ಅಂಕಣ

ಜ್ಯೂಲಿಯನ್ ಅಸಾಂಜೆಗೆ ಎಲ್ಲಿಯವರೆಗೂ ಸಜೆ?

೪೫ ರ ಹರೆಯದ ಜ್ಯೂಲಿಯನ್ ಅಸಾಂಜೆ, ಅಮೆರಿಕದಂಥ ದೊಡ್ದಣ್ಣನನ್ನೇ ಅಲುಗಾಡಿಸಿದ, “ವಿಕಿ ಲೀಕ್ಸ್” ಮೂಲಕ ಜಗತ್ತಿನ ಹಲವು ದೇಶಗಳ ಗೌಪ್ಯ ಮಾಹಿತಿಯನ್ನು ಪ್ರಪಂಚಕ್ಕೇ ಬಿಚ್ಚಿಟ್ಟ ಚಾಣಾಕ್ಯ ಪ್ರತಿಭೆಯ ವ್ಯಕ್ತಿ. ಆಸ್ಟ್ರೇಲಿಯಾದಲ್ಲಿ ಹುಟ್ಟಿದ ಈತ, ೧೬ರ ಹರೆಯದಲ್ಲಿ ಕಂಪ್ಯೂಟರ್ ಅನ್ನು ಅಜ್ಜಿಯಿಂದ ಉಡುಗೊರೆಯಾಗಿ ಪಡೆದು ಅದನ್ನು ಅಮೂಲಾಗ್ರವಾಗಿ ಅದ್ಯಯನ ನಡೆಸಿ ಪರಿಣಿತಿ ಪಡೆದ. ‘ಕಂಪ್ಯೂಟರ್ ಹ್ಯಾಕಿಂಗ್’ ನಲ್ಲಿ ಅಪಾರ ನಿಪುಣತೆಯನ್ನು ಗಳಿಸಿ, ಕಂಪ್ಯೂಟರ್ ಪ್ರೊಗ್ರಾಮರ್ ಆದ. ೨೦೦೬ ರಲ್ಲಿ ಈತ ಸ್ಥಾಪಿಸಿದ “ವಿಕಿ ಲೀಕ್ಸ್” ಎಂಬ ವೆಬ್ ಸೈಟ್ ಈತನಿಗೆ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಗಳಿಸಿಕೊಟ್ಟಿತ್ತಷ್ಟೇ ಅಲ್ಲ, ಈತನನ್ನು ವಿಶ್ವದ ಹಲವು ಬಲಾಡ್ಯ ರಾಷ್ಟ್ರಗಳ ದೃಷ್ಟಿಯಲ್ಲಿ ಖಳನಾಯಕನನ್ನಾಗಿಯೂ ಮಾಡಿದವು. ಸುಮಾರು ಒಂದು ಕೋಟಿಯಷ್ಟು ರಹಸ್ಯಮಯ (classified), ಸೂಕ್ಷ್ಮ (sensitive) ದಾಖಲೆಗಳನ್ನು ಸಾರ್ವಜನಿಕಗೊಳಿಸಿ, ವಿಕಿ ಲೀಕ್ಸ್ ತಾಣದಲ್ಲಿ ಸಿಗುವಂತೆ ಮಾಡಿದ ಈತನ ಸಾಹಸ ಅದ್ಭುತ. ಟೈಮ್ಸ್ ಪತ್ರಿಕೆ, ವಿಕಿ ಲೀಕ್ಸ್’ನ ಟಾಪ್ ೧೦ ರಹಸ್ಯಗಳ ಅನಾವರಣಗಳನ್ನು ಪಟ್ಟಿ ಮಾಡಿದ್ದು, ಇವೆಲ್ಲವೂ ಅಮೆರಿಕಾದ ಅಥವಾ ಅಮೆರಿಕನ್ನರಿಗೆ ಸಂಬಂದಿಸಿದ್ದೇ ಆಗಿದ್ದು, ಸಹಜವಾಗಿ ಅಮೆರಿಕಾದ ಕಣ್ಣನ್ನು ಕೆಂಪಾಗಿಸಿದೆ. ಇವುಗಳ ಪೈಕಿ ಕೆಲವು ರಹಸ್ಯ ದಾಖಲೆಗಳೆಂದರೆ, ೨೦೧೦ರಲ್ಲಿ ಬಹಿರಂಗಗೊಳಿಸಿದ ಇರಾಕ್, ಆಫ್ಘಾನಿಸ್ತಾನ್ ಯುದ್ದದಲ್ಲಿ ನಡೆದಿದೆ ಎನ್ನಲಾದ ಅಮೆರಿಕಾದ ಸೈನಿಕರ ದೌರ್ಜನ್ಯ, ಅಮೆರಿಕಾದ ರಕ್ಷಣಾ ಕೋಟೆ ಪೆಂಟಗಾನ್’ನ ಕುರಿತಾದ ರಹಸ್ಯ ಮಾಹಿತಿಗಳು, ೨೦೦೭ರಲ್ಲಿ ರಾಯ್ಟರ್ ಸುದ್ದಿ ಸಂಸ್ಥೆಯ ಹೆಲಿಕ್ಯಾಪ್ಟರನ್ನು ಅಮೆರಿಕಾದ ಸೇನೆ ಹೊಡೆದುರುಳಿಸಿದ ವೀಡಿಯೋ ಇತ್ಯಾದಿ. ಇನ್ನು ಭಾರತದ ಬಗ್ಗೆಯೂ ವಿಕಿ ಲೀಕ್ಸ್ನಲ್ಲಿ ಗೌಪ್ಯ ಮಾಹಿತಿಗಳು ಬಹಿರಂಗವಾಗಿದ್ದು, ಇಂದಿರಾ ಗಾಂಧಿಯವರ ಆಯ್ಕೆಯ ಬಗ್ಗೆ ಸುಬ್ರಮಣ್ಯಮ್ ಸ್ವಾಮಿಯವರು ಅಮೆರಿಕಾಕ್ಕೆ ಮಾಹಿತಿ ಕೊಟ್ಟ ಬಗ್ಗೆ, ಕಪ್ಪು ಹಣ ಹೊಂದಿದವರ ಬಗ್ಗೆ ಹಾಗೂ ರಹಸ್ಯಮಯ ಭಾರತ – ಅಮೇರಿಕ ರಾಯಭಾರ ಸಂವಹನಗಳ ಬಗ್ಗೆ ಬಹುತೇಕರು ಅರಿಯದ, ರೋಚಕವಾದ ಮಾಹಿತಿಗಳನ್ನು ಬಿಚ್ಚಿಟ್ಟಿದ್ದು ರಾಜಕೀಯ ಸಂಚಲನವನ್ನೇ ಸೃಷ್ಟಿಸಿತ್ತು.

​​ಇಂತಿಪ್ಪ ಅಸಾಂಜೆಯನ್ನು ಮಟ್ಟ ಹಾಕಲು ಅಮೇರಿಕ ಇನ್ನಿಲ್ಲದೇ ಹವಣಿಸುತ್ತಿದೆ. ಆದರೆ ಅದರ ಕೈಗೆ ಆತ ಸಿಗುತ್ತಿಲ್ಲ. ತನ್ನನ್ನು ಮಟ್ಟಹಾಕಲು ಅಮೇರಿಕ ತಂತ್ರಗಾರಿಕೆಯನ್ನು ರೂಪಿಸುತ್ತಿದೆ ಎಂಬುದು ಅಸಾಂಜೆಯಆರೋಪ. ಇದಕ್ಕೆ ಪೂರಕವಾಗಿ, ಸ್ವೀಡನ್’ನ ಎರೆಡು ಮಹಿಳೆಯರಿಗೆ ಸಂಭಂದಿಸಿದಂತೆ ಲೈಂಗಿಕ ಅಪರಾಧವೆಸಗಿದ್ದಾನೆಂದು ಆರೋಪಿಸಿ, ಅಸಾಂಜೆಯನ್ನು ತನಗೆ ಹಸ್ತಾಂತರಿಸುವಂತೆ ಸ್ವೀಡನ್ ಬ್ರಿಟಿಷ್ ಸರ್ಕಾರವನ್ನು ಕೋರಿತು. ಆಗ ಬ್ರಿಟನ್ ಈತನನ್ನು ೧೦ ದಿನಗಳ ಕಾಲ ಏಕಾಂತ ಬಂದನದಲ್ಲಿ ಕೂಡಿಹಾಕಿ, ನಂತರ ೫೫೫ ದಿನಗಳ ಕಾಲ ಸೆರೆಯಲ್ಲಿರಿಸಿತು. ಅಮೇರಿಕಾ ಮತ್ತು ಸ್ವೀಡನ್ ನಡುವೆ ಅಪರಾಧಿಗಳ ಹಸ್ತಾಂತರ ಸಂಧಿ ಇದ್ದು, ಈತನನ್ನು ಮೊದಲು ಸ್ವೀಡನ್’ಗೆ, ಆ ನಂತರ ಅಮೆರಿಕಾಕ್ಕೆ ಕರೆಸಿಕೊಂಡು ತಕ್ಕ ಪಾಠ ಕಲಿಸುವ ಅಮೆರಿಕಾದ ಪಿತೂರಿ ಇದರ ಹಿಂದೆ ಇದೆ ಎಂದೇ ನಂಬಲಾಗಿದೆ. ತನ್ನನ್ನು ಸ್ವೀಡನ್ ಗೆ ಹಸ್ತಾಂತರಿಸುವ ಸಾದ್ಯತೆಯನ್ನರಿತ ಅಸಾಂಜೆ, ಲಂಡನ್ ನಲ್ಲಿರುವ ಅಮೇರಿಕಾದ ಮಿತ್ರವಲ್ಲದ ಇಕ್ವೆಡಾರ್ ದೇಶದ ರಾಯಬಾರ ಕಛೇರಿಯಲ್ಲಿ ೨೦೧೨ ರಲ್ಲಿ ರಾಜಾಶ್ರಯವನ್ನು (extradition) ಪಡೆದ. ಒಂದು ದೇಶ ತನ್ನ ರಾಯಬಾರ ಕಚೇರಿಯಲ್ಲಿ ಯಾವುದೇ ವ್ಯಕ್ತಿಗೆ ರಾಜಾಶ್ರಯ ನೀಡಿದಲ್ಲಿ, ಬೇರೊಂದು ದೇಶ ಆತನನ್ನು ರಾಯಬಾರ ಕಛೇರಿಗೆ ನುಗ್ಗಿ ಬಂದಿಸುವಂತಿಲ್ಲ. ಅಪ್ಪಣೆ ಇಲ್ಲದೇ ಪರ ದೇಶದ ರಾಯಬಾರ ಕಛೇರಿಯ ಪ್ರವೇಶ ಸಹಾ ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗುತ್ತದೆ. ಇದರ ಪರಿಣಾಮವಾಗಿ ಅಸಾಂಜೆ, ಲಂಡನ್’ನಲ್ಲಿನ ಇಕ್ವೆಡಾರ್ ರಾಯಬಾರ ಕಛೇರಿಯಲ್ಲೇ ಕಾಲ ಕಳೆಯಬೇಕಾಯಿತು (ಈಗಲೂ ಆತ ಅಲ್ಲೇ ಉಳಿದುಕೊಂಡಿದ್ದಾನೆ). ಬ್ರಿಟನ್, ತನ್ನ ಪೋಲಿಸನ್ನು ಇಕ್ವೆಡಾರ್ ರಾಯಬಾರ ಕಛೇರಿಯ ಎದುರು, ಅಸಾಂಜೆ ತಪ್ಪಿಸಿಕೊಳ್ಳಬಾರದೆಂದೇ ನಿಯೋಜಿಸಿದೆ. ತನ್ನ ದೇಶ ಆಸ್ಟ್ರೇಲಿಯ ಇರಲಿ, ರಾಯಬಾರ ಕಛೇರಿಯ ಹೊರಗೆ ಕಾಲಿಟ್ಟರೂ ಬಂಧನಕ್ಕೊಳಗಾಗುವ ಭೀತಿ ಅಸಾಂಜೆಗೆ ಇದೆ. ಹೀಗೆ ಅಸಾಂಜೆ, ಅಮೇರಿಕ, ಸ್ವೀಡನ್ ಮತ್ತು ಬ್ರಿಟನ್ ನಿಂದಾಗಿ ಗೃಹ ಬಂಧನ ಅನುಭವಿಸುವಂತಾಗಿದೆ.

ಈಗ ಅಸಾಂಜೆ ಸುದ್ದಿಯಾಗಲು ಕಾರಣ, ಆತನನ್ನು ಕೂಡಲೇ ಬಂಧ ಮುಕ್ತಗೊಳಿಸಬೇಕು ಹಾಗೂ ಆತನಿಗೆ ಪರಿಹಾರ ಕೊಡಬೇಕೆಂದು ವಿಶ್ವಸಂಸ್ಥೆಯ ‘ನಿರಂಕುಶ ಬಂಧನ’ದ ಮೇಲಿನ ಸಮಿತಿಯು ಇತ್ತೇಚೆಗೆ ನೀಡಿದ ವರದಿ. ತನ್ನನ್ನು ವಿನಾ ಕಾರಣ ಬಂಧಿಸಿ, ಬ್ರಿಟನ್ ತನ್ನ ಮಾನವ ಹಕ್ಕುಗಳ ಹರಣ ಮಾಡುತ್ತಿದೆಯೆಂದು ಆರೋಪಿಸಿ ಅಸಾಂಜೆ ವಿಶ್ವಸಂಸ್ಥೆಯ ಸಮಿತಿಗೆ ೨೦೧೪ರಲ್ಲಿ ದೂರು ನೀಡಿದ್ದ. ಈ ದೂರನ್ನು ಪರಿಶೀಲಿಸಿದ ಸಮಿತಿಯು ಅಮೇರಿಕ, ಸ್ವೀಡನ್ ಮತ್ತು ಬ್ರಿಟನ್ ಮೂರೂ ರಾಷ್ಟ್ರಗಳು, ವಿಶ್ವ ಮಾನವ ಹಕ್ಕುಗಳ ಘೋಷಣೆಯ ಹಾಗೂ ನಾಗರೀಕ ಹಾಗೂ ರಾಜಕೀಯ ಹಕ್ಕುಗಳ ಅಂತರ ರಾಷ್ಟ್ರೀಯ ಸಂಧಿಯ ವಿಧಿಗಳನ್ನು ಘೋರವಾಗಿ ಉಲ್ಲಂಘಿಸಿದ್ದಾರೆಂದು ತೀರ್ಪು ನೀಡಿದೆ. ಅಲ್ಲದೆ, ಈ ಸಂಭಂದ ಈ ಮೂರೂ ರಾಷ್ಟ್ರಗಳೂ ತಕ್ಷಣವೇ ಕ್ರಮ ಕೈಗೊಂಡು ಅಸಂಜೆಯ ಚಲನಾ ಸ್ವಾತಂತ್ರ್ಯದ ಹಕ್ಕು ಸೇರಿದಂತೆ ಇನ್ನಿತರೇ ಮಾನವ ಹಕ್ಕುಗಳನ್ನು ರಕ್ಷಿಸಲು ಮನವಿ ಮಾಡಲಾಗಿದೆ.

ವಿಶ್ವಸಂಸ್ಥೆಯ ಸಮಿತಿಯ ತೀರ್ಪನ್ನು ಹಲವು ಮಾನವ ಹಕ್ಕುಗಳ ಸಂಘಟನೆಗಳು ಸ್ವಾಗತಿಸಿದ್ದರೆ , ಬ್ರಿಟನ್ ಹಾಗು ಸ್ವೀಡನ್ ಈ ಸಮಿತಿಯ ತೀರ್ಪು ಸಾರ್ವಭೌಮ ರಾಷ್ಟ್ರಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಏಕೆ೦ದರೆ ಸಮಿತಿಯ ಕಾನೂನಿನ ಮಾನ್ಯತೆ ಸೀಮಿತವಾಗಿದೆ ಹಾಗೂ ಅದರಲ್ಲಿದ್ದ ಸದಸ್ಯರು ಕಾನೂನಿನ ಪಂಡಿತರೇನಲ್ಲ ಎಂದು ಕ್ಯಾತೆ ತೆಗೆದಿವೆ. ಈ ಮೂಲಕ ಅಸಾಂಜೆಗೆ ಬಂಧನದ ಮುಕ್ತಿಯನ್ನು ಕೊಡುವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.

ವಿಶ್ವಸಂಸ್ಥೆಯ ಸಮಿತಿಯ ತೀರ್ಪು ಕೇವಲ ನಿರ್ದೇಶಕವಾಗಿರುವುದು (directory), ಹಾಗು ಯಾವುದೇ ದೇಶದ ಮೇಲೆ ಖಡ್ಡಾಯವಾಗಿ ಅನ್ವಯಿಸಲಾಗುವಿದಿಲ್ಲ ನಿಜ. ಆದರೆ, ಅಮೇರಿಕ ಮತ್ತು ಬ್ರಿಟನ್’ಗಳು ವಿಶ್ವದ ಬೇರೆ ರಾಷ್ರಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಪದೇ ಪದೇ ರಾಗ ಹಾಡುತ್ತಾ , ಇದೇ ವಿಷಯವನ್ನು ಮುಂದು ಮಾಡಿಕೊಂಡು ಆಫ್ಘಾನಿಸ್ತಾನ, ಇರಾಕ್ ಮೇಲೆ ದಾಳಿ ಮಾಡಲಿಲ್ಲವೇ? ಅನೇಕ ಇತರೇ ರಾಷ್ರಗಳ (ಶ್ರೀಲಂಕಾ , ಸಿಯೆರಾ ಲಿಯೋನ್..) ಆಂತರಿಕ ವಿಷಯದಲ್ಲಿ ಮಾನವ ಹಕ್ಕುಗಳ ವಿಷಯವನ್ನು ಹಿಡಿದು ಹಸ್ತಕ್ಷೇಪ ಮಾಡುತ್ತಿಲ್ಲವೇ? ಮದ್ಯ ಪ್ರಾಚ್ಯದ ದೇಶಗಳ ಮೇಲೆ ದಾಳಿ ಮಾಡುವಾಗ ಮಾನವ ಹಕ್ಕುಗಳ ಪರಿಣಿತರ ಅಭಿಪ್ರಾಯ ಕೆಳಲಾಗಿತ್ತೆ, ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿ ಕೇಳಿಬರುತ್ತಿವೆ. ಅಮೇರಿಕಾ ಮತ್ತು ಯುರೋಪಿಯನ್ ರಾಷ್ಟ್ರಗಳು ಈ ಹಿಂದೆ ಮಯನ್ಮಾರ್’ನ ಪ್ರಜಾಪ್ರಭುತ್ವ ಹೋರಾಟಗಾರ್ತಿ ಆಂಗ್ ಸಾನ್ ಸೂಚಿ ಹಾಗು ಮಾಲ್ಡೀವ್ಸ್ ನ ಮಾಜಿ ಅದ್ಯಕ್ಷ ನಶೀದ್’ರನ್ನು ಅಲ್ಲಿನ ಸರ್ಕಾರಗಳು ಬಂಧಿಸಿದಾಗ ಇದೇ ವಿಶ್ವಸಂಸ್ಥೆಯ ‘ನಿರಂಕುಶ ಬಂಧನ’ದ ಮೇಲಿನ ಸಮಿತಿಯ ತೀರ್ಪನ್ನು ಪಾಲಿಸಬೇಕೆಂದು ಆ ದೇಶಗಳ ಸರ್ಕಾರಗಳನ್ನು ಒತ್ತಾಯಿಸಿದ್ದವು. ಆದರೆ ಈಗ ಅದೇ ರಾಷ್ಟ್ರಗಳು ತದ್ವಿರುದ್ದ ನಿಲುವು ತಳೆದು ಒಬ್ಬ ವ್ಯಕ್ತಿಯ ಹಕ್ಕುಗಳನ್ನೇ ಹರಣ ಮಾಡುತ್ತಿರುವುದು ವಿಪರ್ಯಾಸ.

ಮಾನವ ಹಕ್ಕುಗಳು ಅತ್ಯಂತ ಪವಿತ್ರವಾದ ಹಕ್ಕುಗಳು. ಅದರಲ್ಲೂ ಅಸಾಂಜೆಯಂಥ whistelblower ಗೆ ಸೂಕ್ತ ರಕ್ಷಣೆ ಕೊಟ್ಟು, ಸಲಹಬೇಕಾದ್ದು ಪ್ರತಿ ಸರ್ಕಾರದ ಕರ್ತವ್ಯ. ಅದನ್ನು ಬಿಟ್ಟು, ದಮನಕಾರಿ ನೀತಿ ಅನುಸರಿಸುವುದು ಅಪಾಯಕಾರಿ ಹಾಗೂ ಅಸ್ವೀಕಾರಾರ್ಹ. ಜವಾಬ್ದಾರಿಯುತ ಪ್ರಜೆಗಳು, ರಾಷ್ಟ್ರಗಳು “ದೊಡ್ಡಣ್ಣರ” “ಸಣ್ಣ ನಡೆ” ಯನ್ನು ವಿರೋಧಿಸುವಂಥಾಗಲಿ; ಅಸಾಂಜೆಗೆ ಶೀಘ್ರ ನ್ಯಾಯ ಸಿಗಲಿ ಎಂದು ಹಾರೈಸೋಣ.

ಸುಧೀರ್ ಕೀಳಂಬಿ

ಕಾನೂನು ಅಧಿಕಾರಿ

ಭಾರತ ಸರಕಾರ

(ಈ ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ವೈಯುಕ್ತಿಕವಾಗಿದ್ದು, ಯಾವುದೇ ಕಾರಣಕ್ಕೂ ಭಾರತ ಸರ್ಕಾರದ ನಿಲುವನ್ನು ಪ್ರತಿಬಿಂಭಿಸುವುದಿಲ್ಲ. )

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!