ಅಂಕಣ

ಗುರು ಬ್ರಹ್ಮ, ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರ…

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಅಂತ ದೊಡ್ಡವರು ಹೇಳಿದ್ದಾರೆ.. ಗುರು ಬ್ರಹ್ಮ, ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರ ಅಂತಾನೂ ಹೇಳಿದ್ದಾರೆ.. ಅಂದರೆ ಗುರುವನ್ನು ಹಿರಿಯರು ಯಾವ ಸ್ಥಾನದಲ್ಲಿ ಇರಿಸಿದ್ದರು ಎಂದು ಕಲ್ಪನೆ ಮಾಡಬಹುದು.. ಅದು ಅಂದಿನ ಕಾಲ.. ಅಂದು ಗುರು ಎಂದರೆ ಕೇವಲ ವಿದ್ಯೆ ನೀಡುವವನಲ್ಲ, ಬುದ್ಧಿ ಹೇಳುವವನಲ್ಲ, ನೀತಿ ಪಾಠ ಮಾಡೋದಕ್ಕೆ ಮಾತ್ರ ಸೀಮಿತ ಅಲ್ಲವೇ ಅಲ್ಲ.. ಗುರು ಎಂದರೆ ಬದುಕು ಕಟ್ಟಿಕೊಡುವವ, ಉತ್ತಮ ಸಮಾಜ ಕಟ್ಟಿಕೊಡುವವ.. ಒಂದು ಸಮಾಜ ಹೇಗಿದೆ, ಹೇಗಿರಬೇಕು, ಎಂದೆಲ್ಲವನ್ನು ಮುಂದಿನ ತಲೆಮಾರುಗಳಿಗೆ ಹಂಚುವವ ಹೀಗೆ ಏನೇನೊ.. ನಂತರ ಕಾಲ ಬದಲಾಯ್ತು ಗುರು ಶಿಕ್ಷಕನಾದ, ಮೇಷ್ಟರಾದ, ಬೆತ್ತದೇಟು ನೀಡುತ್ತ ಮಕ್ಕಳನ್ನು ತಿದ್ದುವ ಪಾಲಕನಾದ.. ಈಗ ಶಿಕ್ಷಕ ಟೀಚರ್ ಆಗಿದ್ದಾನೆ, ಇರುವ ಸಿಲಬಸ್ ಮುಗಿಸಿ ಉಳಿದದ್ದು ಮುಂದಿನ ಸೆಮಿಸ್ಟರ್’ಗೆ ಇಡು ಬದುಕೋಕೆ ಸಂಬಳವಿದೆ ಸಾಕು ಎನ್ನುತ್ತಾ, ಬದುಕೋ ಟೀಚರ್ ಆಗಿದ್ದಾನೆ… ಅದಕ್ಕೆ ಕಾರಣವೂ ಇದೆ.. ಗುರು, ಟೀಚರ್ ಆಗಿ ಬದಲಾಗಿದ್ದರಿಂದಲೋ ಏನೋ ಹತ್ತು ಹಲವು ಮಾತುಗಳನ್ನ ಕೇಳೊ ಪರಿಸ್ಥಿತಿ ಬಂದಿದೆ… ಒಂದೆರಡು ಉದಾಹರಣೆಗಳು ಜಾಲತಾಣದಲ್ಲಿ ಸಿಕ್ಕವು.. ಒಮ್ಮೆ ಓದಿ..

“ವಿದ್ಯಾದಾನ ಮಹಾದಾನ ….

ಅದು ಪುಕ್ಸಟ್ಟೆ ಹೇಳ್ಕೋಟ್ಟರೆ ಮಾತ್ರ .

ಲಕ್ಷ ಲಕ್ಷ ಎಣಿಸಿಕೊಂಡು ವಿದ್ಯಾದಾನ ಮಾಡಿದ್ದೀನಿ ಅನ್ನೋ ಶಿಕ್ಷಕರು ನನ್ ಎಕ್ಕಡ”

“ನನ್ನೆಲ್ಲ ಶಿಕ್ಷಕರನ್ನು ಎದುರು ನಿಲ್ಲಿಸಿ ಹೇಳುತ್ತೇನೆ ನೀವ್ಯಾರು ನನ್ನ ಚಾಕರಿ ಮಾಡಿಲ್ಲ ನನ್ನ ಉದ್ದಾರ ಮಾಡೋ ಶಾಲೆಗೇ ಬಂದಿಲ್ಲ ,ನಿಮ್ಮ ಮತ್ತು ನಿಮ್ಮ ಮಕ್ಕಳ ಉದ್ದಾರದ ಸಲುವಾಗಿ ಬಂದವರು ನೀವು .ಮಾಡಿದ ಕೆಲಸಕ್ಕೆ ಬದಲಿಯಾಗಿ ಕೂಲಿ ಪಡೆದಿದ್ದಿರಿ … ಮತ್ಯಾಕೆ ಮಹಾನ್ ಸಾಧಕರ ಪೋಸ್ …. ಗುರು ಶಿಷ್ಯ ಎಲ್ಲ ನನ್ ಎಕ್ಕಡ”

ಯಾವ ಪುಣ್ಯಾತ್ಮನ ವಾಕ್ಯವೋ ಏನೋ.. ಅದನ್ನು ಓದಿದ ಶಿಕ್ಷಕರ ಜನ್ಮ ಪರಮ ಪಾವನ ಅನ್ನಿಸುತ್ತೆ.. ಆದರೆ ಹಲವು ವಿಚಾರಗಳಿಗೆ ದಾರಿ ಮಾಡಿಕೊಡೋ ಮಾತುಗಳು ಅನ್ನಿಸುತ್ತೆ… ಆ ಮಾತನ್ನು ಹೇಳಿದವನಿಗೆ ಹೀಳಿಸುವ ಅಥವಾ ತಿರುಗೇಟು ನೀಡುವ ಉದ್ದೇಶವಿಲ್ಲ.. ಆದರೆ ಮನಸ್ಸಿನಲ್ಲಿ ಇರುವ ಹಲವು ವಿಚಾರಗಳನ್ನು ಹಂಚಿಕೊಳ್ಳುವ ಉದ್ದೇಶವಿದೆ.. ಶಿಕ್ಷಕರಿಗೇನಪ್ಪ ಲಕ್ಷ ಲಕ್ಷ ಎಣಿಸ್ತಾರೆ, ವಾರಕ್ಕೊಂದು ಆರೇಳು ಘಂಟೆ ಪಾಠ ಮಾಡ್ತಾರೆ, ಮಾಡಿದ್ದೂ ಅರ್ಥ ಆಗಲ್ಲ, ಹೋಂ ವರ್ಕ್ ಹೊರೆಗಟ್ಟಲೇ ಕೊಡ್ತಾರೆ, ಮಾಡದೆ ಇದ್ದರೆ ಪನಿಶ್’ಮೆಂಟ್ ಅಂತ ಐದೊ ಹತ್ತೋ ಸಾರಿ ಬರಿಸ್ತಾರೆ, ಇವರಿಗೆಲ್ಲ ಕೆಲಸ ಕೊಟ್ಟೊನ್ ಯಾವ ಪುಣ್ಯಾತ್ಮನಪ್ಪ ಎಂದು ಎಷ್ಟು ಸುಲಭದಲ್ಲಿ ಬೈಗುಳಗಳು ಬರುತ್ತೆ.. ಆದರೆ ಇಷ್ಟೆಲ್ಲಾ ಬೈಗುಳ ಸುರಿಸೋವಾಗ ಶಿಕ್ಷಕರೂ ಮನುಷ್ಯರು, ಅವರಿಗೂ ಬದುಕಿದೆ, ನಮ್ಮಂತೆ ಆಸೆಗಳಿದೆ ಎಂಬುದನ್ನೆಲ್ಲಾ ಮರೆತು ಬಿಡುತ್ತೇವೆ.. ಇದಕ್ಕೆ ಏನು ಹೇಳಬೇಕೋ ತಿಳಿಯುವದಿಲ್ಲ.. ಇಲ್ಲಿ ಶಿಕ್ಷಕರು ಎದುರಿಸುವ ಕೆಲವು ಸಮಸ್ಯೆಗಳನ್ನು ಮತ್ತು ಇಂದಿನ ಶಿಕ್ಷಕರ ವರ್ತನೆಯ ಕಾರಣಗಳನ್ನು ವಿವರಿಸಲು ಪ್ರಯತ್ನಿಸುತ್ತೇನೆ.. ಯಾಕೆಂದರೆ ನಾನೂ ಶಿಕ್ಷಕನಾಗಿದ್ದವನೇ… ಎಲ್ಲರೂ ಬೈಯ್ಯುವ ಹಾಗೆ ಸಿಲೆಬಸ್ ಮುಗಿಸುವ ಶಿಕ್ಷಕನಾಗಿದ್ದವನು…

ಇನ್ನು ಕೆಲವೇ ತಿಂಗಳಿನಲ್ಲಿ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆ ಇದೆ, ನಂತರ ಫಲಿತಾಂಶ.. ಅದರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿಯನ್ನು ನಿನ್ನ ಮುಂದಿನ ಗುರಿ ಏನೆಂದು ಕೇಳಿ.. ಜೆಈಈ ಮೇನ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಒಳ್ಳೆಯ ಇಂಜಿನಿಯರಿಂಗ್ ಕಾಲೇಜ್’ನಲ್ಲಿ ಸೀಟ್ ಗಿಟ್ಟಿಸಿ ಉತ್ತಮ ಅಂಕದೊಂದಿಗೆ ಮೈಕ್ರೋಸಾಫ್ಟ್, ಗೂಗಲ್’ನಂಥ ಕಂಪನಿಗಳಲ್ಲಿ ಉತ್ತಮ ಸಂಬಳದ ಉದ್ಯೋಗ ಗಿಟ್ಟಿಸಿಕೊಳ್ಳುವುದು.. ಆಮೇಲೆ..?? ಗೊತ್ತಿಲ್ಲ.. ಅದರಿಂದ ಹೊರಗಡೆ ಯಾವುದಾರೂ ಒಂದು ಆಸೆ ಇದೆಯಾ..??  ಒಬ್ಬ ವಿದ್ಯಾರ್ಥಿ ನಾನೊಬ್ಬ ರವೀಂದ್ರನಾಥ್ ಟಾಗೋರ್, ಕೆ.ಎಸ್.ನರಸಿಂಹಸ್ವಾಮಿಯಂತೆ ಆಗುತ್ತೇನೆ ಎನ್ನುತ್ತಾನಾ..?? ಅಥವಾ ಸಿ.ವಿ.ರಾಮನ್ ಥರ ವಿಜ್ಞಾನಿ ಆಗುತ್ತೇನೆ ಎನ್ನುತ್ತಾನಾ..?? ನಾನೊಬ್ಬ ಯೋಧನಾಗಿ ಮೇಜರ್ ಸಂದೀಪ್ ನಂತೆ ಆಗುತ್ತೇನೆ, ವಿವೇಕಾನಂದರ ಆದರ್ಶದಂತೆ ರೂಪಿಸಿಕೊಳ್ಳುವ ವ್ಯಕ್ತಿತ್ವ ನನ್ನದು ಎಂದಿದ್ದಾನಾ..?? ಖಂಡಿತ ಇಲ್ಲ.. ಆಸೆಗಳು ಇಷ್ಟೇ ಚಿಕ್ಕದಾ..?? ಒಮ್ಮೆ ಯೋಚಿಸಿ.. ಇದಕ್ಕೆ ಕಾರಣವೇನು..?? ತಂದೆ ತಾಯಿಗಳು, ಸ್ನೇಹಿತರು, ಬಳಗದ ಉಪದೇಶ.. ಹೆತ್ತವರಿಗೆ ಬೇಕಾಗಿರುವುದು ಕೇವಲ ತಿಂಗಳಿಗೆ 60-70 ಸಾವಿರ ಎಣಿಸಿ ತರುವ ಒಬ್ಬ ಇಂಜಿನಿಯರ್.. ಶಾಲೆಗಳಲ್ಲೂ ಶಿಕ್ಷಕ ಇದನ್ನೇ ಹೇಳಬೇಕು.. ಇಲ್ಲದಿದ್ದಲ್ಲಿ ಆತ ಮಕ್ಕಳ ಭವಿಷ್ಯವನ್ನೇ ಹಾಳುಮಾಡುವ ಶಿಕ್ಷಕನಾಗುತ್ತಾನೆ.. ಇದು ಎಷ್ಟು ಶಾಲೆಗಳಲ್ಲಿ ಆಗುತ್ತಿಲ್ಲ..?? ಅನಿವಾರ್ಯವಾಗಿ ಶಿಕ್ಷಕ ಬದಲಾಗಬೇಕು.. ಮಹಮದ್ ರಫಿ ಕಥೆ ಹೇಳುತ್ತಾ ನೀವು ಅವನಂತೆ ಕಷ್ಟಪಟ್ಟು ಮೈಕ್ರೋಸಾಫ್ಟ್ ನಂತಹ ಕಂಪೆನಿಗಳಲ್ಲಿ ಉನ್ನತ ಹುದ್ದೆ ಪಡೆಯಬೇಕು ಎನ್ನುತ್ತಾನೆ.. ಇದು ನಿಜವಾಗಿ ಆತ ಮನಸ್ಪೂರ್ತಿಯಾಗಿ ಹೇಳುತ್ತಾನೆ ಎಂಬುದು ಅರ್ಧ ಸತ್ಯ… ಇಂದಿನ ಶಿಕ್ಷಕರು ಮಕ್ಕಳಿಗೆ ಹೇಳುವ ನೀತಿ ಪಾಠ ಯಾರಿಗೂ ಬೇಕಿಲ್ಲ.. ಬೇಕಿರುವುದು ಸಿಲಬಸ್.. ಅಲ್ಲಿ ಕೊಟ್ಟಿರುವುದನ್ನು ಅರ್ಥಮಾಡಿಸಿದರೆ ಆತನ ಕೆಲಸ ಮುಗಿಯಿತು.. ಯಾಕೆಂದರೆ ಮುಂದೆ ಡಿಗ್ರಿ ಆದ ನಂತರ ಕಂಪನಿಗಳಲ್ಲಿ ಬೇಕಿರುವುದು ಅದೇ ಅಲ್ಲವೇ..??

ಇನ್ನು ವಿದ್ಯಾದಾನದ ವಿಷಯಕ್ಕೆ ಬರುತ್ತೇನೆ.. ಶಿಕ್ಷಕರೂ ಮನುಷ್ಯರು ಎಂಬ ಮಾತೊಂದು ಹೇಳಿದೆ.. ಅವರಿಗೂ ಬದುಕಿದೆ.. ಯಾವ ಕೆಲಸವನ್ನೂ ಮಾಡದೆ ಪುಗಸಟ್ಟೆ ಸಿಲಬಸ್ ಮುಗಿಸಿ ಬದುಕುವುದು ಸಾಧ್ಯವಾ..?? ಎಲ್ಲರಿಗೂ ಬದುಕಿದೆ ಎಂದಾಗ ಸಂಬಳ ಇಲ್ಲದೆ ಯಾಕೆ ಕೆಲಸ ಮಾಡಬೇಕು…?? ಹಾಗೆ ಮಾಡಿ ಕುಟುಂಬಕ್ಕೆ ಅರೆ ಹೊಟ್ಟೆ ತುಂಬಿಸಿ ಯಾಕೆ ಬದುಕಬೇಕು?… ಹಾಗೆ ನೋಡಿದರೆ ಕುಟುಂಬವೇ ಇರದ ಮನುಷ್ಯ ಮಾತ್ರ ಶಿಕ್ಷಕನಾಗಬೇಕಾಗುತ್ತೆ… ತನ್ನ ಬದುಕಿನ ಅನಿವಾರ್ಯತೆಯನ್ನು ತೀರಿಸಿಕೊಳ್ಳುವ ಸಲುವಾಗಿ ಆತನಿಗೆ ಸಂಬಳ ಬೇಕು.. ಇನ್ನು ಲಕ್ಷ ಲಕ್ಷ ಸಂಬಳ ಎಣಿಸುತ್ತಾರೆ, ದಿನಕ್ಕೊಂದು ತಾಸು ಪಾಠ ಮಾಡುತ್ತಾರೆ ಎಂಬ ಆಪಾದನೆ ಇದೆ.. ಆ ರೀತಿ ಆರೋಪ ಹೊರಿಸುವವರು ಒಮ್ಮೆ ಶಾಲೆ ಕಾಲೇಜಿನಲ್ಲಿ ಹೋಗಿ ನೋಡಿ.. ಕೆಲವೇ ಕೆಲವು ಶಿಕ್ಷಕರು ಅಂಥವರಿದ್ದಾರೆ.. ಉಳಿದವರೆಲ್ಲ ಕೆಲವೇ ಕೆಲವು ಸಾವಿರ ಎಣಿಸುವ ಜನ  ಸಾಮಾನ್ಯರೇ.. ಅವರು ದಿನದ ಎಂಟು ಘಂಟೆಯಲ್ಲಿ ಐದರಿಂದ ಆರು ಘಂಟೆ ಗಂಟಲು ಹರಿದು ಕಿರುಚುವವರೇ… ಅವರು ಯಾರಿಗೂ ಕಾಣರು.. ಇಂದಿನ ದಿನದಲ್ಲಿ ಕಾಲೇಜ್’ಗಳು ಬಯಸುವದು ಉತ್ತಮ ವಿದ್ಯಾರ್ಥಿಗಳನ್ನಲ್ಲ. ಬದಲಿಗೆ ಉತ್ತಮ ಫಲಿತಾಂಶವನ್ನು ಮತ್ತು ಉತ್ತಮ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಶೇಕಡಾವರು ಫಲಿತಾಂಶ ಮಾತ್ರ.. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು.. ಆಗ ಶಿಕ್ಷಕ ಕೇವಲ ಸಿಲೆಬಸ್ ಮುಗಿಸುತ್ತಾನೆಯೇ ಹೊರತು ನೀತಿ ಪಾಠ ಹೇಳಲಾರ…

ಇನ್ನು ಶಿಕ್ಷಕರಿಗೆ ಬೈಗುಳಗಳು.. ಇದು ಎಂದಿಗೂ ಸಾಮಾನ್ಯ.. ಅದಕ್ಕೆ ಕಾರಣಗಳು ಹಲವು.. ಪಾಠ ಮಾಡೋಕೆ ಬರೋಲ್ಲ ಎಂದು ಬೈತಾರೆ… ಶಿಕ್ಷಕನಾದ ಹೊಸತರಲ್ಲಿ ಪಾಠ ಮಾಡೋವಾಗ ಎಡವೋದು ಸಾಮಾನ್ಯ.. ಕಾಲಕ್ರಮೇಣ ಸುಧಾರಣೆ ಆಗುತ್ತಾರೆ.. ಆದರೆ ಮೊದಲ ದಿನವೇ ಬೈದರೆ ಹೇಗೆ..?? ಇನ್ನು ಪನಿಶ್’ಮೆಂಟ್ ಕೊಡ್ತಾರೆ ಅನ್ನೋ ಬೈಗುಳ.. ಸುಮ್ಮನೆ ಪನಿಶ್’ಮೆಂಟ್ ಯಾರೂ ಕೊಡಲ್ಲ.. ಮಕ್ಕಳಿಗೆ ಹೊಡೆಯಬಾರದು ಎಂಬ ನೀತಿ ಬಂತು.. ಎಷ್ಟೋ ಸಂಘಟನೆಗಳು ಶಿಕ್ಷಕರು ಮಕ್ಕಳಿಗೆ ಪ್ರಾಣಿಗಳಿಗೆ ಹೊಡೆದಂತೆ ಹೊಡೆಯುತ್ತಾರೆ ಎಂದವು, ಮಕ್ಕಳಿಗೆ ಹೊಡೆದಾಗ ಪಾಲಕರು ಪೋಲಿಸ್ ಮೊರೆ ಹೋದರು.. ಶಿಸ್ತಿನಲ್ಲಿ ತೊಂದರೆ ಕಂಡಾಗ ಏಟು ಕೊಟ್ಟು ತಿದ್ದುವ ಪ್ರಯತ್ನ ಮಾಡಿದಾಗ ಮಗುವಿನ ಜೀವವೇ ತೆಗೆಯುತ್ತಿದ್ದಾರೆ ಎಂಬುದು ಯಾವ ನ್ಯಾಯ..?? ಹಾಗೆ ಹೇಳುವ ಪಾಲಕರೂ ವಿದ್ಯಾರ್ಥಿಗಳಾಗಿದ್ದಾಗ ಏಟು ತಿಂದವರಲ್ಲವೇ.. ಅವರಿಗದು ತಿಳಿದಿಲ್ಲವೇ..?? ಯಾವ ಶಿಕ್ಷಕನೂ ತನ್ನ ವಿದ್ಯಾರ್ಥಿ ಸಾಯಲಿ ಎಂದು ಹೊಡೆಯಲಾರ.. ಅಂಥವರು ಇಲ್ಲವೇ ಇಲ್ಲ ಎನ್ನುತ್ತಿಲ್ಲ.. ಆದರೆ ಅಂಥವರು ವಿರಳಾತಿ ವಿರಳ.  ತಾನು ಯಾವ ಮನಸ್ಥಿತಿಯಲ್ಲಿ ಇದ್ದರೂ ಅದನ್ನು ತನ್ನ ಕೆಲಸದಲ್ಲಿ ತೋರಿಸದೇ ಶಾಂತ ರೀತಿಯಿಂದ ತರಗತಿಯಲ್ಲಿ ಪಾಠ ಮಾಡುತ್ತಾನೆ ಶಿಕ್ಷಕ, ಮನೆಯ ಕೋಪವನ್ನು ವಿದ್ಯಾರ್ಥಿಗಳ ಮೇಲೆ ಆತ ಎಂದೂ ತೋರಿಸಲಾರ, ಅಷ್ಟರ ಮಟ್ಟಿಗೆ ಆತನ ನಿಯತ್ತು ಸತ್ತಿಲ್ಲ…

ಹಾಗಂತ ಶಿಕ್ಷಕರೆಲ್ಲರೂ ಸಂಭಾವಿತರು ಎಂದು ಹೇಳುವ ಉದ್ದೇಶವಿಲ್ಲ.. ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡುವವರು, ವಿದ್ಯಾರ್ಥಿಗಳಿಗೆ ಪಾಠ ಸರಿಯಾಗಿ ಮಾಡದೆ ಇರುವವರು ಎಲ್ಲರೂ ಇದ್ದಾರೆ.. ಆದರೆ ಅವರ ಸಂಖ್ಯೆ ಕಡಿಮೆ.. ಅದಕ್ಕಾಗಿ ಎಲ್ಲ ಶಿಕ್ಷಕರನ್ನು ಒಂದೇ ರೀತಿಯಿಂದ ನೋಡುವುದು ಸರಿಯಲ್ಲ… ಸಂಬಳಕ್ಕೆ ದುಡಿದು ವಿದ್ಯಾದಾನ ಮಾಡಿದ್ದೇವೆ ಎಂದು ಬೀಗುವ ಶಿಕ್ಷಕರು ಕಾಣ ಸಿಗುವುದು ಅಲ್ಲಲ್ಲಿ ಮಾತ್ರ… ಅವರನ್ನು ಗೌರವಿಸಿ ಸಂಭಾವಿತರಾಗದಿದ್ದರೂ ಎಕ್ಕಡಕ್ಕೆ ಹೋಲಿಸಿ ಆ ಸ್ಥಾನದ ಮರ್ಯಾದೆ ಕಳೆಯದಿರಿ.. ನೀವೇ ಕಂಡ ಕನಸಿಗೆ ಬುನಾದಿ ಹಾಕಿ ಕೊಡುವವ.. ನಿಮ್ಮ ಕನಸಿನ ಮೊಗ್ಗನ್ನು ಚಿವುಟದೆ ಅದನ್ನು ಹೂವಾಗುವಂತೆ ಮಾಡಲು ಮಾರ್ಗ ತೋರಿಸುವವ.. ಪಾಠ ಕಳಿಸಿದ ಶಿಕ್ಷಕರಿಗಿಂತ ಎಷ್ಟೋ ಪಟ್ಟು ಹೆಚ್ಚು ಸಂಬಳ ಎನಿಸಿದರೂ ಶಿಕ್ಷಕನ ವರ್ಚಸ್ಸು ಬರಲಾರದು… ಇಲೆಕ್ಟ್ರಾನಿಕ್ ಇಂಜಿನಿಯರ್ ಕೆಲಸ ಸಿಗದೇ ಸಾಫ್ಟ್’ವೇರ್ ಇಂಜಿನಿಯರ್ ಆಗಬಹುದು.. ಆದರೆ ಶಿಕ್ಷಕನಾಗಿ ಪಾಠ ಮಾಡಲಾರ.. ಯಾವ ಕೆಲಸವೂ ಸಿಗಲಿಲ್ಲ ಎಂಬ ಕಾರಣಕ್ಕೆ ಶಿಕ್ಷಕನ ಹುದ್ದೆಗೆ ಬರಲಾರರು, ಹಾಗೆ ಬರುವವರೂ ಕಡಿಮೆ… ಶಿಕ್ಷಕನಾಗುವ ಉತ್ಸಾಹ ಇದ್ದರೆ, ಪಾಠ ಹೇಳುವ ಕನಸು ಕಂಡರೆ ಮಾತ್ರ ಅದು ಸಾಧ್ಯ… ಅವರನ್ನು ಗೌರವಿಸಿ.. ತೀರ ಚಪ್ಪಲಿಗೆ ಹೋಲಿಸುವ ಮನಸ್ಥಿತಿ ಸರಿಯಲ್ಲ… ಶಿಕ್ಷಕರಿಗೆ ಶುಭವಾಗಲಿ…

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Hegde

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಹಳ್ಳಿ ಇವರ ಮೂಲ.. ಉಡುಪಿಯಲ್ಲಿ MSc ಮಾಡಿ ಒಂದು ವರ್ಷ ಲೆಕ್ಚರರ್ ಆಗಿ ಕೆಲಸ ಮಾಡಿ ಈಗ NITK ಸುರತ್ಕಲ್’ನಲ್ಲಿ PhD ಮಾಡುತ್ತಿದ್ದಾರೆ... ಓದಿದ್ದು ಕಂಪ್ಯೂಟರ್ ಆದರೂ ಸಾಹಿತ್ಯದಲ್ಲಿ ಆಸಕ್ತಿ.. ಬರೆಯುವುದು ಹವ್ಯಾಸ.. ವಿಜ್ಞಾನದ ಬರಹಗಳು, ಕಥೆ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆಯುವ ಆಸಕ್ತಿ ಹೆಚ್ಚು..

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!