ಅಂಕಣ

ನೀನಾರಿಗಾದೆಯೋ ಎಲೆ ಮಾನವ..

ಸೂರ್ತಿ, ಡೆಕ್ಕನಿ ಅಥವಾ ಗುಡ್ಡಗಾಡು ಪ್ರದೇಶಗಳಲ್ಲಿ ಡೊಂಗಾರಿ, ಡೊಂಗರಪಟ್ಟಿ ಎಂದಲ್ಲಾ ಕರೆಸಿಕೊಳ್ಳುವ, ಭಾರತಾಂಬೆಯ ಈ ಕಪ್ಪುಬಿಳುಪಿನ ಮಕ್ಕಳಿಗೆ ಸುಮಾರು 200 ವರ್ಷಗಳ ಇತಿಹಾಸವಿದೆ. ಬೀದರ್’ನ ಭಾಲ್ಕಿ, ಬಸವಕಲ್ಯಾಣಗಳಲ್ಲಿ ಹೆಚ್ಚಾಗಿ ಕಾಣಸಿಗುವ, ಗಿರ್, ಬಾಂಬೆಯ ಡಂಗಿ ಮತ್ತು ಕೆಲವು ಸ್ಥಳೀಯ ತಳಿಗಳಿಂದ ಜನಿಸಿದ ಈ ತಳಿ ಗುರುತಿಸಿಕೊಳ್ಳುತ್ತಿರುವುದು ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ‘ದೇವನಿ’ ಎಂಬ ಹೆಸರಿನಿಂದ. ತೆಲಂಗಾಣದ ಹೈದರಾಬಾದ್ ಹಾಗೇ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಜಿಲ್ಲೆಗಳಲ್ಲಿ ಸಹ ಕಂಡುಬರುವ ಈ ತಳಿ ಉತ್ತಮ ಹಾಲಿನ ಇಳುವರಿಗಷ್ಟೇ ಅಲ್ಲದೆ ಸಾಗಾಣಿಕೆ ಮತ್ತು ಉಳುಮೆಗೆ ಕೂಡ ಪ್ರಸಿದ್ಧ.

ದೇಹದಲ್ಲಿ ಸಹ ಗಿರ್ ಅನ್ನು ಹೋಲುವ ಮಧ್ಯಮ ಗಾತ್ರದ ಈ ತಳಿ ಸಾಮಾನ್ಯವಾಗಿ Wannera(ಮೈ ಸಂಪೂರ್ಣ ಬೆಳ್ಳಗಿದ್ದು ಮುಖವು ಬದಿಗಳಲ್ಲಿ ಕಪ್ಪಾಗಿರುತ್ತದೆ), Balankya(ಬಿಳಿ ಬಣ್ಣದ್ದಾಗಿದ್ದು ಮೈಯ ಕೆಳಭಾಗ ಕಪ್ಪು ಚುಕ್ಕೆಗಳನ್ನು ಹೊಂದಿದೆ), ಹಾಗೂ Shevera(ಕಪ್ಪುಚುಕ್ಕೆಗಳನ್ನೊಳಗೊಂಡ ಬಿಳಿಯ ಬಣ್ಣದ ಮೈಯನ್ನು ಹೊಂದಿರುತ್ತದೆ) ಎಂಬ 3 ಬಣ್ಣಗಳಲ್ಲಿ ಕಾಣಸಿಗುತ್ತದೆ. ಮಾಂಸಖಂಡಗಳೊಂದಿಗೆ ಸಮನಾಗಿ ಹೊಂದಿಕೊಂಡ ಮಧ್ಯಮ ಗಾತ್ರದ ದೇಹಬೆಳವಣಿಗೆ ಇದರ ವಿಶೇಷ. ಅಗಲವಾದ ಬಾಗಿದ ಹಣೆ ಇದರ ಮುಖದಲ್ಲಿ ಎದ್ದು ತೋರುವಂತಿದೆ. ಹಸುಗಳಿಗೆ ಹೋಲಿಸಿದರೆ ಹೋರಿಗಳು ಚುರುಕಾಗಿದ್ದು ವಿಶಾಲವಾದ ಸ್ವಲ್ಪ ಉಬ್ಬಿದ ಮುಖವನ್ನು ಹೊಂದಿರುತ್ತವೆ. ಶಂಖದಂತೆ ಸ್ವಲ್ಪ ಮಡಚಿದ ಉದ್ದವಾದ ಜೋಲುಬೀಳುವ ಕಿವಿಗಳನ್ನು ಹೊಂದಿರುತ್ತವೆ. ಚೂಪಾದ ಮಧ್ಯಮ ಗಾತ್ರದ ಬುಡಭಾಗದಲ್ಲಿ ಹೊಂದಿಕೊಂಡಂತಿರುವ ಕೋಡುಗಳು, ಸೂಕ್ಷ್ಮಮತಿಯಾದ ಹೊಳಪುಕಣ್ಗಳು, ಅಚ್ಚಗಪ್ಪಿನ ಹುಬ್ಬು ಇದರ ಸೌಂದರ್ಯಕ್ಕೆ ಮೆರಗು ನೀಡುತ್ತವೆ. ದಷ್ಟಪುಷ್ಟವಾಗಿದ್ದರೂ ಇವುಗಳು ತುಂಬಾ ಸೌಮ್ಯ ಸ್ವಭಾವದವು.

ಬೆನ್ನ ಮೇಲಿನ ಡುಬ್ಬವು ಹೋರಿಗಳಲ್ಲಿ ದಪ್ಪನಾಗಿ ಬೆಳೆದಿದ್ದರೆ, ದನಗಳಲ್ಲಿ ಚಿಕ್ಕದಾಗಿರುತ್ತದೆ. ಸಣ್ಣದಾಗಿ ಶಕ್ತಿಯುತವಾಗಿರುವ ಕುತ್ತಿಗೆ ಹಾಗೂ ಮಾಂಸಖಂಡದ ಮಡಿಕೆಗಳನ್ನೊಳಗೊಂಡ ತೊಡೆಗಳು, ಕಡುಗಪ್ಪಿನ ಗಟ್ಟಮುಟ್ಟಾದ ಗೊರಸುಗಳು ಇವುಗಳನ್ನು ಉಳುಮೆಗೆ ಹಾಗೂ ಸಾಗಾಣಿಕೆಗೆ ಬಳಸಲು ಸಹಕಾರಿ. ಸುಮಾರು 10-12 ವರ್ಷ ಶ್ರಮವಹಿಸಿ ದುಡಿಯುವ ಶಕ್ತಿ ಇದಕ್ಕಿದೆ. ಕೀಟಗಳಿಗೆ ಯಮಸದೃಶವಾದ ಉದ್ದವಾದ ಬಾಲ, ಅಗಲವಾದ ಎದೆಯನ್ನು ಹೊಂದಿರುವ ಇವುಗಳ ಚರ್ಮ ದಪ್ಪನಾಗಿದ್ದು ದೇಹಕ್ಕೆ ಸಡಿಲವಾಗಿ ಹೊಂದಿಕೊಂಡಿರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಹಾಲಿನ ಇಳುವರಿಯನ್ನು ನೀಡುವ ಇವುಗಳ ಕೆಚ್ಚಲು ಮಧ್ಯಮ ಪ್ರಮಾಣದ್ದಾಗಿದ್ದು ಈ ತಳಿಯ ಹಾಲು ಸುಮಾರು 4.3%ನಷ್ಟು ಕೊಬ್ಬಿನಂಶವನ್ನು ಹೊಂದಿರುತ್ತದೆ. ಈ ತಳಿಯ ಒಂದು ವಿಶೇಷವೆಂದರೆ ಒಂದು ಹೋರಿಯು ತನ್ನ ಜೀವಮಾನವಿಡೀ ಕೇವಲ ಗಂಡು ಅಥವಾ ಕೇವಲ ಹೆಣ್ಣುಕರುವಿನ ಜನನಕ್ಕೆ ಕಾರಣವಾಗುವುದು. 46 ತಿಂಗಳುಗಳಲ್ಲಿ ಮೊದಲ ಕರುವಿಗೆ ಜನ್ಮ ನೀಡುವ ಇವುಗಳು 300 ದಿನಗಳ ಅವಧಿಯಲ್ಲಿ ಸುಮಾರು 1135kg ಯಷ್ಟು ಇಳುವರಿಯನ್ನು ನೀಡುತ್ತವೆ. ಶ್ರಮಜೀವನಕ್ಕೆ ಹೆಸರಾಗಿರುವ ಇವುಗಳು 10-12 ಕ್ವಿಂಟಾಲ್ ನಷ್ಟು ಭಾರವನ್ನು 10-15ಮೈಲುಗಳಷ್ಟು ನಿರಾಯಾಸವಾಗಿ ಎಳೆಯಬಲ್ಲವು. ಒಂದು ಜೋಡಿ ಎತ್ತುಗಳು ಸುಮಾರು 8 ಗಂಟೆಗಳ ಕಾಲ ನಿರಂತರವಾಗಿ ದುಡಿಯಬಲ್ಲವು.

ರೈತಮಿತ್ರನಾಗಿದ್ದ ಈ ತಳಿ ಯಾಂತ್ರೀಕರಣ ಹಾಗೂ ಆಧುನೀಕತೆಯ ಅಬ್ಬರದಲ್ಲಿ ಕೊಚ್ಚಿಹೋಗುತ್ತಿದೆ. ಈ ತಳಿಯ ಒಂದು ವಿಶಿಷ್ಟ ಗುಣವಾದ ಅಧಿಕ ಪ್ರಮಾಣದ ಗಂಡು ಸಂತಾನ ಜನನವೂ ಇದರ ಅಳಿವಿಗೆ ಕಾರಣವಾಗಿದೆ. ಹೋಲಿಸ್ತೇನ್ ಮತ್ತು ಜೆರ್ಸಿಗಳೊಂದಿಗೆ ಮಿಶ್ರ ತಳಿಯ ಉತ್ಪಾದನೆ ಶುದ್ಧ ತಳಿಯ ದಿನಗಳನ್ನು ಎಣಿಸುತ್ತಿದೆ. ಗುಡಗರಪಳ್ಳಿಯ Deoni Cattle Breeding Farm, ಕಂಪಸಾಗರದ Andhra Pradesh Govt. Farm, ಹಳ್ಳಿಖೇಡದ Livestock Research & Info., ಬೀದರ್ ನ KVAFSU ಮತ್ತು Karnaraka Govt. Farm, ಮಹಾರಾಷ್ಟ್ರದ MAFSU ಮತ್ತು Maharashtra Livestock Farm ಮುಂತಾದವುಗಳು ಇವುಗಳ ರಕ್ಷಣೆಗೆ ಪ್ರಯತ್ನಿಸುತ್ತಿದ್ದರೂ ಕಪ್ಪುಬಿಳುಪಿನ ಈ ತಳಿ ಕಪ್ಪುಬಿಳುಪಿನ ಲೋಕಕ್ಕೆ ಹೊರಟಿವೆ…

ವಿಶ್ವಮಾನ್ಯವಾಗಿರುವ ಭಾರತದ ಇನ್ನೊಂದು ತಳಿ ಗಿರ್. ಭಾರತೀಯ ಗೋತಳಿಗಳಲ್ಲೇ ಅತಿ ಹೆಚ್ಚು ಹಾಲು ಇಳುವರಿ ನೀಡುವ ತಳಿಯಿದು. ವಿಶ್ವದಲ್ಲಿ ಮುಂಚೂಣಿಯಲ್ಲಿರುವ ಹಾಲು ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾದ ಬ್ರೆಜಿಲ್‌’ನ ಹೆಚ್ಚಿನ ಪ್ರಮಾಣವನ್ನು ಈ ತಳಿ ಆವರಿಸಿದೆ.

ವಾಯುವ್ಯ ಭಾರತದ ಸೌರಾಷ್ಟ್ರದ ಜುನಾಗಡೆ ಜಿಲ್ಲಾಕೇಂದ್ರದಿಂದ 25km ದೂರದಲ್ಲಿರುವ ಏಷ್ಯಾದಲ್ಲೇ ಸಿಂಹಗಳಿಗೆ ಹೆಸರಾದ ‘ಗಿರ್’ ಪ್ರಾಂತ್ಯ ಈ ತಳಿಯ ಉಗಮಸ್ಥಳ. ಇದರ ಮೂಲ ಹೆಸರು ‘ಮಲ್ಧಾರಿ’. 15-16ನೇ ಶತಮಾನದಲ್ಲಿ ಮಹಾರಾಷ್ಟ ಹಾಗೂ ರಾಜಸ್ಥಾನಗಳಿಗೆ ಕಾಲಿಟ್ಟ ಈ ತಳಿ 1850ರಲ್ಲಿ ಬ್ರೆಜಿಲ್’ಗೆ ಭಾರತದಿಂದ ಮೊದಲ ಬಾರಿಗೆ ಗುಜರಾತ್’ನ ಕಾಂಕ್ರೇಜ್ ಹಾಗೂ ಆಂಧ್ರದ ಓಂಗೋಲ್’ಗಳ ಜತೆ ರಫ್ತು ಮಾಡಲ್ಪಟ್ಟಿತು. ಈ ತಳಿ 1960ರ ದಶಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದೇಶಗಳಿಗೆ ರಫ್ತಾಯಿತು.

ಗಿರ್ ಭಾರತದ ದೊಡ್ಡ ಜಾತಿಯ ತಳಿಗಳಲ್ಲೊಂದಾಗಿದ್ದು 135cmsನಷ್ಟು ಎತ್ತರಕ್ಕೆ ಹೋರಿಗಳು ಹಾಗೂ ಸುಮಾರು 130cmsನಷ್ಟು ಎತ್ತರಕ್ಕೆ ಹಸುಗಳು ಬೆಳೆಯುತ್ತವೆ. ಹಸುಗಳು ಸರಾಸರಿ 385kgಗಳಷ್ಟು ತೂಗಿದರೆ ಸುಮಾರು 545kgಗಳಷ್ಟ ತೂಗುತ್ತವೆ ಈ ತಳಿಯ ಹೋರಿಗಳು. ಸಾಮಾನ್ಯವಾಗಿ ಹೊಂಗೆಂಪು, ಕೆಂಪು ಮಿಶ್ರಿತ ಬಿಳಿ, ಹಳದಿಗೆಂಪು ಬಣ್ಣಗಳಲ್ಲಿ ಕಾಣಸಿಗುವ ಈ ಹಸು ಮೃದುವಾದ, ತೆಳ್ಳಗಿನ, ಸ್ವಲ್ಪ ಜೋಲುವ ಚರ್ಮವನ್ನು ಹೊಂದಿದೆ. ಆಕ್ರಮಣಕಾರಿಯಂತೆ ತೋರ್ಪಡುವ ಅತಿಯಾಗಿ ಉಬ್ಬಿದ ಹಣೆ ಅತ್ಯುಷ್ಣ ಪರಿಸರದಲ್ಲಿ ಮೆದುಳು ಮತ್ತು ಪ್ರಿಟ್ಯುಟರಿ ಗ್ರಂಥಿಗಳನ್ನು ರಕ್ಷಿಸುವಲ್ಲಿ coolerನಂತೆ ವರ್ತಿಸುತ್ತದೆ. ಉದ್ದವಾದ ಮುಖದಲ್ಲಿನ ಇದರ ಕಿವಿಗಳು ಉದ್ದವಾದ ಜೋಲಾಡುವ ಕಿವಿಗಳನ್ನು ಹೊಂದಿರುತ್ತವೆ. ಕೋಡುಗಳು ತಲೆಯ ಹಿಂಭಾಗದಲ್ಲಿದ್ದು ಬುಡವು ದಪ್ಪನಾಗಿರುತ್ತದೆ ಹಾಗೂ ಹಿಂಬದಿಗೆ ಕೆಳಮುಖವಾಗಿ ಬಾಗಿರುತ್ತವೆ ಹಾಗೂ ತುದಿಯು ಮೇಲ್ಮುಖವಾಗಿರುತ್ತದೆ. ಗೊರಸುಗಳು ಕಪ್ಪಾಗಿದ್ದು ಗಟ್ಟಿಯಾಗಿರುತ್ತವೆ ಹಾಗೂ ಬೆನ್ನಿನ ಮೇಲೆ ದೊಡ್ಡಗಾತ್ರದ ಡುಬ್ಬವಿರುತ್ತವೆ. ನೋಡಲು ಆಕ್ರಮಣಕಾರಿಯಂತೆ ಕಾಣುವ ಇವುಗಳು ಗಂಭೀರ ಸ್ವಭಾವದವುಗಳಾಗಿದ್ದು ಮಾನವನ ಸಾಂಗತ್ಯವನ್ನು ಹಾಗೂ ಸಮೂಹಜೀವನವನ್ನು ಹೆಚ್ಚು ಇಷ್ಟಪಡುತ್ತವೆ.

ನಿಯತವಾಗಿ ಜನಿಸುವ ಕರುಗಳು ಹುಟ್ಟುವಾಗ ಮಧ್ಯಮ ಗಾತ್ರದವಾಗಿರುತ್ತವೆ. ಹಸುಗಳು ಅತಿ ಹೆಚ್ಚು ಹಾಲಿನಿಳುವರಿಯನ್ನು ನೀಡುತ್ತವೆ. ಪ್ರೊಫಾನಾ-ಡಿ-ಬ್ರೆಸಿಲಿಯಾ ಎಂಬ ಹೆಸರಿನ ಗಿರ್ ತಳಿಯ ಹಸು ಪ್ರತಿದಿನ ಸರಾಸರಿ 17.120kg ಹಾಲು ನೀಡುತ್ತಿದ್ದು ದಾಖಲೆಯಾಗಿದೆ. ಈ ತಳಿಯ ಹಸುಗಳ ಹಾಲಿನಲ್ಲಿ ಸುಮಾರು 4.5%ನಷ್ಟು ಕೊಬ್ಬಿನಂಶವಿರುತ್ತದೆ. ಭಾರತದಲ್ಲಿ Red ಸಿಂಧಿ ಹಾಗೂ ಸಾಹಿವಾಲ ತಳಿಗಳ ಕರುಗಳನ್ನು ಪಡೆಯಲೂ ಇವುಗಳನ್ನು ಬಳಸಲಾಗುತ್ತದೆ. ಈ ತಳಿಯ ಹಸುಗಳು ಸಾಮಾನ್ಯವಾಗಿ ರೋಗಗಳಿಗೆ ತುತ್ತಾಗುವುದು ಕಡಿಮೆ. ಈ ಕಾರಣಗಳಿಂದಾಗಿ ವಿದೇಶಗಳಲ್ಲಿ ಈ ತಳಿಯನ್ನು ಹೆಚ್ಚಾಗಿ ಸಾಕುತ್ತಾರೆ.

ಬ್ರೆಜಿಲ್’ನಿಂದಾಗಿ ಜಾಗತಿಕ ಮಟ್ಟದಲ್ಲಿ ಈ ತಳಿ ಹರಡಿದೆ. ಮಿಶ್ರತಳಿಗಳು ಹಾಗೆಯೇ ಅಧಿಕ ಕೊಬ್ಬಿನಂಶದ ಹಾಲಿಗಾಗಿ ಎಮ್ಮೆಗಳ ಬಳಕೆ ಇವುಗಳ ಅವನತಿಗೆ ಕಾರಣ. ವಿಶೇಷವೆಂದರೆ ಬ್ರೆಜಿಲ್’ನ ನಿರ್ದಿಷ್ಟ ಹಸುಗಳು ಶುದ್ದ ಭಾರತೀಯ ಮೂಲದವು (POI) ಹಣೆಪಟ್ಟಿಯನ್ನು ಹೊಂದಿವೆ. ಭಾರತೀಯರಿಗೆ ಪವಿತ್ರವಾದ ಈ ಗೋಮಾತೆಯು, ಸುಧಾರಿತ ದನಗಳೆಂಬ ಹೆಸರಿನಲ್ಲಿ ಬ್ರೆಜಿಲ್’ನವರಿಗೆ ಚಿನ್ನದ ಮೊಟ್ಟೆಯಿಡುವ ಕೋಳಿಯಾಗಿದೆ, ಆದರೆ ತನ್ನತನವನ್ನು ಕಳೆದುಕೊಂಡು ಹೈಬ್ರೀಡ್’ಗಳಾಗಿ ಮಾರ್ಪಾಡಾಗುತ್ತಿದ್ದು ಶುದ್ಧ ಭಾರತೀಯ ತಳಿಯ ಹಸುಗಳು ಕೇವಲ 3000ದಷ್ಟಿವೆ ಎನ್ನುವುದು ದುರಂತಸತ್ಯ. ಆ ಪಶುಪತಿಯ ದಯೆಗಾಗಿ ಕೋರುತ್ತಲಿವೆ ಈ ತಳಿಗಳು, ಕೇಳುತಲಿ ಮಾನವನನ್ನು ನೀನಾರಿಗಾದೆಯೋ ಎಲೆ ಮಾನವ…

-Vighnesh Bhat

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!