ಅಂಕಣ

ಯುವಹಬ್ಬ ‘ಯುವಸಂಕ್ರಮಣ’ ದ ಸವಿನಯ ಆಮಂತ್ರಣ

ಸಂಕ್ರಾಂತಿ ನಂತರ ಸೂರ್ಯ ತನ್ನ ಕಕ್ಷೆ ಬದಲಿಸುತ್ತಾನೆ..ಇದನ್ನು ಉತ್ತರಾಯಣ ಪುಣ್ಯಕಾಲ ಎಂದು ಕರೆಯುತ್ತಾರೆ. ಮುಂದಿನ ಆರು ತಿಂಗಳ ಕಾಲ ಸೂರ್ಯ ದಿನದಿಂದ ದಿನಕ್ಕೆ ಪ್ರಖರನಾಗುತ್ತ ಹೋಗುತ್ತಾನೆ. ಮತ್ತು ಈ ದಿನಗಳಲ್ಲಿ ಹಗಲು ಹೆಚ್ಚು ಮತ್ತು ರಾತ್ರಿ ಕಡಿಮೆಯಾಗುತ್ತದೆ. ತನ್ನ ಈ ಬಗೆಯ ಚಲನೆಯಿಂದ ಸೂರ್ಯ ನಮಗೆಲ್ಲ ಸಂದೇಶವನ್ನೂ ಕೊಡುತ್ತಾನೆ. ನಾವೆಲ್ಲ ನಮ್ಮ ಜೀವನದಲ್ಲಿ ನಮ್ಮ ನಮ್ಮ ವ್ಯಯಕ್ತಿಕ ಬದುಕನ್ನು ಹೊರತುಪಡಿಸಿ ನಮ್ಮ ದೇಶ,ನಮ್ಮ ಧರ್ಮ ನಮ್ಮ ಸಂಸ್ಕೃತಿ ಯ ಬಗೆಗೆ ನಮಗಿರುವ ಕರ್ತವ್ಯಗಳನ್ನು ನಿರ್ವಹಿಸುವ ಸಂದರ್ಭಗಳಲ್ಲಿ ಸಾವಿರ ನೆಪಗಳನ್ನು, ಅನೇಕ ಅಸಹಾಯಕತೆಗಳನ್ನು ಮುಂದಿಟ್ಟು ಹಿಂಜರಿಯುವ ಪ್ರಯತ್ನ ಮಾಡುತ್ತಿರುತ್ತೇವೆ. ಆದರೆ ಒಂದನ್ನು ನಾವೆಲ್ಲ ಅರಿಯಬೇಕು. ನಮಗೆಲ್ಲ ಬಗೆಯ ಬೆಳಗುವ ಭಾಗ್ಯವನ್ನು ಭಗವಂತ ಕರುಣಿಸದೇ ಇರಬಹುದು ಆದರೆ ಒಂದು ಪುಟ್ಟ ಹಣತೆಯಂತೆ ನಮ್ಮ ನಮ್ಮ ಮಿತಿಯೊಳಗೆ ನಮ್ಮ ಸಮಾಜ ನಮ್ಮ ಧರ್ಮ ನಮ್ಮ ದೇಶಕ್ಕೆ ಬೆಳಕಾಗುವ ಸಾಮರ್ಥ್ಯವನ್ನು ನಮಗೆಲ್ಲರಿಗೂ ದೇವರು ಕೊಟ್ಟೇ ಕೊಟ್ಟಿದ್ದಾನೆ. ಅಷ್ಟು ಕಾರ್ಯವನ್ನು ಪ್ರಾಮಾಣಿಕತೆಯಿಂದ ಹಣತೆಯಂತೆ ಮಾಡುವ ಸಂಕಲ್ಪ ಮಾಡಿದರೆ ನಮ್ಮೆಲ್ಲರ ಬದುಕು ಸಾರ್ಥಕ ವಾಗುತ್ತದೆ. ಯಾವ ರೀತಿ ಉತ್ತರಾಯಣಕಾಲದಲ್ಲಿ ಹಗಲು ಹೆಚ್ಚಾಗಿ ಇರುಳು ಕಡಿಮೆಯಾಗುವುದೋ ಅದೇ ರೀತಿ ನಮ್ಮಲ್ಲಿ ಆಲಸ್ಯದ,ನಿರ್ಲಕ್ಷ್ಯದ,ಕ್ರಿಯಾಶೂನ್ಯತೆಯ, ಕುಂಟುನೆಪ ಹೇಳುವ ಕತ್ತಲು ಕಡಿಮೆಯಾಗಿ ಕರ್ತವ್ಯಪರತೆಯ, ಉತ್ಸಾಹದ, ಜ್ಞಾನ ಪ್ರಖರತೆಯ ಬೆಳಕನ್ನು ಹೆಚ್ಚಿಸಿಕೊಳ್ಳುವ ಸೂರ್ಯನಾಗಲು ಸಂಕ್ರಾಂತಿ ಪರ್ವ ಸಂದರ್ಭದಲ್ಲಿ ನಾವೆಲ್ಲ ಸಂಕಲ್ಪಿಸಬೇಕು. 21ನೇ ಶತಮಾನದಲ್ಲಿ ಭಾರತದ ಪ್ರಮುಖ ಗುರಿ, ಆದ್ಯತೆ ಭಾರತವನ್ನು ಭಾರತವಾಗಿ ಉಳಿಸಿಕೊಳ್ಳುವುದು. ಜಗತ್ತಿನಲ್ಲೆಡೆ ಭಾರತದ ಪ್ರಭಾವ ವ್ಯಕ್ತವಾಗುತ್ತಿರಬೇಕಾದರೆ ನಾವೆಲ್ಲ ಕ್ರಿಯಾಶೂನ್ಯರಾಗುವುದಲ್ಲ. ಭಾರತವನ್ನು ಭಾರತವಾಗಿ ಉಳಿಸಿಕೊಳ್ಳುವುದೆಂದರೆ ಕೇವಲ ಭೌಗೋಳಿಕ ಅಸ್ಮಿತೆಯನ್ನು ಉಳಿಸಿಕೊಳ್ಳುವುದಲ್ಲ. ಪ್ರತಿಯೊಬ್ಬ ಭಾರತೀಯ ಕಾಯೇನ ವಾಚಾ ಮನಸಾ ಸಮಗ್ರ ಭಾರತೀಯತೆಯ ಪ್ರತೀಕವಾಗಬೇಕು. ನಾವ್ಯಾರೂ ವಿವೇಕಾನಂದ, ಸಾವರ್ಕರ್,ಶಿವಾಜಿಯಂತಹ ಮಹಾತ್ಮರಾಗದಿರಬಹುದು.ಆದರೆ ಅವರೆಲ್ಲ ಹಾಕಿಕೊಟ್ಟ ಆದರ್ಶದ ದಾರಿಯಲ್ಲಿ ನಾಲ್ಕು ಹೆಜ್ಜೆ ಇಟ್ಟರೂ ಈ ರಾಷ್ಟ್ರ ತಾನೇ ತಾನಾಗಿ ವಿಶ್ವಗುರುವಾಗುವುದು.ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡುವ ಮಾತ್ರವಲ್ಲ ಒಳ್ಳೆಯ ಕಾರ್ಯವಾದ ದೇಶ ಸೇವೆಯ ಸಂಕಲ್ಪವನ್ನೂ ನಾವು ಮಾಡಬೇಕು.

ಉತ್ತಿಷ್ಠ ಭಾರತ ಈ ಉತ್ತರಾಯಣದ ಪುಣ್ಯ ಕಾಲದಲ್ಲಿ ಯುವಕರನ್ನು ದೇಶಸೇವೆಗೆ ಆಕರ್ಷಿಸುವ ನಿಟ್ಟಿನಲ್ಲಿ ” ಯುವ ಸಂಕ್ರಮಣ ” ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಯುವ ಸಂಕ್ರಮಣವೆಂದರೆ ಭಾರತದ ಶಕ್ತಿಯಾದ ಯುವಸಮೂಹ ತಮ್ಮ ಪಥವನ್ನು ಬದಲಿಸುವುದು ಎಂದರ್ಥ. ಸಂಕ್ರಮಣ ಎಂದರೆ ಪಥವನ್ನು ಬದಲಿಸುವುದು. ಸಂಕ್ರಮಣ ಕಾಲದಲ್ಲಿ ಸೂರ್ಯ ತನ್ನ ಪಥವನ್ನು ಬದಲಿಸುತ್ತಾನೆ. ದಕ್ಷಿಣ ದಿಕ್ಕಿನಿಂದ ಉತ್ತರ ದಿಕ್ಕಿಗೆ ಚಲಿಸುತ್ತಾನೆ. ದಕ್ಷಿಣಾಯಣ ಮುಗಿದು ಉತ್ತರಾಯಣ ಕಾಲ ಆರಂಭವಾಗುತ್ತದೆ.
ಇದೇ ರೀತಿ ಈಗಿನ ಯುವಜನತೆ ತಮ್ಮ ದಿಕ್ಕನ್ನು ಬದಲಿಸಿ ದೇಶ ಸೇವೆಯ ಸಂಕಲ್ಪವನ್ನು ಮಾಡುವುದು ಕಾರ್ಯಕ್ರಮದ ಉದ್ದೇಶ. ಈ ಕಾರ್ಯಕ್ರಮವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಸ್ವಾಮಿ ವಿವೇಕಾನಂದರಿಗೆ ಅರ್ಪಿಸುತ್ತಿದ್ದೇವೆ.

ಯುವಸಂಕ್ರಮಣ ಕಾರ್ಯಕ್ರಮವನ್ನು ಜನವರಿ 23 ಮತ್ತು 24 2016 ರಂದು ಬೆಂಗಳೂರಿನ ವಿಜಯನಗರದ ನ್ಯೂ ಪಬ್ಲಿಕ್ ಶಾಲೆಯ ಮೈದಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮ ಬೃಹತ್ ಉದ್ಯೋಗಮೇಳ, ಸಭಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.
ಜನವರಿ 23 ರಂದು ಬೃಹತ್ ಉದ್ಯೋಗ ಮೇಳ ಮತ್ತು ಜನವರಿ 24 ರಂದು ಸಭಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಜನವರಿ 23 ರ ಉದ್ಯೋಗ ಮೇಳದಲ್ಲಿ ಸುಮಾರು 30 ವಿವಿಧ ಕ್ಷೇತ್ರದ ಕಂಪನಿಗಳು ಭಾಗವಹಿಸಲಿವೆ.

ಜನವರಿ 24 ರ ಸಭಾ ಕಾರ್ಯಕ್ರಮದಲ್ಲಿ ನೇತಾಜಿಯ ಕಡತಗಳ ರಹಸ್ಯ ಬಯಲು ಮಾಡಲು ಹೋರಾಡಿದ ಡಾ. ಸುಬ್ರಮಣಿಯನ್ ಸ್ವಾಮಿ ನೇತಾಜಿಯ ಜೀವನ ಮತ್ತು ಸಾಧನೆಗಳ ಕುರಿತು ಮಾತನಾಡಲಿದ್ದಾರೆ. ಚಿಕ್ಕಬಳ್ಳಾಪುರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಪೂರ್ಣಾನಂದರು ಸ್ವಾಮಿ ವಿವೇಕಾನಂದರ ಕುರಿತು ಉಪನ್ಯಾಸ ನೀಡಲಿದ್ದಾರೆ. ತನ್ನ ಸುಮಧುರ ಕಂಠದಿಂದ ಪ್ರಸಿದ್ಧವಾಗಿರುವ ಪುಟ್ಟ ಸೂರ್ಯಗಾಯತ್ರಿ ಮತ್ತು ಸೂರ್ಯಗಾಯತ್ರಿಯ ಸಂಗೀತ ಗುರು ಕುಲದೀಪ್ ಪೈ ಮತ್ತು ತಂಡದವರಿಂದ ಶಾಸ್ತ್ರೀಯ ಸಂಗೀತಮೇಳ ನಡೆಯಲಿದೆ. ನೃತ್ಯ, ಹಾಡು ಮತ್ತು ಮಾತು ಮಾತುಗಳಿಂದ ದೇಶಭಕ್ತಿಯನ್ನು ಬಡಿದೆಬ್ಬಿಸುವ ವಿನೂತನ ಮತ್ತು ವಿಶಿಷ್ಟ ಕಾರ್ಯಕ್ರಮ ‘ ರಾಷ್ಟ್ರದೇವೋಭವ ‘ ಎಂಬ ನೃತ್ಯರೂಪಕವನ್ನು ಸನಾತನ ನಾಟ್ಯಾಲಯ ಮತ್ತು ಆದರ್ಶ ಗೋಖಲೆ ತಂಡದವರು ಪ್ರದರ್ಶಿಸಲಿದ್ದಾರೆ.

ಇಂತಹ ಅದ್ಭುತ ಕಾರ್ಯಕ್ರಮಕ್ಕೆ ಉತ್ತಿಷ್ಠ ಭಾರತ ನಿಮಗೆ ಸವಿನಯವಾಗಿ ಆಮಂತ್ರಣವನ್ನು ನೀಡುತ್ತಿದೆ. ಬನ್ನಿ ದೇಶಭಕ್ತಿಯನ್ನು ಮೊಳಗಿಸುವ ಯುವಹಬ್ಬ ಯುವಸಂಕ್ರಮಣದಲ್ಲಿ ಭಾಗವಹಿಸೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Raviteja Shastri

ಗೌರಿಬಿದನೂರು ಸ್ವಂತ ಊರು. ಈಗ ಬೆಂಗಳೂರಿನಲ್ಲಿ ವಾಸ. ಅಕೌಂಟೆಂಟ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ. ಓದು ಬರವಣಗೆ, ದೇಶಸೇವೆ, ಸಮಾಜ ಸೇವೆ ನನ್ನ ಹವ್ಯಾಸಗಳು. ಉತ್ತಿಷ್ಠ ಭಾರತ ಎಂಬ ಸಂಘಟನೆಯ ಸಕ್ರಿಯ ಕಾರ್ಯಕರ್ತ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!