ಅಂಕಣ

ದೇಶಾದ್ಯಂತ ನಡೆಯುತ್ತಿದೆ ‘ಉಲ್ಟಾ’ ಜನಾಂಗೀಯ ಹಲ್ಲೆ!

ಬೆಂಗಳೂರಿನಲ್ಲಿ ತಾಂಜೇನಿಯ ಯುವತಿ ಮೇಲೆ ಹಲ್ಲೆ ನಡೆಸಲಾಗಿದೆ ಎಂಬುದು ಈಗ ಇಂಟರ್‌ನ್ಯಾಷನಲ್ ಸುದ್ದಿಯಾಗಿದೆ. ಜ.31ರಂದು ಸೂಡಾನ್ ವಿದ್ಯಾರ್ಥಿಗಳು ಕುಡಿದ ಅಮಲಿನಲ್ಲಿ ಅಪಘಾತ ಎಸಗಿ ಮಹಿಳೆಯೊಬ್ಬರ ಬರ್ಬರ ಸಾವಿಗೆ ಕಾರಣವಾಗಿದ್ದರು. (ಪಾನಮತ್ತ ಚಾಲಕರು ಆತ್ಮಹತ್ಯಾ ಬಾಂಬರ್‌ಗಳಿದ್ದಂತೆ ಎಂದು ದೆಹಲಿ ನ್ಯಾಯಾಲಯ ಇತ್ತೀಚೆಗೆ ಟಿಪ್ಪಣಿ ಮಾಡಿತ್ತು.) ಇದರಿಂದ ರೊಚ್ಚಿಗೆದ್ದ ಸ್ಥಳೀಯರು ವಾಹನಗಳಲ್ಲಿದ್ದವರನ್ನು ಥಳಿಸಿ, ಕಾರಿಗೆ ಬೆಂಕಿ ಹಚ್ಚಿದ್ದಾರೆ. ಈ ಸಂದರ್ಭದಲ್ಲೇ ತಾಂಜೇನಿಯ ಯುವತಿ ಮೇಲೆ ಹಲ್ಲೆ ನಡೆಸಿ ವಿವಸ್ತ್ರಗೊಳಿಸಲಾಗಿದೆ ಎಂಬ (ಗಾಳಿ) ಸುದ್ದಿಯೂ ಕಾಡ್ಗಿಚ್ಚಿನಂತೆ ಹರಡಿದೆ. ಈ ಸುದ್ದಿಗೆ ಆಧಾರವೇನೆಂದರೆ, ಯುವತಿಯ ಹೇಳಿಕೆ ಮತ್ತು ವಾಟ್ಸ್‌ಪ್‌ನಲ್ಲಿ ಹರಿದಾಡಿದ ಸಂದೇಶಗಳು.ಇಷ್ಟರ ಆಧಾರದ ಮೇಲೆ ಕೆಲ ಮಾಧ್ಯಮಗಳುಈಗಾಗಲೇ ಪ್ರಕರಣದ ದೋಷಾರೋಪ ಮಾಡಿ, ವಿಚಾರಣೆ ನಡೆಸಿ, ಇದೊಂದು ಜನಾಂಗೀಯ ಹಲ್ಲೆ ಎಂಬ ತೀರ್ಪನ್ನೂ ನೀಡಿ ಬಿಟ್ಟಿವೆ!

ಡಿ.31ರ ರಾತ್ರಿ ಘಟನೆ ನಡೆದಾಗ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವಸ್ತ್ರಗೊಳಿಸಿದ ಬಗ್ಗೆ ಉಲ್ಲೇಖವಿಲ್ಲ, ಇದು ಜನಾಂಗೀಯ ಹಲ್ಲೆ ಅಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಪ್ರಕರಣದ ಸ್ಪಷ್ಟ ಸ್ವರೂಪ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಕೆಲ ಸುದ್ದಿ ಜೀವಿಗಳು ಮಾತ್ರ ಕರ್ನಾಟಕ ಸರ್ಕಾರ ಜನಾಂಗೀಯ ಹಲ್ಲೆಯ ಬಗ್ಗೆ ಕ್ರಮ ತೆಗೆದುಕೊಳ್ಳದೇ, ತಿಪ್ಪೇ ಸಾರಿಸುವ ಕೆಲಸ ಮಾಡುತ್ತಿದೆ ಎಂದು ರೇಗಾಡುತ್ತಿವೆ. ಬೆಂಗಳೂರಿನಲ್ಲಿ ನಡೆದದ್ದು ಶೇ.100ರಷ್ಟು ಜನಾಂಗೀಯ ಹಲ್ಲೆ ಎಂದು ಮಾಧ್ಯಮಗಳಲ್ಲಿ ವಿಪರೀತ ಬೊಬ್ಬೆ ಕೇಳಿ ಬರುತ್ತಿದೆ. ಅಪ್ಪಟ ನಿಜ… ಜನಾಂಗೀಯ ಹಲ್ಲೆ ನಡೆದಿರುವುದು ನಿಜ, ಆದರೆ ಬೆಂಗಳೂರಿನಲ್ಲಿ ಅಲ್ಲ ಸುದ್ದಿ ಮಾಧ್ಯಮಗಳಲ್ಲಿ, ಕೆಲ ಚಿಂತಕರ ಚಾವಡಿಯಲ್ಲಿ, ಹಲವು ತಥಾಕಥಿತ ಬುದ್ಧಿಜೀವಿಗಳ ವಲಯದಲ್ಲಿ, ಇನ್ನಷ್ಟು ರಾಜಕೀಯ ಪಂಡಿತರ ಮಾತುಗಳಲ್ಲಿ.

ಏಕೆಂದರೆ, ಕಾರು ಅಪಘಾತದಲ್ಲಿ ಭಾರತೀಯ ಮಹಿಳೆಯೊಬ್ಬರು ವಿದೇಶಿಯ ಹುಚ್ಚಾಟದ ವರ್ತನೆಯಿಂದ ಸಾವನ್ನಪ್ಪಿದ್ದಾರೆ. ಅದರ ಬಗ್ಗೆ ಸೊಲ್ಲೂ ಇಲ್ಲ! ಆಕೆ ಮಹಿಳೆಯಲ್ಲವೇ? ಅವಳೂ ಒಂದು ಜನಾಂಗಕ್ಕೆ ಸೇರಿಲ್ಲವೇ? ಭಾರತೀಯರೊಬ್ಬರು ವಿದೇಶಿಯರ ಕಾರಿಗೆ ಸಿಕ್ಕಿ ಬರ್ಬರವಾಗಿ ಸತ್ತರೆ ಆ ಜೀವಕ್ಕೆ ಬೆಲೆಯೇ ಇಲ್ಲವೇ? ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ, ಸ್ಥಳೀಯರು ಹಲ್ಲೆ ನಡೆಸಿದ್ದು ಕೇವಲ ಯುವತಿಯ ಮೇಲಷ್ಟೇ ಅಲ್ಲ, ಅಲ್ಲಿದ್ದ ಹಲವಾರು ಯುವಕರೂ ಥಳಿತಕ್ಕೆ ಗುರಿಯಾಗಿದ್ದಾರೆ. ಆದರೆ, ಆ ಹೊಡೆತ ತಿಂದ ಆ ಯುವಕರ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ! ಇದೆಲ್ಲಾ ಲಿಂಗ ಭೇದವಲ್ಲವೇ? ಗಂಡಸರೇನು ಮನುಷ್ಯರೇ ಅಲ್ಲವೇ?

ಜಾತಿ, ಲಿಂಗ, ಜನಾಂಗ, ಮತ ಇತ್ಯಾದಿ ಭೇದವಿಲ್ಲದೇ ಎಲ್ಲರನ್ನೂ ಸಮಾನವಾಗಿ ಕಾಣುವುದು ಪ್ರಜಾಪ್ರಭುತ್ವದ ಆಶಯ. ಆದರೆ, ಈಗ ನಡೆಯುತ್ತಿರುವುದೇ ಬೇರೆ. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೇಮುಲ ಪ್ರಕರಣ ದೇಶಾದ್ಯಂತ ಸುದ್ದಿ ಮಾಡಿತ್ತು. ಈ ಪ್ರಕರಣ ಮುಂಬರುವ ಸಂಸತ್ತಿನ ಬಜೆಟ್ ಅಧಿವೇಶನ ಕೊಚ್ಚಿ ಹೋಗುವಂತೆ ಮಾಡಬಲ್ಲದು ಎಂದು ಶಿವಸೇನೆ ಆತಂಕ ವ್ಯಕ್ತಪಡಿಸಿದೆ. ಆದರೆ, ಕಳೆದ ವರ್ಷ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರ್ಕಾರಿ ಅಂಕಿ ಅಂಶಗಳು ತಿಳಿಸುತ್ತವೆ. ಪ್ರವೇಶ ಪರೀಕ್ಷೆಗೆ ಹೆಸರಾಗಿರುವ ರಾಜಸ್ಥಾನದ ಕೋಟಾ ಎಂಬ ಒಂದೇ ಊರಿನಲ್ಲಿ ಕಳೆದ ಎರಡು ವರ್ಷಗಳಲ್ಲಿ 33 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿಷ್ಠಿತ ಐಐಟಿಗಳಲ್ಲೂ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಐಐಟಿಗಳ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ತರುವ ಪ್ರಯತ್ನಗಳು ನಡೆಯುತ್ತಿವೆ. ಇಡೀ ವಿಶ್ವದಲ್ಲಿ ಯುವಕರ ಆತ್ಮಹತ್ಯೆ ಪ್ರಮಾಣ ಲೆಕ್ಕ ಹಾಕಿದರೆ ಭಾರತ ಮೊದಲ ಸ್ಥಾನದಲ್ಲಿದೆ. ಆದರೆ, ಆ ಬಗ್ಗೆ ಯಾರೂ ಚರ್ಚಿಸುವುದಿಲ್ಲ. ಅದಕ್ಕಾಗಿ ರಾಜಕಾರಣಿಗಳು ಕಣ್ಣೀರು ಹಾಕುವುದಿಲ್ಲ. ಯಾವುದೇ ವಿಧಾನಸಭೆ, ಲೋಕಸಭೆ ಕಲಾಪ ಭಂಗವಾಗುವುದಿಲ್ಲ. ಇದು ಜನಾಂಗೀಯ ಭೇದವಲ್ಲವೇ?

ಈ ನಡುವೆಯೇ, ಕರಾಚಿಯಲ್ಲಿ ನಡೆದ ಸಾಹಿತ್ಯ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ತೆರಳಬೇಕಿದ್ದ ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್ ಅವರಿಗೆ ಪಾಕಿಸ್ತಾನ ವೀಸಾ ನಿರಾಕರಿಸಿತ್ತು. ಆಸಕ್ತಿಕರ ಅಂಶ ಎಂದರೆ, ವೀಸಾಗೆ ಅರ್ಜಿ ಹಾಕಿದ್ದ 18 ಜನರಲ್ಲಿ ಖೇರ್ ಅವರೊಬ್ಬರ ವೀಸಾ ಮಾತ್ರ ನಿರಾಕರಿಸಲಾಗಿತ್ತು. ಏಕೆಂದರೆ ಅವರು ಕಾಶ್ಮೀರಿ ಪಂಡಿತರ ಹಕ್ಕುಗಳ ಬಗ್ಗೆ ಧ್ವನಿ ಎತ್ತಿದ್ದರು. ಎಷ್ಟು ಧೈರ್ಯ ಖೇರ್‌ಗೆ… ‘ಅಸಹಿಷ್ಣುತೆ’ಯ ಚರ್ಚೆ ನಡೆದು ಇಡೀ ಭಾರತವನ್ನು ಅವಮಾನಕ್ಕೆ ಗುರಿಪಡಿಸುವಾಗ, ಕಾಶ್ಮೀರಿ ಪಂಡಿತರ ಹಕ್ಕಿನ ಬಗ್ಗೆ ಮಾತನಾಡಿ ವಸ್ತು ಸ್ಥಿತಿ ಹೇಳಲು?!

ಖೇರ್‌ಗೆ ಆದ ಅವಮಾನದ ಬಗ್ಗೆ ದೊಡ್ಡ ಸುದ್ದಿಯಾದಾಗ ಪಾಕಿಸ್ತಾನದ ದೂತ ಅಬ್ದುಲ್ ಬಾಸಿತ್ ಅವರು ಖೇರ್‌ಗೆ ದೂರವಾಣಿ ಕರೆ ಮಾಡಿ ವೀಸಾ ನೀಡುವುದಾಗಿ ಹೇಳಿ, ಪಾಕಿಸ್ತಾನಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಆದರೆ ಖೇರ್ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ವಕ್ತಾರರು ಹಾಗೂ ಕೆಲ ‘ಬುದ್ಧಿಜೀವಿ’ಗಳು ಖೇರ್ ಅವರನ್ನು ‘ಸಹಿಷ್ಣುತೆಯ ಪೋಸ್ಟರ್ ಬಾಯ್’ ಎಂದೆಲ್ಲಾ ಲೇವಡಿ ಮಾಡಿದವು. ಕಾಶ್ಮೀರಿ ಹಿಂದೂಗಳ ಹಕ್ಕಿನ ಬಗ್ಗೆ ಅಪ್ಪಿ ತಪ್ಪಿ ಮಾತನಾಡಿದರೆ ಪಾಕಿಸ್ತಾನವಾದರೂ ಕ್ಷಮಿಸಿತು, ಸೆಕ್ಯುಲರ್‌ಗಳು ಹಾಗೂ ಬುದ್ಧಿಜೀವಿಗಳು ಮಾತ್ರ ಕ್ಷಮಿಸುವುದಿಲ್ಲ ಎಂದು ಕೆಲವರು ಅರ್ಥೈಸುತ್ತಿದ್ದಾರೆ. ಇದು ಜನಾಂಗ ಭೇದದ ಮತ್ತೊಂದು ಉದಾಹರಣೆಯಲ್ಲವೇ?

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕೆಲ ತಿಂಗಳ ಹಿಂದೆ ಹೇಳಿಕೆಯೊಂದನ್ನು ನೀಡಿ, ಯಾರಾದರೂ ಈಶಾನ್ಯ ರಾಜ್ಯಗಳ ಪ್ರಜೆಗಳನ್ನು ‘ಚಿಂಕಿ’, ‘ಚೀನಿ’ ಇತ್ಯಾದಿ ಪದಗಳಿಂದ ಲೇವಡಿ ಮಾಡಿದರೆ ಅವರನ್ನು ಜೈಲಿಗೆ ಹಾಕುವ ಕಾನೂನು ರೂಪಿಸುವುದಾಗಿ ಹೇಳಿದ್ದರು. ಇದೇ ವೇಳೆ ಈಶಾನ್ಯ ರಾಜ್ಯಗಳ ಪ್ರವಾಸ ಮಾಡಿ ಬಂದ ಪತ್ರಕರ್ತರೊಬ್ಬರು, ಆ ರಾಜ್ಯಗಳಲ್ಲಿ ಹಿಂದಿ ಭಾಷಿಗರಾಗಿ ಬದುಕುವುದು ಒತ್ತಟ್ಟಿಗಿರಲಿ, ಪ್ರವಾಸ ಮಾಡುವುದೇ ಅಪಾಯ ಎಂದಿದ್ದರು. ಒಂದೆಡೆ ಈಶಾನ್ಯದಲ್ಲಿ ಹಿಂದಿ ಭಾಷಿಗರನ್ನು ಹತ್ಯೆ ಮಾಡುವ, ಅವಮಾನಕ್ಕೆ ಗುರಿ ಮಾಡುವ ವರದಿಗಳು ಆಗಾಗ ಬರುತ್ತಲೇ ಇರುತ್ತವೆ. ಇಷ್ಟಾದರೂ, ಅವರ ನಾಡಿನಲ್ಲಿ ಅವರ ಈ ವರ್ತನೆಯ ಬಗ್ಗೆ ಯಾವುದೇ ಸೊಲ್ಲಿಲ್ಲ. ಆದರೆ, ಉಳಿದೆಡೆ ಮಾತ್ರ ಈಶಾನ್ಯದವರಿಗೆ ಒಂದು ಮಾತನಾಡಿದರೆ… ನಡೆ ಜೈಲಿಗೆ…! ಪುಣ್ಯಕ್ಕೆ ಈ ಕಾನೂನು ಇನ್ನೂ ಜಾರಿಗೆ ಬಂದಿಲ್ಲ, ಕೇವಲ ಪ್ರಸ್ತಾಪದಲ್ಲೇ ಇದೆ. ಇದೆಲ್ಲಾ ಜನಾಂಗೀಯ ಭೇದವಲ್ಲವೇ ?

ಬೆಂಗಳೂರಿನಲ್ಲಿ ಅಕ್ರಮವಾಗಿ 850ಕ್ಕೂ ಹೆಚ್ಚು ನೈಜೀರಿಯಾ, ಉಗಾಂಡ ಹಾಗೂ ಕೀನ್ಯ ಪ್ರಜೆಗಳು ನೆಲೆಸಿದ್ದಾರೆ. ಇವರು ಹಾಡು ಹಗಲೇ ಕುಡಿದು ಉದ್ಧಟನದಿಂದ ವರ್ತಿಸುತ್ತಾ ಪೊಲೀಸರ ಮೇಲೂ ಹಲ್ಲೆ ನಡೆಸುತ್ತಿದ್ದಾರೆ. ಬಂಧಿಸಿದರೂ ಅವರಿಗೆ ಅನ್ವಯವಾಗುವುದು ಅವರ ದೇಶದ ಕಾನೂನೇ ಹೊರತು, ಭಾರತೀಯ ಕಾನೂನಲ್ಲ. ಹೀಗಾಗಿ ಅವರು ಸುಲಭವಾಗಿ ಜಾಮೀನು ಪಡೆದು ಮತ್ತೆ ಅಪರಾಧಿಕ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ತಾಂಜೇನಿಯ ಯುವತಿ ಪ್ರಕರಣದ ಸಂದರ್ಭದಲ್ಲಿ ಈ ವಿಷಯವೂ ಬೆಳಕಿಗೆ ಬಂದಿದೆ. ಇವರ ವಿರುದ್ಧ ಕ್ರಮಕ್ಕೆ ಅಸಹಾಯಕವಾಗಿರುವ ವ್ಯವಸ್ಥೆ, ಸದ್ಯಕ್ಕೆ ತಾಂಜೇನಿಯ ಪ್ರಕರಣದಲ್ಲಿ 100ಕ್ಕೂಹೆಚ್ಚು ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ. ಹಲವರನ್ನು ಬಂಧಿಸಲಾಗಿದೆ, ಇಬ್ಬರು ಪೊಲೀಸರನ್ನು ಅಮಾನತ್ತುಗೊಳಿಸಲಾಗಿದೆ. ಇದಲ್ಲವೇ ಉಲ್ಟಾ ಜನಾಂಗೀಯ ಭೇದ?

-ಶ್ರಿನಿವಾಸ್

srinivas.sa@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!