ಅಂಕಣ ಭಾವತರಂಗ

ಹ್ಯಾಪಿ ಟು ಬ್ಲೀಡ್? ರಿಯಲೀ??

ಈ ಹ್ಯಾಶ್ ಟ್ಯಾಗ್’ಗಳ ಭರಾಟೆ ಇಂದು ಸೋಷಿಯಲ್ ಮೀಡಿಯಾದಲ್ಲಿ ಮೂಲಭೂತ ಕರ್ತವ್ಯದಂತಾಗಿದೆ. ಅದೆಷ್ಟು ಟ್ಯಾಗ್’ಗಳು, ದಿನಕ್ಕೆ ಒಂದು ಹೊಸ ಟ್ಯಾಗ್ ಹುಟ್ಟದಿದ್ದರೆ ಮತ್ತೆ ಕೇಳಿ. ಒಂದು ಗುಂಪು ಏನೋ ಹಾಕುತ್ತದೆ ಅದಕ್ಕೆ ಪ್ರತಿವಾದ ಇದ್ದೇ ಇರುತ್ತದೆ, ಅಂತೂ ಟ್ಯಾಗ್ ಮುಂದುವರಿಯುತ್ತಲೇ ಇರುತ್ತದೆ. ಇದೆಲ್ಲಾ ಈಗ ಹೀಗನಿಸಲು ಕಾರಣವೂ ಇದೆ, ಹತ್ತಿರ ಹತ್ತಿರ ತಿಂಗಳಾಗುತ್ತಾ ಬಂತೇನೋ, ಹ್ಯಾಪಿಟುಬ್ಲೀಡ್ ಆರಂಭವಾಗಿ. ಅರೇ, ಇದೇನು ಅಂತ ನೋಡಿದಾಗ ಮತ್ತೆ ಅರಿವಾಯಿತು ಇವರೆಲ್ಲಾ ಹೇಳುತ್ತಿರುವುದು ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ಆಗುವ ವೈಜ್ಞಾನಿಕ ವಿಷಯವೊಂದನ್ನು ಅಂತ. ಆದರೆ ಕಾಡಿದ್ದು, ಇದಕ್ಕೊಂದು ಹ್ಯಾಶ್ ಟ್ಯಾಗ್ ಇದ್ದಕ್ಕಿದ್ದಂತೆ ಯಾಕೆ ಹುಟ್ಟಿಕೊಂಡಿತು, ಇಷ್ಟು ಸಮಯ ಅರಿವಿಲ್ಲದಿದ್ದ ಹ್ಯಾಪಿನೆಸ್ ಅದೆಲ್ಲಿಂದ ಬಂತು ಎಂದು….

ಇದು ಶುರುವಾಗಿದ್ದು ಯಾಕೆ ಗೊತ್ತೇ? ಪವಿತ್ರ ಕ್ಷೇತ್ರವಾದ ಶಬರಿಮಲೆಯಲ್ಲಿ ಬರುವ ಸ್ತ್ರೀ ಭಕ್ತರನ್ನು ಪರೀಕ್ಷಿಸಲು ಯಂತ್ರ ಸಿದ್ಧಪಡಿಸಿಕೊಳ್ಳುತ್ತಾರೆ, ರಜಸ್ವಲೆಯಾದವರನ್ನು ಒಳ ಬಿಡುವುದಿಲ್ಲ ಎಂದು. ಸರಿ ಅಲ್ಲಿಗೆ ಶುರುವಾಯಿತು ಇದೆಲ್ಲಾ ಅಬ್ಬರಗಳು.

ಮೊದಲೇ ಹೇಳುತ್ತೇನೆ, ಆಡಳಿತ ಮಂಡಳಿಯ ನಿರ್ಧಾರವೂ ಅತಿರೇಕ ಅನಿಸದಿರದು. ಆದರೆ ಅಲ್ಲಿಗೆ ಅಲ್ಲಿಯದ್ದೇ ಆದ ಕಟ್ಟು ಪಾಡುಗಳಿವೆ, ಕೇವಲ ಹೆಂಗಸರೆಂದಲ್ಲ, ಅಲ್ಲಿಗೆ ಹೋಗ ಬಯಸುವ ಪುರುಷರಿಗೂ ವ್ರತ, ಹಲವು ಕಟ್ಟುಪಾಡು ಎಲ್ಲವೂ ಇವೆ. ಅದನ್ನು ಮಾಡಿಯೇ ದೇವಸ್ಥಾನ ಪ್ರವೇಶ ಸಾಧ್ಯ. ಇದು ಹಿಂದಿನಿಂದ ನಡೆದು ಬಂದ ಸಂಪ್ರದಾಯ ಜನರ ನಂಬಿಕೆ. ಈಗೀಗ ಜನರ ನಂಬಿಕೆಯ ಮೇಲೊಂದು ಹೊಡೆತ ಹಾಕುವುದು ಎಂದರೆ ಎಲ್ಲರಿಗೂ ಬಹು ಖುಷಿಯ ವಿಷಯವಾಗುತ್ತಿದೆ. ಶ್ರದ್ಧಾ ಕೇಂದ್ರದ ಮೇಲೆ ನೈಜ ಶ್ರದ್ಧೆಯುಳ್ಳ ಯಾರೂ ಅಲ್ಲಿನ ನಂಬಿಕೆಯನ್ನು ಮೀರುವ ಹಪಹಪಿಗೆ ಬೀಳುವುದಿಲ್ಲ. ಅದಿರಲಿ, ಅಲ್ಲಿನ ಸಂಪ್ರದಾಯವನ್ನು ಕಾಪಾಡುವುದೂ ಅಲ್ಲಿನ ಮಂಡಳಿಯ ಕರ್ತವ್ಯವೂ ಆಗಿರುವಾಗ ಜನರಿಗೆ ಇಂತಹದ್ದೊಂದು ಶುರುವಾದರೆ, ಅವರು ತಾನೇ ಏನು ಮಾಡಿಯಾರು ಹೇಳೀ?

ಇದೆಲ್ಲಾ, ಒತ್ತಟ್ಟಿಗಿರಲಿ.. ನನ್ನ ಪ್ರಶ್ನೆ ಬೇರೆಯದೇ ಇದೆ. ಆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶವಿಲ್ಲ, ಸರಿ. ಅದು ಇಂದು ನಿನ್ನೆಯ ಕಾನೂನಲ್ಲ ಅದೂ ಸರಿ, ಇಂದಿನವರೆಗೂ ಯಾರೂ ಅಲ್ಲಿಗೆ ನಮಗೆ ಪ್ರವೇಶ ಬೇಕೆಂದು ಹಟ ಹಿಡಿದು ಕುಳಿತಿಲ್ಲ. ಆದರೆ ಇದ್ಯಾಕೆ ಇಂದು ಈ ಹ್ಯಾಪಿ ಟು ಬ್ಲೀಡ್ ಎಂಬ ಹೋರಾಟ (!) ಶುರುವಾಗಿದ್ದು??

Menstrual Cycle ಎನ್ನುವುದು ನಿಸರ್ಗ ಸಹಜ ಪ್ರಕ್ರಿಯೆ ಎನ್ನುವುದು ಎಲ್ಲರಿಗೂ ಅರಿವಿದೆ. ಆ ಸಮಯದಲ್ಲಿ ದೇವಸ್ಥಾನಗಳಿಗೆ ಹೋಗಬಾರದು, ಮನೆಯಲ್ಲೂ ಕೆಲವು ನೀತಿ ನಿಯಮಗಳು ಹಿಂದಿನಿಂದ ನಡೆದು ಬಂದಿದೆ, ಇಂದು ಅವನ್ನೆಲ್ಲಾ ಆಚರಿಸುವ ಮನೆಗಳು ಕಾಣ ಸಿಗುವುದು ಅಪರೂಪವಾದರೂ ಅದರ ಹಿಂದೆ ಇರುವುದು ಮೂಢನಂಬಿಕೆ ಮಾತ್ರ ಎಂಬುದು ನಮ್ಮ ಬುದ್ಧಿಮತ್ತೆಯ ಲೆವೆಲ್ ಅನ್ನು ತೋರಿಸುತ್ತದೆ. ಅಂದಿನ ಕಾಲದಲ್ಲಿ ಹೆಣ್ಣಿನ ಸ್ಥಿತಿಯೂ ಹಾಗಿತ್ತು, ಒಂದು ಘಳಿಗೆಯೂ ಬಿಡುವಿಲ್ಲದ ಕೆಲಸ, ಸಾವಿರ ಜವಾಬ್ದಾರಿ, ಈ ಮೆನ್ಸ್ಟ್ರುವಲ್ ಸಮಯದಲ್ಲಿ ಸಹಜವಾಗೇ ಸುಸ್ತು, ಮನಸ್ಸು ಎಂದಿನಂತೆ ಕೆಲಸ ಮಾಡುವುದು ಕಷ್ಟವಾಗುತ್ತದೆ, ಅಯ್ಯೋ ನಾನು ಹೆಣ್ಣು ಮಕ್ಕಳನ್ನು ಕೀಳಾಗಿ ನೋಡುತ್ತಿದ್ದೇನೆ ಅಂದುಕೊಂಡುಬಿಡಬೇಡಿ ಮತ್ತೆ. ಇವೆಲ್ಲಾ ಇಂದಿನ ವೈಜ್ಞಾನಿಕ ಯುಗದಲ್ಲೂ ವೈದ್ಯಕೀಯ ವಿಜ್ಞಾನಿಗಳೇ ಹೇಳುವ ವಿಷಯ. ಇದನ್ನೆಲ್ಲಾ ಅರಿತುಕೊಂಡೇ ಹಿರಿಯರು ಮಾಡಿದ ಕಟ್ಟಳೆಗಳು ಅವಿರಬಹುದು ಅಲ್ವಾ? ಯಾಕೆ ಈ ದೃಷ್ಟಿಯಿಂದ ನಾವು ಯೋಚಿಸುವುದೇ ಇಲ್ಲ? ಅಲ್ಲದೇ ಹಲವರಿಗೆ ಆ ಸಮಯದಲ್ಲಿ ಹೊಟ್ಟೆ ನೋವು ಸಹಜ ಈ ಸಾವಿರ ಕೆಲಸದೊತ್ತಡ ಇದ್ದರೆ ಅವರ ನೋವಿಗೆ ಮತ್ತಷ್ಟು ನೋವನ್ನೇ ತಂದು ಸುರಿದಂತೇ ಅಲ್ವಾ? ಅದರ ಬದಲು ಅವರಿಗೆ ಸ್ವಲ್ಪ ರೆಸ್ಟ್ ಕೊಟ್ಟರೆ ಎಂತಹಾ ನಿರಾಳತೆ ನೆಮ್ಮದಿ ಅವರಿಗೆ ದೊರಕೀತು ಯೋಚಿಸಿ? ಅದಕ್ಕಿಂತ ಸಂತಸದ ವಿಷಯ ಇನ್ನೊಂದಿರಲಿಕ್ಕಿಲ್ಲ ಎಂದು ನನ್ನ ಆಪ್ತರೇ ಹೇಳಿದ್ದು ಕೇಳಿದ್ದೇನೆ,.

ಇನ್ನು ದೇವಸ್ಥಾನಗಳ ವಿಷಯಕ್ಕೆ ಬರುವುದಾದರೆ, ಅದು ಅಲ್ಲಿನ ಶುಚಿತ್ವವನ್ನು ಕಾಪಾಡಿಕೊಳ್ಳುವುದೇ ಮುಖ್ಯ ಉದ್ದೇಶ ಎನಿಸುತ್ತದೆ ನನಗೆ. ಪುರುಷರಾದರೂ ಅಷ್ಟೇ, ಮೈಥುನ ಮಾಡಿಕೊಂಡು ದೇವಾಲಯ ಪ್ರವೇಶಿಸುವಂತಿಲ್ಲ. ಏನಿದ್ದರೂ ಸ್ನಾನ ಮಾಡಿ ಶುಚಿಯಾಗೇ ಬರಬೇಕು,. ಪುರುಷನಲ್ಲಿ ನಡೆಯುವ ಈ ಪ್ರಕ್ರಿಯೆ ಸಂಪೂರ್ಣ ಅವನ ಹತೋಟಿಯಲ್ಲಿರುತ್ತದೆ. ಆದರೆ ಮಹಿಳೆಗೆ ಅದು ಸಹಜವಾಗಿ ಆಕೆಯ ಹತೋಟಿಗೆ ಒಳಪಡದೇ ನಡೆಯುವ ಕ್ರಿಯೆ, ಅದಕ್ಕೊಂದು ನಿಯಮ ಮಾಡಿದ್ದಾರೆ ಅಷ್ಟೇ.

“ಯಾರು ಏನೇ ಹೇಳಲಿ, ಈ ನಿಸರ್ಗ ಸಹಜ ಪ್ರಕ್ರಿಯೆ ನಡೆಯುವದರಲ್ಲಿ ಬೇಸರವಿಲ್ಲ. ಅದು ಸರಿಯಾಗೇ ಇರಬೇಕು. ಆದರೆ ಪ್ರಗತಿ ಪರರು ಎಂಬ ಹಟಕ್ಕೆ ಬಿದ್ದು ಹ್ಯಾಪೀ ಟು ಬ್ಲೀಡ್ ಎಂದು ಇನ್ನೆಲ್ಲಿಗೋ ಹೋಗಲು ನನ್ನ ಮನಸ್ಸು ಒಪ್ಪದು. ಎಲ್ಲವನ್ನೂ ವಿರೋಧಿಸುವ ಮನಸ್ಥಿತಿ ಒಳ್ಳೆಯದಲ್ಲ. ನೆಮ್ಮದಿಯಿಂದ ಮೂರು ದಿನ ಕಳೆದರೆ ಸಾಕು” ಈ ಮಾತು ಹೇಳಿದ್ದು ಇನ್ಯಾರೋ
ಅಲ್ಲ, ನನ್ನ ಆಪ್ತ ಸ್ನೇಹಿತೆ,, ಒಬ್ಬ ಹೆಣ್ಣುಮಗಳೇ! ಅಂದ ಹಾಗೆ, ಆಕೆ ಅನಕ್ಷರಸ್ಥಳಲ್ಲ, ಅವಿದ್ಯಾವಂತಳಲ್ಲ. ಇಂಜಿನಿಯರಿಂಗ್ ಪದವಿ ಪಡೆದು ಉತ್ತಮ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವಾಕೆ ಅವಳು.

ಉಳಿದುಕೊಂಡಿದ್ದು ಇದೊಂದೇ ಪ್ರಶ್ನೆ….
ಪ್ರಗತಿ ಎಂದ ಕೂಡಲೇ, ಹಿಂದಿನ ನಂಬಿಕೆಗಳ ಬುಡವನ್ನೇ ಅಲ್ಲಾಡಿಸುವುದು ಎಂದು ಯಾವುದಾದರೂ ಡಿಕ್ಷನರಿಯಲ್ಲಿ ಬರೆದಿಟ್ಟೀದ್ದಾರಾ? ಫೀಲಿಂಗ್ ಹ್ಯಾಪಿ ಅಂತ ಒಂದು ಸ್ಟೇಟಸ್ ಹಾಕಿಕೊಳ್ಳುವುದಕ್ಕೋಸ್ಕರ ಹ್ಯಾಪಿ ಟು ಬ್ಲೀಡ್ ಎಂದು ಅರಚಿಕೊಳ್ಳುವ ಮಹಿಳಾಮಣಿಗಳಿಗೆ ಏನೆನ್ನೋಣ? ಆ ನೋವು, ಆ ಸಂಕಟದ ದಿನಗಳನ್ನು ನೋಡುವಾಗ ಮತ್ತೊಂದು ಪ್ರಶ್ನೆ ಏಳುತ್ತದೆ, ಹ್ಯಾಪಿ ಟು ಬ್ಲೀಡ್? ರಿಯಲೀ??

ಯಪ್ಪಾ.. ಇವತ್ತು ಹ್ಯಾಪಿ ಟು ಬ್ಲೀಡ್ ಎನ್ನುವವರು ನಾಳೆ ಹ್ಯಾಪೀ ಟು ಶಿಟ್ ಅನ್ನದಿದ್ದರೆ ಸಾಕು!

ಅನಷ್ಕು

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!