ಅಂಕಣ

ಹತ್ತಿರವಿದ್ದರೂ ದೂರ ದೂರ….

ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮಿನ ಕೋಟೆಯಲಿ….

ಕೆಲವು ಹಾಡುಗಳೇ ಹಾಗೆ, ಇದ್ದಕ್ಕಿದ್ದ ಹಾಗೆ ನೆನಪಾಗಿ ಕಾಡುತ್ತವೆ. ಯಾವುದೋ ಘಳಿಗೆಯಲ್ಲಿ ಮನಸ್ಸು ಗುನಗತೊಡುಗುತ್ತದೆ ಕಾರಣಗಳ ಕಾಲದ ಪರಿವೆಯಿಲ್ಲದೆ, ಎಳೆ ಹಿಡಿದು ಹೊರಟರೆ ಪ್ರತಿಸಲವೂ ಹೊಸ ಅರ್ಥ ಹೊಸ ಭಾವ, ಎಂದಿಗೂ ಹಳೆಯದೆನಿಸದೆ ಬೇಜಾರೂ ಬಾರದೆ ಮತ್ತೆ ಮತ್ತೆ ನೆನಪಾಗುತ್ತಲೇ ಇರುತ್ತದೆ.

ಬಾಯಿ ಸಾಲುಗಳನ್ನು ಗುನುಗುತ್ತಿದ್ದ ಹಾಗೆ ತನ್ನ ಕೆಲಸ ಮುಗಿಯುತು ಎಂಬಂತೆ ಮನಸ್ಸು ತನ್ನ ನಾಗಾಲೋಟ ಶುರುವಿಟ್ಟು ನೆನಪುಗಳ ರಾಶಿಯನ್ನು ಹರಡುತ್ತಿತ್ತು. ಅನುಭವಗಳೂ ಜೊತೆಗೂಡಿ ಜೋಗುಳ ಹಾಡುತ್ತಿತ್ತು. ಅರೆ ಹೌದಲ್ವಾ ಹತ್ತಿರವಿದ್ದಷ್ಟೂ ನಾವೆಷ್ಟು ದೂರ ದೂರ ಎಂಬ ವಿಷಾದ ಮಡುಗಟ್ಟುತ್ತಿತ್ತು . ಕೈ ಬೆರಳುಗಳು ಸೋಕುವಷ್ಟು ಹತ್ತಿರವಿದ್ದರೂ ಕೆಲವೊಮ್ಮೆ ಮನಸ್ಸುಗಳು ಮಾತ್ರ ತಲುಪಲಾರದಷ್ಟು ದೂರ.

ನಾವು ಚಿಕ್ಕವರಿದ್ದಾಗ ಸಂಜೆಯಾಗುವುದನ್ನೇ ಕಾಯುತ್ತಿದ್ದೆವು. ಹಗಲೆಲ್ಲಾ ತಮ್ಮ ತಮ್ಮ ಕೆಲಸಗಳಲ್ಲಿ ಮುಳುಗಿರುತ್ತಿದ್ದ, ಹೊರಗೆ ಹೋಗಿರುತ್ತಿದ್ದ ಮನೆಯವರೆಲ್ಲಾ ಒಟ್ಟಿಗೆ ಜಗಲಿಯಲ್ಲಿ ಸೇರಿ ಹರಟುತ್ತಿದ್ದೆವು. ಪ್ರತಿಯೊಬ್ಬರ ತಲ್ಲಣಗಳೂ, ಮುನಿಸು, ಪ್ರೀತಿ, ಎದುರಾದ ಘಟನೆಗಳೂ ಎಲ್ಲವೂ ಮಾತಿನ ಮೂಲಕ ಹೊರಬಂದು ಮನಸ್ಸುಗಳು ನಿರಾಳವಾಗುತ್ತಿದ್ದವು. ಮಾತು ಮುಗಿದ ಮೇಲಿನ ಮೌನದಲ್ಲಿ ಸಂಬಂಧಗಳು ಗಟ್ಟಿಯಾಗುತ್ತಿದ್ದವು. ನೆಮ್ಮದಿ ಅರಳುತ್ತಿತ್ತು. ಇನ್ಯಾವುದೋ ಜಗಲಿಯಲ್ಲಿ , ಮರದ ಬುಡದಲ್ಲಿ ನಡೆಯುವ ಚರ್ಚೆ, ಹರಟೆ, ಕಥಾ ಶ್ರವಣ ಸಮಯ ಕಳೆಯುವುದರ ಜೊತೆಗೆ ಬಾಂಧವ್ಯವನ್ನು ಬೆಳೆಸುತಿತ್ತು.

ಹೀಗಿರುವಾಗ ಮನೆಗೆ ಹೊಸ ಸದಸ್ಯನ ಆಗಮನವಾಯ್ತು ನೋಡಿ ಅದು ಬದುಕಿನ ಗತಿಯನ್ನೇ ಬದಲಾಯಿಸಿಬಿಟ್ಟಿತು. ನಿಧಾನವಾಗಿ ಎಲ್ಲರೂ ಅದರತ್ತಲೇ ಆಕರ್ಷಣೆಗೆ ಒಳಗಾಗಿ ಮಾತಾಡುತ್ತಿದ್ದ ಬಾಯಿಗಳು ಮೌನವಾಗಿ ಕೇಳಿಸಿಕೊಳ್ಳಲು ಶುರುಮಾಡಿದವು. ಬಿತ್ತರವಾಗುತ್ತಿದ್ದ ಯಾರದ್ದೋ ಕಷ್ಟಕ್ಕೆ ಕಿವಿಯಾಗುತ್ತಿದ್ದ, ಮರುಗುತ್ತಿದ್ದ ಮನಸ್ಸಿಗೆ ಮನೆಯ ಸುದ್ದಿ ಕೇಳಿಸಿಕೊಳ್ಳುವ ಸಮಯ ಕಡಿಮೆಯಾಗತೊಡಗಿತು. ಈ ವಿಮುಖತೆ ಅರಿವಿಗೆ ಬರುವ ಮೊದಲೇ ವ್ಯಾಮೋಹ ಹಿಂದಕ್ಕೆ ಬರಲಾರದಷ್ಟು ದೂರಕ್ಕೆ ಕೊಂಡೊಯ್ದು ಬಿಟ್ಟಿದೆ. ಇಂದು ಟಿ.ವಿ. ಬದುಕಿನ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ಶೌಚಾಲಯವಿಲ್ಲದ ಮನೆಯ ಗೋಡೆಯಲ್ಲೂ ಅದು ಬಹು ಮುಖ್ಯ ಸ್ಥಾನ ಪಡೆದಿದೆ.

ಅಗತ್ಯ ಮಾತು ಕತೆಗಳಿಗಾದರೂ ಮುಖಾಮುಖಿಯಾಗಬೇಕಾದ ಅವಕಾಶವನ್ನೂ, ಸನ್ನಿವೇಶವನ್ನೂ ಕಿತ್ತುಕೊಂಡ ಕೀರ್ತಿ ಸಲ್ಲಬೇಕಾದದ್ದು ಮಾತ್ರ ಮೊಬೈಲ್’ಗೆ ಹಾಗೂ ಅದರ ಜೊತೆಗೆ ಕೈ ಗೂಡಿಸಿದ ಇಂಟರ್ನೆಟ್ ಎಂಬ ಮಾಯಾವಿಗೆ. ಮೊದಲೆಲ್ಲಾ ಕಠಿಣವಾಗಿ ಮಾತಾಡಬೇಕಾದ ಸಂದರ್ಭ ಬಂದಾಗ ಎದುರಿನ ವ್ಯಕ್ತಿಯ ಮುಖ ನೋಡಿದೊಡನೆ ಸಹಜವಾಗಿಯೇ ದ್ವನಿ ಮತ್ತು ಮಾತು ತಮ್ಮ ಮಿತಿಯಲ್ಲಿರುತ್ತಿದ್ದವು. ಈಗ ಹಾಗೇನಿಲ್ಲ ಮುಖ ನೋಡದೆಯೇ, ಯಾವುದೇ ಹಿಂಜರಿಕೆಯಿಲ್ಲದೆ ಹೇಳಬೇಕಂದಿರುವ ಮಾತುಗಳನ್ನು ಯಾಂತ್ರಿಕವಾಗಿ ತಲುಪಿಸಿಬಿಡಬಹುದು. ಕಿವಿಗಳಿಗಷ್ಟೇ ಕೆಲಸ ನೋಡುವ ಕಣ್ಣುಗಳು ಅರಿಯುವ ಮನಸ್ಸು ದೂರ ದೂರ.

ಕಾಣದ ಕಡಲಿಗೆ ಹಂಬಲಿಸಿದೆ ಮನ.. ಎಂಬಂತೆ ಎಲ್ಲೋ ದೂರದಲ್ಲಿರುವವರ ಜೊತೆಗೆ ಇಂದು ಬೆರಳುಗಳು ಸರಾಗವಾಗಿ, ಸಿಹಿಯಾಗಿ ಮಾತನಾಡಿದಷ್ಟು ಸುಲಭವಾಗಿ ಪಕ್ಕದಲ್ಲಿರುವ ವ್ಯಕ್ತಿಯ ಜೊತೆ ಬಾಯಿ ಮಾತನಾಡಲಾರದು. ಮೊಬೈಲ್ ಪರದೆಯನ್ನು ನೋಡುವಷ್ಟು ಸುಲಭವಾಗಿ ಕಣ್ಣುಗಳು ಎದುರಿಗಿನ ವ್ಯಕ್ತಿಯ ಮುಖ ನೋಡಿ ಅಭಿಪ್ರಾಯ ವ್ಯಕ್ತಪಡಿಸದು. ಒಂದೇ ಮನೆಯಲ್ಲಿ ಇದ್ದರೂ ಎಲ್ಲರೂ ಅವರವರ ಮೊಬೈಲ್ ಗಳಲ್ಲಿ ಹರಟುವುದರಲ್ಲಿ ಮಗ್ನರಾದಷ್ಟು ಮನೆಯರೊಂದಿಗೆ ಬೆರೆಯಲಾರರು ಹೀಗೆಂದು ಕೊಳ್ಳುತ್ತಿದ್ದಾಗಲೇ ಪಕ್ಕನೆ ನೆನಪಾಗಿದ್ದು

ಇಷ್ಟುಕಾಲ ಒಟ್ಟಿಗಿದ್ದೂ ಎಷ್ಟು ಬೆರೆತರೂ, ಅರಿತೆವೇನು ನಾವು ನಮ್ಮ ಅಂತರಾಳವ … ಅನ್ನೋ ಸಾಲು.

ಹಾಗಾದರೆ ಇಲ್ಲಿ ಅರ್ಥವಾಗದ್ದು ಯಾರು? ನಾವಾ… ಅವರಲ್ಲವಾ… ಎಂದು ಆಲೋಚಿಸುತ್ತಿರುವಾಗಲೇ ಇನ್ನಷ್ಟು ಭಾವಗಳ ಹರಿವು.. ಕೆಲವು ಸಾಹಿತ್ಯಗಳೇ ಹಾಗೆ ಒಮ್ಮೆ ಅರ್ಥವಾದಂತೆ ಭಾಸವಾಗುತ್ತಾ, ಇನ್ನೊಮ್ಮೆ ಕಾಡುತ್ತಾ, ಅರಿವಿಗೆ ಬಾರದಂತೆ ಮರೆಯಾಗುತ್ತಾ ಇನ್ಯಾವುದೋ ಕ್ಷಣದಲ್ಲಿ , ತಿರುವಿನಲ್ಲಿ ಧುತ್ತೆಂದು ಎದುರಾಗುತ್ತದೆ ಮತ್ತಷ್ಟು ಹೊಸತನದೊಂದಿಗೆ.

ಹಾಡು ಹಳೆಯದಾದರೇನು, ಭಾವ ನವನವೀನ..

Shobha rao

shobhaskrao@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!