ಅಂಕಣ

ಮೂಢನಂಬಿಕೆ ಮತ್ತು ಶಿಕ್ಷಣ.

ಅವತ್ತು ಎಸ್.ಎಸ್.ಎಲ್.ಸಿ ಕೊನೆಯ ದಿನದ ಪರೀಕ್ಷೆ ಬರೆದು ಬಂದು ಮಕ್ಕಳೆಲ್ಲ ಮಾತಾಡುತ್ತ ಕುಳಿತಿದ್ದರು. ಗೆಳತಿಯರ ಅಗಲುವಿಕೆಯ ನೋವು ಅವರ ಕಣ್ಣುಗಳಲ್ಲಿ ಇಣುಕಿತ್ತು ಆಗಲೇ. ಮಾತು ಸಹಜವಾಗೇ ಮುಂದಿನ ವಿದ್ಯಾಭ್ಯಾಸದ ಕಡೆಗೆ ಹೊರಳಿತು. ಪ್ರತಿಯೊಬ್ಬರ ದೃಷ್ಟಿಯೂ ಇಂಜನಿಯರ್, ಡಾಕ್ಟರ್, ಚಾರ್ಟ್ಡ್ ಅಕೌಂಟೆಂಟ್, ಐಎಸ್.. ಬಾಪರೆ! ನನಗಂತೂ ಅವರ ಹುರುಪಿಗೆ ವಿಶ್ವಾಸಕ್ಕೆ ನಗಬೇಕೋ ಸುಮ್ಮನಿರಬೇಕೋ ತಿಳಿಯುತ್ತಿರಲಿಲ್ಲ. ಎಲ್ಲರೂ ಬುದ್ದಿವಂತರೆ. ಮಾತಿಲ್ಲ. ಹಾಗಂತ ಅವರಂದುಕೊಂಡಷ್ಟು ಸುಲಭವೂ ಅಲ್ಲವಲ್ಲ! ಯಾಕೆ ಯಾರೂ ಟೀಚರ್, ಲೆಕ್ಚರ್ ಆಗೋದಿಲ್ವಾ? ಮಧ್ಯೆ ನಾನು ಬಾಯಿ ಹಾಕಿದ್ದು ಅವರಿಗೆ ಇರುಸು ಮುರುಸಾಯಿತೇನೋ.

ಟೀಚರ್ ಆದ್ರೆ ಮಹಾ ಎಷ್ಟು ಸ್ಯಾಲರೀ ಬರತ್ತೆ! ಅಲ್ಲಿಂದ ಅವರ ಮಾತು ಚರ್ಚೆಗಿಳಿಯಿತು. ಹೌದು ಅದ್ಯಾವುದೋ ದೇಶದಲ್ಲಿ ಟೀಚರ್ಸ್’ಗೆ ಸಾಪ್ಟವೇರ್ ಇಂಜನಿಯರ್ಗಿಂತ ಜಾಸ್ತಿ ಸಂಬಳ ಬರತ್ತಂತೆ ಕಣೆ. ಹೌದಾ? ಹಾಗಾ! ಹೀಗಾ! ಮತ್ತೊಬ್ಬಳು ” ಹೌದು ಮತ್ತೆ. ದೇಶದ ಭವಿಷ್ಯ ನಮ್ಮ ಮಕ್ಕಳು ಅಂತಾ ಹೇಳ್ತಾರೆ. ನಮ್ಮ ದೇಶದಲ್ಲಿ ಯಂತ್ರಗಳ ಅಭಿವೃದ್ದಿಗೆ, ಸಾಪ್ಟ್ವೇರ್ ಇಂಪ್ರೂವ್ ಮಾಡೋದಕ್ಕೆ ತೆಗೆದುಕೊಳ್ಳೋ ಕಾಳಜಿಯಲ್ಲಿ 10% ಕೂಡ ಮಕ್ಕಳ ಭವಿಷ್ಯಕ್ಕೆ ತೆಗೆದುಕೊಳ್ಲೋದಿಲ್ಲ. ಒಂದು ಕಾಲದಲ್ಲಿ ಶಿಕ್ಷಕರು ಗುರುಗಳು ಅಂದ್ರೆ ಎಷ್ಟು ಗೌರವವಿತ್ತು! ಅಷ್ಟೇ ಆಪ್ತ ಭಾವ ಇತ್ತು. ಇವತ್ತು ಸ್ಯಾಲರೀ ಜೊತೆ ಅವರ ವಿದ್ವತ್ತೂ ಕಮ್ಮಿಯಾಗಿದೆ. ಗೌರವವೂ ಕಮ್ಮಿಯಾಗಿದೆ. ಅವರ ಸ್ಥಾನಮಾನ ಎಲ್ಲವೂ ಕಮ್ಮಿಯಾಗಿದೆ. ವಿಜ್ಞಾನಿಗಳು ತಂತ್ರಜ್ಞಾನಿಗಳು ಬೇಕೆಂದುಕೊಳ್ಳುವ ಭವಿಷ್ಯದ ಮಕ್ಕಳ ರೂವಾರಿಗಳು ಎಲ್ಲೂ ಸಲ್ಲದವರು ಬಂದು ಸೇರುವ ವೃತ್ತಿ ಶಿಕ್ಷಕ ವೃತ್ತಿ ಎನ್ನುವಂತಾಗಿದೆ!” ಮಕ್ಕಳ ಮಾತು ಮುಂದುವರೆಯಿತು.. ಹೌದು ಅಷ್ಟು ಪುಟ್ಟ ಮಕ್ಕಳಿಗೆ ಶಿಕ್ಷಕ ವೃತ್ತಿಯ ಕುರಿತಾದ ಗೌರವ ಕಮ್ಮಿಯಾಗಿದೆ. ಶಿಕ್ಷಕರ ಸಂಖ್ಯೆ ಕಮ್ಮಿಯಾಗಿಲ್ಲ. ಆದರೆ ಸಂಬಳ, ಶಿಸ್ತು, ಜ್ಞಾನ, ಮೌಲ್ಯಗಳತೂಗಿ ನೋಡಿದಾಗ ಪ್ರತಿಭಾವಂತರು ಆಯ್ಕೆ ಮಾಡಿಕೊಳ್ಳುವ ಕ್ಷೇತ್ರ ಶಿಕ್ಷಣಕ್ಷೇತ್ರವಾಗಿಲ್ಲ. ಮತ್ತು ಎಲ್ಲ ವಿಚಾರಗಳು ಆರಂಭವಾಗುವುದು ಶಿಕ್ಷಣದ ಈ ಪ್ರಾಥಮಿಕ ಹಂತದಿಂದಲೇ ಆಗಿರುವುದರಿಂದ ಶಿಕ್ಷಣದ ಗುಣಮಟ್ಟ ಕುಸಿತದಿಂದಲೇ ಸಮಾಜದ ಪ್ರತಿಯೊಂದು ಸಮಸ್ಯೆಗಳು ಆರಂಭವಾಗುತ್ತವೆ ಎನ್ನುವುದು ಪುಟ್ಟಮಕ್ಕಳಿಗೂ ಅರಿವಾಗುವ ಸಂಗತಿ.

ಶಿಕ್ಷಣದ ಪ್ರಾಚೀನ ಇತಿಹಾಸವನ್ನು ಬದಿಗಿಟ್ಟು ಸ್ವಾತಂತ್ರ್ಯಾನಂತರದ ಇತಿಹಾಸವನ್ನು ನೋಡಿದರೂ ನಮಗೆ ಒಂದಿಷ್ಟು ಸತ್ಯಗಳು ಗೋಚರವಾಗುತ್ತವೆ…ಶಿಕ್ಷಣದಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆಯಾಗಬೇಕೆಂಬುದು ಎಷ್ಟು ಮಾನವೀಯವೋ ಅಷ್ಟೇ ಮುಖ್ಯವಾದದ್ದು ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳಬೇಕಾದದ್ದು. ಜೊತೆಗೆ ಶಿಕ್ಷಣವೆಂದರೆ ಬರೀ ಅಕ್ಷರದ ಹೊದಿಕೆಯೆಂಬಂತೆ ಅಕ್ಷರಗಳ ಹೊರತಾಗಿಯೂ ಕಲಿಯಬಹುದಾದ ನೈತಿಕ ಶಿಕ್ಷಣ ಮತ್ತು ವೃತ್ತಿ ಶಿಕ್ಷಣದ ಮಹತ್ವ ಸುಮಾರು ದಶಕಗಳ ಕಾಲ ನಿಂತೇ ಹೋಯಿತೆಂದರೆ ತಪ್ಪಾಗಲಾರದು. ಕೈಗಾರೀಕರಣದ ಭರದಲ್ಲಿ ಯಾಂತ್ರಿಕ ತಾಂತ್ರಿಕ ಶಿಕ್ಷಣದ ಹುರುಪಿನಲ್ಲಿ ನಾವು ನಮ್ಮ ಶಿಕ್ಷಣದ ಮೂಲ ಬೇರುಗಳನ್ನು ಬದಿಗೊತ್ತಿದ್ದರಿಂದಲೆ ಬಹುಶಃ ದೇಶ ಇಂದು ಇಷ್ಟುದೊಡ್ಡ ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದೆ. ಕೃಷಿ, ಕಲೆ, ಸಾಂಪ್ರದಾಯಿಕ ಕೈಗಾರಿಕೆ, ಸಾಂಪ್ರದಾಯಿಕ ಉದ್ಯೋಗ ಇವುಗಳಲ್ಲಿ ಆಸಕ್ತಿ ಕಳೆದುಕೊಂಡು ಬರೀ ನಗರ ನಿರ್ಮಿತ ವಾಣಿಜ್ಯೋದ್ಯಮದ ಅವಲಂಬಿಗಳಾಗಿದ್ದೇವೆ.

ನಮ್ಮಲ್ಲಿನ ಅರಿವಿನ ಕೊರತೆಯನ್ನು ನೀಗಿ ಪ್ರಜ್ಞಾವಂತರಾಗಿಸುವಂತ ಮೌಲ್ಯಶಿಕ್ಷಣ ಜಾರಿಯಾಗದಿರುವುದು ಸ್ವಾತಂತ್ರ್ಯಾನಂತರದ ಶಿಕ್ಷಣ ಸುಧಾರಣೆಯಲ್ಲಿ ಕಂಡುಬರುವ ದೊಡ್ಡ ಕೊರತೆ. ಇವತ್ತು ಮೂಢನಂಬಿಕೆಗಳ ವಿರುದ್ದ ಕಾಯ್ದೆ ಹೊರಡಿಸುವ ಸರಕಾರದ ದುಸ್ಥಿತಿಗೆ ಇದೇ ಮೂಲಕಾರಣ. ಮನುಷ್ಯನಲ್ಲಿ ವಾಸ್ತವ ಹಾಗೂ ವೈಜ್ಞಾನಿಕ ಪ್ರಜ್ಞೆ ಮೂಡಿಸುವಲ್ಲಿ ಈ ಆರುದಶಕಗಳ ಕಾಲ ಸಾಧ್ಯವಾಗಿಲ್ಲವೆಂದರೆ ಅದು ಶಿಕ್ಷಣದ ಸೋಲು. ಸಮಗ್ರ ಶಿಕ್ಷಣ ನೀತಿಯನ್ನು ಅದೆಷ್ಟು ಬಾರಿ ಜಾರಿ ಮಾಡಿಯೂ ಸ್ವಾತಂತ್ರ್ಯಾನಂತರ ಶಿಕ್ಷಣ ಸರಿಯಾದ ದಾರಿಯನ್ನು ಕಂಡುಕೊಳ್ಳದಿರುವುದಕ್ಕೆ ಇದೊಂದು ಪ್ರತ್ಯಕ್ಷ ಉದಾಹರಣೆ. ಮನುಷ್ಯನೊಳಗೆ ನಂಬಿಕೆಗಳು ರೂಢಿಗೊಂಡಂತವು. ಅವುಗಳನ್ನು ಆಚರಿಸುವಾಗಲೂ ಅವನಲ್ಲಿ ಯಾವುದೋ ನೈತಿಕ ಪ್ರಜ್ಞೆಯೊಂದು ನಿಂತಿರುತ್ತದೆ. ದೇವರ ಭಯ, ದೆವ್ವದ ಭಯ, ತಪ್ಪುಗಳ ಕುರಿತಾದ ಭಯ ಹೀಗೆ… ಶಿಕ್ಷಣ ಸರಿಯಾಗಿದ್ದರೆ ಚಿಂತನೆ ವೈಜ್ಞಾನಿಕವಾಗಿದ್ದರೆ ಯಾವ ಕಾನೂನಿನ ಅವಶ್ಯಕತೆಯಿಲ್ಲದೇ ಮೂಢ ಆಚರಣೆಗಳನ್ನು ಬಿಟ್ಟು ಹೊರಬರುತ್ತಿದ್ದರಲ್ಲವೇ? ಅದು ಹೋಗಲಿ ಎಂದರೆ ನಂಬಿಕೆಗಳಿಗೆ ಸರಿಯಾದ ಸ್ಪಷ್ಟನೆಯಾದರೂ ಇರುತ್ತಿತ್ತು. ಒಟ್ಟೂ ಧಾರ್ಮಿಕ ಭಾವನೆಗಳನ್ನು ವಿರೋಧಿಸುವುದು, ಜರೆಯುವುದೇ ಒಂದು ದೊಡ್ಡ ಸಾಮಾಜಿಕ ಪ್ರಜ್ಞೆ ಎಂಬ ಮೂಢ ಕಲ್ಪನೆಯಾದರೂ ಕಮ್ಮಿಯಾಗುತ್ತಿತ್ತು. ನಗರಗಳಲ್ಲಿರುವ ಶಿಕ್ಷಿತ ವರ್ಗವೇ ಇವತ್ತು ಅತಿ ಹೆಚ್ಚಿನ ಮೂಢನಂಬಿಕೆಗಳ ಆಚರಣೆಯನ್ನು ಅಂಟಿಕೊಂಡಿದೆ ಮತ್ತು ನಗರಗಳಲ್ಲಿಯೇ ಇವು ದೊಡ್ಡ ಬ್ಯುಜಿನೆಸ್ಗಳಾಗಿವೆ ಎಂಬುದು ಕೂಡ ಎಲ್ಲರಿಗೂ ಗೊತ್ತಿರುವ ವಿಷಯವೇ.

ಬುದ್ದಿಜೀವಿಗಳು ಪ್ರಜ್ಞಾವಂತರು ಇಷ್ಟುದೊಡ್ಡ ಪ್ರಮಾಣದಲ್ಲಿರುವ ದೇಶದಲ್ಲಿ ಇವತ್ತು ಅಸಹಿಷ್ಣತೆ, ಅತಿವಾದಗಳು ಈ ಪ್ರಮಾಣದಲ್ಲಿ ಗುಲ್ಲೆಬ್ಬಿಸುವ ಮೊದಲು ಅರವತ್ತು ದಶಕಗಳಲ್ಲಿ ಸಾಮಾನ್ಯರಿಗೆ ವೇದ, ವಿಜ್ಞಾನ, ಮೌಲಿಕ ಶಿಕ್ಷಣ, ಮತ್ತೆ ಅಗತ್ಯವೆನ್ನಿಸಿದ ಎಲ್ಲಾ ಬ್ರಾಹ್ಮಣರ ಸ್ವತ್ತು ಎಂದು ಹಣೆಪಟ್ಟಿಗೀಡಾಗಿದ್ದನ್ನೂ ಸಹ ಕಲಿಯುವ ಅವಕಾಶ

ಸಂವಿಧಾನಿಕವಾಗೇ ಬಂದಿದೆ. ಹಾಗಾದರೆ ಈ ಶಿಕ್ಷಣದ ಕುರಿತಾದ ಪೂರ್ವಾಗ್ರಹಗಳ ಬಿಟ್ಟು ಇದನ್ನು ಎಲ್ಲರೂ ಕಲಿಯುವ ಅವಕಾಶವಿದ್ದಾಗಲೂ ಸರಕಾರ ಕೂಡ ಅಂತಹ ಪ್ರಯತ್ನವನ್ನೇನೂ ಮಾಡಿದಂತೆ ತೋರುವುದಿಲ್ಲ. ಅಲ್ಲೊಂದು ಇಲ್ಲೊಂದು ಪ್ರತಿಷ್ಟಾನಗಳು ಸ್ವಲ್ಪಮಟ್ಟದಲ್ಲಿ ಸಂಸ್ಕೃತಾಧ್ಯಯನಕ್ಕೆ ಒತ್ತುಕೊಟ್ಟಿವೆಯೇ ವಿನಃ ಉಳಿದಂತೆ ಇಂಗ್ಲೀಷರು ಬಿಟ್ಟುಹೋದ ಮೆಕಾಲೆ ಶಿಕ್ಷಣಪದ್ದತಿಯನ್ನೇ ಭಾರತ ಸರಕಾರ ನೆಚ್ಚಿಕೊಂಡಿದೆ. ನಮ್ಮ ಸಂಸ್ಕೃತಿ ಅಧ್ಯಯನ ಸಂಸ್ಕೃತ ಅಧ್ಯಯನಕ್ಕೆ ಆಸಕ್ತಿಯನ್ನೇ ತೋರಿಸದೇ ದಶಕಗಳ ಕಾಲ ಅದರ ಗಟ್ಟಿತನದಿಂದಾಗಿ ಅದು ಉಳಿಯುತ್ತಿದೆ ಬೆಳೆಯುತ್ತಿದೆ ಎಂಬ ಮಾತ್ರಕ್ಕೆ ಇವತ್ತು ಬ್ರಾಹ್ಮಣರು, ವೇದವಿದ್ವಾಂಸರನ್ನು ಹೀನಾಯ ಕಾಣುತ್ತಿರುವುದು ಎಷ್ಟು ಸರಿ ಎಂಬುದು ಸಾಮಾನ್ಯರೂ ವಿಚಾರ ಮಾಡಬೇಕಾದ ವಿಷಯ. ಸರಕಾರ ಎಲ್ಲಿ ಈ ಎಲ್ಲ ದೇಸೀ ಅಧ್ಯಯನಗಳಿಗೆ ಹೆಚ್ಚಿನ ಉತ್ಸಾಹ ತೋರಿಸುತ್ತಿದೆ ಅನ್ನಿಸಿದಾಗ ಈ ಎಲ್ಲ ವೈಚಾರಿಕ ಕ್ರಾಂತಿ ಬುಗಿಲೆದ್ದಿದೆ ಎಂದು ಅನ್ನಿಸದಿರದು. ಇದು ಮತ್ತೊಮ್ಮೆ ಬೌದ್ದಿಕವಾಗಿ ಬೆಳೆಯಲು ನಮ್ಮತನದ ಪಸರುವಿಕೆಗೆ ನಾವೇ ಅಡ್ಡಗಾಲು ಹಾಕಿಕೊಂಡಂತೆ.ಮತ್ತು ನಮ್ಮಂತೆ ನಮ್ಮ ಮುಂದಿನ ತಲೆಮಾರು ಕೂಡ ಈ ನೆಲದ ಶಿಕ್ಷಣದಿಂದ ವಂಚಿತವಾಗಿ ವೈಜ್ಞಾನಿಕತೆಯ ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿ ಮೂಡನಂಬಿಕೆಗಳನ್ನು ತೊರೆಯಲಾಗದೇ ನಂಬಿಕೆಗಳನ್ನು ಹಿಡಿದಿರಲಾಗದೇ ಮನುಷ್ಯನ ಅಂತರಂಗದ ಬದುಕನ್ನು ನರಕವನ್ನಾಗಿಸುವಲ್ಲಿ ನಮ್ಮದೂ ಕೊಡುಗೆ…

ಶಿಕ್ಷಣ ನೆಲದ ಶಿಕ್ಷಣವಾಗಬೇಕು. ಇಲ್ಲಿಯ ಬದುಕು ಪರಿಸರ ಹಾಗೂ ಮನುಷ್ಯನ ಬದುಕಿನೊಂದಿಗೆ ವೈಜ್ಞಾನಿಕ ದೃಷ್ಟಿಕೋನದ ಸಮನ್ವಯ ಸಾಧಿಸಬೇಕು. ಇವೆರಡನ್ನೂ ಮರೆತು ಶಿಕ್ಷಣ ತಜ್ಞರು ನಮ್ಮ ಮಕ್ಕಳನ್ನು ಎಂಜಿನಿಯರ್ ಡಾಕ್ಟರ್, ವಿಜ್ಞಾನಿ, ಎಲ್ಲ ಆಗಿಸುತ್ತಿದ್ದಾರೆ. ಆಸಕ್ತ ಕ್ಷೇತ್ರ ಮುಖ್ಯವಲ್ಲ. ಹಣವೊಂದೆ ಇವತ್ತಿನ ಶಿಕ್ಷಣದ ಮಾನದಂಡ. ಹಣಗಳಿಕೆಯೊಂದೇ ಉದ್ದೇಶ. ಉಳಿದೆಲ್ಲ ನಂತರ. ಆದರೆ ಸಾಮಾನ್ಯ ನ ಪಾಡೇನು! ಸಾಮಾನ್ಯ ಬದುಕಿನ ಜೊತೆ ಶಿಕ್ಷಣ ಎಷ್ಟು ಪ್ರಯೋಜನಕಾರಿ..ಇಂತಹ ಯೋಚನೆಗಳು, ಯೋಜನೆಗಳು ಇಷ್ಟು ಕಾಲ ದೇಶವನ್ನಾಳಿದ ಯಾವ ಸರಕಾರಗಳಿಗೂ ಇಲ್ಲ. ಕೃಷಿ ಮತ್ತು ಕೃಷಿ ಕೂಲಿಗಳನ್ನು ಗೌರವದಿಂದ ನಡೆಸಿಕೊಂಡರೆ ಕೃಷಿ ತನ್ನಿಂತಾನೇ ಜೀವಂತವಾಗುತ್ತದೆ. ಅದರ ಹೊರತಾಗಿ ನೀವು ಕೆಲಸ ಮಾಡ್ಬೇಡಿ. ನಾವು ಪುಕ್ಸಟ್ಟೆ ಕೊಡ್ತೀವಿ. ಅದೂ ಇಲ್ಲ ನೀವು ಪ್ಯಾಕ್ಟರಿಗಳಿಗೆ ಬನ್ನಿ.. ಅಲ್ಲಿ ಕೂಡ ಅವರು ಕಾರ್ಮಿಕರೇ. ಅಲ್ಲಿಯೂ ಬಂದು ಬಂಡವಾಳಶಾಹಿಗಳ ವಿರುದ್ದ ಬಂಡಾಯ ಮಾಡಿ.. ಬಂಡವಾಳ ಹಾಕಿ ಅಷ್ಟು ದೊಡ್ಡ ಉದ್ಯಮ ಸ್ಥಾಪಿಸಿದ್ದಕ್ಕಾಗಿ ತಾನೇ ಸಾವಿರಾರು ಕಾರ್ಮಿಕರಿಗೆ ಕೆಲಸ ದೊರೆತಿರುವುದು. ಹೋದಲ್ಲೆಲ್ಲ ವಿರೋಧಿಸಿ, ಹೋರಾಡಿ, ಹೌದು ನ್ಯಾಯಕ್ಕಾಗಿ ಹೋರಾಟ ಮಾಡಬೇಕು. ಆದರೆ ಹೋರಾಟಮಾಡುವುದೊಂದೇ ಉದ್ದೇಶವಾಗಬಾರದು. ಭಾರತದಂತ ದೇಶದಲ್ಲಿ ಎಲ್ಲ ಜಾತಿ ಜನಾಂಗದವರು ಒಟ್ಟಾಗಿ ಹೋಗಲು ಸಮಯ ಸಾಧಕತ್ವಕ್ಕಿಂತ ಹೆಚ್ಚಿನ ಯೋಚನೆಗಳಿರಬೇಕು. ಸರಕಾರಕ್ಕೆ ಸುಧಾರಣೆ ಮಾಡೋದಕ್ಕೆ ಎಷ್ಟೆಲ್ಲ ಕೆಲಸ ಇದೆ. ರೈತರ ಆತ್ಮಹತ್ಯೆ ತಡೆಯಲು ರೈತರ ಸಾಲಗಳ ಉತ್ಪನ್ನಗಳ ಸರ್ವೆ ಮಾಡಿ ಅದನ್ನು ನಿರ್ವಹಣೆ ಮಾಡಬಹುದು. ಮೂಢನಂಬಿಕೆ ತಡೆಯಲು ಉತ್ತಮ ಗುಣಮಟ್ಟದ ಶಿಕ್ಷಣ ಕೊಡಬಹುದಲ್ಲ. ಸುಳ್ಳುಸುಳ್ಳೇ ಅವರಿವರ ಬೈಯುವುದರಿಂದ ಏನು ಸಾಧಿಸಬಹುದು? ಎಲ್ಲಿಯವರೆಗೆ ನಾವು ಮೂಢರಾಗಿರುತ್ತೇವೋ ಅಲ್ಲಿಯವರೆಗೆ ಬುದ್ದಿವಂತರು ಮೋಸಗೊಳಿಸುತ್ತಾರೆ. ಮೋಸ ಹೋಗದಿರುವುದನ್ನು ಹೇಳಿಕೊಡಲು ಸಾಧ್ಯವಾದರೆ ಈ ಬುದ್ದಿಜೀವಿಗಳ ಅವಶ್ಯಕತೆ ಇರುವುದಿಲ್ಲ. ಸಂಸ್ಕೃತ ಎಲ್ಲರಿಗೂ ಮುಕ್ತವಾಗಿ ದಶಕಗಳೇ ಕಳೆಯಿತು. ಅಭ್ಯಾಸ ಸಾಧನೆ ಮಾಡಿಕೊಂಡರೆ ಬ್ರಾಹ್ಮಣ್ಯದ ಅಧಿಪತ್ಯ ತನ್ನಂತಾನೇ ಕಡಿಮೆಯಾಗುತ್ತಲ್ಲ. ಎಷ್ಟು ಜನರಿಲ್ಲ ಇವತ್ತಿಗೂ ಬೇರೆ ಬೇರೆ ಜಾತಿ ಧರ್ಮದವರು ಓದಿಕೊಂಡವರು. ಅವರ್ಯಾರೂ ಯಾಕೆ ನಮ್ಮ ದೇಶದ ಸಂಸ್ಕೃತಿಯನ್ನು ಬೈಯ್ಯುವುದಿಲ್ಲ. ಆದರೆ ಓದಿಕೊಳ್ಳದೇ ಪೂರ್ಣ ತಿಳಿದುಕೊಳ್ಳದೇ ನಿಂತನೆಲವನ್ನು ಬಗೆಯುವುವರಿಗೆ ಏನು ಹೇಳಬಹುದು! ಅಯ್ಯೋ ಅಂದುಕೊಳ್ಳಬಹುದಷ್ಟೆ..

ಸುಧಾರಣೆಗಳೇನಿದ್ದರೂ ಕ್ರಾಂತಿಕಾರಿಗಳಿಗಿಂತ ಸಾಮಾನ್ಯರಿಂದ ಆಗಬೇಕು. ಸಾಮಾನ್ಯರು ಶಿಕ್ಷಣವಂತರಾಗಲು ಸರಕಾರ ಉತ್ತಮಶಿಕ್ಷಣ ಪದ್ಧತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಮೂಲಭೂತ ಸೌಕರ್ಯಗಳೊಡನೆ ಬದುಕಿನ ಗಟ್ಟಿತನದ ವೈಜ್ಞಾನಿಕ ಸತ್ಯನಿಷ್ಟುರವಾದ ಶಿಕ್ಷಣ ಕೊಡಬೇಕು. ಅದರಹೊರತಾಗಿ ಬೇರೆ ಯಾವುದೇ ಉಪಾಯಗಳಿಲ್ಲ.

ಬುದ್ದಿಜೀವಿಗಳು ಮತ್ತು ಪ್ರಕಾಂಡ ಪಂಡಿತರುಗಳ ಮಾತಿನ ಕುಸ್ತಿಯ ನಡುವೆ ಸಾಮಾನ್ಯನಿಗೆ ನ್ಯಾಯಸಿಗಬೇಕಾದರೆ ಇವತ್ತು ಈ ನೆಲದ ಧಾರ್ಮಿಕ, ಮಾನವೀಕ, ಸಾಮಾಜಿಕ, ಅಧ್ಯಯನಪೂರ್ಣ ಶಿಕ್ಷಣದ ಅನಿವಾರ್ಯತೆಯಿದೆ.

–ಸಿರಿ.

sirisobagu@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!