ಅಂಕಣ

ವೇದಿಕೆಯ ಮೇಲಾಡಿದ ಮಾತು ವೇದಿಕೆಗಷ್ಟೇ ಸೀಮಿತವೇ..?

ಇವರ ಹಾಸ್ಯಕ್ಕೆ ಮಾರುಹೋಗದವರಿಲ್ಲ, ವೇದಿಕೆಯ ಮೇಲೆ ಇವರ ಆಗಮನ ಅಲ್ಲಿ ನೆರೆದಿರುವ ಜನಸ್ತೋಮಕ್ಕೆ ತುಂಬಾ ಖುಶಿಯನ್ನು ಕೊಡುತ್ತದೆ. ಇವರು ಬಾಯಿ ತೆರೆದರೆ ಚಪ್ಪಾಳೆಯ ಹರ್ಷೋದ್ಗಾರ. ಎಲ್ಲರಿಗೂ ತಮ್ಮ ಆತ್ಮೀಯನೊಬ್ಬ ಮಾತನಾಡುತ್ತಿದ್ದಾನೇನೋ ಎನ್ನುವ ಭಾವ. ಇಷ್ಟಕ್ಕೆಲ್ಲಾ ಕಾರಣ ವೇದಿಕೆ ಮೇಲೆ ಇವರಾಡುವ ಮಾತುಗಳು. ನಿಮ್ಮೆಲ್ಲರ ಅಭಿಮಾನದಿಂದ ನಾನು ಈ ಎತ್ತರಕ್ಕೆ ಬೆಳೆದಿದ್ದೇನೆ. ಇಲ್ಲದಿದ್ದರೆ ಅದೇ ಹಳ್ಳಿಯಲ್ಲಿ ನಿಮ್ಮಂತೆ ನಾನೂ ಸಾಮಾನ್ಯನಾಗಿರುತ್ತಿದ್ದೆ. ನಿಮ್ಮ ಒಂದೊಂದು ಚಪ್ಪಾಳೆಯ ಶಬ್ದವೇ ನಮ್ಮ ಹೊಟ್ಟೆ ತುಂಬಿಸುವುದು. ನನ್ನ ಈ ಮಟ್ಟಿನ ಬೆಳೆವಣಿಗೆಯ ಕಾರಣಕರ್ತರು ನೀವು, ನಾನು ಹತ್ತಾರು ದೇಶಗಳನ್ನು ಸುತ್ತಾಡಿಬಂದಿದ್ದೇನೆ. ಮತ್ತು ಅಲ್ಲಿರುವ ಕನ್ನಡಿಗರೆಲ್ಲ ರಂಜಿಸಿದ್ದೇನೆ ಎಂದರೆ ಅದು ನನ್ನಿಂದ ಆಗಿದ್ದಲ್ಲ. ಇದಕ್ಕೆಲ್ಲ ನೀವೇಕಾರಣ ಎಂದು ಎದೆತಟ್ಟಿ ಹೇಳುತ್ತೇನೆ. ಹೀಗೆ ಹಲವಾರು ಮಾತುಗಳನ್ನು ಹಾಸ್ಯ ಚಕ್ರವರ್ತಿಗಳಿಂದ ಹೇಳಿರುವುದನ್ನು ಕೇಳಿದ್ದೇವೆ. ಮತ್ತು ನೋಡಿದ್ದೇವೆ. ಇವರ ಆತ್ಮೀಯತೆಯ ಮಾತುಗಳು ನಮ್ಮ ಮನಸ್ಸಿನ ಮೂಲೆಯಲ್ಲಿ ‘ಇವ ನಮ್ಮವ.. ಇವ ನಮ್ಮವ’ ಎನ್ನುತ್ತಿರುತ್ತದೆ ಕಾರಣ ಮಾತುಗಳಲ್ಲಿನ ಸಹಜ ಅಭಿನಯ.

ಕಾರ್ಯಕ್ರಮ ಮುಗಿದು ವೇದಿಕೆಯಿಂದ ಕೆಳಗಿಳಿದು ಬಂದ ತಕ್ಷಣ ನಾವು ಸಹಜವಾಗಿಯೇ ಅವರನ್ನು ಮಾತನಾಡಿಸಲು ಹೋಗುತ್ತೇವೆ ಆದರೆ ಅಲ್ಲಿ ವಿಚಿತ್ರವೇ ಕಾದಿರುತ್ತದೆ ‘ಇವ ನಮ್ಮವ..’ ಎಂದು ಹೇಳುವ ಮನಸ್ಸಿಗೆ ನೋವಾಗುತ್ತದೆ .ವೇದಿಕೆಯಿಂದಿಳಿದ ಮಹಾಶಯರಿಗೆ ತಮ್ಮ ಹತ್ತಿರ ಬಂದ ಪ್ರೇಕ್ಷಕರು ಪ್ರೇಕ್ಷಕರೇ ಹೊರತು ಸಂಬಂಧಿಗಳಾಗಿರುವುದಿಲ್ಲ. ಮೊಗದಲ್ಲಿ ಕೃತಕ ನಗೆ ಇಟ್ಟು ಎಷ್ಟು ಸಾಧ್ಯವೋ ಅಷ್ಟು ಬೇಗ ಅಲ್ಲಿಂದ ಕಾಲು ಕೀಳಲು ಪ್ರಯತ್ನಿಸುತ್ತಾರೆ. ಅವರಲ್ಲಿ ‘ನಾನು’ ಸಾಮಾನ್ಯ ಜನರಿಗಿಂತ ಭಿನ್ನ,ಅದ್ದಕ್ಕೆಂದೇ ನಾನು ವೇದಿಕೆಯ ಮೇಲಿದ್ದೆ.. ಇಲ್ಲಿರುವ ಜನರು ಸಾಮಾನ್ಯರು ನನಗೆ ಸಮಾನರಲ್ಲ ಮತ್ತು ಅನ್ನದಾತರಲ್ಲ (ಪ್ರಾಯೋಜಕರಲ್ಲ) ಎನ್ನುವ ಅಹಂ, ಹಾಗಾಗಿ ಡಿಗ್ನಿಟಿಯನ್ನು ಕಾಪಾಡಲು ಶುರುಮಾಡುತ್ತಾರೆ. ಇವರೇನಾ ಇಷ್ಟೊಂದು ಹಾಸ್ಯವಾಗಿ.. ಆತ್ಮೀಯವಾಗಿ ನಮ್ಮೊಳಗೊಬ್ಬರಂತೆ ಮಾತನಾಡಿದವರು ಎಂದನಿಸಲು ಶುರುವಾಗಿ ಬಿಡುತ್ತದೆ.

ಇದು ವಿದೂಷಕರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಹೆಸರಾಂತ ಕವಿಗಳು, ಚಲನಚಿತ್ರ ಗೀತೆಯ ರಚನೆಕಾರರು, ಕಥೆಗಾರರು, ಪ್ರಕಾಶಕರು, ವಾಗ್ಮಿಗಳು ಸೋ ಕಾಲ್ಡ್ ಸೆಲೆಬ್ರೆಟಿಗಳೆನ್ನುವವರೂ ಇವರ ಸಾಲಿನಲ್ಲಿ ಸೇರಿದ್ದಾರೆ. ಆದರೂ ಡೌನ್ ಟು ಅರ್ತ್ ಎಂದು ಹೇಳಲ್ಪಡುವವರೂ ಇವರ ಪ್ರವೃತ್ತಿಯಲ್ಲಿದ್ದಾರೆ.

ನನ್ನ ಅನುಭವದ ಮಾತಗಳಲ್ಲಿಯೇ ಹೇಳಬೇಕಾದರೆ..ನಾನು ಒಂದು ಪ್ರತಿಷ್ಠಿತ ಕನ್ನಡ ಸಂಘದ ಪದಾಧಿಕಾರಿಯಾಗಿದ್ದೆ. ಆ ಸಂಘದಿಂದ ಪ್ರತೀವರ್ಷ ತಮ್ಮವರೇ ಆಗಿದ್ದ ಅಧಿಕಾರಿಯ ಹೆಸರಿನಲ್ಲಿ ಕನ್ನಡ ನಾಡು ನುಡಿ ಕಲೆ ಸಂಸ್ಕೃತಿಗೆ ತಮ್ಮನ್ನು ಅರ್ಪಿಸಿಕೊಂಡ ಹೆಸರಾಂತ ಸಾಧಕರಿಗೆ ಪುರಸ್ಕಾರವನ್ನು ನೀಡಲಾಗುತ್ತದೆ. ಅದೇ ಪ್ರಕಾರ ಆ ವರ್ಷ ಒಬ್ಬ ಸಾಧಕರಿಗೆ ಗೊತ್ತುಮಾಡಿದೆವು ಮತ್ತು ಅವರ ಕರೆತರುವಿಕೆ,ಊಟ ಉಪಚಾರವೆಲ್ಲದರ ಹೊಣೆ ನನಗೆ ಕೊಡಲಾಯಿತು. ಅದರಂತೆಯೇ ನಾನು ಸಾಧಕರ ಊರಿಗೆ ಹೋಗಿ ನನ್ನ ವಾಹನದಲ್ಲಿಯೇ ಅವರನ್ನು ಕುಟುಂಬಸಮೇತರನ್ನಾಗಿ ಕರೆದು ಕೊಂಡು ಬಂದೆ. ಬರುವಾಗ ಅವರ ಹತ್ತಿರವೇ ಇದ್ದ ಚಿಕ್ಕಚೀಲವನ್ನು ನಾನೇ ಹಿಡಿದು ಹೊಳ್ಳುತ್ತೇನೆಂದು ಕೇಳಿದೆ ಆದರೆ ‘ಬೇಡ.. ನಾನೇ ತರುತ್ತೇನೆಂದು ನನ್ನ ಹತ್ತಿರ ಕೊಡಲೇಇಲ್ಲ. ಏತನ್ಮಧ್ಯೆ ಸಾಧಕರು ಅತೀ ವಿನಯ ನಮ್ರತೆಯಿಂದ ನನ್ನ ಜೊತೆ ಹರಟತೊಡಗಿದರು..ಇಬ್ಬರ ಮಧ್ಯೆಯೂ ಹಾಸ್ಯದ ಚಟಾಕಿಗಳು ಆಗಾಗ ಬಂದು ಹೋಗುತ್ತಿದ್ದವು. ನಮ್ಮಿಬ್ಬರ ಮಧ್ಯೆ ಮಾತುಗಳು ಎಷ್ಟು ಆತ್ಮೀಯವಾಗಿದ್ದವೆಂದರೆ ಸುಮಾರು ವರುಷಗಳಿಂದ ನಾವಿಬ್ಬರು ಒಬ್ಬರಿಗೊಬ್ಬರು ಗೊತ್ತಿರುವವರೇನೋ ಎನ್ನುವಂತಿದ್ದವು.

ಆ ದಿನ ಸಾಯಂಕಾಲ 7ರ ಸುಮಾರಿಗೆ ಚಹಾ ತಿಂಡಿಯಾದನಂತರ ವೇದಿಕೆಯ ಹತ್ತಿರ ಕರೆದುಕೊಂಡು ಬಂದು ಅಲ್ಲಿಯೇ ಇದ್ದ ಖುರ್ಚಿಯಲ್ಲಿ ಅವರನ್ನು ಕುಳಿತುಕೊಳ್ಳಲು ಹೇಳಿ ನಾನು ಸಂಘದ ಕೆಲಸದಲ್ಲಿ ನಿರತನಾದೆ. ಸ್ವಲ್ಪವೇ ಹೊತ್ತಿನಲ್ಲಿ ಅವರ ಸ್ವಾಗತವು ಆಯಿತು. ನಿರೂಪಕರಿಂದ ವೇದಿಕೆಯ ಮೇಲೆ ಬರಲು ಆಹ್ವಾನವು ಸಿಕ್ಕು ಅತಿಥಿಗಳು ವೇದಿಕೆಯ ಮೇಲೇರಿದರು. ಮತ್ತು ಸ್ವಲ್ಪ ಹೊತ್ತಿನಲ್ಲೇ ಪುರಸ್ಕಾರವು ಲಭಿಸಿತು. ಇದೆಲ್ಲ ಮುಗಿದಿದ್ದು ಒಂದೆರಡು ತಾಸಿನಲ್ಲಿ. ಕಾರ್ಯಕ್ರಮ ಮುಗಿದ ತಕ್ಷಣ ಅತಿಥಿಗಳನ್ನು ಊಟಕ್ಕೆ ಕರೆದೊಯ್ಯುವುದು ನನ್ನ ಜವಬ್ದಾರಿಯಾಗಿತ್ತು ಹಾಗಾಗಿ ಅವರಲ್ಲಿ ಹೋಗಿ ಆತ್ಮೀಯತೆ,ಸಲಿಗೆಯಿಂದ ಮಾತಾಡಿಸಿದೆ ಆದರೆ ಅತಿಥಿಯ ಬಾಡಿ ಲಾಂಗ್ವೇಜ್ ಬದಲಾಗಿತ್ತು. ‘ಹಾ..! ಬಂದೆ’ ಎಂದು ತಮ್ಮ ಹತ್ತಿರವೇ ಇದ್ದ ಚೀಲವನ್ನು ಕೊಟ್ಟು ನಮ್ಮ ವಾಹನದಲ್ಲಿ ಇಡಲು ಹೇಳಿ ಅಲ್ಲಿಯೇ ಇದ್ದ ಇನ್ನೊಬ್ಬ ಅಥಿತಿಯೊಡನೆ ಕಾಲಹರಣ ಮಾಡಹತ್ತಿದರು.ನಾನೊಬ್ಬ ಅಪರಿಚಿತ ವ್ಯಕ್ತಿಯಂತೆ ಟ್ರೀಟ್ ಮಾಡಿದರು..! ಏಕೆ ಈ ಬದಲಾವಣೆಯಂದು ಯೋಚಿಸಿದಾಗ ಅವರ ತಲೆಯ ಮೇಲೆ ಪುರಸ್ಕಾರದ ಕಿರೀಟ ನನ್ನ ನೋಡಿ ನಗುತ್ತಿತ್ತು. ನೀ ಸಾಮಾನ್ಯನೆಂದು ಅಣಕಿಸುತ್ತಿತ್ತು.ಈ ಸಾಮಾನ್ಯನ ಜೊತೆಯೇ ಬರುವಾಗ ಆಪ್ತವಾಗಿ ಮಾತನಾಡಿದ್ದೆನು ಎಂದು ಅವರು ಮರೆತಿರಬಹುದು. ತಮ್ಮನ್ನು ತಾವು ರಾಜರೆಂದೋ ನನ್ನನ್ನು ಆಳೆಂದೋ ತಿಳಿದಿರಬೇಕು ಈಗ .ನಾನು ಕರೆತರಬೇಕಾದಾಗ ಅವರಲ್ಲಿ ಕಂಡಿದ್ದ ಮಾತುಗಳು ಮತ್ತು ಭಾವನೆಗಳು ಎಲ್ಲವೂ ಬದಲಾಗಿದ್ದವು.ಆದರೆ ನನ್ನ ಸಂಘದ ಆತಿಥಿಯವರು. ಅವರನ್ನು ಅತಿಥಿಯೆಂದೆ ಭಾವಿಸಿ ಬೀಳ್ಕೊಟ್ಟೆ.

ಇದು ನನ್ನ ಮಾತಾದರೆ ನನ್ನ ಸ್ನೇಹಿತನ ಮಾತು ಇದೇ ಧಾಟಿಯಲ್ಲಿತ್ತು. ಹೆಸರಾಂತ ಬರಹಗಾರ ಅತಿಥಿಗಳ ಆತಿಥ್ಯದ ಹೊಣೆ ಆತನ ಮೇಲೆ. ಅವರ ಆತಿಥ್ಯದಲ್ಲಿ ತೀರ್ಥಕ್ಕೂ ಕಡಿಮೆಯಾಗದ ಹಾಗೆ ನನ್ನ ಗೆಳೆಯ ಕಾರ್ಯಕ್ರಮದ ಹಿಂದಿನರಾತ್ರಿ ವ್ಯವಸ್ಥೆ ಮಾಡಿದ್ದ.ಇದ ಕಂಡು ಅಥಿತಿಗಳು ಆತನಿಗೂ ತಮ್ಮ ಜೊತೆ ತೀರ್ಥ ಸೇವನೆಗೆ ಆಹ್ವಾನ ನೀಡಿದ್ದರು. ಅಂದು ನನ್ನ ಗೆಳೆಯ ಸ್ವರ್ಗಕ್ಕೆ ಮೂರೇ ಗೇಣೆಂದು ತಿಳಿದ. ಗ್ಲಾಸ್’ಮೇಟ್ ಆದಮೇಲೆ ಸ್ವಲ್ಪ ಹೆಚ್ಚೇ ಆತ್ಮೀಯತೆ, ಸಲಿಗೆ ಬೆಳೆಯಿತು. ಎಲ್ಲಾ ಬರಹಗಾರರ ಮಧ್ಯೆವಿರುವ ಎಲ್ಲಾ ಹುಳುಕುಗಳೂ ಅಂದು ರಾತ್ರಿ ಹೊರಬಂದವು. ಇವರ ಮುಂದೆ ಎಲ್ಲರೂ ಸಣ್ಣವರಾಗಿ ಕಂಡರು. ಇನ್ನು ಮಲಗಬೇಕೆಂದು ಸೂಚನೆಯನ್ನು ತಿಳಿಸಿದರು. ಅವರನ್ನು ಮಲಗಿಸಿ ನನ್ನ ಸ್ನೇಹಿತ ‘ಇವ ನಮ್ಮವ’ ಎನ್ನುವ ಗುಂಗಿನಲ್ಲಿಯೇ ತನ್ನ ಮನೆಗೆ ನೆಡೆದ. ಎಂದಿನಂತೆ ಮರುದಿನ ಕಾರ್ಯಕ್ರಮ ಮುಗಿದ ನಂತರ ಅತಿಥಿಗಳು ತಮ್ಮ ಸ್ವಂತ ಊರಿಗೆ ಹೋದರು. ಸ್ವಲ್ಪ ದಿನಗಳಾದ ನಂತರ ಮತ್ತೊಂದು ಕಾರ್ಯಕ್ರಮದಲ್ಲಿ ಇವರುಗಳೇ ಅಧ್ಯಕ್ಷ ಸ್ಥಾನ ವಹಿಸಿದ್ದರು. ಆದರೆ ನನ್ನ ಸ್ನೇಹಿತ ಅಲ್ಲಿ ಪ್ರೇಕ್ಷಕನಾಗಿದ್ದ. ಆದರೂ ಇವ ನಮ್ಮವ ಎನ್ನುವ ಭಾವನೆಯಿಂದ ಮಾತನಾಡಿಸಿದ. ಅದರೆ ಅಧ್ಯಕ್ಷ ಮಹೋದಯರು ಚಿಕ್ಕದೊಂದು ಕಿರಿನಗೆ ಬೀರಿ ಸುಮ್ಮನಾದರು. ಅವರಿಗೆ ಇವನ ಜೊತೆ ಆಡಿದ ಮಾತುಗಳಾಗಲಿ, ತೀರ್ಥ ಹಂಚಿಕೊಂಡಿದ್ದಾಗಲಿ ನೆನೆಪಿಗೆ ಬರಲೇಇಲ್ಲ, ಎಲ್ಲರಂತೆ ನೀನೂ ಒಬ್ಬ ನನ್ನ ಅಭಿಮಾನಿ ಮತ್ತು ನೀನಿನ್ನೂ ಹೋಗಬಹುದೆಂದು ಇನ್ನೊಂದು ನಗೆಯಲ್ಲಿ ತೋರಿಸಿದರು.

ಏಕೆ ಹೀಗೆ? ಅಭಿಮಾನಿಗಳನ್ನು ನೀವೇ ದೇವರು..ನಿಮ್ಮಿಂದಲೇ ಎಲ್ಲಾ ಎಂದು ಹೇಳುವ ಸೊ ಕಾಲ್ಡ್ ಸೆಲೆಬ್ರೆಟಿಗಳು ಅಭಿಮಾನಿಗಳು ಹತ್ತಿರ ಹೋದೊಡನೆ ತಮ್ಮಲ್ಲಿ ಬದಲಾವಣೆ ತರುವುದೇಕೆ ಅಥವಾ ಇವರುಗಳು ಇರುವುದೇ ಹೀಗೆಯೇ..? ತಮ್ಮ ಮನಬಂದಂತೆ ಬಣ್ಣ ಬದಲಿಸುವರೇ..?ವೇದಿಕೆಯ ಮೇಲಿರುವ ಮಾತುಗಳು ವೇದಿಕೆಯ ಕೆಳಗೆ ಬಂದಮೇಲೆ ನೆನಪಾಗುವುದಿಲ್ಲವೇ? ಗೊತ್ತಿಲ್ಲ..ಇದಕ್ಕೆಲ್ಲಾ ಸೆಲೆಬ್ರೆಟಿಗಳೇ ಉತ್ತರ ಹೇಳಬೇಕು..!

-ಶ್ರೀ. ನಾಗರಾಜ್.ಮುಕಾರಿ (ಚಿರಾಭಿ)

ಕೈಗಾ, ಕಾರವಾರ.

nagu1315@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!