ಅದೆಷ್ಟು ಹುಡುಕಿದರೂ ಸಿಗುತ್ತಿಲ್ಲ ಕುರುಹು
ಎಷ್ಟು ಆಳಕ್ಕಿಳಿದರೂ ಬರೀ ಗೊಜಲು ಗೊಜಲು
ತಲೆ ಬುಡ ಏನೂ ತಿಳಿಯದು
ಇಷ್ಟು ವರುಷಗಳು ಕಳೆದರೂ ಜೊತೆಯಲಿ, ಅರ್ಥವಾಗುತ್ತಿಲ್ಲ ಇವನು.1
ಒಮ್ಮೊಮ್ಮೆ ಅದೇನೋ ಹುಮ್ಮಸ್ಸು, ಅದೇನೋ ಉತ್ಸಾಹ, ಲವಲವಿಕೆ
ಮತ್ತೊಮ್ಮೆ ಅದೇ ಆದ್ರತೆ, ಬೇಸರಿಕೆ, ಜಿಗುಪ್ಸೆ
ಮೂಲೆಯಲಿ ಚಿಗುರೊಡೆದು ಮನದ ತುಂಬ ಹಬ್ಬುವ ಆಸೆಗಳು,
ಏನೇನೋ ಕನಸುಗಳು, ವಾಸ್ತವದ ಜೊತೆಗೆ ಕಾದುವ, ಸೋಲುವ, ಗೆಲ್ಲುವ, ಗೆದ್ದೂ ಸೋಲುವ ಬಯಕೆಗಳು.
ಹುಚ್ಚು ಕುದುರೆಯ ಮೇಲೇಯೇ ಸವಾರಿ
ಪ್ರತಿ ಹೆಜ್ಜೆಗೂ ನೂರಾರು ಹೊಸ ದಾರಿ
ಯಾವುದು ತಪ್ಪು, ಯಾವುದು ಸರಿ
ಅಷ್ಟಕ್ಕೂ ಸಾಧುವೆ ಇವನ ಗುರಿ?
ಸದಾ ಮುಂದಿನದ್ದೇ ಚಿಂತೆ, ಋಣಗಣದ್ದೇ ಕಾರು-ಬಾರು
ನಡು ನಡುವೆ ಧನಶೇಷದ ಮಿಣುಕು, ಸ್ಫೂರ್ತಿ, ಆಸರೆ
ಒಮ್ಮೆಲೆ ಆವರಿಸುವ ವ್ಯಾಮೋಹ, ಕರಿಮೋಡದಂತೆ
ಕೆಲವೊಮ್ಮೆ ನಿರಾಳ, ಗಾಳಿಯಲಿ ತೇಲುವ ಅರಳೆಯಂತೆ
ಏರೇ ಬಿಡುವನೊಮ್ಮೆ ಹೆಮ್ಮೆಯ ಮೇರು ಗಿರಿ
ಕಾಲೆಳೆದಾಗ ಹಳ-ಹಳಿಯ ಪ್ರಪಾತ.
ನಿರಾಸೆಯ ಕಾಲುವೆಯಲಿ ಮೊಣಕಾಲಷ್ಟು ನೀರಿದ್ದರೂ ದಾಟಲಂತು ಸಾಕು-ಸಾಕು
ಮುಂದೆ ಮಗಧಾದ ಹೊಳೆಯೇ ಇದೆ ಈಸಿ ದಡವ ಸೇರಬೇಕು
ನಂಬ ಬಹುದೇ ಇವನ? ಇವನ ಸಾಮರ್ಥ್ಯವ?
ಅರಿಯ ಬಲ್ಲೆನೇ ನಾನು ಎಂದಾದರು ಇವನ ಆಳ-ವಿಸ್ತಾರವ
ಗೊತ್ತಿಲ್ಲ ಎಷ್ಟುದಿನ ಈ ಪ್ರಯತ್ನ, ಬಹುಶಃ ನನ್ನ ಕೊನೆಯವರಿಗೆ
ಅಥವಾ ಇವನು ಜೊತೆ ಇರುವರೆಗೆ…