ಹಸಿದ ಕಂಗಳ ನೋಟ
ಮುಗಿಸಿ ಬೆಳಗಿನ ಪಾಠ
ಕಾದು ನಿಂತಿರೆ ತನ್ನ ಸರತಿಗೆಂದು
ಬಿಸಿಯ ಅಗುಳಿನ ಊಟ
ಖಾರ ಪಲ್ಲೆಯ ಕೂಡಿ
ಪುಟ್ಟ ಕೈಬಟ್ಟಲ ತುಂಬಿತೆ ಬೆಂದು ? ||
ಸಮತೆ ವಸ್ತ್ರದ ಹಂಗು
ಕಾಲ ಚಪ್ಪಲಿ ಗುಂಗು
ಮರೆತು ನಿಂತಿರೆ ಸಾಲು ಹೊಟ್ಟೆಗಾಗಿ
ತಿನ್ನೆ ವಿಷವಾಗಿಯೋ
ಬಿದ್ದು ಬೆಂದರು ಸತ್ತು
ಆಸೆ ಹಬೆಯಾಡಿದೆ ಬಿಸಿಯೂಟಕಾಗಿ ||
ಕಾದಿರುವ ಹಾದಿಯಲಿ
ಕುದಿಗೊಂಡ ಮನಸುಗಳ
ಮೀರಿ ನಿಂತಿದೆ ಕಲ್ಲು ಹುಳದ ಬಾಧೆ
ನಾಳೆಗರಳುವ ಹೂವ
ನೇರ ಸೇರಿಸಿ ಹೆಣೆವ
ಶಾಲೆಯ ಪಾಕವೊಂದು ಯಶೋಗಾಥೆ ||