ತಂದೆ ತಾಯಿಯನ್ನು ಕಣ್ಣಿಗೆ ಕಾಣುವ ದೇವರು ಎನ್ನುತ್ತಾರೆ ಆದರೆ ಎಷ್ಟು ಜನ ಮಕ್ಕಳು ತಮ್ಮ ತಂದೆ-ತಾಯಿಯನ್ನು ದೇವರ ರೀತಿ ಪೂಜಿಸುತ್ತಾರೆ? ಪೂಜಿಸುವುದು ಪಕ್ಕದಲ್ಲಿರಲಿ, ಕಡೇ ಪಕ್ಷ ವಯಸ್ಸಾದ ಮೆಲೆ ಅವರ ಹಾರೈಕೆಯನ್ನು ಕೂಡ ಮಾಡುವುದಿಲ್ಲ. ಅದಕ್ಕೇ ಇಂದಿನ ದಿನಗಳಲ್ಲಿ ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು. ಆದರೇ ಪೋಷಕರು ಮಾತ್ರ ತಮ್ಮ ಮಕ್ಕಳನ್ನು ದೇವರಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಾರೆ, ಈ ಲೇಖನವನ್ನು ಬರೆಯಲು ನನಗೆ ಪ್ರೇರಣೆ ಸಿಕ್ಕಿದ್ದು ಅಂತಹುದೇ ಒಂದು ತಾಯಿಯಿಂದ. ನಮ್ಮ ತಂದೆಯವರು ನಗರದ ಒಂದು ಮಧ್ಯಮ ವರ್ಗದ ಬಡಾವಣೆಯಲ್ಲಿ ಜೀವನೋಪಾಯಕ್ಕಾಗಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದಾರೆ. ಮೊನ್ನೆ ಸಂಕ್ರಾತಿ ರಜೆಗೆಂದು ನಾನು ಊರಿಗೆ ಹೋದಾಗ ತಂದೆಯವರು ನನ್ನನ್ನು ಅಂಗಡಿಯಲ್ಲಿ ಬಿಟ್ಟು ಸಾಮಾನು ತರಲು ಮಾರುಕಟ್ಟೆಯಡೆಗೆ ಹೊರಟರು. ನನಗೋ ಮೊದಲಿನಿಂದಲೂ ಅಂಗಡಿ ಎಂದರೆ ಅಷ್ಟಕಷ್ಟೆ ಆದ್ದರಿಂದ ಒಲ್ಲದ ಮನಸ್ಸಿನಿಂದಲೇ ಅಂಗಡಿಯಲ್ಲಿ ಕುಳಿತೆ. ಆ ದಿನ ನನ್ನ ಮನ ಕಲುಕುವ ಒಂದು ಕಥೆ ನಾನು ಕೇಳಲಿದ್ದೇನೆ ಎಂದು ನಾನು ಊಹಿಸಿರಲಿಲ್ಲ.
ನಾನು ಅಂಗಡಿಯಲ್ಲಿ ಕುಳಿತು ಇನ್ನೂ ಅರ್ಧ ಗಂಟೆಯಾಗಿರಲಿಲ್ಲ ಅಷ್ಟರಲ್ಲಿಯೇ ಸ್ವಲ್ಪ ವಯಸ್ಸಾದ ವ್ಯಕ್ತಿಯೊಬ್ಬರು ಅಂಗಡಿ ಬಳಿ ಬಂದು ಇಲ್ಲಿ ಯಾವುದಾದರೂ ಮನೆ ಬಾಡಿಗೆಗೆ ಲಭ್ಯವಿದೆಯಾ ಎಂದು ವಿಚಾರಿಸಿದರು. ಆ ಬಡಾವಣೆಯಲ್ಲಿ ಯಾವುದಾದರೂ ಮನೆ ಖಾಲಿಯಾದೊಡನೆ ಅಥವಾ ಹೊಸಬರು ಖಾಲಿ ಮನೆಗೆ ಬಂದಾಗ ತಕ್ಷಣ ಮೊದಲು ಗೊತ್ತಾಗುವುದು ಅಲ್ಲಿರುವ ಸಣ್ಣ ಪುಟ್ಟ ವ್ಯಾಪಾರಿಗಳಿಗೆ. ಎಷ್ಟೋ ಸಲ ನಾವು ಬ್ರೋಕರ್ ಕೆಲಸವೂ ಮಾಡಿದ್ದುಂಟು ಆದರೇ ಕಮೀಷನ್ ತೆಗೆದುಕೊಳ್ಳುತ್ತಿರಲಿಲ್ಲ ಅಷ್ಟೇ, ಏಕೆಂದರೇ ಮನೆ ಕೊಡಿಸಿದ ಕಾರಣಕ್ಕೆ ಅವರು ನಮ್ಮಲ್ಲಿಯೇ ಪ್ರತಿ ತಿಂಗಳ ಸಾಮಾನು ಕೊಳ್ಳುತ್ತಿದ್ದರು. ಇರಲಿ ಬಿಡಿ ಆ ವಿಷಯ ಒತ್ತೊಟ್ಟಿಗಿರಲಿ, ಬಾಡಿಗೆ ಮನೆ ವಿಚಾರಿಸಲು ಬಂದ ವ್ಯಕ್ತಿಯ ಬಗ್ಗೆ ಮಾತಾಡೋಣ. ಅಲ್ಲೇ ಸಮೀಪದಲ್ಲಿದ್ದ ಖಾಲಿ ಮನೆಯನ್ನು ತೋರಿಸಿ ಅದರ ಬೀಗವನ್ನು ಕೊಡಿಸಿದೆವು, ಆ ಮನೆಯನ್ನು ಒಮ್ಮೆ ನೋಡಿದ ಮೇಲೆ ಮತ್ತೆ ಬೀಗ ವಾಪಸ್ಸು ಕೊಡಲು ಅಂಗಡಿ ಬಳಿ ಬಂದರು. ಅಷ್ಟರಲ್ಲಿ ಅವರಿಗೆ ಬಹು ಪರಿಚಯವಿದ್ದ ಹಾಗೂ ಅಲ್ಲೇ ಹತ್ತಿರದಲ್ಲಿ ವಾಸವಿದ್ದ ಮತ್ತೊಬ್ಬರು ಅಂಗಡಿ ಬಳಿ ಬಂದರು. ದಿನಂಪ್ರತಿ ಅಲ್ಲೇ ಪಕ್ಕದಲ್ಲಿ ವಾಸವಿದ್ದ ಎಲ್ಲರೂ ಸಂಜೆ ಅಂಗಡಿ ಬಳಿ ಬಂದು ಸೇರುತ್ತಿದ್ದರು, ಬೆಳಗ್ಗೆಯಿಂದ ನಡೆದ ಎಲ್ಲಾ ವಿಷಯಗಳನ್ನು ಸಂಸತ್ ಮಾದರಿಯಲ್ಲಿಯೇ ಚರ್ಚಿಸುತ್ತಿದ್ದರು. ಇಬ್ಬರೂ ಬಹು ಕಾಲದ ಗೆಳೆಯರಾಗಿದ್ದರೂ ಬಹಳ ದಿನಗಳಿಂದ ಒಬ್ಬರಿಗೊಬ್ಬರು ಸಿಕ್ಕಿರಲಿಲ್ಲ ಆದ್ದರಿಂದ ಮನೆ ಹುಡುಕಲು ಬಂದಿದ್ದ ಕಾರಣವನ್ನು ಹೇಳಲು ಶುರುವಿಟ್ಟುಕೊಂಡರು. ಅವರದು ಪುಟ್ಟ ಸಂಸಾರ, ಅದರಲ್ಲಿ ತಂದೆ ತಾಯಿ ಮತ್ತು ಮಗ ಮಾತ್ರ, ಸುಖವಾಗಿ ಜೀವನ ನಡೆಸುತ್ತಿದ್ದರು. ಮಗನೂ ಶಿಕ್ಷಣ ಮುಗಿಸಿ ಬ್ಯಾಂಕ್ ಒಂದರಲ್ಲಿ ಒಳ್ಳೆಯ ನೌಕರಿ ಗಿಟ್ಟಿಸಿದ್ದ, ಕೆಲಸ ಸಿಕ್ಕಷ್ಟೇ ಬೇಗ ಅವನ ಮದುವೆಯೂ ಮುಗಿದು ಹೋಯಿತು. ಇನ್ನೇನೂ ಮನೆಗೆ ಸೊಸೆ ಬಂದಾಯಿತು ಮನೆಯ ಜವಬ್ದಾರಿಯನ್ನೆಲ್ಲ ಅವಳಿಗೆ ಕೊಟ್ಟು ನಾವಿನ್ನು ಮೊಮ್ಮಕ್ಕಳ ಜೊತೆ ಆರಾಮಾಗಿ ಇರಬಹುದೆಂದು ಅವರು ಅಂದಾಜಿಸಿದ್ದರು.
ಆದರೇ ನಡೆದದ್ದೇ ಬೇರೆ. ಸೊಸೆಯೂ ಪದವಿ ಶಿಕ್ಷಣ ಮುಗಿಸಿದ್ದರಿಂದ ಯವುದಾದರೂ ಕೆಲಸ ಮಾಡಬೇಕೆಂಬ ಉತ್ಸಾಹ ಅವಳಲ್ಲಿ ಇತ್ತು. ಜೊತೆಗೆ ನಗರದಲ್ಲಿ ಸುಖವಾಗಿ ಅಥವಾ ಐಷಾರಾಮಿ ಜೀವನ ನಡೆಸಬೇಕೆಂದರೆ ಗಂಡ-ಹೆಂಡತಿ ಇಬ್ಬರೂ ದುಡಿಯಬೇಕೆಂಬುದು ಅವಳಲ್ಲಿದ್ದ ಯೋಚನೆ. ಹೀಗೇ ಇಬ್ಬರು ದುಡಿಯುತ್ತಿದ್ದರು, ಅವರಿಗೆ ಒಂದು ಮಗುವೂ ಆಯಿತು, ಜೊತೆಗೆ ನಿತ್ಯ ಮನೆಯಲ್ಲಿ ಕಿರಿ ಕಿರಿಯೂ ಶುರುವಾಯಿತು. ಸಣ್ಣ ಪುಟ್ಟ ವಿಷಯಗಳಿಗೂ ಮನೆಯಲ್ಲಿ ದೊಡ್ಡ ಯುದ್ಧವೆ ನಡೆಯುತ್ತಿತ್ತು ಇದೆಲ್ಲದರ ಫಲವಾಗಿ ಮಗನೂ ಬೆರೆ ಮನೆ ಮಾಡಿಕೊಂಡು ಹೊರಟುಬಿಟ್ಟ, ಅದೂ ಕೂಡ ಅಪ್ಪನ ಮನೆಯಿಂದ ಬಹೂ ದೂರದಲ್ಲಿ.
ಅವನಿಗೆ ತಂದೆ ತಾಯಿಯನ್ನು ಬಿಟ್ಟು ಹೋಗಲು ಇಷ್ಟವಿರಲಿಲ್ಲ ಆದರೇ ಬೇರೆ ಮನೆ ಮಾಡದೇ ಯಾವುದೇ ಮಾರ್ಗವಿರಲಿಲ್ಲ. ಹೀಗೇ ದಿನಗಳು ಉರುಳಿದಂತೆ ಮಗ ಹಾಸಿಗೆ ಹಿಡಿಯಲು ಶುರು ಮಾಡಿದ ಕಾರಣವೇನೆಂದರೆ ಹೆಂಡತಿಯೂ ಕೆಲಸಕ್ಕೆ ಹೋಗುತ್ತಿದ್ದರಿಂದ ಗಂಡನಿಗೆ ಸರಿಯಾದ ಸಮಯಕ್ಕೆ ತಿಂಡಿ ಮತ್ತು ಊಟಗಳು ಆಗುತ್ತಿರಲಿಲ್ಲ ಜೊತೆಗೆ ಮಗ ತಂದೆ ತಾಯಿಯ ಚಿಂತೆಯಲ್ಲಿ ಸೋತಿದ್ದ. ಅವರಿಗೆ ನಾನೊಬ್ಬನೇ ದಿಕ್ಕು, ಈ ವಯಸ್ಸಾದ ದಿನದಲ್ಲಿ ಹೇಗೆ ದಿನ ಕಳೆಯುತ್ತಿದ್ದಾರೋ ಎಂದು ಕೊರಗುತ್ತಿದ್ದ. ಇದೇ ವಿಷಯಕ್ಕೆ ಮನೆಯಲ್ಲಿ ನಿತ್ಯ ಜಗಳ ನಡೆಯುತ್ತಿತ್ತು ಹಾಗೂ ಎಷ್ಟೊ ದಿನ ಇಬ್ಬರೂ ಮಾತನಾಡುತ್ತಿರಲಿಲ್ಲ. ಕೆಲವೊಮ್ಮೆ ಹೋಟೆಲ್ ಊಟವೇ ಗತಿ, ಇನ್ನು ಕೆಲವೊಮ್ಮೆ ಫ್ರಿಡ್ಜನಲ್ಲಿ ಇರುತ್ತಿದ್ದ ತಂಗಳ ಸಾರೇ ಗತೀ. ಈ ಎಲ್ಲಾ ಕಾರಣಗಳಿಂದ ಮೊದಲೇ ಮಾನಸಿಕನಾಗಿ ನೊಂದಿದ್ದ ಅವನಿಗೆ ದಿನದಿಂದ ದಿನಕ್ಕೆ ಖಾಯಿಲೆಯೂ ಆವರಿಸತೊಡಗಿತು. ಮಗನ ಈ ಪರಿಸ್ಥಿತಿ ಕಂಡು ಹೆತ್ತ ಕರುಳಿಗೆ ತಡೆಯಲಾಗಲಿಲ್ಲ, ಮಗನನ್ನು ಮನೆಗೆ ಕರೆಸಿಕೊಳ್ಳುಲು ಸೊಸೆ ಒಪ್ಪುವುದಿಲ್ಲ ಆದ್ದರಿಂದ ಅವರ ಮನೆಯ ಬಳಿಯೇ ಮಗನೂ ಮನೆ ಮಾಡಿದರೆ ಪ್ರತಿ ದಿನ ಸೊಸೆ ಕೆಲಸಕ್ಕೆ ಹೋದಾಗ ಮಗನ ಮನೆಗೆ ಹೋಗಿ ಬಿಸಿ ಬಿಸಿಯಾದ ಅಡುಗೆ ಮಾಡಬಹುದು ಎನ್ನುವುದು ಅವರ ಆಲೋಚನೆಯಾಗಿತ್ತು. ಮಗ ತಮ್ಮನ್ನು ವಯಸ್ಸಾದ ಕಾಲದಲ್ಲಿ ಬಿಟ್ಟು ಹೋದರೂ, ತಾವೇ ತಮ್ಮ ಮನೆಯಲ್ಲಿ ಅಡುಗೆ, ಮನೆ ಕೆಲಸ ಮಾಡಲು ಆಗದಿರುವ ವಯಸ್ಸಿನಲ್ಲಿ ಮಗನಿಗೆÉ ಪ್ರತಿ ದಿನವೂ ಬಿಸಿ ಬಿಸಿ ಅಡುಗೆ ಮಾಡಲು ಹೊರಟಿರುವ ಈ ವiಹಾತಾಯಿ ನಿಜವಾಗಿಯೂ ಕಣ್ಣಿಗೆ ಕಾಣುವ ದೇವರಲ್ಲವೇ ? ಮಗನಿಗೆ ಹತ್ತಿರದಲ್ಲಿ ಮನೆ ಹುಡುಕುವುದಕ್ಕಾಗಿ ಇಳಿ ವಯಸ್ಸಿನ್ಲಲಿ ಬಿಸಿಲಿನ ಝಳವನ್ನು ಲೆಕ್ಕಿಸದೇ ಬೀದಿ ಬೀದಿ ಸುತ್ತುತ್ತಿರುವ ಈ ತಂದೆ ದೇವರಲ್ಲವೇ??
ಇಲ್ಲಿ ಯಾರದು ತಪ್ಪು ಯಾರದು ಸರೀ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸ ಯಾಕೆಂದರೇ ಮಗನಿಗೆ ಬೇರೆ ಮನೆ ಮಾಡಲು ಇಷ್ಟವಿಲ್ಲದಿದ್ದರೂ ಹೆಂಡತಿಯ ಹಠಕ್ಕೆ ಒಲ್ಲದ ಮನಸ್ಸಿನಿಂದಲೇ ಹೊರ ನಡೆದಿದ್ದ. ಉತ್ತಮ ಜೀವನಕ್ಕಾಗಿ ಕೆಲಸಕ್ಕೆ ಸೇರಿ ಮನೆಯಲ್ಲಿ ಅಡುಗೆ ಮಾಡಲು ಸಮಯ ಸಿಗದಿರುವಂತೆ ಮಾಡಿಕೊಂಡ ಹೆಂಡತಿ ಯಾರಿಗೋಸ್ಕರ ಹಣ ಸಂಪಾದಿಸುತ್ತಿದ್ದಾಳೆ ಎನಿಸುತ್ತದೆ. ಹೆಣ್ಣು ಕೆಲಸಕ್ಕೆ ಸೇರುವುದು ತಪ್ಪಲ್ಲ ಆದರೇ ಮನೆಗೆ ಮತ್ತು ಮನೆಯವರಿಗೆ ಸಮಯ ಮೀಸಲಿಟ್ಟರೆ ಸಂಸಾರ ಸುಖಮಯವಾಗುತ್ತದೆ ಎನಿಸುತ್ತದೆ. ಏನೇ ಆಗಲೀ, ಆ ತಂದೆ ತಾಯಿ ತಮ್ಮ ಮಗನ ಆರೊಗ್ಯ ಸುಧಾರಿಸಲು ಪಡುತ್ತಿರುವ ಕಷ್ಟಗಳಿಗೆ ಫಲ ಸಿಗಲಿ ಎಂದು ಆಶಿಸೋಣ. “ಕೆಟ್ಟ ಮಕ್ಕಳು ಇರಬಹುದು ಆದರೇ ಕೆಟ್ಟ ತಂದೆ-ತಾಯಿ ಇರುವುದಿಲ್ಲ”, “ತಂದೆ ತಾಯಿ ಕಣ್ಣಿಗೆ ಕಾಣುವ ದೇವರು”, ಎನ್ನುವ ಎಷ್ಟೋ ಗಾದೆಗಳಿಗೆ ಈ ಮೇಲೆ ತಿಳಿಸಿರುವ ಸಂಗತಿ ಮತ್ತೊಂದು ಉದಾಹರಣೆ ಅಷ್ಟೇ.