ಅಂಕಣ

ಇಂತವರೆಲ್ಲಾ ಸಮಾಜಕ್ಕೆ ಮಾದರಿಯಾಗಿದ್ದಾರೆ

ಕೆಲವೊಮ್ಮೆ ನನಗೆ ನಾನೇ ಎಷ್ಟು ಅದೃಷ್ಟವಂತೆ ಎಂದು ಎನಿಸುತ್ತದೆ. ಏಕೆಂದರೆ ನಮ್ಮ ವಿದ್ಯಾರ್ಥಿ ಜೀವನ ಸುಖಮಯವಾಗಿ ಸಾಗಿತ್ತು. ಅಪ್ಪ ಅಮ್ಮ ಓದಲೆಂದು ಎಲ್ಲ ಸೌಕರ್ಯಗಳನ್ನು ಯಾವುದೇ ಅಡಚಣೆ ಇಲ್ಲದೇ ಒದಗಿಸಿದ್ದರು. ಬರೀ ಓದುವುದೊಂದೆ ನಮ್ಮ ಕಾಯಕವಾಗಿತ್ತು. ಆದರೆ ಎಷ್ಟೋ ವಿದ್ಯಾರ್ಥಿಗಳು ಹಲವಾರು ಕಡೆ ದುಡಿಯುತ್ತಾ ತಮ್ಮ ಶಿಕ್ಷಣದ ವೆಚ್ಚವನ್ನು ಭರಿಸುತ್ತಾ ಓದುತ್ತಾರೆ. ಪುಸ್ತಕ ಹಿಡಿಯಬೇಕಾದ ಸಮಯದಲ್ಲಿ ಮುಸುರೆ ತಿಕ್ಕಿಕೊಂಡೋ, ಪೇಪರ್ ಹಾಕಿಕೊಂಡೋ, ಗುಜರಿ ಆಯ್ದುಕೊಂಡೋ ಶಾಲೆಗೆ ಹೋಗುವ ಅದೆಷ್ಟೋ ಮಕ್ಕಳಿರುತ್ತಾರೆ. ನಾವು ಮಾತ್ರ, ನಮಗೆ ಸೌಕರ್ಯಗಳು ಸಾಕಷ್ಟೂ ಇದ್ದರೂ ಅದು ಇರಬೇಕಿತ್ತು ಇದು ಇರಬೇಕಿತ್ತು ಎಂದು ಚಿಂತಿಸಿ ಮರುಗುತ್ತಲೇ ಇರುತ್ತೇವೆ. ಇಂದಿನ ಮಕ್ಕಳಿಗೆ ಶಾಲೆಗೆ ಹೊರಟರೆಂದರೆ ಸಾಕು ಸೌಕರ್ಯಗಳು ಜೊತೆಯಾಗಿಯೇ ಬರುತ್ತವೆ. ಎಲ್ಲ ಸೌಕರ್ಯಗಳಿದ್ದರೂ ಕೆಲವರಿಗೆ ಓದುವ ಜವಾಬ್ದಾರಿ ಇರುವದಿಲ್ಲ. ಇನ್ನು ಕೆಲವರು ಬೇರೆಯವರ ಮನೆಯ ಕೆಲಸ ಮಾಡಿ ಕಷ್ಟ ಪಟ್ಟು ಓದಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಅಂತಹ ಹಲವಾರು ಉದಾಹರಣೆಗಳಲ್ಲಿ ಒಂದನ್ನು ನಿಮ್ಮ ಬಳಿ ಹಂಚಿಕೊಳ್ಳುತ್ತೇನೆ.

ಉಡುಪಿಯಲ್ಲಿ ಬೀಡರಗುಡ್ಡೆ ಎಂಬ ಕೊಳಗೇರಿ ಪ್ರದೇಶವಿದೆ. ಇಲ್ಲಿ ನೂರಾರು ಕುಟುಂಬಗಳು ಗುಡಿಸಲನ್ನು ಕಟ್ಟಿಕೊಂಡು ವಾಸವಾಗಿವೆ. ಇಲ್ಲಿಯವರೆಲ್ಲ ಉತ್ತರ ಕರ್ನಾಟಕದ ಭಾಗದಿಂದ ಬಂದವರು. ತಮ್ಮ ಬದುಕಿನ ಬವಣೆಗಾಗಿ ಉಡುಪಿಯಲ್ಲಿ ಗುಡಿಸಲು ಕಟ್ಟಿಕೊಂಡು ಅದು ಇದು ಕೆಲಸವನ್ನು ಮಾಡುತ್ತಿದ್ದಾರೆ. ಕುಟುಂಬದ ಯಜಮಾನನಿಗೆ ತನ್ನ ಹೆಂಡತಿ ಮಕ್ಕಳಿಗೆ ಎರಡು ಹೊತ್ತು ಹೊಟ್ಟೆ ತುಂಬಿಸುವದೇ ಕಷ್ಟ ಇನ್ನು ಮಕ್ಕಳನ್ನು ಶಾಲೆಗೆ ಕಳಿಸುವ ಮಾತು ದೂರದ್ದು. ಅಲ್ಲಿಯೇ ಅಕ್ಕ ಪಕ್ಕ ಆಟವಾಡಿಕೊಂಡು ಇರುತ್ತಾರೆ.

ಅಲ್ಲಿನ ಒಂದು ಗುಡಿಸಲಿನಲ್ಲಿ ಶ್ವೇತಾ (ಹೆಸರು ಬದಲಾಯಿಸಲಾಗಿದೆ)ಎಂಬ ಹುಡುಗಿ ಇದ್ದಾಳೆ. ಇವಳು ಸಣ್ಣವಿದ್ದಾಗಲೇ ತನ್ನ ಅಮ್ಮನ ಜೊತೆ ಬೇರೆಯವರ ಮನೆ ಕೆಲಸಕ್ಕೆ ಹೋಗುತ್ತಿದ್ದಳು. ಅವಳು ಒಂದು ದಿನ ಒಂದು ಮನೆಯಲ್ಲಿ ಕಸ ಗುಡಿಸುತ್ತಾ ಇದ್ದಳು. ಆ ಮನೆಯ ಮಕ್ಕಳು ಶಾಲೆಯ ಸಮವಸ್ತ್ರ ಧರಿಸಿ ಆಕಡೆ ಈಕಡೆ ಅಡ್ಡಾಡುತ್ತಿದ್ದರು. ಇವಳಿಗೆ ತಾನು ಶಾಲೆಗೆ ಹೋಗಬೇಕೆಂಬ ಮಹಾದಾಸೆ ಇತ್ತು. ಆದರೆ ಏನು ಮಾಡುವದು ಬಡತನ ಅವಳನ್ನು ಶಾಲೆಗೆ ಕಳುಹಿಸಿರಲಿಲ್ಲ. ಇವಳು ಕಸಗುಡಿಸುತ್ತಿದ್ದನ್ನು ನೋಡಿ ಆ ಮನೆಯ ಮಕ್ಕಳು “ನಿಧಾನವಾಗಿ ಗುಡಿಸು ದೂಳೆಲ್ಲಾ ಸಮವಸ್ತ್ರಕ್ಕೆ ತಾಗಬಹುದು” ಎಂದರು. ಅವಳಿಗೆ ಅವರು ಹೇಳಿದ ಮಾತು ಅವಳ ಮನದಲ್ಲಿದ್ದ ಮಹಾದಾಸೆಯನ್ನು ಬಡಿದೆಬ್ಬಿಸಿತು. ತಾನು ಆ ಮಕ್ಕಳ ಥರ ಶಾಲೆಗೆ ಹೋಗಬೇಕೆಂದು ನಿರ್ಧಾರ ಮಾಡಿದಳು. ತನ್ನ ಆಸೆಗೆ ರೆಕ್ಕೆ ಕಟ್ಟಿದಳು.

ಒಂದು ದಿನ ಬೀಡರಗುಡ್ಡೆಯ ಎಲ್ಲ ಮಕ್ಕಳನ್ನು ಒಗ್ಗೂಡಿಸಿ ನಾವು ಕೂಡ ಎಲ್ಲ ಮಕ್ಕಳ ಹಾಗೆ ಶಾಲೆಗೆ ಹೋಗೋಣ ಎಂದು ತೀರ್ಮಾನವನ್ನು ಕೈಗೊಂಡಳು. ಅವಳ ಅಪ್ಪ ಅವರೆಲ್ಲರ ಒತ್ತಾಯದ ಮೇರೆಗೆ ಕೊಳಗೇರಿ ಪ್ರದೇಶದ ಎಲ್ಲ ಮಕ್ಕಳನ್ನು ಅಲ್ಲೇ ಹತ್ತಿರದಲ್ಲಿದ್ದ ಶಾಲೆಗೆ ಸೇರಿಸಿದರು. ಮಕ್ಕಳ ಹುಟ್ಟಿದ ದಿನಾಂಕ ಗೊತ್ತಿರದ ಕಾರಣ ಗುರುಗಳಿಗೆ ಆ ಮಕ್ಕಳನ್ನು ಯಾವ ಯಾವ ತರಗತಿಗೆ ಸೇರಿಸುವದು ಎಂದು ತೋಚದಾಯಿತು. ಎಲ್ಲ ಮಕ್ಕಳ ಹತ್ತಿರ ಕೈಯನ್ನು ಮೇಲುಗಡೆಯಿಂದ ಕಿವಿಗೆ ತಾಗಿಸಬೇಕು ಎಂದು ಹೇಳಿದರು. ಕಿವಿಗೆ ತಾಗಿಸಿದವರನ್ನು ಒಂದನೇ ತರಗತಿಗೆ ಸೇರಿಸಿದರು. ಉಳಿದವರನ್ನು ಅಂಗನವಾಡಿಗೆ ಸೇರಿಸಿದರು.ಇವಳು ಹಾಗೂ ಇವಳ ತಮ್ಮ ಒಂದೇ ತರಗತಿಯಲ್ಲಿ ಓದ ತೊಡಗಿದರು. ಇವಳು ಯಾವಾಗಲೂ ಬೆಳಿಗ್ಗೆ ಅಮ್ಮನ ಜೊತೆ ಮನೆಗೆಲಸಕ್ಕೆ ಹೋಗಿ ಶಾಲೆಗೆ ಹೋಗುತ್ತಿದ್ದಳು. ಇದರಿಂದ ಇವಳಿಗೆ ಕೆಲವು ಸಲ ಶಾಲೆಗೆ ಓದಿನ ಅವಧಿಗೆ ತಲುಪಲು ತಡವಾಗುತ್ತಿತ್ತು.

ಒಂದು ದಿನ ಏನಾಯ್ತೆಂದರೆ, ಇವಳು ಶಾಲೆಗೆ ತಡವಾಗಿ ಬಂದಳು.ಮೈ ಎಲ್ಲಾ ಬಟ್ಟೆ ಒಗೆದು ಒದ್ದೆ ಬೇರೆ ಆಗಿತ್ತು. ಇದನ್ನು ನೋಡಿದ ಮೇಡಮ್ ಯಾಕೆ ಒದ್ದೆ ಆಗಿದೆ ಎಂದು ವಿಚಾರಿಸಿದಾಗ, ಅವಳು ತನ್ನ ಕಷ್ಟವನ್ನು ಅವರ ಹತ್ತಿರ ಹೇಳಿಕೊಂಡಳು. ತಾನು ಅವಳ ಕಷ್ಟವನ್ನು ಕೇಳಿ ಮೇಡಮ್’ಗೆ ಮಾತು ಭಾರವಾಯಿತು. ಶಾಲೆಗೆ ತಡವಾಗಿ ಬಂದರೂ ಸರಿ ಆದರೆ ಶಾಲೆಯನ್ನು ತಪ್ಪಿಸಬೇಡ ಎಂದು ಸಲಹೆ ನೀಡಿ ಸ್ಪೂರ್ತಿ ತುಂಬಿದರು.

ಹೀಗೇ ದಿನ ಕಳೆಯುತ್ತಿತ್ತು. ಒಂದು ದಿನ ತರಗತಿಯಲ್ಲಿ ಒಬ್ಬ ಹುಡುಗ ಅವಳ ತಮ್ಮನಿಗೆ ಹೊಡೆಯುತ್ತಿದ್ದ. ತನ್ನ ತಮ್ಮ ತಪ್ಪು ಮಾಡದಿದ್ದರೂ ಇವನು ಹೊಡೆಯುತ್ತಿದ್ದಾನಲ್ಲಾ ಎಂದು ಆ ಹುಡುಗನಿಗೆ ಸರಿಯಾಗಿ ಕೆನ್ನೆಗೆ ಬಾರಿಸಿದಳು. ಆ ಹುಡುಗ ಜೋರಾಗಿ ಅಳಲು ಆರಂಭಿಸಿದ. ಗುರುಗಳು ಯಾರು ಹೊಡೆದದ್ದು ಎಂದು ಕೇಳಿದಾಗ ಅವಳೇ ಎದ್ದು ನಿಂತು ನಡೆದ ಸಂಗತಿಗಳನ್ನು ಸಂದರ್ಭ ಸಹಿತ ವಿವರಿಸಿದಳು. ಅವಳೇ ಯಾವುದೇ ಮುಲಾಜಿಲ್ಲದೇ ಎದ್ದು ನಿಂತು ಹೇಳಿದ್ದನ್ನು ಕೇಳಿ ಗುರುಗಳಿಗೆ ಖುಷಿಯಾಯಿತು. ಅವಳಲ್ಲಿ ನಾಯಕತ್ವದ ಗುಣ ಇರುವದನ್ನು ಗಮನಿಸಿ ಅವಳನ್ನು ಇತರೆ ಚಟುವಟಿಕೆಯಲ್ಲೂ ಹುರಿದುಂಬಿಸಿದರು. ಹೀಗೆ ಕೆಲಸ ಮಾಡುತ್ತಾ ಶಿಕ್ಷಣವನ್ನು ಮುಂದುವರೆಸುತ್ತಾ ಬಂದಳು. ಸರಕಾರಿ ಶಾಲೆಯಲ್ಲಿ ಕಲಿತರೂ ಜೀವನವನ್ನು ಹೇಗೆ ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳಬೇಕು ಎಂಬುದನ್ನು ಅರಿತಳು. ನಾಟಕ,ಭಾಷಣ ಹೀಗೆ ಇತರ ಚಟುವಟಿಕೆಗಳಲ್ಲಿ ಕಾಲೇಜನ್ನು ಪ್ರತಿನಿಧಿಸಿದಳು.ಡಿಗ್ರಿಯಲ್ಲಿ ಓದುತ್ತಿದ್ದಾಗಲೂ ಕಾಲೇಜಿನ ಉಪ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದಳು. ಇವಳ ಪ್ರತಿಭೆಗಳನ್ನು ನೋಡಿ ಇವಳಿಗೆ 6ನೇ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಪ್ರತಿಭಾರತ್ನ ಪ್ರಶಸ್ತಿಯೂ ದೊರೆತಿದೆ.ಪ್ರ ಸ್ತುತ ಇವಳು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗವನ್ನು ಅಭ್ಯಸಿಸುತ್ತಿದ್ದಾಳೆ. ತಾನು ಕಲಿಯುತ್ತ ಕಲಿಯುವ ಬಡ ಮಕ್ಕಳನ್ನು ಹುರಿದುಂಬಿಸುತ್ತಿದ್ದಾಳೆ.

ಇವಳಂತ ಅನೇಕ ಮಕ್ಕಳು ಕಷ್ಟಪಟ್ಟು ದುಡಿದು ತಮ್ಮ ಶಿಕ್ಷಣವನ್ನು ಮುಂದುವರೆಸುತ್ತಿದ್ದಾರೆ.ಇವರೆಲ್ಲಾ ನಿಜಕ್ಕೂ ಇಂದಿನ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇಂದಿನ ಅದೆಷ್ಟೋ ಮಕ್ಕಳ ಅಪ್ಪಾ ಅಮ್ಮಾ ಮಕ್ಕಳು ಚೆನ್ನಾಗಿ ಓದಲಿ ಎಂದು ಎಷ್ಟೇ ಕಷ್ಟವಾದರೂ ಸರಿ ಎಲ್ಲ ಸವಲತ್ತುಗಳನ್ನು ಕೊಡುತ್ತಾರೆ.ಆದರೂ ಕೆಲವು ಮಕ್ಕಳು ಓದೋಲ್ಲ.ಒಳ್ಳೆಯ ಅಂಕಗಳಿಲ್ಲದೇ ಕಾರಣ ಕೊನೆಗೆ ಲಕ್ಷಗಟ್ಟಲೆ ಡೊನೆಷನ್ ತುಂಬಿ ಕಾಲೇಜಿಗೆ ಕಳುಹಿಸುತ್ತಾರೆ.ಇಂತಹ ಮಕ್ಕಳಿಗೆ ಶ್ವೇತನಂತವರು ವಾಸ್ತವದ ಪ್ರತಿಮೆಗಳಾಗಿದ್ದಾರೆ.

Madhura hegade

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!