ಅಂಕಣ

ಪಂಚಕನ್ಯಾ ಸ್ಮರೇ ನಿತ್ಯಂ…

ಮುಂಜಾನೆಯ ಎಳೆಯ ರವಿತೇಜ ಪೋಣಿಸಿದ ಮಂಜಿನ ಮಾಲೆಗಳನ್ನೆಲ್ಲ ಕಡಿದುರುಳಿಸಲಣಿಯಿಡುತ್ತಿರುವಾಗಲೆ ಕೈಗಳೆರಡನ್ನೂ ತಿಕ್ಕಿ ಕಣ್ಣಿಗೆ ಬೆಚ್ಚನೆ ಸ್ಪರ್ಶ ನೀಡಿ ಹಾಸಿಗೆ ಬಿಟ್ಟೇಳುವ ಬಹುತೇಕ ಸಂಪ್ರದಾಯಿ ಮನೆತನದವರು ಗುನುಗುವ ಶ್ಲೋಕಗಳಲ್ಲೊಂದು
ಅಹಲ್ಯಾ ದ್ರೌಪದೀ ಸೀತಾ ತಾರಾ ಮಂಡೋದರೀ ತಥಾ
ಪಂಚ ಕನ್ಯಾಃ ಸ್ಮರೇನ್ನಿತ್ಯಂ ಸರ್ವ ಪಾತಕನಾಶನಂ ||

ಇದರಲ್ಲಿ ಉಕ್ತರಾದ ಅಹಲ್ಯೆ, ದ್ರೌಪದಿ, ಸೀತೆ, ತಾರಾ ಮತ್ತು ಮಂಡೋದರಿ ಎಂಬ ಪುರಾಣ ಪ್ರಸಿದ್ಧ ಮಹಿಳಾ ಆದರ್ಶ ಜೀವನ ಪಥ ದರ್ಶಕರನ್ನು ಪ್ರತಿನಿತ್ಯವೂ ಸ್ಮರಿಸುವುದರಿಂದ ದೊಡ್ಡ ದೊಡ್ಡ ಪಾಪಗಳೂ ನಶಿಸುತ್ತವೆ ಅರ್ಥಾತ್ ಪುಣ್ಯ ಸಂಪಾದನೆಯಾಗುತ್ತದೆ.ಕೆಲವು ದಿನ ಹಿಂದೆಯವರೆಗೂ ನನ್ನನ್ನು ಈ ಸ್ಮರಣ ಶ್ಲೋಕ ಎರಡು ಸಂದೇಹ ಆಕ್ಷೇಪಗಳಿಗೆ ಎಡೆಮಾಡಿ ಕಾಡುತ್ತಿತ್ತು.

೧. ಮದುವೆಯಾಗಿರುವ ಈ ಐವರನ್ನು ಕನ್ಯೆ ಎಂದುಲ್ಲೇಖಿಸಿದ್ದೇಕೆ?

೨. ಎಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಚಾರಿತ್ರ್ಯ ಹೀನೆಯರಾಗಿ ಕಳಂಕಿತರು. ಇಂಥವರನ್ನೇ ವಿದ್ವಾಂಸರು ಪ್ರಾತಃಸ್ಮರಣೀಯರೆಂದು ಉಲ್ಲೇಖಿಸಿದುದರ ಹಿನ್ನಲೆಯೇನು?

ಕಳಂಕದ ಛಾಯೆಯ ಭೀತಿ ಹೆಚ್ಚಿರುವ ಹೆಣ್ಣಿನ ನಿರ್ದೋಷಿತ್ವ ಸಾರುವ ಚಾರಿತ್ರ್ಯದ ಹುಟ್ಟು ಅವಳ ಕನ್ಯತ್ವದಲ್ಲಿದೆಯೆಂಬುದು ಹಿಂದಿನಂತೆ ಈಗಲೂ ತರ್ಕಿತ. ಪುರುಷತ್ವವೆಂಬುದು ಬರಿ ಪೌರುಷದ ಸಾಂಕೇತಿಕ ಮಾಪನವಾಗಿ ಪರಿಗಣಿಸಿದುದರ ಪರಿಣಾಮವೇ ಇಂದು ಮಹಿಳಾ ದೌರ್ಜನ್ಯದ ಪರಮಾಧಿಯಾದ ಅತ್ಯಾಚಾರ ನಡೆಯಲು ಹೇತು. ಅತ್ಯಾಚಾರದಿಂದ ಮಹಿಳೆಯ ಶೀಲ ಹರಣವಾಗಿ ಅನುಕಂಪಿಸುವ ಸಮಾಜದಲ್ಲಿ ಗಂಡಿನ ಶೀಲವನ್ನೇಕೆ ಜರೆಯುವುದಿಲ್ಲ? ಕನ್ಯತ್ವವೆಂಬುದು ಮನಸ್ಸಿನ ಅನುಭಾವವೇ ಹೊರತು ಭೌತಿಕ ವಾಗಿರುವುದಲ್ಲ ಎಂಬುದನ್ನು ಇಂದಿನ ಸಮಾಜಕ್ಕೆ ತಿಳಿಯ ಪಡಿಸಲೆಂದು ಶ್ಲೋಕ ಕತೃ ಸೂಚ್ಯವಾಗಿ ಆ ಐವರನ್ನು ಕನ್ಯೆಯರೆಂದು ಉಲ್ಲೇಖಿಸಿರಬೇಕು. ಮದುವೆಯಾಗಿ ದೈಹಿಕ ಸುಖ ಪಡೆದ ಮಾತ್ರಕ್ಕೆ ಕನ್ಯಾಪೊರೆ ಕಳಚಿ ಸುಮಂಗಲಿಯಾದವಳನ್ನು ಕನ್ಯೆಯೆಂದು ಕರೆಯಬಾರದೆ? ಬಲಾತ್ಕಾರದಿಂದ ಪುರುಷ ಸ್ತ್ರೀಯನ್ನು ಸಂಭೋಗಿಸಿದಾಗ ನಿಜವಾಗಿಯೂ ಕಳೆದುಹೋಗುವುದು ಪುರುಷನ ನೈತಿಕ ಪುರುಷತ್ವವೇ ಹೊರತು ಸ್ತ್ರೀಯ ಕನ್ಯತ್ವ ಅಲ್ಲವೇ ಅಲ್ಲ. ೩ರ ಹಾಲುಗಲ್ಲದ ಹಸುಳೆಯಿಂದ ಹಿಡಿದು ೮೦ರ ಮುದುಕಿಯನ್ನೂ ಬಯಸುವ ಇಂದಿನ ಕೆಲವು ಕಾಮಪಿಪಾಸಿಗಳಿಗೆ ಈ ಶ್ಲೋಕದ ಗಂಧಗಾಳಿಯಿರದು.
ಆಧುನಿಕ ಸಮಾಜದಲ್ಲಿ ಗಂಡಿಗಿಂತ ಕೆಳಸ್ತರದಲ್ಲಿ ಬೆಳೆದಿದ್ದರೂ ಅವರಿಗೆ ಸಮನಾಗಿ ಎಲ್ಲ ಕ್ಷೇತ್ರದಲ್ಲೂ ಮುನ್ನುಗ್ಗುತ್ತಿರುವ ಮಹಿಳೆಗೆ ಮುಖ್ಯವಾದ ಸವಾಲಾಗಿ ಪರಿಣಮಿಸಿರುವುದು ಅವಳ ನೈಷ್ಠಿಕ ಬ್ರಹ್ಮಚರ್ಯದ ಅವಸ್ಥೆ ಕನ್ಯತ್ವ. ಮದುವೆಯಾಗದ ಪುರುಷರಿಗೂ ಇದಿದೆಯೆಂಬ ಅರಿವು ಹೆಚ್ಚಿನವರಿಗೆ ಅಸಡ್ಡೆ ಯಾಗಿ ಗೋಚರಿಸುತ್ತಿರುವುದು ಯಾಕೆಂಬುದು ನನಗೆ ತಿಳಿಯುತ್ತಿಲ್ಲ. ಮೊನ್ನೆ ಒಂದು ಆಧ್ಯಾತ್ಮಿಕ ಲೇಖನ ಓದುತ್ತಿದ್ದಂತೆ ಫಕ್ಕನೆ ತಲೆಯಲ್ಲಿ ಗಾರ್ಹಸ್ಥ್ಯ ಬ್ರಹ್ಮಚರ್ಯ ದ ಬಗ್ಗೆಯೂ ಒಂದು ಯೋಚಿತ ನಿರ್ಣಯ ರೂಪುತಳೆಯಿತು. ನೀತಿನಿಯಮ ನಿಷ್ಠ ದಂಪತಿಗಳಿಬ್ಬರೂ ಇಂದ್ರಿಯ ಸುಖ ಲೋಲುಪರಾಗದೆ ಅಪೇಕ್ಷಿತ ಸತ್ಸಂತಾನಕ್ಕಾಗಿ ಮಾತ್ರ ಮಿಲನಸುಖ ಬಯಸಿದಲ್ಲಿ ಅವರ ಸಂಯಮ ನೈಷ್ಠಿಕ ಬ್ರಹ್ಮಚರ್ಯವಾಗಿರುತ್ತದೆ. ಬಹುಶಃ ನನ್ನ ಪ್ರಕಾರ ಪ್ರಾತಃಸ್ಮರಣೀಯ ಪಂಚಕನ್ಯೆಯರು ಮದುವೆಯಾಗಿದ್ದರೂ ಈ ವ್ರತನಿಷ್ಠೆಯಿಂದ ಕನ್ಯೆಯರೆಂದೇ ಕರೆಯಲ್ಪಡುವಂತಾದರು.

ಮೇಲ್ನೋಟಕ್ಕೆ ಇದರಲ್ಲಿ ಉಲ್ಲೇಖಿಸಿರುವ ಕನ್ಯೆಯರಲ್ಲಿ ಅಹಲ್ಯೆ ಗೌತಮ ಮಹರ್ಷಿಯ ಸತಿಯಾಗಿ ಅವನನ್ನು ಸೇವಿಸುತ್ತಿರುವಾಗ ಇಂದ್ರನಿಂದ ಮೋಹಕ್ಕೊಳಗಾಗಿ ಅತ್ಯಾಚಾರಗೊಂಡವಳು. ದ್ರೌಪದಿ ಆದರ್ಶ ಸಂಸಾರಕ್ಕೆ ವ್ಯತಿರಿಕ್ತವಾಗಿ ಐದು ಗಂಡಂದಿರೊಂದಿಗೆ ಸಂಭೋಗಿಸಿ ಬಳಿಕ ಕರ್ಣನ ಮೇಲೂ ಮೋಹಗೊಂಡವಳು. ಸೀತಾಮಾತೆ ಏಕಪತ್ನೀ ವ್ರತಸ್ಥ ಗಂಡನಿದ್ದರೂ ಆಮಿಷಕ್ಕೊಳಗಾಗಿ ರಾವಣನಿಂದ ಅಪಹರಿಸಲ್ಪಟ್ಟು ಲೋಕಾಪವಾದಕ್ಕೆ ಗುರಿಯಾದವಳು. ಮತ್ತೆ ತಾರಾ ವಾಲಿಯ ಪತ್ನಿಯಾಗಿದ್ದು ಅವನನ್ನು ಸಂಹರಿಸಿದ ಸುಗ್ರೀವನನ್ನೇ ವರಿಸಿದವಳು. ಮಂಡೋದರಿಯಂತೂ ತನ್ನ ಗಂಡನ ಬಯಕೆ ತಣಿಸಲು ಅಸಮರ್ಥಳಾಗಿ ಸೀತಾಪಹಾರದಲ್ಲಿ ನಿಸ್ಸಹಾಯಕ ಳಾದವಳು. ಒಬ್ಬಳಿಗಿಂತ ಇನ್ನೊಬ್ಬಳು ಸಮಸ್ಯೆಯ ವಿವಿಧ ಮಜಲುಗಳನ್ನು ಬಿಡಿಸಿಟ್ಟು ಚಾರಿತ್ರ್ಯ ಕ್ಷತಗೊಂಡು ತನ್ಮುಖೇನ ಸಮಾಜದ ಹೊಣೆಗಾರಿಕೆಯ ವಿಸ್ತಾರವನ್ನು ಬಯಲುಗೊಳಿಸುತ್ತಾ ಹೋದರು. ಹಿಂದಿನ ಯುಗದಲ್ಲಿ ಮಹಿಳೆಯನ್ನು ದೇವಿ ಎಂದು ಸಂಬೋಧಿಸಿ ಗೌರವಿಸುತ್ತಿದ್ದರೂ ಅವಳ ನೈತಿಕ ವ್ಯಾಪ್ತಿಯ ಮಿತಿ ಇಂದಿನವರಷ್ಟೇ ಎಂಬುದು ಗಮನಾರ್ಹ. ಇವರೆಲ್ಲರೂ ತಮ್ಮ ತಮ್ಮ ಪರಿಧಿಯಲ್ಲಿ ನಿಷ್ಠರಾಗಿದ್ದುಕೊಂಡು ಸಮಾಜಕ್ಕೆ ಆದರ್ಶರಾಗಿ ಬಾಳಿದರೆಂದು ಪೂರ್ಣ ಕಥಾಮೃತವನ್ನು ಇಂಚಿಂಚಾಗಿ ಸವಿದವರಿಗಷ್ಟೇ ಗೊತ್ತಾಗುವುದು.

ಪುರುಷ ಪ್ರಧಾನ ಅನಿವಾರ್ಯವೂ ವಾಸ್ತವವೂ ಆಗಿರುವ ಸಮಾಜದಲ್ಲಿ ಇಲ್ಲಿ ಕೇವಲ ಸ್ತ್ರೀ ಯರನ್ನೇ ಆಯ್ದುಕೊಂಡಿದ್ದು ಒಂದು ಚೇತೋಹಾರಿ ಎಚ್ಚರಿಕೆಯಾಗಿದೆ. ಅದೂ ಸಾವಿತ್ರೀ ಅನಸೂಯರಂಥ ಸತಿಶಿರೋಮಣಿಗಳನ್ನು ಆಯ್ಕೆ ಮಾಡದೆ ಪುರುಷ ದ್ರೌಷ್ಟ್ಯ ದರ್ಪದಿಂದ ನಲುಗಿ ಅಪಮಾನಿತರಾದವರನ್ನೇ ರಚನಕಾರ ಪ್ರಾತಃಸ್ಮರಣೀಯರನ್ನಾಗಿಸಿದ್ದು ಒಂದು ದಿಟ್ಟ ನಿರ್ಧಾರವೇ ಸೈ.

Shylaja Kekanaje
shylasbhaqt@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!