ಅಂಕಣ

ನೀನಾರಿಗಾದೆಯೋ ಎಲೆ ಮಾನವ…

            “ಗೋಮಾತೆ” ಅದೊಂದು ಶಬ್ಧದಲ್ಲೇ ಏನೋ ಒಂದು ವಾತ್ಸಲ್ಯವಿದೆ. ಬಾಲ್ಯದಲ್ಲಂತೂ ತನ್ನ ತಾಯಿಯಂತೆ ಅವುಗಳನ್ನೂ ಕಂಡಿದ್ದೇನೆ.ಅವುಗಳ ಹಾಲು ಕುಡಿದಿದ್ದೇನೆ, ಬೆನ್ನ ಮೇಲೆ ಹತ್ತಿ ಆಡಿದ್ದೇನೆ, ಕೊರಳನಿಡಿದು ಮುದ್ದಿಸಿದ್ದೇನೆ, ಎತ್ತೆಸೆದಾಗ ಅತ್ತಿದ್ದೇನೆ, ಹುಲ್ಲು ಕೊಟ್ಟು ಸ್ನೇಹಿತನಾಗಿ ಅದರೊಂದಿಗಿದ್ದು ಖುಷಿ ಪಟ್ಟಿದ್ದೇನೆ, ಕರುಗಳೊಂದಿಗೆ ಸೋದರನಾಗಿ ಬೆರೆತಿದ್ದೇನೆ, ಕಳೆದು ಹೋದಾಗ ಅತ್ತಿದ್ದೇನೆ, ಹಿಂದಿರುಗಿದಾಗ ತಬ್ಬಿ ಮುದ್ದಾಡಿದ್ದೇನೆ, ಈಗ ದೂರದೂರಿನಲ್ಲೂ ಅದರ ನೆನಪಿನಲ್ಲಿದ್ದೇನೆ. ಭಾರತೀಯ ಪುರಾಣಗಳಲ್ಲಿ ಮುಕ್ಕೋಟಿ ದೇವತೆಗಳನ್ನು ಅದರಲ್ಲಿ ತೋರಿಸಿ, ಕಾಮಧೇನುವನ್ನಾಗಿ, ಶಾಂತಮೂರ್ತಿಯಾಗಿ, ವಾತ್ಸಲ್ಯಮಯಿಯಾಗಿ, ಮಾತೆಯಾಗಿ, ಮಗುವಾಗಿ, ವೈದ್ಯೆಯಾಗಿ, ಸರ್ವಶಕ್ತಳನ್ನಾಗಿ ತೋರಿಸಿದ್ದಾರೆ. ಗೋವಿನಲ್ಲಿರುವಷ್ಟು ಔಷಧೀಯ ಗುಣ ಇನ್ನಾವ ಪ್ರಾಣಿಯಲ್ಲೂ ಸಿಗಲಾರದು. ಪ್ರಾಚೀನ ಭಾರತೀಯ ಹಸುಗಳಿಗೂ ಮಾನವನಿಗೂ ಹೆಚ್ಚಿನ ಗುಣ ವ್ಯತ್ಯಾಸವಿರಲಿಲ್ಲ. ಮಾನವರ ದೃಷ್ಟಿಯಲ್ಲಿ ಗೋವು ಸಹ ಕುಟುಂಬದಲ್ಲೊಂದಾಗಿ ಸ್ಥಾನ ಪಡೆದಿತ್ತು. ಭಾರತೀಯ ಸಂಪ್ರದಾಯ ಮುಂಜಾನೆಯಿಂದ ಮುಸ್ಸಂಜೆಯ ತನಕ ಹಸುವನ್ನವಲಂಬಿಸಿತ್ತು. ಬೆಳಿಗ್ಗೆ ಎದ್ದರೆ ಗೋಮಯದಿಂದ ಸಾರಿಸಿ ರಂಗೋಲಿ ಇಟ್ಟು ದಿನದಾರಂಭವಾಗುತ್ತಿತ್ತು. ಬ್ರಾಹ್ಮಣರಿಗೆ ಪಂಚಗವ್ಯ ಹೆಸರೇ ಹೇಳುವಂತೆ ಹಾಲು, ಮೊಸರು, ತುಪ್ಪ, ಗೋಮೂತ್ರ, ಗೋಮಯ – ಗವ್ಯೋತ್ಪನ್ನಗಳ ಸೇವನೆ, ದಿನಚರಿಯಾಗಿತ್ತು.

            ಭಾರತೀಯ ಗೋತಳಿಗಳ ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನು ಮತ್ತು ರೋಗ ನಿರೋಧಕ ಅಂಶಗಳಿವೆ. ಗೋಮಯವು ಬ್ಯಾಕ್ಟೀರಿಯಾಗಳನ್ನು ಹಿಡಿದಿಟ್ಟುಕೊಳ್ಳುವ ಗುಣವನ್ನು ಹೊಂದಿದೆ. ಗೋಮಯದಿಂದ ಸಾರಿಸಿ ರಂಗೋಲಿ ಇಟ್ಟ ಸ್ಥಳಗಳನ್ನು ದಾಟಿ ಸರೀಸೃಪಗಳು ಬರಲಾರವು. ಗೋಮೂತ್ರ ಸೇವನೆ ದೇಹ ಶುದ್ಧಿಗೆ ಸಹಾಯಕ. ಆದರೂ ಇಂದು ಆ ಮೂಕ ಪ್ರಾಣಿಗಳನ್ನು ವಯಸ್ಸಾಯಿತೆಂದೋ, ಹಣದಾಸಗೋ ಕಸಾಯಿಖಾನೆಗಳಿಗೆ ತಳ್ಳಲಾಗುತ್ತಿದೆ. ಅಲ್ಲಿ ಕ್ರೂರವಾಗಿ ಹಿಂಸಿಸಿ ಕೊಲ್ಲಲಾಗುತ್ತಿದೆ. ವಿಶ್ವದಲ್ಲೇ ಗೋಮಾಂಸ ರಫ್ತಿನಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರ ಭಾರತ (ಪ್ರತಿವರ್ಷ ಸುಮಾರು 25ಲಕ್ಷ ಟನ್ ಗಳು). ಗೋಮಾತೆಯು ತನ್ನೊಳಗೇ ಕೇಳುತ್ತಿದೆಯೇನೋ, ಜೀವಮಾನವೀಡೀ ಹಿತವನ್ನೇ ಬಯಸಿದ, ಪರೋಪಕಾರಕ್ಕಾಗಿಯೇ ಬದುಕಿದ ನನಗೆ ಇಷ್ಟು ಕ್ರೂರವಾಗಿ ಜವರಾಯ ಎಳೆದೊಯ್ಯುವನಾದರೆ, ಆ ಪಶುಪತಿಯು ಮಾನವನಿಗೆಂತಹ ಸಾವನ್ನು ಕರುಣಿಸಬಹುದೆಂದು? ಬಹುಶಃ ಇರಲಿಕ್ಕಿಲ್ಲ… ಎಷ್ಟೆಂದರೂ ಮಾತೃ ಹೃದಯವಲ್ಲವೇ!!!

            ವೇದಕಾಲಕ್ಕಿಂತಲೂ ಮೊದಲಿನಿಂದಲೇ ಭಾರತೀಯರ ಪಾಲಿಗೆ ಗೋವುಗಳು ತಮ್ಮ ಕುಟುಂಬಸ್ಥರು. ಭಾರತೀಯ ಗೋವುಗಳಲ್ಲಿರುವ ಅತ್ಯಂತ ವಿಶಿಷ್ಟ ಗುಣ ಸಂಬಂಧಗಳು. ತನ್ನ ಕರುಗಳು, ತಾಯಿ ಸಂಬಂಧ ಹಾಗೂ ಮನುಷ್ಯರ ಜೊತೆ ಸಹ ಆಳವಾದ ಭಾವನೆಗಳನ್ನು ಹೊಂದಿರುತ್ತದೆ. ತನ್ನ ಮನೆಯಿಂದ ಎಷ್ಟೇ ದೂರ ಹೋದರೂ ಹಿಂದಿರುಗಿ ಬರುವಷ್ಟು ವಾಸನಾಗ್ರಹಣ ಶಕ್ತಿ ಇವುಗಳಿಗಿದೆ. ವಿದೇಶಿ ಗೋತಳಿಗಳಲ್ಲಿ ಈ ಶಕ್ತಿ ಕಡಿಮೆ. ಭಾರತೀಯ ಗೋತಳಿಗಳು ಅತ್ಯಂತ ಪರಿಸರ ಪ್ರೇಮಿಯಾದವುಗಳು. ಯಾವುದೇ ರೀತಿಯ ಪರಿಸರಕ್ಕೆ ಸುಲಭವಾಗಿ ಹೊಂದಿಕೊಳ್ಳುತ್ತವೆ. ತುಂಬಾ ಚುರುಕಾಗಿರುವ ಇವುಗಳು ಕೊಂಬು ಹಾಗೂ ಬೆನ್ನುಗಳಲ್ಲಿ ಸೂರ್ಯಕಿರಣಗಳನ್ನು ಹಿಡಿದಿರುವ ವಿಶೇಷವಾದ ಗುಣವನ್ನು ಹೊಂದಿರುತ್ತವೆ. ಇವುಗಳು ಅತ್ಯಂತ ಚುರುಕಾಗಿರುತ್ತವೆ ಹಾಗೂ ಗೋರೋಚನವನ್ನು ಉತ್ಪಾದಿಸಬಲ್ಲ ವಿಶೇಷವಾದ ಸಾಮರ್ಥ್ಯವನ್ನು ಹೊಂದಿವೆ. ಇವುಗಳು ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು, ಆಹಾರ ಸಿಗದಿದ್ದಾಗ ಸೊರಗಿದರೂ ದೇಹದಲ್ಲಿರುವ ಕೊಬ್ಬಿನಂಶವನ್ನು ಉಪಯೋಗಸಿಕೊಂಡು ತನ್ನ ಶಕ್ತಿ ಕಡಿಮೆಯಾಗದಂತೆ ಕಾಪಾಡಿಕೊಳ್ಳುತ್ತವೆ. ವಿದೇಶೀಯ ಹಸುಗಳಲ್ಲಿ ಈ ಶಕ್ತಿ ಇರುವುದಿಲ್ಲ.

            ವಿದೇಶೀಯ ಹಸುಗಳ ಆಹಾರ ಸೇವನೆಯ ಮೇಲೆ ಅವುಗಳ ಇಳುವರಿ ಅವಲಂಬಿಸಿರುತ್ತವೆ. ಆದರೆ ಭಾರತೀಯ ಹಸುಗಳಲ್ಲಿ ಆಹಾರ ಸೇವನೆ ಕಡಿಮೆಯಾದಾಗ ತನ್ನ ದೇಹದಲ್ಲಿರುವ ಕೊಬ್ಬನ್ನು ಪರಿವರ್ತಿಸಿಕೊಂಡು ಬದುಕಿದರೆ, ಆಹಾರ ಜಾಸ್ತಿಯಾದಾಗ ತನ್ನ ದೇಹವನ್ನು ವೃದ್ಧಿಸಿಕೊಳ್ಳುತ್ತವೆ ಹಾಗೂ ಇಳುವರಿಯಲ್ಲಿ ಹೆಚ್ಚಿನ ವ್ಯತ್ಯಯವಾಗುವುದಿಲ್ಲ. ಭಾರತೀಯ ಗವ್ಯೋತ್ಪನ್ನಗಳು ಔಷಧೀಯ ಗುಣಯುತವಾಗಿದ್ದು ಸಗಣಿಯಲ್ಲಿರುವ ರಿಪೆಲ್ಲೆಂಟ್ ಅಂಶ ಸೊಳ್ಳೆಗಳನ್ನು ಓಡಿಸುತ್ತವೆ. ಭಾರತೀಯ ಹಸುಗಳ ಹಾಲು ಸತ್ವಯುತವಾಗಿದ್ದು ಸೇವನೆಯಿಂದ ರೋಗ ನಿರೋಧಕ ಶಕ್ತಿ ವೃದ್ದಿಸುತ್ತದೆ. ಭಾರತೀಯ ಹಸುಗಳ ಹಾಲು ಸೌಂದರ್ಯವರ್ಧಕವೂ ಆಗಿದೆ. ಭಾರತೀಯ ಹಸುಗಳನ್ನು ಹಾಲು, ಗೊಬ್ಬರ, ಸಾಗಾಣಿಕೆ, ಕೃಷಿಯಲ್ಲಿ ಸಹ ಉಪಯೋಗಿಸಬಹುದು. ಆದರೆ ವಿದೇಶಿ ತಳಿಗಳು ಕೇವಲ ಹಾಲು ಮತ್ತು ಮಾಂಸಕ್ಕಾಗಿ ಉಪಯುಕ್ತವಾಗಿವೆ. ಭಾರತೀಯ ಗೋತಳಿಗಳಿಗೆ ವಿದೇಶಿ ಹಸುಗಳಂತೆ ಕೃತಕ ಆಹಾರ ಮತ್ತು ಲಸಿಕೆಗಳು ಅವಶ್ಯಕವಲ್ಲ. ಇಷ್ಟೆಲ್ಲಾ ಉಪಯುಕ್ತತೆಯಿದ್ದರೂ ಕೇವಲ ಇಳುವರಿಯ ದೃಷ್ಡಿಯಿಂದ ವಿದೇಶೀಯ ಗೋತಳಿಗಳು ಬಳಕೆಯಾಗುತ್ತಿದ್ದು ಭಾರತೀಯ ಗೋತಳಿಗಳು ಕ್ಷೀಣಿಸುತ್ತಿವೆ. ಮುಂದೊಂದು ದಿನ ಅವು ಕೇಳುವಂತಾಗದಿರಲಿ ನೀನಾರಿಗಾದೆಯೋ ಎಲೆ ಮಾನವ…

-Vighnesh Bhat

sbhatvighnesh@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!