ಅಂಕಣ

ಇದು ಹರ್ಷನ ಐದು ವರುಷಗಳ ಪರಿಶ್ರಮಕ್ಕೆ ಸಿಕ್ಕ ಹರುಷ

ಐ.ಎ.ಎಸ್ ಪರೀಕ್ಷೆ ಎಂದು ಜನಪ್ರಿಯವಾಗಿ ಕರೆಯಲ್ಪಡುವ, ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಈ ಪರೀಕ್ಷೆ, ಭಾರತದಲ್ಲಿ ಪ್ರಚಲಿತದಲ್ಲಿರುವ ಅತ್ಯಂತ ಕಠಿಣ ಪರೀಕ್ಷೆಗಳಲ್ಲೊಂದು. ಪ್ರತೀ ವರ್ಷ ಚಾಚೂ ತಪ್ಪದೇ ನಡೆಸಲ್ಪಡುವುದೇ ಈ ಪರೀಕ್ಷೆಯ ಅಗ್ಗಳಿಕೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದೂ ಕೂಡಾ ಅಂದುಕೊಂಡಷ್ಟು ಸುಲಭದ ಮಾತಲ್ಲ. ಒಂದೆರಡು ಬಾರಿ ವಿಫಲರಾದರೂ,ಮತ್ತೆ ಆತ್ಮವಿಶ್ವಾಸ ಬೆಳೆಸಿ, ಬರೆದು ಉತ್ತೀರ್ಣರಾಗುವವರು ಸಾಮಾನ್ಯರೇನಲ್ಲ. ಸಾಧಿಸಿಯೇ ಬಿಡಬೇಕೆಂಬ ಅಸಾಧಾರಣ ಛಲವುಳ್ಳವರು ಮಾತ್ರ ಇದನ್ನು ಸಾಧಿಸಿಯೇ ತೀರುತ್ತಾರೆ. ಪರೀಕ್ಷೆ ಬರೆಯುವ ಎಷ್ಟೋ ಲಕ್ಷ ಜನರಲ್ಲಿ ಕೆಲವರಷ್ಟೇ ಯಶಸ್ವಿಯಾಗುತ್ತಾರೆ. ನಮ್ಮ ದಕ್ಷಿಣ ಕನ್ನಡದ ಯುವಕ, ಶ್ರೀಹರ್ಷ ಈ ಸಾಧನೆಯನ್ನು ಮಾಡಿರುವ ಸಂತೋಷದ ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳಲು ನಾನೂ ಸಂತೋಷ ಪಡುತ್ತೇನೆ.

ಕೇಂದ್ರ ಲೋಕಸೇವಾ ಆಯೋಗವು 2014-15 ನೇ ಸಾಲಿನಲ್ಲಿ ನಡೆಸಿರುವ ಭಾರತೀಯ ನಾಗರಿಕ ಸೇವಾ ಪರೀಕ್ಷೆಯ ದ್ವಿತೀಯ ಹಂತದ ಆಯ್ಕೆ ಪ್ರಕ್ರಿಯೆಯು ಪೂರ್ಣಗೊಂಡಿದ್ದು,ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಉದಯಗಿರಿ ನಿವಾಸಿ, ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಶ್ರೀಹರ್ಷ ನೆಟ್ಟಾರ್ ಆಯ್ಕೆಗೊಂಡಿದ್ದಾರೆ. ಈ ಸಾಲಿನಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವ ಮೂರ್ವರಲ್ಲಿ ಒಬ್ಬರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಏಕಮೇವ ಅಭ್ಯರ್ಥಿ ಎನ್ನುವುದು ವಿಶೇಷ. ಕೇಂದ್ರ ಸರಕಾರದ ವಿವಿಧ ಇಲಾಖೆಗಳಿಗೆ ಎರಡನೇ ಹಂತದಲ್ಲಿ ಆಯ್ಕೆಗೊಂಡ 126 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ಲೋಕಸೇವಾ ಆಯೋಗವು ಜನವರಿ 19 ರಂದು ಬಿಡುಗಡೆಗೊಳಿಸಿತ್ತು. ಇದರಲ್ಲಿ ಶ್ರೀಹರ್ಷ ಅವರಿಗೆ 6ನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ, ಉತ್ತರದವರದ್ದೆ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ದಕ್ಷಿಣದವರೂ ಸಾಧನೆ ಮಾಡಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ.

ಶ್ರೀಹರ್ಷರವರು ಹುಟ್ಟಿದ್ದು ಸುಳ್ಯ ತಾಲೂಕಿನ ಗ್ರಾಮೀಣ ಪ್ರದೇಶವಾದ ಬಾಳಿಲದಲ್ಲಿ. ಅವರದು ಕೃಷಿಯನ್ನು ನೆಚ್ಚಿದ ಕುಟುಂಬ. ತಂದೆ ಗೋಪಾಲಕೃಷ್ಣ ಭಟ್ ನೆಟ್ಟಾರು ಮತ್ತು ತಾಯಿ ವಿಜಯಾ ನೆಟ್ಟಾರು. ಅಣ್ಣನಿಗೆ ಸಮನಾದ ಇಬ್ಬರು ತಮ್ಮಂದಿರು,ಅವಿನಾಶ್ ಭಟ್ ಮತ್ತು ಧರ್ಮತೇಜ. ಅವರು ಬಹು ರಾಷ್ಟೀಯ ಕಂಪೆನಿಯಲ್ಲಿ ಇಂಜಿನಿಯರ್ ವೃತ್ತಿ ನಡೆಸುತ್ತಿದ್ದಾರೆ. ಪತ್ನಿ ಅಂಬಿಕಾ, ಅವರು ಅಂತಿಮ ವರ್ಷದ ಎಂ.ಟೆಕ್ ವ್ಯಾಸಾಂಗವನ್ನು ಮಾಡುತ್ತಿದ್ದಾರೆ .

ಈಗಿನವರು ಕನ್ನಡ ಮಾಧ್ಯಮ ಎಂದ ಕೂಡಲೇ ಮೂಗು ಮುರಿಯುತ್ತಿರಬೇಕಾದರೆ ಶ್ರೀಹರ್ಷರವರು 10ನೇ ತರಗತಿಯವರೆಗೂ ಓದಿದ್ದು, ತಮ್ಮ ಮನೆಯ ಸಮೀಪದ ಬಾಳಿಲ ವಿದ್ಯಾಭೋಧಿನೀ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲೇ. ಓದಿನ ಜತೆಗೆ ಭರತನಾಟ್ಯ, ಭಾಷಣ, ಚೆಸ್ ಮುಂತಾದ ಪಠ್ಯೇತರ ಚಟುವಟಿಕೆಗಳಲ್ಲೂ ಗುರುತಿಸಿಕೊಂಡಿದ್ದರು. ಅಲ್ಲಿಂದ ತೇರ್ಗಡೆಯಾದ ಅವರು ಪಿ.ಯು ವಿದ್ಯಾಭ್ಯಾಸಕ್ಕೆ ಆರಿಸಿದ್ದು ಉಜಿರೆಯ ಎಸ್.ಡಿ.ಯಂ ಪದವಿ ಪೂರ್ವ ಕಾಲೇಜನ್ನ. ಅಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದಲ್ಲದೇ, ತಾಂತ್ರಿಕ ಶಿಕ್ಷಣದ ಪ್ರವೇಶಾತಿಗೆ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ 198ನೇ ರಾಂಕ್ ಪಡೆಯುವುದರ ಮೂಲಕ ಭೇಷ್ ಎನಿಸಿಕೊಂಡಿದ್ದರು. ನಂತರದ ಇಂಜಿನಿಯಂಗ್ ಶಿಕ್ಷಣವನ್ನು ಮೈಸೂರಿನ ಎಸ್.ಜೆ.ಸಿ ಯಲ್ಲಿ ಪೂರೈಸಿ, ಈಗ ಪ್ರಸ್ತುತ ಪ್ರತಿಷ್ಠಿತ ರಾಬರ್ಟ್ ಬಾಷ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ.

ಇಂಜಿನಿಯರ್ ಕೆಲಸ ನಡೆಸಿ ಲಕ್ಷಾಂತರ ರುಪಾಯಿ ದುಡಿದು ಇತರರಂತೆ ಆರಾಮವಾಗಿರಬಹುದಿತ್ತು. ಆದರೆ ಅಂತಹ ಯೋಚನೆ ಶ್ರೀಹರ್ಷರವರನ್ನು ಒಮ್ಮೆಯೂ ಕೂಡಾ ಕಾಡಲೇ ಇಲ್ಲ. ಅವರ ಮುಂದೆ ಇದ್ದುದು ಭಾರತೀಯ ನಾಗರಿಕ ಸೇವೆಯ ಗುರಿ ಮಾತ್ರ. ಅದೊಂದೇ ಅವರನ್ನು ಎಡೆಬಿಡದೆ ಕಾಡುತ್ತಿದ್ದುದು. ಒಟ್ಟಾರೆಯಾಗಿ 5 ಬಾರಿ ಪರೀಕ್ಷೆಯನ್ನು ಎದುರಿಸಿದ್ದ ಅವರು, ಮೂರು ಬಾರಿ ಸಂದರ್ಶನಕ್ಕೂ ಹಾಜರಾಗಿ ಬಂದಿದ್ದರು. ಪ್ರತೀ ಬಾರಿ ಕೂಡಾ ಅದೃಷ್ಟ ಕೈಕೊಡುತ್ತಿತ್ತೇನೋ ಎನ್ನಬಹುದು. ಆದರೆ ಪ್ರಯತ್ನ ನಿಲ್ಲಲಿಲ್ಲ. ತನ್ನ ಗುರಿತಿಂದ ಹರ್ಷ ವಿಮುಖರಾಗಲಿಲ್ಲ. ವಿಶೇಷವೆಂದರೆ ಅವರು ತರಬೇತಿಯನ್ನು ಪಡೆದುಕೊಂಡಿದ್ದು ಆರಂಭದ ವರ್ಷ ಮಾತ್ರ. ಯು.ಪಿ.ಎಸ್.ಸಿ ಎಂದಾಕ್ಷಣ ದೂರದ ದೆಹಲಿಯಲ್ಲೋ, ಮುಂಬಯಿಯಲ್ಲೋ ತರಬೇತಿ ಪಡೆಯುವವರೇ ಜಾಸ್ತಿ. ಆದರೆ ಇವರು ತರಬೇತಿ ಪಡೆದುಕೊಂಡಿದ್ದು ಬೆಂಗಳೂರಿನಲ್ಲೇ. ನಂತರ ಅವರ ಸ್ವಾಧ್ಯಯನವೇ ಯಶಸ್ಸಿನ ಗುಟ್ಟಾಯಿತು.

ಅವರ ಸಾಧನೆಯ ಹಾದಿಯನ್ನ ಅವರ ಬಾಯಲ್ಲೇ ಕೇಳಿ ನೋಡೋಣ.

ನಮಸ್ಕಾರ ಶ್ರೀಹರ್ಷ. ಅಭಿನಂದನೆಗಳು ನಿಮಗೆ…

– ನಮಸ್ಕಾರ..ಧಾಂಕ್ ಯೂ..

ನಿಮ್ಮ ಯು.ಪಿ.ಯಸ್.ಸಿ ಕನಸು ಮೊಳಕೆ ಒಡೆದಿದ್ದು ಯಾವಾಗ ಮತ್ತು ಪ್ರೇರಣೆ ಯಾರು..?

– ಹೈಸ್ಕೂಲು ದಿನಗಳಲ್ಲೇ ನನಗೆ ನಾಗರಿಕ ಸೇವೆಯ ಬಗ್ಗೆ ಆಸಕ್ತಿ ಹುಟ್ಟಿತ್ತು. ತಂದೆಯವರು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಾಗಿದ್ದು, ಸ್ವಚ್ಛ ಸರ್ಕಾರಿ ವ್ಯವಸ್ಥೆ ಬರಬೇಕೆಂಬ ಅಭಿಲಾಷೆಯನ್ನು ಹೊಂದಿದ್ದರು. ಅದೇ ಭಾವನೆ ನನ್ನಲ್ಲಿಯೂ ಮೂಡುವಂತೆ ಮಾಡಿದರು. ಅದೇ ನನಗೆ ಪ್ರೇರಣೆ.

ಆಯ್ಕೆ ಪ್ರಕ್ರಿಯೆಯನ್ನು ವಿವರಿಸುವಿರಾ ?

– ಪರೀಕ್ಷೆ ಮೂರು ಹಂತಗಳಲ್ಲಿ ನಡೆಯುತ್ತೆ. ಮೊದಲನೆಯದು ಪೂರ್ವಭಾವೀ ಪರೀಕ್ಷೆ. ಈ ಹಂತದಲ್ಲಿ 2 ಬಹು ಆಯ್ಕೆ ಪ್ರಶ್ನೆ ಪತ್ರಿಕೆಗಳಿರುತ್ತದೆ. ಈ ಹಂತಕ್ಕೆ, ದೇಶದಲ್ಲಿ ಸರಿಸುಮಾರು 7 ಲಕ್ಷ ಮಂದಿ ಹಾಜರಾಗುತ್ತಾರೆ. ಎರಡನೆಯದು ಮುಖ್ಯ ಪರೀಕ್ಷೆ. ಇಲ್ಲಿ 7 ಪತ್ರಿಕೆಗಳಿರುತ್ತದೆ. ಎಲ್ಲಾ ಪತ್ರಿಕೆಗಳೂ ವಿವರಣಾತ್ಮಕವಾಗಿರುತ್ತದೆ. ಈ ಹಂತಕ್ಕೆ 1750 ಅಂಕಗಳನ್ನು ನಿಗದಿ ಪಡಿಸಲಾಗಿದೆ.ಎರಡನೇ ಹಂತದಲ್ಲಿ ಸುಮಾರು 3000 ಮಂದಿಯನ್ನು ಸಂದರ್ಶಕ್ಕೆ ಆಯ್ಕೆ ಮಾಡುತ್ತಾರೆ. ಸಂದರ್ಶನಕ್ಕೆ 250 ಅಂಕಗಳನ್ನು ನಿಗದಿಪಡಿಸಲಾಗಿದೆ. ಸಂದರ್ಶನದ ನಂತರವೂ ಅಭ್ಯರ್ಥಿಗಳ ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕ ಮತ್ತು ಸಂದರ್ಶನದಲ್ಲಿ ಗಳಿಸಿದ ಅಂಕ, ಇವುಗಳೆರಡನ್ನೂ ಒಟ್ಟು ಸೇರಿಸಿ ಮೆರಿಟ್ ಪಟ್ಟಿ ಸಿದ್ಧಗೊಳಿಸಿ,ಅಂತಿಮವಾಗಿ ಆಯಾ ವರ್ಷ ಖಾಲಿ ಇರುವ ಹುದ್ದೆಗನುಗುಣವಾಗಿ ಅಭ್ಯರ್ಥಿಗಳನ್ನು ತೇರ್ಗಡೆಗೊಳಿಸಲಾಗುತ್ತೆ.

ತಾಲೂಕಿಗೆ ಮೊದಲ ಆಯ್ಕೆ !! ಈ ಸಂದರ್ಭದಲ್ಲಿ ಏನನಿಸ್ತಿದೆ ?

– ತುಂಬಾ ಖುಷಿಯಾಗಿದೆ. ತಾಲೂಕಿನಿಂದ ಮುಂದೆ ಹಲವು ಮಂದಿ ಪರೀಕ್ಷೆ ಬರೆಯಲು ನನ್ನ ಯಶಸ್ಸು ಸ್ಪೂರ್ತಿಯಾದರೆ, ತುಂಬಾ ಸಂತೋಷ.

ಯು.ಪಿ.ಎಸ್.ಸಿ ಪರೀಕ್ಷೆಗೆ ತರಬೇತಿ ಅನಿವಾರ್ಯವೇ? ನಿಮ್ಮ ಅಭಿಪ್ರಾಯವೇನು?

– ತರಬೇತಿ ಅನಿವಾರ್ಯವೇನಲ್ಲ. ತರಬೇತಿ ಪಡೆಯದೆಯೇ ಪರೀಕ್ಷೆ ಪಾಸಾದವರಿದ್ದಾರೆ. ಅಂಥವರಿಗೆ ಸೂಕ್ತ ಸಲಹೆ, ಸೂಚನೆ ನೀಡಲು ಆಗಲೇ ತರಬೇತಿ ಪಡೆದ ಹತ್ತಿರದ ಸ್ನೇಹಿತರಿರುತ್ತಾರೆ. ಈ ಪರೀಕ್ಷೆಯ ಸಿಲೆಬಸ್ ಬಹಳ ವಿಸ್ತಾರವಾದುದರಿಂದ ಯಾವುದು ಓದಬೇಕೆಂದು ನಿರ್ಧರಿಸುವುದು ಎಷ್ಟು ಪ್ರಾಮುಖ್ಯವೋ, ಅಂತೆಯೇ ಓದಬಾರದ್ದನ್ನು ನಿರ್ಧರಿಸುವುದು ಸಹ. ಇಂತಹ ವಿಷಯಗಳ ಬಗೆಗಿನ ಸೂಕ್ತ ಮಾಹಿತಿ ತರಬೇತಿ ಸಂಸ್ಥೆಯಲ್ಲಿ ತಿಳಿಯುತ್ತದೆ. ಅದಲ್ಲದೇ ತರಬೇತಿ ಸಮಯದಲ್ಲಿ ಸಮಾನ ಆಸಕ್ತ ಗೆಳೆಯರ ಜೊತೆ ನಡೆಸುವ ಚರ್ಚೆ, ಸಂದೇಹ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಒಟ್ಟಿನಲ್ಲಿ ಹೇಳುವುದಾದರೆ, ಆಕಾಂಕ್ಷಿಗಳು ಸೂಕ್ತ ತರಬೇತಿಗೆ ಸೇರುವುದು ಒಳಿತು, ಎಂಬುದು ನನ್ನ ಅಭಿಪ್ರಾಯ.

ನಿಮ್ಮ ದಿನನಿತ್ಯದ ಓದಿನ ಕ್ರಮ ಹೇಗಿತ್ತು?

– ಯಶಸ್ಸು ದೊರಕಿದ್ದು 5ನೇ ಪ್ರಯತ್ನದಲ್ಲಿ. ಹಿಂದಿನ ಪ್ರಯತ್ನಗಳಲ್ಲಿ ವೇಳಾಪಟ್ಟಿ ಸಿದ್ಧಪಡಿಸಿ ಓದಿದ್ದೆ. ಆದರೆ ಈ ಬಾರಿ ಹಾಗೇನೂ ಸಿದ್ಧಪಡಿಸಿದ ಚೌಕಟ್ಟಿನಲ್ಲಿ ಓದಿಲ್ಲ. ಕೆಲಸದ ಜತೆಗೆ ಸಮಯ ದೊರೆತಾಗ ಓದು ನಡೆಸಿದೆ.

ನಿಮ್ಮ ಮುಂದಿನ ಗುರಿಯೇನು?

– ಕೇಂದ್ರ ಸರ್ಕಾರದಲ್ಲಿ ನನ್ನ ಸರ್ಕಾರಿ ಸೇವೆಯನ್ನು ಆರಂಭಿಸಲು ಕುತೂಹಲದಿಂದ ಕಾಯುತ್ತಿದ್ದೇನೆ. ಯಾವ ಇಲಾಖೆ ಎಂಬ ಮಾಹಿತಿ ಸಿಗಲು ಇನ್ನು ಕೆಲವು ತಿಂಗಳುಗಳೇ ಬೇಕು. ಯಾವ ಇಲಾಖೆಯಲ್ಲಿ ನಿಯೋಜಿಸಲ್ಪಡುತ್ತೇನೋ, ಆ ಇಲಾಖೆಯಲ್ಲಿ ಸಂವಿಧಾನದ ಮೌಲ್ಯಗಳಿಗೆ ಅನುಸಾರವಾಗಿ ಕೆಲಸ ಮಾಡಿ, ಪ್ರಧಾನಿಯವರ ಶ್ರೇಷ್ಟ ಭಾರತದ ನಿರ್ಮಾಣಕ್ಕೆ ನನ್ನ ಪಾಲಿನ ಋಣವನ್ನು ತೀರಿಸಲು ಬಯಸುತ್ತೇನೆ.

ಈ ಸಂದರ್ಭದಲ್ಲಿ ನೀವು ಯಾರೆಲ್ಲರ ಪ್ರೋತ್ಸಾಹವನ್ನು ಸ್ಮರಿಸುತ್ತೀರಿ?

– ಕುಟುಂಬದ, ಗೆಳೆಯರ ಪ್ರೋತ್ಸಾಹ ನಿಜಕ್ಕೂ ಸ್ಮರಣೀಯ. ಮುಖ್ಯವಾಗಿ ತಂದೆತಾಯಿಯ ಪ್ರೋತ್ಸಾಹ, ಪತ್ನಿಯ ಬೆಂಬಲ ಹಾಗೂ ಸಹೋದರರ ನಿರಂತರ ಆಸರೆಯನ್ನು ನಾನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ.

ಮುಂದಿನ ಯು.ಪಿ.ಎಸ್.ಸಿ ಆಕಾಂಕ್ಷಿಗಳಿಗೆ ನಿಮ್ಮ ಸಲಹೆ ಏನು?

– ಯು.ಪಿ.ಎಸ್.ಸಿ ಪರೀಕ್ಷೆ ಬರೆಯಲು ವಿಶೇಷ ಅರ್ಹತೆ ಬೇಕಿಲ್ಲ. ಇಂಗ್ಲೀಷ್ ಮಾಧ್ಯಮದಲ್ಲೇ ಕಲಿತಿರಬೇಕಿಲ್ಲ. ಹೈಸ್ಕೂಲ್ ಹಂತದಲ್ಲಿ 90 ಶೇಖಡಾ ಅಂಕ ಪಡೆದವರು ಮಾತ್ರ ಪರೀಕ್ಷೆ ಪಾಸಾಗಬಹುದೆಂಬ ತಪ್ಪು ಕಲ್ಪನೆ ಬೇಕಾಗಿಲ್ಲ.ಯಾವುದೇ ಪದವಿ ಪಡೆದವರು, ಸರಿಯಾದ ಮಾಹಿತಿ ಪಡೆದು ಪರೀಕ್ಷೆ ಎದುರಿಸಿ, ಯಶಸ್ಸು ಗಳಿಸಬಹುದು.

ಶ್ರೀಹರ್ಷ, ನಿಮಗೆ ಮತ್ತೊಮ್ಮೆ ಅಭಿನಂದನೆಗಳು. ನಿಮ್ಮ ಈ ಸಾಧನೆ ಇನ್ನಷ್ಟು ಜನರಿಗೆ ಪ್ರೇರಣೆಯನ್ನು ನೀಡಲಿ ಎನ್ನುವ ಹಾರೈಕೆ ನಮ್ಮದು. ರಿಡೂ ಕನ್ನಡ ಕನ್ನಡ ಕಡೆಯಿಂದ “ ಆಲ್ ದಿ ಬೆಸ್ಟ್”…

ಇದೆಲ್ಲದಕ್ಕಿಂತಲೂ ಮುಕುಟಪ್ರಾಯವೆಂಬತೆ, ಅವರೊಬ್ಬ ಸಹೃದಯಿ ಮತ್ತು ಶುದ್ಧ ಮನಸ್ಸಿನ ವ್ಯಕ್ತಿತ್ವ. ಇಷ್ಟೆಲ್ಲ ಸಾಧನೆಯ ಬಳಿಕವೂ, ಅವರ ಸಾಧನೆಗೆ ಸಹಕರಿಸಿದ ಯಾವೊಬ್ಬನನ್ನ ಕೂಡಾ ಮರೆಯಲೇ ಇಲ್ಲ. ಪ್ರತಿಯೊಬ್ಬನ ಬಗೆಗಿನ ತಮ್ಮ ಕೃತಜ್ಞತೆಯನ್ನ ತಮ್ಮ ಫೇಸ್ಬುಕ್ ಪೇಜಿನಲ್ಲಿ ವ್ಯಕ್ತಪಡಿಸಿ ಎಲ್ಲರ ಮನಸ್ಸನ್ನು ಗೆದ್ದರು. ಮತ್ತೆ ಅವರ ಸಾಧನೆಯನ್ನು ಶ್ಲಾಘಿಸುತ್ತಾ, ಭಾರತೀಯ ನಾಗರಿಕ ಸೇವೆಗೆ ಸೇರಲಿರುವ ಅವರು ನಮ್ಮ ನಾಡಿನ ಹೆಮ್ಮೆಯ ದಕ್ಷ ಅಧಿಕಾರಿಯಾಗಿ ಮೂಡಿಬರಲಿ ಎನ್ನುವ ಆಶಯವನ್ನು ವ್ಯಕ್ತಪಡಿಸೋಣ..

-ಕೃಷ್ಣ ಕುಮಾರ್ ಪಟ್ಟಾಜೆ

pgkumara@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!