ಅಂಕಣ

ಹೊಗಳಿಸ್ಕೊಳ್ಳೋಕೊಬ್ಬ ಕೊಹ್ಲಿ…..ಬೈಯ್ಸ್ಕೊಳ್ಳೋಕೊಬ್ಬ ಧೋನಿ

ಜನವರಿ 18, 1998, ಬಂಗಬಂಧು ನ್ಯಾಷನಲ್ ಸ್ಟೇಡಿಯಂ, ಢಾಕಾ. ಇಂಡಿಪೆಂಡೆನ್ಸ್ ಕಪ್ ಅನ್ನೋ ತ್ರಿಕೋನ ಸರಣಿಯ ಫೈನಲ್ ಪಂದ್ಯ ಕಡು ವೈರಿಗಳಾದ ಭಾರತ ಮತ್ತು ಪಾಕಿಸ್ಥಾನದ ನಡುವೆ ನಡೆಯುತ್ತಿದೆ. ಪಾಕಿಸ್ಥಾನದ ಇನ್ನಿಂಗ್ಸಿನಲ್ಲಿ ಸಯೀದ್ ಅನ್ವರ್ ಹಾಗೂ ಇಜಾಜ್ ಅಹ್ಮದ್ ಇಬ್ಬರೂ ಶತಕ ಚಚ್ಚಿ 314ರನ್ ಹೊಡೆದು, ಭಾರತಕ್ಕೆ 315ರ ಗುರಿ ಕೊಟ್ಟಿದೆ. ನಿಧಾನ ಗತಿಯ ಬೌಲಿಂಗ್ ನೆಪದಲ್ಲಿ ಭಾರತಕ್ಕೆ ನಲವತ್ತೆಂಟೇ ಓವರ್’ನಲ್ಲಿ 315 ಹೊಡೆಯಬೇಕಾದ ಸಂದಿಗ್ಧ ಪರಿಸ್ಥಿತಿ. ಆದರೂ ಬಂಗಾಳದ ಹುಲಿ ಸೌರವನ 124 ಹಾಗೂ ರಾಬಿನ್ ಸಿಂಗನ 82ರ ಸಹಾಯದಿಂದ ಹಂಗೂ ಹಿಂಗೂ ಏದುಸಿರು ಬಿಟ್ಟು, ಕೊನೆಯ ಓವರ್ರಿನ ಆರು ಬಾಲುಗಳಲ್ಲಿ ಭಾರತಕ್ಕೆ 9 ರನ್ ಗಳಿಸಬೇಕಾದಲ್ಲಿಗೆ ಬಂದು ನಿಂತಿದೆ. ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಆಫ್ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಕೊನೆಯ ಓವರಿನ ಜವಾಬ್ದಾರಿ ಹೊತ್ತಿದ್ದ. ಒಂದು ಬದಿಯಲ್ಲಿ ಸರಿಯಾಗಿ ಬ್ಯಾಟ್ ಹಿಡಿಯಲೇ ಬರದ ಜಾವಗಲ್ ಶ್ರೀನಾಥ್. ಇನ್ನೊಂದೆಡೆ ಆಗಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್ಟಿಗೆ ಕಾಲಿಟ್ಟು ಬರೇ 2 ಮ್ಯಾಚು ಆಡಿದ್ದ ಹೃಷಿಕೇಶ್ ಕಾನಿಟ್ಕರ್ ಎಂಬ ತರುಣ ದಾಂಡಿಗ. 6 ಬಾಲಿಗೆ 9 ರನ್, 5 ಬಾಲಿಗೆ 8 ರನ್, 4 ಬಾಲಿಗೆ 6 ರನ್ ಬೇಕಾಗಿದ್ದಾಗ ಶ್ರೀನಾಥ್ ಗೊತ್ತು ಗುರಿಯಿಲ್ಲದೇ ಬೀಸಿದ ಬ್ಯಾಟಿಗೆ ತಾಕಿದ ಚೆಂಡು ಅಕಾಶಕ್ಕೆ ಚಿಮ್ಮಿ, ಎಲ್ಲರ ಹೃದಯವೂ ಬಾಯಲ್ಲಿ! ಕೊನೆಗೆ ಮೂರು ಫೀಲ್ಡರುಗಳ ಮಧ್ಯ ಬಾಲ್ ಬಿದ್ದು ಪಾಕಿಸ್ಥಾನದ ಹೃದಯ ಭಗ್ನ. 3 ಬಾಲಿಗೆ 4 ರನ್, 2 ಬಾಲಿಗೆ 3 ರನ್ ಅಗತ್ಯ. ಇಂತಹ ಉದ್ವೇಗಭರಿತ ಸನ್ನಿವೇಶದಲ್ಲಿ ಸರಿಯಾಗಿ ಬಾಲ್ ಕಾಣದಷ್ಟೂ ಇಬ್ಬನಿ ಬೀಳುತ್ತಿದ್ದ ಆ ಗ್ರೌಂಡಿನಲ್ಲಿ ಆ ಹುಡುಗ ಬ್ಯಾಟ್ ಬೀಸೇಬಿಟ್ಟ. ಚೆಂಡು ಯಾರಿಗೂ ಕಾಣದಷ್ಟು ವೇಗದಲ್ಲಿ ಬೌಂಡರಿ ತಲುಪಿತ್ತು. ಭಾರತ 3 ವಿಕೆಟ್ಟುಗಳ ಅಂತರದಲ್ಲಿ ಗೆದ್ದಿತ್ತು. ಹೃಷಿಕೇಶ್ ಕಾನಿಟ್ಕರ್ ಇಡೀ ಭಾರತದ ಪಾಲಿಗೆ ಹೀರೋ ಆಗಿದ್ದ. ಈ ಪಂದ್ಯದಲ್ಲಿ ಆತ ಹೊಡೆದದ್ದು ಬರೇ 11 ರನ್ನು. ಎದುರಿಸಿದ್ದು ಬರೇ 12 ಚೆಂಡು.

ಆ ಮ್ಯಾಚು ಗೆಲ್ಲಿಸಿದ್ದಕ್ಕೋ, ಪಾಕಿಸ್ಥಾನದ ಮೇಲೆ ಆ ಮ್ಯಾಚು ಗೆಲ್ಲಿಸಿದ್ದಕ್ಕೋ, ಅಥವಾ ಆ ಸೀರೀಸು ಗೆಲ್ಲಿಸಿದ್ದಕ್ಕೋ ಇನ್ಯಾವುದಕ್ಕೋ ಗೊತ್ತಿಲ್ಲ. ಒಟ್ಟಿನಲ್ಲಿ ಕಾನಿಟ್ಕರ್ 1998ರ ಜನವರಿಯಿಂದ 2000ರ ಜನವರಿವರೆಗೆ ಟೀಮಿನಲ್ಲಿ ಖಾಯಂ ಆಗಿ ಮೊಳೆ ಹೊಡೆದುಕೊಂಡು ಕೂತಿದ್ದ. ಅದಾದ ಮೇಲೆ 31 ಮ್ಯಾಚುಗಳನ್ನಾಡಿದ ಈ ದಾಂಡಿಗ ತನ್ನ ವೃತ್ತಿ ಜೀವನದಲ್ಲಿ ಹೊಡೆದ ಅತೀಹೆಚ್ಚು ರನ್ನೆಂದರೆ 57. ಅದು ಬಿಟ್ಟರೆ 35. ಬರೇ ಆ ಒಂದು ದಿನ‍ದ ಬೌಂಡರಿಯಿಂದಾಗಿ ಆತ ಯಾರೂ ಮುಟ್ಟಲಾಗದ ದೇವರಾಗಿದ್ದ. ಇವತ್ತು ವರ ಕೊಡ್ತಾನೆ ನಾಳೆ ವರ ಕೊಡ್ತಾನೆ ಅಂತಾ ಕಾಯ್ತಿದ್ದ ಭಕ್ತರನ್ನ ನಿರಾಸೆಗೊಳಿಸಿ, ಒಂದಿನ ಪ್ಯಾಡ್ ಬಿಚ್ಚಿಟ್ಟು ಹೊರಟೇ ಹೋದ. ಭಾರತ ಮುಂದಿನ ದೇವರಿಗಾಗಿ ಕಾಯಲು ಪ್ರಾರಂಭಿಸಿತು. ಇದಾದ ಮೇಲೆ ಸಂಜಯ್ ಬಾಂಗರ್ ಎಂಬಾತ ಬಂದಿದ್ದ. ಅವನದೂ ಇದೇ ಕಥೆ. ರಾಬಿನ್ ಉತ್ತಪ್ಪನೆಂಬ ಯುವಕನಿಗೂ ಹೀಗೆಯೇ ನಿರೀಕ್ಷೆಗಳ ಸುಪ್ಪತ್ತಿಗೆ ಸಿಕ್ಕಿತ್ತು. ಇದೀಗ ಕೊಹ್ಲಿ, ರಹಾನೆ ಎಂಬಿಬ್ಬರು ಮಾಂತ್ರಿಕರ ಮೇಲೆ ಅಪಾರ ನಿರೀಕ್ಷೆಗಳನ್ನಿಟ್ಟುಕೊಂಡು, ಹೃದಯ ಭಗ್ನಗೊಳಿಸಿಕೊಳ್ಳಲು ಭಾರತ ಸಜ್ಜಾಗಿದೆ.

ನಾವು ಬದಲಾಗಲ್ಲ ರೀ. ಒಬ್ಬ ಸಿಕ್ಕಿದ್ರೆ ಸಾಕು. ಎತ್ಕಂಡು ಹೆಗಲ ಮೇಲೆ ಹೊತ್ಕಂಡು ಮೆರವಣಿಗೆ ಮಾಡೋಕೆ. ಅಥವಾ ಕೆಳ್ಗೆ ಹಾಕಿ ತುಳಿಯೋಕೆ. ಬೇರೆ ಏನಾದ್ರೂ ವೀ ಡೋಂಟ್ ಕೇರ್. ಒಂದು ಉತ್ಸವ ಮೂರ್ತಿ ಇದ್ರೆ ಸಾಕ್ ನನ್ ಮಗಂದ್. ಒಂದು ಕಾಲದಲ್ಲಿ ತೆಂಡುಲ್ಕರ್ ಇದ್ದ. ಈಗ ವಿರಾಟ್ ಕೊಹ್ಲಿ. ಇವರೆಲ್ಲಾ ಪ್ರತಿಭಾವಂತರೇ ಹೌದು. ಹಾಗಂತ ಅವರೇನೂ ದೇವರಲ್ಲ. ನನ್ನನ್ನ ದೇವರು ಮಾಡಿ ಅಂತ ಅವರು ಕೇಳಿಕೊಳ್ಳಲೂ ಇಲ್ಲ. ಅವರನ್ನ ದೇವರನ್ನಾಗಿ ಮಾಡಿ, ನಿರಾಶೆಗೊಳ್ಳೋದು ನಾವೇ. ಕರೆಕ್ಟಾಗಿ ಒಂದು ವರ್ಷದ ಕೆಳಗೆ ವರ್ಲ್ಡ್ ಕಪ್ ಸೆಮಿಫೈನಲ್ ಮ್ಯಾಚಲ್ಲಿ ರನ್ ಹೊಡೀಲಿಲ್ಲ ಅಂತಾ ಹೇಳಿ ಕೊಹ್ಲಿಗೆ ಹಿಗ್ಗಾಮುಗ್ಗ ಬೈದ ಜನರೇ ಇವತ್ತು ಹೆಗಲ ಮೇಲೆ ಕೂರಿಸ್ಕಂಡು ಮೆರವಣಿಗೆ ಮಾಡ್ತಾ ಇದ್ದಾರೆ. ಇದು ಬರೀ ಆಟಕ್ಕೆ ಮಾತ್ರ ಸೀಮಿತವಲ್ಲ. ನಮಗೆ, ಅಂದ್ರೆ ಭಾರತೀಯರಿಗೆ ತಲೆ ಮೇಲೆ ಇಟ್ಕೊಳ್ಳೋಕೆ ಸದಾ ಒಂದು ಉತ್ಸವ ಮೂರ್ತಿ ಇರಬೇಕು. ಇಲ್ಲಾಂದ್ರೆ ನಮಗೆ ಬಹುಷಃ ಜೀವನವೇ ಖಾಲಿ ಖಾಲಿ ಅನ್ಸುತ್ತೆ. ಅಣ್ಣಾ ಹಜಾರೆ, ಅರವಿಂದ್, ಮೋದಿ, ಕನ್ಹಯ್ಯಾ, ಸಲ್ಮಾನ್ ಖಾನ್, ಅಮೀರ್ ಖಾನ್, ತೆಂಡುಲ್ಕರ್, ಸೆಹ್ವಾಗ್……ಅಫ್ಝಲ್ ಗುರು…..ಹಿಂಗೇ ಯಾರಾದ್ರೂ ಒಬ್ರು ಇರ್ಲೇ ಬೇಕು ನಮ್ಗೆ. ಯಾರೂ ಇಲ್ದೇ ಇದ್ರೆ…….ಇದ್ದೇ ಇದ್ದಾರಲ್ಲ ಧೋನಿ ಅಂಡ್ ಮೋದಿ. ಅವ್ರನ್ನ ಬಯ್ಕಂಡು ಹಾಯಾಗಿರ್ತೀವಿ, ಅಷ್ಟೇ.

ನಮ್ಮಲ್ಲಿ “ಪ್ಲಾನ್-ಬಿ” ಅನ್ನೋದು ಇಲ್ವೇ ಇಲ್ಲ. ತೆಂಡುಲ್ಕರ್ ಇದ್ದಾಗ ಅವನನ್ನ ದೇವರೆಂದ್ವಿ. ಇನ್ನೊಬ್ಬ ಮರಿ ದೇವರನ್ನ ನಾವು ಪ್ರೀತಿ ಕೊಟ್ಟು ಬೆಳೆಸಲೇ ಇಲ್ಲ. ಮೋದಿ ಬಂದಾಗ ಅವನನ್ನು ದೇವರೆಂದ್ವಿ. ಅವನ ಬದಲಿಗೊಬ್ಬ ಮರಿ ದೇವರು ಬಿಡಿ ಒಬ್ಬ ದ್ವಾರಪಾಲಕನನ್ನೂ ಬೆಳೆಸ್ತಾ ಇಲ್ಲ ನಾವು. ದೇವರಿದ್ದಾಗ ಅವನ ಆರಾಧನೆಯೇ ಮುಖ್ಯ ನಮಗೆ. ಉಳಿದದ್ದೆಲ್ಲಾ ಕ್ಯಾನ್ ವೈಟ್ ಐ ಸೇ. ಗೆಲ್ಲೋ ಕುದುರೆಯಿದ್ದಾಗ ಎಲ್ಲರಿಗೂ ಅದರ ಹಿಂದೆ ಓಡುವುದೇ ಕೆಲಸ. ಇನ್ನೊಂದು ಕುದುರೆ ಮರಿ ಎಲ್ಲಿದೆ? ಈ ಕುದುರೆ ಸುಸ್ತಾದಾಗ ಮುಂದೇನು? ಎಂಬುದನ್ನು ನಾವು ಯೋಚಿಸುವುದೇ ಇಲ್ಲ. ಇವತ್ತನ್ನು ಜೀವಿಸೋಣ ಅನ್ನೋ ವೇಗದಲ್ಲಿ ನಾಳೆಯ ಯೋಚನೆಯೂ ಮಾಡದೇ ಸಂಭ್ರಮಿಸೋ ನಾವು ಗ್ರೇಟ್ 🙂

ನಮ್ಮ ಕಾರ್ಪೋರೇಟ್ ಜಗತ್ತಿನಲ್ಲಿ ಒಂದು ಮಾತು ಆಗಾಗ ಉಪಯೋಗಿಸಲ್ಪಡುತ್ತೆ “If I am run over by a truck tomorrow…….” ಅಂತಾ. ಅಂದ್ರೆ ನಮ್ಮಲ್ಲಿ ಯಾವ ಕೆಲಸವೂ person centric ಅಲ್ಲ. ಆಗಬಾರದೂ ಸಹ. ಎಲ್ಲವೂ process centric. ಒಂದು ಕೆಲಸವನ್ನು ಒಬ್ಬ ಮಾಡ್ತಾ ಇದ್ದಾನೆ. ಆದರೆ ನಾಳೆ ಯಾವುದೇ ಕಾರಣಕ್ಕೆ ಅಲ್ಲಿ ಅವನಿಲ್ಲ ಅಂದ್ರೂ ಆ ಕೆಲಸ ನಡೀತಿರ್ಬೇಕು. ನಮ್ಮ workflow design ಆ ರೀತಿ ಇರಬೇಕು. ಅದೇ ಕಾರ್ಯ ದಕ್ಷತೆಯ ಮೊದಲ ಮೆಟ್ಟಿಲು ಅಂತೀವಿ. ಆದರೆ ಕ್ರೀಡಾ ಕ್ಷೇತ್ರದಲ್ಲಿ, ರಾಜಕಾರಣದಲ್ಲಿ ಇದನ್ನ ಇಂಪ್ಲಿಮೆಂಟ್ ಮಾಡೋಕೆ ಮರೀತೀವಿ. ನಮ್ಮ ದೇವರು ಒಂದು ಅತ್ಯಗತ್ಯ ಮ್ಯಾಚಲ್ಲಿ ರನ್ ಹೊಡೀಲಿಲ್ಲ ಅಂದ್ರೆ ಕೆಳಗೆ ಹಾಕಿ ತುಳೀತೀವಿ. ಅಳ್ತೀವಿ. ಟೀವಿ ಪುಡಿ ಮಾಡ್ತಿವಿ. ಆ ದೇವರ ಮನೆಗೆ ಕಲ್ಲೆಸೆದು ಬರ್ತೀವಿ. ಯಾರಾದ್ರೂ ನಮ್ಮ ರಿಯಾಕ್ಷನ್ನನ್ನು ಜಾಸ್ತಿ ಟೀಕಿಸಿದರೆ “ಅಯ್ಯೋ! ನೂರುಕೋಟಿ ಜನರಲ್ಲಿ ಇನ್ನೊಬ್ಬನ್ನ ಹುಡುಕೋಕೆ ಆಗಲ್ವೇನೋ ನಮ್ಗೆ! ಇವನಲ್ಲದಿದ್ರೆ ಇನ್ನೊಬ್ಬ ಬರ್ತಾನೆ ಹೋಗೋ! ಕೊಹ್ಲಿಯಂತೆ ಕೊಹ್ಲಿ” ಅಂತಾ ಸಿಡುಕುತೀವಿ. ಆದರೆ ಯಾವತ್ತೂ ನಮ್ಮನ್ನ ನಾವು ಬೈಕೊಳಲ್ಲ.

ಹನುಮಂತಪ್ಪ ಕೊಪ್ಪದ್ ಬದುಕುಳಿದಾಗ ಏನ್ ಹರ್ಷವೋ ಹರ್ಷ. ಮತ್ತೆ ಅವರು ತೀರಿಕೊಂಡಾಗ ಸೂತಕ. ಅಲ್ಲಿಗ್ ಮುಗೀತ್ ಒಂದು ಅಧ್ಯಾಯ! ಇನ್ನು ಆ ಹೆಸರು ನೆನಪಾಗುವುದು FB ಮೆಮೊರಿಸ್ ತೋರಿಸಿದಾಗಲೆ. ಅಕಸ್ಮಾತ್ FB ಮೆಮೊರಿಸ್ ಸೌಲಭ್ಯ ನಿಲ್ಲಿಸಿಬಿಟ್ಟರೆ ಅದೆಷ್ಟು ಅಧ್ಯಾಯಗಳು ಶಾಶ್ವತವಾಗಿ ಸಮಾಧಿಯಾಗುತ್ತಾವೋ ಗೊತ್ತಿಲ್ಲ. ಭಾರತ ಮೊತ್ತ ಮೊದಲ T20 ವರ್ಲ್ಡ್-ಕಪ್ ಗೆದ್ದ ದಿನ ಅತ್ಯದ್ಭುತ ಕೊನೆ ಓವರ್ ಎಸೆದ ಜೋಗಿಂದರ್ ಶರ್ಮಾ, ಕ್ರಿಕೆಟ್ಟಿಗೂ ತನಗೂ ಬರೇ ಆರೇ ತಿಂಗಳಿನ ಸಂಬಂಧವೇನೋ ಎಂಬಂತೆ ಬದುಕಿ, ನಿವೃತ್ತನಾಗಿ, ಈಗ ಹರಿಯಾಣ ಪೋಲೀಸಿನಲ್ಲಿ ಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾನಂತೆ. ಅದೂ ಸಹ ಇತ್ತೀಚೆಗೆ ವೆಬ್’ಸೈಟೊಂದು ರಿಪೋರ್ಟ್ ಮಾಡುವವರೆಗೆ ಯಾರಿಗೂ ಗೊತ್ತಿರಲಿಲ್ಲ. ಆ ಕಪ್ ಗೆದ್ದಿದ್ದು ಗೊತ್ತು. ಅದಾದ ಮೇಲೆ ಎರಡು ತಿಂಗಳ ಸಂಭ್ರಮಿಸಿದ್ದು ಬಂತು. ರಸಗವಳದ ಮರುದಿನದ ಊಟ ಯಾರಿಗೂ ನೆನಪೇ ಇಲ್ಲ. ನೆನಪಾಗುವುದೂ ಇಲ್ಲ. ಆತ ಎಷ್ಟು ವೇಗವಾಗಿ ಹೆಸರು ಪಡೆದನೋ ಅಷ್ಟೇ ವೇಗವಾಗಿ ತೆರೆಮರೆಗೂ ಹೋದ. ಕ್ರಿಕೆಟ್ಟಿನಂತಹಾ ಆಟದಲ್ಲಿ ಸೂತಕಕ್ಕೂ ಬ್ಯಾಟ್ಸ್’ಮನ್ನು ಬೌಲರ್ರು ಎಂಬ ತಾರತಮ್ಯ. ಕಾನಿಟ್ಕರನಿಗೆ ತೋರಿಸಿದ ಕನಿಕರ ನಾವು ಜೋಗಿಂದರ್ ಶರ್ಮಾನಿಗೆ ತೋರಲೇ ಇಲ್ಲ. ಅವನಿಗೆ ಎರಡು ವರ್ಷ ಕೊಟ್ಟ ಸಮಯದ ಅರ್ಧವೂ ಜೋಗಿಂದರನಿಗೆ ನಾವು ಕೊಡಲಿಲ್ಲ. ಅವನು ಅಳಲೂ ಇಲ್ಲ. ತಲೆಯೆತ್ತಿ ಪೋಲೀಸ್ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡ. ಆಟ, ದೇಶ, ಮನರಂಜನೆಯ ಹೆಸರಿನಲ್ಲಿ ಸುಳ್ಳು ದೇವರುಗಳನ್ನೇ ನಂಬಿ ಪೂಜಿಸುವ ನಾವು ಅದರ ಬಗ್ಗೆ ತಲೆಕೆಡಿಸಿಕೊಳ್ಳಲೂ ಇಲ್ಲ.

ನೀವೇ ಹೇಳಿ, 2018ರ ವರ್ಲ್ಡ್ ಕಪ್ಪಿನಲ್ಲಿ ಆಡಲಿರುವ ಭಾರತೀಯ ಕ್ರಿಕೆಟ್ಟಿನ ಟೀಮಿನ ಸಂಭಾವ್ಯ ಸದಸ್ಯರ ಹೆಸರುಗಳನ್ನು ಹೇಳಿ. ನೋಡೋಣ! ಆಮೇಲೆ ಕೊಹ್ಲಿಯನ್ನ ಹೊಗೊಳೋಣ. ಕೊಹ್ಲಿ ಪೂರ್ತಿ ಕಷ್ಟ ಪಟ್ಟ ಮೇಲೆ ಬಂದು ವಿನ್ನಿಂಗ್ ಶಾಟ್ ಹೊಡೆದು ವಿಜಯ ಪತಾಕೆ ಹಾರಿಸಿದ್ದಕ್ಕೆ ಧೋನಿಗೆ ಬೈಯ್ಯೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Raghavendra Subramanya

ವೃತ್ತಿಯಲ್ಲಿ Human Resource Manager ಆಗಿರುವ ನಾನು, ಭಾರತ, ಯು.ಕೆ ಹಾಗೂ ಕತಾರೋಲ್ಲಂಘನ ಮಾಡಿ, ಈಗ ಸಧ್ಯಕ್ಕೆ ದುಬಾಯಿಯಲ್ಲಿ ನೆಲೆಸಿದೇನೆ. ನನ್ನ ವೃತ್ತಿಯ ಕಾರಣದಿಂದ, ಜನರೊಂದಿಗೆ ಬೆರೆಯುವ ಹಾಗೂ ಅವರನ್ನು ತಿಳಿಯುವ ಅಗತ್ಯತೆ ಮತ್ತು ಅದಕ್ಕೆ ಬೇಕಾದ ಕೌಶಲ್ಯ ಎರಡನ್ನೂ ಗಳಿಸಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ಇದರ ಜೊತೆಗೆ ನನ್ನ ವೃತ್ತಿ ನನ್ನನ್ನು ಬೇರೆ ಬೇರೆ ದೇಶಗಳಿಗೆ ಕರೆದೊಯ್ದದ್ದರಿಂದ, ಬೇರೆ ಬೇರೆ ಸಂಸ್ಕೃತಿಗಳೂ, ಆಚರಣೆಗಳೂ ಹಾಗೂ ಅದರ ಹಿಂದಿರಬಹುದಾದ ಕಾರಣಗಳೂ ನನ್ನ ತಲೆಯಲ್ಲಿ ಸೇರಿ ಸದಾ ನನ್ನ ಕಾಡುತ್ತಿರುತ್ತವೆ. ಮನುಷ್ಯ ಹಾಗೂ ಅವನ ಸಮಾಜಮುಖಿ ಬದುಕಿನ ಕಾರಣಗಳನ್ನು ಅರಿಯುವ ಪ್ರಯತ್ನದಲ್ಲಿ ನನ್ನ ನಾನು ತೊಡಗಿಸಿಕೊಳ್ಳುತ್ತೇನೆ. ಪ್ರವೃತ್ತಿಯಲ್ಲಿ ನೆರಳು ಬೆಳಕಿನ ಆಟ(photography) ಗಳನ್ನೂ ಆಡುತ್ತೇನೆ. ರಾಜಕೀಯ ಹಾಗೂ ಪ್ರಚಲಿತ ವಿಧ್ಯಮಾನಗಳು ನನ್ನ ಕುತೂಹಲ ಕೆರಳಿಸುವ ವಿಷಯಗಳಾದರೂ ಸಹ, ವಿದ್ಯಾರ್ಥಿ ಜೀವನದಿಂದಲೂ ಸಹ ಮನಃಶಾಸ್ತ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಮಾನವಶಾಸ್ತ್ರ ಹಾಗೂ ತತ್ವಶಾಸ್ತ್ರದೆಡೆಗೆ ಆಳವಾದ ಒಲವು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!