ಅಂಕಣ

ಬದಲಾವಣೆ ಆಗಲಿ, ಅದು ನಮ್ಮಿಂದಲೇ ಶುರುವಾಗಲಿ…

ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ
ಕರಾವಳಿಗೆ ಮುತ್ತ ನಿಡುವ ಪೆರ್ದೆರೆಗಳ ಗಾನದಲ್ಲಿ
ಬಯಲು ತುಂಬ ಹಸಿರ ದೀಪ ಹಚ್ಚಿ ಹರಿವ ನದಿಗಳಲ್ಲಿ
ನೀಲಿಯಲ್ಲಿ ಹೊಗೆಯ ಚಲ್ಲಿ ಯಂತ್ರ ಘೋಷವೇಳುವಲ್ಲಿ
ಕಣ್ಣು ಬೇರೆ, ನೋಟವೊಂದು- ನಾವು ಭಾರತೀಯರು.
ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಸಾಲುಗಳು ಇದು.. ಗಣರಾಜ್ಯೋತ್ಸವದ ಹೊಸ್ತಿಲಿನಲ್ಲಿ ಇರುವ ನಾವೆಲ್ಲರೂ ಅವರ ಈ ಸಾಲುಗಳನ್ನು ನೆನೆಯಲೇಬೇಕು… ಜೊತೆಗೆ ಒಂದಷ್ಟು ನಮ್ಮನ್ನು, ನಾವು ಬದುಕುತ್ತಿರುವ ಪರಿಯನ್ನು ಮತ್ತು ಸುತ್ತಲಿನ ಸ್ವಚ್ಛ ಸಮಾಜದ ಚಿಂತನೆಯನ್ನು ಅವಶ್ಯಕವಾಗಿ ಮಾಡಲೇಬೇಕು.. ಯಾಕೆಂದರೆ ಒಂದು ದೇಶ ಬೆಳಕಿನಿಂದ ಹೊಳೆಯಲು ಕೋಟಿ ಸಣ್ಣ ದೀಪಗಳು ಬೇಕು.. ಅಂತೆಯೇ ಭಾರತ ಪ್ರಕಾಶಿಸಲು ಬೇಕಾದ ದೀಪ ಹಚ್ಚಬೇಕಾದವರು ನಾವೇ ಅಲ್ಲವೆ..??

ಸಾವಿರ ಭಾಷೆ, ಸಾವಿರ ಸಂಸ್ಕೃತಿ, ಸಾವಿರ ಧರ್ಮ ಹೊಂದಿ, ನೂರಾರು ಕೋಟಿ ಮನಸ್ಸುಗಳನ್ನು ಹೊಂದಿದ ಅವಿಭಕ್ತ ಕುಟುಂಬ ನನ್ನ ದೇಶ.. ಅದು ಭಾರತ.. ನಾವೆಲ್ಲರೂ ಒಂದೇ ಜಾತಿ, ಒಂದೇ ಮತ, ಒಂದೇ ಕುಲ, ನಾವು ಭಾರತೀಯರು… ಇಲ್ಲಿ ಕೇಸರಿಯ ತ್ಯಾಗವಿದೆ, ಬಿಳಿಯ ಶುಭ್ರ ಶಾಂತಿಯಿದೆ, ಹಸಿರಿನ ಸಮೃದ್ಧಿಯಿದೆ, ಚಕ್ರದಂತೆ ವೇಗವಾಗಿ ಸಾಗುತ್ತಿರುವ ಪ್ರಗತಿಯಿದೆ.. ಅದಕ್ಕೊಂದು ಜೈ ಹಿಂದ್.. ವಂದೇ ಮಾತರಂ…ಎಷ್ಟೋ ಜನರ ತ್ಯಾಗದಿಂದ ನಗುತ್ತಿದೆ ಈ ನಮ್ಮ ದೇಶ.. ದೇಶ ಕಟ್ಟೋದಕ್ಕೆ ಎಷ್ಟು ಕಷ್ಟಗಳನ್ನು ಹಿರಿಯರು ಅನುಭವಿಸಿದ್ದಾರೆ ಎನ್ನುವುದನ್ನು ಒಮ್ಮೆ ಇತಿಹಾಸ ನೋಡಿದರೆ ತಿಳಿಯುತ್ತೆ.. ಸತ್ಯಾಗ್ರಹಗಳು, ಕ್ರಾಂತಿಕಾರಿ ಹೆಜ್ಜೆಗಳು, ಸಂಗ್ರಾಮಗಳು, ಒಂದೇ ಎರಡೇ.. ಇತಿಹಾಸದ ಪುಟದ ಪ್ರತೀ ಅಕ್ಷರಗಳಲ್ಲೂ ಅದನ್ನು ನಾವು ಕಾಣಬಹುದು.. ಹೋರಾಟದ ಸಾವು ನೋವಲ್ಲೂ ಸ್ವಾತಂತ್ರ್ಯದ ಹುಮ್ಮಸ್ಸು ಇತ್ತು.. ವಿಜಯೀ ವಿಶ್ವ ತಿರಂಗಾ ಪ್ಯಾರಾ ಅನ್ನುತ್ತ, ವಂದೇ ಮಾತರಂ ಎಂದು ಘೋಷಣೆ ಕೂಗುತ್ತಾ ಸ್ವಾತಂತ್ರ್ಯ ಎಂದು ಕೂಗಿ ಪಡೆದುಕೊಂಡೆವು.. ಕೊನೆಗೂ ಅದು ಸಿಕ್ಕಿತು.. ಸಂವಿಧಾನ ರಚನೆ ಆಯ್ತು.. ಇವತ್ತಿಗೆ ಅದು ಸಿಕ್ಕಿ ಬರೋಬ್ಬರಿ ಅರವತ್ತಾರು ಕಳೆದು ಅರವತ್ತೇಳನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ.. ಕೋಟಿ ಕೋಟಿ ಭಾರತೀಯರಿಗೆ ಶುಭಾಶಯಗಳು…

ಕೆಲವು ತಿಂಗಳಿನ ಹಿಂದೆ ಮೌಂಟ್ ಕಾರ್ನೆಲ್ ಕಾಲೇಜ್ ನಲ್ಲಿ ರಾಹುಲ್ ಗಾಂಧಿ ಭಾಷಣದಲ್ಲಿ ಆದ ಯಸ್, ನೋ ಸಂಗತಿಗಳು ಎಲ್ಲರಿಗೂ ಗೊತ್ತು.. ಸ್ವಚ್ಚ ಭಾರತ ಅಭಿಯಾನ ಕೇಂದ್ರ ಸರ್ಕಾರ ಮಾಡುವ ಕಾರ್ಯಕ್ರಮವೇ..?? ಇದು ಕೆಲಸ ಮಾಡುತ್ತಿದೆಯೇ..?? ಎಂದಾಗ ವಿದ್ಯಾರ್ಥಿಗಳೆಲ್ಲರೂ ಜೋರಾಗಿ ಹೌದು ಎಂದು ಕೂಗಿದರು.. ವಿದ್ಯಾರ್ಥಿಗಳಿಗೆ ರಾಜಕೀಯದ ಬೀಜ ಬಿತ್ತಲು ಹೋದರೆ, ಅಥವಾ ದಾರಿ ತಪ್ಪಿಸುವ ಕೆಲಸ ಮಾಡ ಹೊರಟರೆ ಪರಿಣಾಮ ಏನಾಗುತ್ತದೆ ಎಂಬ ಸ್ಪಷ್ಟ ತಿಳುವಳಿಕೆ ನೀಡಿದ ಘಟನೆ ಇದು.. ಆದರೆ ಒಂದು ವಿಚಾರವನ್ನು ಹುಟ್ಟುಹಾಕುವ ಪ್ರಶ್ನೆ ಅದು.. ಸ್ವಚ್ಚ ಭಾರತ ಅಭಿಯಾನ ಮೋದಿ ಅವರ ನೇತೃತ್ವದಲ್ಲಿ ಕೆಲಸ ಸರಿಯಾಗಿ ಮಾಡುತ್ತಿದೆಯೇ ಎಂಬ ಪ್ರಶ್ನೆಗೆ ನಾನೂ ಹೌದು ಎಂದೇ ಉತ್ತರಿಸುತ್ತೇನೆ.. ಆದರೆ ಸ್ವಚ್ಚ ಭಾರತ ಅಭಿಯಾನ ಕೇಂದ್ರ ಸರ್ಕಾರ ಮಾಡುವ ಕಾರ್ಯಕ್ರಮವೇ..?? ಎಂಬ ಪ್ರಶ್ನೆ ಇದೆಯಲ್ಲ, ಅದಕ್ಕೆ ಉತ್ತರಿಸುವುದೇ ಕಷ್ಟ.. ಯಾಕೆಂದರೆ ಒಂದು ಸರ್ಕಾರ ದೇಶವನ್ನು ಸ್ವಚ್ಚವಾಗಿಡಲು ಒಂದು ಯೋಜನೆ ರೂಪಿಸುವ ಪರಿಸ್ಥಿತಿ ಬಂದಿದೆ ಎಂದಾಗ ಒಮ್ಮೆ ವಿಚಾರ ಮಾಡಲೇ ಬೇಕು.. ನಮ್ಮ ಕೆಲವು ಜವಾಬ್ದಾರಿಯನ್ನು ನಾವು ಮರೆತಿದ್ದೇವೆ ಎಂಬುದೇ ಅರ್ಥ.. ಇಲ್ಲಿ ನಾನು ಯಾವುದೇ ರಾಜಕೀಯದ ಅಥವಾ ರಾಜಕೀಯ ಪಕ್ಷದ ಪರ ಬ್ಯಾಟಿಂಗ್ ಮಾಡುತ್ತಿಲ್ಲ.. ಆದರೆ ನಮ್ಮೊಳಗಿನ ಸಮಸ್ಯೆಗಳ ಅರಿವು ಎಲ್ಲರಿಗೂ ಸರಿಯಾಗಿ ಆಗಿಲ್ಲ ಎನ್ನುತ್ತಿದ್ದೇನೆ.. ನಮ್ಮ ಜವಾಬ್ದಾರಿ ನಿರ್ವಹಣೆ ಇನ್ನೂ ಬೇಕು ಎಂಬುದು ನನ್ನ ಅಭಿಪ್ರಾಯ…

ಒಮ್ಮೆ ಎಲ್ಲ ರಾಜಕೀಯವನ್ನು ಬದಿಗಿಟ್ಟು ದೇಶ, ನಾವು ಮತ್ತು ನಮ್ಮ ಜವಾಬ್ದಾರಿ ಎಂದು ಯೋಚಿಸಿ ನೋಡಿ.. ಸುಂದರ ದೇಶ ನಮ್ಮ ಕನಸು, ಆ ಸುಂದರ ದೇಶ ಎಂದಿಗೂ ಸ್ವಚ್ಚವಾಗಿರಬೇಕು.. ಆದರೆ ಎಷ್ಟು ಊರುಗಳು, ಪೇಟೆಗಳು, ಪೇಟೆಯ ಗಲ್ಲಿಗಳು ಸ್ವಚ್ಚವಾಗಿದೆ..?? ಅದರ ಬಗ್ಗೆ ಮಾತನಾಡಿದರೆ ಮುನ್ಸಿಪಲ್’ಗೆ ಬೈಗುಳ ಸುರಿಸುವ ನಾವು ಎಷ್ಟು ಕಸವನ್ನು ಕಸದ ಬುಟ್ಟಿಗೆ ಹಾಕಿದ್ದೇವೆ..?? ಹೊರಗೆ ಹಾಕುವ ಕಸಗಳನ್ನು ಸರಿಯಾದ ಸ್ಥಿತಿಯಲ್ಲಿ ಮತ್ತು ಸರಿಯಾದ ಜಾಗದಲ್ಲಿ ಹಾಕಿದರೆ ಆಗ ಮುನ್ಸಿಪಲ್ ಕೆಲಸಗಾರರಿಗೂ ಸಹ ಸುಲಭವಲ್ಲವೆ..?? ಸುತ್ತ ಮುತ್ತ ಕಸದ ಡಬ್ಬಿ ಕಾಣದಿದ್ದರೆ ಕಸದ ಡಬ್ಬಿ ಸಿಗುವ ತನಕ ಕಾಣುವ ಕಸವನ್ನು ಹಿಡಿದುಕೊಳ್ಳುವ ತಾಳ್ಮೆ ನಮ್ಮಲ್ಲಿ ಇಲ್ಲ ಎಂದಾದರೆ ನಮಗೆ ಅವರನ್ನು ಬೈಯ್ಯುವ ಹಕ್ಕು ಇದೆಯೇ..?? ನಮ್ಮ ಸಹಕಾರ ಇಲ್ಲದೆ ಸ್ವಚ್ಚ ಭಾರತ ನಿರ್ಮಾಣ ಹೇಗೆ ಸಾಧ್ಯ…?? ನಾವು ಕಸವನ್ನು ಕಂಡಲ್ಲಿಯೇ ಬಿಸಾಡುವ ನಿರ್ಲಕ್ಷ್ಯವನ್ನು ಬಿಡಬೇಕು ಅಲ್ಲವೇ… ಆ ಜವಾಬ್ದಾರಿಯನ್ನು ನಿರ್ವಹಿಸುವತ್ತ ಸಾಗಬೇಕು..

ಇದು ಒಂದು ಸಣ್ಣ ಉದಾಹರಣೆ ಅಷ್ಟೇ.. ಇಂತಹ ಜವಾಬ್ದಾರಿಗಳು ಹಲವಾರಿದೆ.. ಮೊನ್ನೆ ಗೇಳೆಯನೊಬ್ಬ ದೇಶ ಉದ್ಧಾರವಾಗಬೇಕು ಅಥವಾ ದೇಶ ಉನ್ನತಿಯಾಗಬೇಕು ಎಂದರೆ ಆ ದೇಶದ ಸರ್ಕಾರ ಒಳ್ಳೆಯದಿರಬೇಕು, ದೇಶದ ನೂರಿಪ್ಪತ್ತು ಕೋಟಿ ಜನರಲ್ಲಿ ಬದಲಾವಣೆ ಉಂಟುಮಾಡುವದು ಬಹಳ ಕಷ್ಟ ಅದರ ಬದಲು MLA, MP ಗಳು ಬದಲಾದರೆ ದೇಶ ಬದಲಾಗುತ್ತೆ, ಸರ್ಕಾರ ಸರಿಯಿದ್ದರೆ ದೇಶ ಸರಿಯಾಗಿರುತ್ತೆ ಎನ್ನುತ್ತಿದ್ದ.. ನಿಜ ಆದರೆ ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ಕಾರವನ್ನು ನಿರ್ಧರಿಸುವವರು ನಾವೇ ಅಲ್ಲವೇ..?? ಜಾಗೃತಿ ನಮ್ಮಲ್ಲಿ ಮೂಡಿದರೆ ದೇಶದಲ್ಲಿ ಮೂಡುತ್ತದೆ ಅಲ್ಲವೇ..?? ನಾವು ಮತಹಾಕಿ ಕಳುಹಿಸಿದವ ಕೆಲಸ ಉತ್ತಮವಾಗಿ ಮಾಡದಿದ್ದರೆ ತಪ್ಪು ನಮ್ಮದೇ ಅಲ್ಲವೇ.. ಆ ನಿಟ್ಟಿನಲ್ಲಿ ಒಂದು ಚಿಂತನೆ ಮಾಡುವುದು ಅತ್ಯಂತ ಅವಶ್ಯಕವಾದುದು ಎಂಬುದು ನನ್ನ ಅಭಿಪ್ರಾಯ..

ಆದರೆ ಆ ಬದಲಾವಣೆ ಅಷ್ಟು ಸುಲಭ ಅಲ್ಲ.. ಕೇವಲ ನಮ್ಮಲ್ಲಿ ಆ ಬದಲಾವಣೆ ಬಂದರೆ ಸಾಲದು ಸುತ್ತಮುತ್ತಲಿನ ಪರಿಸರದಲ್ಲೂ ಅದು ಮೂಡಲೇಬೇಕು.. ಕೆಲವು ದಿನಗಳ ಹಿಂದೆ ವೃದ್ಧರೊಬ್ಬರು ರಿಕ್ಷಾ ನಿಲ್ದಾಣದ ಕಡೆ ಹೋಗುತ್ತಿದ್ದರು. ಅವರು ಎಲ್ಲಿಗೋ ಹೋಗುವ ತರಾತುರಿಯಲ್ಲಿ ಇದ್ದವರು.. ಆ ಇಳಿವಯಸ್ಸಿನಲ್ಲೂ ನಡೆಯುತ್ತಿದ್ದ ವೇಗವನ್ನು ನೋಡಿದರೆ ಯಾವುದೋ ಮುಖ್ಯವಾದ ಕೆಲಸದಲಿ ಇದ್ದರು ಎಂಬುದನ್ನು ಹೇಳಬಹುದೇನೋ.. ರಿಕ್ಷಾ ನಿಲ್ದಾಣ ಒಂದು ಐವತ್ತು ಮೀಟರ್ ದೂರವಿದ್ದಿರಬಹುದು ಅಷ್ಟರಲ್ಲಿ ಅದೇ ದಾರಿಯಲ್ಲಿ ಹೋಗುತ್ತಿದ್ದ ಒಂದು ಆಟೋದೆಡೆಗೆ ಸನ್ನೆ ಮಾಡಿದರು, ಆಟೋದವ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ, ಆದರೆ ಇವರಿಗೆ ಅಲ್ಲಿಯವರೆಗೆ ಹೋಗಲು ಸ್ವಲ್ಪ ಸಮಯ ಹಿಡಿಯಿತು, ಅಷ್ಟರಲ್ಲಿ ಆ ಆಟೋದವ ಹೊರಟುಬಿಟ್ಟ, ತಿರುಗಿ ಆಟೋ ನಿಲ್ದಾಣಕ್ಕೆ ಬಂದ ಅವರು ಸರತಿ ಸಾಲಿನಲ್ಲಿ ಎದುರು ಇದ್ದ ಆಟೋ ಹತ್ತಿ ವಿಳಾಸ ಹೇಳಿದರು, ಆದರೆ ಆಟೋದವ ಬರಲು ನಿರಾಕರಿಸಿದ, ಅದಕ್ಕೆ ಆತ ನೀಡಿದ ಕಾರಣ ಅವರು ರಸ್ತೆಯಲ್ಲಿ ಹೋಗುತ್ತಿದ್ದ ಆಟೋಗೆ ಕೈ ಮಾಡಿ ನಿಲ್ಲಿಸಿದ್ದರು ಎಂಬುದು.. ಇದೇ ರೀತಿಯ ಘಟನೆ ಹಲವು ಜನರಿಗೆ, ಹಲವು ರೀತಿಗಳಲ್ಲಿ ಆಗಿರಬಹುದು.. ಇಲ್ಲಿ ನನ್ನ ಪ್ರಶ್ನೆ ಇಷ್ಟೇ.. ಯಾವುದಾದರೂ ತುರ್ತು ಕೆಲಸದ ನಿಮಿತ್ತ ಹೊರಟಾಗ ಅಥವಾ ರೋಗಿಯನ್ನು ಆಸ್ಪತ್ರೆಗೆ ಸೇರಿಸುವ ಪರಿಸ್ಥಿಯಲ್ಲಿ ಇರುವಾಗ ಈ ರೀತಿ ಪರಿಸ್ಥಿತಿ ಎದುರಾದರೆ..?? ನಮ್ಮ ಕೆಲಸದ ಜೊತೆ ಸಾಮಾಜಿಕ ಕಳಕಳಿ ಸಹ ಬೇಕಲ್ಲವೆ..??

ಸಮಾಜ ಸುಂದರವಾಗಿರಲು ದೊಡ್ಡ ಚಳುವಳಿ ಮಾಡಬೇಕಿಲ್ಲ, ಅದನ್ನು ನಮ್ಮ ಸ್ವಾರ್ಥದಿಂದಲೇ ಸಾಧಿಸಬಹುದು.. ನಮ್ಮ ಮನಸ್ಸು ಸ್ವಲ್ಪ ಬದಲಾಯಿಸಿಕೊಂಡರೆ ಸಾಕು.. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡರೆ ದೇಶ ಸ್ವಚ್ಚವಾಗುತ್ತೆ, ನಮ್ಮ ಸುತ್ತಮುತ್ತಲಿನ ಜನರ ಜೊತೆ ಆತ್ಮೀಯರಾಗಿದ್ದರೆ ಎಲ್ಲರೂ ಸ್ನೇಹಿತರೇ, ನಮ್ಮ ನಮ್ಮ ಕರ್ತವ್ಯದಲ್ಲಿ ನಿಷ್ಠರಾಗಿದ್ದಾರೆ ವ್ಯವಸ್ಥೆ ಸರಿಯಾಗುತ್ತೆ, “ದೇಶ್ ಬದಲ್’ನೇ ಕೇ ಲಿಯೇ ಸೋಚ್ ಬದಲ್’ನಾ ಚಾಹಿಯೇ, ಸೋಚ್ ಬದಲ್’ನೇ ಕೇ ಲಿಯೇ ಹಮ್ ಬದಲ್’ನಾ ಚಾಹಿಯೇ” ಎಂದು ಮೋದಿ ಒಂದು ಭಾಷಣದಲ್ಲಿ ಹೇಳುತ್ತಾರೆ.. ಅಂದರೆ ದೇಶ ಬದಲಾಗಬೇಕೆಂದರೆ ವಿಚಾರಗಳು, ಚಿಂತನೆಗಳು ಬದಲಾಗಬೇಕು, ವಿಚಾರಗಳು ಬದಲಾಗಬೇಕೆಂದರೆ ನಾವು ಬದಲಾಗಬೇಕು ಎಂದರ್ಥ.. ನಿಜವಾದ ಮಾತು ಎಂದೆನಿಸುತ್ತೆ.. ಬದಲಾವಣೆ ಆಗಬೇಕೆಂದರೆ ನಾವು ಬದಲಾಗಬೇಕು..

I am the change ಎಂದು ಸಾರುವ ಯೂ ಟ್ಯೂಬ್ ವೀಡಿಯೋಗಳನ್ನು ನೋಡಿ ಲೈಕ್ ಒತ್ತಿದರೆ ನಮ್ಮ ಜವಾಬ್ದಾರಿ ಮುಗಿಯಲಾರದು.. I am the change ಎಂದು ಸಾಬೀತುಪಡಿಸಲೇಬೇಕು.. ಸಮಸ್ಯೆ ಇದೆ ಎಂದು ಹೇಳುವುದು ಮಾತ್ರ ನಮ್ಮ ಕರ್ತವ್ಯ ಅಲ್ಲ.. ಅದನ್ನು ನಿವಾರಿಸುವ ಬಗೆಯ ಕಡೆ ಹೆಜ್ಜೆ ಇದಬೇಕಾದ್ದು ನಮ್ಮೆಲ್ಲರ ಕರ್ತವ್ಯ.. ವಿಶ್ವಗುರು ಆಗುವತ್ತ ಹೊರಟಿದೆ ಭಾರತ, ಜಗತ್ತು ಭಾರತದೆಡೆಗೆ ತಿರುಗಿ ನೋಡುತ್ತಿದೆ.. ಜೊತೆಗೆ ಸುಂದರ ಭಾರತ ಕಟ್ಟುವ ಕನಸಿದೆ.. ಅದಕ್ಕೆ ಅಲ್ಪ ಬದಲಾವಣೆ ನಮ್ಮಲ್ಲಿ ಮತ್ತು ನಮ್ಮ ಸುತ್ತ ಮುತ್ತ ಆಗಬೇಕಿದೆ.. ಗಣರಾಜ್ಯೋತ್ಸವದ ಬರುತ್ತಿರುವ ಈ ಸಂದರ್ಭದಲ್ಲಿ ಇವೆಲ್ಲ ಚಿಂತನೆಗಳನ್ನು ನಮ್ಮ ಒರೆಗೆ ಹಚ್ಚಿ ವಿಚಾರ ಮಾಡುವುದು ತುಂಬಾ ಮುಖ್ಯವಾದದ್ದು… ಬೆಳಗಲಿ ದೇಶ.. ಬದಲಾಗಲಿ ಸಮಾಜ, ಆ ಬದಲಾವಣೆ ನಮ್ಮಿಂದಲೇ ಆಗಲಿ…

Facebook ಕಾಮೆಂಟ್ಸ್

ಲೇಖಕರ ಕುರಿತು

Manjunath Hegde

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಹಳ್ಳಿ ಇವರ ಮೂಲ.. ಉಡುಪಿಯಲ್ಲಿ MSc ಮಾಡಿ ಒಂದು ವರ್ಷ ಲೆಕ್ಚರರ್ ಆಗಿ ಕೆಲಸ ಮಾಡಿ ಈಗ NITK ಸುರತ್ಕಲ್’ನಲ್ಲಿ PhD ಮಾಡುತ್ತಿದ್ದಾರೆ... ಓದಿದ್ದು ಕಂಪ್ಯೂಟರ್ ಆದರೂ ಸಾಹಿತ್ಯದಲ್ಲಿ ಆಸಕ್ತಿ.. ಬರೆಯುವುದು ಹವ್ಯಾಸ.. ವಿಜ್ಞಾನದ ಬರಹಗಳು, ಕಥೆ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಬರೆಯುವ ಆಸಕ್ತಿ ಹೆಚ್ಚು..

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!