Featured ಅಂಕಣ

ಗ್ರಹಣಕ್ಕೊ೦ದು ಪುರಾಣ

ಖಗೋಳ ಪ್ರಿಯರಿಗೆ ಸಂತೋಷ ತರುವ ಸುದ್ದಿಯೊಂದಿದೆ. 2016ನೇ ವರ್ಷದಲ್ಲಿ ನಭದಲ್ಲಿ ಅಪರೂಪದ ವಿದ್ಯಮಾನ ಸಂಭವಿಸಲಿದೆ. ಈ ವರ್ಷ ಬರೋಬ್ಬರಿ ಐದು ಗ್ರಹಣಗಳು ಸಂಭವಿಸಲಿವೆ. ಭಾರತದಲ್ಲಿ ಗೋಚರಿಸುವುದು ಮಾತ್ರ ಎರಡೇ ಗ್ರಹಣಗಳು.. ಮಾರ್ಚ್ 9ರಂದು ಘಟಿಸಲಿರುವ ಸಂಪೂರ್ಣ ಸೂರ್ಯಗ್ರಹಣದೊಂದಿಗೆ ಈ ಗ್ರಹಣಗಳ ಸರಣಿ ಆರಂಭವಾಗಲಿದೆ. ಆದರೆ, ಈ ಸೂರ್ಯ ಗ್ರಹಣ ಗೋಚರಿಸುವುದು ಈಶಾನ್ಯ ಭಾರತದಲ್ಲಿ ಮಾತ್ರ. ಅದೂ ಭಾಗಶಃ ಎಂದು ಜಿವಾಜಿ ಅಬ್ಸರ್‌’ವೇಟರಿ ಸಂಸ್ಥೆಯ ಮುಖ್ಯಸ್ಥ ಡಾ. ರಾಜೇಂದ್ರ ಪ್ರಕಾಶ್ ಗುಪ್ತ ಹೇಳಿದ್ದಾರೆ. ಇದರ ಜತೆಗೆ ಮಾರ್ಚ್ 23ರಂದು ನಡೆಯುವ ಚಂದ್ರ ಗ್ರಹಣ ಭಾರತದಲ್ಲಿ ಕಾಣಸಿಗಲಿದೆ. ಇವೆರಡನ್ನು ಹೊರತುಪಡಿಸಿ ಈ ವರ್ಷ ನಡೆಯುವ ಇನ್ನು ಯಾವ ಗ್ರಹಣವೂ ಭಾರತದಲ್ಲಿ ಗೋಚರಿಸದು. ಆಗಸ್ಟ್ 18ರಂದು ಭಾಗಶಃ ಚಂದ್ರ ಗ್ರಹಣ ಮತ್ತು ಸೆ. 1ರಂದು ವಲಯಾಕಾರ ಸೂರ್ಯಗ್ರಹಣ ನಡೆಯುತ್ತದೆಯಾದರೂ, ಅದು ಭಾರತದಲ್ಲಿ ಕಾಣಸಿಗುವುದಿಲ್ಲ. ಸೆ.16ರಂದು ಭಾಗಶಃ ಚಂದ್ರಗಣ ನಡೆಯಲಿದ್ದು, ಅದು ದೇಶಾದ್ಯಂತ ಗೋಚರಿಸಲಿದೆ ಎಂದು ಖಗೋಳ ತಜ್ಞರು ಹೇಳಿದ್ದಾರೆ. ಕಳೆದ ವರ್ಷ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಿದ್ದವು. ಅದರಲ್ಲಿ ಎರಡು ಸಂಪೂರ್ಣ ಚಂದ್ರಗ್ರಹಣವಾಗಿದ್ದರೆ, ಒಂದು ಸಂಪೂರ್ಣ ಸೂರ್ಯ ಗ್ರಹಣವಾಗಿತ್ತು. ಮತ್ತೊಂದು ಭಾಗಶಃ ಸೂರ್ಯಗ್ರಹಣವಾಗಿತ್ತು ಎಂದು ಖಗೋಳ ಶಾಸ್ತ್ರಜ್ಞ ಡಾ. ಗುಪ್ತಾ ಹೇಳಿದ್ದಾರೆ.

ಮಾರ್ಚ್ 9ರ೦ದು ಘಟಿಸುವ ಸೂರ್ಯಗ್ರಹಣ ಮು೦ಜಾನೆ 5:07 ರಿ೦ದ 6.50ರವರೆಗೆ ಸ೦ಭವಿಸಲಿದೆಯೆ೦ದು ದಾಖಲಿಸಿದ್ದಾರೆ. ಭಾರತದಲ್ಲಿ ಭಾಗಶ ಗೋಚರಿಸುವ ಇದು ಕರ್ನಾಟಕದಲ್ಲಿ ಬೆ೦ಗಳೂರು, ಮ೦ಗಳೂರು, ಹಾಸನ, ಬೆಳಗಾ೦, ಉಡುಪಿ, ಮೈಸೂರುಗಳಲ್ಲೆಲ್ಲಾ ವೀಕ್ಷಿಸಬಹುದ೦ತೆ. ಫೆಸಿಫಿಕ್ ಸಾಗರ(Pacific Ocean )ದಿ೦ದ ವೀಕ್ಷಿಸಿದರೆ ಸ೦ಪೂರ್ಣವಾಗಿ ಕಾಣಬಹುದ೦ತೆ.

ಸೂರ್ಯನು ಸೌರಮಂಡಲದ ಮಧ್ಯದಲ್ಲಿರುವ ನಕ್ಷತ್ರ. ಭೂಮಿ ಮತ್ತು ಬೇರೆ ಕಾಯಗಳು (ಗ್ರಹಗಳು, ಉಲ್ಕೆಗಳು, ಧೂಮಕೇತುಗಳು ಮತ್ತು ಧೂಳು ಸೇರಿದಂತೆ) ಸೂರ್ಯನನ್ನು ಪರಿಭ್ರಮಿಸುತ್ತವೆ. ಸೂರ್ಯವೊಂದೇ ಸೌರಮಂಡಲದ 99% ದ್ರವ್ಯರಾಶಿಯನ್ನು ಹೊಂದಿದೆ. ಸೂರ್ಯನ ಬೆಳಕು ದ್ಯುತಿಸಂಶ್ಲೇಷಣೆಯ ಮೂಲಕ ಭೂಮಿಯ ಬಹುತೇಕ ಎಲ್ಲಾ ಜೀವಿಗಳಿಗೂ ಆಧಾರವಾಗಿದ್ದು, ಭೂಮಿಯ ಹವಾಮಾನದ ಮೇಲೂ ಪ್ರಭಾವ ಬೀರುತ್ತದೆ. ಸೂರ್ಯನು ಸಾಮಾನ್ಯ-ಗಾತ್ರದ ನಕ್ಷತ್ರವಾದರೂ, ಅದು ಸೌರಮಂಡಲದ 99% ದ್ರವ್ಯರಾಶಿಯನ್ನು ಹೊಂದಿದೆ. ಸೂರ್ಯ, ಭೂಮಿ ಮತ್ತು ಚಂದ್ರರೆಲ್ಲರೂ ಒಂದೇ ಸರಳ ರೇಖೆಯಲ್ಲಿ ಇದ್ದಾಗ ಮಾತ್ರ ಗ್ರಹಣಗಳು ಉಂಟಾಗುತ್ತವೆ.. ಇದರಲ್ಲಿ ಎರಡು ವಿಧ.

ಸೂರ್ಯ ಗ್ರಹಣ

ಚಂದ್ರನು ಸೂರ್ಯ ಮತ್ತು ಭೂಮಿಗಳ ನಡುವೆ ಇದ್ದಾಗ ಉ೦ಟಾಗುವ ಸೂರ್ಯ ಗ್ರಹಣ. ಇದು ಸೌರಮಂಡಲದಲ್ಲಿ ನಡೆಯುವ ಭೂಮಿ, ಸೂರ್ಯ ಮತ್ತು ಚಂದ್ರರನ್ನೊಳಗೊಂಡ ಒಂದು ಖಗೋಳ ಪ್ರಕ್ರಿಯೆ. ಅಮಾವಾಸ್ಯೆಯ ದಿನ ಮಾತ್ರ ಸೂರ್ಯ ಗ್ರಹಣ ಸಂಭವಿಸಲು ಸಾಧ್ಯ. . ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬ೦ದಾಗ ಸೂರ್ಯ ಗ್ರಹಣ ಸ೦ಭವಿಸುತ್ತದೆ..

ಚ೦ದ್ರ ಗ್ರಹಣ

ಒಂದು ಆಕಾಶಕಾಯ ಮತ್ತೊಂದು ಆಕಾಶಕಾಯದ ನೆರಳಿನಲ್ಲಿ ಸಾಗುವಾಗ ಸಾಮಾನ್ಯವಾಗಿ ಗ್ರಹಣ ಉಂಟಾಗುತ್ತದೆ. ಭೂಮಿಯನ್ನು ಸುತ್ತುವ ಚಂದ್ರ ಕೆಲವು ಸಲ ಭೂಮಿಯ ನೆರಳಿನೊಳಗೆ ಹಾಯುತ್ತದೆ. ಆಗ ಚಂದ್ರಗ್ರಹಣವಾಗುತ್ತದೆ. ಸೂರ್ಯ-ಚಂದ್ರರ ನಡುವೆ ಭೂಮಿ ಬಂದಾಗ, ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು ನಮ್ಮಿಂದ ಮರೆಯಾಗುತ್ತಾನೆ. ಅದೇ ಚಂದ್ರಗ್ರಹಣ. ಚಂದ್ರಗ್ರಹಣ ಹುಣ್ಣಿಮೆಗಳಂದು ಮಾತ್ರ ಸಂಭವಿಸುತ್ತದೆ. ಏಕೆಂದರೆ ಆಗ ಮಾತ್ರ ಚಂದ್ರನು ಭೂಮಿಗೆ ಸೂರ್ಯನ ವಿರುದ್ಧ ದಿಕ್ಕಿನಲ್ಲಿರುತ್ತದೆ. ಸೂರ್ಯ-ಚಂದ್ರ ಎದುರುಬದುರಾಗಿ ಸಂಧಿಸುವುದು ರಾಹು-ಕೇತು ಎಂಬ ಎರಡು ಬಿಂದುಗಳಲ್ಲಿ ಚಂದ್ರ ರಾಹುವಿನ ಬಳಿ, ಸೂರ್ಯ ಕೇತುವಿನ ಬಳಿಯಿದ್ದಾಗ ಅಂದರೆ ಅವೆರಡೂ ಒಂದಕ್ಕೊಂದು ಎದುರಾದಾಗ ನಡುವೆ ಭೂಮಿ ಬಂದು ರಾಹುಗ್ರಸ್ಥ ಚಂದ್ರಗ್ರಹಣ ಸಂಭವಿಸುತ್ತದೆ. ಇದಕ್ಕೆ ವ್ಯತಿರಿಕ್ತವಿದ್ದಾಗ ಕೇತುಗ್ರಸ್ಥ ಚಂದ್ರಗ್ರಹಣವಾಗುತ್ತದೆ. ಚಂದ್ರಗ್ರಹಣ ಸಾಮಾನ್ಯವಾಗಿ ಎರಡು ರೀತಿಯಿಂದ ಸಂಭವಿಸುತ್ತದೆ. ಪೂರ್ಣ ಹಾಗೂ ಪಾರ್ಶ್ವ ಗ್ರಹಣ. ಪೂರ್ಣ ಚಂದ್ರಗ್ರಹಣವು ಸುಮಾರು ಎರಡು ಗಂಟೆಗಳವರೆಗೆ ನಡೆಯಬಹುದು. ಚಂದ್ರಗ್ರಹಣ ವರ್ಷದಲ್ಲಿ ಮೂರು ಸಲ ಸಂಭವಿಸಬಹುದಾಗಿದೆ.

ಪುರಾಣದ ನ೦ಬಿಕೆ

ಸೂರ್ಯ-ಚಂದ್ರರನ್ನು ರಾಹು-ಕೇತುಗಳೆಂಬ ದುಷ್ಟಗ್ರಹಗಳು ಹಿಡಿಯುವುದನ್ನೇ (ನುಂಗುವುದಕ್ಕೆ) ’ಗ್ರಹಣ’ವೆನ್ನುವ ನಂಬಿಕೆ ಭಾರತೀಯ ಸಮಾಜದಲ್ಲಿ ಬೆಳೆದು ಬಂದಿದೆ. ಗ್ರಹಣದ ಸಮಯದಲ್ಲಿ ಯಾವುದೋ ದೈತ್ಯ ಮೃಗವೊಂದು ಆಕಾಶಕಾಯಗಳನ್ನು ಕಬಳಿಸುತ್ತದೆಂದೂ, ಅದನ್ನು ಹೊಡೆದೋಡಿಸಲು ಆಕಾಶದೆಡೆಗೆ ಬಾಣಗಳನ್ನು ಎಸೆಯುತ್ತಿದ್ದರೆಂದೂ ಅಭಿಪ್ರಾಯಗಳಿವೆ. ರಾಹು ಎಂಬ ಸರ್ಪ ಗ್ರಹಣಕಾಲದಲ್ಲಿ ಸೂರ್ಯ ಚಂದ್ರರನ್ನು ನುಂಗುವನೆಂಬ ಪ್ರಬಲವಾದ ನಂಬಿಕೆಯೂ ಇದೆ. ಅಮೃತ ಮಂಥನಾನಂತರ ದೇವದಾನವರು ಅಮೃತಪ್ರಾಶನಕ್ಕಾಗಿ ಕುಳಿತಿದ್ದ ಸಮಯದಲ್ಲಿ ರಾಹುವು ದೇವತೆಗಳೊಂದಿಗೆ ಕುಳಿತು ಅಮೃತ ಪ್ರಾಶನ ಮಾಡುತ್ತಿದ್ದ. ಇದನ್ನು ಕಂಡು ಸೂರ್ಯಚಂದ್ರರು ವಿಷ್ಣುವಿಗೆ ಹೇಳಲಾಗಿ ವಿಷ್ಣು ಚಕ್ರಾಯುಧದಿಂದ ಅವನ ಕೊರಳನ್ನು ಕೊಯ್ದರು. ಆದರೆ ಅಮೃತವನ್ನು ಕುಡಿದಿದ್ದನಾಗಿ ರಾಹುವಿನ ರುಂಡ-ಮುಂಡಗಳೆರಡೂ ರಾಹು-ಕೇತುಗಳೆಂಬ ಹೆಸರಿನಿಂದ ಸಜೀವಗಳಾದವು. ಸೂರ‍್ಯ ಚಂದ್ರರು ತನ್ನ ಮೇಲೆ ದೂರು ಹೇಳಿದರೆಂಬ ದ್ವೇಷದಿಂದ ರಾಹು ಆಗಾಗ್ಗೆ ಸೂರ್ಯ-ಚಂದ್ರರನ್ನು ಪೀಡಿಸುತ್ತಾನೆ” ಎಂಬುದು ಪುರಾಣದ ಕತೆ. ರಾಹು, ಸೂರ್ಯಚಂದ್ರರನ್ನು ಹಿಡಿದು ಗ್ರಹಣ ಉಂಟುಮಾಡುವ ಒಬ್ಬ ದೈತ್ಯ ವಿಪ್ರಚಿತ್ತ ಸಿಂಹಿಕೆಯರ ಮಗ. ಅವನಿಗೆ ಹಾವಿನ ಬಾಲವಿದೆ. ಸಮುದ್ರ ಮಂಥನದ ನಂತರ ಅವನು ವೇಷತೊಟ್ಟು ದೇವತೆಗಳ ಮಧ್ಯೆ ಕುಳಿತು ಅಮೃತ ಕುಡಿದ; ಅವನ ಈ ಮೋಸತನವನ್ನು ಗಮನಕ್ಕೆ ತಂದಾಗ ವಿಷ್ಣು ಅವನ ತಲೆಯನ್ನು ಕತ್ತರಿಸಿಬಿಟ್ಟ. ಅದು ಹೋಗಿ ಆಕಾಶಕ್ಕೆ ಸೇರಿಕೊಂಡಿತು. ಅಮೃತ ಕುಡಿದಿದ್ದರಿಂದ ಪ್ರಾಣ ಹೋಗಲಿಲ್ಲ. ಪ್ರತೀಕಾರ ಬುದ್ಧಿಯಿಂದ ರಾಹು ಆಗಾಗ್ಗ ಸೂರ‍್ಯ ಚಂದ್ರರನ್ನು ನುಂಗುತ್ತಾನೆ. ಆ ದೈತ್ಯನ ಬಾಲ ’ಕೇತು’ವಾಗಿ ಅನೇಕ ಉಲ್ಕೆ, ಧೂಮಕೇತುಗಳಿಗೆ ಕಾರಣವಾಗಿದೆ.’ ಎಂದು ಮೋನಿಯರ್ ವಿಲಿಯಮ್ಸ್ ತಮ್ಮ ಸಂಸ್ಕೃತ ಇಂಗ್ಲಿಷ್ ಶಬ್ದಕೋಶದಲ್ಲಿ ರಾಹುವಿನ ಕತೆಯನ್ನು ಕೊಟ್ಟಿದ್ದಾರೆ.

ಗ್ರಹಣಕ್ಕೆ ಸಂಬಂಧಿಸಿದಂತೆ ವಿಭಿನ್ನ ಸಂಸ್ಕೃತಗಳಲ್ಲಿರುವ ಪುರಾಣ ಮತ್ತು ನಂಬಿಕೆಗಳು ಸ್ವಾರಸ್ಯಕರವಾಗಿವೆ. ಗ್ರಹಣ ಕಾಲದಲ್ಲಿ ಗರ್ಭಿಣಿ ಸ್ತ್ರೀಯರು ಯಾವುದೇ ಜೀವ ಅಥವಾ ನಿರ್ಜೀವ ವಸ್ತುಗಳನ್ನು ಮುರಿಯುವುದಾಗಲಿ, ಪದಾರ್ಥಗಳನ್ನು ತಿನ್ನುವುದಾಗಲೀ, ಕತ್ತರಿಸುವುದಾಗಲಿ, ಸೂಜಿಯಿಂದ ಬಟ್ಟೆಗಳನ್ನು ಹೊಲಿಯುವುದಾಗಲಿ ಮಾಡಕೂಡದು. ಯಾಕೆಂದರೆ ಸೂರ್ಯ-ಚಂದ್ರಗ್ರಹಣಗಳು ಗರ್ಭಸ್ಥ ಶಿಶುವಿನ ಮೇಲೆ ದುಷ್ಟ ಪರಿಣಾಮವನ್ನುಂಟು ಮಾಡುವುದೆಂಬ ಭಾವನೆಗಳಿರುವುದರಿಂದ ಈ ಅವಧಿಯಲ್ಲಿ ಅಂಥ ಸ್ತ್ರೀಯರನ್ನು ಜಾಗರೂಕತೆಯಿಂದ ನೋಡಿಕೊಳ್ಳುತ್ತಾರೆ. ಗ್ರಹಣ ಕಾಲಾವಧಿಯಲ್ಲಿ ಸಾಮಾನ್ಯವಾಗಿ ಯಾರೂ ಊಟ ವಗೈರೆ ಮಾಡಲಾರರು. ಸೂರ್ಯ-ಚಂದ್ರರನ್ನು ಒಂದು ವಿಷ ಸರ್ಪ ನುಂಗುವ ಈ ಅವಧಿಯಲ್ಲಿ ಏನನ್ನೂ ಸೇವಿಸಬಾರದೆಂದು ಭೀತಿ ಜನರಲ್ಲಿ ಅಡಗಿದೆ. ಗ್ರಹಣದ ಸಮಯದಲ್ಲಿ ಸೂಕ್ಷ್ಮವಾದ ವಿಷ ಜಂತುಗಳು ಅಡಿಗೆ, ನೀರು ಮುಂತಾದವುಗಳಲ್ಲಿ ಸೇರುವುದೆಂಬ ಭಾವನೆಯಿಂದ ಗ್ರಹಣ ಬಿಟ್ಟ ಮೇಲೆ ಅವುಗಳನ್ನು ಚೆಲ್ಲಿ ಮನೆ ಸಾರಿಸಿ ಹೊಸ ನೀರು ತಂದು, ಸ್ನಾನ ಮಾಡಿ ಹೊಸದಾಗಿ ಅಡುಗೆ ಮಾಡಿದ ಮೇಲೆಯೇ ಊಟ ಮಾಡುವರು. ಗ್ರಹಣದ ದಿನ ಸ್ನಾನ, ದಾನ, ಜಪ-ತಪ, ಶ್ರದ್ಧಾದಿಗಳಿಂದ ಅಮಿತ ಪುಣ್ಯ ಲಭಿಸುವುದೆಂದು ನಂಬಿ ಹೀಗೆ ಮಾಡುವುದುಂಟು. ಸೂರ್ಯ-ಚಂದ್ರಗ್ರಹಣಗಳು ಸಂಭವಿಸುವ ನಕ್ಷತ್ರಗಳಂದು ಹುಟ್ಟಿದವರು ತಮ್ಮ ಕರ್ಮಾದಿಗಳಿಗೆ ಸಂಬಂಧಿಸಿದಂತೆ ಎಳ್ಳುದಾನ, ಹಣದಾನ, ಗೋದಾನ, ಬಟ್ಟೆದಾನ, ಮುಂತಾದ ಶಾಂತಿಕಾರ‍್ಯ ಮಾಡದಿದ್ದರೆ ತೊಂದರೆಗೊಳಗಾಗುವರೆಂಬ ನಂಬಿಕೆ ಇದೆ. ಜಪ, ತಪ, ದೀಕ್ಷಾ ಕಾರ್ಯಗಳಿಗೆ ಗ್ರಹಣಗಳು ಉತ್ತಮ ದಿನಗಳಾಗಿವೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Shylaja Kekanaje

ಶೈಲಜಾ ಕೇಕಣಾಜೆ ಮೂಲತಃ ದಕ್ಷಿಣ ಕನ್ನಡದ ವಿಟ್ಲದವರು. ಬಿ .ಇ. ಪದವೀಧರೆಯಾಗಿದ್ದು ಸದ್ಯ ಬೆಂಗಳೂರು ವಾಸಿ. ಲೇಖನ, ಕವನಗಳ ರಚನೆಯಲ್ಲಿ ಹವ್ಯಾಸಿ. ಅದರಲ್ಲೂ ಛಂದೋಬದ್ದ ಕವನಗಳನ್ನು ರಚಿಸುವ ತುಡಿತ. ಮಕ್ಕಳ ಪಾಕ್ಷಿಕ ಬಾಲಮಂಗಳದಲ್ಲೊಂದು ಸರಣಿ ಲೇಖನ ಯಶಸ್ವಿಯಾಗಿ ಮೂಡಿ ಬರುತ್ತಾ ಇದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!