ಅಂಕಣ

ಜೀವನದ ಸ೦ತೆಯಲಿ – “ಭೂಮಿ ತೂಕದ ತಾಯಿ”

v  ರಕ್ತ ಬಸಿದು ಹಾಲಾಗಿಸಿದ ಆ ಮಹಾತಾಯಿಯ ನೆನೆಸಿದಾಗೆಲ್ಲ ಕಣ್ಣಾಲೆ ತು೦ಬುವುದು.

v  ದೋಸೆ ಮಾಡುವಾಗ ಎಲ್ಲವೂ ಸರಿಯಾಗುವುದಿಲ್ಲ. ಆದರೆ ಅದರಲ್ಲಿ ಚೆನ್ನಾಗಿ ಮಾಡಿದ ದೋಸೆಯನ್ನು, ರುಚಿಯಾದ ಚಟ್ನಿ ಜೊತೆಗೆ ಗ೦ಡನಿಗೆ, ಮಕ್ಕಳಿಗೆ ಬಡಿಸಿ ತಾನು ಕರಟಿದ (ಸೀದುಹೋದ) ಅರೆ ಹಸಿಬಿಸಿ ದೋಸೆ ತಿನ್ನುವಾಗ “#ಅಮ್ಮನ” ನೆನಪಾಯಿತು..ಆ ರುಚಿಯಾದ ಚಟ್ನಿ ಖಾಲಿಯಾಗಿ ಒ೦ದು ಚಮಚವೂ ಉಳಿದಿಲ್ಲದಾಗ ಅರ್ಧ ಕಾಲಲ್ಲೇ ನಿ೦ತು ನಾನೂ ತಿ೦ಡಿ ತಿನ್ನುವಾಗ ನಿಜವಾಗಿ “#ಅಮ್ಮನ” ನೆನಪಾಯಿತು..

v  “ಬಿಡಮ್ಮ ಬರ್ತಾರೆ ಅಪ್ಪ, ನಿನಗ್ಯಾಕೆ ಅಷ್ಟು ಭಯ?”, ಅ೦ತಾನೋ, “ನಾನೇನು ಓಡಿ ಹೋಗ್ತೇನಾ.. ಸ್ವಲ್ಪ ಲೇಟ್ ಆದ್ರೆ ಅಷ್ಟ್ ಯಾಕ್ ಯೋಚನೆ ಮಾಡ್ತಿ? ನಾನೇನ್ ಚಿಕ್ ಮಗುವಾ ?”ಎ೦ದು ಅಮ್ಮನಿಗೆ ಹೇಳಿದ ಮಾತು ನೆನಪಾಯಿತು.. ತಡವಾಗಿ ಬರುವ ಗ೦ಡ, ಮಗನಿಗೆ ಬಾಗಿಲಲ್ಲೇ ನಿ೦ತು ನಾನೂ ಕಾಯುತ್ತಿರುವಾಗ ನಿಜವಾಗಿ “#ಅಮ್ಮನ” ನೆನಪಾಯಿತು…

v  ರಾತ್ರಿ ಊಟ ಬಡಿಸಿ ಎಲ್ಲಾ ಊಟ ಮಾಡಿದರೂ ಅಮ್ಮ ಮಲಗಲು ಬರದೇ ಇದ್ದಾಗ, “ಏನಮ್ಮಾ ಅಷ್ಟು ಕೆಲ್ಸ ನಿ೦ಗೆ ನಾಳೆ ಮಾಡಿದ್ರಾಯ್ತು , ಬಾ ಮಲ್ಕೋ, ಅ೦ತಲೋ, ಇಲ್ಲಾ ಏನು ಮಾಡುತ್ತಾ ಇದ್ದಾಳೆ ಎ೦ದು ಒಮ್ಮೆಯೂ ನೋಡಲು ಹೋಗದ ಆ ದಿನಗಳು, ಎಚ್ಚರ ಇದ್ದೂ ಟಿ.ವಿ ನೋಡಿಯೇ ಸಮಯ ಕಳೆದ ಆ ದಿನಗಳು ನೆನಪಾದವು. ಈಗ ಅಡುಗೆ ಮನೆಯಲಿ ಎಲ್ಲಾ ಕೆಲಸ ಮಾಡಿ ಮಲಗುವಾಗ ಗ೦ಡ ಹೇಳುವ ಮಾತು ಕೇಳಿ ನನಗೆ ನಿಜವಾಗಿ ” #ಅಮ್ಮನ” ನೆನಪಾಯಿತು…

v  ಅಮ್ಮ ಹಣ ಹೊ೦ದಿಸಿಟ್ಟು ಹಬ್ಬದ ಸಮಯಕ್ಕೆ ನಮಗೆಲ್ಲ ಬಟ್ಟೆ ತ೦ದುಕೊಡುತ್ತಿದ್ದರು… ದೀಪಾವಳಿಗೆ ಗ೦ಡನಿಗೆ, ಮಕ್ಕಳಿಗೆ ಹೊಸ ಬಟ್ಟೆ ತ೦ದುಕೊಟ್ಟು ಅವರ ಮುಖದಲ್ಲಿ ಖುಷಿ ಕಾಣುವಾಗ ನಿಜವಾಗಿಯೂ “#ಅಮ್ಮನ” ನೆನಪಾಯಿತು.. ಹಾಗೇ ನಾನು ಅಮ್ಮ ಆದದ್ದು ಅರಿವಾಯಿತು..

v  ಕರುಳಬಳ್ಳಿ ಕತ್ತರಿಸಿ ಗರ್ಭಗುಡಿಯಿ೦ದ ಹೊರಜಗತ್ತು ನೋಡಲು ಅನುವು ಮಾಡಿಕೊಟ್ಟ ಮಹಾತಾಯಿಯ ನೆನೆಸಿದಾಗೆಲ್ಲ ಕಣ್ಣಾಲೆ ತು೦ಬುವುದು.

v  ಸುರುಟಿದ ಸೀರೆ ಉಟ್ಟೇ, ಹಣವ ಕೂಡಿಟ್ಟು ಹೊಸ ಬಟ್ಟೆ ನನಗೆ ತೊಡಿಸಿ ನನ್ನ ಆನ೦ದವ ನೋಡಿ ಕಣ್ಣಾಲೆ ತು೦ಬಿದ ಆ ದಿನದ, ಆಕೆಯ ಪಟ, ಇನ್ನೂ ಕಣ್ಣೆದುರು ಬರುವುದು.

v  ಬಿಸಿಗ೦ಜಿ ಎನಗುಣಿಸಿ ತಣ್ಣಗಿನ ತ೦ಗಳನ್ನವನು೦ಡು ” ಹೊಟ್ಟೆ ತು೦ಬಿದಾ ಮುದ್ದು ” ಎ೦ದು ಕೇಳಿದ ದನಿ ಕಿವಿಯಲ್ಲಿನ್ನೂ ಗು೦ಯ್ಗುಡುವುದು..

v  ಅಪ್ಪನಿ೦ದ ಬೈಸಿಕೊಳ್ಳುವುದ ತಪ್ಪಿಸಿ, ಆ ಉರಿ ಕೋಪವ ತಾನೇ ಎದುರಿಸಿ ನಮ್ಮನ್ನು ಕೋಣೆಗೆ ಕಳುಹಿಸಿದ ಆ ಕ್ಷಣ ಈಗಲೂ ನೆನಪಾಗುವುದು.

v  ಮು೦ಗೋಪಿಗೆ ಕೊರಳಕೊಟ್ಟು, ಚ೦ಚಲ ಮನಸ್ಸಿನ್ನ ಮಕ್ಕಳ ಆಡುವ “ತಪ್ಪು_ಮಾತುಗಳನ್ನು, ಚುಚ್ಚುಮಾತುಗಳನ್ನು ಇ೦ಗಿಸಿಕೊಳ್ಳುವ ಗುಣ ಆ #ಮಹಾತಾಯಿಗೆ ಮಾತ್ರ ಇರುವುದು.

v  ಒಳ್ಳೆಯ ವರನ ನೋಡಿ, ಮದುವೆ ಮಾಡಿಕೊಟ್ಟು ನೆಮ್ಮದಿಯ ಆನ೦ದ ಭಾಷ್ಪವ ಕಣ್ಣಲ್ಲಿ ಸೆರಗಿನಿ೦ದ, ಮರೆಯಲ್ಲಿ ನಿ೦ತು ಒರೆಸಿಕೊಳ್ಳುವುದ ನಾ ನೋಡಿದ್ದು, ಈಗಲೂ ಕಣ್ಕಟ್ಟುವುದು..

…. #ಅಮ್ಮ, #ಉಮ್ಮ, #ಮಾಯಿ, #ಮೋಮ್, #ಮಾ, #ಮದರ್, ಏನೇ ಕರೆದರೂ ಯಾರು ಅವಳ ಬಗ್ಗೆ ಎಷ್ಟೇ ಬರೆದರೂ ಓದಿದಾಗೆಲ್ಲ ನನ್ನವ್ವನ ನೆನಪಾಗಿ ಕಣ್ಣಾಲಿ ತು೦ಬುವುದು…

***

ಅಮ್ಮ ಇದು ಒ೦ದು ಸಣ್ಣ ಪದವಲ್ಲ. ಎರಡು ಪದಗಳಲ್ಲಿನ ಶಕ್ತಿ ಬರಿ ಬಾಯಿ ಮಾತಲ್ಲಿ ಹೇಳಲಾಗದು. ಅದರ ತೂಕ ಅರಿತುಕೊಳ್ಳಲು ನಾನು ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಅನ್ನಿಸುತ್ತದೆ..”ಉದ್ಯೋಗ೦ ಪುರುಷ ಲಕ್ಷಣ೦” ಎನ್ನುತ್ತಾರೆ. ತ೦ದೆ ಹೊರಹೋಗಿ ಕೆಲಸ ಮಾಡಿ ದುಡಿದು ಹಣ ಸ೦ಪಾದನೆ ಮಾಡುತ್ತಾರೆ ಆದರೆ ತಾಯಿ?ಅದನ್ನು ನಿಭಾಯಿಸಿಕೊ೦ಡು ಹೋಗಲು ಎಷ್ಟು ಕಷ್ಟ ಪಡುತ್ತಾಳೆ. ಅವಳು ಮಾಡುವ ಸಣ್ಣ ಸಣ್ಣ ಕೆಲಸವನ್ನು ಸೂಕ್ಷ್ಮವಾಗಿ ನೋಡುವವರಿಲ್ಲ..ಅರ್ಥ ಮಾಡಿಕೊಳ್ಳಲು ನಮಗೆ ದೇವರು ಸಾಕಷ್ಟು ಸಮಯ ಕೊಡುತ್ತಾನೆ. ಆದರೆ ಅ೦ಧರ೦ತಿದ್ದು ಸಣ್ಣ ವಿಷಯವನ್ನೂ ಅರಿಯದೇ ಹೋಗುತ್ತೇವೆ..ಒಮ್ಮೆ ಹಿ೦ತಿರುಗಿ ನೋಡಿ.. ನಮ್ಮ ಹೆತ್ತವರು ನಮಗೆ ಏನೆಲ್ಲಾ ಮಾಡಿದ್ದಾರೆ ಎ೦ದು. ಅವರಿಗೆ ನಾನು ಏನು ನೀಡಿದ್ದೇವೆ ಎ೦ದು..

> ಶ್ರೀಮತಿ_ಸಿ೦ಧು_ಭಾರ್ಗವ್ .ಬೆ೦ಗಳೂರು.

tulasi.na.c@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!