ಅಂಕಣ

ಉತ್ತರ ಕೊರಿಯಾ ಎ೦ಬ ದೇಶದ ದುರ೦ತ

ಅಮೇರಿಕಾ ಮತ್ತು ರಷ್ಯಾ ಜಗತ್ತಿನ ಪ್ರಮುಖ ರಾಷ್ಟ್ರಗಳು. ಕಮ್ಯುನಿಸ್ಟ್ ಸ೦ಪ್ರದಾಯದ ರಷ್ಯಾಕ್ಕೆ ಮತ್ತು ಬ೦ಡವಾಳಶಾಹಿ ಅಮೇರಿಕಾಗೆ ಮೊದಲಿನಿಂದಲೂ ಶೀತಲ ಸಮರವಿರುವುದು ಎಲ್ಲರಿಗೂ ತಿಳಿದ ವಿಷಯ. ಈ ಎರಡೂ ದೇಶಗಳು ತಮ್ಮ ದ್ವೇಷವನ್ನು ತಮ್ಮೊಳಗೆ ಇಟ್ಟುಕೊಳ್ಳದೆ, ಸಾಂಕ್ರಾಮಿಕ ರೋಗದ ತರಹ ಇಡೀ ಜಗತ್ತಿಗೆ ಹರಡುತ್ತಿರುವುದು ಒಂದು ಘೋರ ಕೃತ್ಯವೆಂದು ಹೇಳಬಹುದು.

ಹೀಗೆ ಸೈಧಾಂತಿಕ ವಿರೋಧಗಳನ್ನು ಹೊಂದಿರುವ ಈ ಎರಡು ದೇಶಗಳು ಎಂದೂ ನೇರವಾಗಿ ಕಾದಾಡಿಲ್ಲ. ಬದಲಾಗಿ ಇತರೆ ದೇಶಗಳನ್ನು ಮುಂದಿಟ್ಟುಕೊಂಡು ತನ್ನ ಯುದ್ಧದ ದಾಹವನ್ನು ತೀರಿಸಿಕೊಳ್ಳುತ್ತಿವೆ. ಇದಕ್ಕೆ ಉದಾಹರಣೆ ೧೯೫೦-೧೯೫೩ರ ವರೆಗೆ ನಡೆದ ಕೊರಿಯನ್ ಯುದ್ಧ , ಉತ್ತರ ವಿಯೆಟ್ನಾಂ ಮತ್ತು ದಕ್ಷಿಣ ವಿಯೆಟ್ನಾಂ ನಡುವಿನ ಕಲಹ ಹಾಗೂ ಇತ್ತೀಚಿಗೆ ನಡೆದ ಉಗ್ರರ ದಾಳಿ ಹೀಗೆ ಸಾಗುತ್ತಾ ಹೋಗುತ್ತದೆ. ರಷ್ಯಾ ಮತ್ತು ಅಮೇರಿಕಾ ಇತರೆ ದೇಶಗಳಿಗೆ ಹಣ,ಯುದ್ಧ ಸಾಮಗ್ರಿಗಳನ್ನು ಕೊಡುವ ಮೂಲಕ ತನ್ನ ಶೀತಲ ಸಮರವನ್ನು ಮುಂದುವರೆಸುತ್ತಿವೆ. ಒಂದು ವಿಪರ್ಯಾಸವೆಂದರೆ ಅಮೇರಿಕಾ ಆಫ್ಘಾನಿಸ್ತಾನಕ್ಕೆ ಸಹಾಯ ಮಾಡಿ ತನ್ನದೇ ದೇಶಕ್ಕೆ ಕುತ್ತು ತಂದುಕೊಳ್ಳುತ್ತಿರುವುದು.

ಈ ಎರಡೂ ದೇಶಗಳ ಇಂತಹ ಕ್ರೌರ್ಯತೆಗಳಲ್ಲಿ ಅಚ್ಚಳಿಯದೇ ಉಳಿದಿರುವುದು ಕೊರಿಯಾ ವಿಭಜನೆ. ತನ್ನ ವಿಸ್ತೀರ್ಣದಲ್ಲಿ ಜಗತ್ತಿನಲ್ಲಿ ೯೯ನೇ ಸ್ಥಾನ ಹೊಂದಿರುವ ಉತ್ತರ ಕೊರಿಯಾ ಏಷ್ಯಾದ ಒಂದು ರಾಷ್ಟ್ರ. ಶಾಂತಿ ಸೌಹಾರ್ದತೆಯಿಂದ ಕೂಡಿದ್ದ ಅಖಂಡ ಕೊರಿಯಾ ದೇಶವನ್ನು ೧೯೧೦ರಲ್ಲಿ ಜಪಾನ್ ತನ್ನ ಸೈನ್ಯ ಬಲದ ಮೂಲಕ ಆಕ್ರಮಿಸಿಕೊಂಡಿತು. ಕೊರಿಯಾ ದೇಶದ ಕಷ್ಟ ಕಾಲ ಅಲ್ಲಿಂದ ಪ್ರಾರಂಭ. ಅತ್ಯಂತ ಕ್ರೌರ್ಯದಿಂದ ನಡೆಸಿಕೊಂಡ ಜಪಾನ್ ಆ ದೇಶದ ಸಂಸ್ಕೃತಿಯನ್ನು ನಾಶ ಮಾಡಲು ಪ್ರಯತ್ನಿಸಿತು. ೧೯೪೫ರಲ್ಲಿ ಎರಡನೇ ಮಹಾ ಯುದ್ಧದ ಅಂತ್ಯದಲ್ಲಿ ಜಪಾನ್’ನ ಹಿರೋಶಿಮಾ ನಾಗಸಾಕಿ ಮೇಲೆ ಅಮೇರಿಕಾ ಹೈಡ್ರೋಜನ್ ಬಾಂಬ್ ದಾಳಿ ಮಾಡಿತು. ಇದರಿಂದ ಜಪಾನ್’ನ ಶಕ್ತಿ ಕುಂದಿತು. ತಾನು ವಶಪಡಿಸಿಕೊಂಡಿದ್ದ ರಾಷ್ಟ್ರಗಳನ್ನು ಬಿಟ್ಟು ಬಂದಿತು. ಇದರಿಂದ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದ ಕೊರಿಯಾದ ಕಷ್ಟಗಳು ಅಷ್ಟಕ್ಕೇ ನಿಲ್ಲಲಿಲ್ಲ. ಮೊದಲಿನಿಂದಲೂ ಶೀತಲ ಸಮರದಲ್ಲಿ ತೊಡಗಿಕೊಂಡಿದ್ದ ಅಮೇರಿಕಾ ಮತ್ತು ರಷ್ಯಾಕ್ಕೆ ಈಗ ಸಿಕ್ಕಿದ್ದ್ದು ಕೊರಿಯಾ ದೇಶ. ೧೯೪೮ರಲ್ಲಿ ರಾತೋರಾತ್ರಿ ಎರಡೂ ದೇಶಗಳು ಕೊರಿಯಾದ ವಿಭಜನೆ ಮಾಡಿತು. ಒಂದು ದಕ್ಷಿಣ ಕೊರಿಯಾ ಆದರೆ ಇನ್ನೊಂದು ಉತ್ತರ. ಎಷ್ಟೋ ಕುಟುಂಬಗಳು ದೂರವಾಯಿತು. ಉದಾಹರಣೆಗೆ ಕೆಲವರಲ್ಲಿ ಅಣ್ಣನ ಮನೆ ಉತ್ತರ ಕೊರಿಯಾ ಆದರೆ ತಂಗಿಯ ಮನೆ ದಕ್ಷಿಣ ಕೊರಿಯಾ ಇಬ್ಬರೂ ಗಡಿ ದಾಟುವ ಹಾಗಿಲ್ಲ. ದಕ್ಷಿಣದಲ್ಲಿ ಅಮೇರಿಕಾ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿತು. ಉತ್ತರದಲ್ಲಿ ರಷ್ಯಾ ತನ್ನ ಕಮ್ಯುನಿಸ್ಟ್ ಸಿದ್ಧಾ೦ತವನ್ನು ಹರಡಲು ಪ್ರಯತ್ನಿಸಿತು.

ಹೀಗೆ ಬಳಲಿದ್ದ ಉತ್ತರ ಕೊರಿಯಾಕ್ಕೆ ಶಾಂತಿ ದೂತನಾಗಿ ಬಂದದ್ದು ಕಿಮ್-ಇಲ್-ಸಂಗ್ ೧೯೧೨ರಲ್ಲಿ ಹುಟ್ಟಿದ್ದ ಈತ ಜಪಾನಿ ವಿರೋಧಿ ಗೆರಿಲ್ಲಾ ಗುಂಪುಗಳಲ್ಲಿ ತನ್ನನ್ನು ಗುರುತಿಸಿಕೊಂಡಿದ್ದ. ಕೊರಿಯಾ ವಿಭಜನೆ ನಂತರ ಸಂಧಾನಕ್ಕೆ ಮುಂದಾದ. ವಿಶ್ವ ಸಂಸ್ಥೆ ಉತ್ತರ ಕೊರಿಯಾದಲ್ಲಿ ನಡೆಸಿದ ತನ್ನ ಪ್ರಾಬಲ್ಯ ತೋರಿಸಿದ. ನಂತರ ಕೊರಿಯಾ ಏಕೀಕರಣದ ಹೋರಾಟ ಮುಂದುವರೆಸಿದ. ಆದರೆ ಈತನ ಎಲ್ಲಾ ಪ್ರಯತ್ನಗಳು ವಿಫಲವಾದವು. ಸಾಮ, ದಾನ, ಭೇದ, ದಂಡವೆಂಬಂತೆ ಶಾಂತಿ, ಸಮಾಧಾನದಿಂದ ಮಾಡಲಾಗದ್ದನ್ನು ದಂಡ ಅಂದರೆ ಯುದ್ಧದ ಮೂಲಕ ಸಾಧಿಸಲು ಮುಂದಾದ . ಇದೇ ೧೯೫೦-೫೩ರ ವರೆಗೆ ನಡೆದ ಕೊರಿಯಾ ಯುದ್ಧ. ಅವನ ತಂತ್ರದ ಪ್ರಕಾರ ಕೇವಲ ಒಂದು ವಾರದಲ್ಲಿ ಯುದ್ಧ ಮುಗಿಯಬೇಕಾಗಿತ್ತು. ಆದರೆ ತೀವ್ರ ವಿರೋಧ ವ್ಯಕ್ತ ಪಡಿಸಿದ ಅಮೇರಿಕಾ ಪ್ರಾಬಲ್ಯದ ದಕ್ಷಿಣ ಕೊರಿಯಾ ಸಮಬಲದ ಹೋರಾಟ ನೀಡಿತು. ಯುದ್ಧ ಬರೋಬ್ಬರಿ ಮೂರು ವರ್ಷಗಳ ಕಾಲ ನಡೆಯಿತು. ಅಷ್ಟರ ಹೊತ್ತಿಗಾಗಲೇ ಉತ್ತರ ಕೊರಿಯ ಬಳಲಿತ್ತು. ತನ್ನ ಹಣವನ್ನೆಲ್ಲಾ ಯುದ್ಧಕ್ಕೆ ಉಪಯೋಗಿಸಿತ್ತು. ಇದರ ಜೊತೆಗೆ ದೇಶದಲ್ಲಿ ‘ಬರ’ದ ಪರಿಸ್ಥಿತಿ. ಎಲ್ಲಿ ನೋಡಿದರೂ ಜನರ ಹಾಹಾಕಾರ, ಹಸಿವು, ಸಾವು, ನೋವು. ಯುದ್ಧದಲ್ಲಿ ಸುಮಾರು ೪೦ಲಕ್ಷ ಜನ ಸಾವನ್ನಪ್ಪಿದರು. ಇದರಲ್ಲಿ ಪ್ರತಿ ಮೂರರಲ್ಲಿ ಇಬ್ಬರು ಜನಸಾಮಾನ್ಯರಾಗಿದ್ದರು. ಇಂತಹ ಘೋರವಾದ ಯುದ್ಧದ ಬಳಿಕವೂ ಗಡಿ ಸಮಸ್ಯೆ ಮುಂದುವರೆಯಿತು. ಸೈದ್ಧಾಂತಿಕ ಭೇದಗಳು ಹಾಗೆಯೇ ಉಳಿಯಿತು. ಈ ಯುದ್ಧದಿಂದ ಆದ ಒಂದೇ ಒಂದು ಉಪಯೋಗವೆಂದರೆ ಜಪಾನ್ ಅರ್ಥಿಕ ಸುಧಾರಣೆ. ಕಾರಣ, ಕೊರಿಯಾದಿಂದ ರಫ್ತಾಗುತ್ತಿದ್ದ ಸಾಮಗ್ರಿಗಳು ಸ್ಥಗಿತವಾದದ್ದರಿಂದ ಇತರೆ ದೇಶಗಳು ಜಪಾನ್ ಕಡೆ ಮುಖ ಮಾಡಿದವು.

ನಂತರ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡ ಉತ್ತರ ಕೊರಿಯಾ ಜಗತ್ತಿನ ಇತರೆ ದೇಶಗಳಿಂದ ಸ್ವಲ್ಪ ಮಟ್ಟಿಗೆ ವಿಮುಖವಾಯಿತು. ತನ್ನ ದೇಶದ ಕೆಲಸಗಳನ್ನು ಗುಪ್ತವಾಗಿ ನಡೆಸಲು ಪ್ರಾರಂಭಿಸಿತು. ತನ್ನ ಸೈದ್ಧಾಂತಿಕ ಮಿತ್ರರಾದ ಚೀನಾ ಮತ್ತು ರಷ್ಯಾದ ಬಾಂಧವ್ಯ ವೃದ್ಧಿ ಮಾಡಿಕೊಂಡಿತು. ಅಮೇರಿಕಾದ ಪ್ರಕಾರ ಉತ್ತರ ಕೊರಿಯಾದ ‘ಜಿಡಿಪಿ’ಗೆ ವಿದ್ಯುತ್ ತಯಾರಿ, ಮಿಲಿಟರಿ ಉಪಕರಣಗಳು, ರಾಸಾಯನಿಕಗಳು, ಸಹಕಾರಿಯಾಗಿದ್ದವು. ಇದರ ಜೊತೆಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ನೀಡುತ್ತಿದ್ದ ಸವಲತ್ತುಗಳು ಮತ್ತು ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಇರಾನ್ ಹಾಗೂ ಇತರೆ ದೇಶಗಳಿಗೆ ರಫ್ತಾಗುತ್ತಿದ್ದುದು. ಇದೇ ಸಂದರ್ಭದಲ್ಲಿ ರಷ್ಯಾದ ಜೊತೆ ಸೇರಿ ಅಣು ಶಸ್ತ್ರಾಸ್ತ್ರಗಳ ತಯಾರಿ ನಡೆಸಿತು.

ಹೀಗೆ ಆಡಳಿತ ನಡೆಸಿದ ‘ಕಿಮ್-ಇಲ್-ಸಂಗ್’ ೧೯೭೨-೧೯೯೪ರ ವರೆಗೆ ದೇಶದ ರಾಷ್ಟ್ರಪತಿಯಾದ. ಇವನ ಮರಣದ ನಂತರ ಇಡೀ ದೇಶ ಮರುಗಿತು. ದೇಶದ ಜನ ಆತನನ್ನು ಉತ್ತರ ಕೊರಿಯಾದ ಸೂರ್ಯನೆಂದೇ ಭಾವಿಸಿದ್ದರು. ಆತನ ಮೇಲಿನ ಅಪಾರವಾದ ಗೌರವದಿಂದ ದೇಶದಲ್ಲಿ ಕುಟುಂಬ ರಾಜಕಾರಣ ಮುಂದುವರೆಯಿತು. ಆತನ ಮಗ ‘ಕಿಮ್-ಜೊಂಗ್-ಇಲ್’ ದೇಶದ ಅಧ್ಯಕ್ಷನಾದ. ದೊಡ್ಡ ವ್ಯಕ್ತಿಯ ಮಗನಾಗಿದ್ದರೂ ಈತನ ಗುಣಗಳು ತದ್ವಿರುದ್ಧವಾಗಿದ್ದವು. ಚಲನಚಿತ್ರಗಳಲ್ಲಿ ಆಸಕ್ತಿ ಹೊಂದಿದ್ದ ‘ಕಿಮ್-ಜೊಂಗ್-ಇಲ್’ ಅನೇಕ ಚಲನಚಿತ್ರಗಲಲ್ಲಿ ನಾಯಕನಾಗಿ ನಟಿಸಿದ. ಕೆಲವು ನಾಯಕಿಯರ ಜೊತೆ ಅನೈತಿಕವಾಗಿ ನಡೆದುಕೊಂಡ. ಒಮ್ಮೆ ಚೀನಾದ ಒಬ್ಬ ನಾಯಕಿಯನ್ನು ಅಪಹರಿಸಿ ಅದರ ವಿರೋಧ ಕಟ್ಟಿಕೊಂಡ. ‘ಕಿಮ್-ಜೊಂಗ್-ಇಲ್’ ದೇಶದ ಸರ್ವಾಧಿಕಾರಿಯಾದ. ಇದರ ಜೊತೆಗೆ ಸೋವಿಯತ್ ರಾಷ್ಟ್ರಗಳ ವಿಭಜನೆ, ರಷ್ಯಾದ ಶಕ್ತಿಯನ್ನು ಕುಂಠಿತ ಮಾಡಿತು. ಉತ್ತರ ಕೊರಿಯಾದ ಆರ್ಥಿಕತೆ ಹದಗೆಟ್ಟಿತು. ‘ಕಿಮ್-ಜೊಂಗ್-ಇಲ್’ ಅಮೇರಿಕಾದ ವಿರುದ್ಧ ಹಗೆ ಮುಂದುವರೆಸಿದ.

ಕೊರಿಯಾ, ರಷ್ಯಾದ ಸಹಕಾರದ ಕೊರತೆಯಿದ್ದರೂ ಅಣು ಶಸ್ತ್ರಾಸ್ತ್ರಗಳ ತಯಾರಿ ತಾನೇ ಮುಂದುವರೆಸಿತು. ಅಣು ಒಪ್ಪಂದದಲ್ಲಿ ಸಹಿ ಹಾಕಿದ್ದರೂ ಸಹ ೨೦೦೩ರಲ್ಲಿ ಅದನ್ನು ಹಿಂಪಡೆಯಿತು ಮತ್ತು ೨೦೦೬ರಲ್ಲಿ ‘ಯೋಂಗ್ಬ್ಯೊನ್’ ನಲ್ಲಿ ಅಣು ಶಸ್ತ್ರಾಸ್ತ್ರ ಘಟಕ ಸ್ಥಾಪನೆ ಮಾಡಿ ಜಗತ್ತಿಗೇ ತೋರಿಸಿತು. ತನ್ನ ಅಣು ಪರೀಕ್ಷೆಗಳನ್ನು ಮುಂದುವರೆಸಿತು. ‘ತನ್ನ ದೇಶಕ್ಕೆ ಯಾರೇ ತೊಂದರೆ ಕೊಟ್ಟರೂ ನಿರ್ಭಯದಿಂದ ಅಣು ಶತ್ರಾಸ್ತ್ರಗಳನ್ನು ಉಪಯೋಗಿಸುತ್ತೇನೆ’ ಎಂದು ‘ಕಿಮ್-ಜೊಂಗ್-ಇಲ್’ ಅಮೆರಿಕಾಗೆ ಬೆದರಿಕೆ ಹಾಕಿದ. ಇದನ್ನು ಅಮೆರಿಕಾದ ಜಾರ್ಜ್ ಬುಶ್ ಸೇರಿದಂತೆ ಹಲವರು ಖಂಡಿಸಿದರು. ‘ಕಿಮ್-ಜೊಂಗ್-ಇಲ್’ ಕಾಲವಾದ ನಂತರ ಅವನ ಮಗ ‘ಕಿಮ್-ಜೊಂಗ್-ಎನ್’ ಅಧಿಕಾರಕ್ಕೆ ಬಂದ. ತನ್ನ ತಂದೆಯ ಸಿದ್ಧಾಂತಗಳನ್ನು ಮುಂದುವರೆಸಿದ. ಜಗತ್ತಿನ ಇತರೆ ರಾಷ್ಟ್ರಗಳಿಗೆ ಉತ್ತರ ಕೊರಿಯ ಅಕ್ಷರಶಹ ಉಗ್ರರ ರಾಷ್ಟ್ರವಾಗಿ ಕಂಡಿತು.

ಕಳೆದ ಜನವರಿಯಲ್ಲಿ ಉತ್ತರ ಕೊರಿಯಾ ಉಪಗ್ರಹ ಉಡಾವಣೆ ಹೆಸರಿನಲ್ಲಿ, ಕ್ಷಿಪಣಿ ಪ್ರಯೋಗ ಮಾಡಿದೆ ಎಂದು ಅಮೇರಿಕಾ, ಸಿಯೋಲ್ ಅರೂಪಿಸಿದೆ. ಇದಕ್ಕೂ ಒಂದು ತಿಂಗಳ ಮೊದಲು ತನ್ನ ನಾಲ್ಕನೇ ಅಣು ಪರೀಕ್ಷೆ ಮುಗಿಸಿ ಜಗತ್ತಿನ ದೊಡ್ಡ ರಾಷ್ತ್ರಗಳೆ೦ದುಕೊಳ್ಳುವವರ ವಿರೋಧವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ೨೦೧೨ರಲ್ಲಿ ಒಂದು ಉಪಗ್ರಹ ಉಡಾವಣೆ ಮಾಡಿ ತಂತ್ರಜ್ಞಾನದಲ್ಲೂ ಸಹ ಪ್ರಾಬಲ್ಯ ತೋರಿಸುತ್ತಿದೆ.

ಹೀಗೆ ಏರಿಳಿತಗಳ ಸಾಗುತ್ತಿದೆ ಉತ್ತರ ಕೊರಿಯಾ. ಅಮೇರಿಕಾ ಪ್ರತೀ ಬಾರಿ ಉತ್ತರ ಕೊರಿಯಾದ ಬಗ್ಗೆ ಮಾತನಾಡುವಾಗಲೂ ತಾನು ೧೯೪೮ರಲ್ಲಿ ಮಾಡಿದ ತಪ್ಪನ್ನು ಮರೆಯುತ್ತಿದೆ. ಈಗಲೂ ಅಮೇರಿಕಾದ ಜನ ಉತ್ತರವನ್ನು ‘ಬ್ಯಾಡ್ ಕೊರಿಯಾ’ ಮತ್ತು ದಕ್ಷಿಣವನ್ನು ‘ಗುಡ್ ಕೊರಿಯಾ’ ಸಂಭೋದಿಸುತ್ತಾರೆ. ಆದರೆ ಅದಕ್ಕೆ ಅವರೇ ಕಾರಣರಾಗಿದ್ದಾರೆ. ಹೀಗೆ ಅಮೇರಿಕಾ ಮತ್ತು ರಷ್ಯಾ ಸೇರಿದಂತೆ ಇನ್ನೂ ಕೆಲ ದೇಶಗಳು ಜಗತ್ತನ್ನು ಆಳುವ ನೆಪದಲ್ಲಿ ಹಲವು ದೇಶಗಳನ್ನು ಒಡೆಯುತ್ತಿದೆ. ಅವರ ಪರೋಕ್ಷ ಯುದ್ಧದಿಂದ ಬೇರೆ ದೇಶಗಳಿಗೂ ಅಪಾಯ ತಂದೊಡ್ಡಿದೆ ಎಂದರೆ ತಪ್ಪಿಲ್ಲ. ಈಗ ನಡೆಯುತ್ತಿರುವ ಐಸಿಸ್ ದಾಳಿಗಳೇ ಇದಕ್ಕೆ ಜ್ವಲಂತ ಉದಾಹರಣೆ.

-ಕಾರ್ತಿಕೇಯ ಭಟ್

bskarthikeya5589@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!