ಅಂಕಣ

ಪತಂಜಲಿ ನಾಡಿನಲ್ಲಿ ಪತಂಜಲಿಯ ಸಾಮ್ರಾಜ್ಯ ಸ್ಥಾಪಿಸಿದ ಬಾಬಾ

ಇತ್ತೀಚೆಗೆ ಕುವೆಂಪುನಗರದ ಒಂದು ಪುಟ್ಟ ಅಂಗಡಿಗೆ ಸ್ನಾನದ ಸೋಪ್ ತೆಗೆದುಕೊಳ್ಳಲು ಹೋಗಿದ್ದೆ. ಹಾಗೆಯೇ ಆ ಅಂಗಡಿಯೊಳಗೆ ಕಣ್ಣಾಡಿಸಿದಾಗ ನನ್ನ ಗಮನಕ್ಕೆ ಬಂದದ್ದು, ಸಂಪೂರ್ಣ ಅಂಗಡಿಯಲ್ಲಿ ನಮ್ಮ ದಿನಬಳಕೆಗೆ ಬೇಕಾದ ಎಲ್ಲಾ ಉತ್ಪನ್ನಗಳೂ ಲಭ್ಯವಿತ್ತು. ಹಾಗಾಗಿ ಸೋಪ್ ತೆಗೆದುಕೊಳ್ಳಲು ಹೋದ ನಾನು ವಾಪಾಸ್ಸು ಬಂದಿದ್ದು ಅದರ ಜತೆ ಶ್ಯಾಂಪೂ, ಫ಼ೇಸ್’ವಾಶ್ ಹಾಗೂ ಬಿಸ್ಕತ್ತು ಪ್ಯಾಕೆಟ್’ಗಳ ಜತೆ. ಹಾಗೆಯೇ ಆ ಅಂಗಡಿ ಮಾಲಿಕರ ಹತ್ತಿರ ಮಾತನಾಡುತ್ತಾ ಅವರಲ್ಲಿ ತಿಂಗಳಿಗೆ ಎಷ್ಟು ಆದಾಯ ಬರುತ್ತದೆ ಎಂದು ಕೇಳಿದೆ. ಅದಕ್ಕವರು ತಿಂಗಳಿಗೆ ಕನಿಷ್ಟ ಹತ್ತು ಲಕ್ಷಗಳಷ್ಟು ವಹಿವಾಟು ಆಗುತ್ತದೆ ಎಂದರು. ಆ ಅಂಗಡಿ ಸಂಪೂರ್ಣವಾಗಿ ಒಂದೇ ಕಂಪನಿಯ ಉತ್ಪನ್ನಗಳನ್ನು ಮಾರುತ್ತದೆ. ಇಷ್ಟೊತ್ತಿಗಾಗಲೇ ನಿಮಗರಿವಾಗಿರಬಹುದು, ನಾನು ಯಾವ ಕಂಪನಿಯ ಬಗ್ಗೆ ಹೇಳುತ್ತಿದ್ದೇನೆ ಎಂದು. ಹೌದು ಅದು ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ. ನನ್ನ ಮನೆಯ ಪಕ್ಕದಲ್ಲಿರುವ ಪುಟ್ಟ ಅಂಗಡಿಯಲ್ಲೇ ಸುಮಾರು ಹತ್ತು ಲಕ್ಷಕ್ಕೂ ಮೀರಿದ ವಹಿವಾಟನ್ನು ಪತಂಜಲಿ ಸಂಸ್ಥೆ ಮಾಡುತ್ತಿದೆ. ಇಂತಹ ಸಹಸ್ರಾರು ಮಳಿಗೆಗಳು ದೇಶಾದ್ಯಂತ ಇದೆ. ಹಾಗಾಗಿ ಪತಂಜಲಿ ಸಂಸ್ಥೆಯ ವಾರ್ಷಿಕ ವಹಿವಾಟು ೨೦೧೫ ರಲ್ಲೇ ಸುಮಾರು ೨೦೦೦ ಕೋಟಿಯಷ್ಟು ಇದೆ. ಇಷ್ಟೊಂದು ದೊಡ್ಡ ಮಟ್ಟದ ಸಂಸ್ಥೆಯ ಚುಕ್ಕಾಣಿ ಹಿಡಿದು ಮುನ್ನಡೆಸಿದವರಾರು ತಿಳಿದಿದೆಯೇ? ಅವರು ಯಾವ ಉದ್ಯಮಿಯ ಮಗನೂ ಅಲ್ಲ, ಯಾವ ಎಂಬಿಎ ಪದವೀಧರರೂ ಅಲ್ಲ, ವಿದೇಶಗಳಲ್ಲಿ ಮಾರ್ಕೆಟಿಂಗ್ ಓದಿ ಬಂದವರೂ ಅಲ್ಲ ಅವರೊಬ್ಬ ಕಾವಿ ಧರಿಸಿದ ಸನ್ಯಾಸಿ ಅವರ ಶಿಕ್ಷಣವಾದದ್ದು ನಾಡಿಂದ ಬಲುದೂರದ ಗುರುಕುಲಗಳಲ್ಲಿ. ಅವರೇ ಆಧುನಿಕ ಭಾರತದಲ್ಲಿ ಯೋಗ ಹಾಗೂ ಆಯುರ್ವೇದದ ರಾಯಭಾರಿ ಎಂದೇ ಕರೆಯಲ್ಪಡುವ ಬಾಬಾ ರಾಮ್’ದೇವ್.

‘ಬಾಬಾ ರಾಮ್’ದೇವ್’ ಈ ಹೆಸರು ಕೇಳಿದರೆ ಬಹುರಾಷ್ಟ್ರೀಯ ಕಂಪನಿಗಳಿಗೆ ನಡುಕವುಂಟಾಗುತ್ತಿದೆ. ದಶಕಗಳಿಂದ ಭಾರತದ ಮಾರುಕಟ್ಟೆಯಲ್ಲಿ ಟೂತ್ ಪೇಸ್ಟ್’ನಿಂದ ಹಿಡಿದು ಮದ್ದುಮಾತ್ರೆಗಳವರೆಗೆ ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸಿದ್ದ ಬಹುರಾಷ್ಟ್ರೀಯ ಕಂಪನಿಗಳು ಬಾಬಾ ರಾಮ್’ದೇವ್ ಅವರ ಪತಂಜಲಿ ಉತ್ಪನ್ನಗಳಿಗೆ ಸುಲಭವಾಗಿ ಬಲಿಯಾಗುತ್ತಿವೆ. ಯೋಗದ ಶಿಕ್ಷಣದಿಂದ ಆರಂಭಿಸಿ ಪ್ರಸಿದ್ಧ ಯೋಗಗುರುವಾಗಿ ಆಯುರ್ವೇದದ ಪ್ರಚಾರಕರಾಗಿ ತದನಂತರ ಭ್ರಷ್ಟಾಚಾರದ ವಿರುದ್ಧ ದೊಡ್ಡ ಸಮರವನ್ನೇ ಸಾರಿ ಕೇಂದ್ರ ಸರ್ಕಾರವನ್ನೇ ಎದುರು ಹಾಕಿ ಮುನ್ನುಗ್ಗಿ ಸ್ವತಂತ್ರ ಭಾರತದ ವೀರಸನ್ಯಾಸಿ ಎಂದೇ ಗುರುತಿಸಲ್ಪಟ್ಟ ಬಾಬಾ ರಾಮ್’ದೇವ್ ಈಗ ಪತಂಜಲಿ ಆಯುರ್ವೇದ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ದಿನಬಳಕೆಯ ವಸ್ತುಗಳನ್ನು ಸ್ವದೇಶಿ ಮಾದರಿಯಲ್ಲಿ ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಅಷ್ಟೇ ಅಲ್ಲದೆ ಬಹಳ ಕಡಿಮೆ ಅವಧಿಯಲ್ಲೇ ಅವು ಜನಪ್ರಿಯಗೊಂಡು ೨೦೧೫ ರ ಇಸವಿಯಲ್ಲೇ ಸುಮಾರು ೨೦೦೦ ಕೋಟಿಯಷ್ಟು ಲಾಭ ಮಾಡಿ ಬಹುರಾಷ್ಟ್ರೀಯ ಕಂಪನಿಗಳ ನಿದ್ದೆಗೆಡಿಸಿವೆ. ಈ ವರ್ಷ ಸುಮಾರು ೫೦೦೦ ಕೋಟಿಗೂ ಅಧಿಕ ವಹಿವಾಟು ಮಾಡುವ ಗುರಿಯನ್ನಿಟ್ಟುಕೊಂಡಿದ್ದಾರೆ ಬಾಬಾ ಅವರು.

ಬಾಬಾ ರಾಮ್’ದೇವ್ ದೇಶದಲ್ಲಿ ಅತ್ಯಂತ ಜನಪ್ರಿಯ ಹಾಗೂ ಅಷ್ಟೇ ವಿವಾದಾತ್ಮಕ ಸಂತ. ಯೋಗ, ಆಯುರ್ವೇದ ಹಾಗೂ ಭಾರತೀಯ ಸಂಸ್ಕೃತಿಗೆ ಅವರ ಸೇವೆ ಗಮನಾರ್ಹವಾದದ್ದು. ಹುಟ್ಟಿದ್ದು ೧೯೬೫ನೇ ಇಸವಿಯಲ್ಲಿ ಹರ್ಯಾಣದ ಒಂದು ಪುಟ್ಟ ಗ್ರಾಮದಲ್ಲಿ. ಬಾಲ್ಯದಿಂದಲೇ ಪಾಶ್ಚಾತ್ಯ ಶಿಕ್ಷಣದ ಬದಲಾಗಿ ಗುರುಕುಲಗಳಲ್ಲಿ ಕಲಿತವರು ಇವರು. ಪೂರ್ವಾಶ್ರಮದ ಹೆಸರು ರಾಮಕೃಷ್ಣ ಯಾದವ್. ಆನಂತರ ಸನ್ಯಾಸ ಸ್ವೀಕರಿಸಿ ಬಾಬಾ ರಾಮ್’ದೇವ್ ಎಂಬ ಹೆಸರು ಪಡೆದರು. ಹರ್ಯಾಣದ ಜಿಂದ್ ಜಿಲ್ಲೆಯ ಗುರುಕುಲದಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಗ್ರಾಮಸ್ಥರಿಗೆ ಯೋಗ ಹೇಳಿಕೊಡುತ್ತಿದ್ದರು. ತದನಂತರ ಹರಿದ್ವಾರಕ್ಕೆ ಹೋಗಿ ಅಲ್ಲಿನ ಗುರುಕುಲಗಳಲ್ಲಿ ಭಾರತೀಯ ಶಾಸ್ತ್ರಗಳನ್ನು ಅಭ್ಯಸಿಸಿದರು. ಈ ರೀತಿಯಾಗಿ ಮುಂದೆ ಯೋಗ ಹಾಗೂ ಆಯುರ್ವೇದ, ಭಾರತೀಯ ದರ್ಶನಗಳ ರಾಯಭಾರಿ ಆಗಲು ಬೇಕಾದ ಭದ್ರಬುನಾದಿ ಅವರಿಗೆ ಬಾಲ್ಯದಲ್ಲೇ ದೊರೆಯಿತು.

೧೯೯೫ರಲ್ಲಿ ದಿವ್ಯಯೋಗ ಮಂದಿರ ಟ್ರಸ್ಟನ್ನು ಸ್ಥಾಪಿಸಿ ಯೋಗದ ಪ್ರಚಾರಕ್ಕೆ ಮುಂದಾದರು ಬಾಬಾ. ಆದರೆ ಅವರ ಜನಪ್ರಿಯತೆ ಹೆಚ್ಚಾದದ್ದು ‘ಆಸ್ಥಾ’ ಚ್ಯಾನಲ್’ನಲ್ಲಿ ಮುಂಜಾವಿನ ಸಮಯ ತೋರಿಸುತ್ತಿದ್ದ ಯೋಗ ಕಾರ್ಯಕ್ರಮಗಳಿಂದ. ೨೦೦೩ರಿಂದ ಪ್ರತಿನಿತ್ಯ ಬೆಳಗಿನ ಜಾವ ರಾಮ್’ದೇವ್ ಅವರ ಯೋಗ ಪ್ರಸಾರವಾಗುತ್ತಿತ್ತು. ಈ ಕಾರ್ಯಕ್ರಮ ನೋಡಿ ಅವರ ಯೋಗವನ್ನು ಅನುಸರಿಸಿ ತಮ್ಮ ದೇಹ ಮನಸ್ಸುಗಳ ಆರೋಗ್ಯವನ್ನು ವೃದ್ಧಿಸಿಕೊಂಡವರ ಸಂಖ್ಯೆ ಲೆಕ್ಕಕ್ಕೆ ಸಿಗದು. ಅವರ ಯೋಗ ಕಾರ್ಯಕ್ರಮದ ಜನಪ್ರಿಯತೆ ಎಷ್ಟಿತ್ತೆಂದರೆ ಪುಟ್ಟಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ಬೆಳಗ್ಗೆ ಬೇಗ ಎದ್ದು ಸೂರ್ಯನಮಸ್ಕಾರ ಪ್ರಾಣಾಯಾಮ ಮಾಡುತ್ತಿದ್ದ ಹಲವು ಕುಟುಂಬಗಳ ಉದಾಹರಣೆ ಸಿಗುತ್ತದೆ. ಕೇವಲ ಭಾರತದಲ್ಲಷ್ಟೇ ಅಲ್ಲದೆ ಅಮೆರಿಕ, ಬ್ರಿಟನ್, ಜಪಾನ್ ಮುಂತಾದ ಹಲವು ದೇಶಗಳಲ್ಲಿ ಇವರು ಯೋಗವನ್ನು ಜನಪ್ರಿಯಗೊಳಿಸಿ ಆಧುನಿಕ ಯುಗದಲ್ಲಿ ಯೋಗ ಹಾಗೂ ಆಯುರ್ವೇದ ರಾಯಭಾರಿ ಎಂದೇ ಪ್ರಸಿದ್ಧರಾದರು. ೨೦೦೬ರಲ್ಲಿ ಪತಂಜಲಿ ಯೋಗಪೀಠ ಟ್ರಸ್ಟನ್ನು ಸ್ಥಾಪಿಸಿದ ಅವರು ತಿರುಗಿ ನೋಡಲೇ ಇಲ್ಲ.

ಮುಂದೆ ಸ್ವದೇಶೀ ಚಿಂತಕರಾದ ಶ್ರೀ ರಾಜೀವ್ ದೀಕ್ಷಿತ್ ಜತೆ ಸೇರಿದ ಬಾಬಾ ದೇಶದ ಮಾರುಕಟ್ಟೆಯನ್ನು ವಿದೇಶೀ ಕಂಪನಿಗಳು ತಮ್ಮ ತೆಕ್ಕೆಗೆ ತೆಗೆದುಕೊಂಡಿರುವುದನ್ನು ಗಮನಿಸಿದರು. ಭಾರತೀಯರಲ್ಲಿದ್ದ ವಿದೇಶೀ ವ್ಯಾಮೋಹವನ್ನು ತೊಡೆದು ಹಾಕಿ ದೇಶಪ್ರೇಮವನ್ನು ಬೆಳೆಸಬೇಕೆಂಬ ತುಡಿತ ಅವರಲ್ಲಿ ಯಾವಾಗಲೂ ಇತ್ತು. ಅದಕ್ಕಾಗಿಯೇ ಭಾರತ್ ಸ್ವಾಭಿಮಾನ್ ಎಂಬ ಆಂದೋಲನವನ್ನು ಹುಟ್ಟುಹಾಕಿ ರಾಜೀವ್ ದೀಕ್ಷಿತರನ್ನು ಜತೆಸೇರಿಸಿ ಹಲವು ಕಡೆ ಸಭೆಗಳನ್ನು ನಡೆಸಿದರು, ಯಾತ್ರೆಗಳನ್ನು ಕೈಗೊಂಡರು. ಇದರೆಲ್ಲರ ಉದ್ದೇಶ ಭಾರತೀಯರಲ್ಲಿ ಸ್ವದೇಶೀ ಭಾವನೆಯನ್ನು ಬೆಳೆಸುವುದೇ ಆಗಿತ್ತು. ಮುಂದೆ ಮಾನ್ಯ ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ಆಂದೋಲನ ನಡೆಸಿದಾಗ ಅವರ ಜತೆಗೂಡಿ ಭ್ರಷ್ಟಾಚಾರವನ್ನು ತಡೆಯಲು ದೇಶದ ಜನರನ್ನು ಒಗ್ಗೂಡಿಸಿದರು. ರಾಮ್’ಲೀಲಾ ಮೈದಾನದಲ್ಲಿ ಸತ್ಯಾಗ್ರಹ ನಡೆಸುತ್ತಿದ್ದಾಗ ಕೇಂದ್ರ ಸರ್ಕಾರ ಮಧ್ಯರಾತ್ರಿ ಲಾಠಿಚಾರ್ಜ್ ನಡೆಸಿ ಸತ್ಯಾಗ್ರಹಿಗಳನ್ನು ದಮನಿಸುವ ಪ್ರಯತ್ನ ಮಾಡಿತು. ಅಲ್ಲದೆ ಹಲವಾರು ಬೆದರಿಕೆ ಕರೆಗಳೂ ಬಾಬಾ ಅವರಿಗೆ ಬಂದವು. ಇಷ್ಟೆಲ್ಲಾ ಆದರೂ ಜಗ್ಗದೆ ತಮ್ಮ ಹೋರಾಟವನ್ನು ಮುಂದುವರೆಸಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಸಂಕಲ್ಪ ಮಾಡಿದರು ಹಾಗೂ ಅದರಲ್ಲೂ ಯಶಸ್ವಿಯಾಗಿ ತಾವೊಬ್ಬ ವೀರಸನ್ಯಾಸಿ ಎಂಬುದನ್ನು ನಿರೂಪಿಸಿದರು. ಈಗ ತಿರುಗಿ ನೋಡಿದಾಗ ನರೇಂದ್ರ ಮೋದಿ ಪ್ರಧಾನಿಯಾಗುವಲ್ಲಿ ಬಾಬಾ ಅವರ ಕೊಡುಗೆಯೂ ಬಹಳಷ್ಟಿದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ.

ಬಾಬಾ ಅವರು ಸ್ವದೇಶೀ ಚಿಂತನೆಯನ್ನು ಹರಡುವಲ್ಲಿ ರಾಜೀವ್ ದೀಕ್ಷಿತರ ಮೇಲೆ ಹೆಚ್ಚು ಭರವಸೆ ಹೊಂದಿದ್ದರು. ರಾಜೀವ್ ಅವರ ಮಾತಿನ ಶೈಲಿ, ಅವರಿಗಿದ್ದ ಜ್ಞಾನ ಎಂತಹರನ್ನೂ ಮಂತ್ರಮುಗ್ಧಗೊಳಿಸುತ್ತಿತ್ತು. ಬಾಬಾ ರಾಮ್’ದೇವ್ ಹಾಗೂ ರಾಜೀವ್ ದೀಕ್ಷಿತರು ಜತೆಯಾಗಿ ಭಾರತ್ ಸ್ವಾಭಿಮಾನ್’ನ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದರು. ಆದರೆ ರಾಜೀವ್ ದೀಕ್ಷಿತ್’ರ ಅನುಮಾನಾಸ್ಪದ ಸಾವು ಭಾರತ್ ಸ್ವಾಭಿಮಾನ್’ನ ಓಟಕ್ಕೆ ತಡೆಯುಂಟುಮಾಡಿತು. ೨೦೧೦ ನೇ ಇಸವಿಯ ನವೆಂಬರ್ ೩೦ಕ್ಕೆ ರಾಜೀವ್ ದೀಕ್ಷಿತರು ಇಹಲೋಕ ತ್ಯಜಿಸಿದರು. ಇದರಿಂದ ಬಾಬಾರವರಿಗೆ ಆಘಾತವುಂಟಾದರೂ ತಮ್ಮ ಧ್ಯೇಯದಿಂದ ವಿಚಲಿತರಾಗಲಿಲ್ಲ. ರಾಜೀವ್ ದೀಕ್ಷಿತರ ಕನಸನ್ನು ನನಸು ಮಾಡಲು ಬಾಬಾರವರು ಸಂಕಲ್ಪ ಮಾಡಿದರು. ಒಂದು ದೇಶ ಪ್ರಗತಿಯಾಗಬೇಕೆಂದರೆ ಆ ದೇಶದ ಜನರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗಿರಬೇಕು. ಮನಸ್ಸಿನ ಆರೋಗ್ಯಕ್ಕೆ ಧ್ಯಾನ, ಪ್ರಾಣಾಯಾಮ ಪೂರಕವಾದರೆ ದೈಹಿಕ ಆರೋಗ್ಯಕ್ಕೆ ವ್ಯಾಯಾಮ, ಉತ್ತಮ ಆಹಾರ ಅತೀ ಅವಶ್ಯ. ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ನಾವು ಸೇವಿಸುವ ಆಹಾರ ಅತಿ ಪ್ರಮುಖವಾದ ಪಾತ್ರ ವಹಿಸುತ್ತದೆ. ಒಂದು ದೇಶದ ಪ್ರಜೆಗಳು ಆರೋಗ್ಯವಂತರಾಗಿದ್ದಾಗ ಮಾತ್ರ ದೇಶವೂ ಸುಸ್ಥಿತಿಯಲ್ಲಿರಲು ಸಾಧ್ಯ. ಆದರೆ ಆ ದೇಶಕ್ಕೆ ತಲುಪುವ ಆಹಾರ ಪದಾರ್ಥಗಳು ಕಳಪೆ ಮಟ್ಟದ್ದಾಗಿದ್ದರೆ ? ಜನರು ಸೇವಿಸುವ ತಂಪು ಪಾನೀಯಗಳು ಚಾಕಲೇಟ್’ಗಳು ಬಿಸ್ಕತ್ತುಗಳು ಕಳಪೆ ಗುಣಮಟ್ಟದ್ದಾಗಿ ಅದರಿಂದ ಜನರ ಆರೋಗ್ಯ ಕೆಟ್ಟರೆ ಸಮಾಜದ ಅಭಿವೃದ್ಧಿ ಸಾಧ್ಯವೇ ?. ರಾಜೀವ್ ದೀಕ್ಷಿತರು ಎತ್ತಿದ್ದು ಇದೇ ಪ್ರಶ್ನೆಯನ್ನು. ವಿದೇಶಿ ಕಂಪನಿಗಳು ಕೇವಲ ನಮ್ಮ ದೇಶದ ಸಂಪತ್ತನ್ನು ಮಾತ್ರ ಕೊಳ್ಳೆಹೊಡೆಯುತ್ತಿಲ್ಲ, ಬದಲಾಗಿ ನಮ್ಮ ಜನರ ಆರೋಗ್ಯವನ್ನೂ ಕೆಡಿಸುತ್ತಿವೆ. ಈ ಹಿಂದೆ ಪೆಪ್ಸಿ, ಕೋಕಾ ಕೋಲ ಹಾಗೂ ಇತರೆ ತಂಪು ಪಾನೀಯಗಳು ಇತ್ತೀಚೆಗೆ ಬಹಳ ವಿವಾದವನ್ನುಂಟು ಮಾಡಿದ ನೆಸ್ಲೆ ಕಂಪನಿಯ ಮ್ಯಾಗಿ ಮುಂತಾದವುಗಳೆಲ್ಲಾ ಇದಕ್ಕೆ ಉದಾಹರಣೆಗಳು. ವಿದೇಶೀ ಕಂಪನಿಗಳು ತಮ್ಮ ಲಾಭಕ್ಕಾಗಿ ಕಳಪೆ ಗುಣಮಟ್ಟದ ವಸ್ತುಗಳು ಹಾಗೂ ಅಪಾಯಕಾರಿ ರಾಸಾಯನಿಕಗಳನ್ನು ಬೆರೆಸಿ ತಯಾರಿಸುವ ಆಹಾರ ಪದಾರ್ಥಗಳು ಎಂದಿಗೂ ನಮ್ಮ ದೇಹಕ್ಕೆ ಹಾನಿಕಾರಕ ಎಂಬುದಲ್ಲಿ ಎರಡುಮಾತಿಲ್ಲ. ಆದರೆ ಇದೆಲ್ಲಾ ತಿಳಿದರೂ ಕೂಡ ಜನರಿಗೆ ಬೇರೆ ಉಪಾಯವಿರಲಿಲ್ಲ. ಹಳ್ಳಿ ಕಡೆಯ ಜನರಾದರೂ ಕೊಂಚ ಪರಿಶುದ್ದ ಆಹಾರ ಸೇವಿಸುತ್ತಾರೆ. ಆದರೆ ನಗರ ಪ್ರದೇಶದ ಜನರಿಗೆ ಆ ಆಯ್ಕೆಯೂ ಇರುವುದಿಲ್ಲ. ಹಾಗಾಗಿ ಇಷ್ಟವಿಲ್ಲದಿದ್ದರೂ ಅದನ್ನೇ ಅವಲಂಬಿಸಿರಬೇಕಾದ ಅನಿವಾರ್ಯತೆ ಇತ್ತು. ಇದನ್ನು ಮನಗಂಡ ಬಾಬಾ ಅವರು ಪತಂಜಲಿ ಆಯುರ್ವೇದ ಎಂಬ ಸಂಸ್ಥೆಯನ್ನು ತೆರೆದರು. ಸ್ವದೇಶೀ ಮಾದರಿಯಲ್ಲಿ ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಉಪಯೋಗಿಸಿ ಟೂತ್’ಪೇಸ್ಟಿನಿಂದ ಹಿಡಿದು ನಮ್ಮ ದಿನನಿತ್ಯದ ಬಳಕೆಗೆ ಬೇಕಾದ ಬಹುತೇಕ ಎಲ್ಲಾ ರೀತಿಯ ವಸ್ತುಗಳನ್ನು ಮಾರುಕಟ್ಟೆಗೆ ತಂದರು. ಬಹುಶಃ ಜನತೆ ಇದಕ್ಕಾಗಿಯೇ ಕಾದುಕುಳಿತಿದ್ದರೋ ಏನೋ.. ದೇಶದಲ್ಲಿ ಬಹಳ ಮಂದಿಗೆ ಸ್ವದೇಶೀ ಉತ್ಪನ್ನಗಳನ್ನೇ ಬಳಸಬೇಕು ಎಂಬ ತುಡಿತ ಇತ್ತು. ಆದರೆ ದಿನನಿತ್ಯದ ಬಳಕೆಗೆ ಬೇಕಾದ ಎಲ್ಲಾ ವಸ್ತುಗಳು ಎಲ್ಲಾ ಪ್ರದೇಶಗಳಲ್ಲಿ ಲಭ್ಯವಿರಲಿಲ್ಲ. ಇನ್ನೂ ಹಲವು ಮಂದಿಗೆ ಸ್ವದೇಶೀ ವಸ್ತುಗಳ ಬಗ್ಗೆ ಅಷ್ಟಾಗಿ ಮೋಹವಿಲ್ಲದಿದ್ದರೂ ಹಲವು ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳು ಹಾನಿಕಾರಕ ಎಂಬುದರ ಅರಿವಿತ್ತು. ಅಂತಹ ಜನರನ್ನೇ ಟಾರ್ಗೆಟ್ ಮಾಡಿದ ಪತಂಜಲಿ ಸಂಸ್ಥೆ ತನ್ನ ಅತ್ಯುನ್ನತ ಗುಣಮಟ್ಟ , ಅಷ್ಟೇನೂ ದುಬಾರಿಯಲ್ಲದ ಬೆಲೆಯಿಂದಾಗಿ ಬಲುಬೇಗ ಜನಪ್ರಿಯಗೊಂಡಿತು. ಪತಂಜಲಿ ಉತ್ಪನ್ನಗಳನ್ನು ಬಳಸಿದ ಹಲವಾರು ಜನರ ಅಭಿಮತ ಇದುವೇ. ಆರಂಭದಲ್ಲಿ ಕೇವಲ ಆಯುರ್ವೇದ ಔಷದಗಳನ್ನು ಮಾತ್ರ ಮಾರುತ್ತಿದ್ದ ಪತಂಜಲಿ ಸಂಸ್ಥೆ ಹಂತಹಂತವಾಗಿ ಮೇಲೇರಿ ಈಗ ದಿನಬಳಕೆಗೆ ಬೇಕಾದ ಬಹುತೇಕ ಎಲ್ಲಾ ಉತ್ಪನ್ನಗಳನ್ನೂ ತಯಾರಿಸುತ್ತಿದೆ. ಪತಂಜಲಿ ಸಂಸ್ಥೆಯ ಏಳಿಗೆ ಈಗ ಇತರೆ ಕಂಪನಿಗಳ ನಿದ್ದೆಗೆಡಿಸಿವೆ. ಸ್ವದೇಶಿ ಚಿಂತನೆ, ಉನ್ನತ ಗುಣಮಟ್ಟ ಅದರ ಜತೆ ಅತ್ಯುತ್ತಮ ಮಾರ್ಕೆಟಿಂಗ್ ಇವಿಷ್ಟೂ ಸೇರಿದರೆ ಕೇಳಬೇಕೆ ?. ಅತ್ಯಂತ ಕಡಿಮೆ ಅವಧಿಯಲ್ಲಿ ಜನರ ಅತ್ಯಂತ ಮೆಚ್ಚುಗೆಯ ಬ್ರ್ಯಾಂಡ್ ಆಗಿ ಪತಂಜಲಿ ಮುನ್ನುಗ್ಗುತ್ತಿದೆ.

ಸ್ವದೇಶಿ ಮಾದರಿಯಲ್ಲಿ ಪರಿಶುದ್ಧವಾದ ಉತ್ಪನ್ನಗಳನ್ನು ತಯಾರಿಸಿದವರಲ್ಲಿ ರಾಮ್’ದೇವ್ ಮೊದಲಿಗರಲ್ಲ. ಈ ಹಿಂದೆಯೂ ಅನೇಕ ಕಂಪನಿಗಳು ರಾಸಾಯನಿಕವಲ್ಲದ ವಸ್ತುಗಳನ್ನು ಉಪಯೋಗಿಸಿ ಮಾನವನ ದೇಹಕ್ಕೆ ಸ್ವೀಕರಿಸಲು ಯೋಗ್ಯವಾದ ಉತ್ಪನ್ನಗಳನ್ನು ತಯಾರಿಸಿದ್ದಾರೆ. ಕೆಲವು ಜನಪ್ರಿಯಗೊಂಡಿತು. ಕೆಲವು ಹೇಳಹೆಸರಿಲ್ಲದಂತೆ ಮಾಯವಾಯಿತು. ಇನ್ನೂ ಕೆಲವು ಪ್ರತಿಸ್ಪರ್ಧಿಗಳೊಂದಿಗೆ ಸೆಣೆಸಲಾರದೆ ಸೋತು ಹೋದವು. ವಿದೇಶೀ ಹಾಗೂ ಬಂಡವಾಳಶಾಹಿ ಕಂಪನಿಗಳ ಪ್ರಬಲ ಸ್ಪರ್ಧೆಯನ್ನೂ ಮೆಟ್ಟಿನಿಂತು ಪತಂಜಲಿ ಈ ಮಟ್ಟಿಗೆ ಬೆಳೆಯಲು ಬಹುಶಃ ಪತಂಜಲಿ ಸಂಸ್ಥೆ ‘ಹಳೆ ಬೇರು ಹೊಸ ಚಿಗುರು’ ಎಂಬಂತೆ ಕಾರ್ಯನಿರ್ವಹಿಸಿದ್ದು ಮುಖ್ಯ ಕಾರಣವಾಗಿರಬಹುದು. ಈ ಹಿಂದೆಯೂ ಅನೇಕ ಸ್ವದೇಶಿ ಕಂಪನಿಗಳು ಬಂದಿದ್ದರೂ ಅವುಗಳ ಮಾರ್ಕೆಟಿಂಗ್ ಉತ್ತಮವಾಗಿರಲಿಲ್ಲ. ಪ್ರಾಚೀನಕಾಲದ ವಿಧಾನದಿಂದ ಮಾಡಿದ ಉತ್ಪನ್ನಗಳು ಹಾಗೂ ಆಧುನಿಕ ಕಾಲದ ಆಕರ್ಷಕ ಪ್ಯಾಕೇಜಿಂಗ್ ಪತಂಜಲಿಯ ಯಶಸ್ಸಿನ ಗುಟ್ಟು ಎಂದೆನಿಸುತ್ತದೆ. ಯೋಗ ಗುರುವಾಗಿ ಹಾಗೂ ಭ್ರಷ್ಟಾಚಾರದ ವಿರುದ್ಧದ ಆಂದೋಲನಗಳಿಂದಾಗಿ ಬಾಬಾ ರಾಮ್’ದೇವ್ ದೇಶಾದ್ಯಂತ ಒಬ್ಬ ಜನಪ್ರಿಯ ವ್ಯಕ್ತಿ ಆಗಿದ್ದರು. ಅವರನ್ನು ಅನುಸರಿಸುವ ಜನರ ದಂಡು ತುಂಬಾ ದೊಡ್ಡದಿತ್ತು. ಅಂತಹವರೆಲ್ಲಾ ಸಹಜವಾಗೇ ಪತಂಜಲಿ ಉತ್ಪನ್ನಗಳ ಗ್ರಾಹಕರಾದರು. ಇದಲ್ಲದೇ ದಿನೇ ದಿನೇ ಆಯುರ್ವೇದ ಹಾಗೂ ಯೋಗದ ಕುರಿತಾಗಿ ಜನರಲ್ಲಿ ಹೆಚ್ಚುತ್ತಿರುವ ಉತ್ಸಾಹವೂ ಪತಂಜಲಿಯ ಯಶಸ್ಸಿಗೆ ಕಾರಣವಾಗಿದ್ದಿರಬಹುದು

ರಾಜೀವ್ ದೀಕ್ಷಿತರು ಒಂದು ಕನಸನ್ನು ಕಂಡಿದ್ದರು. ಅದುವೇ ಈ ದೇಶದಲ್ಲಿ ಸ್ವದೇಶೀ ಉತ್ಪನ್ನಗಳ ಮಾರುಕಟ್ಟೆ ಬೆಳೆದು ನಮ್ಮ ಸಂಪತ್ತು ಹಾಗೂ ನಮ್ಮ ಆರೋಗ್ಯ ರಕ್ಷಣೆಯಾಗಲಿ ಎಂಬುದು. ಕೇವಲ ರಾಜೀವ್ ಮಾತ್ರ ಅಲ್ಲದೆ ಲಕ್ಷಾಂತರ ಮಂದಿ ದೇಶಭಕ್ತ ಜನರ ಇಚ್ಛೆಯೂ ಇದೇ ಆಗಿತ್ತು. ಆದರೆ ಆ ಗುರಿಯನ್ನು ಹೇಗೆ ತಲುಪಬೇಕು ಎಂಬುದರ ಅರಿವಿರಲಿಲ್ಲ. ಬಹುಶಃ ಅಂತಹಕಾಲದಲ್ಲೇ ನಮಗೆ ದಾರಿ ತೋರಿಸಲು ಗುರು ಬೇಕಾಗಿರುವುದು. ಇಲ್ಲಿಯೂ ಹಾಗೆಯೇ ಆಯಿತು. ಯೋಗಗುರುವಾಗಿ ಪತಂಜಲಿಯನ್ನು ಆರಾಧಿಸುತ್ತಿದ್ದ ರಾಮ್’ದೇವ್ ಈಗ ಪತಂಜಲಿ ಉತ್ಪನ್ನಗಳ ಮೂಲಕವೇ ಭಾರತವನ್ನು ವಿದೇಶೀ ಕಂಪನಿಗಳಿಂದ ಮುಕ್ತಿಗೊಳಿಸಲು ಹೊರಟಿರುವಂತಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ರಾಮ್’ದೇವ್ ಅವರು ದೇಶದ ಬಗ್ಗೆ ವಿದೇಶೀ ಕಂಪನಿಗಳಿಂದಾಗುತ್ತಿರುವ ಲೂಟಿಯ ಬಗ್ಗೆ ಕೇವಲ ಭಾಷಣ ಮಾತ್ರ ಮಾಡಿಲ್ಲ. ಅದರ ಬದಲು ಅವರ ಮಾತನ್ನು ಕೇಳಿ ಬದಲಾವಣೆಯಾಗಲು ಬಯಸಿದ್ದ ಜನರಿಗೆ ಮತ್ತೊಂದು ವಿಕಲ್ಪವನ್ನೂ ಕೊಟ್ಟರು. ಬಹುಶಃ ಪತಂಜಲಿ ಈ ಮಟ್ಟಿಗೆ ಬೆಳೆಯಲು ಇದೂ ಒಂದು ಕಾರಣವಾಗಿರಬಹುದು.

ಯಾವುದೇ ಒಬ್ಬ ವ್ಯಕ್ತಿ ಒಂದು ಚಿಕ್ಕ ಸಾಧನೆ ಮಾಡಿದರೂ ಅದರಲ್ಲಿ ತಪ್ಪು ಹುಡುಕುವವರಿಗೇನು ಕಡಿಮೆಯಿಲ್ಲ. ಅಂತಹುದರಲ್ಲಿ ಒಬ್ಬ ಸನ್ಯಾಸಿ ಇಷ್ಟು ದೊಡ್ಡ ಸಂಸ್ಥೆಯನ್ನು ನಿರ್ವಹಿಸುತ್ತಿದ್ದಾರೆಂದರೆ ಟೀಕೆಗಳು ಬರದೇ ಇರುತ್ತವೆಯೆ ?. ಸನ್ಯಾಸಿಗೆ ಈ ಕಂಪನಿ, ವ್ಯವಹಾರ ಎಲ್ಲ ಏನಕ್ಕೆ ಬೇಕು ಎಂದು ಮೂಗುಮುರಿಯುವವರೇ ಜಾಸ್ತಿ. ಆದರೆ ಪತಂಜಲಿ ಸಂಸ್ಥೆಯಲ್ಲಿ ಬಾಬಾರವರ ಪಾಲು ಎಷ್ಟು ಗೊತ್ತೇ ? ಶೇಕಡಾ ೦. ಹೌದು ಪತಂಜಲಿ ಆಯುರ್ವೇದದಲ್ಲಿ ಬಾಬಾ ರಾಮ್’ದೇವ್ ಯಾವುದೇ ಪಾಲು ಹೊಂದಿಲ್ಲ. ಇದರಲ್ಲಿ ಹೆಚ್ಚಿನ ಪಾಲು ಅವರ ಸಹಯೋಗಿ ಆಚಾರ್ಯ ಬಾಲಕೃಷ್ಣರದು, ಬಿಟ್ಟರೆ ಇತರೆ ಖಾಸಗಿ ಪಾಲುದಾರರು. ಇವಿಷ್ಟೇ ಅಲ್ಲದೆ ಗಮನಾರ್ಹ ಸಂಗತಿಯೆಂದರೆ ಪತಂಜಲಿ ಉತ್ಪನ್ನಗಳ ಮೂಲಕ ಬರುವ ೧೦೦ ಶೇಕಡಾ ಲಾಭವೂ ಕೂಡ ಸಮಾಜ ಸೇವೆಗೆಂದೇ ಮೀಸಲಿಟ್ಟಿದ್ದಾರೆ ಬಾಬಾ ಅವರು. ಬಹುಶಃ ಇಷ್ಟು ದೊಡ್ಡ ಪಾಲನ್ನು ಸಮಾಜ ಸೇವೆಗೆ ಮೀಸಲಿಟ್ಟ ಮತ್ತೊಂದು ಸಂಸ್ಥೆ ಇಲ್ಲವೇನೋ. ಏನೇ ಇರಲಿ.. ಈಸಬೇಕು ಈಸಿ ಜೈಸಬೇಕು ಎಂಬಂತೆ ತಾವು ಕಂಡ ಕನಸನ್ನು ನನಸು ಮಾಡುವತ್ತ ಹೆಜ್ಜೆ ಇಡುತ್ತಿರುವ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸಂಸ್ಕೃತಿ ಆಯುರ್ವೇದ ಯೋಗಗಳನ್ನು ಪ್ರಚಾರ ಮಾಡಿ , ಕೇವಲ ಸ್ವದೇಶೀ ಚಿಂತಕರು ಮಾತ್ರ ಆಗದೆ ಸ್ವದೇಶೀ ಉತ್ಪನ್ನಗಳನ್ನು ತಯಾರಿಸಿ ಅದನ್ನೂ ಯಶಸ್ವಿಯಾಗಿ ಮುನ್ನಡೆಸುತ್ತಿರುವ ೫೦ ವರುಷದ ಈ ತರುಣನ ಸಾಮರ್ಥ್ಯ ಅಂತಿಂತಹುದಲ್ಲ. ಪತಂಜಲಿ ಹುಟ್ಟಿದ ನಾಡಲ್ಲಿ ಪತಂಜಲಿ ಉತ್ಪನ್ನಗಳ ಸಾಮ್ರಾಜ್ಯ ಕಟ್ಟಿದ ಈ ಸಂತನಿಗೆ ಒಂದು ಸಲಾಮ್.

-Kishor Bhat

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!