ಅಂಕಣ

ದೂರವಾದ ದರ್ಶನ

ನಾಳೆ ಶನಿವಾರ ಬೆಳಿಗ್ಗೆ ೭.೦೦ಗಂಟೆಗೆ ಸ್ಕೂಲ್’ಗೆ ಹೋಗಬೇಕು. ಅಮ್ಮ ನನ್ನ ಬಿಳಿ ಯುನಿಫಾರ್ಮ್’ನ್ನು ಇಸ್ತ್ರಿ ಮಾಡಿ ಇಟ್ಟಿದ್ದು ಕಣ್ಣಿಗೆ ಕಾಣ್ತಾ ಇತ್ತು. ಮನದಲ್ಲಿ ಒಂದು ಸಣ್ಣಕಿಂಡಿ,ಆ ಸಣ್ಣಕಿಂಡಿಯಲ್ಲಿ ಆಕಡೆ ನೋಡಿದ್ರೆ, ನಾನೇ ನಮ್ಮ ಸ್ಕೂಲ್ ಗ್ರೌಂಡ್’ನಲ್ಲಿ ಕುಳಿತಿದ್ದೆ. ಅದೇ ಇಸ್ತ್ರಿ ಮಾಡಿದ ಯುನಿಫಾರ್ಮ್ ಆದರೆ ಶನಿವಾರದ ಡ್ರಿಲ್ ಮಾಡ್ತಾ-ಮಾಡ್ತಾ ಬಿಳಿ ಯುನಿಫಾರ್ಮ್ ಶೇಡ್ ಚೇಂಜ್ ಆಗಿತ್ತು. ಕಿಂಡಿ ಇಂದ ಹೊರಬಂದು ನೋಡಿದರೆ, ಚಪ್ಪಲಿ ಬಿಡೋಜಾಗದಲ್ಲಿ ನನ್ನ ಬಿಳಿ ಶೂ, ಅಯ್ಯೋ ಹೋದ ಶನಿವಾರ ಹಾಕಿದ್ದು, ಸಿಕ್ಕಾಪಟ್ಟೆ ಹೊಲಸಾಗಿದ್ದು. ವೈಟ್ ಪಾಲಿಶ್ ತರೋದಿಕ್ಕೆ ಅಪ್ಪನಿಗೆ ಹೇಳಿದ್ರೂ ಅವರು ಮರೆತು ಬರೋದು ಮಾತ್ರ ಸಾಮಾನ್ಯ ಆಗಿತ್ತು. ಬಿಳಿ ಶೂ ಹಾಕೋನು ನಾನೊಬ್ಬನೇ ಅದಕ್ಕೆ ಪಾಲೀಶ್ ಯಾಕೆ ತರಬೇಕು ಅನ್ನೋ ಭಾವನೆ ಅಮ್ಮಂದು. ಏನಾದ್ರೂ ಆಗ್ಲಿ ಅಂಥ ಅಪ್ಪನ ಬ್ಯಾಗ್’ನಲ್ಲಿದ್ದ ಚಾಕ್ ತಗೊಂಡು ಪುಡಿಮಾಡಿ ಅದರಿಂದಾನೆ ಪಾಲಿಶ್ ಮಾಡಿದ್ದೆ.

ಅಣ್ಣ ಬಂದು ಟಿವಿ ಹಾಕಿದ, ಶುಕ್ರವಾರ ಅಲ್ವಾ ಚಿತ್ರಹಾರ್ ಬರ್ತಾ ಇತ್ತು. ಹಿಂದಿ ಅಂದ್ರೆ ನಂಗೆ ಆಗ್ತಾ ಇರಲಿಲ್ಲ. ಆದರೆ ಹಿಂದಿ ಹಾಡು ಅಂದ್ರೆ ಸಿಕ್ಕಾಪಟ್ಟೆ ಲೈಕ್. ಟಿವಿಯಲ್ಲಿ ಒಂದು ಒಳ್ಳೆ ಸಾಂಗ್ ಬರ್ತಾ ಇತ್ತು, ಅರ್ಥ ಆಗ್ತಾ ಇರಲಿಲ್ಲ ಆದರೆ ನಾನು ಅದನ್ನ ಹಾಡುತ್ತಿದ್ದೆ. “ಸೋಲಾ ಬರಸ ಕಿ ಬಾಲಿ ಉಮರ ಕೊ ಸಲಾಂ, ಎ ಪ್ಯಾರ್ ತೇರೆ ಪೆಹಲಿ ನಜರ್ ಕೋ ಸಲಾಂ”. ಒಂದು ಹುಡುಗಿ ಸಮುದ್ರದ ತೀರದಲ್ಲಿ ಸೀರೆ ಹಾಕೊಂಡು, ಒಂದು ಉದ್ದವಾದ ಸರಕೊರಳಲ್ಲಿ, ಕಣ್ಣ ತುಂಬ ನೀರು ಹಿಂದೆ ಅವರಮ್ಮ, ಆದರೆ ನಾನು ನೋಡ್ತಿರೋದು ಮಾತ್ರ ಕೆಳಗೆ ಬರುತಾ ಇರೋ ಸಬ್’ಟೈಟಲ್. ಇದೇ ಸಬ್’ಟೈಟಲ್’ನಿ೦ದಲೇ ನಾನು ಅಸ್ಟೋ ಇಷ್ಟು ಹಿಂದಿ ಕಲಿತಿದ್ದೆ.

******

ನಮ್ಮ ಪಿಟಿ ಮಾಸ್ಟರ್ ಪ್ರಾರ್ಥನೆ ಮುಗಿದ ಮೇಲೆ ಅದೆಲ್ಲಿ ಇದ್ರೋ ಗೊತ್ತಿಲ್ಲ ಟ್ರ್ಯಾಕ್’ಸೂಟ್’ನಲ್ಲಿ ಮೈಕ್ ಮುಂದೆ ಬಂದರು. ನಿಂತು ಮಾಡೋ ಡ್ರಿಲ್ ಮಾಡಬಹುದು ಆದರೆ ಮಣ್ಣಲ್ಲಿ ಕೂರೋದು ಅಂದ್ರೆ ಬೇಜಾರು. ಹೊಟ್ಟೆನೋವು ಅಂದ್ರೆ ಅವರು ಬಿಡಲ್ಲಾ, ಅದಕ್ಕೆ ನಮ್ಮ ಸಾಲಿನಲ್ಲಿ ನನ್ನ ಹಿಂದೆ ಇದ್ದ ಆಸಿಫ್’ಗೆ ಹೇಳಿದೆ, “ಲೇ ಪ್ಯಾಂಟ್ ಹೊಲಸಾಗತ್ತೆ ಏನ್ಮಾಡೋದು?”. ಅವನಿಂದ ಉತ್ತರ ಬಂದಿರಲಿಲ್ಲ. ಅವನಿಗೂ ಅದೇ ಪ್ರಾಬ್ಲಮ್ ಇತ್ತು. ನನ್ನ ಮುಂದೆ ಇರೋ ಕುಮಾರ ಹೇಳಿದ ಡ್ರಮ್ ಬಾರಿಸೋಕೆ ಬರುತ್ತಾ?. ಬೇಜಾರ ಮೂಡಿನಲ್ಲಿ ಇದ್ದ ನಾನು ಇಲ್ಲ ಅಂದೇ. “ನನಗೆ ಬರುತ್ತೆ, ನಾನು ಡ್ರಮ್’ಸೆಟ್ ತಗೋತೀನಿ, ನೀನು ಅದು ಟ್ರಯಾಂಗಲ್ ಥರಾ ಇದೆಯಲ್ಲ ಅದು ತಗೋ ಅಂದಿದ್ದ” ಆಸಿಫ್. “ಕುಮಾರ ನೀನು ಪೀಪಿ ತಗೋ” ಅಂಥ ಹೇಳ್ತಾ ಓಡಿ ಹೋಗಿ ಪಿಟಿ ಸರ್ ಮುಂದೆ ನಿಂತ್ವಿ. ಆಸಿಫ “ಸರ್,ಸಿನಿಯರ್ಸ್’ಗೆ ಎಕ್ಸಾಮ್ಸ್ ಇದೆ, ಸೊ ವೀ ಕ್ಯಾನ್ ಹ್ಯಾ೦ಡಲ್ ದಿ ಬ್ಯಾಂಡ್”. ಐಡಿಯಾ ಸಕ್ಸಸ್ ಆಗಿತ್ತು.

ಬೇಗ ಡ್ರಿಲ್ ಮುಗಿಸಿ ಮನೆಗೆ ಓಡಬೇಕು, ಶಕ್ತಿಮಾನ್ ಶುರು ಆಗೋ ಮುಂಚೆ ಮನೆಯಲ್ಲಿ ಇರಬೇಕು. ನಿಂತು ಮಾಡೋ ಡ್ರಿಲ್ ಮುಗಿದಿತ್ತು. ಸಿನಿಯರ್ಸ್ ಎಕ್ಸಾಮ್ ಮುಗಿಸಿ ಹೊರಬಂದಿದ್ರು. ಕೈಯಲ್ಲಿದ್ದ ಟ್ರಯಾಂಗಲ್’ನ ಭಾಸ್ಕರ ಅಣ್ಣ ತಗೊಂಡಿದ್ದ, ಶಕ್ತಿಮಾನ್ ಆಗಿದ್ದ ನಾನು ಗಂಗಾಧರ ಥರಾ ಹೋಗಿ ನಮ್ಮ ಕ್ಲಾಸಿನ ಲೈನ್’ನಲ್ಲಿ ಕುಳಿತೆ. ಪ್ಯಾಂಟ್ ಕಲರ್ ಚೇ೦ಜ್ ಆಗಿತ್ತು.

*******

“ಅದ್ಬುತ್ ಅದಮ್ಯ ಸಾಹಸ್ ಕಿ ಪರಿಭಾಷಾ ಹೇ, ಎ ಮಿಟಥಿ ಮಾನವತಾ ಕಿ ಆಶಾ ಹೇ, ಎ ಸೃಷ್ಟಿ ಕಿ ಶಕ್ತಿ ಕಾ ವರದಾನ ಹೇ, ಎ ಅವತಾರ್ ನಹಿ ಹೇ ಏ ಇನ್ಸಾನ್ ಹೇ” ಇದು ಬರ್ತಾ ಇತ್ತು, ನನ್ನ ಹೊಲಸಾದ ಬಲಗಾಲ ಶೂ ಮನೆಯೊಳಗೇ ಬಿತ್ತು. ಅಲ್ಲೇ ಇದ್ದ ಸ್ಟೂಲ್ ತಗೊಂಡು ಕೂತೆ. ನಾನು ಎಲ್ಲಿ ಲೇಟ್ ಆಗಿ ಬಂದು ಶೂ ಬಿಚ್ಚದೆ ಒಳಗಡೆ ಬರ್ತೀನೋ ಅಂಥ ಅಮ್ಮ ಟಿವಿಹಾಕಿದ್ರು. ಒಂದೊಂದು ಬ್ರೇಕ್’ನಲ್ಲಿ ಒಂದೊಂದು ಕೆಲಸ, “ಹಮ್ಕೊ ಪತಾಹೇ ಜಿ, ಆಪ್ಕೊ ಪತಾಹೇ ಜಿ, ಸ್ವಾದಭರೆ ಶಕ್ತಿಭರೆ ಪಾರ್ಲೆ – ಜಿ ” ಹಾಡ್ತಾ ಹಾಡ್ತಾ ಡ್ರೆಸ್ ಚೇ೦ಜ್ ಮಾಡ್ತಾ ಇದ್ದೆ.

“ಜರಾಸಿ ಹಸಿ. ದುಲಾರ್ ಜರಾಸ, ಟೆಸ್ಟ ಆಫ಼ ಇಂಡಿಯಾ” ಜೊತೆ ಅಮ್ಮ ಮಾಡಿದ ತಿಂಡಿ ತಿನ್ನೋದು. ನೀರು ಕುಡಿಯೋಕೆ ಅಂಥ ಒಳಗೆ ಹೋದ್ರೆ “ರಾಮುಕಾಕಾ, ಅರೆ ಬನ್ನು ಯಹಾ ಕ್ಯಾ ಕರ್ ರಹೇಹೊ, ಸಬ್ ಗುಸ್ಸಾ ಕರತೆಹೇ ಇಸ್ಲಿಯೇ ಘರ್ ಚೋಡ್ಕೆ ಜಾ ರಹಾಹು” ಅನ್ನೊದ ಅಸ್ಟೆ ಕೇಳಿದ್ದು ಕೈಯಲ್ಲಿ ಇದ್ದ ನೀರಿನ ಗ್ಲಾಸ್’ನ ಕೈಬಿಟ್ಟು ಟಿವಿ ಮುಂದೆ ಬಂದು ನಿಂತು “ಅರೆ,ಪರ್ ಘರ್’ಮೇ ಥೋ ಮಮ್ಮಿನೆ ಗರ್ಮಾ-ಗರಂ ಜೆಲಿಭಿಯಾ ಬನಯಾ ಹೆ,… ಜೆಲೆಭಿಭಿಭಿ…. ” ನಾನೇ ಹೇಳಿದ್ದೆ. ನೆಕ್ಸ್ಟ್ “ಹಮಾರಾ ಕಲ್, ಹಮಾರಾ ಆಜ್, ಬುಲಂದ್ ಭಾರತ್ ಕಿ, ಬುಲಂದ್ ತಸವೀರ್. ಹಮಾರಾ ಬಜಾಜ್” ಹಾಡ್ತಾ ಓಡಿ ಹೋಗಿ ಹೊರಗೆ ಇರೋ ನಮ್ಮ ಹೀರೋ ಮೆಜೆಸ್ಟಿಕ್ ಹತ್ತಿ ಹ್ಯಾಂಡಲ್’ನ ರೈಟ್ ಅಂಡ್ ಲೆಫ್ಟ್ ಮಾಡೋದು. ನಮ್ಮ ಬೈಕ್ ಹೀರೋ ಆದರೂ ಬಜಾಜ್ ಆಡ್’ಗೆ ಅದನ್ನ ಪ್ರೊಮೋಟ್ ಮಾಡ್ತಾ ಇದ್ದವನು ನಾನೊಬ್ಬನೇ ಅನ್ಸತ್ತೆ.

ಇಸ್ಟರಲ್ಲೇ ಸುರೇಶ ವಾಡ್ಕರ್ ಅವರ ಧ್ವನಿಯಲ್ಲಿ “ಕುಂದನಸಾ ಬದನ್ ದಮಕೆ …. ವಿಕ್ಕೋ ಟರ್ಮರಿಕ್, ನಹಿ ಕಾಸ್ಮೆಟಿಕ್….. “. ಶನಿವಾರದ ಹಾಫ್ ಡೇ ರಜಾದಲ್ಲಿ ಮಜಾ ಮಾಡೋಣ ಅಂಥ ಅಟ್ಟಹತ್ತಿದ್ದೆ. ೧೧ರೂಪಾಯಿಕೊಟ್ಟು, ಹೋದವಾರ ತಂದ ಎಂಆರೈ ಬಾಲ್’ನ ಅಪ್ಪ ಅಟ್ಟದ ಮೇಲೆ ಹಾಕಿದ್ದು ನನ್ನ ಕಣ್ಣಿಗೆ ಬಿದ್ದಿತ್ತು, ಸ್ವಲ್ಪ ದೂರ ಕೈ ಚಾಚಿ ತಗೋಬೇಕು “ಫಾರ್ ಹೆಲ್ದಿ ಆಯಿಲ್, ಫಾರ್ ಹೆಲ್ದಿ ಪೀಪಲ್”. ಅಟ್ಟದ ಮೇಲಿಂದ ಒಂದು ಲಾಗಾ ಹೊಡದ್ರೆ ಸೀದಾ ಅಮ್ಮನ ಮುಂದೆ. ಜಾಹಿರಾತಿನಲ್ಲಿ ಹುಡುಗ ಎರಡು ಕೈಮೇಲೆ ಲಾಗಾ ಹೊಡಿದಿದ್ದ ಆದರೆ ನಾನು ಅಟ್ಟದಿಂದ ತೆವಳಕೊಂಡು ಬಂದಿದ್ದೆ. ಬೆಳಿಗ್ಗೆ ಚಹಾ ಮತ್ತು ಬನ್ನು ತಿಂದು ಸ್ಕೂಲ್’ಗೆ ಹೋಗಿದ್ದೆ, ಬಂದಾಗಿನಿಂದ ಅಮ್ಮ ಏನಾದ್ರೂ ತಿನ್ನು ಅ೦ತಾ ಕರಿತಾ ಇದ್ರೂ. ನನಗೆ ಹಾಲು ಕುಡಿಬೇಕು ಅನ್ಸಿದ್ದು ಇದರಿಂದ “ದೂದ್ದೂದ್ದೂದ್ … ಪಿಯೋ ದೂದ್ ಫಾರ್ ಹೆಲ್ದಿ ರೀಸನ್.. ಪಿಯೋ ಗ್ಲಾಸ್’ಫುಲ್ “

******

ಬಾಲ್ ತಗೊಂಡು ಕ್ರಿಕೆಟ್ ಆಡಬೇಕು ಅಂಥ ಹೋದೆ. ಕುಮಾರ, ಆಸಿಫ್ ಆಗಲೇ ಮೂರು ಕಟ್ಟಿಗೆ ತಗೊಂಡು ಸ್ಟಂಪ್ ಮಾಡಿ ಕಾಯ್ತಾ ಇದ್ರು. ಆಸಿಫ್ ಕೈಯಲ್ಲಿ ಇದ್ದ ಬ್ಯಾಟನ್ನ ನೆಲಕ್ಕೆಇಟ್ಟು ಮೂರು ನಂಬರ್ ಬರೆದು ಬ್ಯಾಟ್ನಿಂದ ಮುಚ್ಚಿ ಮೂರು ಗೆರೆ ಎಳೆದ. ಕುಮಾರ ಬ೦ದು ಎರಡನೇ ಗೆರೆ ಮೇಲೆ ಕೈ ಇಟ್ಟ, ನಾನು ಆಸಿಫ್ ಮುಖ ನೋಡಿದೆ. ಖುಷಿ ಇತ್ತು. ನನ್ನ ಕೈನ ಕೊನೆಗೆರೆಯ ಹತ್ತಿರ ತಗೊಂಡು ಹೋದೆ, ಆಸಿಫ್ ಮುಖ ಅರಳಿತ್ತು. ಸಡನ್ ಆಗಿ ಕೈನ ಮೊದಲನೇ ಗೆರೆಗೆ ಇಟ್ಟಿದ್ದೆ. ಆಸಿಫ್ ಬಾಲ್ ತಗೊಂಡ, ಕುಮಾರ್ ಹೋಗಿ ಫೀಲ್ಡಿಂಗ್’ಗೆ ನಿಂತ, ಬ್ಯಾಟ್ ನನ್ನ ಪಾಲಾಗಿತ್ತು.

ಎರಡನೇ ಬಾಲ್ಗೆ ಔಟ್ ಆದ ನಾನು ಬ್ಯಾಟ್ ಕುಮಾರ್ ಕೈಗೆ ಕೊಟ್ಟೆ. ಆಸಿಫ್’ಗೆ ಫ್ರೆಶ್ ಓವರ್ ಸಿಕ್ಕಿತ್ತು. ಕೊನೆಯ ಬಾಲಿನಲ್ಲಿ ಕುಮಾರ್ ಬೋಲ್ಡ್ ಆಗಿದ್ದ. ಬಾಲನ್ನ ಕೈಯಲ್ಲಿ ಬ್ಯಾಟ್ ಆಸಿಫ್ ಕೈಯ್ಯಲ್ಲಿ. ಹಾಕಿದ್ದೆ ಒಂದು ಬಾಲ್ ಮು೦ದಿನಮನೆ ಗ್ಲಾಸ್’ಗೆ ಅಣ್ಣನ ಬಾಲ್ ಹೋಗಿತ್ತು. ಮೆಲ್ಲಗೆ ಹೋಗಿ ಮನೆಯಲ್ಲಿ ಕುಳಿತೆ. ಶನಿವಾರದ ಹಿಂದಿಚಿತ್ರ ನೋಡ್ತಾ ಕೂತಿದ್ರು ಮನೆಯೆಲ್ಲಿ, ಸುಮ್ನೆ ಹೋಗಿ ನಾನು ಕೂತೆ. ಎಲ್ಲಾ ಬ್ಯುಸಿ ಇದ್ರೂ ಕೈಯಲ್ಲಿದ್ದ ಒಂದು ಡಬ್ಬಾ ತಗೊಂಡು ಅಟ್ಟದ ಹತ್ರ ಹೋಗಿ ಎಸೆದೆ. ಶಬ್ದ ಆಯ್ತು. ಅಮ್ಮ ಏನೋ ಅದು ಅಂದ್ರು “ಬಾಲನ್ನ ಅಟ್ಟದ ಮೇಲೆ ಇಟ್ಟಿದೀನಿ” ಅಂದೇ. ದೂರದರ್ಶನದ ಸಿನೆಮಾ ನನ್ನ ಉಳಿಸಿತ್ತು.

ರಾತ್ರಿ ಮತ್ತೆ ಎಲ್ಲಾ ಸೇರಿದ್ದರು, ಬರಿ ಜಾಹಿರಾತು ನೋಡೋ ನನಗೆ ಅವತ್ತು ಹಾಡು ನೋಡೋ ಆಸೆ. “ಏಕ್ಸೆ ಬಡ್ಕರ್ ಎಕ್ ಸ್ಟಾರ್ಟ್” ಆಯಿತು. ಹತ್ತು ಹಾಡುಗಳನ್ನ ಹಾಕೋ ಇವರು ನಡು-ನಡುವೆ ಒಂದು ಕಾಮಿಡಿ ಟೀಂನಿಂದ ನಗಸ್ತಾರೆ. ನಡುನಡುವೆ ಸಂಡೇ ಸ್ಪೆಷಲ್’ಗೆ ಇಡ್ಲಿಹಿಟ್ಟಿನ ಮಿಕ್ಸರ್ ಸೌಂಡ್. ಆ ಕಾರ್ಯಕ್ರಮ ೧೦ನೆ ಹಾಡನ್ನ ಮೊದಲು ಹಾಕಿ ಮೊದಲನೇ ಹಾಡನ್ನ ಕೊನೆಗೆ ಹಾಕ್ತಾ ಇದ್ರೂ. ಕುಮಾರ್ ಹೇಳಿದ್ದ ಹಾಡು ಮೊದಲನೇ ನಂಬರ್’ಗೆ ಇದೆ ಅದರಲ್ಲಿ ಒಬ್ಬ ಗನ್ ತಗೊಂಡು ಶೂಟ್ ಮಾಡಿದ್ರೆ ಕೈಕಾಲು ಮಾಯಾ ಆಗುತ್ತೆ ಅದ್ರು ಅವನು ಡಾನ್ಸ್ ಮಾಡ್ತಾನೆ. ಅವನ ತಲೆ ಇರಲ್ಲ ಕ್ಯಾಪ್ ಮಾತ್ರ ಇರತ್ತೆ. ನಿದ್ದೆ ಜೋರಾಗಿ ಬಂದ್ರು ಆ ಹಾಡನ್ನ ನೋಡಲೇಬೇಕು ಅಂಥ ಕಾಯ್ತಾ ಅಲ್ಲೇ ಮಲಗಿದ್ದೆ.

*****

ಸಂಡೇ ಆದರು ೭.೦೦ಗಂಟೆಗೆ ಮನಸ್ಸು ಎದ್ದುಬಿಟ್ಟಿತ್ತು. ಆದರೆ ಸುಮ್ನೆ ಕಣ್ಣಮುಚ್ಚಿ ಟಿವಿಯಲ್ಲಿ ಬರೋಹಾಡನ್ನ ಕೇಳ್ತಾ ಮಲಗಿದ್ದೆ “ಬಜೆಸರಗಮ್, ಹರತರಫ್ಸೆ ….. “. ನಡುವೆ ಒಂದು ಜಾಹೀರಾತು “ಪೂರಬ್ಸೆ ಸೂರ್ಯ ಉಗ ….. ಯಕೀನ್ ನಹಿ ಆತಾ ಯಹಿ ಕಿಶನ್ಹೇ “. ನೆಕ್ಸ್ಟ್ ಜಾಹಿರಾತಿಗೆ ನನ್ನ ಮುಖದ ಮೇಲೆ ಇದ್ದ ದಿಂಬು ಸರಿದು ಕೆಳಗೆ ಬಿತ್ತು “ಮಿಲೇ ಸುರ್ ಮೇರಾ ತುಮ್ಹಾರ ….. ನನ್ನ ದನಿಗೆ ನಿನ್ನ ದನಿಯ ಸೇರಿದಂತೆ ನಮ್ಮ ದನಿಯ” ಈ ಹಾಡನ್ನ ಪೂರ್ತಿ ಹಾಡಿದರೆ ನಂಗೆ ಹಿಂದಿ ಮಾತ್ರ ಅಲ್ಲಾ ಎಲ್ಲಾ ಭಾಷೆನು ಬರುತ್ತೆ ಅನ್ನೋ ಭಾವನೆ.

೮ಗಂಟೆ ಆಯ್ತು ರಂಗೋಲಿ ಶುರು. ಮೊದಲನೇ ಹಾಡೇ ನನ್ನ ನೆಚ್ಚಿನದು “ಬೋಲ್ ರಾಧಾ ಬೋಲ್ ಸ೦ಗಮ್ ಹೋಗಾ ಕಿ ನಹಿ”. ಅದರ ಹಿಂದೆನೆ “ಮೇ ಶಾಯರ್ ತೋ ನಹಿ ಮಗರ್ ಏ ಹಸಿ”. ರೂಂನಲ್ಲಿ ಇರುವ ಕಿಟಕಿ ಇಂದ ಗಾಳಿ ಬರ್ತಾ ಇತ್ತು ಕಿಟಕಿ ಮುಚ್ಬೇಕು ಅಂಥ ಹಾಸಿಗೆ ಬಿಟ್ಟು ಏಳಬೇಕು “ಪಲ್ ಬರ್ ಕೆ ಲಿಯೇ ಕೋಯೀ ಹಮೆ ಪ್ಯಾರ್ ಕರಲೇ”. ಅಕ್ಕ, ದೇವಾನಂದ್ ಎಷ್ಟು ಕಿಟಕಿಯಲ್ಲಿ ಬರತಾರೆ, ಹೇಮಾಮಾಲಿನಿ ಎಷ್ಟು ಕಿಟಕಿ ಮುಚ್ತಾರೆ ಅಂಥ ಎಣಿಸ್ತಾ ಇದ್ರು. ಕೊನೆಯ ಹಾಡಿನ ಟೈಮ್ ಆಗಿತ್ತು. ನಾನು ಕಿವಿ ಕಣ್ಣು ಮುಚ್ಚುತ್ತಾ ಅಕ್ಕನ ಮುಖಾ ನೋಡಿದೆ ಹಾಡು ಶುರು ಆಗಿತ್ತು “ಏಕ ಬಂಗ್ಲಾ ಬನೇನ್ಯಾರ …….. “

“ಚಂದ್ರಕಾಂತ ಕಿ ಕಹಾನಿ, ಎ ಮಾನಾ ಹೇ ಪುರಾನಿ, ನೌಗಡ ,ವಿಜಯಗಡ” ಕ್ರೋರ್ಸಿಂಗನ ಹುಬ್ಬು ನೋಡೋಕೆ ಎದ್ದು ಕೂತಿದ್ದೆ “ಯಕ್ಕೊ” ಅಂದೇ . ಅಮ್ಮ ಬ್ರಷ್ ಮಾಡೋ ಮೊದ್ಲು ಅಂದ್ರು. ಮುಂದೆ ಇದೆ ಟೈಮ್’ನಲ್ಲಿ ಶ್ರೀಕೃಷ್ಣ, ರಾಮಾಯಣ, ಮಹಾಭಾರತ ಬರುತ್ತೆ ಅಂಥ ಕಲ್ಪನೆನೆ ಇಲ್ಲದೆ ನಾನು ಬ್ರಷ್ ಮಾಡಿಬಂದು ಕೂತೆ. ಅದು ಒಂಥರಾ ಮ್ಯೂಸಿಕ್, ನೆಕ್ಸ್ಟ್ ಸೀರಿಯಲ್ “ಕ್ಯಾಪ್ಟನ್ ವ್ಯೋಮ್”.

ಮತ್ತೆ ಮಧ್ಯಾಹ್ನ ಶಕ್ತಿಮಾನ್, ಲಾಸ್ಟಲ್ಲಿ ಶಕ್ತಿಮಾನ್ ಹೇಳೋ ಆ ನೀತಿ ಪಾಠ ಕೇಳೋದು. ನಾನು ಅದೇ ತಪ್ಪು ಮಾಡಿದ್ರೆ ಸಾರೀ ಶಕ್ತಿಮಾನ್ ಹೇಳೋದು. ಸಂಜೆ ರೀಜನಲ್ ಕಾರ್ಯಕ್ರಮ ನಮಗೆ ಕನ್ನಡ ಪಿಕ್ಚರ್ ನೋಡೋ ಖುಷಿ. ಅವತ್ತು ಹಾಕಿದ್ದ ನಮ್ಮ ಗುರು ವಿಷ್ಣುವರ್ಧನ್ ಸಿನೆಮಾ, “ನಿಷ್ಕರ್ಷ”.

ಇನ್ನ ಹತ್ತು ನಿಮಿಷ ಪಿಕ್ಚರ್ ಬಾಕಿ ಇತ್ತು. ಕೌಂಟ್’ಡೌನ್ ಶುರು ಆಯ್ತು ೬. ೫೯. ೫೦.ಅಯ್ಯೋ ೭ಗಂಟೆಗೆ ವಾರ್ತೆ. ಅಮ್ಮ ಚಹಾ ಮಾಡೋಕೆ ಹೋದರು. ಮುಖ್ಯಾಂಶಗಳು ಕೇಳೋ ಮುಂಚೆ ನಾನು ಹೊರಗೆಹೋದೆ. ವಾಪಾಸ್ ಬ೦ದ್ರೆ ಪಿಕ್ಚರ್ ಮುಗಿದಿತ್ತು. ಅಕ್ಕನ ಹತ್ರ ಹೋಗಿ ಲಾಸ್ಟ್ ಏನಾಯ್ತು ವಿಷ್ಣುವರ್ಧನ್ ಕಳ್ಳನ್ನ ಹಿಡದರಾ ಅಂಥ ಕೇಳ್ದೆ. ಅವಳು ಹಾ ಎಂಡಿಂಗ್ ಸೂಪರ್ ಇತ್ತು, ಹೋಂವರ್ಕ್’ನಲ್ಲಿ ಬ್ಯುಸಿ ಇದಿನಿ. ಆಮೇಲೆ ಹೇಳ್ತೀನಿ ಅಂಥ ಕಳಸಿದ್ಲು. ಕುಮಾರ್ ಮನೆಗೆ ಹೋಗಿ ಅವನನ್ನ ಕೇಳಿದೆ. ಇಲ್ಲಾಲೇ “ಅಡಚಣೆಗೆ ಕ್ಷಮಿಸಿ” ಅಂಥ ೭.೩೦ವರೆಗೂ ಬಂತು ಆಮೇಲೆ ಪ್ರಾದೇಶಿಕ ಪ್ರಸಾರ ಇಲ್ಲಿಗೆ ಮುಗಿಯೀತು. ಮುಂದಿನ ಪ್ರಸಾರ ನಾಳೆ೩.೩೦ ಕ್ಕೆಅಂಥ ಇತ್ತು ಅಂದ.

ರಾತ್ರಿ ಅಲಿಫ್’ಲೈಲಾ ನೋಡ್ತಾ ಮಲಗಿದೆ.

*****

ಅಪ್ಪಿ ತಪ್ಪಿ ನೆಗಡಿ, ಜ್ವರ ಬಂದ್ರೆ ಸ್ಕೂಲ್’ಗೆ ಚಕ್ಕರ್, ಒಂದ್ಸಾರಿ ೧೩ಮಗ್ಗಿ ಬರಲ್ಲ ಅಂಥ ನಾನೇ ಹೊಟ್ಟೆನೋವು ನಾಟಕ ಮಾಡಿದ್ದು ಇದೆ. ಬಿಸಿ ಅನ್ನ ತುಪ್ಪ ನಿಂಬೆಹಣ್ಣಿನರಸ ತಿನ್ನುತ್ತ, ಹಿಂದಿ ತರಂಗ ನೋಡೋದು, ಮಧ್ಯಾಹ್ನ “ಜನನಿ” “ಮನೆತನ”, ಬಿ.ಸುರೇಶ ಅವರ “ಕಾಲ ಮುಂದೆ ನಾವು ಹಿಂದೆ” ಹಾಡನ್ನುಕೇಳಿ “ಸಾಧನೆ” ನೋಡೋದು. ಸಾಯಂಕಾಲ “ಅರ್ಧಸತ್ಯ ” “ಮಾಯಾಮೃಗ”. ಎಳೆಯ ಮನಸಿನ ಎಳೆಗಳು ತುಂಬಾ ಖುಷಿ ಕೊಡ್ತಾ ಇತ್ತು. “ಗುಡ್ಡದಭೂತ” “ಮೈನಾ” ನೋಡಿ ಹೆದರಿದ್ದು ಇದೆ. ಎಂಎಸ್ಐಎಲ್’ನವರ ಒಂದು ಹಾಡಿನ ಕಾರ್ಯಕ್ರಮದಲ್ಲಿ ಸನಿಹಾ ಅನ್ನೋ ಹುಡುಗಿ “ಬದುಕ ಜಟಾಕ ಬಂಡಿ, ವಿಧಿ ಅದರ ಸಾಹೇಭ” ಹಾಡಿದ್ದು ನಾನು ಇರೋವರೆಗೂ ಮರೆಯೋಕೆ ಆಗಲ್ಲ. ಅವಳ ಹೆಸರು ನನ್ನ ಎಲ್ಲಾ ಆಟೋಗ್ರಾಫ್’ನಲ್ಲು ಇದೆ. ಇನ್ನೂ ಅವರ ಹೆಸರನ್ನ ನಾನು ಫೇಸ್ಬುಕ್’ನಲ್ಲಿ ಹುಡುಕ್ತಾ ಇರ್ತೇನೆ.

“ಮಾಲ್ಗುಡಿ ಡೇಸ್” ನಲ್ಲಿ ನಾನು ಮಾಸ್ಟರ್ ಮ೦ಜುನಾಥ ಫ್ರೆಂಡ್ಆಗಿದ್ದು.”ಬ್ಯೊಮ್ಕೇಶ್ ಭಕ್ಷಿ” ನಮ್ಮ ಮನೆಯ ಹಿಂದಿನ ಮನೆಯ ಕೊಲೆರಹಸ್ಯ ಬಗೆಹರಿಸಿದ್ದು, “ಜಂಗಲ್ಬುಕ್”ನಲ್ಲಿ ಇದ್ದ ಬಗಿರನ ಹೆಸರನ್ನು ನಮ್ಮ ಮ್ಯಾಥ್ ಸರ್’ಗೆ ಇಟ್ಟಿದ್ದು. “ಸುರಭಿ” ಗೆ ಪತ್ರಬರೆದದ್ದು, “ಜಾಸೂಸ್ ವಿಜಯ” “ಸುರಾಗ್” ನಲ್ಲಿಯ ಹೀರೋಗಳನ್ನ ಕಾಪಿ ಮಾಡಿದ್ದು. ರಾತ್ರಿ ಬರುವ “ತೆಹಕಿಕಾತ್” ನೋಡಿ ಟಿವಿ ಆಫ್ ಮಾಡೋವರೆಗೂ ಅತ್ತಿದ್ದು. “ವಿಕ್ರಮ್ ಬೇತಾಳ್” ಕಥೆಯಲ್ಲಿ ಉತ್ತರ ಹುಡುಕಿದ್ದು.”ಸುಭಹ ಸವೇರೆ” ನೋಡಿ ಬ್ರಷ್ ಮಾಡಿದ್ದು, ಮಿಸ್ ಮಾಡದೇ ದೂರದರ್ಶನ ನ್ಯೂಸ್ ಆಂಕರ್ ನೋಡಿ ಕಾಮೆಂಟ್ ಮಾಡಿದ್ದೂ ಕನಸಾ ಅನ್ಸತ್ತೆ.

ನನ್ನ ಬಾಲ್ಯನ ಎಷ್ಟು ಮಿಸ್ ಮಾಡ್ಕೊತಿನೋ ಅಸ್ಟು ನಿನ್ನ ಮಿಸ್ ಮಾಡ್ಕೊತೀನಿ ಡಿಡಿಯ ರ್ದೂರದರ್ಶನ.

Anand R C

writeforus@readoo.in

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!