ಅಂಕಣ

ಭವ್ಯ ಭಾರತದಲ್ಲಿ ದಿವ್ಯತೆಯ ಹುಡುಕಾಟ

“ನವ ಜೀವಗಳು” ಕೃತಿ ಮೂಲ ಇಂಗ್ಲೀಷ್ ಲೇಖಕ ವಿಲಿಯಂ ಡಾಲ್ರಿಂಪಲ್ ಅವರ ನೈನ್ ಲೈವ್ಸ್’ನ ಅನುವಾದ. ಕನ್ನಡದ ಪ್ರಸಿದ್ಧ ಕತೆಗಾರ ವಸುಧೇಂದ್ರ ಅವರು ತಮ್ಮ ಛಂದ ಪ್ರಕಾಶನದ ಮೂಲಕ ಒಂದು ವಿಭಿನ್ನ ಪುಸ್ತಕವನ್ನು ಕನ್ನಡ ಸಾಹಿತ್ಯ ಓದುಗರಿಗೆ ಕೊಟ್ಟಿದ್ದಾರೆ ಎಂಬುದರಲ್ಲಿ ಮಾತಿಲ್ಲ. ಪುಸ್ತಕಗಳನ್ನು ಓದುವಾಗ ಸಿದ್ಧಾಂತಗಳನ್ನಾಗಲೀ ತತ್ವಗಳನ್ನಾಗಲೀ ಗಮನಿಸದೇ ಇರಲಿಕ್ಕಾಗದು ಎಂಬುದು ನಿಜವಾದರೂ ಒಂದು ಪುಸ್ತಕದ ರಸ ಭಾವ ಮಾತ್ರ ಸಾಹಿತ್ಯ ಓದುಗನಿಗೆ ದಕ್ಕುವ ಮೂಲ ಸಂಗತಿ. ಇತಿಹಾಸಕಾರನೊಬ್ಬ ಅಥವಾ ಸಂಸ್ಕೃತಿಯ ದೃಷ್ಟಿಕೋನದ ಓದುಗರಿಗೆ ಇದರಲ್ಲಿ ಏನೇನು ಲೋಪದೋಷಗಳು ಕಾಣಬಹುದೋ ಅವೆಲ್ಲ ಸಾಮಾನ್ಯ ಓದುಗರೊಬ್ಬರಿಗೆ ಕಾಣಲಾರದು. ಇಂಗ್ಲೀಷ್ ಮೂಲ ಕೃತಿಯ ಓದಿಕೊಂಡರೆ ಅನುವಾದದ ಕುರಿತು ದೃಷ್ಟಾಂತವಾಗಿ ಹೇಳಬಹುದು. ಆದರೆ ಇವೆರಡನ್ನೂ ಹೊರತುಪಡಿಸಿ ನಮ್ಮ ಪರಿಚಿತ ನೆಲದ ಅಪರಿಚಿತ ಕತೆಗಳನ್ನು ಓದಿಕೊಳ್ಳುವ ಓದುಗಳಾಗಿ ನನ್ನ ಅನುಭವವನ್ನಷ್ಟೇ ಇಲ್ಲಿ ನಮೂದಿಸಬಹುದು.

ನವ ಜೀವಗಳು ಒಂಬತ್ತು ವಿಭಿನ್ನ ಜೀವಗಳ ಜೀವನ ಕಥನ.. ಈ ಕಥನದಲ್ಲಿ ಅದೆಷ್ಟು ಭಿನ್ನತೆಯಿದೆಯೋ ಅಷ್ಟೇ ಸೂಕ್ಮವಾದ ನಮ್ಮ ಭಾರತೀಯ ರಕ್ತಗಳಲ್ಲಿ ಹರಿಯುತ್ತಿರುವ ಧಾರ್ಮಿಕ ಜನ ಜೀವನದ ಒಂದು ಏಕ ಸೂತ್ರದಾರವೂ ಇದೆ. ಅದು ಮೋಕ್ಷದ್ದು. ಅಧ್ಯಾತ್ಮದ ಮೂಲವೇ ಮನುಷ್ಯ ಜೀವದ ಮೊದಲ ಮತ್ತು ಕೊನೆಯ ಆಯ್ಕೆ ಎಂಬಂತೆ ಆಚರಣೆಗಳನ್ನಿಲ್ಲಿ ನಾವು ಕಾಣುತ್ತೇವೆ. ಪ್ರತೀ ಕಥೆಗಳಲ್ಲಿ ಬರುವ ಸ್ಥಳಗಳು ಬೇರೆ. ವ್ಯಕ್ತಿಗಳು ಬೇರೆ, ಕಥಾ ಮೂಲವಸ್ತುಗಳು ಬೇರೆ. ಧರ್ಮ ವ್ಯವಸ್ಥೆಯ ಎಲ್ಲಾ ಮಾನವ ಮೂಲಗಳಲ್ಲೂ ಒಂದೇ ಕಾಣುವುದು. ಸತ್ತ ನಂತರದ ಆತ್ಮಮುಕ್ತಿಯ ಬಯಕೆ. ಅದು ಸ್ಮಶಾನದಲ್ಲಿ ವಾಸಿಸುವ ಮನೀಷಾ ಮಾ ಮತ್ತವಳ ಜೊತೆಗಾರನಿರಬಹುದು. ಅಥವಾ ಮೂರ್ತಿ ತಯಾರಕ ಶ್ರೀಕಂಠ ಸ್ಥಪತಿಯಂತ ಬ್ರಾಹ್ಮಣನಿರಬಹುದು. ಪ್ರಸನ್ನಮತಿ ಮಾತಾಜಿಯಿರಬಹುದು, ಲಾಲ್ ಪೇರಿ ಇರಬಹುದು. ಎಲ್ಲರಲ್ಲೂ ಇದೆ. ಗಂಡು ಹೆಣ್ಣು ಎಲ್ಲ ಪಾತ್ರಗಳ ದೃಷ್ಟಿ ಇರುವುದು ಮುಕ್ತವಾಗುವ ಬ್ರಹ್ಮಾನಂದದ ಅನ್ವೇಷಣೆ.. ಪ್ರತಿಯೊಬ್ಬ ಮನುಷ್ಯನೊಳಗೂ ಆನಂದದ ಹುಡುಕಾಟ. ಅದಕ್ಕೆ ಮಾರ್ಗ ಮಾತ್ರ ಬೇರೆ ಬೇರೆ. ಕಥಾ ಭಾಗದಲ್ಲಿ ಎಲ್ಲೂ ಸಿದ್ಧಾಂತಗಳ ಹೇರಿಕೆಯಾಗದಿರುವು ಮತ್ತು ಲೇಖಕನ ಅನಗತ್ಯ ಪ್ರವೇಶವನ್ನು ಮಾಡದಿರುವುದು ತುಂಬಾ ಚಂದದ ಓದಿಸಿಕೊಳ್ಳುವುಕೆಯನ್ನು ಉಳಿಸುತ್ತದೆ. ಎಲ್ಲಿಯೂ ಓಘಕ್ಕೆ ಭಂಗ ಬರುವುದಿಲ್ಲ.

ಭಾರತದ ಪ್ರತೀ ಮನೆಯಲ್ಲೂ ವಿಭಿನ್ನವೆನ್ನಿಸುವ ಸಂಸ್ಕೃತಿಯ ಕತೆಗಳಿವೆ. ಹಾಗೇ ಧರ್ಮದ ಸಾವಿರ ಸಾವಿರ ಆಚರಣೆಗಳಿವೆ. ಸಂಸ್ಕೃತಿಯ ಹರಿವಿನಲ್ಲಿ ಅದು ನಿರಂತರ ಚಲನಶೀಲತೆಯನ್ನು ಉಳಿಸಿಕೊಂಡಿದೆ. ಮತ್ತು ಈ ಬದಲಾಗುವಿಕೆಯನ್ನು ಈ ನೆಲ ಒಪ್ಪಿಕೊಂಡಿದೆ. ಅಪ್ಪಿಕೊಂಡಿದೆ. ಎಷ್ಟೆಲ್ಲ ಬದಲಾವಣೆಗಳ ನಡುವೆಯೂ ಎಷ್ಟೆಲ್ಲ ಭಿನ್ನತೆಗಳ ನಡುವೆಯೂ ಈ ದೇಶ ತನ್ನ ಆತ್ಮದಂತೆ ಕಾಯ್ದುಕೊಂಡಿರುವುದು ಶ್ರದ್ಧೆ ಮತ್ತು ಅಧ್ಯಾತ್ಮದ ಗಂಧವನ್ನು. ಅದೆಷ್ಟೇ ರೂಪಗಳನ್ನು ಪಡೆದುಕೊಂಡರೂ ಅದೆಷ್ಟೇ ಬಣ್ಣಗಳ ಹಚ್ಚಿಕೊಂಡರೂ ವಿರಕ್ತ ಸಮಾಜದ ಎಲ್ಲಾ ಉಲ್ಲಂಘನೆಯ ನಡುವೆಯೂ ಆಧ್ಯಾತ್ಮವೆನ್ನುವುದು ಈ ನೆಲದ ಗಾಳಿಯಲ್ಲಿ ಬೆರೆತಿದೆ ಎಂಬುದು ಈ ಕಥೆಗಳಲ್ಲಿ ಕಾಣುತ್ತದೆ. ಅದೇ ಹೊತ್ತಿಗೆ ಪ್ರತೀ ಕಥಾನಕದ ಕೊನೆಯಲ್ಲಿ ಇನ್ನೊಂದು ಪ್ರಶ್ನೆಯೂ ಉಳಿಯುತ್ತದೆ! ಇವೆಲ್ಲ ಈ ಶತಮಾನಕ್ಕೆ ಅಂತ್ಯ ಕಾಣಲಿವೆಯೇ ಎಂಬುದು. ಕೆಲವು ಆಶಾವಾದಗಳ ಹೊರತಾಗಿ ಹೌದು ಎರಡು ಸಾವಿರ ಹಾಡುಗಳ ಸರದಾರನ ಹಾಡುಗಳು ಕೊನೆಯಾಗಬಹುದು. ಮೂರ್ತಿ ತಯಾರಿಕೆಯ ಶ್ರದ್ಧೆ ನಿಂತು ಹೋಗಬಹುದು. ಕಾಲವೇ ಇದಕ್ಕೆಲ್ಲ ಒಂದು ಮಾಪನವಷ್ಟೆ. ಹಾಗಂತ ಆಶಾವಾದ ಕೊನೆಗೊಳ್ಳುವುದಿಲ್ಲ. ಯಾಕೆಂದರೆ ನಂಬಿಕೆ ಶ್ರದ್ಧೆ ಅತೀತವಾದ ಯಾವುದೋ ಶಕ್ತಿಯ ಮೇಲಿನದು.

ಪುಸ್ತಕದ ಲೇಖಕ ಒಬ್ಬ ಇತಿಹಾಸಕಾರನಾಗಿದ್ದರಿಂದ ದೇಶದ ಬೇರೆ ಬೇರೆ ಸ್ಥಳಗಳ ಹಿನ್ನಲೆ ಮಾಹಿತಿ ಹೇರಳವಾಗಿದೆ. ಕಥೆ ಹುಟ್ಟಿಕೊಳ್ಳುವುದೇ ಅಂಥ ಇತಿಹಾಸದ ಆಧಾರದ ಮೇಲೆ. ಹಾಗಿದ್ದಾಗ ಇವುಗಳನ್ನು ಬರೀ ಕಥೆಯಾಗಷ್ಟೆ ನೋಡಲಾಗದು. ಇವುಗಳೊಂದಿಗೆ ಐತಿಹಾಸಿಕ ಸತ್ಯಗಳೆಂಬಂತೆ ನೋಡಿದರೆ ಪುಸ್ತಕದಲ್ಲಿ ಕೆಲವು ಪ್ರಶ್ನೆಗಳು ಖಂಡಿತ ಹುಟ್ಟಿಕೊಳ್ಳಬಹುದು. ಆದರೆ ನನಗಂತೂ ಇದೊಂದು ಜನಜೀವನದ ಅಧ್ಯಯನದ ಪುಸ್ತಕಕ್ಕಿಂತ ಒಂಬತ್ತು ವಿಭಿನ್ನ ಜೀವಗಳ ಪರಿಚಯದ ಕಥೆಯಾಗಿ ತುಂಬಾ ಇಷ್ಟವಾಯಿತು.

ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ ನವೀನ್ ಭಟ್ ಗಂಗೋತ್ರಿಯವರು ಕನ್ನಡದ್ದೇ ಕಥೆಯೆಂಬಷ್ಟು ಸರಳವಾಗಿ ಓದುಗರಿಗೆ ತೆರೆದಿಟ್ಟಿದ್ದಾರೆ. ಒಂದೇ ಹೊತ್ತಿಗೆ ಓದಿ ಮುಗಿಸಲಾಗದಿದ್ದರೂ ಗುಟುಕು ಗುಟುಕಾಗಿ ಓದಿ ಅರಗಿಸಿಕೊಳ್ಳಬಹುದಾದ ಉತ್ತಮ ಕೃತಿಯಿದು.

Priya bhat

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!