ಅಂಕಣ

ಸಮಸ್ಯೆಗಳ ಸುಳಿಯಲ್ಲಿ ರಬ್ಬರ್ ಟ್ಯಾಪಿಂಗ್

ಕಾರಣಗಳು ಹಲವಾರು ಇರಬಹುದು ಆದರೆ ರಬ್ಬರ್ ಕೃಷಿಕರ ಸಮಸ್ಯೆಗಳಿಗೆ ಪರಿಹಾರಗಳು ದೊರಕುತ್ತಿಲ್ಲ. ನಿರಂತರವಾಗಿ ಧಾರಣೆ ತಳಮಟ್ಟದಲ್ಲಿಯೆ ಮುಂದುವರಿಯುತ್ತಿರುವುದು ಕೃಷಿಕರನ್ನು ಕಟ್ಟಿಹಾಕಿದೆ. ರಬ್ಬರ್ ತೋಟವಿದೆ ಟ್ಯಾಪಿಂಗ್ ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಕೆಲವು ಬೆಳೆಗಾರರಲ್ಲಿದ್ದರೆ ಮತ್ತೆ ಹಲವರಿಗೆ ಟ್ಯಾಪಿಂಗ್ ಮತ್ತೆ ಆರಂಭಿಸಿಯಾಗಿದೆ ಟ್ಯಾಪರ್‍ಗೆ ಸಂಬಳ ಕೊಟ್ಟ ಮೇಲೆ ಕೈಯಲ್ಲಿ ಉಳಿಯುವುದು ಸೊನ್ನೆ ಎಂಬ ಆತಂಕ. ಇನ್ನು ಕೆಲವು ಬೆಳೆಗಾರರಿಗೆ ಟ್ಯಾಪರ್ ತೋಟದಿಂದ ಬರುವಾಗ ಕೆಟ್ಟ  ಸುದ್ಧಿಗಳನ್ನೆ ತರುತ್ತಾನೆ ಎಂಬ ಭಯ. ಈ ಭಯಕ್ಕೆ ಕಾರಣವಿದೆ. ಸದೃಢವಾಗಿರುವ ಮರಗಳ ತೊಗಟೆಗಳಲ್ಲಿ ಬಿರುಕುಗಳಿವೆ. ಇನ್ನು ಕೆಲವು ಮರಗಳನ್ನು ಕೆತ್ತಿದರೆ ಅದರಿಂದ ರಬ್ಬರ್ ಹಾಲು ಇಳಿಯುತ್ತಿಲ್ಲ. ತೋಟದಲ್ಲಿ ಇಂತಹ ಹಲವಾರು ಮರಗಳಿವೆ ಎಂಬ ಸಂಗತಿ. ಇಲ್ಲಿ ನಷ್ಟ ಬೆಳೆಗಾರನಿಗೆ ಮಾತ್ರವಲ್ಲ ಟ್ಯಾಪರ್‍ಗೆ ಕೂಡ. ಒಂದು ರೀತಿಯ ರೋಗದ ಕಾರಣದಿಂದ ಇಂತಹ ಸಮಸ್ಯೆ ಬರುತ್ತದೆ. ಹೊಸದಾಗಿ ಮರಕ್ಕೆ ತೊಗಟೆ ಬಂದರೆ ಈ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ಉತ್ತರ ರಬ್ಬರ್ ಇಲಾಖೆಯ ಕೆಲವು ಅಧಿಕಾರಿಗಳಿಂದ ಬರುತ್ತದೆಯಾದರೂ ಬೆಳೆಗಾರನಿಗೆ ಇರುವ ಭಯಕ್ಕೆ ಇದು ಸಮಾಧಾನಕರ ಉತ್ತರವಾಗುತ್ತಿಲ್ಲ. ಕ್ಷೇತ್ರ ಸಮೀಕ್ಷೆಗಳಿಲ್ಲದೆ ಅಧಿಕಾರಿಗಳು ಇಂತಹ ಹೇಳಿಕೆ ನೀಡುವುದರಿಂದ ಬೆಳೆಗಾರನಿಗೆ ಸಂಶಯಗಳು ಉಳಿದುಬಿಡುತ್ತವೆ.

ಹೊಸ ಬೆಳೆಗಾರರ ಸಂದಿಗ್ಧ
ಈ ವರ್ಷ ಹೊಸದಾಗಿ ಟ್ಯಾಪಿಂಗ್ ಮಾಡುವ ಬೆಳೆಗಾರರು ನಿಜವಾದ ಸಂದಿಗ್ಧಕ್ಕೆ ಸಿಲುಕಿದ್ದಾರೆ. ಅವರಿಗೆ ರಬ್ಬರ್ ಶೀಟ್ ಮಾಡುವ ರೋಲರ್ ಶೆಡ್, ಸಂಸ್ಕರಣೆಗಾಗಿ ಬೇಕಾದ ಪರಿಕರಗಳಿಗೆ ಸಾವಿರಾರು ರೂಪಾಯಿ ವಿನಿಯೋಗಿಸುವ ಬಗ್ಗೆ ಆತಂಕಗಳಿವೆ. ಈಗಿನ ದರದಲ್ಲಿ ಇಷ್ಟೊಂದು ಖರ್ಚುಗಳು ಅಗತ್ಯವಿದೆಯೆ? ಹಾಕಿದ ಹಣ ರಬ್ಬರ್ ಉತ್ಪಾದನೆಯಿಂದ ಸರಿದೂಗಬಹುದೆ? ಒಂದಷ್ಟು ಲಾಭ ಸಿಗದೆ ಹೋದರೆ ಖರ್ಚು ಮಾಡಿ ಏನು ಪ್ರಯೋಜನ ಎಂಬೆಲ್ಲ ಪ್ರಶ್ನೆಗಳು ಅವರ ಮುಂದೆ ಉದ್ಭವಿಸುತ್ತಿವೆ.

ಹೊಂದಿಕೆಯಾಗದ ದರ
ಮರವೊಂದನ್ನು ಟ್ಯಾಪ್ ಮಾಡಿದರೆ ಒಂದು ರೂಪಾಯಿ ಇಪ್ಪತ್ತೈದು ಪೈಸೆಗಳಿಂದ ಹಿಡಿದು ಒಂದು ರೂಪಾಯಿ ಅರುವತ್ತು ಪೈಸೆಯವರೆಗೆ ಬೆಳೆಗಾರನಿಗೆ ದರನಿಗದಿಪಡಿಸಲಾಗಿದೆ. ಇದರಲ್ಲಿ ಪ್ರದೇಶವಾರು ವ್ಯತ್ಯಾಸಗಳಿವೆ. ಈ ನಿಗದಿಪಡಿಸಲಾದ ದರದಲ್ಲಿ ಅವರು ನಿರ್ವಹಿಸುವ ಕೆಲಸಗಳಲ್ಲಿಯೂ ತುಂಬ ವ್ಯತ್ಯಾಸಗಳಿವೆ. ಕೆಲವು ಟ್ಯಾಪರ್‍ಗಳು ಟ್ಯಾಪಿಂಗ್  ಮಾಡಿ ಹಾಲು ತಂದು ಟ್ರೇಗಳಲ್ಲಿ ಹಾಲುಹಾಕಿ ಶೀಟ್ ಮಾಡಿ ಒಣಗಲು ಹಾಕುವಲ್ಲಿವರೆಗೆ ಈ ದರವನ್ನು ಕೇಳುತ್ತಾರೆ. ಹೊಗೆ ಮನೆಯಲ್ಲಿ ಹಾಕಿ ಹೊಗೆ ಹಿಡಿಸಿ ಕೊಟ್ಟರೆ ಅದಕ್ಕೆ ಮತ್ತೆ ತಿಂಗಳಿಗೆ ಒಂದು ಪ್ರತ್ಯೇಕ ದರಗಳಿರುತ್ತದೆ. ಅದು ಐನ್ನೂರು ರೂಪಾಯಿಗಳಿಂದ ಆರು ನೂರು ರುಪಾಯಿಗಳವರೆಗೆ ಚಾಲ್ತಿಯಲ್ಲಿದೆ. ಕೆಲವು ಟ್ಯಾಪರ್‍ಗಳು ಅವರು ನಿಗದಿಪಡಿಸಿದ ದರದಲ್ಲಿ ಮರದ ಟ್ಯಾಪಿಂಗ್ ಮಾತ್ರ ಮಾಡುತ್ತಾರೆ. ಮರವಿಳಿಸಿದ ಹಾಲು ಸಂಗ್ರಹಿಸಿ ತರುವುದರಿಂದ ಹಿಡಿದು ಉಳಿದ ಸಂಸ್ಕರಣೆಯ ಕೆಲಸಗಳಿಗೆ ಬೆಳೆಗಾರ ಮತ್ತೆ ಬೇರೆ ಕಾರ್ಮಿಕರನ್ನು ಅವಲಂಭಿಸಬೇಕಾಗುತ್ತದೆ. ಇದು ಆತನಿಗೆ ಹೊರೆಯ ಮೇಲಿನ ಹೊರೆ. ಕೆಲವೊಮ್ಮೆ ಟ್ಯಾಪರ್‍ಗಳು ತಂಡ ಕಟ್ಟಿಕೊಂಡು ಎರಡು ಮೂರು ತೋಟಗಳ ಟ್ಯಾಪಿಂಗ್ ನಿರ್ವಹಿಸುವುದು ಈಗ ಫ್ಯಾಷನ್ ಆಗಿದೆ. ದುರಂತವೆಂದರೆ ಈ ರೀತಿ ಟ್ಯಾಪಿಂಗ್ ಮಾಡುತ್ತ ತೋಟದಿಂದ ತೋಟಕ್ಕೆ ಓಡುವ ಹೈಟೆಕ್ ಟ್ಯಾಪರ್‍ಗಳು ಕೆಲವೊಮ್ಮೆ ಟ್ಯಾಪಿಂಗ್ ಮಾಡುವ ಮೊದಲು ಹಾಲು ಸಂಗ್ರಹವಾಗಲು ಗೆರಟೆಯನ್ನಿಡಲು ಮರೆಯುತ್ತಾರೆ. ಹಾಲಿಳಿದು ನೆಲತೊಯ್ದು ಹೋಗುವುದೆ ಹೊರತು ಮಾಡಿದ ಕೆಲಸಕ್ಕೆ ಪ್ರತಿಫಲವಿಲ್ಲ.

ಶಿಸ್ತಿಲ್ಲದ ಕೆಲಸ
ಬೆಳೆಗಾರ ಕಷ್ಟಪಟ್ಟು ರಬ್ಬರ್ ತೋಟ ಬೆಳೆಸಿರಬಹುದು. ಆದರೆ ಅದರ ಪ್ರತಿಫಲ ಪಡೆಯುವಲ್ಲಿ ಆತ ಹಜ್ಜೆ ಹಜ್ಜೆಗೂ ನೋವು ಮತ್ತು ಮುಜುಗರಗಳನ್ನು ಅನುಭವಿಸುತ್ತಲೆ ಬರುತ್ತಿದ್ದಾನೆ. ದರ ನಿಗದಿಯಲ್ಲಿ ಇರುವ ಶಿಸ್ತು ಟ್ಯಾಪಿಂಗ್ ಮತ್ತು ಅನಂತರದ ಸಂಸ್ಕರಣೆಯ ಹಂತಗಳಲ್ಲಿ ಕಂಡುಬರುತ್ತಿಲ್ಲ. ಮುಂಜಾವ ಮಾಡಬೇಕಾದ ಟ್ಯಾಪಿಂಗ್ ಕೆಲಸ ಈಗ ಕೆಲವು ತೋಟಗಳಲ್ಲಿ ಶುರುವಾಗುವುದು ಬೆಳಿಗ್ಗೆ ಆರು ಘಂಟೆ ಕಳೆದ ಮೇಲೆ. ಇದರಿಂದಾಗುವ ನಷ್ಟಗಳೆಲ್ಲ ಬೆಳೆಗಾರನ ಮೇಲೆ. ಮರದಿಂದ ಹಾಲಿಳಿಸಿ ಗೆರಟೆಯನ್ನು ಬಕೇಟಿಗೆ ಮಗುಚಿದ ನಂತರ ಬೆರಳಿನಲ್ಲಿ ಹಾಲನ್ನೆಲ್ಲ ಉಜ್ಜಿತೆಗೆಯುವುದು ಸಾಮಾನ್ಯ ಕ್ರಮ. ಇದರಿಂದ ಮುಂದಿನ ದಿನದ ಟ್ಯಾಪಿಂಗ್ ಕೆಲಸಕ್ಕೆ ತೊಂದರೆ ಎಂಬ ಅರಿವಿದ್ದೂ ಅದನ್ನು ಮಾಡುವವರು ಬಹಳ ಕಡಿಮೆ. ರಬ್ಬರ್ ಹಾಲನ್ನು ಟ್ರೇಗಳಿಗೆ ಅಳೆದು ಸುರಿಯುವಲ್ಲಿ, ಟ್ರೇಗಳಲ್ಲಿ ತೇಲುವ ನೊರೆಗಳನ್ನು ತೆಗೆಯುವಲ್ಲಿ, ಶೀಟ್ ಮಾಡುವಾಗ ಅದರ ಅಂಚುಗಳನ್ನು ಒಪ್ಪ ಓರಣಗೊಳಿಸುವಲ್ಲಿ ಹಲವೆಡೆ ಅಸಡ್ಡೆಗಳೆ ಕಂಡುಬರುತ್ತಿವೆ. ಇದೆಲ್ಲ ಬೆಳೆಗಾರನಿಗೆ ನುಂಗಲಾರದ ತುತ್ತುಗಳು.

ಅನಗತ್ಯ ಸ್ಪರ್ಧೆಗಳು
ಒಂದು ತೋಟದಲ್ಲಿ ಟ್ಯಾಪಿಂಗ್ ಮಾಡುತ್ತಿದ್ದವರಿಗೆ ಹತ್ತು ಪೈಸೆ ಹೆಚ್ಚಿನ ಆಸೆ ತೋರಿಸಿ ಮತ್ತೊಂದು ತೋಟದವರು ಸೆಳೆದುಕೊಳ್ಳುವ ಕ್ರಮ ಒಟ್ಟು ರಬ್ಬರ್ ಬೆಳೆಗಾರರ ದೃಷ್ಟಿಯಲ್ಲಿ ಆರೋಗ್ಯಕರವಲ್ಲ. ಹೊಸದಾಗಿ ಟ್ಯಾಪಿಂಗ್ ಕಲಿತವರನ್ನು ಸರಿಯಾಗಿ ತರಬೇತಿ ಕೊಡಿಸಿ ತಮ್ಮ ತೋಟಗಳಿಗೆ ನಿಯೋಜಿಸಿಕೊಳ್ಳುವುದು ಸರಿಯಾದ ಕ್ರಮ. ಇನ್ನೊಬ್ಬ ಬೆಳೆಗಾರನಿಗೆ ಮೋಸ ಮಾಡಿ ನಾವು ಗೆಲುವಿನ ನಗೆ ಬೀರುವುದು ವಿಹಿತವಲ್ಲ. ಈ ವರ್ಷವಂತು ಎಷ್ಟೋ ಬೆಳೆಗಾರರು ಈ ನೋವನ್ನು ಅನುಭವಿಸುತ್ತಿದ್ದಾರೆ. ಟ್ಯಾಪರ್ ಗಳು ಕೂಡ ಇದನ್ನು ಗಮನಿಸಿಕೊಳ್ಳುವುದು ಹಿತಕಾರಿ. ಯಾಕೆಂದರೆ ಈಗಷ್ಟೆ ತರಬೇತಿ ಪಡೆದವರನ್ನು ಸರಿಯಾಗಿ ಪಳಗಿಸಿ ಬೆಳೆಸಿದ ಬೆಳೆಗಾರರ ಉಪಕಾರವನ್ನು ಮರೆತು ಇನ್ನೊಬ್ಬರಿಗೆ ನೆರವಾಗುವ ಮನೋಭಾವ ಸರಿಯಲ್ಲ.

ಶಂ. ನಾ. ಖಂಡಿಗೆ

snkhandige@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!