ಅಂಕಣ

ಮೋದಿಜೀ, ಬೇಕಿರುವುದು ಕೆಲಸ, ಹಾರೈಕೆಯಲ್ಲ!

ಸೆಪ್ಟೆಂಬರ್ ಹದಿನೈದರಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ FB ಗೋಡೆಯಲ್ಲಿ ವಿಶ್ವೇಶ್ವರಯ್ಯರವರ ಫೋಟೋವನ್ನು ಹಾಕಿ “Happy Engineers Day to all my Engineer Friends” ಅಂತ ಶುಭ ಹಾರೈಸಿದ್ದರು. ನಾನೂ ಕೂಡಾ ಅದೇ ವರ್ಗಕ್ಕೆ ಸೇರಿದವನಾದ್ದರಿಂದ ಸಹಜವಾಗೇ ಹೆಮ್ಮೆಯೆನಿಸಿತು. ಹಿಂದಿನ ಪ್ರಧಾನಿಗಳ ಕಡೆಯಿಂದ ಇಂತಹ ಹಾರೈಕೆಗಳನ್ನೆಲ್ಲಾ ಕಾಣದಿದ್ದರಿಂದ ನನ್ನ ಹೆಮ್ಮೆಗೂ ಕಾರಣವಿತ್ತು. ಬಹಳ ಖುಷಿ ಆಯ್ತು ಆ ಪೋಸ್ಟ್ ನೋಡಿ. ಆದರೆ ಕೆಲವೇ ಕೆಲವು ಕ್ಷಣಗಳು ಮಾತ್ರ. ಕೆಳಗಿದ್ದ ಕಮೆಂಟುಗಳ ಮೇಲೆ ಕಣ್ಣಾಡಿಸಿದಾಗ ಖುಷಿಪಟ್ಟಷ್ಟೇ ವೇಗದಲ್ಲಿ ಬೇಸರವೂ ಆಯ್ತು. ಎಲ್ಲವೂ ನೆಗೆಟಿವ್ ಕಮೆಂಟುಗಳು, ಬಹಳ ಹತಾಶೆಯಿಂದ ಕೂಡಿದ್ದ ಕಮೆಂಟುಗಳು.

“Only greetings, No jobs”, “It should be celebrated as BHEROJGAR DAY”, “Remove the Reservation”, “We want jobs not your wishes Modiji” ಇವುಗಳು ಅಲ್ಲಿದ್ದ ಕಮೆಂಟುಗಳ ಸ್ಯಾಂಪಲ್’ಗಳು. ಅಲ್ಲಿ ಕಮೆಂಟು ಹಾಕಿದವರಿಗೆಲ್ಲಾ ತಾವು ಇಂಜಿನಿಯರುಗಳೆಂದು ಹೇಳಿಕೊಳ್ಳಲು ಬಹಳ ಹೆಮ್ಮೆಯಿತ್ತು. ಆದರೆ ಬರಿ ಹೇಳಿಕೊಳ್ಳಲು ಮಾತ್ರ ಇತ್ತು. ಯಾಕೆಂದರೆ ಹೆಚ್ಚುಕಡಿಮೆ ಅವರೆಲ್ಲಾ ಬರಿಗೈ ದಾಸರಾಗಿದ್ದರು. ಭರವಸೆ ಮೂಡಿಸಿರುವ ಒಬ್ಬ ಜನನಾಯಕನ ಪೋಸ್ಟ್’ಗೆ ಬಂದಿರುವ ಆ ಥರದ ಪ್ರತಿಕ್ರಿಯೆಗಳನ್ನು ನೋಡಿ ಬೇಸರವಾಯ್ತು, ಆ ಕಮೆಂಟುಗಳ ಬವಣೆಯನ್ನು ನೋಡಿ ಮನಸ್ಸು ಏನನ್ನೋ ಚಿಂತನೆಗೆ ಹಚ್ಚಿತು.

ಇಂಜಿನಿಯರುಗಳ ವಲಯದಲ್ಲಿ ಅಂತ ಮಾತ್ರ ಅಲ್ಲ, ಈ ನಿರುದ್ಯೋಗ ಸಮಸ್ಯೆಯೆಂಬುದು ದೇಶವನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯೆಂಬುದರಲ್ಲಿ ಸಂಶಯವೇ ಇಲ್ಲ. ಇವತ್ತು ದೇಶದಲ್ಲಿ ಸಾವಿರಾರು ಇಂಜಿನಿಯರಿಂಗ್ ಪದವಿ ನೀಡುವ ಕಾಲೇಜುಗಳಿವೆ. ಒಂದು ವರ್ಷದಲ್ಲಿ ಲಕ್ಷಾಂತರ ಇಂಜಿನಿಯರುಗಳು ಹೊರಬರುತ್ತಿದ್ದಾರೆ. ಅದರಲ್ಲಿ ಎಷ್ಟು ಜನಕ್ಕೆ ಕೆಲಸ ಸಿಗುತ್ತಿದೆ? ಎಷ್ಟು ಜನ ಸಿಕ್ಕಿದ ಕೆಲಸದಲ್ಲಿ, ಸಿಗುವ ಸಂಬಳದಲ್ಲಿ ಸಂತೃಪ್ತರಾಗಿದ್ದಾರೆ? ಎಂದು ಕೇಳಿದರೆ ಮೌನವೇ ಉತ್ತರವಾಗುತ್ತದೆ. ಆವಾಗ ಮೋದಿಜಿಯವರ ಹಾರೈಕೆಗಳು ನಮಗೆ ಬೇಕು ಎಂದು ಅನಿಸಿದರೂ ಹಾರೈಕೆ ಮಾತ್ರವಲ್ಲ, ಕೆಲಸವೂ ಬೇಕು ಎಂದು ಅನಿಸುತ್ತದೆ.

ಇತ್ತೀಚೆಗೆ ಯುವಕನೊಬ್ಬ ಈ ವಿಷಯದ ಕುರಿತು ನರೇಂದ್ರ ಮೋದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ಪತ್ರ ಬರೆದಿದ್ದನ್ನು ನಾನಿಲ್ಲಿ ಪ್ರಸ್ತಾಪಿಸುತ್ತೇನೆ. ಅದರಲ್ಲಿ ಇಂಜಿನಿಯರುಗಳ ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದ ಆತ. ನಿಮಗೆಲ್ಲಾ ಗೊತ್ತಿರುವ ಹಾಗೆ ಈಗ ಇಂಜಿನಿಯರಿಂಗ್ ಶಿಕ್ಷಣ ಪಡೆಯಬೇಕಾದರೆ ಕನಿಷ್ಟ ಎಂದರೂ ಐದಾರು ಲಕ್ಷ ಬೇಕು. ಇಂಜಿನಿಯರ್ ಆಗಬೇಕೆಂದು ಕನಸು ಹೊತ್ತ ಬಡಕುಟುಂಬಗಳ ಮಕ್ಕಳಿಗೆ ಅದು ಬರೀ ಕನಸಿನ ಮಾತು. ಆದರೀಗ ಬ್ಯಾಂಕುಗಳು ಶೈಕ್ಷಣಿಕ ಸಾಲ ನೀಡುತ್ತಿರುವುದರಿಂದ ಬಡಮಕ್ಕಳೂ ಸಹ ಇಂಜಿನಿಯರ್, ಡಾಕ್ಟರ್ ಆಗುವುದು ಸಾಧ್ಯವಾಗಿದೆ. ಹಾಗೆ ಲಕ್ಷಗಟ್ಟಲೆ ಸಾಲ ಮಾಡಿ ಉನ್ನತ ಶಿಕ್ಷಣಕ್ಕೆ ಸೇರಿಕೊಳ್ಳುತ್ತಾರೆ. ಹಾಸ್ಟೆಲ್, ಎಕ್ಸಾಂ ಫೀ, ಮತ್ತೊಂದು ಮಗದೊಂದು ಎಂದು ನಾಲ್ಕು ವರ್ಷಗಳಲ್ಲಿ ಇನ್ವೆಸ್ಟ್ ಮಾಡಿದ್ದೇ ಅರಿವಿರುವುದಿಲ್ಲ. ಹಾಗೋ ಹೀಗೋ ಕೋರ್ಸ್ ಮುಗಿದು ಬಿಡುತ್ತದೆ.

ಜೀವನದಲ್ಲಿ ಗಂಭೀರತೆಯೆನ್ನುವುದು ಬರುವುದೇ ಆವಾಗ ನೋಡಿ. ಕ್ಯಾಂಪಸ್ ಸೆಲೆಕ್ಷನ್ ಆಗಿದ್ದರೆ ಬಚಾವ್, ಇಲ್ಲಾಂದರೆ ಕೇಳುವುದೇ ಬೇಡ. ಈಗಂತೂ ನಿಮಗೆ ಮಾರ್ಕ್ಸ್ ಎಷ್ಟೇ ಇರಲಿ. ಎಕ್ಸ್’ಪೀರಿಯೆನ್ಸ್ ಇಲ್ಲದಿದ್ದರೆ off campus ನಲ್ಲಿ ಯಾರೂ ನಿಮ್ಮನ್ನು ಕೇರ್ ಮಾಡುವುದಿಲ್ಲ. ನೀವು ಕಳುಹಿಸಿದ ರೆಸ್ಯೂಮುಗಳು ಮುಲಾಜಿಲ್ಲದೆ ಶಿಫ಼್ಟ್ ಡಿಲೀಟಾಗುತ್ತದೆ. ಈ ರೆಸ್ಯೂಮ್ ಕಳುಹಿಸುವುದು, ಅವರ ಉತ್ತರಕ್ಕೆ ಕಾಯುವುದರಲ್ಲೇ ತಿಂಗಳು ಆರು ಕಳೆದಿರುತ್ತದೆ. ಅಷ್ಟೊತ್ತಿಗೆ ‘ಬ್ಯಾಂಕ್ ಸಾಲ ಹಿಂದಿರಿಗುಸುವ ಸಮಯವಾಗುತ್ತಾ ಬಂತು” ಎನ್ನುವ ಎಚ್ಚರಿಕೆ ತಲೆಯೊಳಗೆ ಗುಂಯ್’ಗುಡಲು ಶುರುವಾಗುತ್ತದೆ. ಅಮೇಲೆಲ್ಲಾದರೂ ಇಂಟರ್’ವ್ಯೂಗೆ ಕರೆಬಂತೆಂದರೆ ಅಲ್ಲಿಯೂ ನಿಮ್ಮ ಎಕ್ಸ್’ಪೀರಿಯೆನ್ಸ್’ನ ಪ್ರಶ್ನೆ ಬರುತ್ತದೆ. ರೆಫ಼ರೆನ್ಸ್ ಇದ್ದರೆ ಯಾವ ಮಾರ್ಕೂ ಬೇಡ, ಯಾವ ಎಕ್ಸ್’ಪೀರಿಯೆನ್ಸೂ ಬೇಡ.ನೇರ ಪ್ರವೇಶ ಖಚಿತವಾಗಿ ಸಿಗುತ್ತದೆ. ಇಂಜಿನಿಯರಿಂಗ್ ಆಗಿ ಎಮ್.ಟೆಕ್ ಆಗಿದ್ದರೂ ಕೆಲಸಕ್ಕಾಗಿ ಹೆಣಗಾಡಬೇಕಾದ ಪರಿಸ್ಥಿತಿ ದೇಶದಲ್ಲಿದೆ.

ಹಾಗೂ ಒಂದು ವೇಳೆ ದೇವರ ದಯೆಯಿಂದ ಕೆಲಸ ಸಿಕ್ಕಿತೆಂದುಕೊಳ್ಳಿ. ಸಂಬಳವೆಷ್ಟು ಅಂತ ಮಾತ್ರ ಕೇಳಬೇಡಿ. ಕೆಲವೇ ಕೆಲವರಿಗೆ ಮಾತ್ರ ಉತ್ತಮ ಸಂಬಳವಿರುತ್ತದೆ. ಉಳಿದವರು ಹೇಳಿಕೊಳ್ಳಲಷ್ಟೇ ಇಂಜಿನಿಯರುಗಳಾಗಿರುತ್ತಾರೆ ಬಿಟ್ಟರೆ ಸಂಪಾದನೆಯ ವಿಷಯದಲ್ಲಿ ನರೇಗಾದ ದಿನಗೂಲಿ ಕಾರ್ಮಿಕರೂ ಆಗಿರುವುದಿಲ್ಲ. ನಂಬಿ, ಎರಡು ವರ್ಷದ ಹಿಂದೆ ನನ್ನ ಕ್ಲಾಸ್’ಮೇಟ್ ಒಬ್ಬ ಹೆಣಗಾಡಿ ಕೆಲಸವೊಂದನ್ನು ಪಡೆದುಕೊಂಡಾಗ ಅವನಿಗೆ ಸಿಕ್ಕಿದ ಆಫರ್ ಬರೇ ಮೂರು ಸಾವಿರ! ಎಕ್ಸ್’ಪೀರಿಯೆನ್ಸ್ ಇಲ್ಲದಿದ್ದರೂ ಲಕ್ಷಾಂತರ ಸುರಿದು ಗಳಿಸಿದ ಆ ಪದವಿಗಾದರೂ ಬೆಲೆ ಬೇಕಲ್ಲವಾ? ನರೇಗಾದ ಕಾರ್ಮಿಕರಿಗೆ ಇದಕ್ಕಿಂತ ಹೆಚ್ಚಿನ ಉತ್ಪತ್ತಿಯಿರುವುದಿಲ್ಲವಾ? ಹೇಳಿ.

ಮತ್ತೊಂದು ಗಮನಿಸಲೇಬೇಕಾದ ಸಂಗತಿಯೆಂದರೆ, ಇತ್ತೀಚೆಗಿನ ವರ್ಷಗಳಲ್ಲಿ ಅಕ್ಕಿ, ಗೋಧಿಯಿಂದ ಹಿಡಿದು ನಮ್ಮ ದಿನನಿತ್ಯದ ಪ್ರತಿಯೊಂದು ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ಆದರೆ ಇಂಜಿನಿಯರುಗಳ ಅಥವಾ ಇತರ ಯಾವುದೇ ನೌಕರರ ಬೇಸಿಕ್ ಸ್ಯಾಲರಿ ಏರಿಕೆಯಾಗಿರುವುದನ್ನು ಯಾರದರೂ ಕೇಳಿದ್ದೀರಾ? ಛಾನ್ಸೇ ಇಲ್ಲ. ಅದಿನ್ನೂ ಎಂಟು ಹತ್ತು ಸಾವಿರಗಳಲ್ಲೇ ಇದೆ. ಆ ಹತ್ತು ಸಾವಿರಗಳಲ್ಲಿ ಐದು ಸಾವಿರ ಬ್ಯಾಂಕ್ ಸಾಲದ ಸಲುವಾಗಿ ಹೋಯ್ತು. ಇನ್ನೈದು ತನ್ನ ಖರ್ಚಿಗೆ ಕಳೆಯುವಷ್ಟರಲ್ಲಿ ಕೈಯಲ್ಲಿ ನಯಾಪೈಸೆ ಉಳಿಯುವುದಿಲ್ಲ. ಮಹಾನಗರಗಳಲ್ಲಿ ಕೆಲಸ ಮಾಡುವವರಾಗಿದ್ದರೆ ಅಪ್ಪನೇ ಖರ್ಚಿಗೆ ಹಣ ಕೊಡಬೇಕಾದ ಪರಿಸ್ಥಿತಿ. Experience first, Salary next ಎಂದು ಹೆಣಗಾಡಿಕೊಂಡು ಒಂದು ವರ್ಷ ಪೂರೈಸಿದರೆ ಐನೂರು, ಒಂದು ಸಾವಿರ ಇಂಕ್ರಿಮೆಂಟು. ಇವರ ಸಹವಾಸವೇ ಬೇಡವೆಂದು ಬೇರೆ ಕಂಪೆನಿ ಸೇರಿಕೊಳ್ಳೋಣ ಎಂದುಕೊಂಡರೆ ಅಲ್ಲಿ ಇದಕ್ಕಿಂತಲೂ ಕಡಿಮೆ ಸಂಬಳದ ಆಫರ್.. ಬೇಕಾ ಇಂಜಿನಿಯರಿಂಗ್!!

ಮೋದಿಜಿ, ಎಲ್ಲಾ ಇಂಜಿನಿಯರುಗಳನ್ನು ಪ್ರತಿನಿಧಿಸಿ ಕೇಳುತ್ತಿದ್ದೇನೆ. ಈ ವ್ಯವಸ್ಥೆಗಳೆಲ್ಲಾ ಸರಿಯಾಗಬೇಕೆಂದು ನಿಮಗೆ ಅನಿಸುವುದಿಲ್ಲವೇ? ಪ್ರೈವೇಟ್ ಕೆಲಸ ಇರಲಿ, ಸರಕಾರಿ ಕೆಲಸ ಇರಲಿ, ಲಕ್ಷಾಂತರ ಸುರಿದು ಪದವಿ ಗಳಿಸಿರುವ ಇಂಜಿನಿಯರುಗಳಿಗೆ ಉತ್ತಮವಾದ ಬೇಸಿಕ್ ಸ್ಯಾಲರಿ ಸಿಗಬೇಕಲ್ಲವೇ? Of course, ಮೊನ್ನೆ ಕಮೆಂಟು ಮಾಡಿದವರೆಲ್ಲಾ ಇಂಜಿನಿಯರುಗಳೇ ಆಗಿರಲಿಕ್ಕಿಲ್ಲ, ನಿಮ್ಮ ವಿರೋಧಿಗಳಾಗಿರಬಹುದು, ಕಾಂಗ್ರೆಸ್ಸ್ ಪಕ್ಷದವರಾಗಿರಬಹುದು, ಫ಼ೇಕ್ ಅಕೌಂಟುಗಳೇ ಆಗಿರಬಹುದು. ಆದರೆ ಎಲ್ಲವೂ ಫ಼ೇಕ್ ಆಗಿರಲು ಸಾಧ್ಯವಿಲ್ಲ ಅಲ್ಲವೇ? ಎಲ್ಲಕ್ಕಿಂತ ಮಿಗಿಲಾಗಿ ಅದೆಲ್ಲಾ ಖಂಡಿತವಾಗಿಯೂ ವಾಸ್ತವ ಸಂಗತಿ. ನನಗೆ ಚೆನ್ನಾಗಿ ಗೊತ್ತು, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಮುಂತಾದ ಯೋಜನೆಗಳೊಂದಿಗೆ ನಿರುದ್ಯೋಗ ನಿವಾರಣೆಗಾಗಿ ನೀವು ಶತಾಯ ಗತಾಯ ಪ್ರಯತ್ನಿಸುತ್ತಿದ್ದೀರಿ. ನೀವು ಏನೂ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ನಾನು ಹೇಳುತ್ತಿಲ್ಲ. ನಿಜ ಹೇಳಬೇಕೆಂದರೆ ಹಿಂದಿನ ಕಾಂಗ್ರೆಸ್ಸ್ ಸರಕಾರ ಇಂತಹಾ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂಬ ಭರವಸೆಯಿರಲಿಲ್ಲ ನಮಗೆ. ನಮಗೆ ಕಂಡ ಏಕೈಕ “Ray of Hope” ನೀವಾಗಿರುವುದರಿಂದ, ಈ ಸಮಸ್ಯೆಗಳನ್ನೆಲ್ಲಾ ಬಗೆಹರಿಸುವ ತಾಕತ್ತು ನಿಮಗೆ ಮಾತ್ರ ಇರುವುದರಿಂದ ನಿಮ್ಮ ಗಮನಕ್ಕೆ ಇದನ್ನೆಲ್ಲಾ ತರೋಣವೆನಿಸಿತು. ನಿಮ್ಮ ಕೈಯಲ್ಲಿ ಇನ್ನೂ ಮೂರೂವರೆ ವರ್ಷವಿದೆ. ಮುಂದಿನ ಭಾರಿಯೂ ನೀವು ಪ್ರಧಾನಿಯಾಗುವುದನ್ನು ತಪ್ಪಿಸಲು ಯಾವ ಢೋಂಗಿ ಗಾಂಧಿಯಿಂದಲೂ ಸಾಧ್ಯವಿಲ್ಲ. ಆದರೆ ಈ ಸಮಸ್ಯೆ ಬೇಗ ಪರಿಹಾರವಾಗಲಿ ಎಂಬುದಷ್ಟೇ ನನ್ನ ಕಾಳಜಿ.

Swathi bengalooru

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!