Featured ಅಂಕಣ ಸಂಪಾದಕೀಯ

ಒಂದು ವರುಷ ನೂರೆಂಟು ಹರುಷ

“ಅರ್ಪಿಸಿಹೆವು ಎಮ್ಮೊಡಲ ಕೂಸು ನಿಮ್ಮ ರೀಡೂ
ಶುಭವ ಕೋರುತ ಎಂದೆಂದೂ ಜಯವ ನೀಡು..”

ಹೀಗೆಂದು ಹೇಳುತ್ತಾ ನಾವು ನಿಮ್ಮ ಮನೆಯ ಗಣಕ ಯಂತ್ರದೊಳ ಹೊಕ್ಕು ಇವತ್ತಿಗೆ ಭರ್ತಿ ಒಂದು ವರ್ಷ.! ಅಬ್ಬಾ..! ಅದೆಷ್ಟು ಬೇಗ? ನಂಬಲು ಸಾಧ್ಯವಾಗುತ್ತಿಲ್ಲ.

ನಿಜ ಹೇಳ್ಬೇಕಾದ್ರೆ ಈ ವೆಬ್’ಸೈಟ್ ಅಂದ್ರೆ ಏನು? ಅದರ ಸ್ವರೂಪ ಏನೇನಿರುತ್ತದೆ? ನಿಯಮಗಳೇನು? ಎಂಬುದರ ಬಗ್ಗೆ ಅರಿವಿರಲಿಲ್ಲ ನನಗೆ. ಹೋಗಲಿ, ಅದಕ್ಕೆ ವರ್ಷವೊಂದಕ್ಕೆ ಖರ್ಚು ಎಷ್ಟಾಗುತ್ತದೆ ಎಂಬುದೂ ಸಹ ತಿಳಿಯದ ಅಜ್ಞಾನಿ ನಾನಾಗಿದ್ದೆ. ಇದೆಲ್ಲಾ ಬರೀ ಪುಕ್ಕಟೆಯಾಗಿ ನಡೆಸಬಹುದೆಂದು ಒಳಗೊಳಗೆ ಖುಷಿ ಪಟ್ಟಿದ್ದೆ.

ಆವತ್ತು ಆದಿತ್ಯನ ಬರ್ತ್’ಡೇ. ಅವನ ಮನೆಗೆ ಹೋಗೋಣ್ವಾ ಅಂತ ಸ್ನೇಹಿತನೊಬ್ಬ ನನ್ನ ಬಳಿ ಕೇಳಿದ. ಹೇಗೂ ಕಾಲೇಜು ಬಿಟ್ಟ ಬಳಿಕ ಆದಿತ್ಯನನ್ನು ನೋಡೇ ಇಲ್ಲ, ಬರ್ತ್’ಡೇ ನೆಪದಲ್ಲಾದರೂ ನೋಡಿ ಮಾತಾಡಿಸಿ ಬರೋಣ ಅಂತ ಹೊರಟೇ ಬಿಟ್ಟೆ. ಭೇಟಿಯ ಸಮಯದಲ್ಲಿ “ಶಿವಪ್ರಸಾದ್.. ನಾನು ಹೀಗೊಂದು ವೆಬ್’ಸೈಟ್ ಮಾಡ್ಬೇಕೂಂತ ಇದ್ದೇನೆ.. ನಿನ್ನ ಪೂರ್ಣ ಸಹಕಾರ ಬೇಕು” ಅಂತ ಪೀಠಿಕೆ ಹಾಕಿದ್ದ ಆದಿತ್ಯ. ನಾನು ತುಂಬಾ ಫಾರ್ಮಲ್ ಆಗಿ “ಆಯ್ತು” ಅಂದಿದ್ದೆ. ಮತ್ತೆ ನಿತ್ಯವೂ” ವೆಬ್’ಸೈಟ್ ಬಗ್ಗೆ ಏನಾದ್ರೂ ಆಲೋಚನೆ ಮಾಡಿದ್ಯಾ? ನಾವು ಜಾಸ್ತಿ ತಡ ಮಾಡ್ಬಾರ್ದು” ಅಂತ ಆಗಾಗ್ಗೆ ಕಾಟ ಕೊಡೋಕ್ಕೆ ಶುರುವಿಟ್ಟ. ನಾನೇನು ಮಾಡಬಲ್ಲೆ ಎನ್ನುವ ಅರಿವೇ ನನಗಿಲ್ಲದಿದ್ದರಿಂದ ನಾನು ಇದರ ಬಗ್ಗೆ ಅಷ್ಟೊಂದು ಗಂಭೀರವಾಗಿರಲಿಲ್ಲ. ಅಷ್ಟು ಹೊತ್ತಿಗೆ, ನಿರಂಜನ್, ಯಶಸ್ವಿ , ಶರತ್, ಸುಮನಾ ಮುಂತಾದವರು ನಮ್ಮ ಜೊತೆಯಾದರು. ನನ್ನ ಆದಿತ್ಯನ ಭೇಟಿಯ ಮೂರು ತಿಂಗಳಲ್ಲೇ, ನೋಡ ನೋಡುತ್ತಲೇ ರೀಡೂ ತೆರೆಗಪ್ಪಳಿಸಿತು.

ಯಾವುದನ್ನೇ ಆದ್ರು ಆರಂಭಿಸೋದು ಬಹಳ ಅಂದ್ರೆ ಬಹಳ ಸುಲಭ. ಅದನ್ನು ಮುಂದುವರಿಸಿಕೊಂಡು ಹೋಗೋದು ಬಹಳ ಕಷ್ಟ ಎನ್ನುವುದು ನಿಮಗೆಲ್ಲರಿಗೂ ಗೊತ್ತೇ ಇರುವ ಸಂಗತಿ. ನಮಗೂ ಅಷ್ಟೇ, ನಿಜವಾದ ಕಷ್ಟ ಏನೂಂತ ಗೊತ್ತಾಗಲು ಶುರುವಾಗಿದ್ದು ರೀಡೂ ಆರಂಭಿಸಿದ ಬಳಿಕವೇ. ರೀಡೂ ಓಪನಿಂಗ್ ಏನೋ ಗ್ರಾಂಡ್ ಆಗಿ ಆಯ್ತು, ಆದ್ರೆ ದಿನನಿತ್ಯ ಬರೆಯೋರು ಯಾರು?  ಕಂಟೆಂಟ್ಸ್ ಎಲ್ಲಿಂದ? ಎನ್ನುವ ಚಿಂತೆ ಕಾಡಲು ಶುರುವಾಗಿದ್ದು ಆವಾಗಲೇ. ನನಗಿನ್ನೂ ನೆನಪಿದೆ, ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ನಮಗಿದ್ದಿದ್ದು ಬರೀ ಹನ್ನೊಂದೇ ಮಂದಿ ಹವ್ಯಾಸಿ ಬರಹಗಾರರು. ನಮ್ಮ  ಭಟ್ಟರ ಭಾಷೆಯಲ್ಲಿ ಹೇಳೋದಾದ್ರೆ ಅಪ್ಪಟ ಎಳೆ ನಿಂಬೆಕಾಯಿಗಳು. ಅದರಲ್ಲೂ ಪ್ರತೀ ವಾರ ಬರೆಯುತ್ತೇವೆ ಎಂದು ಕಮಿಟ್’ಮೆಂಟ್ ಕೊಟ್ಟವರೂ ಒಬ್ಬರೂ ಇಲ್ಲ. ಪ್ರತೀ ವಾರ ಬರೆಯುತ್ತೇನೆಂಬ ಹುರುಪು ನನಗಿದ್ದರೂ ಸೂಕ್ತ ವಿಷಯಗಳನ್ನು ಹುಡುಕಿ ಗುಣಮಟ್ಟದ ಲೇಖನಗಳನ್ನು ಬರೆಯುತ್ತೇನೆಂಬ ಧೈರ್ಯ ನನಗೂ ಇಲ್ಲ. ಹಾಗೋ ಹೀಗೋ ನಾವು ಅಂದುಕೊಂಡಿದ್ದನ್ನು ಆರಂಭಿಸಿದ್ದಾಗಿತ್ತು.

ಬಹುಶಃ ರೀಡೂ ಎಂಬ ಸುಂದರ ಹೂವಿಗಾಗಿ ಹತ್ತಾರು ಮರಿದುಂಬಿಗಳು ಕಾಯುತ್ತಿದ್ದವೋ ಏನೋ? ಎಲ್ಲೆಲ್ಲಿಂದಲೋ ಮುತ್ತಿಕ್ಕಲು ಶುರುವಿಟ್ಟವು. ಕಂಟೆಂಟ್ ಎಲ್ಲಿಂದ ತರುವುದು ಎನ್ನುವ ಚಿಂತೆಯಲ್ಲಿ ನಾವಿದ್ದಾಗ, ಪ್ರತಿಭಾವಂತ ಎಳೆ ನಿಂಬೆಕಾಯಿಗಳ ಲೇಖನಗಳು, ಪದ್ಯಗಳು ನಮ್ಮ ಮೇಲಿಗೆ ಬಂದು ಬೀಳತೊಡಗಿದವು… ಕೆಲವರು ವಿದ್ಯಾರ್ಥಿಗಳು, ಇನ್ನು ಕೆಲವರು ಇಂಜಿನಿಯರುಗಳು, ಮತ್ಯಾರೋ ಡಾಕ್ಟರ್, ಶಿಕ್ಷಕರು. ಒಬ್ಬರೊಬ್ಬರನ್ನು ಮೀರಿಸುವಂತಹ ಬರಹಗಾರರು.. ಹೀಗೆ ನಮ್ಮ ಈ-ಮೈಲ್’ನಲ್ಲಿ ಲೇಖನಗಳ ಸಾಲು-ಸಾಲು. ಅಷ್ಟು ಹೊತ್ತಿಗೆ, ಫೇಸ್’ಬುಕ್ – ವ್ಯಾಟ್ಸಾಪ್ ಮೂಲಕ ನಾವು ಸಾವಿರಾರು ಜನರನ್ನು ತಲುಪಲು ಶುರುವಾಗಿತ್ತು. ನಮ್ಮ ಫ್ರೊಫೆಷನಲ್ ಲೈಫಿನ ಜಂಜಾಟದ ನಡುವೆಯೂ ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದುದನ್ನು ನೋಡಿ ಜನ ನಮ್ಮನ್ನು ಇನ್ನಿಲ್ಲದಂತೆ ಪ್ರೋತ್ಸಾಹಿಸಿದರು..

ನಾವು ಇನ್ನಾವುದೋ ಅಂತರ್ಜಾಲ ಪತ್ರಿಕೆಗೆ ಸ್ಪರ್ಧೆಯೊಡ್ಡಬೇಕೆನ್ನುವ ಉದ್ದೇಶಕ್ಕಾಗಿ ರೀಡೂ ಮಾಡಿದ್ದಲ್ಲ. ಹಣ ಮಾಡುವ ಉದ್ದೇಶ ಖಂಡಿತಾ ಇಲ್ಲ. ಹಣ ಕೈಯಿಂದಲೇ ಹಾಕಿದ್ದಷ್ಟೇ ವಿನಹ ನಯಾ ಪೈಸೆ ಇದುವರೆಗೂ ಹುಟ್ಟಿಲ್ಲ. ನಮ್ಮ ಉದ್ದೇಶವೇನಿದ್ದರೂ ಒಂದೇ, ಕೆಲವರು ಹವ್ಯಾಸಿ ಬರಹಗಾರರಿರುತ್ತಾರೆ. ಹವ್ಯಾಸಿಯಾದರೂ ಓದುಗರ ರುಚಿಗೆ ತಕ್ಕಷ್ಟೇ ಉಪ್ಪನ್ನು ಹಾಕಿ ಶುಚಿ-ರುಚಿಯಾದ ಬರಹವನ್ನು ಬಡಿಸುವ ಸಾಮರ್ಥ್ಯವುಳ್ಳವರಾಗಿರುತ್ತಾರೆ. ಅಂತವರು ಅವಾಗಾವಾಗ ಬರೆದು ಅವುಗಳನ್ನು ದಿನಪತ್ರಿಕೆಗಳಿಗೆ ಕಳುಹಿಸುತ್ತಿರುತ್ತಾರೆ. ಆದರೆ ಪತ್ರಿಕೆಯಲ್ಲಿ ಜಾಗವಿಲ್ಲದ ಕಾರಣಕ್ಕೋ ಇನ್ನಾವುದೋ ಕಾರಣಕ್ಕೆ ಅವುಗಳು ಸ್ವೀಕೃತವಾಗುವುದಿಲ್ಲ. ಇದರಿಂದ ಸಹಜವಾಗಿಯೇ ಅವರಿಗೆ ನಿರಾಸೆಯಾಗುತ್ತದೆ. ಅಂತವರಿಗೆ ಒಂದು ಉತ್ತಮ ವೇದಿಕೆ ಒದಗಿಸಬೇಕು, ಅವರ ಬರಹಗಳು ಹತ್ತಾರು ಜನರಿಗೆ ತಲುಪಿಸಬೇಕೆನ್ನುವ ಉದ್ದೇಶದಿಂದಲೇ ನಾವು ರೀಡೂ ಆರಂಭಿಸಿದ್ದು.

ಆ ಬಳಿಕ ನಡೆದಿದ್ದೆಲ್ಲವೂ ಇತಿಹಾಸ. ನೋಡ ನೋಡುತ್ತಲೇ ನಾವು ಹಲವು ಎಳೆನಿಂಬೆಕಾಯಿಗಳನ್ನು ಬೆಳೆಸತೊಡಗಿದೆವು. ಅವರ ಜೊತೆಗೆ ನಾವೂ ಬೆಳೆದೆವು. ಹವ್ಯಾಸಿಗರಿಗೆ ವೇದಿಕೆಯಾಗಬೇಕೆನ್ನುವ ಮಾತ್ರಕ್ಕೆ ಸಿಕ್ಕ ಸಿಕ್ಕ ಬರಹಗಳನ್ನೆಲ್ಲಾ ರೀಡೂನಲ್ಲಿ ಪ್ರಕಟಿಸಲಿಲ್ಲ. ಲೇಖನದ ಗುಣಮಟ್ಟವನ್ನು ಅಳೆದು ತೂಗಿದ ನಂತರವೇ ಅದನ್ನು ಪ್ರಕಟಿಸಿದ್ದು. ಕೆಲವು ಬರಹಗಳು ಅಷ್ಟೇನೂ ಗುಣಮಟ್ಟವಿಲ್ಲದಿದ್ದರೂ ನಾವೇ ಸ್ವತಃ ಆಸ್ಥೆ ವಹಿಸಿ ಅದನ್ನು ಎಡಿಟ್ ಮಾಡಿ ಅದನ್ನು ಒಂದು ಹಂತಕ್ಕೆ ತಂದು ಪ್ರಕಟಿಸಿದ್ದೇವೆ. ಜೊತೆ ಜೊತೆಗೆ ಮೂಲ ಬರಹಗಾರನಿಗೆ ಯಾವುದು ಹೇಗಿದ್ದರೆ, ಎಷ್ಟಿದ್ದರೆ ಚೆನ್ನ ಎಂಬುದರ ಕುರಿತಾಗಿ ನಮ್ಮ ಕಿಂಚಿತ್ ಅನುಭವದ ಮೇಲೆಯೇ ಒಂದಷ್ಟು ಸಲಹೆಗಗಳನ್ನೂ ಕೊಟ್ಟು ಮುಂದಿನ ಲೇಖನಕ್ಕಾಗುವ ಆತನನ್ನು ಪರಿಪಕ್ವಗೊಳಿಸಿದ್ದೇವೆ ಎಂದು ಹೇಳಿಕೊಳ್ಳಲು ನಮಗೆ  ಬಹಳ ಖುಷಿ ಇದೆ.

ಈ ನಡುವೇ readoo.in ಇಂದ ಕನ್ನಡವನ್ನು ಪ್ರತ್ಯೇಕಿಸಿ ರೀಡೂ ಕನ್ನಡ(kannada.readoo.in) ಎಂದು ಹೊಸತಾಗಿ ಲಾಂಚ್ ಮಾಡಿದಾಗಲಂತೂ ನಮಗೆ ಅಭೂತಪೂರ್ವ ಪ್ರತಿಕ್ರಿಯೆ ಬಂತು. ಒಂದೇ ಆತ್ಮ ಎರಡು ದೇಹ! ಲೇಖನಗಳನ್ನು ಬರೆಯುವುದರಲ್ಲಿ ಅದಾಗಲೇ ಬಲಿತ ಬರಹಗಾರರು ನಮಗೆ ಬರೆಯಲು ಶುರುವಿಟ್ಟರು. ನಮ್ಮ ಹೊಸ ವಿನ್ಯಾಸ ಮತ್ತು ಗುಣಮಟ್ಟದ ಬರಹಗಳು ಜನರ ಕಣ್ಮನ ಸೆಳೆಯುಲು ಶುರುವಿಟ್ಟಿದ್ದರಿಂದ ನಮ್ಮ ರೀಚ್ ಜಾಸ್ತಿಯಾಗತೊಡಗಿತು. ರೀಡೂ ನಮ್ಮ ಮುಖಗಳನ್ನು ಸಾವಿರಾರು ಜನರಿಗೆ ಪರಿಚಯಿಸಿತ್ತು. ಹತ್ತಾರು ಬರಹಗಾರರನ್ನು ನಮಗೆ ಪರಿಚಯಿಸಿತು. ವೈಯಕ್ತಿಕವಾಗಿ,ಪ್ರತೀ ವಾರ ಬರೆಯುವ ಧೈರ್ಯವಿಲ್ಲದಿದ್ದ ನನಗೆ ನನ್ನ ಸಾಮರ್ಥ್ಯವನ್ನು ಪರಿಚಯಿಸಿಕೊಟ್ಟಿತು.

ಎಳೆ ನಿಂಬೆಕಾಯಿಗಳು ಆರಂಭಿಸಿದ ರೀಡೂ ಇವತ್ತು ಯಶಸ್ವಿಯಾಗಿ ಎರಡನೇ  ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಆಗಲೇ ಹೇಳಿದ್ದೆನಲ್ಲಾ, ಶುರುವಾತಿನಲ್ಲಿ ನಮ್ಮ ಜೊತೆಗಿದ್ದಿದ್ದು ಹನ್ನೊಂದೇ ಹನ್ನೊಂದು ಜನ ಬರಹಗಾರರು. ಈಗ ನೋಡಿ, ಕಡಿಮೆಯೆಂದರೂ ಎಪ್ಪತ್ತು ಜನ ಬರಹಗಾರರಿದ್ದಾರೆ. ಅತಿಥಿಗಳಾಗಿ ಬರೆಯುವವರು ಇನ್ನೂ ತುಂಬಾ ಜನ ಇದ್ದಾರೆ. ಏನಿಲ್ಲಾ ಅಂದರೂ ಸಾವಿರದ ಇನ್ನೂರು ಲೇಖನಗಳು ರೀಡೂನಲ್ಲಿದೆ. ಪ್ರಚಲಿತ ವಿದ್ಯಾಮಾನ, ಕ್ರೀಡೆ, ಪ್ರವಾಸ, ಚಲನಚಿತ್ರ ಮುಂತಾದ ವಿಭಾಗದಲ್ಲಿ ಲೇಖನಗಳಿವೆ. ಕೆಲವರು ತಮ್ಮ ಜೀವನಾನುಭವಗಳನ್ನು ಅಂಕಣಗಳ ಮೂಲಕ ದಾಖಲಿಸಿಕೊಂಡಿದ್ದಾರೆ. ಮತ್ತೆ ಕೆಲವರು ಅದನ್ನೇ ಪದ್ಯಗಳ ಮೂಲಕ ಅಭಿವ್ಯಕ್ತಗೊಳಿಸಿದ್ದಾರೆ. ರಾಷ್ಟ್ರೀಯತೆಯ ವಿಚಾರ ಬಂದಾಗ ತಡ ಮಾಡದೆ ಅದನ್ನು ಬರೆದಿದ್ದೇವೆ. ಭೃಷ್ಟಾಚಾರ, ಅತ್ಯಾಚಾರದ ಕುರಿತಾಗಿ ಪಕ್ಷಾತೀತವಾಗಿ ಖಂಡಿಸಿದ್ದೇವೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಬಾಲಿಶತನ ಪ್ರದರ್ಶಿದವರನ್ನು ಹಿಂದೆ ಮುಂದೆ ನೋಡದೆ ಜಾಡಿಸಿದ್ದೇವೆ. ನಮ್ಮ ವಿಚಾರ ಪ್ರಚೋದಕ  ಬರಹಗಳು ಪ್ರಜ್ಞಾವಂತ ಓದುಗರನ್ನು ಚಿಂತನೆಗೆ ಹಚ್ಚಿದೆ. ನಾನೂ ಬರೆಯಬೇಕೆನ್ನುವ ಕೆಲವರ ಆಸೆಗೆ ಕಿಡಿ ಹತ್ತಿಸಿದೆ. ಒಟ್ಟಿನಲ್ಲಿ, ಒಂದು ಪುಟ್ಟ ಹಳ್ಳಿಯಲ್ಲಿ ಕುಳಿತು ಒಂದು ಡಬ್ಬದಂತಹ ಕಂಪ್ಯೂಟರ್ ಮತ್ತು ಅಂತರ್ಜಾಲವೆಂಬ ಮಾಯಾಜಾಲವನ್ನು ಉಪಯೋಗಿಸಿ ನಾವು ಮಾಡಿದ ಕೆಲಸಗಳು ಕೆಲವು ಘಟಾನುಘಟಿಗಳ ನಿದ್ದೆಗೆಡಿಸಿದ್ದಂತೂ ಸುಳ್ಳಲ್ಲ.

ಬಹಳ ವಿನಮ್ರತೆಯಿಂದ ಒಂದು ಮಾತು, ನಮಗೆ ಗೊತ್ತಿದೆ,’ನಾವು ಇದುವರೆಗೆ ಸಾಧಿಸಿದ್ದು ಏನೆನೂ ಇಲ್ಲ, ಸಾಧಿಸಬೇಕಿರುವುದೇ ಇನ್ನೆಲ್ಲಾ’ ಎಂದು. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನವಂತೂ ಇದ್ದೇ ಇದೆ. ನಮ್ಮ ಅಕ್ಷರ ದಾಸೋಹವಂತೂ ನಿತ್ಯನಿರಂತರವಾಗಿ ನಡೆಯಲಿದೆ. ಒಂದಂತೂ ಬಹಳ ಆತ್ಮವಿಶ್ವಾಸದಿಂದ ಹೇಳಬಲ್ಲೆ. ರೀಡೂ ಎಂದಿಗೂ, ಯಾವ ಕಾರಣಕ್ಕೂ  ನಿಲ್ಲದು, ಕೈ ಹಿಡಿದು ಮುನ್ನಡೆಸುವ ಕರ್ತವ್ಯ ನಿಮ್ಮದು!

ಇಷ್ಟೆಲ್ಲಾ ಹೇಳಿದ ಮೇಲೆ ಇನ್ನೊಂದು ಮಾತು ಹೇಳದಿದ್ದರೆ ಖಂಡಿತವಾಗಿಯೂ ನನಗೆ ಸಮಾಧಾನವಿಲ್ಲ. ರೀಡೂ ಮಾಡಿದ್ದರಿಂದ ನಿಮಗೇನು ಗಿಟ್ಟುತ್ತೆ? ಎಷ್ಟು ಲಾಭ ಬರುತ್ತೆ ಅಂತ ತುಂಬಾ ಜನ ನಮ್ಮನ್ನು ಕೇಳ್ತಾರೆ. ನಾವಿವತ್ತು ಯಾವುದೇ ಸಭೆ ಸಮಾರಂಭಗಳಿಗೆ ಹೋಗಲಿ, ಬಹಳ  ಜನ ಅವರೇ ಬಂದು ನಮ್ಮನ್ನು ಮಾತನಾಡಿಸುತ್ತಾರೆ. “ನೀವು ಶಿವಪ್ರಸಾದ್ ಅಲ್ವಾ? ನಿಮ್ಮ ರೀಡೂ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಆಲ್ ದಿ ಬೆಸ್ಟ್ “ ಎಂದು ಹೇಳುತ್ತಾರೆ. ನಮಗೆ ರೀಡೂನಿಂದ ಗಿಟ್ಟಿದ್ದು ಇಷ್ಟೇ.!

ಶಿವಪ್ರಸಾದ್ ಭಟ್

Facebook ಕಾಮೆಂಟ್ಸ್

ಲೇಖಕರ ಕುರಿತು

Readoo Staff

Tailored news content, just for you.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!