ಜಗವ ಕಾಣುವ ಮೊದಲೇ
ಹಸಿವನ್ನು ಕಳೆದವಳು..
ಇಟ್ಟ ಪುಟ್ಟ ಹೆಜ್ಜೆಗೆಲ್ಲ
ಎದೆಹಾಲ ಕಸುವಿತ್ತವಳು..
ಗರ್ಭದಾ ಒಳಹೊರಗೂ
ಸ್ವರ್ಗವನೇ ಹರಸಿಹಳು..
ಇಲ್ಲಿ `ಅವಳೊಬ್ಬ’ ತಾಯಿ..
ಒಂದೇ ನೂಲಿನ ಒಡಲಲಿ
ಹುಟ್ಟಿದಾ ನವಿರು ಎಳೆಯು
ಬಿಡಿ ದೇಹ ಹಿಡಿ ಜೀವ
ತುಸುಮುನಿಸಿನಲಿ ಗುದ್ದು..
ಮರುಗಳಿಗೆ ಮುಗುಧತೆಯ ಮುದ್ದು..
ಇಲ್ಲಿ `ಅವಳೊಬ್ಬ’ ಅನುಜೆ..
ತೊದಲಿನಾ ಸೊಗಡಿಗೆ
ಮೃದು ಸಲಿಗೆಯಾದವಳು..
ಶೈಶವದ ಬೆಳಗಿಂದ
ಸಂಜೆ ಬಿಸಿಲಾರುವ ತನಕ
ನೆರಳಂತೆ ಉಳಿದವಳು..
ಕೈಬೆರಳ ತುದಿಗಳಾ
ಮಣ್ಣಿನಲಿ ನೆನಪಾಗುವಳು..
ಇಲ್ಲಿ `ಅವಳೊಬ್ಬ’ ಗೆಳತಿ
ಮಣ್ಣರಸಿ ಬೇರೊಂದು
ಎದೆಯೊಳಗೆ ಇಳಿದಾಗ
ಕಣಕಣಕೆ ಹರಡುವುದು
ಭದ್ರತೆಯ ಸುಳಿವು..
ಪೊರೆ ಕಳಚಿ ಕಲೆತಾಗ
ರಕ್ತದಲಿ ಹೊಸಗಂಧ
ಫಲವಾಗುವುದು ಒಲವು..
ಇಲ್ಲಿ `ಅವಳೊಬ್ಬ’ ಮನದನ್ನೆ..
ಮಡಿಲಲ್ಲಿ ವಾತ್ಸಲ್ಯ,ಬೊಗಸೆಯಲಿ ನೇಹ
ಪ್ರೀತಿಯಾ ಸಾನ್ನಿಧ್ಯ,ಅರ್ಪಣೆಯ ಗೇಹ
ಎಲ್ಲ ದಿಕ್ಕಿನಲೂ ಸೋಕಿಹೋಗುತಿದೆ ಋಣದ ಗಾಳಿ..
ನಿತ್ಯ ಪರ್ವದಾ ಪ್ರತಿಬಿಂದು `ಅವಳು’
ಭಿನ್ನ ಪಾತ್ರದಲಿ..
~`ಶ್ರೀ’