ಅಂಕಣ

ಮಾನವೀಯತೆ ಮೆರೆದ ನಿರ್ಮಾಪಕ, ಸಮಸ್ಯೆಗೆ ಸ್ಪಂದಿಸಿದ ಕೇಂದ್ರ ಮಂತ್ರಿ 

ಕಲಿಗಾಲ ಬಂತು, ತಪ್ಪು ಮಾಡಿದವರು ನ್ಯಾಯದೇವತೆಯ ಕಣ್ಣಿಗೆ ಮಣ್ಣೆರಚುತ್ತಾರೆ, ನಿರಪರಾಧಿಗಳು ತಾವು ಮಾಡಿರದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾರೆ ಎಂದೆಲ್ಲ ಓದಿದ್ದ, ನಮಗೆ ಸೌದಿಯಲ್ಲಿ ಯಾರದೋ ಕುತಂತ್ರಕ್ಕೆ ಬಲಿಯಾಗಿ ನರಕ ಯಾತನೆ ಅನುಭವಿಸಿದ್ದ ಜಯರಾಮ್’ರ ಕಥೆ ಓದಿದರೆ ಕಲಿಗಾಲದ ಕಲ್ಪನೆ ಸರಿಯೆಂದೇ ಅನ್ನಿಸುತ್ತದೆ.  ಆದರೆ ಜಯರಾಮ್ ಕಥೆಯಲ್ಲಿ ಅಮಾನವೀಯತೆಯ ಎಷ್ಟು ನೋವಿದೆಯೋ, ಅಷ್ಟೇ ಮಾನವೀಯತೆಯ ಭರವಸೆಯೂ ಇದೆ.

ತನ್ನ ಸುಂದರವಾದ ಮಡದಿ ಮತ್ತು ಮಗಳ ಜೊತೆ ಸಂತೋಷವಾಗಿದ್ದ  ಮಂಗಳೂರಿನ ನೀರುಮಾರ್ಗ ನಿವಾಸಿ ಜಯರಾಮ್ ಶೆಟ್ಟಿ, ಮಗಳ ಭವಿಷ್ಯದ ದೃಷ್ಟಿಯಿಂದ  ಒಳ್ಳೆಯ ಸಂಪಾದನೆಗಾಗಿ ಸೌದಿಯ ಕೋಲ್ಡ್ ಸ್ಟೋರ್ ಟ್ರೇಡಿಂಗ್ ಕಂಪನಿಗೆ ಸೂಪರ್ವೈಸರ್ ಆಗಿ ಕೆಲಸಕ್ಕೆ ಸೇರುತ್ತಾರೆ. ಭಾರತದ ಪುಣ್ಯ ಭೂಮಿ ತುಳುನಾಡಿನ ನಿಯತ್ತಿನ ಮಣ್ಣಿನ ಗುಣ ಮೈಗೂಡಿಸಿಕೊಂಡಿದ್ದ ಜಯರಾಮ್ , ಆರು ವರ್ಷ ಬೆವರು ಸುರಿಸಿ ತನ್ನ ಕಂಪನಿಗೆ ನಿಯತ್ತಿನಿಂದ ದುಡಿಯುತ್ತಾರೆ. ತನ್ನ ಒಳ್ಳೆಯ ನಡವಳಿಕೆಯಿಂದ ಸಹದ್ಯೋಗಿಗಳ ಮನಗೆದ್ದಿದ್ದ ಜಯರಾಮ್, ತನ್ನ ಕುಟುಂಬದ ತುತ್ತಿನ ಚೀಲ ತುಂಬಿಸುವ ಜವಭ್ದಾರಿಯನ್ನೂ ನಿಭಾಯಿಸುತ್ತಿದ್ದರು.

ಮನುಷ್ಯ ತಾನೊಂದು ಬಗೆದರೆ, ವಿಧಿ ಬೇರೆಯೇ ಯೋಜನೆಯಲ್ಲಿರುತ್ತದೆ. ಅಕ್ಟೋಬರ್ 2014, ಜಯರಾಮ್ ಕೆಲಸ ಮಾಡುವ ಕಂಪನಿಯಲ್ಲಿ ಆಲಿವ್ ಆಯಿಲ್ ಇರುವ ಎರಡು ಕಂಟೇನರ್ ಕಳ್ಳತನವಾಗುತ್ತದೆ. ಕಂಪನಿ ಆ ಕಳ್ಳತನದ ಕೇಸ್, ಜಯರಾಮ್  ಹಣೆಗೆ ಹಚ್ಚಿ, ಅವರನ್ನು ಒಂದು ನಿರ್ಜನ ಪ್ರದೇಶದ  ಮನೆಯಲ್ಲಿ ಇಡುತ್ತದೆ. ಅವರ . ಎರಡು ತಿಂಗಳ ನರಕಯಾತನೆಯ ನಂತರ, ಕಂಪನಿಯ ಮಾಲಕರು ಜಯರಾಮ್ ಕೈಯ್ಯಲ್ಲಿ ಒಂದು ಅರೇಬಿಕ್’ನಲ್ಲಿ ಟೈಪ್ ಮಾಡಿದ ಪತ್ರಕ್ಕೆ ಸಹಿ ಮಾಡಿಸುತ್ತಾರೆ. ನರಕಯಾತನೆಯಿಂದ ಬಳಲಿದ್ದ ಜಯರಾಮ್ ಹಿಂದು ಮುಂದು ಯೋಚಿಸದೆ ಸಹಿ ಮಾಡುತ್ತಾರೆ. ತಾನು ಸಹಿ ಮಾಡಿದ್ದ ಪತ್ರ, ತಾನು ಮಾಡಿಲ್ಲದ ತಪ್ಪನ್ನು ಒಪ್ಪಿಕೊಂಡು ಸಹಿಮಾಡಿದ್ದು ಎಂದು ಅರಿವಾಗುವ ಹೊತ್ತಿಗೆ, ಅವರು ಸೌದಿ ದಮನ್’ನ ಜೈಲು  ಪಾಲಾಗಿದ್ದರು . ಸೌದಿಯ ಕೋರ್ಟ್ ದಾಖಲೆಗಳ ಆಧಾರದ ಮೇಲೆ ಜಯರಾಮ್ ತಪ್ಪಿತಸ್ತ ಎಂದು ತೀರ್ಮಾನಿಸಿ, ಎಂಟು ತಿಂಗಳ ಜೈಲು ಶಿಕ್ಷೆಯ ಜೊತೆ , ಪ್ರತಿ ಹದಿನೈದು ದಿನಕ್ಕೊಮ್ಮೆ ಚಡಿಯೇಟು ನೀಡುವ ಶಿಕ್ಷೆಯನ್ನೂ ನೀಡಿತು.

ಜಯರಾಮ್ ಶೆಟ್ಟಿ

ಜಯರಾಮ್ ಶೆಟ್ಟಿ

ಕೋರ್ಟಿನ ಆದೇಶದ ಪ್ರಕಾರ ಅಕ್ಟೋಬರ್ ೨೦೧೪ ರಿಂದ ಆಗಸ್ಟ್ ೨೦೧೫ ರ ವರೆಗೆ ತಾನು ಮಾಡಿಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದ ಜಯರಾಮ್’ರ ನರಕ ಯಾತನೆ ಅಲ್ಲಿಗೆ ಕೊನೆಗೊಳ್ಳಳಿಲ್ಲ. ಎಂಟು ತಿಂಗಳ ಶಿಕ್ಷೆ ಶಿಕ್ಷೆಯ ಅವಧಿ ಮುಗಿದಿದ್ದರೂ, ಜೈಲಿನಿಂದ ಬಿಡುಗಡೆಗಾಗಿ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದವು. ಜಯರಾಮ್ ಮಡದಿ ಗೀತಾ ಮತ್ತು  ಭಾವ ಹರಿ ಆಳ್ವ ಭಾರತದ ದೂತಾವಾಸದಿಂದ ಸಹಾಯ ಪಡೆಯಲು ಯತ್ನಿಸಿದ ಪ್ರಯತ್ನವೂ ವಿಫಲವಾಯಿತು . ಇನ್ನೇನು ಜಯರಾಮ್  ಜೀವನ ಮರಳುಗಾಡಿನ ಜೈಲು ಕಂಬಿಗಳ ಹಿಂದೆ ಮುರುಟಿ ಹೋಗುತ್ತದೆ ಎಂದು ಅವರ ಕುಟುಂಬದವರು ಹತಾಶರಾಗಿದ್ದರು . ಜಯರಾಮ್ ಜೈಲಿನಲ್ಲಿ ಅನುಭವಿಸಿದ್ದ ಶಿಕ್ಷೆ, ಮಡದಿಯ ಪ್ರಾಥನೆಯನ್ನು ಕಂಡು, ಆ ಭಗವಂತ ಕೊನೆಗೂ ಕಣ್ಣು ಬಿಟ್ಟ.

ಆಗಸ್ಟ್ 17, ೨೦೧೫, ಹರಿ ಆಳ್ವ, ತನ್ನ ಗೆಳೆಯರ ಸಲಹೆಯ ಮೇರೆಗೆ ದುಬೈಯಲ್ಲಿ ನೆಲೆಸಿರುವ ಚಿತ್ರ ನಿರ್ಮಾಪಕ ಶೋಧನ ಪ್ರಸಾದ್’ರನ್ನು ಸಂಪರ್ಕಿಸಿದ್ದರು. ಶೋಧನ ಪ್ರಸಾದ್ ಈ ಹಿಂದೆ ಇಂತಹುದೇ ಒಂದು ಕೇಸಿನಲ್ಲಿ ಮಂಗಳೂರಿನ ಒಬ್ಬರಿಗೆ ಸಹಾಯ ಮಾಡಿದ್ದರು. ಜಯರಾಮ್’ರ ಕರುಣಾಜನಕ ಕಥೆ ಕೇಳಿ ಶೋಧನ ಪ್ರಸಾದರ ಮಗುವಿನಂತಹ  ಮನಸ್ಸು ಕರಗಿತು. ತನ್ನ ಎಲ್ಲ ಕೆಲಸಗಳನ್ನು ಬದಿಗಿಟ್ಟು, ತನ್ನ ಮೊಬೈಲಿನಲ್ಲಿ ಇರುವ ಎಲ್ಲಾ  ಕಾಂಟಾಕ್ಟ್’ಗಳನ್ನು ಸಂಪರ್ಕಿಸಿದರು. ರಿಯಾದ್ನಲ್ಲಿರುವ ವಕೀಲ ಪಿ. ಎ  ಹಮೀದ್, ಶೋಧನ ಪ್ರಸಾದ್’ರ ಜೊತೆ ಸೇರಿದರು.  ಆದರೆ ಕೊಲ್ಲಿ ರಾಷ್ಟ್ರದಲ್ಲಿ ನ್ಯಾಯದ ಹಾದಿ ಸುಲುಭವಾಗಿರಲಿಲ್ಲ . ಸೌದಿಯಲ್ಲಿರುವ ಮಾನವ ಹಕ್ಕುಗಳ ಸಂಸ್ಥೆ, ಸೌದಿಯ ರಾಜ ಮನೆತನಕ್ಕೆ ಸಲ್ಲಿಸಿದ ಮನವಿ ಪತ್ರಗಳು ನಿರ್ಲಕ್ಷಕೊಳಗಾದವು. ಜಯರಾಮ್’ರನ್ನು ಜೈಲಿನಿಂದ ಬಿಡುಗಡೆಗೊಳಿಸಲು ಬೇರೆಯಾವ ಮಾರ್ಗ ಇಲ್ಲ ಎಂದು ನಿರಾಶೆಗೊಂಡ ಶೋಧನ ಪ್ರಸಾದರಿಗೆ ನೆನಪಾಗಿದ್ದು ಭಾರತದ ಒಬ್ಬ ಪ್ರಮುಖ ವ್ಯಕ್ತಿ. ಆ ವ್ಯಕ್ತಿ ಬೇರೆಯಾರು ಅಲ್ಲ, ಭಾರತದ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್.

ಡಿಸೆಂಬರ್ 9, 2015 ರಂದು ಸುಷ್ಮಾ ಸ್ವರಾಜ್’ರನ್ನು ಸಂಪರ್ಕಿಸಿದ ಶೋಧನ ಪ್ರಸಾದ್, ಜಯರಾಮ್ ಶೆಟ್ಟಿಯವರ ಕೇಸಿನ ಎಲ್ಲ ದಾಖಲೆಗಳನ್ನು ಸಲ್ಲಿಸಿದರು. ತಾನು ಇಷ್ಟು ದಿನದಿಂದ ಪಟ್ಟ ಶ್ರಮಕ್ಕೆ ಫಲ ಸಿಗದೆ ನಿರಾಶರಾಗಿದ್ದ ಶೋಧನ ಪ್ರಸಾದ್’ಗೆ, ಮರುದಿನ ಸುಷ್ಮಾ ಸ್ವರಾಜ್ ಕಚೇರಿಯಿಂದ ಬಂದ ಕರೆ ಹೊಸ ಆಶಾಕಿರಣ ಮೂಡಿಸಿತು. ತಕ್ಷಣವೇ ಕಾರ್ಯ ತತ್ಪರರಾದ ಶೋಧನ್, ವಿದೇಶಾಂಗ ಕಚೇರಿಯ ನಿರ್ದೇಶನದ ಮೂಲಕ ಸೌದಿ ದೂತವಾಸದೊಂದಿಗೆ ಸಂಪರ್ಕ ಸಾಧಿಸಿ, ಜಯರಾಮ್ ಕೇಸಿನಲ್ಲಿ ನಿಜವಾಗಿ ಆಗಿದ್ದೇನು ಎಂದು ಕೋರ್ಟಿನಲ್ಲಿ ಮನವರಿಕೆ ಮಾಡಿಸಿದರು.

ಜಯರಾಮ್ ಮೇಲೆ ಕೇಸು ಹಾಕಿದ್ದ ಕಂಪೆನಿಯ ಕಟ್ಟು ಕಥೆ ಮತ್ತು ಕಳ್ಳತನದ ದಿನ ಆಗಿದ್ದ ಘಟನೆಗಳು ಒಂದಕ್ಕೊಂದು ತಾಳೆಯಾಗುತ್ತಿರಲಿಲ್ಲ. ಕಳ್ಳತನವಾಗಿದ್ದ ದಿನ ಜಯರಾಮ್ ಎಂದಿನಂತೆ ಬೆಳಿಗ್ಗೆ  8 ರಿಂದ ಸಂಜೆ ೬ ಗಂಟೆಯ ವರೆಗೆ ಕೆಲಸ ಮಾಡಿದ್ದರು.  ೬:೦೦ ಗಂಟೆಗೆ ಕೆಲಸ ಬಿಟ್ಟು ಮನೆಗೆ ಹೋದ ನಂತರ ಕಳ್ಳತನವಾಗಿತ್ತು . ಅಷ್ಟೇ ಅಲ್ಲದೆ, ಸೂಪರ್ವೈಸರ್ ಆಗಿ ತಾನು ಕಾರ್ಯ ನಿರ್ವಹಿಸಿದ್ದ ವ್ಯಾಪ್ತಿಯ ಹೊರಗಡೆ ಕಳ್ಳತನವಾಗಿದ್ದು, ಆ ಕಳ್ಳತನಕ್ಕೂ, ಜಯರಾಮ್’ಗೂ ಯಾವುದೇ ಸಂಬಂಧ ಇರಲಿಲ್ಲ.

ಅಷ್ಟೇ ಅಲ್ಲದೇ, ಕಂಪನಿಯ ಮಾಲಿಕ ಜಯರಾಮ್ ಮೇಲೆ ಇನ್ನೊಂದು ಕಳ್ಳತನದ ಕೇಸ್ ಹಾಕಿರುವುದು ತಿಳಿದು ಬಂತು. ಆದರೆ, ಭಾರತ ಸರ್ಕಾರದ  ಮಧ್ಯ ಪ್ರವೇಶದಿಂದ ತಾನು ಹಾಕಿದ್ದ ಸುಳ್ಳು ಕೇಸು ಸೋತು,  ಕೇಸಿನಲ್ಲಿ ಜಯರಾಮ್ ನಿರಪರಾದಿಯಾಗುವುದನ್ನು ನಿರೂಪಿಸುವ ಸುಳಿವು ಸಿಕ್ಕ ಕಂಪೆನಿ ಮಾಲಕ, ಕೋರ್ಟ್’ಗೆ ಹಾಜರಾಗದೆ ತಪ್ಪಿಸಿಕೊಂಡ. ಇದೆಲ್ಲದರ ಸಕಾಲಿಕ ಉಪಯೋಗ ಪಡೆದು, ಜಯರಾಮ್ ಪರ ವಕೀಲರು ಜಯರಾಮ್ ನಿರಪರಾದಿ ಎಂದು ನಿರೂಪಿಸಿ ಜೈಲಿನಿಂದ ಬಿಡುಗಡೆಗೊಳಿಸಿದರು.

ಅಲ್ಲಿಗೇ ಜಯರಾಮ್’ರ ಕಷ್ಟ ಕೊನೆಗೊಳ್ಳಲಿಲ್ಲ. ಜಯರಾಮ್ ಬಳಿ ಭಾರತಕ್ಕೆ ಹಿಂದಿರುಗಲು ಪಾಸ್ಪೋರ್ಟ್ ಇರಲಿಲ್ಲ. ಕಂಪನಿ ಮಾಲೀಕ ಅದನ್ನು ಯಾವಗಲೋ ತೆಗೆದುಕೊಂಡು ಬಿಟ್ಟಿದ್ದ. ಜಯರಾಮ್  ಭಾರತಕ್ಕೆ ಬರಲು ಅವಕಾಶವಿರಲಿಲ್ಲ. ಶೋಧನ್ ಪ್ರಸಾದ್’ರ ಮನವಿಯ ಮೇರೆಗೆ, ಸೌದಿ ದೂತವಾಸ ಜಯರಾಮ್’ಗೆ ಭಾರತಕ್ಕೆ ಬರಲು ಬೇಕಾಗಿದ್ದ  ದಾಖಲೆ ನೀಡಿತು. ದುಬೈ ಯಲ್ಲಿರುವ “ನಮ ತುಳುವೆರ್” ಎಂಬ ಸಂಸ್ಥೆ ಜಯರಾಮ್’ರ ಟಿಕೆಟ್ ದುಡ್ಡು ನೀಡಿತು. ಒಂದು ವರ್ಷಕ್ಕೂ ಹೆಚ್ಚು ಕಾಲ ನರಕ ಸದೃಶ್ಯ ಜೀವನ ಕಂಡಿದ್ದ ಜಯರಾಮ್ , ಜನವರಿ ೧೮ ರಂದು ಮುಂಬೈ ತಲುಪಿದರು. ತಾನು ಮಾಡಿಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿದ ಮಂಗಳೂರಿನ ನೀರುಮಾರ್ಗ ನಿವಾಸಿ, ಜಯರಾಮ್ ಶೆಟ್ಟಿ ಕೊನೆಗೂ ತನ್ನ ಹೆತ್ತೂರಿಗೆ ಸೇರಿದರು.

ಇತ್ತೀಚಿಗೆ ಬಿಡುಗಡೆಗೊಂಡ ರಂಜಿತ್ ಬಜ್ಪೆ ನಿರ್ದೇಶನದ  “ದಂಡ್” ಚಿತ್ರದಲ್ಲಿ ಖಳ ನಾಗಿ ನಟಿಸಿದ್ದ ನಿರ್ಮಾಪಕ ಶೋಧನ ಪ್ರಸಾದ್, ನಿಜ ಜೀವನದಲ್ಲಿ ಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸಿ, ಹೀರೋ ಆದರು. ಅಷ್ಟೇ ಅಲ್ಲದೇ, ಪ್ರಜೆಗಳ ದುಃಖ ದುಮ್ಮಾನಗಳಿಗೆ ಸ್ಪಂದಿಸುವ ಸುಷ್ಮಾ ಸ್ವರಾಜ್’ರಂತಹ ಮಂತ್ರಿಗಳಿರುವವರೆಗೆ, ಪ್ರಜಾ ಪ್ರಭುತ್ವದ ಮೇಲೆ ನಾವು ಇಟ್ಟಿರುವ ನಂಬಿಕೆ ಎಂದೂ ಹುಸಿಯಾಗಲ್ಲ ಎಂಬ ಭರವಸೆ ನೀಡುತ್ತಾರೆ.

ದಿನೇಶ್ ಬಂಗೇರ, ಮಂಗಳೂರು

 cinemakannu@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!