ಮಾನವನ ಅಂತರಂಗ ಎರಡು ರೀತಿಯಲ್ಲಿ ವಿಭಾಗಿಸಲ್ಪಡುತ್ತದೆ. ಅದನ್ನು ಮನಸ್ಸು ಹಾಗೂ ಹೃದಯ ಎಂದು ಕರೆಯುತ್ತಾರೆ. ಮನಸ್ಸು ಮನುಷ್ಯನ ಅಂತರಂಗದ ವಿಚಾರಶೀಲ ಭಾಗವಾದರೆ ಹೃದಯ ಭಾವನಾತ್ಮಕ ಭಾಗ. ನಮ್ಮ ಸುತ್ತಮುತ್ತಲಿನ ವಿದ್ಯಮಾನಗಳನ್ನು ಮನಸ್ಸು ವೈಚಾರಿಕ ವೈಜ್ಞಾನಿಕ ದೃಷ್ಟಿಯಲ್ಲಿ ನೋಡಲೆತ್ನಿಸಿದರೆ ಅದನ್ನೇ ಹೃದಯ ಭಾವನೆ ನಂಬಿಕೆಗಳ ಆಧಾರದಲ್ಲಿ ಅರ್ಥೈಸಲು ಯತ್ನಿಸುತ್ತದೆ. ಒಟ್ಟಿನಲ್ಲಿ ಮನಸ್ಸು ಹಾಗೂ ಹೃದಯ ತದ್ವಿರುದ್ಧ. ತಮ್ಮ ಬುದ್ಧಿಗೆ ಹೆಚ್ಚು ಬೆಲೆಕೊಡುವವರು ವೈಚಾರಿಕರಾಗಿರುತ್ತಾರೆ ಹಾಗೂ ತಮ್ಮ ಹೃದಯಕ್ಕೆ ಬೆಲೆ ಕೊಡುವವರು ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಯಾವುದೇ ಒಂದು ಪವಾಡಸದೃಶ ಘಟನೆ ನಡೆದಾಗ ವಿಚಾರವಂತರು ಅದನ್ನು ತಾರ್ಕಿಕ ದೃಷ್ಟಿಯಲ್ಲಿ ಅರ್ಥೈಸಲು ಯತ್ನಿಸಿದರೆ ಭಾವನಾತ್ಮಕ ಜೀವಿಗಳು ಅದರ ಹಿಂದೆ ಒಂದು ಶಕ್ತಿಯ ಅಥವಾ ಮನುಷ್ಯನ ಮನಸ್ಸನು ಮೀರಿದ ಒಂದು ಅವಸ್ಥೆಯ ಒಳಗೊಳ್ಳುವಿಕೆಯನ್ನು ನಂಬುತ್ತಾರೆ. ಜೀವನದಲ್ಲಿ ನಂಬಿಕೆಗೆ ಬೆಲೆಕೊಡುವವರನ್ನು ವೈಚಾರಿಕರು ಇಷ್ಟಪಡುವುದಿಲ್ಲ. ಅಂತಹ ನಂಬಿಕೆಗಳನ್ನು ಮೂಢನಂಬಿಕೆ ಎಂದೇ ಜರೆಯುತ್ತಾರೆ. ಅದೂ ಸಾಮಾನ್ಯವಾಗಿ ದೈವ ದೇವರುಗಳ ವಿಷಯಕ್ಕೆ ಸಂಬಂಧಿಸಿರುತ್ತವೆ. ಧಾರ್ಮಿಕ ನಂಬಿಕೆಗಳನ್ನು ಆಚರಣೆಗಳನ್ನು ಆಧುನಿಕ ಕಾಲದಲ್ಲಿ ವಿಚಾರಶೀಲ ವ್ಯಕ್ತಿಗಳೆನಿಸಿಕೊಂಡವರು ಗೊಡ್ಡು ಸಂಪ್ರದಾಯ ಆಚರಣೆ ಎಂದೇ ಹೀಯಾಳಿಸುತ್ತಾರೆ. ಯಾವುದೇ ಆಚರಣೆ ಇರಲಿ ಅದಕ್ಕೆ ಒಂದು ವೈಜ್ಞಾನಿಕ ಆಧಾರ, ಅರ್ಥ ಬೇಕು ಅದಿಲ್ಲದೇ ಮಾಡುವ ಆಚರಣೆಗಳಿಗೆ ಯಾವುದೇ ಮೌಲ್ಯವಿಲ್ಲ. ಹಾಗಾಗಿ ಅಂತದ್ದನ್ನು ನಿಲ್ಲಿಸಿ ಜೀವನವನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಸಾಗಿಸಬೇಕು ಎನ್ನುವುದು ಇವರ ವಾದ. ಹಾಗೂ ಅದರಲ್ಲಿ ತಪ್ಪೇನಿಲ್ಲ.
ಆದರೆ ಇಲ್ಲಿ ನಾನು ಹೇಳಹೊರಟಿರುವುದು ಈ ಆಧುನಿಕ ಕಾಲದಲ್ಲಿಯೂ ಮೂಢನಂಬಿಕೆ ಹೇಗೆ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂಬುದರ ಬಗ್ಗೆ. ಯಾವುದೇ ನಂಬಿಕೆಗೆ ಹೇಳಿಕೊಳ್ಳುವಂತ ಪುರಾವೆ ಇಲ್ಲದಿದ್ದಾಗ ಅದು ಮೂಢನಂಬಿಕೆಯಾಗುತ್ತದೆ. ಆದರೆ ಈ ಮೂಢನಂಬಿಕೆ ಎನ್ನುವುದು ಕೇವಲ ಧಾರ್ಮಿಕ ಸಂಪ್ರದಾಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಧಾರ್ಮಿಕ ಆಚರಣೆಗಳನ್ನು ಹೊರತುಪಡಿಸಿ ಇತರೆ ವಿಷಯಗಳಲ್ಲೂ ಮೂಢನಂಬಿಕೆ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಇನ್ನೂ ವಿಶೇಷವೇನೆಂದರೆ ಯಾರು ಧಾರ್ಮಿಕ ಆಚರಣೆಗಳನ್ನು ವಿರೋಧಿಸುತ್ತಾ ಮೂಢನಂಬಿಕೆ ಎಂದು ಜರೆಯುತ್ತಾರೋ ಅವರೂ ಸಹ ಒಂದಲ್ಲ ಒಂದು ವಿಷಯದಲ್ಲಿ ಈ ಮೂಢನಂಬಿಕೆಗಳ ದಾಸರಾಗಿದ್ದಾರೆ. ಪ್ರಾಚೀನ ಕಾಲದ ಕೆಲವು ಅರ್ಥವಿಹೀನ ಆಚರಣೆಗಳ ಕುರಿತಾಗಿ ಎಷ್ಟೋ ಜನ ಹಲವು ವರ್ಷಗಳಿಂದ ಬರೆದಿದ್ದಾರೆ. ಈಗ ಆಧುನಿಕ ಕಾಲದ ನಮ್ಮ ಸುತ್ತಮುತ್ತಲೂ ದಿನನಿತ್ಯ ಕಾಣಸಿಗುವ ನಮಗರಿವಿಲ್ಲದೆಯೇ ನಾವು ಪರಿಪಾಲಿಸುವ ಮೂಢನಂಬಿಕೆಗಳ ಕುರಿತು ಮಾತಾಡೋಣ.
ಚಿಕ್ಕ ಉದಾಹರಣೆಯೊಂದಿಗೆ ಆರಂಭಿಸೋಣ. ಅದು ಮಾರ್ಚ್-ಎಪ್ರಿಲ್ ತಿಂಗಳ ಸಮಯ. ನೀವು ರಸ್ತೆಯಲ್ಲಿ ನಡೆಯುತ್ತಾ ಹೋಗುತ್ತೀರಿ. ಮಧ್ಯಾಹ್ನದ ಸಮಯ. ಆ ಬಿಸಿಲಿನ ಝಳಕ್ಕೆ ಆಯಾಸ ಸುಸ್ತು ನಿಮ್ಮನ್ನು ಆವರಿಸುತ್ತದೆ. ತಕ್ಷಣ ಒಂದು ಅಂಗಡಿ ಕಾಣಸಿಗುತ್ತದೆ. ಅಲ್ಲಿ ಹೋಗಿ ಒಂದು ಎಳನೀರು ಕುಡಿದಿರೋ ನಿಮಗೊಂದು ಸಲಾಮ್. ಏಕೆಂದರೆ ಎಳನೀರು ತುಂಬಾ ಮಿನರಲ್ ಗಳನ್ನು ಹೊಂದಿದ ಶಕ್ತಿವರ್ಧಕ ಪಾನೀಯ. ಹಾಗಾಗಿ ನಿಮ್ಮ ಆಯ್ಕೆ ಸರಿಯಾಗೇ ಇದೆ. ಆದರೆ ಅಲ್ಲಿ ನಿಮಗೊಂದು ಎನರ್ಜಿ ಡ್ರಿಂಕ್ ಕಾಣಸಿಗುತ್ತದೆ. ಅದರ ಬ್ರಾಂಡಿಂಗ್ ಹಾಗೂ ಪ್ಯಾಕಾಜಿಂಗ್ ನೋಡಿ ಅದಕ್ಕೆ ಮರುಳಾಗಿ ಅದನ್ನೇ ಆರ್ಡರ್ ಮಾಡಿರಿ ಎಂದುಕೊಳ್ಳಿ. ನೀವಿನ್ನೂ ಮೂಢನಂಬಿಕೆಯ ಕಪಿಮುಷ್ಟಿಯಿಂದ ಮುಕ್ತರಾಗಿಲ್ಲ ಎಂದೇ ಅರ್ಥ. ನಿಜವಾಗಿಯೂ ಆ ರೀತಿಯ ಎನರ್ಜಿ ಡ್ರಿಂಕ್ ಗಳು ಶಕ್ತಿ ಕೊಡುತ್ತವಾ ? ಎಲ್ಲೋ ಕೆಲವು ಪಾನೀಯಗಳಲ್ಲಿ ಮಿನರಲ್ ಗಳು ಇರಬಹುದು. ಆದರೆ ಬಹುತೇಕ ಪಾನೀಯಗಳು ಕೃತಕ ರಾಸಾಯನಿಕಗಳನ್ನೇ ಹೊಂದಿರುತ್ತವೆ. ನೀವು ಕೇವಲ ಅದರ ಹೆಸರು ನೋಡಿ ಮರುಳಾಗುತ್ತೀರಿ. ಆ ರೀತಿಯ ಪಾನೀಯಗಳು ಯಾವ ಶಕ್ತಿಯನ್ನೂ ಕೊಡುವುದಿಲ್ಲ. ಆದರೆ ಅವು ಶಕ್ತಿ ಕೊಡುತ್ತವೆ ಎಂದು ನೀವು ಬಲವಾಗಿ ನಂಬಿರುವುದರಿಂದ ಅದನ್ನು ಸೇವಿಸಿದಾಗ ಆಯಾಸ ಕಡಿಮೆಯಾದಂತೆ ನೀವು ಯೋಚಿಸುತ್ತೀರಿ ಅಷ್ಟೆ. ಇದು ಮೂಢನಂಬಿಕೆಯಲ್ಲದೆ ಮತ್ತೇನು ? ಢೋಂಗಿ ಬಾಬಾಗಳು ಜ್ಯೋತಿಶಿಗಳು ಯಾವ ರೀತಿ ನಿಮ್ಮ ಮನಸ್ಸಿನ ದೌರ್ಬಲ್ಯವನ್ನು ಉಪಯೋಗಿಸಿ ತಮ್ಮ ಜೇಬುತುಂಬಿಸಿಕೊಳ್ಳುತ್ತಾರೋ ಹಾಗೆಯೇ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ವಿಧವಿಧವಾದ ಜಾಹೀರಾತುಗಳ ಮೂಲಕ ನಿಮ್ಮ ಮನಸ್ಸನ್ನು ತಮ್ಮತ್ತ ಸೆಳೆದು ಅವು ಲಾಭಮಾಡಿಕೊಳ್ಳುತ್ತವೆ ಅಷ್ಟೆ.
ಈಗ ಇನ್ನೊಂದು ಉದಾಹರಣೆ ಗಮನಿಸೋಣ. ಇದು ಸೌಂದರ್ಯ ವಿಶೇಷವಾಗಿ ಹೆಣ್ಣುಮಕ್ಕಳ ಸೌಂದರ್ಯದ ಬಗ್ಗೆ. ನೀವು ಒಂದು ಹುಡುಗಿ ಸುಂದರವಾಗಿದ್ದಾಳೋ ಇಲ್ಲವೋ ಎಂದು ನಿರ್ಣಯ ಮಾಡಲು ಉಪಯೋಗಿಸುವ ಮೊತ್ತಮೊದಲ ಪ್ಯಾರಾಮೀಟರ್ ಆಕೆಯ ಮೈಬಣ್ಣ. ಆಕೆ ಬೆಳ್ಳಗಿದ್ದಾಳೆ ಎಂದಾಕ್ಷಣ ಸೌಂದರ್ಯದ ಪರೀಕ್ಷೆಯಲ್ಲಿ ಬಹುತೇಕ ಪಾಸ್. ಅದೇ ಕಪ್ಪಾಗಿದ್ದಾಳೆ ಎಂದಾಕ್ಷಣ ಆಕೆ ಎಷ್ಟೇ ಲಕ್ಷಣವಾಗಿರಲಿ ಅದು ಲೆಕ್ಕಕ್ಕೇ ಬರುವುದಿಲ್ಲ. ಒಬ್ಬ ಹೆಣ್ಣು ಬೆಳ್ಳಗಿದ್ದರೆ ಮಾತ್ರ ಸುಂದರಿ ಎಂದು ಯಾವ ಆಧಾರದ ಮೇಲೆ ನಿರ್ಣಯಿಸಿರಬಹುದು. ?. ಈ ರೀತಿಯ ಒಂದು ಪರಿಕಲ್ಪನೆ ಬಂದಿದ್ದು ನಾವು ಚಿಕ್ಕವರಿದ್ದಾಗ ಸಮಾಜ ಸೌಂದರ್ಯದ ಕುರಿತು ನಮ್ಮ ಮೇಲೆ ಬೀರಿದ ಪ್ರಭಾವದಿಂದ. ಒಂದು ಚಿಕ್ಕ ಮಗುವನ್ನು ಗಮನಿಸಿ. ಆ ಮಗು ಇತರರೊಡನೆ ಆಡಲು ಹೋಗಬೇಕಾದಾಗ ಅವರ ಬಣ್ಣ ನೋಡಿ ಹೋಗುವುದಿಲ್ಲ. ಅವರು ಇತರೆ ಮಕ್ಕಳೊಡನೆ ಬೆರೆಯುವುದಕ್ಕೆ ವರ್ಣ ಅಡ್ಡಿಯಾಗುವುದಿಲ್ಲ. ಆ ಮಗುವಿನ ದೃಷ್ಟಿಯಲ್ಲಿ ಸೌಂದರ್ಯದ ಪರಿಕಲ್ಪನೆ ಹೇಗಿರುತ್ತದೆ ಎಂದರೆ ಯಾರು ತಮ್ಮನ್ನು ಹೆಚ್ಚು ಪ್ರೀತಿಸುತ್ತಾರೋ ಅವರನ್ನು ಹೆಚ್ಚು ಇಷ್ಟಪಡುತ್ತಾರೆಯೇ ವಿನಹ ಯಾರು ಹೆಚ್ಚು ಬೆಳ್ಳಗಿದ್ದಾರೆ ಎಂದು ನೋಡುವುದಿಲ್ಲ. ಆದರೆ ಕಾಲ ಕಳೆದಂತೆ ಸುಂದರತೆ ಎಂದರೆ ಬೆಳ್ಳಗೆ ಇರಬೇಕು ಎಂಬ ಮೂಢನಂಬಿಕೆಯನ್ನು ಸಮಾಜ ಮಗುವಿನ ತಲೆಯಲ್ಲಿ ತುಂಬುತ್ತದೆ. ಎಲ್ಲಿಗಾದರೂ ಸಭೆ ಸಮಾರಂಭಗಳಿಗೆ ಹೋದಾಗ ಆ ಮಗುವಿನ ತಾಯಿ ಒಬ್ಬ ಬೆಳ್ಳಗೆ ಇರುವ ಹೆಣ್ಣುಮಗಳನ್ನು ನೋಡಿ ಆಕೆಯ ಗುಣ ಸ್ವಭಾವಗಳನ್ನು ಲೆಕ್ಕಕ್ಕೇ ತೆಗೆಯದೆ ಆಕೆಯನ್ನು ಸುಂದರಿ ಎಂದುಬಿಡುತ್ತಾಳೆ. ಅದೇ ದಿನ ಟೀವಿಯಲ್ಲಿ ಫ಼ೈರ್ ಎಂಡ್ ಲವ್ಲೀ ಜಾಹೀರಾತನ್ನು ನೋಡಿದ ಮಗು ಕೃಷ್ಣವರ್ಣದ ಹುಡುಗಿ ಆ ಕ್ರೀಮನ್ನು ಹಚ್ಚಿ ಬೆಳ್ಳಗಾದಾಗ ಎಲ್ಲರೂ ಆಕೆಯ ಸೌಂದರ್ಯಕ್ಕೆ ಮಾರುಹೋಗುವುದನ್ನು ನೋಡುತ್ತದೆ. ಇದನ್ನೆಲ್ಲಾ ಗಮನಿಸಿದ ಮಗು ಸೌಂದರ್ಯದ ಮೊದಲ ಲಕ್ಷಣ ಎಂದರೆ ಬೆಳ್ಳಗಿನ ಮೈಬಣ್ಣ ಎಂಬ ದೃಷ್ಟಿಕೋನವನ್ನು ಬೆಳೆಸಿಕೊಳ್ಳುತ್ತದೆ. ಈ ನಂಬಿಕೆಗೆ ಕಾರಣವಾದವರು ಯಾರು? ಅದು ಸಮಾಜ. ಇದರಲ್ಲೂ ಸೌಂದರ್ಯವರ್ಧಕ ಪದಾರ್ಥಗಳನ್ನು ತಯಾರಿಸುವ ಕಂಪನಿಗಳ ಕೊಡುಗೆಯೂ ಇದೆ ಎಂದರೆ ಸುಳ್ಳಲ್ಲ. ಒಮ್ಮೆ ಯೋಚಿಸಿ. ಪ್ರಪಂಚದ ಎಲ್ಲ ಹೆಣ್ಣುಮಕ್ಕಳೂ ತಾವು ಹೇಗಿದ್ದೀವೋ ಹಾಗೇ ಸರಿ ಎಂದು ಯೋಚಿಸಿ ಸುಮ್ಮನೆ ಕುಳಿತರೆ ಈ ಕ್ರೀಮ್ ಗಳನ್ನು ಕೊಂಡುಕೊಳ್ಳುವವರು ಯಾರು ? ಹಾಗಾಗಿಯೇ ಕಂಪನಿಗಳು ಸೌಂದರ್ಯವೆಂದರೆ ಬೆಳ್ಳಗಿನ ಮೈಬಣ್ಣ ಎಂಬ ಮೂಢನಂಬಿಕೆಯನ್ನು ಜನತೆಯಲ್ಲಿ ಬಿತ್ತುತ್ತವೆ. ಹೀಗೆ ಮತ್ತೊಮ್ಮೆ ನಾವು ಮೌಢ್ಯಕ್ಕೆ ಬಲಿಯಾಗುತ್ತೇವೆ.
ಇನ್ನು ಸಾವಯವ(ಆರ್ಗಾನಿಕ್) ಆಹಾರ ಪದಾರ್ಥಗಳ ಸರದಿ. ಸೂಪರ್ ಮಾರ್ಕೆಟ್ ಗಳಿಗೆ ಹೋಗಿ ಆರ್ಗಾನಿಕ್ ಎಂಬ ಲೇಬಲ್ ಕಂಡರೆ ಸಾಕು ಹಿಂದೆ ಮುಂದೆ ಆಲೋಚಿಸದೆ ಖರೀದಿಸುವ ಪ್ರವೃತ್ತಿ ಕೆಲವರಿಗಿದೆ. ಅದೂ ಅದರ ದರ ಸಾಮಾನ್ಯವಾಗಿ ಸಿಗುವುದಕ್ಕಿಂತ ಹೆಚ್ಚು ಎಂದರೆ ಖಂಡಿತವಾಗಿಯೂ ಅದು ಯಾವುದೇ ರಾಸಾಯನಿಕ ಹಾಕದೆ ನೇರವಾಗಿ ರೈತನ ಅಂಗಳದಿಂದಲೇ ತಂದ ವಸ್ತು ಎಂದು ನಂಬುವವರ ಸಂಖ್ಯೆ ಕಡಿಮೆಯಲ್ಲ. ಇನ್ನೂ ಕೆಲವರಿಗೆ ಹೆಚ್ಚು ದರದ ವಸ್ತುಗಳನ್ನು ಕೊಂಡುಕೊಳ್ಳುವ ಹುಚ್ಚು. ಅದು ಇತರೆ ಪದಾರ್ಥಗಳಿಗಿಂತ ಹೆಚ್ಚು ಪರಿಶುದ್ಧ ಹಾಗೂ ಉನ್ನತ ಗುಣಮಟ್ಟದ್ದು ಎಂಬ ನಂಬಿಕೆ. ನಿಜ.. ಯಾವುದೇ ತರಕಾರಿ ಆಗಲಿ ಇತರೆ ವಸ್ತುಗಳಾಗಿ ಅದನ್ನು ಸಾವಯವ ರೀತಿಯಲ್ಲಿ ಬೆಳೆದು ತರುವುದಕ್ಕೆ ಖರ್ಚು ಜಾಸ್ತಿ ಹಾಗಾಗಿಯೇ ಸಾವಯವ ಉತ್ಪನ್ನಗಳ ಬೆಲೆಯೂ ಇತರೆ ಉತ್ಪನ್ನಗಳಿಗಿಂತ ಹೆಚ್ಚಾಗಿರುವುದು ಸಹಜ. ಆದರೆ ಬೆಲೆ ಹೆಚ್ಚಾಗಿದೆ ಎಂಬ ಒಂದೇ ಕಾರಣಕ್ಕೆ ಅದರ ಗುಣಮಟ್ಟ ಅತ್ಯುನ್ನತ ಎಂದು ನಾವು ತಿಳಿದರೆ ಅದು ನಮ್ಮ ಮೂರ್ಖತನ. ಇಂತಹ ಗ್ರಾಹಕರನ್ನೇ ಗುರಿಯಾಗಿರಿಸಿಕೊಂಡ ಕಂಪನಿಗಳು ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅತಿಯಾದ ಲಾಭ ಗಳಿಸಿಕೊಳ್ಳುತ್ತವೆ. ಈ ‘ಜಾಸ್ತಿ ದರ’ದ ಮೌಢ್ಯವೂ ಇತ್ತೀಚಿನ ದಿನಗಳಲ್ಲಿ ಬಹುವಾಗಿ ಪ್ರಚಲಿತದಲ್ಲಿರುವ ಮೂಢನಂಬಿಕೆ.
ಇನ್ನೂ ಕೆಲವರಿಗೆ ಚುಚ್ಚುಮದ್ದು ಇಲ್ಲಾ ಗುಳಿಗೆ ಸೇವಿಸುವ ಅಭ್ಯಾಸ ಇದೆ. ಯಾವುದೇ ಒಂದು ಚಿಕ್ಕ ಕಾಯಿಲೆಯಾದರೂ ಆಗಲಿ ಅದಕ್ಕೊಂದು ಇಂಜೆಕ್ಷನ್ ತೆಗೆದುಕೊಂಡಿಲ್ಲ ಎಂದರೆ ಅವರಿಗೆ ಸಮಾಧಾನವೇ ಇಲ್ಲ. ಅವರ ಅನಾರೋಗ್ಯಕ್ಕೆ ಇಂಜೆಕ್ಷನ್ ನ ಅವಶ್ಯಕತೆ ಇಲ್ಲದೇ ಇದ್ದರೂ ಸಹ ಒಂದು ಬಾರಿ ಡಾಕ್ಟರ್ ಬಳಿಗೆ ಹೋಗಿ ಚುಚ್ಚುಮದ್ದು ಹಾಕಿಸಿಕೊಂಡಾಗ ಮಾತ್ರ ಅವರ ಮನಸ್ಸು ತೃಪ್ತಿಯಾಗುತ್ತದೆ. ನನಗೇ ತಿಳಿದಿರುವ ಒಬ್ಬ ವೈದ್ಯರು ಈ ವಿಷಯವನ್ನು ಹೇಳಿದ್ದಾರೆ. ಅವರಲ್ಲಿಗೆ ಬರುವ ಕೆಲವು ರೋಗಿಗಳು ತೀರಾ ಕ್ಷುಲ್ಲಕ ಅನಾರೋಗ್ಯಕ್ಕೂ ಇಂಜೆಕ್ಷನ್ ಕೊಡಿ ಎಂದು ಕೇಳುತ್ತಾರಂತೆ. ಒಂದು ವೇಳೆ ಇವರು ಕೊಟ್ಟಿಲ್ಲ ಎಂದರೆ ಬೇರೆ ಚುಚ್ಚುಮದ್ದು ಕೊಡುವ ಡಾಕ್ಟರ್ ಬಳಿ ಹೋಗುತ್ತಾರೆ. ಹಾಗಾಗಿ ಅವರಿಗೆ ಕೇವಲ ಶುದ್ಧೀಕರಿಸಿದ ನೀರನ್ನೇ ಇಂಜೆಕ್ಷನ್ ಆಗಿ ಕೊಡುತ್ತೇವೆ ಎನ್ನುತ್ತಾರೆ ಅವರು. ಇದನ್ನು ಕೇಳಿ ನನಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಇಂತಹುದೇ ಅನಾರೋಗ್ಯ ಹಾಗೂ ವೈದ್ಯಕೀಯ ಪ್ರಪಂಚಕ್ಕೆ ಸಂಬಂಧಿಸಿದ ಹಲವಾರು ತಪ್ಪುಕಲ್ಪನೆಗಳು, ಮೂಢನಂಬಿಕೆ ಸಮಾಜದಲ್ಲಿ ಇನ್ನೂ ಅಸ್ತಿತ್ವದಲ್ಲಿದೆ.
ಪಟ್ಟಿ ಮಾಡಿದರೆ ಇಂತಹ ಸುಂದರ ಎನಿಸುವಂತ ನಮಗರಿವಿಲ್ಲದೆಯೇ ನಮ್ಮನ್ನಾವರಿಸಿಕೊಂಡ ಮೂಢನಂಬಿಕೆಗಳ ಹಲವಾರು ಉದಾಹರಣೆಗಳು ಸಿಗಬಹುದು. ತಂದೆಯ ಗುಣ ನೋಡಿ ಮಗನೂ ಹಾಗೇ ಇರುತ್ತಾನೆ ಎಂಬುದು ಒಂದು ಮೂಢನಂಬಿಕೆ. ಒಬ್ಬ ಹುಡುಗಿ ತುಂಬ ಜನ ಹುಡುಗರ ಜತೆ ಸ್ನೇಹಿತೆಯಾಗಿ ಇರುತ್ತಾಳೆ ಎಂದಾಕ್ಷಣ ಅವಳ ನಡತೆ ಬಗ್ಗೆ ಕೆಟ್ಟದಾಗಿ ಆಲೋಚಿಸುವುದು ಬಹಳ ಜನರಲ್ಲಿರುವ ಇನ್ನೊಂದು ಮೂಢನಂಬಿಕೆ. ಇದೇ ರೀತಿ ಹೆಣ್ಣುಮಕ್ಕಳಿಗೆ ಸಹಾಯ ಮಾಡಲು ಬರುವ ಹುಡುಗರು ಖಂಡಿತವಾಗಿ ಫ಼್ಲರ್ಟ್ ಮಾಡಲೆಂದೇ ಬರುತ್ತಾರೆ ಎಂದುಕೊಳ್ಳುವುದು ಇದೇ ರೀತಿಯ ಮೌಢ್ಯದ ಸಾಲಿಗೆ ಸೇರುತ್ತದೆ. ಒಬ್ಬ ವ್ಯಕ್ತಿಯ ಮೇಲೆ ಒಂದು ಆರೋಪ ಬಂದಾಗ ಕೋರ್ಟ್ ತೀರ್ಪಿನ ಮೊದಲೇ ಆತನನ್ನು ಅಪರಾಧಿ ಎಂದೇ ಭಾವಿಸುವುದು ಕೂಡ ಒಂದು ರೀತಿಯ ಇತ್ತೀಚೆಗೆ ಸಮಾಜದಲ್ಲಿ ಬಹಳವಾಗೇ ಪ್ರಚಲಿತವಿರುವ ಒಂದು ಮೌಢ್ಯ. ಯಾರೋ ಕೆಲವು ವ್ಯಕ್ತಿಗಳು ಮಾಡಿದ ಕೃತ್ಯಕ್ಕೆ ಇಡೀ ಅವರ ಸಮಾಜವನ್ನೇ ದೂಷಿಸುವುದು, ಒಬ್ಬ ವ್ಯಕ್ತಿ ಯಾವುದೋ ಒಂದು ಸಮಯದಲ್ಲಿ ತಪ್ಪು ಮಾಡಿದ್ದನೆಂದು ಈಗ ಆತನ ಮೇಲೆ ಬೇರೆ ಯಾವುದೋ ಆರೋಪ ಬಂದಾಗ ಹಿಂದೆಮುಂದೆ ವಿಚಾರಿಸದೆ ಆತನನ್ನು ಅಪರಾಧಿ ಎಂದು ತೀರ್ಮಾನಿಸುವುದು ಕೂಡ ಇಂತಹ ಪೂರ್ವಗ್ರಹಪೀಡಿತ ನಂಬಿಕೆಗಳ ಸಾಲಿಗೆ ಸೇರುತ್ತದೆ. ಮಾಧ್ಯಮಗಳಲ್ಲಿ ಬಂದ ವಿಚಾರಗಳೆಲ್ಲವೂ ಸತ್ಯ ಎಂದು ತಿಳಿಯುವಂತಿಲ್ಲ. ಎಷ್ಟೋ ಮಾಧ್ಯಮಗಳು ಕೆಲವು ಸಿದ್ಧಾಂತಗಳ ವಕ್ತಾರರಂತೆ ಕಾರ್ಯನಿರ್ವಹಿಸುತ್ತವೆ. ಒಂದೇ ಘಟನೆಯ ಬಗ್ಗೆ ನೀವು ವಿಭಿನ್ನ ಮಾಧ್ಯಮಗಳಲ್ಲಿ ಭಿನ್ನವಾದ ವರದಿಯನ್ನು ಗಮನಿಸಿರಬಹುದು. ಅಮೆರಿಕದ ಪ್ರಸಿದ್ಧ ತತ್ತ್ವಶಾಸ್ತ್ರಜ್ಞ ಮಾರ್ಕ್ ಟ್ವೈನ್ ಮಾಧ್ಯಮಗಳ ಕುರಿತು ಈ ರೀತಿ ಹೇಳುತ್ತಾನೆ. ” If you don’t read newspapers you are uninformed, If you read newspapers you are misinformed”. ಈ ಮಾತು ಎಷ್ಟು ಸತ್ಯ ..!!!. ” Biased media” ಗಳ ಈ ಕಾಲದಲ್ಲಿ ಮಾಧ್ಯಮ ವರದಿಗಳನ್ನೇ ಸಂಪೂರ್ಣವಾಗಿ ನಂಬುವುದೂ ಮೂಢನಂಬಿಕೆಗಳ ಸಾಲಿಗೆ ಸೇರುತ್ತದೆ. ಎಲ್ಲಾ ರಾಜಕಾರಣಿಗಳೂ ಭ್ರಷ್ಟರು, ಎಲ್ಲಾ ಶ್ರೀಮಂತರೂ ಅನ್ಯಾಯದಿಂದಲೇ ದುಡ್ಡು ಮಾಡಿರುತ್ತಾರೆ ಎನ್ನುವುದೂ ಸ್ವಲ್ಪ ಹಳೆಯದಾದ ಆದರೆ ಈಗಲೂ ‘ಜನಪ್ರಿಯ’ವಾಗಿರುವ ಕೆಲ ಮೌಢ್ಯಗಳು.
ಇಲ್ಲಿ ನಾನು ವಿವರಿಸಿದ್ದು ಆಧುನಿಕ ಕಾಲದ ಮೂಢನಂಬಿಕೆಗಳ ಕೆಲವು ಉದಾಹರಣೆಗಳು ಮಾತ್ರ. ಪಟ್ಟಿ ಮಾಡುತ್ತಾ ಹೋದರೆ ಇನ್ನೂ ಎಷ್ಟೋ ಸಿಗುತ್ತದೆ. ಅಲ್ಲದೇ ಮೂಢನಂಬಿಕೆ ಎಂಬುದು ಕೇವಲ ಧಾರ್ಮಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ಜೀವನದ ಪ್ರತಿಯೊಂದು ಭಾಗದಲ್ಲೂ ಹಾಸುಹೊಕ್ಕಾಗಿದೆ. ಆದ್ದರಿಂದ ಅದನ್ನರಿತು ಜಾಗರೂಕತೆಯಿಂದ ನಾವು ಮುಂದೆಸಾಗಬೇಕು. ಹೆಚ್ಚೇನೂ ಮಾಡಬೇಕಾಗಿಲ್ಲ. ನಮ್ಮ ಬುದ್ಧಿ, ವಿವೇಕ ನಮ್ಮ ಕೈಯಲ್ಲಿದ್ದರೆ ಸಾಕು. ಇಂತಹ ಮೂಢನಂಬಿಕೆಗಳ ಮಾಯಾಜಾಲದಿಂದ ಸುಲಭವಾಗಿ ಪಾರಾಗಬಹುದು. ಆದ್ದರಿಂದ ಇಂತಹ ಮೂಢನಂಬಿಕೆಗಳ ಗುಲಾಮರಾಗದೆ ವಿವೇಕವಂತರಾಗಿ ಪೂರ್ವಗ್ರಹರಹಿತರಾಗಿ ಬಾಳೋಣ.
kishor.polya@gmail.com