ಹಿರಿಯ ಪತ್ನಿಯು ಇದಿರೊಳಿರಲು
ಹೃದಯ ತನ್ನರಸಿಯ ವಶಕಿರಲು
ಮರಣ ಸಮಯದಿ ಉಸುರಿದ್ದು
“ಹೇ ಮಹಾ ತಪಸ್ವಿನಿ ಸುಮಿತ್ರಾ”
ಮೂವರು ಹೆಂಡಿರು ದಶರಥಗೆ
ಗೌರವ ಪಟ್ಟದರಸಿ ಕೌಸಲ್ಯಾ
ಅರಸನೊಲುಮೆಯ ಕೈಕೇಯಿ
ಪ್ರೀತಿ ಗೌರವ ಸಿಗದ ಸುಮಿತ್ರಾ
ರಾಮನ ಮಾತೃದೇವತೆ ಕೌಸಲ್ಯ
ಕೈಕೇಯಿಗೆ ಪ್ರೀತಿಯ ಭರತ
ಸೌಮಿತ್ರೆಯರೀರ್ವರಿದ್ದರೇನು
ತಾಯಿಗೂ ಮಿಗಿಲು ಭ್ರಾತೃವಾತ್ಸಲ್ಯ
ಅರಮನೆಯ ಸಕಲ ವೈಭೋಗ
ಪತಿಯ ಸಖ್ಯಕೆ ಸಮವೆ?
ತುಂಬದದು ಪುತ್ರ ಪ್ರೇಮವ
ಒಪ್ಪಿಕೊಂಡಳೆಲ್ಲವ ಸ್ಥಿತಪ್ರಜ್ಞೆ
14 ವರ್ಷಗಳ ವನವಾಸ
ವಿಧಿಯಾಗಿತ್ತು ರಾಮನಿಗೆ
ದುಃಖವಿಲ್ಲ ಸಿಡುಕಿಲ್ಲವೇಕೆ
ಮಗ ರಾಮಪಾಲಕನಾದಾಗ
ಹೊರಟಿಹೆ ರಾಮನ ನೆರಳಾಗಿ
ಮರುಕವಿಲ್ಲ ಮಗನ ಮಾತಿಗೆ
ಹರಸಿದಳು ಕಂದಗೆ ಸುಖವ
ನಿಸ್ವಾರ್ಥ ಪ್ರೀತಿಯ ಮೆರೆಯುತ್ತಾ
ಆಧ್ಯಾತ್ಮಿಕ ಶಕ್ತಿ ರಾಮ
ಧರ್ಮೋ ರಕ್ಷತಿ ರಕ್ಷಿತಃ
ಹೆಮ್ಮೆಪಡು ಆತನ ತಾಯಿ
ಸಂತೈಸಿತು ಚೇತನ ಕೌಸಲ್ಯೆಯ
ತನ್ನ ತನುಜನೂ ಹೊರಟಿಹನು
ದುಃಖ ಕೊರಳ ಬಿಗಿದಿಹುದು
ತನ್ನ ನೋವ ಬಚ್ಚಿಟ್ಟು ಪರರ
ನಲಿಸುವರು ಅಪರೂಪವಲ್ತೆ?
ವಿಧಿಯ ಜರಿಯದೆ ಪರರ ಹಳಿಯದೆ
ಬಂದ ಫಲವ ಸ್ವೀಕರಿಸಿದಳು
ಶ್ರದ್ಧೆಯಿಂದಲಿ ಕಾರ್ಯ ಗೈಯುತ
ಮಹಾ ತಪಸ್ವಿನಿಯಾದಳು !!