ಅಂಕಣ

ಹೇ ಪಾಪಿ ಪಾಕಿಸ್ತಾನ …. ಇನ್ನೆಷ್ಟು ಯೋಧರ ಬಲಿಬೇಕು?

ಜಗತ್ತಿನಲ್ಲಿ ಅತ್ಯಂತ ಕೆಟ್ಟ ದೇಶ, ಕೆಟ್ಟ ಆಲೋಚನೆ ಹೊಂದಿರುವ ರಾಷ್ಟ್ರ, ದೇಶದ ತುಂಬೆಲ್ಲಾ ಕ್ರೌರ್ಯವನ್ನೇ ತುಂಬಿಕೊಂಡಿರುವ ಏಕೈಕ ರಾಷ್ಟ್ರ ಪಾಕಿಸ್ತಾನ.ಹೌದು ಅದೇಕೋ ಗೊತ್ತಿಲ್ಲ, ಭಾರತದ ಅವಿಭಾಜ್ಯ ಅಂಗವಾಗಿದ್ದ ಪಾಕಿಸ್ತಾನ ದೇಶದ ಸ್ವಾತಂತ್ರ್ಯದ ಸಮಯದಲ್ಲಿ ನಮ್ಮ ಕೆಲ ರಾಜಕೀಯ ನಾಯಕರ ಕೆಟ್ಟ ಆಲೋಚನೆಯಿಂದ ಭಾರತದಿಂದ ಬೇರ್ಪಟ್ಟು ಹೊಸ ರಾಷ್ಟ್ರವಾಗಿ ಉದ್ಭವಿಸಿತು ಅಂದಿನಿಂದ ಇಂದಿನವರೆಗೂ ವಿನಾಕಾರಣ ನಮ್ಮ ಭಾರತದ ಮೇಲೆ ದಾಳಿ ಮಾಡುತ್ತಲೇ ಇದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಅಂತರಾಷ್ಟ್ರೀಯ ಮಟ್ಟದಲ್ಲಿ ಯುದ್ಧಗಳೂ ನಡೆದಿದೆ. ಯುದ್ಧದಲ್ಲಿ ಸೊತಾಗ ವಿಶ್ವಸಂಸ್ಥೆಯ ಮುಂದೆ ಮಂಡಿಯೂರಿ ಶಾಂತಿ ಸಂಧಾನ ನಡೆಸಬೇಕೆಂದು ಕೇಳಿಕೊಂಡಿದ್ದು ಇದೇ ಹೇಡಿ ಪಾಕಿಸ್ಥಾನ.ಭಾರತದ ಬಲ ,ಶಕ್ತಿ ಗೊತ್ತಿದ್ದೂ ನರಿಬುದ್ಧಿ ಉಪಯೋಗಿಸಿ ಭಾರತದ ಮೇಲೆ ಉಗ್ರರನ್ನು ಛೂ ಬಿಟ್ಟು ತನ್ನ ವಿಕೃತ ಕ್ರೌರ್ಯವನ್ನು ಪ್ರದರ್ಶಿಸುತ್ತಲೇ ಇದೆ.

ದೇಶದ ಹಲವು ಕಡೆ ಆತ್ಮಾಹುತಿ ದಾಳಿ ಮಾಡುತ್ತಿದ್ದ ಪಾಕಿಸ್ತಾನ ನಂತರ ನೇರವಾಗಿ ಸಶಸ್ತ್ರ ಉಗ್ರರ ತಂಡವನ್ನು ಭಾರತದ ಮೇಲೆ ದಾಳಿ ಮಾಡಲು ಕಳಿಸಲು ಆರಂಭಿಸಿತು. ಅದಕ್ಕೆ 2006 ರ ಮುಂಬೈ ದಾಳಿ ಉತ್ತಮ ನಿದರ್ಶನ. ಇದಕ್ಕೂ ಮೊದಲು ಅಮೃತಸರದ ಮೇಲೆ ಹಾಗೂ ಇನ್ನಿತರ ಕಡೆಗಳಲ್ಲಿ ತನ್ನ ಹೇಡಿ ಸೈನ್ಯವನ್ನು ಕಳುಹಿಸಿತ್ತು. ಈಗ ಪಂಜಾಬ್ ನ ಪಠಾಣ್ ಕೋಟ್.ಹೌದು ಪಠಾಣ್ ಕೋಟ್ ನ ವಾಯುನೆಲೆಯ ಮೇಲೆ ಆಕ್ರಮಣ ಮಾಡಿ ಅಡಗಿ ಕುಳಿತಿರುವ ಉಗ್ರರು ಭಾರತೀಯ ಸೈನ್ಯಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ. ಈಗಾಗಲೇ ಎಂಟು ಮಂದಿ ಭಾರತೀಯ ಸೈನಿಕರ ಬಲಿಯನ್ನು ಪಡೆದಿದ್ದಾರೆ. ಇನ್ನೆಷ್ಟು ಬಲಿ ಬೇಕು ಈ ಪಾಪಿ ಪಾಕಿಸ್ತಾನಕ್ಕೆ?

ಎಷ್ಟು ಬಾರಿ ಇಂತಹ ಘಟನೆಗಳು ನಡೆದರೂ ನಮ್ಮ ಸರ್ಕಾರಗಳು ಎಚ್ಚೆತ್ತುಕೊಳ್ಳುವುದೇ ಇಲ್ಲವಲ್ಲಾ ದೇವರೇ? ಇದಕ್ಕೆ ಕೊನೆ ಎಂಬುದೇ ಇಲ್ಲವೇ? ರಾಜಕೀಯ ಪಕ್ಷಗಳಿಗೆ ಒಬ್ಬರನ್ನೊಬ್ಬರು ಟೀಕಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಚುನಾವಣಾ ಸಮಯದಲ್ಲಿ ಒಂದು ಪಕ್ಷದವರು ಇನ್ನೊಂದು ಪಕ್ಷದ ಮೇಲೆ ನಿಮ್ಮ ಅವಧಿಯಲ್ಲಿ ಮುಂಬೈ ದಾಳಿಯಾಯಿತು ಎಂದು ಬಾಯಿಬಡಿದುಕೊಂಡು ಪ್ರಚಾರ ಮಾಡಿದರಲ್ಲಾ ಈಗ ಇರುವುದು ಅದೇ ಪಕ್ಷದ ಸರ್ಕಾರ ಆಡಳಿತ ನಡೆಸುತ್ತಿದೆ. ಈಗೇನು ಹೇಳುತ್ತೀರೀ? ದೇಶದ ರಕ್ಷಣೆಯ ವಿಚಾರ ಬಂದಾಗ ಒಬ್ಬರನ್ನೊಬ್ಬರು ತೆಗಳುವ ಬದಲು ನಿಶ್ಪಕ್ಷಪಾತವಾಗಿ ಕೆಲಸ ಮಾಡಲು ಏನು ರೋಗ ನಿಮಗೆ? ದೇಶದ ಹಣವನ್ನು ಕೊಳ್ಳೆ ಹೊಡೆಯುವ ನೀವು (ಭ್ರಷ್ಟ ರಾಜಕಾರಣಿಗಳು) ದೇಶದ ರಕ್ಷಣೆಯ ಬಗ್ಗೆ ಕಿಂಚಿತ್ತೂ ಯೋಚಿಸುವುದಿಲ್ಲ ಏಕೆ?

ಈ ಎಲ್ಲಾ ರಾಜಕಾರಣಿಗಳು, ದೇಶದ ಜನತೆ ನಿರ್ಭಯವಾಗಿ ಶಾಂತಿಯಿಂದ ಜೀವನ ನಡೆಸುತ್ತಿರುವುದು ದೇಶ ಕಾಯಲು ಸೈನಿಕರಿದ್ದಾರೆ ಎಂಬ ಧೈರ್ಯದ ಮೇಲೆ. ಬಿಸಿಲು ಮಳೆ ಚಳಿ ಎನ್ನದೇ ಹಗಲೂ ರಾತ್ರಿ ದೇಶಕ್ಕಾಗಿ ಉಸಿರಾಡುತ್ತಾ ದೇಶದ ಗಡಿಭಾಗದಲ್ಲಿ ಕೋವಿಗಳನ್ನು ಹಿಡಿದು ಶತೃಗಳಿಗೆ ಎದುರು ನೋಡುತ್ತಿರುವ ಸೈನಿಕರ ಜೀವಕ್ಕೆ ಬೆಲೆ ಇಲ್ಲವೇ? ಅವರೇನು ಮನುಷ್ಯರಲ್ಲವೇ? ಮುಂಬೈ ದಾಳಿ ನಡೆದಾಗ ಮೇಜರ್ ಸಂದೀಪ್ ಉನ್ನಿಕೃಷ್ಣನ್, ವಿಜಯ್ ಸಾಲಸ್ಕರ್, ಹೇಮಂತ್ ಕರ್ಕರೆ ಇತ್ಯಾದಿ ಯೋಧರು, ಪೋಲಿಸರು ತಮ್ಮ ಪ್ರಾಣವನ್ನು ಈ ದೇಶದ ಉಳಿವಿಗಾಗಿ ಅರ್ಪಿಸಿದರು. ಈಗ ಲೆ.ಕರ್ನಲ್ ನಿರಂಜನ್ ಕುಮಾರ್ ಹಾಗು ಇನ್ನು ಏಳು ಮಂದಿ(ಇಲ್ಲಿಯವರೆಗೆ) ಯೋಧರು. ಇನ್ನೆಷ್ಟು ಮಂದಿಯ ಜೀವ ಬೇಕೋ ಆ ಸೈತಾನ್ ಪಾಕಿಸ್ತಾನಕ್ಕೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸೈನ್ಯಕ್ಕೆ ಸೇರಿ ಹುತಾತ್ಮರಾದ ಎಲ್ಲಾ ಯೋಧರೂ ತರುಣರೇ ಆಗಿದ್ದಾರೆ. ಅವರಿಗೆ ಸೈನ್ಯಕ್ಕೆ ಸೇರುವ ಯಾವುದೇ ಒತ್ತಡಗಳು ಅಥವಾ ಸೈನ್ಯವೊಂದೇ ದಾರಿ ಎಂಬ ಪರಿಸ್ಥಿತಿ ಖಂಡಿತ ಇರುವುದಿಲ್ಲ. ಬದಲಾಗಿ ದೇಶಭಕ್ತಿ, ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂಬ ತುಡಿತ ಅವರನ್ನು ಸೈನ್ಯಕ್ಕೆ ಸೇರುವ ಹಾಗೆ ಮಾಡಿರುತ್ತದೆ.ಸೈನ್ಯವನ್ನು ಬಿಟ್ಟು ಹೊರಗಡೆ ಯಾವುದೇ ವಲಯದಲ್ಲಿ ಅವರುಗಳು ವೃತ್ತಿಜೀವನವನ್ನು ಆರಂಭಿಸಿದರೂ ಸಾಯುವವರೆಗೂ ಯಾವ ತೊಂದರೆಯೂ ಇಲ್ಲದೇ ಮಕ್ಕಳು ಮೊಮ್ಮಕ್ಕಳು ಕೂತು ಉಣ್ಣುವಷ್ಟು ದುಡಿಯುವ ಅರ್ಹತೆ, ವಿದ್ಯಾಭ್ಯಾಸ ಅವರಿಗಿರುತ್ತದೆ. ಆದರೂ ಅವರು ತಂದೆ ,ತಾಯಿ ,ಹೆಂಡತಿ, ಮಕ್ಕಳು, ಅಕ್ಕ, ತಂಗಿ ಹೀಗೆ ತನ್ನ ಕುಟುಂಬವನ್ನೆಲ್ಲಾ ಬಿಟ್ಟು ಸಾವಿನ ಪಂಜರದಂತಿರುವ ಸೈನ್ಯಕ್ಕೆ ಸೇರುತ್ತಾರೆ. ಆದರೆ ಅವರಿಗೆ ಸಿಗುವುದಾದರೂ ಏನು? ಕವಡೆ ಕಾಸಿನ ಸವಲತ್ತು ಕೊಡಬೇಕಾದರೂ ಸರ್ಕಾರಗಳು ಯಾವ ರೀತಿ ಸತಾಯಿಸುತ್ತಾರೆ ಎಂದರೆ ಅವರಿಗೆ ನಾವು ಇಂತಹ ಜನರ ರಕ್ಷಣೆಗೆ ಹೋರಾಡಿದೆವೋ? ನಮ್ಮ ಮಗ , ನನ್ನ ಪತಿ ಇಂತಹ ಜನರಿಗಾಗಿ ಪ್ರಾಣ ತ್ಯಾಗ ಮಾಡಿದನೋ ಎಂದು ಅವರ ಕುಟುಂಬಕ್ಕೆ ಅನ್ನಿಸುತ್ತದೆ. ಎಂತಹ ನರಕ ಯಾತನೆ ಅಲ್ಲವೇ?

ದೇಶದಲ್ಲಿ ಏನೇ ಸಂಭವಿಸಿದರೂ, ಅದು ಪ್ರವಾಹವೇ ಆಗಿರಲಿ ಅಥವಾ ಭೂಕಂಪನವಾಗಿರಲಿ ಅಥವಾ ಇನ್ನಾವುದೇ ಪ್ರಕೃತಿ ವಿಕೋಪಗಳು ಸಂಭವಿಸಲಿ, ಯಾ ಉಗ್ರರ ಆಕ್ರಮಣವಾಗಲೀ ಎಲ್ಲಾ ಕಡೆಯಲ್ಲಿಯೂ ದೇಶ ಮೊರೆಹೋಗುವುದು ಸೈನ್ಯದ ಸಹಾಯ ಅರಸಿ. ಅಷ್ಟೇ ಅಲ್ಲದೇ ರಾಜಕಾರಣಿಗಳ ಭದ್ರತೆಗೂ ಯೋಧರೇ ಬೇಕು.ಹೀಗಿರುವಾಗ ಅವರ ಒಂದು “ಏಕ ಶ್ರೇಣಿ ಏಕ ಪಿಂಚಣಿ” ಎಂಬ ಬೇಡಿಕೆ ಈಡೇರಿಸಲು ನಮ್ಮ ಸರ್ಕಾರ ದಶಕಗಳಿಂದ ಹಿಂದೆಮುಂದೆ ನೋಡಿತಲ್ಲಾ…. ಕೊನೆಗೆ ನಿವೃತ್ತ ಯೋಧರು ಉಪವಾಸ ಸತ್ಯಾಗ್ರಹ ಮಾಡಬೇಕಾಗಿ ಬಂತಲ್ಲ… ಛೇ ಮನಸ್ಸಿಗೆ ಬಹಳ ನೋವಾಗುತ್ತದೆ ಅಲ್ಲವೇ?

ಒಬ್ಬ ರಾಜಕಾರಣಿ ಸತ್ತರೆ ಆತನ ಬಗ್ಗೆ ಮಾಧ್ಯಮದಲ್ಲಿ ಆತನ ಜೀವನಾಧರಿಸಿದ ಚರ್ಚೆಗಳನ್ನು ಏರ್ಪಡಿಸುವುದು, ಪತ್ರಿಕೆಗಳಲ್ಲಿ ಪುಟಗಟ್ಟಲೆ ಅವರ ಸಾಧನೆಯನ್ನು ಗೀಚುವುದು, ಸರ್ಕಾರ ಶೋಕಾಚರಣೆ ಆಚರಿಸಿ ಸರ್ಕಾರೀ ರಜೆ ಘೋಷಿಸುತ್ತದೆ. ನಂತರದ ದಿನಗಳಲ್ಲಿ ಅವರ ಪ್ರತಿಮೆ ಮಾಡುವುದು, ಆತನ ಹೆಸರನ್ನು ಪ್ರಸಿದ್ಧ ನಗರಗಳ ರಸ್ತೆಗಳಿಗಿಡುವುದು, ಅವರ ಹೆಸರಿನ ಪಾರ್ಕ್ ಗಳನ್ನು ನಿರ್ಮಿಸುವುದು ಹೀಗೆ ಇನ್ನೂ ಹಲವಾರು ರೀತಿಯ ಕಾರ್ಯಕ್ರಮಗಳು(?) ನಡೆಯುತ್ತವೆ. ಆದರೆ ನಮ್ಮ ಯೋಧ ವೀರ ಮರಣವನ್ನಪ್ಪಿದಾಗ ಆತನ ಬಗ್ಗೆ ಕೆಲ ನಿಮಿಷಗಳಷ್ಟೇ ಮಾಧ್ಯಮಗಳಲ್ಲಿ ಬಿತ್ತರಿಸಿ, ಅವರ ಪಾರ್ಥೀವ ಶರೀರದ ದರ್ಶನ ಮಾಡಿ ಸಂತಾಪ ಸೂಚಿಸುತ್ತೇವೆ ಎಂದು ಹೇಳಿ ರಾಜಕಾರಣಿಗಳು ಕೈ ತೊಳೆದುಕೊಂಡು ಬಿಡುತ್ತಾರಲ್ಲಾ ಹಾಗಾದರೆ ದೇಶ ಕಾಯುವ ಯೋಧನಿಗೆ ಈ ದೇಶದಲ್ಲಿ ಬೆಲೆ ಇಲ್ಲವೇ? ಆತನ ಜೀವನದ ಬಗ್ಗೆ, ಆತನ ಸಾಧನೆಯ ಬಗ್ಗೆ ಮಾಧ್ಯಮಗಳು ಜನತೆಗೆ ಸ್ವಲ್ಪವಾದರೂ ವಿಷಯ ತಿಳಿಸಬಹುದಲ್ಲಾ? ಬಿಗ್ ಬಾಸ್ ನಂತಹ ಅರ್ಥವಿಲ್ಲದ ಕಾರ್ಯಕ್ರಮಗಳನ್ನು ಮಾಡುವ ವಾಹಿನಿಗಳು ದೇಶದ ಬಗ್ಗೆ , ಸೈನಿಕರ ಬಗ್ಗೆ ಸಮಾಜಕ್ಕೆ ತಿಳಿಸುವ ಚಿಕ್ಕ ಪ್ರಯತ್ನವನ್ನೂ ಮಾಡುತ್ತಿಲ್ಲವಲ್ಲಾ ಇದು ನಮ್ಮ ನಿಮ್ಮೆಲ್ಲರ ದುರ್ದೈವವೇ ಸರಿ.

ಜೀವದ ಬೆಲೆ ಗೊತ್ತಿರದ ಪಾಪಿ ಪಾಕಿಸ್ತಾನ ಅದೆಷ್ಟು ಭಾರತೀಯ ವೀರ ಯೋಧರ ಬಲಿ ಪಡೆದಿದೆಯೋ ಗೊತ್ತಿಲ್ಲ. ಬಹಿರಂಗವಾಗಿ ಕೇಳಿದರೆ ನಮಗೂ ಉಗ್ರ ಸಂಘಟನೆಗಳಿಗೂ ಯಾವ ಸಂಭಂಧವೂ ಇಲ್ಲ ನಾವು ಉಗ್ರಗಾಮಿಗಳ ವಿರುದ್ಧ ಹೋರಾಡುತ್ತೇವೆ ಎಂದು ಬಾಯಿ ಬಡಿದುಕೊಳ್ಳುವ ಪಾಕ್ ಅದೇ ಉಗ್ರರು ಸೆರೆಸಿಕ್ಕಾಗ ವಿಚಾರಣೆಯಲ್ಲಿ ಪಾಕಿಸ್ತಾನದ ನಂಟನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಹೋದಾಗ ಜಗತ್ತಿನ ಮುಂದೇ ಏನೂ ಗೊತ್ತಿಲ್ಲದಂತೆ ನಟಿಸುತ್ತದೆ.ಬಲವಾದ ಸಾಕ್ಷ್ಯಾಧಾರಗಳು ಪಾಕಿಸ್ತಾನದ ವಿರುದ್ಧವಾಗಿ ಭಾರತದ ಬಳಿ ಲಭ್ಯವಿದ್ದರೂ ಸರ್ಕಾರ ಇನ್ನೂ ಸುಮ್ಮನೆ ಕೈ ಕಟ್ಟಿ ಕೂತಿರುವುದೇಕೆ? ಶಾಂತಿ ಮಾತುಕತೆ ಮಾಡೋಣ, ಕ್ರಿಕೆಟ್ ಆಡೋಣ ಎನ್ನುತ್ತಿರುವುದೇಕೆ? ರಾಜಕೀಯ ಒಳಗುಟ್ಟುಗಳು ಏನೇ ಇದ್ದರೂ ಇಲ್ಲಿ ಬಲಿಯಾಗುತ್ತಿರುವುದು ನಮ್ಮ ಅಮಾಯಕ ಯೋಧರು, ಭಾರತ ಮಾತೆಯ ಪುತ್ರರು ಎನ್ನುವುದು ಸರ್ಕಾರಕ್ಕೆ ಕಾಣಿಸುತ್ತಿಲ್ಲವೇ? ಸರ್ಕಾರ ನಡೆಸುವ ರಾಜಕಾರಣಿಗಳು ತಾಕತ್ತಿದ್ದರೆ ಒಂದುದಿನದ ಮಟ್ಟಿಗೆ ಸೈನ್ಯಕ್ಕೆ ಸೇರಿ ದೇಶ ಕಾಯಲಿ ನೋಡೋಣ. ಖಂಡಿತಾ ಅದು ಅವರಿಂದ ಸಾಧ್ಯವಿಲ್ಲ . ಹಾಗಿದ್ದ ಮೇಲೆ ಪಾಕಿಸ್ತಾನದ ವಿರುದ್ಧ, ಉಗ್ರಗಾಮಿಗಳ ವಿರುದ್ಧ ಕಠಿಣ ಕ್ರಮ ಜರಿಗಿಸಲಿ ಇದು ಬೇಡಿಕೆಯೂ ಹೌದು ಆದೇಶವೂ ಹೌದು.

** ಹುತಾತ್ಮ ನಿರಂಜನ್ ಕುಮಾರ್ ಹಾಗೂ ಇನ್ನುಳಿದ ಮೃತ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಆ ದುಃಖವನ್ನು ತಡೆದುಕೊಳ್ಳುವ ಶಕ್ತಿ ಆ ಭಗವಂತ ಕರುಣಿಸಲಿ**
|| ಜೈ ಹಿಂದ್ ||

Nagaraj Bhat
nagrajbhatnagu@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!