ಅಂಕಣ

ಕನ್ನಡ ವಿಕಿಪೀಡಿಯಕ್ಕೆ ಹದಿಮೂರರ ಹರೆಯದ ಸಂಭ್ರಮ

ವಿಕಿಪೀಡಿಯ – ಇಂದಿನ ಆನ್’ಲೈನ್ ಜಗತ್ತಿನಲ್ಲಿ ಇದರ ಹೆಸರು ಕೇಳದವರಿಲ್ಲ. ಯಾವುದೇ ವಿಷಯವಾದರೂ ಸರಿ, ಕ್ಷಣಮಾತ್ರದಲ್ಲಿ ಮಾಹಿತಿ ತಂದು ಮುಂದಿಡುವ ವಿಕಿಪೀಡಿಯ ಇಂದು ಜಗತ್ತಿನ ಅತೀ ಹೆಚ್ಚು ಭೇಟಿ ಕೊಡುವ ತಾಣಗಳಲ್ಲಿ ಜಾಗತಿಕ ಮಟ್ಟದಲ್ಲಿ ಐದನೇ ಸ್ಥಾನದಲ್ಲಿದೆ ಅಂದರೆ ಅದರ ಜನಪ್ರಿಯತೆ ಊಹಿಸಿಕೊಳ್ಳಬಹುದು. “ಪ್ರಪಂಚದ ಎಲ್ಲಾ ಜ್ಞಾನವೂ ಒಟ್ಟುಗೂಡಿ ಪ್ರತಿಯೊಬ್ಬರಿಗೂ ಮುಕ್ತವಾಗಿ ಸಿಗುವ ಲೋಕವೊಂದನ್ನು ಕಲ್ಪಿಸಿಕೊಳ್ಳಿ” ಎಂಬ ಘೋಷವಾಕ್ಯದ ವಿಕಿಪೀಡಿಯ ಇಂದು ಹೆಮ್ಮರವಾಗಿ ಬೆಳೆದಿದೆ. ವಿಕಿಪೀಡಿಯ ನಾನ್ ಪ್ರಾಫಿಟ್ ಸಂಸ್ಥೆಯಾದ ವಿಕಿಮೀಡಿಯ ಫೌಂಡೇಶನ್‌ನ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರ ವಿಶೇಷವೆಂದರೆ ಇದು ಜನರಿಂದ ಜನರಿಗಾಗಿ ನಡೆಯುತ್ತಿರುವ ಸಮುದಾಯ ಕಾರ್ಯ. ಜನರ ಮತ್ತು ಸಂಸ್ಥೆಗಳ ದೇಣಿಗೆಗಳೇ ಇದರ ಆರ್ಥಿಕ ಮೂಲ. ಇದರಲ್ಲಿ ಮಾಹಿತಿ ತುಂಬಿಸುವಿಕೆ ಮತ್ತು ಮಾಹಿತಿ ಪಡೆದುಕೊಳ್ಳುವಿಕೆ ಪ್ರತಿಯೊಬ್ಬನಿಗೂ ಮುಕ್ತ. ಜಗತ್ತಿನ ಯಾವುದೇ ವಿಷಯದ ಬಗ್ಗೆ ಮಾಹಿತಿಪೂರ್ಣ ವಿಷಯಗಳನ್ನು ಯಾರುಬೇಕಾದರೂ ವಿಕಿಪೀಡಿಯ ಸಂಪಾದಕನಾಗಿ ನೊಂದಾಯಿಸಿಕೊಂಡು ಹಾಕಬಹುದು. ಹೊಸ ಲೇಖನದ ಪುಟ ರಚಿಸಬಹುದು. ಇರುವ ಲೇಖನ ತಿದ್ದಬಹುದು. ಹೆಚ್ಚಿನ ಮಾಹಿತಿ ಸೇರಿಸಬಹುದು. ಬೇರೆ ಬೇರೆ ದೇಶ ಪ್ರದೇಶ, ಹಿನ್ನೆಲೆಗಳ ಅನೇಕ ಮಂದಿಯ ಸಹಕಾರದಲ್ಲಿ ಪ್ರತಿಯೊಂದು ಪುಟವೂ ರೂಪುಗೊಳ್ಳುತ್ತದೆ. ಹಾಗಾಗಿ ವಿಕಿಪೀಡಿಯ ಒಂದು ಸಹಯೋಗಿ ವಿಶ್ವಕೋಶ. ಇಂತಹ ಒಂದು ಸ್ವತಂತ್ರ ಮತ್ತು ಮುಕ್ತ ವಿಶ್ವಕೋಶ ಆನ್ ಲೈನ್ ವಿಶ್ವಕೋಶ ಇಂದು ಸುಮಾರು ಮುನ್ನೂರು ಭಾಷೆಗಳಲ್ಲಿ ಇದೆ. ಇಂಗ್ಲೀಷ್ ವಿಕಿಪೀಡಿಯಾ ಒಂದರಲ್ಲೇ ಸುಮಾರು ಐವತ್ತು ಲಕ್ಷ ಲೇಖನಗಳಿವೆ ಅಂದರೆ ಅದರ ಮಾಹಿತಿ ಅಗಾಧತೆಯನ್ನು ಊಹಿಸಿಕೊಳ್ಳಬಹುದು! ವಿಕಿಪೀಡಿಯಾ ಆರಂಭವಾಗಿದ್ದು 2001ರ ಜನವರಿ 15ರಂದು . ಈ ವರ್ಷ ಜನವರಿಯಲ್ಲಿ ಅದು ೧೫ನೇ ಹುಟ್ಟುಹಬ್ಬ ಆಚರಿಸಿಕೊಂಡಿತು.

ವಿಕಿಪೀಡಿಯದಲ್ಲಿ ಭಾರತೀಯ ಭಾಷೆಗಳ ವಿಕಿಪೀಡಿಯಗಳೂ ಇದ್ದು ನಮ್ಮ ಕನ್ನಡ ವಿಕಿಪೀಡಿಯವೂ ಇರುವುದು ತಿಳಿದಿರುವ ವಿಚಾರ. 2003ರ ಜೂನ್‌ನಲ್ಲಿ ಕನ್ನಡ ವಿಕಿಪೀಡಿಯ ಆರಂಭವಾಯಿತು. ಅಲ್ಲಿಂದ ಇಲ್ಲಿವರೆಗೂ ಅನೇಕ ಸ್ವಯಂಸೇವಕ, ಉತ್ಸಾಹಿಗಳ ಶ್ರಮದಿಂದ ಸಾವಿರಾರು ಲೇಖನಗಳೊಂದಿಗೆ ಮುನ್ನಡೆಯುತ್ತಿರುವ ಅಂತರಜಾಲದ ಕನ್ನಡ ವಿಶ್ವಕೋಶ ‘ಕನ್ನಡ ವಿಕಿಪೀಡಿಯ’ಕ್ಕೆ ಈಗ ಹದಿಮೂರರ ಹರೆಯ. ಇದೇ ಸಂಭ್ರಮದಲ್ಲಿ ಹದಿಮೂರನೆಯ ವರ್ಷಾಚರಣೆಗೂ ವೇದಿಕೆ ಸಿದ್ಧವಾಗಿದೆ. ಈ ತಿಂಗಳ ಹದಿನಾಲ್ಕನೆಯ ತಾರೀಖು ಭಾನುವಾರ ಮಂಗಳೂರಿನ ‘ಸಂತ ಅಲೋಷಿಯಸ್’ ಕಾಲೇಜಿನಲ್ಲಿ ಆಚರಣೆಯು ನಡೆಯಲಿದೆ. ಈ ಆಚರಣೆಯ ಪೂರ್ವಭಾವಿಯಾಗಿ ಅನೇಕ ವಿಷಯಾಧಾರಿತ ಸಂಪಾದನೋತ್ಸವಗಳು (edit-a-thon), ಕಾರ್ಯಾಗಾರಗಳು ಕರ್ನಾಟಕದ ವಿವಿಧೆಡೆಯಲ್ಲಿ ನಡೆದಿವೆ. ಸಾಗರದಲ್ಲಿ ‘ಮೆಕ್ಯಾನಿಕಲ್ ಎಂಜಿಯರಿಂಗ್’ ಲೇಖನಗಳು, ಬೆಂಗಳೂರಿನ ಟೆಕ್ಸಾಸ್ ಇನ್‍ಸ್ಟ್ರುಮೆಂಟ್ ನಲ್ಲಿ ‘ವಿಜ್ಞಾನ ಲೇಖನಗಳು’, ಮೈಸೂರಿನ ಗಂಗೋತ್ರಿಯಲ್ಲಿ ‘ಕನ್ನಡ ಸಾಹಿತ್ಯ’, ಮಂಗಳೂರಿನಲ್ಲಿ ‘ಕರಾವಳಿ ಕರ್ನಾಟಕದ ಲೇಖಕಿಯರು ಮತ್ತು ಸಾಧಕಿಯರ’ ಬಗ್ಗೆ, ಬೆಂಗಳೂರಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ‘ಶೈಕ್ಷಣಿಕ ವಿಜ್ಞಾನ’ ಲೇಖನಗಳ ಸಂಪಾದನೋತ್ಸವಗಳು ಯಶಸ್ವಿಯಾಗಿ ನಡೆದಿವೆ. ಹದಿಮೂರನೇ ವಾರ್ಷಿಕೋತ್ಸವ ಆಚರಣೆಯು ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನ ಕನ್ನಡ ವಿಭಾಗದ ನೇತೃತ್ವದಲ್ಲಿ, ವಿಕಿಮೀಡಿಯಾ ಫೌಂಡೇಷನ್ ಹಾಗೂ ಸೆಂಟರ್ ಫಾರ್ ಇಂಟರ್ನೆಟ್ ಸೊಸೈಟಿಯ ಸಹಯೋಗದೊಂದಿದೆ ನಡೆಯಲಿದ್ದು ಆ ದಿನ ಸಭಾ ಕಾರ್ಯಕ್ರಮ, ಸಂಪಾದನೋತ್ಸವ, ಪೋಟೋನಡಿಗೆ, ಪ್ರಾತ್ಯಕ್ಷಿಕೆ ಮುಂತಾದ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟಿವೆ. ವಿಕಿಸಮುದಾಯದ ಎಲ್ಲರಿಗೂ ಪಾಲ್ಗೊಳ್ಳಲು ಆಹ್ವಾನವಿದೆ. ಈ ಕಾರ್ಯಕ್ರಮದ ವಿವರಗಳನ್ನು ಇಲ್ಲಿ ನೋಡಬಹುದು: ಕನ್ನಡ ವಿಕಿಪೀಡಿಯ ಹದಿಮೂರನೇ ವಾರ್ಷಿಕೋತ್ಸವ.

ಕನ್ನಡ ಭಾಷೆಯಲ್ಲಿ ಪ್ರಪಂಚ ಜ್ಞಾನವನ್ನು ತರುವ ಈ ಸಮುದಾಯ ಚಟುವಟಿಕೆಗೆ ಇನ್ನೂ ಹೆಚ್ಚು ಹೆಚ್ಚು ಜನರು ತೊಡಗಿಕೊಂಡರೆ ಅದು ನಮ್ಮ ಸಮಾಜದ,ಭಾಷೆಯ ಪ್ರಗತಿಯೆಡೆಗೆ ದೊಡ್ಡ ದಾಪುಗಾಲು.

Vikas Hegde, ಬೆಂಗಳೂರು

Vikashegde82@gmail.com ,

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!