ಕತೆಯನೊಂದ ನಾ ಹೇಳುವೆ ಗೆಳೆಯರೆ
ಕೇಳಿರಿ ನೀವು ಕಿವಿಗೊಟ್ಟು..
ಹತ್ತುವ ಮೊದಲು ದ್ವಿಚಕ್ರವಾಹನ
ತಲೆಯ ಮೇಲಿರಲಿ ಹೆಲ್ಮೆಟ್ಟು !
ಕಿಟ್ಟನು ಹೊರಟನು ಬುಲೆಟ್ಟು ಬೈಕಲಿ
ಒಂದು ದಿನ ನಡುರಾತ್ರಿಯಲಿ..
ಗೆಳೆಯರ ಸೇರುತ ಪಾರ್ಟಿಯ ಮಾಡಲು
ಎಂಜಿ ರೋಡಿನ ಪಬ್ಬಿನಲಿ..
ಪಾರ್ಟಿಯು ಮುಗಿಯಿತು ಬಾಟಲು ಉರುಳಿತು
ಮತ್ತಲಿ ತಲೆಯು ಗಿರ್ರನೆ ತಿರುಗಿತು..
ಹೊಗೆಯನು ಉಗುಳುತ ಕತ್ತಲ ಸೀಳುತ
ಕಿಟ್ಟನ ಬೈಕದು ಮನೆ ಕಡೆ ಹೊರಟಿತು..
ದಾರಿಯ ಮಧ್ಯದಿ ಬ್ರೇಕನು ಅದುಮಿದ
ಕಿಟ್ಟನು ಯಾರನೊ ಕಂಡು..
ಕೋಣನ ಮೇಲಿನ ಧಡೂತಿ ದೇಹವೆ
ಹೇಳಿತು ಇವ ಯಮನೆಂದು !
ಎಲವೋ ಕಿಟ್ಟನೆ ಏತಕೆ ಹೊರಟೆಯೊ ಈ ಪರಿ ಗತಿಗೆಟ್ಟು?
ನಡು ರಸ್ತೆಯಲಿ ಬೈಕಿನ ಮೇಲೆ ಧರಿಸದೆ ಹೆಲ್ಮೆಟ್ಟು
ಮುಗಿಯಿತು ಇಂದಿಗೆ ನಿನ್ನಾಯುಷ್ಯ- ಎಂದನು ಯಮಧರ್ಮ
ಬೆದರುತ ಕಿಟ್ಟನು ಗೋಳನ್ನಿಟ್ಟ-“ಅಯ್ಯೋ ನನ್ನ ಕರ್ಮ”..
ಕತ್ತಲು ಕಳೆಯಿತು ಕನಸದು ಮುಗಿಯಿತು
ಕಿಟ್ಟನು ಹೊರಟನು ಮನೆಬಿಟ್ಟು
ಬೈಕನು ಏರುತ ಕಿಕ್ಕನು ಹೊಡೆದನು
ಧರಿಸಿದ ನಂತರ ಹೆಲ್ಮೆಟ್ಟು..