ಅಂಕಣ

ಹೇಳಿಕೆ ನೀಡುವ ಮುನ್ನ…….

“ಮಾತು ಬೆಳ್ಳಿ ಮೌನ ಬಂಗಾರ, ಮಾತೇ ಮುತ್ತು ಮಾತೇ ಮೃತ್ಯು, ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು….” ಇವೆಲ್ಲವೂ ಮಾತಿನ ಬಗ್ಗೆ ಇರುವ ನಾಣ್ಣುಡಿಗಳು ಅರ್ಥಾತ್ ಗಾದೆ ಮಾತುಗಳು. ಇವಿಷ್ಟೇ ಅಲ್ಲದೇ ಇನ್ನೂ ಅನೇಕ ಗಾದೆಗಳು ವೇದವಾಕ್ಯಗಳು ಮಾತಿನ ಬಗೆಗೆ ಹೇಳಿದ ಉಲ್ಲೇಖಗಳು ಕಾಣಸಿಗುತ್ತವೆ. ಕೆಲವು ಅನಾದಿಕಾಲದಿಂದಲೂ ಇರುವಂತಹುದು ಅಂದರೆ ವೇದಗಳ ಯಾ ವೈದಿಕ ಕಾಲದಿಂದಲೂ ಚಾಲ್ತಿಯಲ್ಲಿವೆ.ಇನ್ನು ಕೆಲವು ಜನರಿಂದ ಜನಿತವಾದುವುಗಳು ಅಂದರೆ ಜನಪದ ಸಾಹಿತ್ಯದಿಂದ ಆವಿರ್ಭವಿಸಿದಂತಹವು. ಈ ಎಲ್ಲಾ ಮಾತುಗಳೂ ಬಹಳ ಅರ್ಥಗರ್ಭಿತವಾಗಿವೆ. ಮಾತಿನ ಮಿತಿ ಪರಿಮಿತಿಯನ್ನು ವಿಸ್ತಾರವಾಗಿ ಸುಂದರವಾಗಿ ಪ್ರತಿಯೊಬ್ಬ ಜನಸಾಮಾನ್ಯನೂ ಬಹಳ ಸುಲಭವಾಗಿ ಗ್ರಹಿಸಲು ಯೋಗ್ಯವಾದಂತಹ ನಾಣ್ಣುಡಿಗಳು. ನಾನು ಯಾಕೆ ಈ ವಿಷಯದ ವಿಧವಾಗಿ ಹೇಳುತ್ತಿದ್ದೇನೆಂದೆರೆ ಈಗಿನ ಸಮಾಜದ ಪರಿಸ್ಥಿತಿ ಇದೆಲ್ಲವನ್ನೂ ಮರೆತಂತೆ ಕಾಣುತ್ತಿದೆ. ಅದರಲ್ಲೂ ಭಾರತೀಯರಾದ ನಮಗೆ ಮಾತೇ ದೈವ, ಮಾತೇ ಅನ್ನ ಮಾತೇ ಉದ್ಯೋಗವಾಗಿಬಿಟ್ಟಿದೆ. ಸರಿಯಾಗಿ ಮಾತನಾಡಲು ಬರುತ್ತಿದ್ದರೆ ಸಾಕು ಜಗತ್ತನ್ನೇ ಗೆಲ್ಲಬಹುದು ಎಂದುಕೊಂಡಿರುವ ಜನ ನಮ್ಮ ಸಮಾಜದಲ್ಲಿ ನಮ್ಮೊಂದಿಗೇ ಇದ್ದಾರೆ ಎಂದರೆ ಅತಿಶಯೋಕ್ತಿ ಎನಿಸುವುದಿಲ್ಲ.

ಹೌದು, ಇಂದಿನ ನಮ್ಮ ಸಮಾಜದಲ್ಲಿ ತಲೆಗೆ ಒಂದು ಮಾತನಾಡುವ ಜನರಿದ್ದಾರೆ. ರಾಜಕಾರಣಿಗಳು, ಧಾರ್ಮಿಕ ಗುರುಗಳು, ಉದ್ಯಮಿಗಳು ಹೀಗೆ ಉತ್ತಮ ಸ್ಥಾನದಲ್ಲಿ ಇರುವಂತಹ ಜನರು ತಮ್ಮ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳದೇ ಮನಬಂದಂತೆ ಮಾತನಾಡುತ್ತಾರೆ. ಅವರಷ್ಟಕ್ಕೇ ಅವರು ಮಾತನಾಡುವುದಾದರೆ ಪರವಾಗಿಲ್ಲ ಬಿಡಿ ಆದರೆ ಇವರುಗಳು ಮಾಡುತ್ತಿರುವುದಾದರೂ ಏನು? ಯಾರನ್ನೋ ಓಲೈಸುವ ಸಲುವಾಗಿ ಇನ್ನ್ಯಾರನ್ನೋ ನಿಂದಿಸುವುದು, ತೆಗಳುವುದು ಮುಂತಾದ ಸಂಗತಿಗಳನ್ನು ಮಾಡುತ್ತಿದ್ದಾರೆ. ಅದನ್ನು ಯಾರಾದರೂ ವಿರೋಧಿಸಿದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಹಣೆಪಟ್ಟಿ ತೋರಿಸುತ್ತಾರೆ.

ಹೇಳಿ ಕೇಳಿ ನಮ್ಮದು ಜಾತ್ಯಾತೀತ ರಾಷ್ಟ್ರ. ಎಲ್ಲಾ ಧರ್ಮದವರು ವಿವಿಧ ಆಚರಣೆಗಳನ್ನು ಆಚರಿಸುವ ಜನರು ವಿವಿಧ ಭಾಷೆಯ ಜನರು ಸಮಾನತೆಯಿಂದ ಜೀವನ ನಡೆಸುತ್ತಿರುವ ರಾಷ್ಟ್ರ. ತಾಯಿ ಭಾರತಿ ತನ್ನ ಉದರದಲ್ಲಿ ಎಲ್ಲರನ್ನೂ ಸಮಾನವಾಗಿ ಸಾಕಿ ಸಲಹುತ್ತಿದ್ದಾಳೆ. ಭೇದ-ಭಾವಗಳ ಬೀಜವನ್ನು ಬಿತ್ತದೇ ಎಲ್ಲರನ್ನೂ ತನ್ನ ಒಂದೇ ಉಸಿರಿನಲ್ಲಿ ಹಿಡಿದಿಟ್ಟುಕೊಂಡು ವಿಶ್ವಮಾತೆಯಾಗಿ ಕಂಗೊಳಿಸುತ್ತಿದ್ದಾಳೆ. ಇಂತಹ ಸಂದರ್ಭದಲ್ಲಿ ಒಂದು ಧರ್ಮದವರನ್ನು ಇನ್ನೊಂದು ಧರ್ಮದವರು ಹೀಯಾಲಿದುವುದು ತೆಗಳುವುದು ಎಷ್ಟರ ಮಟ್ಟಿಗೆ ಸರಿ? ಹಿಂದೂಗಳನ್ನು ಸಾಯಿಸುತ್ತೇನೆ. ಪೋಲಿಸರೆ ಹದಿನೈದು ನಿಮಿಷ ಸುಮ್ಮನಿರಿ, ನೂರು ಕೋಟಿ ನಾವಿದ್ದೇವೆ ಅಂತ ಮುಸಲ್ಮಾನನೊಬ್ಬ ಬಹಿರಂಗವಾಗಿ ಹೇಳಿಕೆ ನೀಡುತ್ತಾನೆ. ಮುಸಲ್ಮಾನರನ್ನು ಈ ದೇಶದಿಂದ ಓಡಿಸಬೇಕು ಅಂತ ಇನ್ನೊಬ್ಬ ಹಿಂದೂ ಸದನದಲ್ಲಿ ಹೇಳಿಕೆ ಕೊಡುತ್ತಾನೆ ಇದೇನಾ ನಮ್ಮ ದೇಶದ ಸಂಸ್ಕೃತಿ? ಬಹುಸಂಖ್ಯಾತರಾದ ಹಿಂದೂಗಳು ನಮಗೆ ಈ ದೇಶದಲ್ಲಿ ಆಶ್ರಯ ಕೊಟ್ಟಿದ್ದಾರೆ ಅವರಿಗೆ ನಾವು ಋಣಿ ಎಂದು ಮುಸಲ್ಮಾನರು ಇರಬಾರದೇ? ಅಥವಾ ನಮ್ಮ ಸನಾತನ ಧರ್ಮ ಹಿಂಸೆಯನ್ನು ವಿರೋಧಿಸುತ್ತದೆ ಎಂದು ಹಿಂದುಗಳು ಸ್ನೇಹ ಹಸ್ತ ಚಾಚಬಾರದೇ? ದೇಶದ ಯಾವುದೋ ಒಂದು ಮೂಲೆಯಲ್ಲಿ ಹಿಂದೂ ಮುಸಲ್ಮಾನರು ಸ್ನೇಹದಿಂದ ಜೀವಿಸುತ್ತಿರುವ ಸಂದರ್ಭದಲ್ಲಿ ಇಂಥಹ ಮಾತುಗಳು ಅವರನ್ನು ಕೆರಳಿಸುವುದಿಲ್ಲವೇ? ಸಮಾಜದಲ್ಲಿ ಶಾಂತಿ ಕದಡಲು ಇಂಥ ಹೇಳಿಕೆಗಳು ಮಾತುಗಳು ಸಾಕಲ್ಲವೇ? ಪರಿಣಾಮ ಕೋಮುಗಲಭೆ ದೇಶದಾದ್ಯಂತ ವ್ಯಾಪಿಸಿಬಿಟ್ಟಿದೆ. ಈ ಕೋಮುದಳ್ಳುರಿಗೆ ಸಿಲುಕಿ ನಲುಗಿಹೋಗುವುದು, ಬಲಿಯಾಗುವುದು ಅಮಾಯಕ ಮುಗ್ದ ಜನತೆ. ತಮ್ಮ ನಾಯಕನ ಮಾತಿಗೆ ಬೆಲೆಕೊಟ್ಟು ಗಲಭೆಗಳನ್ನು ನಡೆಸಿ ಬಲಿಯಾಗುತ್ತಾರೆ ಎಂದರೆ ಎಂತಹ ವಿಪರ್ಯಾಸ ಅಲ್ಲವೇ? ಇನ್ನೆಲ್ಲೋ ಚರ್ಚುಗಳ ಮೇಲೆ ತಮ್ಮ ಹಿತಾಸಕ್ತಿಗೋ ರಾಜಕೀಯ ಹಿತಾಸಕ್ತಿಗೋ ಯಾರೋ ದಾಳಿ ನಡೆಸಿದರೆ ಅದನ್ನು ಆರೆಸ್ಸೆಸ್, ಭಜರಂಗದಳ ರಾಮಸೇನೆ ಒಟ್ಟಾರೆಯಾಗಿ ಯಾವುದೋ ಹಿಂದೂಪರ ಸಂಘಟನೆಯೇ ಮಾಡಿತು ಎಂದು ಖಚಿತ ಸಾಕ್ಷಿ ಉಳ್ಳವರಂತೆ ನಾವಾರಿಸಿದ ನಾಯಕರೇ ಮಾಧ್ಯಮದ ಮುಂದೆ ಹೇಳಿಕೆ ನೀಡುತ್ತಾರೆ. ಅದಕ್ಕೆ ವಿರುದ್ಧವಾಗಿ ಇನ್ಯಾರೋ ಖಂಡಿತಾ ಇದು ಮುಸಲ್ಮಾನ ಸಂಘಟನೆಗಳದ್ದೇ ಕೆಲಸ ಎನ್ನುವುದು. ಪೋಲಿಸರು ಹೇಳಿಕೆ ನೀಡುವ ಮೊದಲೇ ಸಾವಿರಾರು ಹೇಳಿಕೆಗಳು ಸಮಾಜದಲ್ಲಿ ತುಂಬಿಹೋಗಿರುತ್ತವೆ ಹಾಗಾದರೆ ಪೊಲೀಸ್ ವ್ಯವಸ್ಥೆ ಇರುವುದ್ಯಾಕೆ? ಕೇವಲ ರಾಜಕಾರಣಿಗಳಿಗೆ, ವಿ ಐ ಪಿ ಗಳಿಗೆ ರಕ್ಷಣೆ ಕೊಡುವುದಕ್ಕೋ????

ಇನ್ಯಾರೋ ಹಿಂದೂ ಧರ್ಮ ಆ ಧರ್ಮವನ್ನು ತುಳಿಯಿತು. ಶಂಕರಾಚಾರ್ಯರು ಅವರನ್ನು ಕೊಲೆ ಮಾಡಿಸಿದರು, ಭಗವತ್ಗೀತೆ ಸರಿ ಇಲ್ಲ, ಆ ಶ್ಲೋಕ ಸರಿ ಇಲ್ಲ ಗೀತೆಯನ್ನು ಸಾರ್ವಜನಿಕವಾಗಿ ಸುಡುತ್ತೇನೆ ಎಂದು ರಾಜಾರೋಷವಾಗಿ ಹೇಳುತ್ತಾರಲ್ಲಾ ಇವರಿಗೆ ಶ್ರೀರಕ್ಷೆ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ. ಮತ್ಯಾರೋ ದೇವರು ಸುಳ್ಳು ದೇವರ ಮೂರ್ತಿಯ ಮೇಲೆ ಉಚ್ಚೆ ಹುಯ್ಯುತ್ತೇನೆ ಎನ್ನುತ್ತಾರಲ್ಲಾ ಅದೂ ಘ್ನಾನಪೀಠಿಗಳು ಅವರು ಎಂದಾದರೂ ತಮ್ಮ ವಂಶದ ಆಚರಣೆಯ ಬಗ್ಗೆ ಅವಲೋಕನ ಮಾಡಿದ್ದಾರೆಯೇ? ಉಪನಯನ, ಸಪ್ತಪದಿ ಇವುಗಳನ್ನು ಹೀಯಾಳಿಸುವ ಅವರು ತಮ್ಮ ಮಕ್ಕಳಿಗೆ ಯಾವ ಪುರುಷಾರ್ಥಕ್ಕೆ ಉಪನಯನ ಮದುವೆ ಮಾಡಿಸಿದ್ದಾರೆ? ಯಾವುದೋ ಚರ್ಚಿನಲ್ಲೋ ಮಸೀದಿಯಲ್ಲೋ ಕುಳಿತು ಹೆಣ್ಣಿನ ಸ್ವಾತಂತ್ರ್ಯದ ಬಗ್ಗೆ ಆಕೆಯ ಪರಿಮಿತಿಯ ಬಗ್ಗೆ ಮಾತನಾಡುವ ಧಾರ್ಮಿಕ ಗುರು ತನ್ನ ತಾಯಿಯನ್ನೊಮ್ಮೆ ಸರಿಯಾಗಿ ಅರ್ಥಮಾಡಿಕೊಳ್ಳಬೇಕಾಗಿದೆ. ಗೋವನ್ನು ಮಾತ್ರಾ ರಕ್ಷಿಸುವುದೇಕೆ ನಾಯಿಯನ್ನು ಹಂದಿಯನ್ನು ರಕ್ಷಿಸಿ ಎಂದೇಕೆ ಕೇಳುವುದಿಲ್ಲ ಎನ್ನುವ ಜನರು ಗೋವಿನ ಮಹತ್ವವನ್ನು, ವೇದ ಪುರಾಣಗಳಲ್ಲಿ ಗೋವಿನ ಬಗೆಗಿನ ಮಾತುಗಳನ್ನು ಮೊದಲು ತಿಳಿದುಕೊಳ್ಳಲಿ. ಇನ್ಯಾರೋ ಒಬ್ಬ ಇಂದಿನ ಸಮಾಜದ ದಾರ್ಶನಿಕ ಎಂದೇ ಬಿಂಬಿತವಾಗಿರುವ ಸರ್ವ ಮತಗಳೂ ಸ್ವೀಕರಿಸುವ ವಿವೇಕಾನಂದರ ಬಗ್ಗೆ ಅವಹೇಳನ ಮಾಡಿ ಬರೆದು ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾನಲ್ಲಾ ಇಂಥಹ ಅಲ್ಪಮತಿಗಳಿಗೆ ಏನೆನ್ನಬೇಕು?

ರಾಜಕೀಯ ಮುಖಂಡರೇ, ಧಾರ್ಮಿಕ ಮುಖ್ಯಸ್ಥರೇ ಹೇಳಿಕೆಗಳನ್ನು ನೀಡಿ ಅದು ಸರ್ವ ಸಮಾಜ ಒಪ್ಪುವಂತಿರಬೇಕು. ಅದನ್ನು ಬಿಟ್ಟು ಯಾರೊಬ್ಬರ ಮನಸ್ಸಿಗೆ ನೋವುಂಟುಮಾಡುವ ಉದ್ದೇಶದಿಂದ ಯಾ ಜನಪ್ರಿಯತೆಗೋಸ್ಕರ ಹೇಳಿಕೆ ನೀಡಬೇಡಿ. ಯಾವ ಮಾತುಗಳು ವಿವಾದ ಸೃಷ್ಟಿಸುತ್ತವೆ ಎಂದು ತಿಳಿಯದಷ್ಟೇನೂ ಮೂರ್ಖರಲ್ಲ ನೀವುಗಳು. ವಿವಾದಾತ್ಮಕ ಹೇಳಿಕೆ ನೀಡುವ ಮುನ್ನ ಸಮಾಜದ ಶಾಂತಿ ಸೌಹಾರ್ದತೆಯ ಕಡೆಗೊಮ್ಮೆ ನೋಡಿ. ಎಲ್ಲರನ್ನೂ ಎಲ್ಲಾ ರೀತಿಯಿಂದಲೂ ಬೆಳೆಯಲು ಸಹಕಾರ ನೀಡಿದ ಈ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಬೇಡಿ. ಒಳ್ಳೆಯದು ಮಾಡುವುದಾದರೆ ಮಾಡಿ ಅದನ್ನು ಬಿಟ್ಟು ಕೆಟ್ಟ ಯೋಚನೆ ಕೆಟ್ಟ ಕೆಲಸ ಸಮಾಜ ವಿರೋಧಿ ದೇಶ ವಿರೋಧಿ ಕೆಲಸ, ಅಂತಹ ಕೆಲಸಕ್ಕೆ ಬೇರೆಯವರನ್ನು ಪ್ರಚೋದಿಸುವ ಕಾರ್ಯ ಮಾತ್ರಾ ಮಾಡಬೇಡಿ ಏಕೆಂದರೆ ನನ್ನ ಭಾರತ ಭಾವನೆಗಳಿಗೆ ಬೆಲೆ ಕೊಡುವ ಭಾರತ. ಬೇರೆಯರ ಭಾವನೆಯೊಂದಿಗಿನ ಆಟ ಎಂದಿಗೂ ಸಲ್ಲದು.

Nagaraj Bhat TR

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!