Featured ಅಂಕಣ

ಎಲ್ಲಾ ಕೊಟ್ಟ ದೇಶದ ಮೇಲೆ ಒಂದು ಹಿಡಿ ದೇಶಭಕ್ತಿಯೂ ಇಲ್ಲದಾಯಿತೇ?

ಉಮರ್ ದರಾಝ್- 22 ವರ್ಷದ ಪಾಕಿಸ್ಥಾನಿ ಯುವಕ, ಭಾರತೀಯ ಕ್ರಿಕೆಟ್ ಪಟು ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿ. ಕಳೆದ ಜನವರಿ 26ರಂದು ಅಡಿಲೇಡ್‍ನಲ್ಲಿ ಭಾರತ ಆಸ್ಟ್ರೇಲಿಯಾ ನಡುವಣ ಪಂದ್ಯದಲ್ಲಿ ಕೊಹ್ಲಿ 90ರನ್ ಚಚ್ಚಿದ್ದರು. ಆ ನೆರವಿನಿಂದ ಭಾರತ ಜಯ ಗಳಿಸಿತ್ತೂ ಕೂಡಾ! ಅದೇ ಖುಷಿಯಲ್ಲಿ ಆ ವಿದೇಶಿ ಅಭಿಮಾನಿ ತನ್ನ ಮನೆಯಲ್ಲೇ ಭಾರತದ ಧ್ವಜವನ್ನು ಬೀಸಿ ಸಂಭ್ರಮಿಸಿದ್ದನಷ್ಟೇ, “ಇದು ನಮ್ಮ ಐಡಿಯಾಲಜಿ ಹಾಗೂ ದೇಶದ ಸಾರ್ವಭೌತೆಗೆ ವಿರುದ್ಧವಾದ ನಡೆ” ಎಂದ ಪಾಕಿಸ್ಥಾನದ ಆಡಳಿತ ತರಾತುರಿಯಲ್ಲಿ ವಿಚಾರಣೆ ನಡೆಸಿ ಆತನ ವಿರುದ್ಧ ಕಾನೂನಿನ ದಂಡ ಪ್ರಯೋಗಿಸಿಯೇ ಬಿಟ್ಟಿತು. ನಂಬಿ, ಮಂಗಳವಾರ ಅ ಕೆಲಸ ಮಾಡಿದ್ದ ಆತ ಗುರುವಾರದ ಹೊತ್ತಿಗೆ ಕಂಬಿಗಳ ಹಿಂದೆ ನೂಕಲ್ಪಟ್ಟಿದ್ದ. ಭರ್ತಿ ಹತ್ತು ವರ್ಷಗಳ ಜೈಲು ಹಾಗೂ ದಂಡ ಆತನ ಹೆಗಲೇರಿತ್ತು. ಅನ್ಯ ವಿಚಾರಗಳೇನೇ ಇದ್ದರೂ ಆ ತೀಕ್ಷ್ಣ ಪ್ರತಿಕ್ರಿಯೆಯ ವೈಖರಿಯನ್ನ ಅಲ್ಲಗಳೆಯಲಾಗದು.

ಆದರೆ. ನಮ್ಮ ದೇಶದಲ್ಲಿ…? ಮೇಲಿನ ಉದಾಹರಣೆಯ ಹಿನ್ನಲೆಯಲ್ಲಿ ಇಲ್ಲಿ ನಡೆಯುವ ಕೆಲವು ಘಟನೆಗಳನ್ನು ಒಮ್ಮೆ ಗಮನಿಸಿದರೆ ನೀವು ತೀವ್ರ ಗಲಿಬಿಲಿಗೊಳ್ಳದಿದ್ದರೆ ಹೇಳಿ ಮತ್ತೆ! ಪಾಕಿಸ್ಥಾನ ಧ್ವಜವಷ್ಟೇ ಏಕೆ ಕ್ರೌರ್ಯ ಹಾಗೂ ಮತಾಂಧತೆಯ ಅನ್ವರ್ಥವಾಗಿರುವ ಇಸಿಸ್‍ನ ಧ್ವಜ, ಭಿತ್ತಿ ಪತ್ರಗಳೂ ಅಲ್ಲಲ್ಲಿ ರಾರಾಜಿಸುತ್ತವೆ. ಸಾಲದ್ದಕ್ಕೆ ಆ ಬಗೆಗಿನ ಪ್ರಶ್ನೆ ಸಂಘರ್ಷದೊಂದಿಗೆ ಪರ್ಯಾವಸನವಾಗುತ್ತದೆ. ಭಾರತದ ವಿರುದ್ಧ ಪಾಕಿಸ್ಥಾನ ಗೆದ್ದರೆ ನಮ್ಮ ಯಾವುದೋ ಗಲ್ಲಿಯಲ್ಲಿ ಪಟಾಕಿ ಸಿಡಿಯುತ್ತದೆ. ವಿಚಾರಭೇದದ ನೆಪದಲ್ಲಿ ರಾಷ್ಟ್ರಧ್ವಜಕ್ಕೇ ಬೆಂಕಿ ಹಚ್ಚುವ ಪುಂಡಾಟಿಕೆ ಮೆರೆಯುತ್ತಾರೆ. ಕೆಲಸಕ್ಕೆ ಬಾರದ ನಾಲ್ಕು ಪ್ರತಿಭಟನೆ ಮಾಡಿ ಬಿಟ್ಟಿ ಫೋಸು ಕೊಡುವವನೂ ‘ದೇಶವಿಭಜನೆ’ಯ ಮಾತನ್ನಾಡುತ್ತಾನೆ. ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ಶಂಕಿತರನ್ನು ಗುಪ್ತಚರ ಮಾಹಿತಿ ಆಧಾರದಲ್ಲಿ ಬಂಧಿಸಿದರೆ ಬಂಧಿತರ ಧರ್ಮದ ಆಯಾಮದ ತಕರಾರು ಹೊರಹೊಮ್ಮುತ್ತದೆ ಮತ್ತು ಸರ್ಕಾರ ಭಾಗವಾಗಿದ್ದವರೇ ಅದನ್ನು ಹರಿಯಬಿಡುತ್ತಾರೆ. ನಕ್ಸಲರ ಗುಂಡಿಗೆ ಪೋಲಿಸರ ನೆತ್ತರು ಹರಿದರೆ ಸಿಹಿ ಹಂಚಿಕೆಯಾಗುತ್ತದೆ. ಭಯೋತ್ಪಾದನೆಯೆಂಬ ಭೂತದ ರೂಪದಲ್ಲಿ ಕಾಡಿ ಕಾನೂನಿನ ಕುಣಿಕೆಯಲ್ಲಿ ಅಂತ್ಯ ಕಂಡ ಅಪ್ಜಲ್ ಹಾಗೂ ಕಸಬ್‍ನಂತಹ ಕ್ರೂರಿಗಳ ಪರ ವಿಶ್ವವಿದ್ಯಾಲಯದ ಆವರಣದಲ್ಲೇ ಘೋಷಣೆ, ಜೈಕಾರಗಳು ಮೊಳಗುತ್ತವೆ. ಇವು ಕೆಲವು ಸ್ಯಾಂಪಲ್.

ಈ ಘಟನಾವಳಿಗಳು ಒಂದೇ ಒಂದು ಹಿಡಿ ದೇಶಭಕ್ತಿ, ಪ್ರೇಮ ಉಳ್ಳ ಪ್ರತಿಯೊಬ್ಬ ಭಾರತೀಯನನ್ನೂ ಗಾಢ ಆತಂಕಕ್ಕೆ ದೂಡುತ್ತದೆ ಜೊತೆ ಜೊತೆಗೆ ರೋಷ, ಆಕ್ರೋಶವನ್ನೂ ಉಕ್ಕಿಸುತ್ತದೆ. ಆದರೆ ಇದು ಕೆಲವು ರಾಜಕಾರಣಿಗಳು, ಬುದ್ಧಿಜೀವಿಗಳು, ಎಡಪಂಥೀಯರು, ಪ್ರಗತಿಪರರು ಹಾಗೂ ಮಾಧ್ಯಮದ ಮಂದಿಗಳಿಗೆ ಕನಿಷ್ಠ ತಪ್ಪು ಎಂದೆನಿಸುವುದೂ ಇಲ್ಲ. ದುರ್ದೈವವಶಾತ್ ಇಂಥ ಪ್ರಶ್ನಾರ್ಹ ಕೃತ್ಯಗಳನ್ನೂ ಸಾಚಾ ಎಂಬಂತೆ ಬಿಂಬಿಸಿ ಸಮರ್ಥನೆಗಿಳಿಯುತ್ತಾರೆ. ಇತ್ತೀಚಿಗೆ ಜೆ.ಎನ್.ಯು ಘಟನೆ ಹಾಗೂ ತದನಂತರದ ಪ್ರತಿಭಟನೆಯನ್ನು ಸ್ವಾತಂತ್ರ್ಯಪೂರ್ವದ ವಿದ್ಯಾರ್ಥಿ ಚಳುವಳಿ, ಹೋರಾಟಗಳೊಂದಿಗೆ ತಾಳೆ ಹಾಕುವ ವಿಲಕ್ಷಣ ಹೋಲಿಕೆಯೊಂದಕ್ಕೆ ಮುಂದಾಗಿದ್ದು ತಾಜಾ ಉದಾಹರಣೆ.

ರಾಷ್ಟ್ರಹಿತವೆನ್ನುವುದು ವ್ಯಕ್ತಿ, ಜಾತಿ-ಧರ್ಮ, ಪ್ರಾದೇಶಿಕತೆ, ರಾಜಕೀಯದ ಸೀಮೆಗಳನ್ನು ಮೀರಿ ಸಮಗ್ರವಾಗಿ ನಿಲ್ಲುವಂತಹದ್ದು. ಆದ್ದರಿಂದಲೇ ಬರಿ ಎರಡನೇ ಕ್ಲಾಸ್ ಓದಿದ ಒಬ್ಬ ಸಾಮಾನ್ಯನಿಗೂ ದೇಶವೆಂದ ಕೂಡಲೇ ಅಭಿಮಾನದ ಮಿಂಚಿನ ಸಂಚಾರವಾಗುತ್ತದೆ. ಅಷ್ಟೇ ಏಕೆ ಶಾಲೆಯ ಮೆಟ್ಟಿಲನ್ನೂ ಹತ್ತದ, ತಮ್ಮ ರಟ್ಟೆಯ ಕಸುವನ್ನೇ ನಂಬಿ ಸ್ವಾಭಿಮಾನದಿಂದ ಬಾಳುವ ಈ ನಾಡಿನ ರೈತ, ಕಸ ಗುಡಿಸುವವ, ಬಡಗಿ, ಡ್ರೈವರ್, ಚಮ್ಮಾರ, ಕೂಲಿ ಕಾರ್ಮಿಕರಿಗೂ ಆ ಪ್ರೀತಿ ಹಾಗೂ ಭಕ್ತಿ ಭಾವದ ಅರಿವಿರುತ್ತದೆ. ಆದರೆ ಮಹತ್ವದ ಸ್ಥಾನದಲ್ಲಿರುವ, ದೇಶ ನೀಡುವ ಸೌಲಭ್ಯಗಳ ಗರಿಷ್ಠ ಬಳಕೆ ಮಾಡಿಕೊಳ್ಳುವ ಕೆಲವರಲ್ಲಿ ಇದರ ಕೊರತೆ ಕಾಡಲಾರಂಭಿಸಿದೆ. ಆದ್ದರಿಂದಲೇ ಈ ಬಗೆಯ ಉಪದ್ವ್ಯಾಪಗಳು ನಿರಂತರವಾಗಿ ಸೃಷ್ಟಿಯಾಗುತ್ತಿರುವುದು. ರಾಷ್ಟ್ರಹಿತವನ್ನು ಧಿಕ್ಕರಿಸಿ ಈ ಬಗೆಯ ಘಟನೆಗಳನ್ನು ರಾಜಕೀಯದ ಕನ್ನಡಕ ತೊಟ್ಟು ನೋಡುವ ಮತ್ತು ರಾಜಕೀಯ ಲಾಭದ ದೃಷ್ಟಿಯಲ್ಲಿ ಪ್ರತಿಕ್ರಿಯಿಸುವ ಧೋರಣೆ ಎಂಥಾ ಆತಂಕಕಾರಿ ಘಟ್ಟ ತಲುಪಿದೆಯೆಂದರೆ ರಾಷ್ಟ್ರಗೀತೆಗೆ ಗೌರವ ಸಲ್ಲಿಸದ್ದನ್ನು ಪ್ರಶ್ನಿಸಿದ್ದು ಕೂಡಾ ಕೆಲವು ಮತಿಹೀನರಿಗೆ ತಾಲಿಬಾನ್ ಸಂಸ್ಕøತಿಯಂತೆ ಕಂಡಿದೆ! ಧರ್ಮ, ದೇವರು, ಸಂಸ್ಕøತಿ ಸಂಪ್ರದಾಯಗಳೆಂದರೆ ಕೆಲವರಿಗೆ ಲಾಗಾಯ್ತಿನಿಂದಲೂ ಆಗಿ ಬರದು. ಈಗೀಗ ದೇಶಭಕ್ತಿಯೂ ಆ ಯಾದಿಯಲ್ಲಿ ಸೇರ್ಪಡೆಯಾಗುತ್ತಿರುವುದು ಆಘಾತಕಾರಿಯೇ ಸರಿ.

ರಾಷ್ಟ್ರಹಿತಕ್ಕೆ ಧಕ್ಕೆಯಾಗಬಲ್ಲ ವರ್ತನೆ, ಮಾತು, ಹಾಗೂ ಕೃತ್ಯಗಳಲ್ಲಿ ತೊಡಗಿಸಿಕೊಂಡವರ ಬೆಂಬಲಕ್ಕೆ ಇಳಿಯುವ ಮಂದಿ ಸಾಮಾನ್ಯವಾಗಿ ಅದರ ಯಾವುದೋ ಒಂದು ಚುಂಗನ್ನು ಅಭಿವ್ಯಕ್ತಿ ಸ್ವಾಂತ್ರ್ಯಕ್ಕೆ ತಳುಕು ಹಾಕಿ, ಇಲ್ಲದ ಧ್ಯೇಯೋದ್ಧೇಶಗಳನ್ನೆಲ್ಲಾ ಅದರಲ್ಲಿ ತುರುಕಿ ಅವರು ಮಾಡಿದ್ದು ತಪ್ಪಲ್ಲ ಎಂದು ಸಾಧಿಸಲೆತ್ನಿಸುತ್ತಾರೆ. ಯಾವ ಮುಜುಗರವೂ ಇಲ್ಲದೆ ಅವರೆಲ್ಲಾ ಮುಗ್ಧರು, ಅಮಾಯಕರೆಂಬ ಷರಾ ಬರೆದು ಸಾರ್ವಜನಿಕ ಕನಿಕರ ಗಿಟ್ಟಿಸುವ ವಿಫಲ ಪ್ರಯತ್ನವೂ ನಡೆಯುತ್ತದೆ. ಹೌದು! ಸಂವಿಧಾನವೇನೊ ತನ್ನ ವಿಧಿ 19(1)ರ ಪ್ರಕಾರ ಅಭಿವ್ಯಕ್ತಿ & ವಾಕ್ ಸ್ವಾಂತಂತ್ರ್ಯ ನೀಡಿದೆ. ಹಾಗಂತ ಅದು ಸ್ವೇಚ್ಛೆ ಅಲ್ಲವಲ್ಲ! ಅದೇ ವಿಧಿಯ ಇನ್ನೊಂದು ಭಾಗ ದೇಶದ ಐಕ್ಯತೆ, ಸಾರ್ವಭೌಮತೆ ಹಾಗೂ ಸುರಕ್ಷತೆಗೆ ಚ್ಯುತಿಯೆಸಗುವ, ಹಿಂಸೆಯನ್ನು ಪ್ರಚೋದಿಸುವ ಅಭಿವ್ಯಕ್ತಿಗೆ ದೇಶ ಹಾಗೂ ಸಮಾಜದ ಹಿತದೃಷ್ಟಿಯಿಂದ ನಿಯಂತ್ರಣ ಹೇರಬಹುದೆಂದು ಸ್ಪಷ್ಟವಾಗಿ ಹೇಳುತ್ತದೆ. ಇದನ್ನು 1951 ಮೊದಲ ತಿದ್ದುಪಡಿಯಲ್ಲಿಯೇ ಸೇರಿಸಿದ್ದು ಗೊತ್ತದ್ದೂ ಈ ಸಮರ್ಥಕರೆಲ್ಲ ಜಾಣ ಕುರುಡು ಪ್ರದರ್ಶಿಸುತ್ತಾರಷ್ಟೇ!

ಸಾಮಾಜಿಕ ಜಾಲತಾಣದಲ್ಲಿ ಹಿಗೊಂದು ಸಂದೇಶ ಹರಿದಾಡುತ್ತಿದೆ- “10-12ನೇ ಕ್ಲಾಸ್‍ ತನಕ ಓದಿ ಸೈನ್ಯ ಸೇರಿದ ಯುವಕರು ತಮ್ಮ ದೇಹವನ್ನು ಹುರಿಗೊಳಿಸಿ ದೇಶ ಸೇವೆಗಾಗಿ ಸರ್ವಸ್ವವನ್ನೂ ಧಾರೆಯೆರಲು ಗಡಿಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದರೆ ದೇಶ ಪೂರೈಸುವ ಎಲ್ಲಾ ಸವಲತ್ತುಗಳನ್ನು ಪಡೆದು ಉನ್ನತ ವ್ಯಾಸಂಗಕ್ಕೆಂದು ವಿ.ವಿಗಳಿಗೆ ಸೇರಿರುವ ಕೆಲವು ವಿದ್ಯಾರ್ಥಿಗಳು ಉಗ್ರರ ಪರವಾಗಿ ಉಘೇ ಎನ್ನುತ್ತಿದ್ದಾರೆ, ಭಾರತವನ್ನು ಬರ್ಬಾದ್ ಮಾಡುತ್ತೇವೆಂದು ಬೊಗಳುತ್ತಿದ್ದಾರೆ” ಎಂಥಾ ಕ್ರೂರ ವೈರುಧ್ಯವಲ್ಲವೇ? ಆ ಹುಡುಗರಿಗೆ ತಮ್ಮ ಸವಕಲು ಸಿದ್ಧಾಂತಗಳನ್ನು ಅಫೀಮಿನಂತೆ ಆಘ್ರಾಣಿಸಲು ನೀಡಿ, ಮತ್ತೇರಿಸಿ ದೇಶದ ವಿರುದ್ಧವೇ ಎತ್ತಿಕಟ್ಟಿ ಆಪತ್ತು ತಂದಿಡುತ್ತಿರುವ ಕೆಲವು ಗುರು ಸ್ಥಾನದಲ್ಲಿರುವ ಅಯೋಗ್ಯರು ವಿ.ವಿಗಳನ್ನು ಕಾಂಡದ ಹುಳಗಳಂತೆ ಬಾಧಿಸುತ್ತಿದ್ದಾರೆ. ಇವುಗಳನ್ನು ನಿಯಂತ್ರಿಸದಿದ್ದರೆ ಯಾವ ಫಲವನ್ನು ತಾನೇ ನಿರೀಕ್ಷಿಸಲಾದೀತು? ಒಮ್ಮೆ ಯೋಚಿಸಿ.

ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ಆದರೆ ಅದನ್ನು ಈಡೇರಿಕೊಳ್ಳುವ ನ್ಯಾಯಯುತ ಚತುರತೆ ಹಾಗೂ ಸಾಮಥ್ರ್ಯವಿಲ್ಲದ ದುರ್ಬಲ ವ್ಯಕ್ತಿ ರಾಹುಲ್ ಗಾಂಧಿ ಯುವಕರನ್ನು ಸೆಳೆಯುವ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದ್ದಾರೆ. ಅದೃಷ್ಟವಶಾತ್(ದೇಶಕ್ಕೆ) ಆ ಎಲ್ಲಾ ಪ್ರಯತ್ನಗಳು ವಿಫಲವಾಗಿ ಅವರು ಗೇಲಿಗೊಳಗಾಗಿದ್ದೇ ಹೆಚ್ಚು. ಸಾಕ್ಷ್ಯ ಬೇಕೆಂದರೆ 2014ರ ಚುನಾವಣಾ ಪೂರ್ವದಲ್ಲಿ ‘ಮಹಿಳಾ ಸುರಕ್ಷತೆ’ಬಗ್ಗೆ ಅವರು ನೀಡಿದ ಸಂದರ್ಶನವೋ ಇಲ್ಲ ತದನಂತರದ ವಿದ್ಯಾರ್ಥಿಗಳೊಂದಿಗಿನ ಸಂವಾದದ್ದೋ ಒಂದೆರಡು ವೀಡಿಯೋ ನೋಡಿ. ಗೊತ್ತಾಗುತ್ತದೆ. ಆಗ ಅವರಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುವ ವೃಥಾ ಸಂಘರ್ಷಗಳನ್ನು ಎನ್‍ಕ್ಯಾಶ್ ಮಾಡಿಕೊಳ್ಳುವ ಕುಟಿಲೋಪಾಯ ಹೊಳೆದಿರಬೇಕು. ಹಾಗಾಗಿಯೇ ಪುಣೆಯ ಫಿಲ್ಮ್ ಇನಸ್ಟಿಟ್ಯೂಟ್, ಹೈದರಾಬಾದ್ ವಿವಿ, ಜೆ.ಎನ್.ಯು ಮುಂತಾದ ಪ್ರಕರಣಗಳಲ್ಲಿ ಅನಾವಶ್ಯಕ ಮೂಗುತೂರಿಸಿ ಅನರ್ಹರಿಗೆ ತಮ್ಮ ಸಹಾನುಭೂತಿ ವ್ಯಕ್ತಪಡಿಸಿದ್ದು. ನೆನಪಿರಲಿ ರಾಹುಲ್ ಗಾಂಧಿಯವರೇ, ನಮ್ಮ ನೈಜ ಯುವ ಸಮುದಾಯಕ್ಕೂ ನೀವು ಓಲೈಸುತ್ತಿರುವ ಆ ಪಡೆಗೂ ಭಾರಿ ವ್ಯತ್ಯಾಸವಿದೆ. ಅದನ್ನು ಅರ್ಥಮಾಡಿಕೊಳ್ಳಲು ಪ್ರಾಮಾಣಿಕ ದೇಶಭಕ್ತಿ ಹಾಗೂ ಕಾಳಜಿ ಬೇಕು. ಅದೇ ಇಲ್ಲದ ನೀವು ಯುವಸಮುದಾಯದ ಮನಮೆಚ್ಚಿದ ನಾಯಕನಾಗುವುದು ಅಸಂಭವ.

ಕೊನೆಯದಾಗಿ, ಯಾವ ಯೋಧ ಜೀವದ ಹಂಗು ತೊರೆದು ಕಾದಾಡಿ ಉಗ್ರನ ಹೆಡೆಮುರಿ ಕಟ್ಟಿ ಹುತಾತ್ಮನಾಗುತ್ತಾನೋ ಅಂತಹ ಪರಾಕ್ರಮಿಯ ಪಾರ್ಥಿವ ಶರೀರಕ್ಕೆ ಹೂಗುಚ್ಛ ಅರ್ಪಿಸಿ ಗೌರವಿಸುವ ಯಾವ ನೈತಿಕತೆ ಈ ಭಯೋತ್ಪಾದಕರನ್ನು ಬೆಂಬಲಿಸುವ ಹೀನ ಮನಃಸ್ಥಿತಿಯವರಿಗೆ ಇದೆ? ನೋವು, ದುಃಖ ಹಾಗೂ ವಿಷಾದದ ಸೋಗು ಹಾಕಿಬರುವ ಇವರು ತೋರುವ ಹುಸಿ ಕಳಕಳಿ ಆ ಜವಾನನ ಕೆಚ್ಚು, ಸಾಹಸೀಪ್ರವೃತ್ತಿ ಹಾಗೂ ತ್ಯಾಗ-ಬಲಿದಾನಗಳಿಗೆ ಎಸಗುವ ಅಪಚಾರವಷ್ಟೇ!

-ಸಂದೇಶ್.ಎಚ್.ನಾಯ್ಕ್ ಹಕ್ಲಾಡಿ

naiksh2@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!