ಅಂಕಣ

ಎಲ್ಲೆ ಮೀರಿದ ಮೇಲೆ, ಎಲ್ಲವೂ ಮುಗಿದ ಮೇಲೆ, ಕುರುಡು ಹೋಯಿತು…!

“ಅರೆ….ತಡಿ, ಏನು ಮಾಡುತ್ತಿದ್ದಿ…stop it..!” ಎಂದು ಆತಂಕ ವದನಳಾಗಿ ಕೇಳಿದಳಾಕೆ. “”ಸಾಯುತ್ತಿದ್ದೇನೆ…ಬದುಕಿಸಬಲ್ಲೆಯ?” ಅವಳಿಗಿಂತ ಭಯಗ್ರಸ್ತವಾದ ಧ್ವನಿಯೊಂದು ಗ್ಲಾಸಿನ ಮುಸುಕಿನಿಂದ ಕಷ್ಟಪಟ್ಟು ಹೊರಬಂತು. ” ಅಪಾರ್ಚುನಿಸ್ಟ್’ ರೋಬೋ ತನ್ನ ಚಟಕ್ಕಾಗಿ ಮಂಡಿಗೆ ಒದೆಯಿತು. ಅವನ ಕಾಲಿನ ಚೂಪು ತಂತಿ ಚುಚ್ಚಿ, ಇದೋ ಇಲ್ಲಿ ನೋಡು, ಸೂಜಿಮೊನೆಯಷ್ಟು ದೊಡ್ಡ ತೂತಾಗಿದೆ, ಈ ಲೋಹದ ಭಾರವಾದ ಪ್ಯಾಂಟಿಗೆ, ಸಾಯುತ್ತಿದ್ದೇನೆ ಕಾಪಾಡುವೆಯಾ?” ಎಂದು ಮತ್ತೆ ಚೀರಿದ.

ಏನಿದು, ಅವನದೆಂಥ ಲೋಹದ ಪ್ಯಾಂಟು? ಯಾರದು ‘ಅಪಾರ್ಚುನಿಸ್ಟ್’? ಆ ಕಣ್ಣಿಗೆ ಕಾಣದ ರಂಧ್ರಕ್ಕೆ, ಅದರ ಮೂಲಕವೇ ತನ್ನ ಜೀವ ಆವಿಯಾಗಿ ಹೋಗುತ್ತಿದೆಯೇನೊ ಎಂಬಂತೆ ಅವನ್ಯಾಕೆ ಹೌಹಾರಬೇಕು? ಒಂದೂ ಅರ್ಥವಾಗುತ್ತಿಲ್ಲವಾ? ಪ್ಲೀಸ್, ಮುಂದೆ ಓದಿ!

* * * * *

ಅದು ಇಸವಿ ‘xxx’. ನಿಮಗಿಷ್ಟ ಬಂದ ಯಾವುದೋ ಮಾಸ ಎಂದಿಟ್ಟುಕೊಳ್ಳಿ. PASA( Pamerican Aeronautical and Space Administration) ಎಂಬ ಜಗತ್ತಿನ ಅತ್ಯಂತ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆಯ ಅತ್ಯಂತ ಸುಸಜ್ಜಿತ ಕಾರ್ಯಾಲಯದಲ್ಲಿ ತಲೆ ಕೆರೆದುಕೊಂಡು ಕುಳಿತಿದ್ದಾನೆ ರಂಗದಾಸ್. ಷಿನ್ ಪಿಯೊ ಮತ್ತು ಕ್ರಿಸ್ಟಿಯಾನೊ ಅದೆಂಥದೋ ಕನ್ನಡಕದಿಂದಲೇ ಪ್ರೊಜೆಕ್ಟರ್ ಹಾಕಿ ಆತನಿಗೆ ಏನನ್ನೋ ವಿವರಿಸುತ್ತಿದ್ದಾರೆ. ಕೆಂಪು ಕೆಂಪು ನೆಲದಲ್ಲಿ ನಮ್ಮ ಗ್ರೀನ್ ಹೌಸಿನಂತ ಶೆಡ್ಡುಗಳು ಮುಂದಿನ ಪರದೆಯ ಮೇಲೆ ಮೂಡುತ್ತಿವೆ. ಎಂಥದೋ ಅನಾಹುತವಾಗಿರುವ, ಎಷ್ಟೋ ಜನರ ಜೀವ ಹೋಗುತ್ತಿರುವ ಮಾಹಿತಿ ಒಡಮೂಡುತ್ತಿದೆ. ಇವರ ಜಂಗಾಬಲ ಉಡುಗಿದೆ, ಜನರ ಜೀವ ಹೋಗುತ್ತಿರುವುದಕ್ಕೆ ಕಾರಣವಾದುದಕ್ಕಲ್ಲ, ಲಕ್ಷಕೋಟಿ ಹಣ ವ್ಯರ್ಥವಾಗುತ್ತಿದೆಯೆಂಬ ಕಾರಣಕ್ಕೆ! ಇವರ ಆ ‘ಪೂಗಲ್ ಐ’ ಕನ್ನಡಕ ಈ ನಿರ್ಭಾವುಕ ಜೀವಿಗಳ ಭಾವನೆಗಳನ್ನು ಇವರಿಗಿಂತ ಚೆನ್ನಾಗಿ ಡೀಕೋಡ್ ಮಾಡುತ್ತಿದೆ. ಯಾರಿವರೆಲ್ಲ? ಏನಾಗಿದೆ? ಎಂಥದದು ಕೆಂಪುನೆಲ?

* * * * *

ಮೇಲೆ ಹೇಳಿದ್ದನ್ನೆಲ್ಲ ರಂಧ್ರ ಶಿಖಾಮಣಿ, ಅವನು ಅರೆಜೀವವಾಗಿದ್ದ. ಬೆಳಗು ಕಳೆದು ರಾತ್ರಿಯಾಗಿತ್ತು. -100 ಡಿಗ್ರಿ ಸೆಲ್ಷಿಯಸ್ ಇದ್ದಿದ್ದ ತಾಪಮಾನ, -172ಕ್ಕೆ ಇಳಿದಿತ್ತು. ಈತನ ಆಕ್ಸಿಜನ್ನು-ಪಾಕ್ಸಿಜನ್ನುಗಳೆಲ್ಲ ಲೀಕಾಗಿ ಸುಸ್ತಾದವು. ತಲೆಕೆಟ್ಟವನಾಗಿ ಸ್ಪೇಸ್ ಸೂಟನ್ನೇ ಕಿತ್ತು ಬಿಸಾಡಿದ. ಇದನ್ನು ತೋಳದಂತೆ ಕಾದಿತ್ತು ವಾತಾವರಣ. ರಕ್ತ ಕಲ್ಲಾಯಿತು. ಕಾಸ್ಮಿಕ್ ಕಿರಣಗಳು ನಾಟಿದವು. ವಾತಾವರಣದಲ್ಲಿದ ಅತ್ಯಲ್ಪ ಶೇಕಡ 0.13 ಆಮ್ಲಜನಕ ಮೂಗಿನಿಂದ ಶ್ವಾಸಕೋಶದೊಳಗೆ ಹೋಗುವುದಕ್ಕೂ ಸಾಲ್. ಎಂಜಲು, ಶ್ವಾಸ ದ್ರವಣವೆಲ್ಲ ಕುದಿಯತೊಡಗಿದವು! ಒತ್ತಡವೇ ಇಲ್ಲದ ಆ ವಾತಾವರಣದಲ್ಲಿ, ಅವನಿಗೇ ಗೊತ್ತಿಲ್ಲದಂತೆ ಅವನ ದೇಹ ಸಿಡಿದುಹೋಯಿತು. ಆತನ ಕೈಲಿದ್ದ ಪ್ಯಾಪಲ್ ಸ್ಮಾರ್ಟ್ ವಾಚಾಗಲೀ, ಅಥವಾ ಅವನ ಇನ್ಯಾವುದೇ ಅತ್ಯಾಧುನಿಕ ಉಪಕರಣವಾಗಲಿ ಅವನ ಸಹಾಯಕ್ಕೆ ಬರಲಿಲ್ಲ, ಅನಾಥವಾಗಿ ಸತ್ತುಹೋದ…

ಅಂದಹಾಗೆ ಅವನು ಸತ್ತಿದ್ದು ಮಂಗಳನಲ್ಲಿ.

* * * * *

ಮೇಲೆ ಹೇಳಿದ್ದೆನ್ನಲ್ಲ ‘ಅನಾಹುತ’, ಅದು ಇತ್ತ ಭೂಲೋಕದಲ್ಲಿದ್ದ ಅರ್ಧಜನಸಂಖ್ಯೆಯ ನಿದ್ರೆಗೆಡಿಸಿತ್ತು! ಇನ್ನರ್ಧ ಜನಸಂಖ್ಯೆ ಮಂಗಳನಲ್ಲಿತ್ತಲ್ಲ ಅವರು ಸಾಯುತ್ತಾರೆಂದಲ್ಲ, ಈಗಾಗಲೇ ಅವರ ಸೈಟುಗಳನ್ನೆಲ್ಲ ನಾವು ನಮ್ಮದಾಗಿಸಿಕೊಂಡಿದ್ದೇವೆ, ಅವರು ವಾಪಸ್ ಬಂದುಬಿಟ್ಟರೆ? ಎಂದು. ಮಂಗಳನಲ್ಲಿ ಸಾಯುತ್ತಿದ್ದವರೇನು ಸಾಚಾಗಳಲ್ಲ ಬಿಡಿ, ಭೂಮಿ ಹೇಗಾದರೂ ಹಾಳಾಗಿದೆ. ನಾನು ಮೊದಲು ಕಳಚ್ಕೊಂಡ್ ಬಿಡ್ಬೇಕು. ಉಳಿದವರು ಹೇಗಾದರು ಸಾಯಲಿ ಎಂದು ಓಡಿಹೋದವರು. ‘ಜಗತ್ತು ಸಂಸ್ಥೆ’ ಹೇಳಿತ್ತು, ಅರ್ಧಜನಸಮೂಹ ಮಂಗಳಕ್ಕೆ ಹೋಗಬೇಕು, ಯಾರ್ಯಾರು ಬರುತ್ತೀರೋ ಬನ್ನಿ ಎಂದು.

ಖುದ್ದು ಪಮೇರಿಕೆಯ ಅಧ್ಯಕ್ಷರ ಕಾರು ಆವೇಶದಿಂದ ರಂಗದಾಸ್ ಮೇಜಿನ ಮುಂದೆಯೇ ಬಂದು ನಿಂತಿತು. ಅಷ್ಟೇ ಆವೇಶದಿಂದ ಬುರುಕ್ಕನೆ ಇಳಿದೋಡಿ ಬಂದ ಅಧ್ಯಕ್ಷರು ಆ ಕ್ರಿಸ್ಟಿಯಾನೋಗೆರಡು ತಪರಾಕಿ ಹಾಕಿದರು. ಆತ ಪಮೇರಿಕೆಯವ. “ಇವರನ್ನೆಲ್ಲ ಯಾಕೆ ಪಾಸಾಕ್ಕೆ ಕರಕೊಂಡು ಬಂದೆ, ಮಣ್ಣು ತಿನ್ನು ಈಗ” ಎಂದು ಬೈದರು. ಹೌದು ಬಿಡಿ, ತಿಂದರೆ ಭೂಮಿಯ ಮಣ್ಣನ್ನೇ ತಿನ್ನಬೇಕು, ಮಂಗಳನದ್ದು ಮಣ್ಣಲ್ಲ, ಕಲುಷಿತ ಕಬ್ಬಿಣದ ಪುಡಿ!

ಅಷ್ಟೊತ್ತಿಗೆ PASAದ ಚೇರ್ ಮನ್ ಬಂದರು. ಬಹಳ ಸೌಮ್ಯದ ವ್ಯಕ್ತಿ ರಂಗದಾಸ್, ಇಂದು ರೊಚ್ಚಿಗೆದ್ದಿದ್ದ! ” ಬಡ್ಕೊಂಡೆ ಸರ್, ನಿಮ್ಹತ್ರ…ಎಲ್ಲದೇಶದವರು ಸೇರಿ ೬೦-೭೦ ನೌಕೆಗಳನ್ನು ಮಂಗಳಕ್ಕೆ ಕಳುಹಿಸಿರಬಹುದು ಪರೀಕ್ಷೆಗೆ. ಒಂದೊಂದೂ “Life is impossible on mars” ಎಂದು ಒದರಿ ಒದರಿ ಸತ್ತವು. ಸೌಜನ್ಯಕ್ಕೂ ಒಂದು ಉಪಗ್ರಹ “ಬನ್ನಿ. ಚೆನ್ನಾಗಿದೆ” ಅನ್ನಲಿಲ್ಲ. ಬೇಡ ಅಂದೆ ಸರ್…ನಾನಲ್ಲ, ಬಿಸ್ರೋ, ಉರೋಪಿಯನ್ ಏಜೆನ್ಸಿಗಳೆಲ್ಲ ಅಂದವು. ಅದೆಂಥದೋ ಟೆಟ್ರಾ, ನ್ಯಾನೊ ರೆಪ್ಲಿಕೇಷನ್ ಎಂಬ ತಂತ್ರಜ್ಞಾನಗಳ ಹೆಸರು ಹೇಳಿ ನಮ್ಮನ್ನೆಲ್ಲ ಸುಮ್ಮನಿರಿಸಿದಿರಿ. ನನ್ನನ್ನು ಪ್ರಾಜೆಕ್ಟ್ ಡೈರೆಕ್ಟರ್ ಮಾಡುತ್ತೀರೆಂದಿರಲ್ಲ, ನಿಮಗೆ ನಾನೇ ಸಿಗಬೇಕಿತ್ತ? ಹುದ್ದೆಯ ಆಸೆಗೆ, ಕೀರ್ತಿಯ ಹುಚ್ಚಿಗೆ ನಾನೂ ಒಪ್ಪಿಬಿಟ್ಟೆ. ಆಕ್ಷನ್ ಹೀರೋನಂತೆ ಎಂಟ್ರಿಕೊಟ್ಟಿರುವ ಅಧ್ಯಕ್ಷರಿಗೆ ನೀವೇ ಹೇಳಿ” ಎಂದ.

ಸಿಟ್ಟನ್ನು ಹೊಟ್ಟೆಯಲ್ಲಿ ಹಾಕಿಕೊಂಡು, ಆದ ಪೇಚನ್ನು ಸಾವರಿಸಿಕೊಂಡು, ;ಪಾಸಾ’ದ ಚೇರ್ಮನ್ ಅಧ್ಯಕ್ಷರನ್ನುದ್ದೇಶಿಸಿ ಹೇಳಿದರು.”ಇಲ್ಲ ಸರ್, ಇದು ಹೇಗಾಯಿತೋ ಗೊತ್ತಿಲ್ಲ! ಓಜೋನ್ ಇಲ್ಲದ ಮಂಗಳನಲ್ಲಿ ನಾಟುವ ಅತಿನೇರಳೆ ಕಿರಣಗಳಿಂದ ರಕ್ಷಣೆಯನ್ನು, ಕಾಸ್ಮಿಕ್ ಕಿರಣಗಳಿಂದ ವ್ಯವಸ್ಥಿತ ರಕ್ಷಣೆಯನ್ನು, ಅವೆಲ್ಲ ಹೋಗಲಿ, ಅಲ್ಲಿ ಕ್ಷೀಣವಾಗಿರುವ ಗುರುತ್ವ ಬಲವನ್ನು ಸರಿಮಾಡಲು ಸತತವಾಗಿ ತಿರುಗುವ ಸೆಂಟ್ರಿಫ್ಯೂಜ್ ಸ್ಲೀಪಿಂಗ್ ಕೊಠಡಿಗಳನ್ನು ಮಾಡಿ ಕಳಿಸಿದೆವಲ್ಲ ಸರ್. ಇಲ್ಲದಿದ್ದರೆ ಅವರ ಮೂಳೆಗಳೆಲ್ಲ ಅವರಿಗೇ ಗೊತ್ತಿಲ್ಲದಂತೆ ಸವೆದು ಮಾಯವಾಗುತ್ತಿದ್ದವು! ಸೂರ್ಯನ ಬೆಳಕಿಲ್ಲದಾಗ, ಸೌರಶಕ್ತಿಯ ಆಟನಡೆಯದಾಗ ನಾವೇ ಎಲ್ ಇ ಡಿ ಉರಿಸಿ ನಮ್ಮ ಅಲ್ಲಿನ ಕಾರ್ಯಾಗಾರಗಳಲ್ಲಿ ಬೆಳೆಬೆಳೆಯುವಂತೆ ಮಾಡಿದ್ದು ಕಮ್ಮಿ ಸಾಧನೆಯಾ? ಆ ಮಷಿನರಿಗಳಿಗೆ, ಮನುಷ್ಯರಿಗೆ ಬಿಡಿಭಾಗಗಳನ್ನೂ, ಔಷಧಗಳನ್ನೂ ಬೇಕಾದಾಗಲೆಲ್ಲ ಇಲ್ಲಿಂದ ರವಾನೆ ಮಾಡಿದೆವು. ಇವೆಲ್ಲ ಸುಮ್ಮನೆ ಸಾಧ್ಯವಾಗಿದ್ದಲ್ಲ ಸರ್, ಮಾನವ ಭೂಮಿಯಲ್ಲಿ ಹುಟ್ಟಿದಾಗಿನಿಂದ ಭೂಮಿಯಲ್ಲಿ ಎಷ್ಟು ಇನ್ವೆಸ್ಟ್ ಮಾಡಿದ್ದನೋ, ಅದನ್ನು ಕಳೆದ ನಲ್ವತ್ತು ವರ್ಷಗಳಲ್ಲಿ ನಾವು ಮಂಗಳನಲ್ಲಿ ಇನ್ವೆಸ್ಟ್ ಮಾಡಿದ್ದೇವೆ ಸರ್. ಇರುವ ಈ ಭೂಮಿಯನ್ನೇ ಸರಿ ಮಾಡಿಬಿಡಬಹುದಿತ್ತು. ಇವೆಲ್ಲ ಜಗತ್ತಿನ ಅತ್ಯುನ್ನತ ಮಿದುಳುಗಳ ಅವಿರತ ಪ್ರಯತ್ನದಿಂದ ಸಾಧ್ಯವಾದದ್ದು. ಆದರೂ ಹೀಗೆ ಎಡವಟ್ಟಾಗಿದೆ ನೋಡಿ…” ಎಂದು ಕೈಕೈ ಹಿಸುಕಿಕೊಂಡರು. ಹೌದು, ಏನದು ‘ಎಡವಟ್ಟು’?

* * * * *

ಆಗಿದ್ದಿಷ್ಟು. ಮಂಗಳನಲ್ಲಿ ಧೂಳಿನ ಚಂಡಮಾರುತವೆದ್ದಿತ್ತು. ನಾಲ್ಕಾರು ವಸಾಹತುಗಳಿಗೆ ಹೊಡೆದು ಸುಮ್ಮನಾಗಿದ್ದರೆ ‘ಪಾಸಾ’ ಅಳುತ್ತಾ ಕೂತಿರುತ್ತಿರಲಿಲ್ಲ. ಮಂಗಳನಲ್ಲಿನ ಚಂಡ ಮಾರುತಕ್ಕೂ ಭೂಮಿಯಲ್ಲಿನ ಚಂಡಮಾರುತಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಅಲ್ಲಿ ಚಂಡಮಾರುತವೆದ್ದರೆ ‘ಧೂಳಿನ ಮಧ್ಯೆ ಗ್ರಹ’ ಅಂತಾಗುತ್ತದೆ. ಧೂಳೇ ಜೀವಾಳವಾಗಿರುವ ಆ ಗ್ರಹಕ್ಕೆ ಬರುವ ಸೂರ್ಯಕಿರಣಗಳಲ್ಲಿ ಶೇಕಡ 99ರಷ್ಟು ಈ ಧೂಳು ಮೋಡವನ್ನು ಸೀಳಿಬರುವುದೇ ಇಲ್ಲ! ಇದು ಅಲ್ಲಿ ಅತ್ಯಂತ ಕಾಮನ್. ನಮ್ಮವರೇನು ಇಷ್ಟು ದಿನ ಬದುಕಿರಲಿಲ್ಲವಾ? ಅವರಿಗಿದೆಲ್ಲ ಗೊತ್ತಿತ್ತು. ಮಂಗಳ “ಧೂಳ್ ಮಗ ಧೂಳ್” ಅಂದರೆ ನಮ್ಮವರು ವಾಪಸ್ “ಧಮಕ ಧಮಕ ಧೂಳ್” ಅನ್ನುವಷ್ಟು ಸಮರ್ಥರಿದ್ದರು. ಆದರೆ ಇದೇ ಸಮಯಕ್ಕೆ ಒಬ್ಬ ಅಧಿಕಪ್ರಸಂಗಿ ವಿಲನ್ ಎಂಟ್ರಿ ಕೊಟ್ಟುಬಿಟ್ಟಿದ್ದ. ಮಂಗಳನಾಚೆಯ ಗ್ರಹ ಗುರುವಿನ ಅಗಾಧ ಗುರುತ್ವ ಕ್ಷುದ್ರಗ್ರಹಗಳ ಪಟ್ಟಿಯೊಂದನ್ನು ಹಿಡಿದಿಟ್ಟುಕೊಂಡಿದೆ. ಆದರೆ ಒಂದು ಕ್ಷುದ್ರಗ್ರಹ ಮಂಗಳನತ್ತ ಚಿಮ್ಮಿ ಬಂದುಬಿಟ್ಟಿತ್ತು! ಅದನ್ನು ಧ್ವಂಸ ಮಾಡಲು ನಮ್ಮವರು ಉಡಾಯಿಸಿದ ಉಪಕರಣಗಳು ಈ ಬಾರಿ ಸೋತುಹೋಗಿದ್ದವು. ಬಂತು…ಬಂತು…ಬಂತು…ಅವಿರೋಧವಾಗಿ ಬಂದು ಮಾನವ ಬಿರುಗಾಳಿಯಿಂದ ರಕ್ಷಿಸಿಕೊಳ್ಳಲು ಮಾಡಿಕೊಂಡಿದ್ದ ಬಂಕರ್ ಒಂದಕ್ಕೆ ಅಪ್ಪಳಿಸಿ ಛಿದ್ರಗೊಳಿಸಿತು. ಉಂಟಾದ ವಿಕಿರಣ ಪಲ್ಲಟದಿಂದಲೋ ಏನೋ, ಧ್ವಂಸವಾದ ಬಂಕರ್ ಒಳಗಿದ್ದ ನಿಯಂತ್ರಣ ಕಂಪ್ಯೂಟರ್ ಒಳಗಿದ್ದ ಕೋಡಿಂಗ್ ಒಂದರಲ್ಲಿ ಏರುಪೇರಾಯ್ತು. ಪರಿಣಾಮವಾಗಿ ಇತರ ಅಡಗುತಾಣಗಳ ಬಾಗಿಲುಗಳೂ ತಾವಾಗಿಯೇ ತೆರೆದುಕೊಳ್ಳಲಾರಂಭಿಸಿದವು. ನೋಡನೋಡುತ್ತಿದ್ದಂತೆಯೇ ಮಾನವ ಜನಾಂಗ ಧೂಳಿನಲ್ಲಿ ಕಳೆದುಹೋಯಿತು!

ಮಂಗಳನಲ್ಲಿ ಭೂಮಿಯಲ್ಲಿದ್ದ ಹಾಗೆ ಆಯಸ್ಕಾಂತೀಯ ಕ್ಷೇತ್ರವಿಲ್ಲ. ಹಾಗಾಗಿ ಡೈರೆಕ್ಟ್ ಹಿಟ್ ಮಾಡುವ ಕಾಸ್ಮಿಕ್ ವಿಕಿರಣಗಳಿಗೆ ಹೇಳಿಕೇಳುವವರ್ಯಾರೂ ಇಲ್ಲ. ಭುವಿಯ ಜನ ಮಂಗಳನಲ್ಲಿದ್ದ ಅರ್ಧ ಜನಸಂಖ್ಯೆಯ ಆಸೆ ಬಿಟ್ಟಾಗಿತ್ತು.

* * * * *

ಕೆಲವೊಂದು ಸನ್ನಿವೇಶಗಳು ಎಂಥವರನ್ನೂ ನೀರಾಗಿಸುತ್ತವೆ. “ಮಂಗಳಕ್ಕೆ ಹಾಕಿದ ದುಡ್ಡು ಭೂಮಿ ಪುನಶ್ಚೇತನಕ್ಕೆ ಹಾಕಿದ್ದರೆ, ಭೂಮಿ ಮೊದಲಿನಂತಾಗುತ್ತಿತ್ತು. ಹಾಗೆ ಮಾಡುವ ಉತ್ಕೃಷ್ಟ ಮಿದುಳುಗಳು ನಮ್ಮಲ್ಲಿವೆ. ಉಪಯೋಗಿಸಿಕೊಳ್ಳೋಣ” ಎಂಬ ಚೇರ್ಮನ್’ರ ಪರಿವರ್ತನೆಯ ಮಾತು ಅಧ್ಯಕ್ಷರನ್ನು ಚಿಂತಿಸುವಂತೆ ಮಾಡಿತು. ಇದ್ದ ಮಂಗಳನ ಕುತೂಹಲ ತಣಿದಿತ್ತು, ಕೈ ಸುಟ್ಟುಕೊಂಡೂ ಆಗಿತ್ತು. ಕೆಟ್ಟ ಮೇಲೆ ಬುದ್ಧಿ ಬಂತು. ವಿಶ್ವವನ್ನುದ್ದೇಶಿಸಿ ಅಧ್ಯಕ್ಷರು ಬಿಬಿಬಿಸಿಯಲ್ಲಿ ಭಾವುಕರಾಗಿ ಭಾಷಣ ಮಾಡಿದರು. ಸಾಮಾಜಿಕ ಜಾಲತಾಣಗಳ ಮೂಲಕ, ಸುದ್ದಿಮಾಧ್ಯಮಗಳ ಮುಖಾಂತರ ಜನ ತಮ್ಮ ಬೆಂಬಲ ವ್ಯಕ್ತಪಡಿಸಿದರು. ತಾಂಡವವಾಡುತ್ತಿದ್ದ ಸಣ್ಣತನ, ಸ್ವಾರ್ಥ, ಅಸೂಯೆಗಳೆಲ್ಲ ಅರ್ಥ ಕಳೆದುಕೊಂಡವು. ಮಂಗಳನನ್ನು 72000 ಕಿ.ಮೀ. ದೂರದ ಕಕ್ಷೆಯಲ್ಲಿ ಸುತ್ತು ಹಾಕುತ್ತಿದ್ದ ಉಪಗ್ರಹ ಮಂಗಳನಲ್ಲಿ ಎದ್ದಿದ್ದ ಬಿರುಗಾಳಿ ತಣ್ಣಗಾಗಿದೆಯೆಂದೂ, ಅಂದುಕೊಂಡಿದ್ದಕ್ಕಿಂತ ಹೆಚ್ಚು ಜನ ಬದುಕಿದ್ದಾರೆಂದೂ ಸಂದೇಶ ರವಾನಿಸಿತು. ಬಿರುಗಾಳಿ ಸ್ವಲ್ಪ ಬೇಗವೇ ತಣ್ಣಗಾಗಿದ್ದರಿಂದ ತಮ್ಮಲ್ಲಿರುವ ವಿವಿಧ ಅತ್ಯಾಧುನಿಕ ಸ್ಪೇಸ್ ಸೂಟ್’ಗಳನ್ನು ಸಮರ್ಥವಾಗಿ ಬಳಸಿಕೊಂಡ ಅನೇಕ ಜನ ಕಷ್ಟಪಟ್ಟು ಬದುಕುಳಿದಿದ್ದರು. ಸಾವಿರಾರು ಜನರು ಸತ್ತೂ ಹೋಗಿದ್ದರು.

ಉಳಿದ ಜನರಲ್ಲಿ, ಸಮಸ್ತ ಭಾರತವನ್ನು ಗೆದ್ದ ನಂತರ ಅಶೋಕನಲ್ಲಿ ಆಗಿತ್ತಲ್ಲ ಜ್ನಾನೋದಯ, ಅಂಥದ್ದಾಯಿತು. ವಿಶ್ವವನ್ನು ಮೀರಲು ಹೊರಟ ಜನರಲ್ಲಿ ಭುವಿಯ ಬಗ್ಗೆ ಪ್ರೀತಿ ಉಕ್ಕಿತು. ಇತ್ತ ಭುವಿಯ ಜನರಲ್ಲೂ ಅಂಥದ್ದೇ ಭಾವ ಮೂಡಿತು. ಸ್ಪಷ್ಟವಾದ ಕಾರ್ಯಾಚರಣೆಯ ರೂಪುರೇಷೆಗಳು ಸಿದ್ಧವಾದವು. ಸರ್ವ ದೇಶಗಳೂ ಆರ್ಥಿಕವಾಗಿ, ತಾಂತ್ರಿಕವಾಗಿ ಸಹಾಯ ನೀಡಲು ಮುಂದಾದವು. ಹೇಗೆ ಎಲ್ಲರನ್ನೂ ಕರೆದುಕೊಂಡು ಹೋಗಿದ್ದರೋ, ಹಾಗೇ ಅವರನ್ನೆಲ್ಲ ವಿವಿಧ ಹಂತಗಳಲ್ಲಿ ವಾಪಸ್ ಕರೆ ತರಲು ನೌಕೆಗಳು ಸಿದ್ಧವಾದವು. ಯಶಸ್ವಿಯೂ ಆದವು. ಮಾನವನ ಅತಿಮಾನವ ಶಕ್ತಿ ಪ್ರದರ್ಶನವಾಯಿತು.

ಅಶೋಕ ಅಂತರಂಗದ ಪುನಶ್ಚೇತನಕ್ಕೆ ತೊಡಗಿದಂತೆ, ಭೂಮಿಯ ಪುನಶ್ಚೇತನಕ್ಕೆ ವಿಶ್ವವೇ ಪಣ ತೊಟ್ಟಿತು! ಪ್ರಯತ್ನಿಸುತ್ತಿದ್ದಾರೆ…. ‘ಯುದ್ಧ ವಿಜ್ಞಾನ ತೊಲಗಿ ಸಾವಯವ ವಿಜ್ಞಾನ ಮೆರೆದರೆ’, ‘ನನಗಾಗಿ ಭೂಮಿ’ ಹೋಗಿ ‘ಭೂಮಿಗಾಗಿ ನಾನಾದರೆ’ , ‘ನನಗೆ ಬೇಕು’ ಬದಲು , ‘ಅಯ್ಯೋ ಸಾಕು’ ಎಂದರೆ ಪ್ರಯತ್ನ ಯಶಸ್ವಿಯಾದೀತು….

-ಸಂಕೇತ್ ಡಿ. ಹೆಗಡೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!