ಅಂಕಣ

ಬೆಂಗಳೂರು ರೌಂಡ್ಸ್

ಅದು ಎಲ್ಲರಿಗೂ ಇರುವ ಕನಸೆ! ತನ್ನದೇ ಆದ ಒಂದು ಕಾರೋ, ಬೈಕೋ ಇರಬೇಕು. ಅದರಲ್ಲಿ ಊರೆಲ್ಲಾ ಸುತ್ತಾಡಬೇಕು ಅನ್ನೋದು. ಬೇರೆಲ್ಲಾ ಊರಲ್ಲಿ ಇಂಥ ಕನಸಿರುವವರು ಮಾಡುವ ಆಲೋಚನೆ ಅಂದರೆ “ನನ್ನ ಬಳಿ ಇರುವ ಹಣ ವಾಹನ ತಗೊಳ್ಳೋದಿಕ್ಕೆ ಸಾಕಾ?, ಬ್ಯಾಂಕ್ ನಲ್ಲಿ ಲೋನ್ ಸಿಗಬಹುದಾ? ಸಿಕ್ಕಿದರೆ ತಿಂಗಳಿಗೆ ಕಂತು ಎಷ್ಟು ಇರಬಹುದು?, ಪೆಟ್ರೋಲ್ ಗೆ ಎಷ್ಟಾಗಬಹುದು?” ಇತ್ಯಾದಿ ಇತ್ಯಾದಿ. ಆದರೆ ಬೆಂಗಳೂರಿನವರ ತಲೆಗೆ ಬರುವ ಮೊದಲ ಪ್ರಶ್ನೆ ಅಂದರೆ “ಗಾಡಿ ಎಲ್ಲಿ ನಿಲ್ಲಿಸೋದು?”. ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕೋದೇ ದೊಡ್ಡ ಚ್ಯಾಲೆಂಜ್. ಅದರಲ್ಲೂ ಪಾರ್ಕಿಂಗ್ ಇರುವ ಮನೆ ಹುಡುಕೋದು ಇನ್ನೂ ದೊಡ್ಡ ಚ್ಯಾಲೆಂಜ್! ಮನೆಯ ಒಳಗೆ ಪಾರ್ಕಿಂಗ್ ಜಾಗ ಸಿಗುವುದಂತೂ ಸಾಧ್ಯವೇ ಇಲ್ಲ. ಕೊನೆ ಪಕ್ಷ ಮನೆಯ ಮುಂದೆ ರಸ್ತೆಯಲ್ಲಿ ನಿಲ್ಲಿಸುವುದಕ್ಕಾದರೂ ಸ್ವಲ್ಪ ಜಾಗ ಸಿಕ್ಕಿದಲ್ಲಿ ಅದು ನಮ್ಮ ಪುಣ್ಯ! ಒಬ್ಬಾತ ಆಲ್ಟೊ ತಗೊಂಡ ಅಂದ ಮಾತ್ರಕ್ಕೆ ಅದು ಅವನ ನೆಚ್ಚಿನ ಕಾರ್ ಇರಬಹುದೇನೋ ಅಂದುಕೊಂಡರೆ ಅದು ತಪ್ಪು. ಅದರ ನಿಜವಾದ ಕಾರಣ ಬೇರೆಯದೇ ಇರುತ್ತೆ. ಎಡಗಡೆಯ ಮನೆಯವನು ಹೊಂಡಾ ಸಿಟಿ, ಬಲಗಡೆಯ ಮನೆಯವನು ಮಹೇಂದ್ರಾ ಲೊಗಾನ್ ನಿಲ್ಲಿಸಿದ್ರೆ, ಮಧ್ಯದವನಿಗೆ ಬರೀ ಆಲ್ಟೋ ಇಡಲಷ್ಟೆ ಜಾಗ ಇರೋದ್ರಿಂದ ಅವನು ಅದನ್ನು ತಗೊಂಡಿರುತ್ತಾನೆ!

ಗಾಡಿ ತಗೊಳ್ಳೋದು, ಅದನ್ನು ನಿಲ್ಲಿಸಲು ಜಾಗ ಹೊಂದಿಸೋದು ಒಂದು ಥರದ ಕಷ್ಟವಾದ್ರೆ, ಗಾಡಿ ಬಿಡೋದು ಇನ್ನೊಂದು ಥರದ ಕಷ್ಟ. ಇಂಟರ್ನ್ಯಾಶನಲ್ ಲೈಸನ್ಸ್ ಇದ್ದ ಹಾಗೆ ಬೆಂಗಳೂರಿನಲ್ಲಿ ಗಾಡಿ ಬಿಡಲು ಬೇರೆಯದೇ ಲೈಸೆನ್ಸ್ ಇದೆ! ಆದ್ರೆ ಅದು ಆರ್.ಟಿ.ಓ ನವರು ನೀಡುವಂಥ ಲೈಸೆನ್ಸ್ ಅಲ್ಲ. ಅದು ನಿಮ್ಮ ಅನುಭವದಿಂದ ಸಿಗೋ ಲೈಸೆನ್ಸ್. ಹಾಗಂತ ಇಲ್ಲಿ ತೀರಾ ಕಷ್ಟಕರ ಟ್ರಾಫಿಕ್ ನಿಯಮ ಏನಿಲ್ಲ. ಇಲ್ಲಿನವರು ಪಾಲಿಸೋದು ಒಂದೇ ನಿಯಮ. ಖಾಲಿ ಜಾಗ ನೋಡಿ ಹೋಗ್ತಾ ಇರೋದು! ಅದು ರಸ್ತೆಯೇ ಆಗಿರಬೇಕು ಅಂಥೇನಿಲ್ಲ. ಫುಟ್ಪಾತ್ ಆದ್ರೂ ನಡೆಯುತ್ತೆ, ಡಿವೈಡರ್ ಆದರೂ ನಡೆಯುತ್ತೆ!

ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ದರ ಗಗನಕ್ಕೇರಿರುವುದರಿಂದಲೋ ಏನೋ, ಇಲ್ಲಿನವರಿಗೆ ಒಂದಿಂಚು ಜಾಗ ಬಿಡಲೂ ಇಷ್ಟ ಇರಲ್ಲ. ಟ್ರಾಫಿಕ್ ಸಿಗ್ನಲ್’ನಲ್ಲಿ ನಿಂತಿರುವಾಗ ನಿಮ್ಮ ಮುಂದೆ ಒಂದೇ ಒಂದು ಇಂಚು ಜಾಗ ಇದ್ದರೂ ಹಿಂದಿನವನು ಅದನ್ನು ಗಮನಿಸಿ ಹಾರ್ನ್ ಹಾಕುತ್ತಾನೆ. ವೋಲ್ವೊದ ಹಿಂದೆ ದೊಡ್ಡದಾಗಿ ಹಾಕಿರುವ ‘ಐದು ಅಡಿ ಅಂತರವಿರಲಿ’ ಅನ್ನೋದನ್ನು ಎರಡೇ ಇಂಚು ದೂರದಿಂದ ಒಬ್ಬ ಓದುತ್ತಿರುತ್ತಾನೆ!

ಬೆಂಗಳೂರಿನ ಬಹುತೇಕ ವಾಹನಗಳಿಗೆ ಸೈಡ್ ಮಿರರ್ ಇರುವುದೇ ಇಲ್ಲ. ಇದ್ದರೂ ಬಹಳಷ್ಟು ಜನ ಅದನ್ನು ಬಳಸುವುದೇ ಇಲ್ಲ. ಎಲ್ಲಾ ವಾಹನಗಳೂ ತುಂಬಾ ಹತ್ತಿರದಲ್ಲಿ ಚಲಿಸುವುದರಿಂದ ಸೈಡ್ ಮಿರರ್’ಗಳು ಒಂದಕ್ಕೊಂದು ತಾಗಿ ಒಡೆದು ಹೋಗುವುದು ಒಂದು ಕಾರಣವಾದರೆ, ಸೈಡ್ ಮಿರರ್ ಇದ್ದರೂ ಅದೇನೂ ಅಷ್ಟಾಗಿ ಉಪಯೋಗಕ್ಕೆ ಬರಲ್ಲ ಅನ್ನೋದು ಮತ್ತೊಂದು ಕಾರಣ. ನೀವು ನಿಮ್ಮ ಪಾಡಿಗೆ ಚಲಿಸುತ್ತಿದ್ದೀರಾ ಅಂದುಕೊಳ್ಳಿ. ಒಮ್ಮೆ ಹಾಗೆ ಸುಮ್ಮನೆ ಎಡಗಡೆಯ ಕನ್ನಡಿ ನೊಡಿದಾಗ ಒಬ್ಬ ಬೈಕ್ ಸವಾರ ರೊಂಯ್ಯನೆ ಬರುವುದು ಕಾಣಿಸುತ್ತೆ ನಿಮಗೆ. ಕ್ಷಣಮಾತ್ರದಲ್ಲಿ ಅದೇ ಬೈಕ್ ಸವಾರ ನಿಮ್ಮ ವಾಹನದ ಬಲಗಡೆಯ ಕನ್ನಡಿಯಲ್ಲಿ ಕಾಣಿಸಿಕೊಳ್ಳುತ್ತಾನೆ. ಮತ್ತೊಮ್ಮೆ ಎಡಗಡೆಯ ಕನ್ನಡಿಯಲ್ಲಿ ಕಾಣಿಸಿ ಅಮೇಲೆ ಎರಡೂ ಕನ್ನಡಿಯಲ್ಲಿ ಕಾಣಿಸೋದೇ ಇಲ್ಲ! ಯಾಕಂದ್ರೆ ಅವನು ನಿಮ್ಮ ಕಾರ್ ಬಾನೆಟ್ ಮುಂದಿರುತ್ತಾನೆ!

ಬೆಂಗಳೂರಿನವ್ರಿಗೆ ಯಾವ ಏರಿಯಾದಲ್ಲಿ ಎಷ್ಟು ಸ್ಪೀಡಾಗಿ ಓಡಿಸಬಹುದು ಅಂತ ಚೆನ್ನಾಗಿ ಗೊತ್ತು. ಅದೇನು ಮಹಾ ಎಲ್ಲಾ ಊರಿನಲ್ಲೂ ಸ್ಪೀಡ್ ಲಿಮಿಟ್ ಎಷ್ಟು ಅಂತ ಬೋರ್ಡ್ ಹಾಕಿರುತ್ತಾರೆ ಅಂತ ನೀವು ಅಂದುಕೊಳ್ಳುತ್ತಿರುತ್ತೀರಾ! ಆದರೆ ಕಾರಣ ಬೇರೆಯದೇ ಇದೆ. ಬೆಂಗಳೂರಿನ ಟ್ರಾಫಿಕ್ ಪೋಲಿಸರು ತುಂಬಾ ಶಿಸ್ತಿನವರು. ಅವರು ದಿನಾಲೂ ಸಮಯಕ್ಕೆ ಸರಿಯಾಗೆ ಅದದೇ ಜಾಗದಲ್ಲಿ ತಮ್ಮ ವೇಗ ನಿಯಂತ್ರಕ ವಾಹನದೊಂದಿಗೆ ನಿಮ್ಮನ್ನು ಸ್ವಾಗತಿಸಿರುತ್ತಾರೆ. ಹತ್ತೂವರೆಯಿಂದ ಹನ್ನೊಂದರ ತನಕ ಹೆಬ್ಬಾಳ ಫ್ಲೈ ಓವರ್, ಹನ್ನೊಂದರಿಂದ ಹನ್ನೆರಡು ನಾಗವಾರ ಹೀಗೆ ಅವರು ವೇಳಾಪಟ್ಟಿಯ ಪ್ರಕಾರ ಶಿಸ್ತಿನಿಂದ ತಮ್ಮ ಕೆಲಸ ಮಾಡುತ್ತಿರುತ್ತಾರೆ! ಇದರಿಂದಾಗಿ ಜನರಿಗೆ ಯಾವ ಸಿಗ್ನಲ್ ಆದ ಮೆಲೆ ಎಷ್ಟು ಸ್ಪೀಡ್’ನಲ್ಲಿ ಹೋಗಬೇಕು ಅನ್ನೋದು ಚೆನ್ನಾಗಿ ಗೊತ್ತಿರುತ್ತೆ. ‘ಕುರಿಗಳು ಸಾರ್ ಕುರಿಗಳು’ ಅಂತ ಕವಿ ನಿಸಾರ್ ಅಹಮದ್ ಅವರು ಬರೆದಿರೊದು ಬಹುಶಃ ಬೆಂಗಳೂರಿನ ವಾಹನ ಚಾಲಕರನ್ನು ನೋಡಿಯೇ. ತುಂಬಾ ಟ್ರಾಫಿಕ್ ಜಾಮ್ ಇದ್ದಾಗ ಒಂದು ವೇಳೆ ಯಾರಾದರೂ ಒಬ್ಬ ಬೈಕ್ ನವನು ಪಕ್ಕದ ಸರ್ವಿಸ್ ರೋಡ್’ನಲ್ಲಿ ಹೋದರೆ ಅವನ ಹಿಂದೆಯೇ ಹತ್ತಾರು ಬೈಕ್’ನವರು ಅವನ ಹಿಂದೆಯೆ ಹೊರಡುತ್ತಾರೆ. ಒಬ್ಬ ಬೈಕ್’ನವನು ಫುಟ್ ಪಾತ್ ಮೇಲೆ ಬೈಕ್ ಏರಿಸಿ ಹೊರಟರೆ ಸಾಕು, ಅವನ ಹಿಂದೆ ಹತ್ತಾರು ಬೈಕ್’ನವರು ಅವನನ್ನು ಹಿಂಬಾಲಿಸುತ್ತಾರೆ. ಜನರು ಹೀಗೆ ಕುರಿಗಳ ಹಾಗೆ ಹೋಗದೇ ಇರುವುದು ಮಳೆ ಬಂದಾಗ ಮಾತ್ರ. ತುಂಬಾ ಮಳೆ ಬಂದು ರಸ್ತೆಯ ಹೊಂಡಗಳಲ್ಲಿ ನೀರು ತುಂಬಿ ಕೊಂಡಿದ್ದಾಗ ಮಾತ್ರ ಹಿಂದಿನವನು, ಹುಷಾರಾಗಿ ಮುಂದೆ ಹೋಗುವ ಚಾಲಕನನ್ನು ಗಮನಿಸುತ್ತಿರುತ್ತಾನೆ. ಅವನು ಮುಂದೆ ಹೋದ ಮೇಲೆ ಯಾವುದೇ ಹೊಂಡಕ್ಕೆ ಬಿದ್ದಿಲ್ಲ ಅನ್ನೋದು ಖಾತ್ರಿಯಾದ ಮೇಲೆಯೇ ಇವನು ಮುಂದೆ ಹೋಗೋದು!

ಬೆಂಗಳೂರಿನಲ್ಲಿ ವಾಹನ ಚಲಾಯಿಸುವವರಿಗೆ ಬಹು ದೊಡ್ಡ ಚ್ಯಾಲೆಂಜ್ ಅಂದ್ರೆ ವನ್ ವೇ ಮತ್ತು ಯೂ ಟರ್ನ್ ಗಳು. ಸಮಯಾಧಾರಿತ ವನ್ ವೇ ಏನಾದರೂ ಇದ್ದರೆ ಅದು ಬೆಂಗಳೂರಿನಲ್ಲಿ ಮಾತ್ರ. ಕೆಲವು ರಸ್ತೆಗಳು ಬೆಳಿಗ್ಗೆ ಎಂಟರಿಂದ ಹತ್ತರವರೆಗೆ ಮತ್ತೆ ಸಂಜೆ ನಾಲ್ಕರಿಂದ ಆರರವರೆಗೆ ವನ್ ವೇ ಆಗಿರುತ್ತವೆ. ಶನಿವಾರ, ಭಾನುವಾರ ವನ್ ವೇಗೆ ರಜ, ಥೇಟ್ ಐಟಿ ಹುಡುಗರ ಹಾಗೆ. ಈ ಯೂ ಟರ್ನ್ ಗಳೂ ತುಂಬಾ ಡೇಂಜರ್. ಮಾತಿನಲ್ಲಿ ಮಗ್ನರಾಗಿ ಒಂದು ಯೂ ಟರ್ನ್ ಮಿಸ್ ಆದರೆ ದೇವರೆ ಗತಿ. ಮುಂದಿನ ಯೂ ಟರ್ನ್ ಬರಲು ಮತ್ತೆ 3 ಕಿ.ಮೀ ಕಾಯಬೇಕು. ಅತಿ ದೊಡ್ಡ ಯೂ ಟರ್ನ್ ತೆಗೆದುಕೊಂಡ ದಾಖಲೆ ಏನಾದ್ರೂ ಇದ್ದಿದ್ರೆ ಅದು ನನ್ನದೇ ಇರಬೇಕು. ಒಂದು ಸಲ ಹೆಬ್ಬಾಳ ಫ್ಲೈ ಓವರ್ ಬಳಿ ಒಂದು ಯೂ ಟರ್ನ್ ಮಿಸ್ ಮಾಡಿಕೊಂಡು ಮುಂದೆ ಹೋಗಿ ಇನ್ನೊಂದು ಫ್ಲೈ ಓವರ್ ಹತ್ತಿದ್ದೆ. ಆ ಫ್ಲೈ ಓವರ್ ಸೀದಾ ಯಲಹಂಕಕ್ಕೆ ಹೋಗಿತ್ತು. ಎಂಟು ಕಿ.ಮೀ ಹೋಗಿ ಮತ್ತೆ ಯೂ ಟರ್ನ್ ಹೊಡೆದು ಬರುವಷ್ಟರಲ್ಲಿ ಹದಿನಾರು ಕಿ.ಮೀ ಆಗಿತ್ತು! ವಾಹನ ಚಲಾಯಿಸೋದೆ ದೊಡ್ಡ ಕಷ್ಟ ಅಂದುಕೊಂಡರೆ, ಅದಕ್ಕಿಂತ ಕಷ್ಟ ಗಾಡಿಯನ್ನು ಪಾರ್ಕ್ ಮಾಡೋದು. ಯಾವುದೋ ಅಂಗಡಿಯ ಪಕ್ಕ ಹೋಗಿ ಗಾಡಿ ನಿಲ್ಲಿಸಿ ಹಾಲು ತರಲು ಹೋದಿರಿ ಅಂದುಕೊಳ್ಳಿ. ನೀವು ವಾಪಾಸ್ ಬಂದಾಗ ನಿಮ್ಮ ಬೈಕ್ ನ ಎಡಗಡೆ ಒಬ್ಬ, ಬಲಗಡೆ ಒಬ್ಬ, ಹಿಂದೆ ಒಬ್ಬ ಬೈಕ್ ನಿಲ್ಲಿಸಿರುತ್ತಾನೆ. ನೀವು ಕಷ್ಟಪಟ್ಟು ಆ ಬೈಕ್ ಗಳನ್ನು ಬದಿಗೆ ಸರಿಸಿ ಬೈಕ್ ಹತ್ತಿ ಸ್ಟಾರ್ಟ್ ಮಾಡೋದರೊಳಗೆ ಆ ಎರಡೂ ಬೈಕ್ ಚಾಲಕರು ರೊಂಯ್ ಅನ್ನುತ್ತಾ ಹೋಗಿರುತ್ತಾರೆ!

ಯಾರಾದರೂ ಮೈಲೇಜ್ ಎಷ್ಟು ಕೊಡುತ್ತೆ ಅಂತ ಕೇಳಿದಾಗ ಹೈವೆನಲ್ಲಾ ಅಥವಾ ಸಿಟಿ ಒಳಗಾ? ಅಂತ ಹೇಳೋದು ಮಾಮೂಲು. ಆದ್ರೆ ಇಲ್ಲಿ ಐಟಿ ಪಾರ್ಕ್ ನಲ್ಲಿ ಕೆಲಸ ಮಾಡುವವರಿಗೆ ನೀವು ಮೈಲೇಜ್ ಎಷ್ಟು ಕೊಡುತ್ತೆ ಅಂತ ಕೇಳಿದ್ರೆ, ಕ್ಯಾಂಪಸ್ ಒಳಗಾ ಅಥವ ಹೊರಗಾ ? ಅನ್ನೋ ಪ್ರಶ್ನೆ ಕೇಳುತ್ತಾರೆ. ಬಹುತೇಕ ಐಟಿ ಪಾರ್ಕ್’ಗಳ ಮಲ್ಟಿ ಲೆವಲ್ ಕಾರ್ ಪಾರ್ಕಿಂಗ್’ನಲ್ಲಿ ಮೇಲಿನ ಅಂತಸ್ತಿನಿಂದ ಕೆಳಗೆ ಬರೋ ಅಷ್ಟರಲ್ಲೇ ಒಂದು ಕಿ.ಮೀ ಆಗಿರುತ್ತೆ! ಕುಟುಂಬ ಸಮೇತ ತಿರುಗಾಡಲು ಹೊರಟಾಗಲೂ ಈ ಪಾರ್ಕಿಂಗ್ ಸಮಸ್ಯೆ ದೊಡ್ಡದಾಗಿ ಕಾಡೋದಿದೆ. ಬಹಳಷ್ಟು ಸಲ ಕಾರನ್ನು 2 ಕಿ.ಮೀ ದೂರ ನಿಲ್ಲಿಸಿ ನಡೆದುಕೊಂಡೇ ಹೋಗಬೇಕಾಗುತ್ತೆ. ನಡೆದೆ ಹೋಗಿ ಸುತ್ತಾಡಿ ವಾಪಾಸ್ ಬಂದಾಗ ಬೆಂಗಳೂರಿನ ವಾಹನ ಚಾಲಕರಲ್ಲಿ ಮೂಡುವ ಕಟ್ಟ ಕಡೆಯ ಪ್ರಶ್ನೆ – “ನಾನು ಗಾಡಿ ಎಲ್ಲಿ ಪಾರ್ಕ್ ಮಾಡಿದ್ದೆ!”

Sandeep Kamat

sandeepkamath82@yahoo.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!