ಅಂಕಣ

ಕೃಷ್ಣಾಷ್ಠಮಿ ಬರುವದರೊಳಗೆ ಕನ್ಹಯ್ಯನನ್ನು ಜನ ಮರೆತುಬಿಡುತ್ತಾರೆನೋ? – ರಾಜಕೀಯದ ಕ್ಯಾಂಪಸ್ ಸೆಲೆಕ್ಷನ್.

ಐಐಟಿಯಲ್ಲಿ ಕ್ಯಾಂಪಸ್ಸಿಗೆ ಬರುವ MNC ಗಳು ( Google, Microsoft or Facebook) ವಿದ್ಯಾರ್ಥಿಗಳು ಕಲಿಯುತ್ತಿರುವಾಗಲೇ ಕ್ಯಾಂಪಸ್ ಸೆಲೆಕ್ಷನ್ ಮಾಡಿ ಲಕ್ಷಗಟ್ಟಲೆ ಸಂಬಳ ಕೊಡುತ್ತವೆ ಎಂಬುದನ್ನು ಕೇಳಿದ್ದೇವೆ. ಐಐಎಮ್ ನಲ್ಲಿ ಓದುತ್ತಿರುವ ಹುಡುಗನೊಬ್ಬನಿಗೆ ಬ್ಯಾಂಕ್ ಆಫ್ ಅಮೇರಿಕಾ, ಅಥವಾ HSBC ಅಥವಾ ಸಿಟಿ ಬ್ಯಾಂಕ್, ಮ್ಯಾನೇಜಮೆಂಟ್ ಪದವಿಸಿಗುವ ಮೊದಲೇ ವೈಸ್ ಉಪಾಧ್ಯಕ್ಷನಾಗಿ ಮಾಡಿ ಲಕ್ಷಗಟ್ಟಲೆ ಡಾಲರ್ ಸಂಬಳ ಕೊಟ್ಟು ಕ್ಯಾಂಪಸ್ಸಿಗೆ ಬಂದು ನೌಕರಿ ಕೊಟ್ಟು ಹೋಗುತ್ತಾರೆ ಎಂಬುದನ್ನು ಕೇಳಿ ಆಶ್ಚರ್ಯಪಟ್ಟಿಲ್ಲವೇ ನಾವು? ಹೀಗೆಯೇ ಈ JNUಯಿಂದ ಕಾಂಗ್ರೆಸ್, ಕಮ್ಯೂನಿಸ್ಟ್, ಬಿಜೆಪಿ, ಇತರೆ ಪಕ್ಷಗಳು ವಿದ್ಯಾರ್ಥಿ ನಾಯಕರನ್ನು ರಾಜಕೀಯ ಎಂಬ ರಂಗಕ್ಕೆ ಕ್ಯಾಂಪಸ್ ಸೆಲೆಕ್ಷನ್ ಮಾಡುತ್ತಾರೆ. ಅವರಿಗೆ ಕೊಡುವ ವೇತನ ಇಂಜಿನಿಯರ್, ಮ್ಯಾನೇಜಮೆಂಟ್ ಎಕ್ಸಿಕ್ಯುಟಿವ್ ಗಿಂತ ನೂರು ಪಟ್ಟು ಹೆಚ್ಚಿಗೆ, ಕೋಟಿ ಕೋಟಿ ಹಣ ಸುರಿಯಲಾಗುತ್ತದೆ. ಯಾಕೆ? ಆ ಇಂಜಿನಿಯರ್ ಹೊಸ ಒಂದು ಅನ್ವೇಷಣೆ ಮಾಡಬೇಕು, ಅಥವಾ ಕೋಡ್ ಬರೆಯಬೇಕು. ಅವನ ಬುದ್ಧಿವಂತಿಕೆಯಿಂದ ಕಂಪನಿಗಳು ಸಹಸ್ರಾರು ಕೋಟಿ ಹಣ ಸಂಪಾದನೆ ಮಾಡುತ್ತವೆ. ಇನ್ನು ಆ ಮ್ಯಾನೇಜಮೆಂಟ್ ಎಕ್ಸಿಕ್ಯೂಟಿವ್ ಕಂಪನಿಗೆ ಬಿಲಿಯನ್ ಡಾಲರ್ ಲಾಭ ಗಳಿಸಿ ಕೊಡುತ್ತಾನೆ, ಹೀಗಾಗಿ ಅವರಿಗೆ ಅಷ್ಟು ಸಂಬಳ. ಹಾಗೆಯೇ ಈ ರಾಜಕೀಯ ಪಕ್ಷಗಳಿಗೆ ತನ್ನ ಬುದ್ಧಿವಂತಿಕೆ, ಕುತಂತ್ರ, ನಾಯಕತ್ವ ಬಳಿಸಿಕೊಂಡು ರಾಜಕೀಯ ಲಾಭ ಗಳಿಸಿಕೊಡುತ್ತಾರೆ ಕನ್ಹಯ್ಯನಂತವರು. ಆಶ್ಚರ್ಯವೇ? ಇದು ಮೊದಲಿನಿಂದಲೂ ನಡೆದುಕೊಂಡು ಬಂದ ನೀತಿ. ನಿಮಗೆ ಅನಿಸಬಹುದು ಕನ್ಹಯ್ಯಾ ದೇಶದ್ರೋಹಿ, ಅವನನ್ನು ಕೆಲ ರಾಜಕೀಯ ವ್ಯಕ್ತಿಗಳು ಯಾಕೆ ಪ್ರೋತ್ಸಾಹಿಸಬೇಕು ಎಂದು ಅಲ್ಲವೇ? ಕೆಲವು ದೊಡ್ಡ ದೊಡ್ಡ ಸಾಪ್ಟವೇರ್ ಕಂಪನಿಯ ಇಂಟರ್‌ವ್ಯೂ ಪಾಸಾಗಬೇಕು ಎಂದರೆ ಮೊದಲು ಒಳ್ಳೆಯ ಹ್ಯಾಕರ್ ಆಗಿರಬೇಕು. ಕೆಲವು ಮೆಡಿಸಿನ್ ಕಂಪನಿಯಲ್ಲಿ ಎಕ್ಸಿಕ್ಯುಟಿವ್ ಹುದ್ದೆ ಬೇಕು ಅಂದರೆ ಔಷಧ ಮಾರುಕಟ್ಟೆಯಲ್ಲಿ ರೋಗಿಗಳು ಹೆಚ್ಚು ಬರುವಂತೆ ಮಾಡುವುದು ಅರಿತಿರಬೇಕು. ಬಾಲಿವುಡನಲ್ಲಿ ಮುಂದೆ ಬರಬೇಕು ಅಂದರೆ ಆಂಡರ್‌ವರ್ಲ್ಡ ಡಾನ್’ಗಳನ್ನು ಮೆಚ್ಚಿಸಿರಬೇಕು. ಹೀಗೆಯೇ ಭಾರತದಲ್ಲಿ ಕೆಲವು ರಾಜಕೀಯ ಪಕ್ಷಗಳಿಗೆ ಧರ್ಮಾಂಧ, ಜಾತಿವಾದಿ ಹಾಗೂ ದೇಶದ್ರೋಹಿಗಳ ಗುಂಪನ್ನು ಸೇರಿಸಲು ಸಾಮರ್ಥ್ಯ ಇರುವ ಜನರ ಅವಶ್ಯಕತೆ ಇದೆ. ಆ ಅರ್ಹತೆ ಕನ್ಹಯನ್ನಿಗಿದೆ, ಅದು ದೇಶದ್ರೋಹದ ಘೋಷಣೆಗಳನ್ನು ಕೂಗಿದಾಗಲೇ ಅರ್ಥವಾಗಿದೆ. ದುಃಖದ ವಿಷಯ ಎಂದರೆ ಇಂಥವರನ್ನು ಎತ್ತಿ, ದೇಶದ ಬೆಳವಣಿಗೆ ಕುಂಠಿತಗೊಳಿಸುವವರನ್ನು ಪರಿಣಿತರು, ಬುದ್ಧಿಜೀವಿಗಳು ಎನ್ನಲಾಗುತ್ತದೆ.

ಕೆಟ್ಟದ್ದೊ ಅಥವಾ ಒಳ್ಳೆಯದೊ ಆದರೆ ಇವರ ಪ್ರಭಾವವನ್ನು ನಿರ್ಲಕ್ಷಿಸುವಂತಿಲ್ಲ.

ಒಬ್ಬ ಸಮರ್ಥ ಯುವ ನಾಯಕ ದೇಶದಲ್ಲೆಲ್ಲ ತಲ್ಲಣ ಮೂಡಿಸಬಲ್ಲ. ಸೇತುರಾಂ ಯೆಚುರಿ ಅಂದು 1977ರಲ್ಲಿ ವಿದ್ಯಾರ್ಥಿಸಂಘದ ನಾಯಕನಾಗಿದ್ದರು. ಆಗಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ವಿರುದ್ಧ ಎದುರು ಬಿದ್ದು ಅವರನ್ನು JNU ಕುಲಪತಿಯ ಸ್ಥಾನದಿಂದ ಇಳಿಸಿದ್ದರು. ಈಗ ಕನ್ಹಯ್ಯ ಕುಮಾರನೂ ಇಂಥವನೇ. ಇವರೆಲ್ಲರ ಹತ್ತಿರ ಸಹಜ ನಾಯಕತ್ವ ಇದೆ. ಮುಖ್ಯವಾಗಿ ಆ ನಾಯಕತ್ವದ ವರವನ್ನು ಮಾರಿಕೊಳ್ಳಲು ತಯಾರಿದ್ದಾರೆ. ನಾಯಕತ್ವಕ್ಕೆ ಬೆಲೆ ಕಟ್ಟಲು ಸಾಧ್ಯವೇ? ರಾಜಕೀಯಕ್ಕೆ ಬೇಕೆ ಬೇಕು ಇಂಥವರು. ಇದೇ ಕಾರಣಗಳಿಂದ ಅವರ ಹಿಂದೆ ಕೆಲವು ಪಬ್ಲಿಕೇಷನ್ ಹೌಸಗಳೂ ಹಿಂದೆ ಬೀಳುತ್ತವೆ. TRPಯ ಚಪಲತೆಯ ಕಾರಣಗಳಿಂದ. ಅವರಿಗೆ ಪುಕ್ಕಟೆಯಾಗಿ ಪಬ್ಲಿಸಿಟಿ ಕೊಡುತ್ತವೆ. ಇಂದು ನಮ್ಮ ಮುಂದೆ ಇರುವುದು JNU ವಿಷಯವಾದರೆ, ಕಾಂಗ್ರೆಸ್ ಒಂದು ಕಾಲದಲ್ಲಿ ಹಾರ್ವರ್ಡ್ ಹಾಗೂ ಇತರ ವಿದೇಶಿ ಪ್ರಖ್ಯಾತ ವಿಶ್ವವಿದ್ಯಾಲಯದಿಂದಲೂ ರಾಜಕೀಯ ಕ್ಯಾಂಪಸ್ ಆಯ್ಕೆ ಮಾಡಿಕೊಂಡಿತ್ತು. ಅದಕ್ಕೆ ಇಂದು ಕಾಂಗ್ರೆಸ್ ಪಾಳಯದಲ್ಲಿ ಕೆಲವು ನುರಿತ ರಾಜಕಾರಣಿಗಳು/ ಬುದ್ಧಿಜೀವಿಗಳು ಇದ್ದಾರೆ. ಬಿಜೆಪಿ ಒಂದು ಸಮರ್ಥ ರಾಜಕೀಯ ಪಕ್ಷವಾಗಬೇಕಾದರೆ ನಟರು, ಕ್ರೀಡಾಪಟುಗಳು, ಸ್ವಯಂಸೇವಕರು, ಪತ್ರಕರ್ತರು ಅಷ್ಟೇ ಅಲ್ಲ, ಹೇಗೆ ಯುವ ನಾಯಕರನ್ನು ಕಾಲೇಜುಗಳಿಂದ ಸೆಳೆದುಕೊಳ್ಳಬೇಕು ಎಂಬುದನ್ನೂ ಕಲಿಯಬೇಕು. ಕಮಲದ ಅಕ್ಕ ಪಕ್ಕದಲ್ಲಿ ಮುಳ್ಳುಗಳೊಂದೆರಡು ಇದ್ದರೆ ಕಮಲವನ್ನು ಕಿತ್ತೊಗೆಯುವುದು ಕಷ್ಟ. ಇಲ್ಲವಾದರೆ ಸೋತಿರುವ ಒಂದು ಕೈ, ಅಥವಾ ಹೊಸ ಕಸಬರಿಕೆಯೂ ಸಾಕು ಕಮಲವನ್ನು ಕಿತ್ತೊಗೆಯಲು.

ಈ ಸಂಪೂರ್ಣ ಪ್ರಕ್ರಿಯೆ ಕಾರ್ಪೋರೇಟ್ ಜಗತ್ತಿನಿಂದ ಕಲಿಯಬೇಕು. ದೇಶದಲ್ಲಿ ಕೆಲವು ಪೆಟ್ರೋಕೆಮಿಕಲ್ ಹಾಗೂ ಉಡುಪು ಕಂಪನಿಗಳು ಅತೀ ಕಡಿಮೆ ಸಮಯದಲ್ಲಿ ದೇಶದ ಅತೀ ದೊಡ್ಡ ಕಂಪನಿಯಾಗಿ ಬೆಳೆಯಲು ಇದೇ ಕಾರಣ ಅನ್ನುತ್ತಾರೆ. ಒಂದು ತರಹದ ಕ್ಯಾಂಪಸ್ ಸೆಲೆಕ್ಷನ್ ತರಹಾನೆ. ಆದರೆ ಈ ಕಂಪನಿಗಳು ಕಾಲೇಜಿಗೆ ಹೋಗುವುದಿಲ್ಲ ಆದರ ಬದಲಾಗಿ ಸರಕಾರಿ ಕಛೇರಿಗೆ ಹೋಗುತ್ತಿದ್ದವು. ಈಗಲೂ ಹಾಗೆಯೇ ನಡೆಯುತ್ತಿದೆ. ಅಲ್ಲಿಯ ಬುದ್ಧಿವಂತ ಹಾಗೂ ಚಾಣಾಕ್ಷ ಆಫಿಸರ್ ಗಳನ್ನು ಸರ್ಕಾರ ಕೊಡುವುದಕ್ಕಿಂತ ಹತ್ತು ಪಟ್ಟು ಹಣವನ್ನು ಬಿಸಾಕಿ ತಮ್ಮ ಕಂಪನಿಗೆ ಸೇರಿಸಿಕೊಳ್ಳುವುದರಲ್ಲಿ ಈ ಕಂಪನಿಗಳು ಹೆಸರುವಾಸಿ. ಅವರು ವ್ಯಾಪಾರದಲ್ಲೊಂದೇ ನಿಪುಣರಾಗಿರಲ್ಲ, ಬುದ್ಧಿವಂತ ಮಿದುಳುಗಳನ್ನು ತಮ್ಮ ಬುಟ್ಟಿಯಲ್ಲಿ ಹಾಕಿಕೊಳ್ಳುವುದರಲ್ಲಿ ಕೂಡ ನಿಪುಣರು. ನಿನ್ನೆ ಲಕ್ಷ್ಮಿ ಕೈ ಮೇಲೆ, ಇಂದು ಕಮಲದ ಮೇಲೆ, ನಾಳೆ ಮತ್ತಾರೋ ಹೀಗೆ ಯಾವ ಪಕ್ಷ ಅಧಿಕಾರದಲ್ಲಿ ಇದೇಯೋ ಆ ಸರ್ಕಾರದ ಉನ್ನತ ಹುದ್ದೆಯ ಅಧಿಕಾರಿಗಳನ್ನು ಕಂಪನಿಗೆ ಸೇರಿಸಿಕೊಂಡು ಲಿಂಕ್ ಹುಟ್ಟಿಸಿ ಅಲ್ಲಿಂದ ಎಲ್ಲವನ್ನೂ ಸರಾಗವಾಗಿ ಮಾಡುವುದು ಈ ಲಕ್ಷ್ಮೀಪತಿಗಳ ತಂತ್ರ. ಆದರೆ ಅವರ ಮಾತಿಗೆ, ಕೊಡುವ ಬಿಸ್ಕತ್ತಿಗೆ ಮಾರುಹೋಗಿರುವವರ ಬೆಲೆ, ಮೀನಿನ ಬೆಲೆಯಂತೆ, ಕೆಲವೇ ಸಮಯ. ನಂತರ ಅವರು ಯಾರಿಗೂ ಬೇಡದವರಾಗುತ್ತಾರೆ. ತಮ್ಮನ್ನು ಯಾರು ಮಾರಿಕೊಳ್ಳುವ ಮನಸ್ಥಿತಿ ಹೊಂದಿರುತ್ತಾರೋ ಅವರನ್ನು ನೋಡಿದರೆ ಕೆಲವೊಮ್ಮೆ ನಾಯಕತ್ವದ ವರವ ಪಡೆದು ನಾಯಕನಾಗಿ ಹುಟ್ಟುವುದು ಎಂದರೆ ನಾಯಿ ಪಾಡು ಅನಿಸುತ್ತದೆ. ಮೊದಲು ಜೋರಾಗಿ ಬೊಗಳುತ್ತಾರೆ. ಅವರ ಆ ಬೊಗಳುವಿಕೆಯನ್ನು ಅರಿತು ಶ್ರೀಮಂತರು ಮನೆಗೆ ಕರೆದುಕೊಂಡು ಹೋಗಿ ಸರಪಳಿಯಲ್ಲಿ ಕಟ್ಟಿಹಾಕುತ್ತಾರೆ. ಸ್ವಲ್ಪ ದಿನ ನಾಯಿ ಬೊಗಳುತ್ತಿರುತ್ತದೆ, ಆಮೇಲೆ ಬಾಲವನ್ನು ಅಡ್ಡಾಡಿಸಿಕೊಂಡು ಬಿದ್ದಿರಬೇಕಾಗುತ್ತದೆ. ಮನೆಗೆ ಕಳ್ಳರೇ ಬಂದರು ಬೊಗಳುವುದೋ ಬೇಡವೋ ಎನ್ನುವಷ್ಟು ಹೆದರಿಕೆ ಅದಕ್ಕೆ ಶುರುವಾಗುತ್ತದೆ. ಹಿತಶತ್ರು ಯಾರು, ಹಿತಮಿತ್ರರು ಯಾರು ಎಂದು ಗುರಿಸುವ ಸಂವೇದನಾಶೀಲತೆಯೂ ಮಾಯವಾಗುತ್ತದೆ. ಕೆಲವರ ಸ್ಥಿತಿಯಂತೂ ‘ವಾಸ್ತವ್’ ಸಿನೆಮಾದಲ್ಲಿನ ಸಂಜಯದತ್ತನ ಪಾತ್ರಕ್ಕೆ ಸಿಗುವ ಅಂತ್ಯವೇ ಇವರಿಗೆ ಕೊನೆಗೆ.

ಕನ್ಹಯ್ಯಕುಮಾರ ಮುಂದಿನ ನಾಯಕ ಎನ್ನುವವರಿಗೆ ಒಂದು ಮಾತು. ಬೊಗಳುವ ನಾಯಿ ಎಂದೂ ಕಚ್ಚುವುದಿಲ್ಲ ಎನ್ನುತ್ತಾರೆ ಅಲ್ಲವೇ? ಹಾಗೆಯೇ ಸ್ವಂತ ನಿಲುವಿಲ್ಲದೆ, ಬರೀ ಮನ್ನಣೆಯ ದಾಹವಿದ್ದರೆ ಇಂಥವರು ಒಂದು ಪಕ್ಷದ CEO ಆಗುವ ಅವಕಾಶ ಬಹಳ ಕಡಿಮೆ. ಅದೂ ಕಾಂಗ್ರೆಸ್, RJD, SP, CP(I), ಶಿವಸೇನಾ ಈ ತರಹದ ಮನೆತನದ ಪ್ರಭಾವಿಗಳಿರುವ ಪಕ್ಷಗಳಲ್ಲಿ ಇದು ಅಸಾಧ್ಯ! ಇಂತಹ ಉದಾಹರಣೆ ನಮ್ಮ ಮುಂದೇ ಸಾಕಷ್ಟು ಇದೆ. ಡಾ|| ಮನಮೋಹನ್ ಸಿಂಗ್, ನಂದನ್ ನಿಲೇಕಣಿ ( ರಾಹುಲ್ ಗಾಂಧಿ ಕ್ರಾಂತಿಕಾರಿ ನಾಯಕ ಎನ್ನಬೇಕಾದಾಗ), ಶಶಿ ತರೂರ್, ಬರ್ಕಾ ದತ್ತ, ನೀತಿಶ್ ಕುಮಾರ್ ಇವರೆಲ್ಲರಿಗೂ ಉತ್ತಮ ಪ್ರತಿಭೆಯಿದೆ, ಆದರೆ ಯಾರೋ ಕೊಡುವ ಬಿಸ್ಕತ್ತಿನ ಆಸೆಗೆ ಅವರ ಪಾಡು ನಾಯಿ ಪಾಡಾಗಿದೆ. ಡಾ|| ಮನಮೋಹನ್ ಒಂದು ಕಾಲದಲ್ಲಿ ದೇಶದ ಅತ್ಯಂತ ನಿಷ್ಠಾವಂತ ಅಧಿಕಾರಿ. ಅವರು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ನರಸಿಂಹರಾವ್ ಮಂತ್ರಿಮಂಡಲದಲ್ಲಿ ವಿತ್ತಮಂತ್ರಿಯಾಗಿ ಅವರು ಮಾಡಿದ ಕೆಲಸ ಅದ್ಬುತ ಮತ್ತು ಅಪಾರ. ಇಂದಿನ ಭಾರತದ ಬೆಳವಣಿಗೆ ಅವರ ಕೆಲವು ಆರ್ಥಿಕ ನೀತಿಗಳೇ ಕಾರಣವಾಗಿವೆ. ಆದರೆ ಪ್ರಧಾನಿ ಮಾಡಿದಕೂಡಲೇ ಅವರು ಒಂದು ಮನೆತನಕ್ಕೆ ನಿಷ್ಠಾವಂತರಾದರು. ಅದೆಷ್ಟು ಹಗರಣಗಳಾದವು ಹತ್ತು ವರ್ಷಗಳಲ್ಲಿ? ಭಾರತ ಹತ್ತು ವರ್ಷಗಳಲ್ಲಿ ಇಪ್ಪತ್ತು ವರ್ಷಗಳಷ್ಟು ಹಿಂದಕ್ಕೆ ಜಾರಿತು. ಒಂದು ಮನೆತನಕ್ಕೆ ಹೆದರಿಯೇ ಅಲ್ಲವೇ ಸುಮ್ಮನೆ ಇದ್ದಿದ್ದು?

ಹಾಗೆಯೇ ನೆನಪಿರಲಿ, ಪ್ರಣಬ್, ಮೋದಿ, ಅಮಿತ್ ಷಾ, ಜಯಲಲಿತಾ ಇಂಥವರ ಬದುಕು ಬೇರೆ ಅಲ್ಲ! ಅವರಿಗೂ ಒಬ್ಬ ಗಾಡ್ ಫಾದರ್ ಇದ್ದೇ ಇರುತ್ತಾನೆ. ಆದರೆ ಇವರಿಗೆ ತಮ್ಮ ನಿಲುವು ಮುಖ್ಯ. ಇವರಿಗೆಲ್ಲ ತಾವು ಮಂತ್ರಿಪದವಿ ಕಳೆದುಕೊಳ್ಳುತ್ತೇವೆ ಎಂಬ ಹೆದರಿಕೆ ಇಲ್ಲ ಅಂತ ನನಗೆ ಅನಿಸುತ್ತದೆ. ಪ್ರಣಬ್ ಪ್ರಧಾನಮಂತ್ರಿಯಾಗಬೇಕಿತ್ತು! ಆದರೆ ಅವರು ಕಾಂಗ್ರೆಸ್ ಬಳಗದಲ್ಲಿ ನಡೆಯುತ್ತಿರುವ ಅನೈತಿಕತೆಯ ಬಗ್ಗೆ ಮಾತನಾಡಿದ ಕಾರಣದಿಂದ ಅಲ್ಲವೇ ಅವರನ್ನು ರಾಷ್ಟ್ರಪತಿಯಾಗಿ ನೇಮಕಮಾಡಿದ್ದು? MGR ನಂತರದಲ್ಲಿ ಕರುಣಾನಿಧಿಯ ಗೂಂಡಾಗಳು ಬಂದು ಜಯಲಲಿತನನ್ನು ಬೀದಿಯಲ್ಲಿ ಥಳಿಸಿರಲಿಲ್ಲವೇ? 2002 ರಿಂದ 2010 ರವರಗೆ ಮೋದಿಯನ್ನು ಯಾವ ಯಾವ ಷಡ್ಯಂತ್ರಕ್ಕೆ ಸಿಕ್ಕಿಸಲಿಲ್ಲ? ಲೋಕಸಭೆಯ ಚುನಾವಣೆಯಲ್ಲಿ ಸ್ವತಃ ಅಡ್ವಾಣಿಯೇ ಮೋದಿಯ ಬಗ್ಗೆ ಪರೋಕ್ಷವಾಗಿ ಮನಸ್ತಾಪ ಸೂಚಿಸಿದ್ದರು. ಆದರೆ ಇವರೆಲ್ಲ ಎಲ್ಲವನ್ನೂ ಮೀರಿ ನಿಂತವರು. ಸೋಲಿಗೆ ಹೆದರಿದವರಲ್ಲ. ಮೋದಿಜಿಯವರು “ತನ್ನನ್ನು ಇವತ್ತು ಪ್ರಧಾನಿ ಹುದ್ದೆಯಿಂದ ತೆಗೆಯಿರಿ ತಾನು ಸ್ವಯಂ ಸೇವಕನಾಗಿ ಕೆಲಸಮಾಡಲು ಸಿದ್ಧ “ಎನ್ನುತ್ತಾರೆ. ಇವರೆಲ್ಲ ಸೇನಾಧಿಪತಿಯಾಗಿ ಬಂದು ಚಾಣಕ್ಯನ ಸಹಾಯದಿಂದ ಚಂದ್ರಗುಪ್ತ ಮೌರ್ಯನಾಗಿ ಬೆಳೆದು ನಿಂತವರು. ಆದರೆ ಆ ಸಾಮರ್ಥ್ಯ ಕನ್ಹಯ್ಯ ಕುಮಾರನಂತವರಿಗಿಲ್ಲ. ಒಂದೇ ಸೋಲು, ಒಂದೇ ಹೊಡೆತ ಇವರ ನಿಲುವನ್ನು ಬದಲಾಯಿಸಿ ಬಿಡುತ್ತದೆ, ಸಣ್ಣ ಪುಟ್ಟ ಎದುರೇಟು ಇವರನ್ನು ತಲ್ಲಣಗೊಳಿಸುತ್ತದೆ. ಕೇಜ್ರಿವಾಲನಂತವರ ‘ಮೋದಿ ಇಸ್ ಕವರ್ಡ ಆ್ಯಂಡ್ ಸೈಕೋಪಾತ್’ ಎಂಬ ಟ್ವಿಟ್’ಗಳೇ ಸಾಕ್ಷಿ.

ನೋಡಿ ಒಮ್ಮೆ ಗ್ರಹಿಸಿ ನೋಡಿ ಕಾರ್ಪೊರೇಟ್ ಜಗತ್ತಿನಲ್ಲಿ ಸ್ಟೀವ್ ಜಾಬ್ಸ್, ಮಾರ್ಕ ಜುಕೆರಬರ್ಗ್, ಅಂಬಾನಿ, ಅದಾನಿ ಕಂಪನಿಯ ಮಾಲೀಕರು. ಕಂಪನಿಯ ಕೆಲಸ ಮಾಡಲು ಸಾವಿರಾರು ಅಧಿಕಾರಿಗಳನ್ನು ಮತ್ತು ಕಾರ್ಮಿಕರನ್ನು ನೇಮಿಸಿಕೊಳ್ಳುವವರು. ರಾಜಕೀಯ ಜಗತ್ತಿನಲ್ಲಿ ಬಾಳಾಸಾಹೇಬ್ ಠಾಕ್ರೆ, ಜಯಲಲಿತ, ಮೋದಿ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಪುಟಿನ್ ತಮ್ಮದೇ ಹೊಸ ಸಾಮ್ರಾಜ್ಯ ಕಟ್ಟಿ ಅಲ್ಲಿಗೆ ಮನಮೋಹನ ಸಿಂಗ್, ಸುಬ್ರಹ್ಮಣ್ಯ ಸ್ವಾಮಿ, ಪನ್ನೀರು ಸೆಲ್ವಂ, ಕ್ರೆಜಿವಾಲ್, ಬರ್ಕಾ ದತ್ತ್, ಕನ್ಹಯ್ಯ ಕುಮಾರ ಇಂಥವರನ್ನು ಬಳಸಿಕೊಳ್ಳುತ್ತಾರೆ. ಕನ್ಹಯ್ಯ ಕುಮಾರ ದೇಶದ ಮುಂದಿನ ನಾಯಕ ಎಂದು ಘೋಷಿಸಿದ ನ್ಯೂಸ್‘ಗಳಿಗೆ ಹೆಚ್ಚಾಗಿರುವುದು ಬುದ್ಧಿವಂತಿಕೆ ಅಲ್ಲ, ಐಡೆಂಟಿಟಿ ಕ್ರೈಸಿಸ್..! ಭಾಷಣವನ್ನು ಕೇಳಿ, ಇವನು ದೇಶವನ್ನೇ ಬದಲು ಮಾಡಬಹುದು ಎಂಬ ಕನಸು ನನಗೆ ಅರವಿಂದ್ ಕ್ರೇಜಿವಾಲ್ ಮೇಲೂ ಇತ್ತು. ಪಾಪ, ಮುಗ್ಧ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಕ್ರಾಂತಿಕಾರಿ ಯುವನಾಯಕ ಎನ್ನುತ್ತಾರೆ. ಹೀಗಿರುವಾಗ ಜನರ ಗಮನ ಸೆಳೆಯಲು, ಜನರ ದಿಕ್ಕು ತಪ್ಪಿಸಲು ಕನ್ಹಯ್ಯನ ಬಗ್ಗೆ ಮೀಡಿಯಾದಲ್ಲಿ ಕಂಡುಬಂದ ಹೈಪ್ ಆಶ್ಚರ್ಯವೇ ಇಲ್ಲ. ಆದರೆ ಕನ್ಹಯ್ಯ ಜೈಲಿಗೆ ಹೋಗುವಾಗ ಭಾರತದಿಂದ ಆಜಾದಿ ಎಂದವನು ಜೈಲಿನಿಂದ ಹೊರಗಡೆ ಬಂದಮೇಲೆ ಭಾರತದೊಳಗೆ ಆಜಾದಿ ಎನ್ನುತ್ತಾನೆ..! ಜೈಲಿಗೆ ಹೋಗುವ ಮುನ್ನ ಅಪ್ಜಲ್ ಗುರು ಇವನ ಆರಾಧಕ, ಜೈಲಿನಿಂದ ಬಂದಮೇಲೆ ಬಾಬಾ ಸಾಹೇಬ್ ಇವನ ಆದರ್ಶ..! ಸೈನಿಕರು ದೇಶದ್ರೋಹಿಗಳು ಎನ್ನುತ್ತಾನೆ, ಮಾವೋವಾದಿಗಳು ಇವನ ಕಣ್ಣಲ್ಲಿ ದೇಶಪ್ರೇಮಿಗಳಾಗಿ ಕಾಣುತ್ತಾರೆ. ಹುಣ್ಣಿಮೆ ಅಮವಾಸ್ಯೆ ಆಗುವುದರೊಳಗೆ ಬದಲಾಗುವ ನಿಲುವುಗಳೊಂದಿಗೆ ಹೇಗೆ ರಾಷ್ಟ್ರ ನಾಯಕ ಆಗುವನೋ ಸಾಮಾನ್ಯ ಜೀವಿಯಾದ ನನ್ನ ಗ್ರಹಿಕೆಗೆ ಸಿಗುತ್ತಿಲ್ಲ. ಇನ್ನೂ ಹತ್ತು ವರ್ಷ ಪಿ.ಎಚ್.ಡಿ ಮಾಡುವವನಿದ್ದಾನೆ..!!!! ಇವನ್ನೆಲ್ಲ ಕೂಲಂಕುಷವಾಗಿ ನೋಡಿದರೆ ಕ್ಯಾಂಪಸ್ ಸೆಲೆಕ್ಷನ್ ಏನೋ ಆಗಿದೆ, ಪ್ರೊಬೇಷನರಿ ಸಮಯದಲ್ಲೇ ಹೊರಗೆ ಹಾಕುವ ಸಾಧ್ಯತೆಗಳೇ ಹೆಚ್ಚು. ಕೃಷ್ಣಾಷ್ಠಮಿ ಬರುವದರೊಳಗೆ ಕನ್ಹಯ್ಯನ್ನು ಜನ ಮರೆತು ಬಿಡುತ್ತಾರೇನೋ?

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!