ಅಂಕಣ

ಬುದ್ಧಿಜೀವಿಗಳಿಗೆ, ಸಂಸ್ಕೃತವೆಂಬ ಹಿತ್ತಲ ಗಿಡ ಮದ್ದಲ್ಲ ಎಂದೆನಿಸುವುದೇತಕೆ?

ಏಪ್ರಿಲ್ 2007 ರಲ್ಲಿ ಆಗಿನ ರಾಷ್ಟ್ರಪತಿಯಾಗಿದ್ದ ಡಾ|| ಅಬ್ದುಲ್ ಕಲಾಮ್ ರವರು ಗ್ರೀಸ್ ಪ್ರವಾಸಕ್ಕೆ ಹೋಗಿದ್ದಾಗ ಅಲ್ಲಿನ ರಾಷ್ಟ್ರಧ್ಯಕ್ಷರು ಡಾ|| ಕಲಾಮ್ ರವರನ್ನು ಸ್ವಾಗತಿಸಿದ್ದು ಬೇರೆ ಯಾವ ಭಾಷೆಯಲ್ಲೂ ಅಲ್ಲ, ಆದರೆ ಅಪ್ಪಟ ಸಂಸ್ಕೃತದಲ್ಲಿ. ಆಶ್ಚರ್ಯವೇ? ಗ್ರೀಕ್ ರಾಷ್ಟ್ರಪತಿ ಸಂಸ್ಕೃತ ಯಾವಾಗ ಕಲಿತರು? ಅವರಿಗೆ ಅದೇಕೆ ಸಂಸ್ಕೃತ ಭಾಷೆಯ ಮೇಲೆ ಒಲವು? ಅವರೇ ಹೇಳಿದ್ದು ಹೀಗೆ “ನಿಮ್ಮನ್ನು ಜಗತ್ತಿನ ಪುರಾತನ ಹಾಗೂ ಅತ್ಯಂತ ಗೌರವಾನ್ವಿತ ಭಾಷೆಯಿಂದ ಸ್ವಾಗತಿಸಲು ಬಯಸುತ್ತೇನೆ. ನಾನು ಜರ್ಮನಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಸಂಸ್ಕೃತ ಭಾಷೆಯನ್ನು ಕಲಿತಿದ್ದೆ, ನಾನು ತುಂಬಾ ಅದೃಷ್ಟವಂತ”. 2003 ಸೆಪ್ಟೆಂಬರ್ ಆರನೇಯ ತಾರೀಖು, ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಒಂದು ಸಭೆಯಲ್ಲಿ ಹೇಳುತ್ತಾರೆ, ” Through our actions together, all the people of SA will be able to live upto the wise words from the Rig Veda ‘ Sangachchadwam, Samvadadwam”. ದಕ್ಷಿಣ ಆಫ್ರಿಕಾದಲ್ಲಿ ಋಗ್ವೇದವನ್ನು ಸಾಲುಗಳು! 2010ರ ಕಾಮನವೆಲ್ತ ಕ್ರೀಡಾ ಉದ್ಘಾಟನಾ ಸಮಾರಂಭದಲ್ಲಿ ಬ್ರಿಟನ್ ದೇಶದ ಮಕ್ಕಳು ಹಾಡಿದ್ದು ಸಂಸ್ಕೃತ ಶ್ಲೋಕಗಳನ್ನು. ಅವರ ಎದುರು ನಿಂತಿದ್ದಳು ಬ್ರಿಟಿಷ್ ರಾಣಿ ಎಲಿಜಬೆತ್. ಅದೇ ಏಕೆ 2009ರಲ್ಲಿ ಬರಾಕ ಓಬಾಮ ವೈಟ್ ಹೌಸಿನೊಳಗೆ ಜಗತ್ತಿನ ಶಾಂತಿಗೋಸ್ಕರ ಮಂತ್ರಘೋಷದ ನಡುವೆ ದೀಪವನ್ನು ಬೆಳಗಿದ್ದನ್ನು ಜಗತ್ತೇ ನೋಡಿದೆ.

ಆದರೆ ಇತ್ತೀಚಿಗೆ ನಮ್ಮ ದೇಶದಲ್ಲೇ ಸಂಸ್ಕೃತದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಸ್ವತಂತ್ರ ಭಾರತದಲ್ಲಿ ಸಂಸ್ಕೃತ ಜನಸಾಮಾನ್ಯರಿಗೂ ಅಧ್ಯಯನ ಮಾಡಲು ದೊರಕಿತ್ತುರುವಾಗ, ಅದರ ಆಳಕ್ಕೆ ಹೋಗಿ ‘ಮಾನವ ಜಾತಿ’ಯ ಪ್ರಗತಿಗೋಸ್ಕರ ಬಳಸುವ ಬದಲು ಸಂಸ್ಕೃತಕ್ಕೂ ಒಂದು ಜಾತಿ, ಪಂಥವನ್ನು ಕೊಟ್ಟು ಕೀಳಾಗಿ ನೋಡುತ್ತಿರುವುದು ತುಂಬಾ ವಿಷಾದನೀಯ. ಸಂಸ್ಕೃತ ತನ್ನ ಸಂಸ್ಕೃತಿಯನ್ನು ಪಾಶ್ಚಾತ್ಯ ದೇಶಗಳಲ್ಲಿ ಪಸರಿಸತೊಡಗಿದ್ದು ಹದಿನೆಂಟನೇಯ ಶತಮಾನದಿಂದ. ಭಗವದ್ಗೀತೆಯನ್ನು 1785ರಲ್ಲಿ ಮೊದಲ ಬಾರಿಗೆ ಇಂಗ್ಲಿಷಿಗೆ ಚಾರ್ಲ್ಸ್‌ ವಿಲಕಿನ್ ರವರಿಂದ ಭಾಷಾಂತರ ಗೊಂಡಿತು. 1787 ರಲ್ಲಿ ಅದನ್ನು ಅಬ್ಬೆ ಪರಾವಡ್ ಫ್ರೆಂಚ್ ಭಾಷೆಗೆ ಅನುವಾದಮಾಡಿದರು. ಇದಾದ ದಶಕದಲ್ಲೇ ಯುರೋಪಿನ ಹಲವಾರು ಭಾಷೆಗಳಿಗೆ ಭಗವದ್ಗೀತೆ ಹಾಗೂ ಹಲವು ಸಂಸ್ಕೃತ ಗ್ರಂಥಗಳು ಅನುವಾದಗೊಂಡವು. ಅದೆಲ್ಲ ಮಾಹಿತಿ ಸರಿ, ಆದರೆ ಸಂಸ್ಕೃತ ಜಗತ್ತಿಗೆ ಕೊಟ್ಟ ಕೊಡುಗೆ ಏನಪ್ಪಾ? ಎಂದು ಕೇಳಿದರೆ, ಆರ್ಥರ್ ಎಂಬ ಸಂಶೋಧಕಾರರ ಹೇಳಿಕೆ ಎಲ್ಲರನ್ನೂ ಒಂದೇ ಮಾತಿನಲ್ಲಿ ಉತ್ತರಿಸಿಬಿಡುತ್ತದೆ, ” …the access to which opened to us through Upanishads, is in my eyes the greatest advantage which this still young century enjoys over previous ones…”.
ನಾವು ಇಂದು ಪೂಜಿಸುವ ಆರಾಧಿಸುವ ಜಗದ್ವಿಖ್ಯಾತ ವ್ಯಕ್ತಿಗಳಿಗೆ ಸಂಸ್ಕೃತದಲ್ಲಿ ರಚಿತವಾದ ಭಗವದ್ಗೀತೆ, ವೇದ, ಉಪನಿಷತ್ತುಗಳು ಮಾರ್ಗದರ್ಶನವಾಗಿದೆ. ಅವರ ಜೀವನಚರಿತ್ರೆ ಓದಿದದರೆ ಈ ಮಾತು ಮನದಟ್ಟಾಗುತ್ತದೆ. ಯಾರ ಹೆಸರನ್ನು ಹೇಳಲಿ ಯಾರನ್ನು ಬಿಡಲಿ? ಸರ್ ವಿಲಿಯಮ್ ಜೋನ್ಸ್, ವಿಲಿಯಮ್ ವರ್ಡ್ಸ್‌ವರ್ಥ್, ಶೆಲ್ಲಿ, ಜೋನ್ ಗೊಥೆ, ಮ್ಯಾಕ್ಸ್ ಮುಲ್ಲರ್, ಎಮರ್ಸನ್, ಹೆನ್ರಿ ಡೇವಿಡ್ ಥೊರೆಯು, ಎನಿ ಬೆಸೆಂಟ್, ಹೆನ್ರಿ ಫೊರ್ಡ ಎಲ್ಲರೂ ಗೀತೆ, ವೇದ, ಉಪನಿಷತ್ತುಗಳಿಂದ ತಮ್ಮ ಜೀವನವೇ ಬದಲಾಗಿದೆ ಎಂದು ಹಲವಾರು ಬಾರಿ ನುಡಿದಿದ್ದಾರೆ. ಇವರಾರು ಬ್ರಾಹ್ಮಣರಲ್ಲ ಪಕ್ಕಾ! ಮೇಲ್ವರ್ಗದವರೋ, ಕೆಳವರ್ಗದವರೋ ನನಗೆ ಗೊತ್ತಿಲ್ಲ. ಅದೇ ಯಾಕೆ ಜಾತಿ ಪಂಥವನ್ನು ಮೀರಿ 1790 ರಿಂದ ಸಂಸ್ಕೃತವನ್ನು ಯುರೋಪಿನ ಸಾಕಷ್ಟು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆಶ್ಚರ್ಯವೆಂದರೆ ಇವತ್ತಿಗೂ ಭಾರತದಲ್ಲಿ ಕಲಿಸುವುದಕ್ಕಿಂತ ಹೆಚ್ಚು ಯುರೋಪಿನಲ್ಲಿ ಸಂಸ್ಕೃತವನ್ನು ಕಲಿಸಲಾಗುತ್ತಿದೆ. ಅದೇ ಯಾಕೆ ಹುಡುಕುತ್ತಾ ಹೋದರೆ ಇಂಗ್ಲೆಂಡಿನ ಆಕ್ಸಫರ್ಡ, ಅಮೇರಿಕಾದ ಸ್ಟಾಂಫರ್ಡ, ನ್ಯೂಜಿಲೆಂಡ್, ಜಪಾನ್ ಚೀನಾ ಹೀಗೆ ವಿಶ್ವದ ಹಲವಾರು ಕಾಲೇಜುಗಳಲ್ಲಿ ಸಂಸ್ಕೃತದಲ್ಲಿರುವ ಗಣಿತ, ವಿಜ್ಞಾನ ಹಾಗೂ ಅರ್ಥಶಾಸ್ತ್ರಗಳ ಬಗ್ಗೆ ಚರ್ಚೆ ಹಾಗೂ ಅಧ್ಯಯನ ನಡೆದಿದೆ. ಇದು ಜಾಗತಿಕ ರಂಗದಲ್ಲಿ ಸಂಸ್ಕೃತಕ್ಕಿರುವ ಗೌರವ. ಹಿತ್ತಲ ಗಿಡ ಮದ್ದಲ್ಲ ಅನ್ನುತ್ತಾರೆ ಹಾಗೆಯೇ ನಮ್ಮ ಬುದ್ಧಿಜೀವಿಗಳಿಗೆ ಯಾಕೋ ನಮ್ಮ ಸಂಸ್ಕೃತಿ ಹಾಗು ಸಂಸ್ಕೃತದ ಬಗ್ಗೆ ಕೀಳರಿಮೆ!

ವಿಜ್ಞಾನಕ್ಕೆ ಸಂಸ್ಕೃತದ ಕೊಡುಗೆ ಅಪಾರ ಎಂದರೆ ಅಪಾರ. ಅದನ್ನು ಮತ್ತೆ ಬಿಡಿಸಿ ಹೇಳಬೇಕಿಲ್ಲ
ಐನ್‌ಸ್ಟೈನ್, ನೀಲ್ಸ ಭೋರ್, ಹೈಸನ್ ಬರ್ಗ್ ಎಲ್ಲರಿಗೂ ವೈಚಾರಿಕ ಒಂದು ಮಿತಿಯನ್ನು ದಾಟಿ ಅಣುಗಳ ಅಂತರಾಳವನ್ನು ಅರ್ಥೈಸಿಕೊಳ್ಳಲು ದಾರಿಯಾಗಿದ್ದು ಸಂಸ್ಕೃತವೇ! ನೊಬೆಲ್ ಪಾರಿತೋಷಕ ಸ್ವೀಕೃತ ಮಹಾನ್ ವಿಜ್ಞಾನಿ ಹೈಸನ್ ಬರ್ಗ ಉಲ್ಲೇಖಿಸುತ್ತಾರೆ ” After the conversations about Indian Philosophy, some of the ideas of Quantum Physics, that had seemed so crazy, suddenly made such more sense.” ವೇದದಲ್ಲಿ ಮಾತ್ರ ‘ಕಲ್ಪ’ ಎಂಬ ಶಬ್ಧದ ಬಳಕೆ ಇದೆ. ಕಲ್ಪದ ಆಳವನ್ನು ಅನುಭವಿಸಿದರೆ ಜಗತ್ತಿಗೆ ಬಿಲಿಯನ್ ವರ್ಷಗಳ ಇತಿಹಾಸವಿದೆ ಎಂಬುದು ವ್ಯಕ್ತವಾಗುತ್ತದೆ. ಇವತ್ತಿನ ಆಧುನಿಕ ವಿಜ್ಞಾನ ಹೇಳುವುದು ಅದನ್ನೇ ಅಲ್ಲವೇ? ಖ್ಯಾತ ಭೌತಶಾಸ್ತ್ರಜ್ಞ , ವಿಶ್ವವಿಜ್ಞಾನಿ ಕಾರ್ಲ ಸೀಗನ್ ಹೇಳುತ್ತಾರೆ, ” Vedic cosmology is the only one in which the time scales correspond to those of modern scientific cosmology.”

ನಾನು ಥೈಲ್ಯಾಂಡಿಗೆ ಹೋಗಿದ್ದೆ. ಇದು 2007-08 ರ ವಿಷಯ. ಅಂತರಾಷ್ಟ್ರೀಯ ವಿಮಾನ ಹಾರಾಟ ರದ್ದಾಗಿರುವದರಿಂದ ಟ್ರಾನ್ಸಿಟ್ ವಿಸಾದ ಮೇಲೆ ನಾನಿರುವ ಹೊಟೇಲಿನಲ್ಲೇ ತಂಗಿದ್ದ ಪ್ರಾನ್ಸ ಹಾಗೂ ರಷ್ಯಾದ ಕೆಲವರನ್ನು ಭೇಟಿ ಆದೆ. ಅವರು ಭಾರತಕ್ಕೆ ಬರುವವರಾಗಿದ್ದರು. ಯಾಕೆ ಗೊತ್ತಾ? ಸಂಸ್ಕೃತ, ಯೋಗ, ವೇದ ಹಾಗೂ ಧ್ಯಾನವನ್ನು ಅಧ್ಯಯನ ಮಾಡಲಿಕ್ಕೆ. ರಷ್ಯಾ, ಪ್ರಾನ್ಸ ಹಲವಾರು ದೇಶಗಳಲ್ಲಿ ಇದರ ಬೇಡಿಕೆ ತುಂಬಾ ಇದೆಯಂತೆ. “Sanskrit is the great spiritual language of the world.” ಅಮೇರಿಕಾದ ಮತ್ತೊಬ್ಬ ಖ್ಯಾತ ಬರಹಗಾರ ಹೇಳುತ್ತಾರೆ. ವಿಲ್ ಡ್ಯುರಾಂಟ (Will Durant) ಈ ಹೆಸರನ್ನು ನೀವು ಕೇಳಿರಬಹುದು. ಅವರು ಅಮೇರಿಕಾದ ಖ್ಯಾತ ತತ್ವಜ್ಞಾನಿ ಹಾಗೂ ಇತಿಹಾಸಕಾರ. ಅವರ ಬರಹಗಳನ್ನು ಜಗತ್ತಿನಾದ್ಯಂತ ಕೋಟ್ಯಾಂತರ ಜನ ಓದುತ್ತಾರೆ. ಅವರು ಹೇಳಿದ್ದು ಹೀಗೆ, ” Sanskrit is the mother of Indo-European Language”. ಭಾರತವೊಂದೇ ಅಲ್ಲ, ಥಾಯಲ್ಯಾಂಡ್ ಕಾಂಬೋಡಿಯಾ, ಇಂಡೊನೇಷ್ಯಾ, ಜರ್ಮನಿ, ಫ್ರಾನ್ಸ್, ಗ್ರೀಸ್, ಜಪಾನ, ಚೀನಾ, ಕೋರಿಯಾ, ಮಂಗೋಲಿಯಾ ಇವೆಲ್ಲಾ ದೇಶಗಳ ಭಾಷೆಗಳ ಮೇಲೆ ಸಂಸ್ಕೃತದ ಪ್ರಭಾವ ತುಂಬಾ ಇದೆಯಂತೆ. ಅದಷ್ಟೇ ಅಲ್ಲ, ಅವೆಲ್ಲ ಭಾಷೆಗಳನ್ನು ಸಂಸ್ಕೃತ ಶ್ರೀಮಂತಗೊಳಿಸಿದೆ ಎನ್ನುತ್ತಾರೆ. ಇತ್ತೀಚಿಗೆ ಕೆಲವು ದಶಕಗಳಿಂದ ನಾವು ಬಳಸುತ್ತಿರುವ conscious, sub-conscious, psychology, psychoanalysis, emotional intelligence, servant leadership, inclusive capitalism ಇವೆಲ್ಲ ಶತಮಾನದ ಹಿಂದೆಯೇ ಸಂಸ್ಕೃತದಲ್ಲಿ ಬಳಸಲಾಗಿತ್ತು. ಸಂಸ್ಕೃತದಲ್ಲಿ ಭೂಮಿಗೆ 65 ಪರ್ಯಾಯ ಶಬ್ಧಗಳಿವೆ, ನೀರಿಗೆ 70 ಪರ್ಯಾಯ ಶಬ್ಧಗಳು ಯಾವ ಇತರ ಭಾಷೆಗೆ ಇಂತಹ ಶ್ರೀಮಂತಿಕೆ ಇದೆ ಹೇಳಿ? ಅದಕ್ಕಾಗಿಯೇ ಇರಬೇಕು ನಾವೆಲ್ಲ ಗೌರವಿಸುವ ಸಂವಿಧಾನದ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರವರು ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಅನುಮೋದಿಸಿದ್ದರು.

ಕನ್ನಡದ ಮೇಲೆ ನನಗೆ ತುಂಬಾ ಅಭಿಮಾನ ಇದೆ, ಆದರೆ ದುರಾಭಿಮಾನವಿಲ್ಲ. ಸ್ಟೀವ್ ಜಾಬ್ಸ ಹೇಳುತ್ತಾರೆ ” ನಾವು ನಮ್ಮ ನೋಟದ ಬಂಧನದಿಂದ ಹೊರಗೆ ಬರಬೇಕು.” ಕನ್ನಡ ಇಂದು ಬೆಳೆದ ಆಲದಮರ. ಬೆಳೆದ ಭಾಷೆಯ ಮರಕ್ಕೆ ಬೇರೆ ಬೇರೆ ಭಾಷೆಯ ಖನಿಜಾಂಶಗಳ ಅವಶ್ಯಕತೆ ಇದೆಯೇ ಇದೆ. ಇಂಗ್ಲಿಷ್ ಆಗಲಿ, ಚೈನೀಸ್ ಆಗಲಿ ಅಥವಾ ಫ್ರೆಂಚ್ ಆಗಲಿ. ಆದರೆ ಮರ ವಿಷಾಲವಾಗಿದೆ ಎಂದ ಮಾತ್ರಕ್ಕೆ ಮೂಲ ಬೇರನ್ನು ಕೀಳಬಾರದು. ಸಂಸ್ಕೃತವೂ ಆ ಒಂದು ಮೂಲ ಬೇರು. A race with its roots pulled out can have no future.

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!