ನುವ ತೀರ್ಮಾನಕ್ಕೆ ಬರಬೇಕಾಗುತ್ತದೆನ್ನುವ ಅನುಭವಾಮೃತ ಸಾರ ಇದರಲ್ಲಡಗಿದೆ.

– ನಾಗೇಶ ಮೈಸೂರು

nageshamysore@yahoo.co.in

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!