ಅಂಕಣ

ದಾವೂದ್ ಹಸ್ತಾಂತರಕ್ಕೆ ತೊಡಕೇನು?

ರಾಜೇಂದ್ರ ಸದಾಶಿವ ನಿಖಾಲ್ಜೆ ಅಲಿಯಾಸ್ ಛೋಟಾ ರಾಜನ್‘ನನ್ನು ವಿದೇಶದಿಂದ ಬಂದಿಸಿ ಭಾರತಕ್ಕೆ ತಂದಿದ್ದು ಅಪರಾಧಿಕ ಜಗತ್ತಿಗೆ ಸಿಡಿಲೆರಗಿದಂತಾಗಿದೆ. ಅಪರಾಧಿಗಳು, ಅಪರಾಧ ಮಾಡಿದ ದೇಶವನ್ನು ತೊರೆದು ವಿದೇಶದಲ್ಲಿ ಹಾಯಾಗಿ ತಲೆಮರೆಸಿಕೊಂಡಿದ್ದರೆ ಅಂಥವರನ್ನು ಹಿಡಿದು ಕಾನೂನಿನ ಪ್ರಕಾರ ಶಿಕ್ಷೆ ಕೊಡುವುದಾದರೂ ಹೇಗೆ? ಛೋಟಾ ರಾಜನ್‘ನ ನಂತರ ಆತನ ಮಾಜಿ ಬಾಸ್ ದಾವೂದ್ ಇಬ್ರಾಹಿಂ ನನ್ನು ಹಿಡಿಯಲು ಇರುವ ತೊಡಕುಗಳೇನೆಂಬ ಬಗ್ಗೆ ಮೂಡುವ ಸಹಜ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸೋಣ.

ಛೋಟಾ ರಾಜನ್ ನ ಪ್ರಕರಣ

ಮುಂಬಯಿಯ ಮಧ್ಯಮ ಕುಟುಂಬಒಂದರಲ್ಲಿ ಜನಿಸಿ, ಸಿನೆಮಾಗಳ ಬ್ಲಾಕ್ ಟಿಕೆಟ್ ಮಾರುತ್ತಿದ್ದ ಛೋಟಾ ರಾಜನ್, 1980 ರ ದಶಕದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನ ಗುಂಪಿನೊಡಗೂಡಿ, ಕೊಲೆ, ಸುಲಿಗೆ, ಕಳ್ಳ ಸಾಗಣೆ ಸೇರಿದಂತೆ 80ಕ್ಕೂ ಹೆಚ್ಚಿನ ಅಪರಾಧಗಳಲ್ಲಿ ಭಾಗಿಯಾದ ಆಪಾದನೆ ಹೊತ್ತು, 1993 ರ ಮುಂಬಯಿ ಸರಣಿ ಬಾಂಬ್ ಸ್ಫೋಟದ ನಂತರ ದಾವೂದ್ ನ ಎದುರಾಳಿಯಾಗಿ, 26ನೇ ಅಕ್ಟೋಬರ್ 2015 ರಂದು, 27 ವರ್ಷಗಳ ನಂತರ ಸೆರೆ ಸಿಕ್ಕಿದ್ದಾನೆ. 1988ರಲ್ಲಿ ದುಬೈಗೆ ಪರಾರಿಯಾಗಿ, ನಂತರ ಹಲವು ರಾಷ್ಟ್ರಗಳಲ್ಲಿ ತಲೆ ಮರೆಸಿಕೊಂಡು ತಿರುಗಿ, ಆಸ್ಟ್ರೇಲಿಯಾದಿಂದ ಇಂಡೋನೇಷಿಯಾ ಗೆ ಪ್ರಯಾಣಿಸುವಾಗ ಬಾಲಿ (ಇಂಡೋನೇಷಿಯಾ) ಯಲ್ಲಿ ಸೆರೆಸಿಕ್ಕ ಈತನನ್ನು ಭಾರತೀಯ ಪೊಲೀಸರು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಈತ ದೆಹಲಿಯ ತಿಹಾರ್ ಜೈಲ್ ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಅಪರಾಧಿಗಳ ತಲೆ ಮರೆಸಿಕೊಳ್ಳುವಿಕೆ

ಭಾರತದಲ್ಲಿ ಅಪರಾಧವನ್ನು ಎಸಗಿ ಬೇರೊಂದು ದೇಶದಲ್ಲಿ ತಲೆಮರೆಸಿಕೊಂಡಿರುವ ಪಾತಕಿಗಳ ಹಲವಾರು ನಿದರ್ಶನಗಳು ನಮ್ಮ ಮುಂದಿವೆ. ಜನಪ್ರಿಯ ವ್ಯಕ್ತಿಗಳನ್ನು ಸೆರೆ ಹಿಡಿದು ತಂದಾಗ ಅದು ಮಾದ್ಯಮದ ಗಮನ ಸೆಳೆಯುತ್ತದೆ. ಆದರೆ, ನೈಜವಾಗಿ, ಭಾರತದ ಗೃಹ ಖಾತೆ ಹಾಗೂ ವಿದೇಶಾಂಗ ಖಾತೆಗಳು ಇಂಥ ಪ್ರಕರಣಗಳಲ್ಲಿ ಆಪಾದಿತರನ್ನು ಭಾರತಕ್ಕೆ ಕರೆತರುವ ಹಾಗೂ ಭಾರತದಲ್ಲಿ ನೆಲೆಸಿರುವ ಆಪಾದಿತ ವಿದೇಶಿ ನಾಗರೀಕರನ್ನು ವಿದೇಶಗಳಿಗೆ ಹಸ್ತಾಂತರಿಸುವ ಕಾರ್ಯದಲ್ಲಿ ಪ್ರತಿ ದಿನ ಮಗ್ನವಾಗಿವೆ. ಆಂಡರ್ಸನ್, ಕ್ವಟ್ರೋಚಿ, ಅಬು ಸಲೆಮ್ ರಿಂದ ಹಿಡಿದು, ಡೇವಿಡ್ ಹೆಡ್ಲಿ ವರೆಗೂ ಹಲವಾರು ಖ್ಯಾತನಾಮರ ಪ್ರತ್ಯರ್ಪಣಕ್ಕಾಗಿ ಸರ್ಕಾರ ಶ್ರಮಿಸುತ್ತಿದೆ/ಶ್ರಮಿಸಿದೆ.

ಪ್ರತ್ಯರ್ಪಣ (Extradition)

ಅಪರಾಧಿಕ ಕಾನೂನಿನ ತತ್ವದ ಪ್ರಕಾರ, ಒಂದು ದೇಶವು ಇನ್ನೊಂದು ದೇಶದ ಒಳಗೆ ತನ್ನ ಅಪರಾಧಿಕ ಕಾನೂನನ್ನು/ಅಧಿಕಾರವನ್ನು ಚಲಾಯಿಸುವಂತಿಲ್ಲ. ಅಂದರೆ, ಉದಾಹರೆಣೆಗೆ, ಒಬ್ಬ ವ್ಯಕ್ತಿ ಭಾರತದಲ್ಲಿ ಅಪರಾಧವೆಸಗಿ ಇನ್ನೊಂದು ದೇಶಕ್ಕೆ ಪರಾರಿಯಾದರೆ, ಭಾರತದ ಪೊಲೀಸರನ್ನು ಅಲ್ಲಿಗೆ ಕಳುಹಿಸಿ ಆತನನ್ನು ಬಂಧಿಸಿ ತರುವಂತಿಲ್ಲ. ಅದು ಆ ದೇಶದ ಸಾರ್ವಭೌಮತೆಗೆ ಭಂಗ ತರುವ ಪ್ರಯತ್ನವಾಗುವುದಲ್ಲದೇ ಆ ದೇಶದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪವೆಂದೇ ಬಿಂಬಿತವಾಗುತ್ತದೆ. ಈ ಸಮಸ್ಯೆಯಿಂದಾಗಿ ಅಪರಾಧಿಕ ವ್ಯವಸ್ಥೆಯ ಮೇಲೆ ಬೀರಬಹುದಾದ ದುಷ್ಪರಿಣಾಮವನ್ನು ತಡೆಯಲು ವಿವಿದ ದೇಶಗಳು ದ್ವಿಪಕ್ಷೀಯವಾಗಿ (ಹಲವೊಮ್ಮೆ ಬಹುಪಕ್ಷೀಯವಾಗಿಯೂ) ಒಪ್ಪಂದ ಮಾಡಿಕೊಂಡಿರುತ್ತವೆ. ಇದನ್ನು “ಪ್ರತ್ಯರ್ಪಣ ಸಂಧಿ” ಎಂದು ಕರೆಯಲಾಗುತ್ತದೆ. ಪ್ರತ್ಯರ್ಪಣ ಸಂಧಿಯಲ್ಲಿ ವಿಷದವಾಗಿ ಅಪರಾಧಿಗಳ ಅಥವಾ ಆರೋಪಿತರ ಹಸ್ತಾಂತರಣದ ಬಗ್ಗೆ ಉಲ್ಲೇಖಿಸಲಾಗಿರುತ್ತದೆ. ಅಂದರೆ, ಯಾವ ಅಪರಾಧಗಳಿಗೆ ಸಂಭಂದಿಸಿದಂತೆ ಹಸ್ತಾಂತರ ಮಾಡವಂತಿಲ್ಲ; ಹಸ್ತಾಂತರಣಕ್ಕೆ ಸಂಬಂದಿಸಿದ ಮೂಲ ಶರತ್ತುಗಳೇನು; ಹಸ್ತಾಂತರದ ವಿಧಿ – ವಿಧಾನಗಳೇನು; ಯಾವ್ಯಾವ ದಾಖಲೆ/ಸಾಕ್ಷಗಳನ್ನು ಒದಗಿಸಬೇಕು; ಹಸ್ತಾಂತರಣದ ಮೊದಲು ಬಂದಿಸುವಿಕೆಗೆ ಸಂಭಂದಿಸಿದಂತೆ, ಇತ್ಯಾದಿ ಹಲವಾರು ವಿಷಗಳ ಬಗ್ಗೆ ವಿಸ್ತೃತವಾದ ಕರಾರುಗಳಿರುತ್ತವೆ. ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ಅದೇ ಸಮಯದಲ್ಲಿ ಆತನ ಹಕ್ಕುಗಳಿಗೆ ಚ್ಯುತಿ ಬರಬಾರದು. ಈ ಎರೆಡೂ ವಿಷಯಳನ್ನು ಸಮತೂಗಿಸುವಲ್ಲಿ ಪ್ರತ್ಯರ್ಪಣ ಸಂಧಿಗಳು ಸಹಕಾರಿ.

ಭಾರತದಲ್ಲಿನ ಆರೋಪಿಯನ್ನು ವಿದೇಶಕ್ಕೆ ಪ್ರತ್ಯರ್ಪಣ ಮಾಡುವಿಕೆ

ಒಬ್ಬ ವ್ಯಕ್ತಿ ವಿದೇಶದಲ್ಲಿ ಅಪರಾಧವೆಸಗಿ ಭಾರತದಲ್ಲಿ ನೆಲೆಸಿದ್ದರೆ, ಆ ವಿದೇಶದೊಂದಿಗೆ ಭಾರತ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡಿದ್ದರೆ, ವಿದೇಶದಿಂದ ಆ ಆಪಾದಿತನನ್ನು ಹಸ್ತಾಂತರಿಸುವಂತೆ ಕೋರಿ ಮನವಿ ವಿದೇಶಾಂಗ ಇಲಾಖೆಗೆ ಬರುತ್ತದೆ. ವಿದೇಶಾಂಗ ಇಲಾಖೆಯು, ಆಪಾದಿತನ ವಿರುದ್ದ ಬಲವಾದ ಸಾಕ್ಷಿ ಇದ್ದು, ಮೇಲ್ನೋಟಕ್ಕೆ ಅಪರಾಧವೆಸಗಿದ್ದು ತೋರ್ಪಟ್ಟರೆ, ಆ ಮನವಿ ದ್ವಿಪಕ್ಷೀಯ ಸಂಧಿಯ ಕರಾರುಗಳಿಗನುಗುಣವಾಗಿದ್ದರೆ, ಅದನ್ನು ಪುರಸ್ಕರಿಸಿ, 1962ರ ‘ಪ್ರತ್ಯರ್ಪಣ ಕಾಯ್ದೆ’ ಯ ಅನ್ವಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ನಿಂದ ತನಿಕೆಗೆ ಆದೇಶಿಸುತ್ತದೆ. ನ್ಯಾಯಿಕ ಮ್ಯಾಜಿಸ್ಟ್ರೇಟ್, ವಿಚಾರಣೆ ನಡೆಸಿ, ವಿದೇಶೀ ಪ್ರತ್ಯರ್ಪಣ ಕೋರಿಕೆ ಸರಿ ಎಂದು ಕಂಡುಬಂದಲ್ಲಿ, ಆ ಆಪಾದಿತನನ್ನು ವಿದೇಶಕ್ಕೆ ಹಸ್ತಾಂತರಿಸಲು ಆದೇಶಿಸುತ್ತಾರೆ. ನಂತರ, ಪೂರ್ವ ನಿಗದಿತ ದಿನಾಂಕದಂದು, ವಿಮಾನ ನಿಲ್ದಾಣದಲ್ಲಿ ಆತನನ್ನು ವಿದೇಶೀ ಪೊಲೀಸ್ ಗೆ ಹಸ್ತಾಂತರಿಸಲಾಗುತ್ತದೆ.

ವಿದೇಶದಲ್ಲಿರುವ ಆರೋಪಿಯನ್ನು ಭಾರತಕ್ಕೆ ಪ್ರತ್ಯರ್ಪಣಮಾಡುವಿಕೆ

ಭಾರತದಲ್ಲಿ ಅಪರಾಧವೆಸಗಿ ವಿದೇಶದಲ್ಲಿ ನೆಲೆಸಿರುವ ವ್ಯಕ್ತಿಯ ಪ್ರತ್ಯರ್ಪಣ, ಆ ದೇಶದೊ0ದಿಗಿನ ಪ್ರತ್ಯರ್ಪಣ ಸಂಧಿ ಹಾಗೂ ಅಲ್ಲಿನ ಅಲ್ಲಿನ ಆಂತರಿಕ ಕಾನೂನಿನ ಪ್ರಕಾರ ನಡೆಯುತ್ತದೆ. ಭಾರತದ ಗೃಹ ಇಲಾಖೆ, ಸಮಗ್ರ ಸಾಕ್ಷಗಳನ್ನೊಳಗೊಂಡ ಕೋರಿಕೆಯನ್ನು ವಿದೇಶಾಂಗ ಇಲಾಖೆಗೆ ಕಳುಹಿಸಿ ಕೊಡಬೇಕು. ವಿದೇಶಾಂಗ ಇಲಾಖೆಯು ಆ ಕೋರಿಕೆಯನ್ನು, ಆ ದೇಶದೊಂದಗಿನ ಪ್ರತ್ಯರ್ಪಣ ಸಂಧಿಯೊಂದಿಗೆ ಹೋಲಿಸಿ ಪರಿಶೀಲಿಸಿ ನೋಡಿ, ನಂತರ ಆ ವಿದೇಶದ ವಿದೇಶಾಂಗ ಇಲಾಖೆಗೆ ಕಳುಹಿಸುತ್ತದೆ. ಭಾರತದ ಮನವಿಯನ್ನು ಪರಿಶೀಲಿಸಿ ವಿದೇಶವು ಆರೋಪಿಯನ್ನು ಹಸ್ತಾಂತರಿಸುತ್ತದೆ.

ಪ್ರತ್ಯರ್ಪಣ ನಿರಾಕರಣೆ

ಎರೆಡು ದೇಶಗಳ ನಡುವೆ ಪ್ರತ್ಯರ್ಪಣ ಸಂಧಿ ಇದೆ ಎಂದಾದ ಮಾತ್ರಕ್ಕೇ ಒಂದು ದೇಶವು ತನ್ನಲ್ಲಿರುವ ಆಪಾದಿತನನ್ನು ಹಸ್ತಾಂತರಿಸಬೇಕೆಂದೆನಿಲ್ಲ . ಒಂದು ವೇಳೆ ಆ ಅಪರಾಧವು ಎರೆಡೂ ರಾಷ್ಟ್ರಗಳಲ್ಲಿ ಅಪರಾಧವಲ್ಲದಿದ್ದರೆ, ಅಪರಾಧವು ರಾಜಕೀಯವಾಗಿ ಪ್ರೇರಿತವಾಗಿದ್ದಾರೆ, ವಿಚಾರಣೆಗೊಳಪಡಿಸಲು ನಿಗದಿಗೊಳಿಸಿದ ಸಮಯಾವಧಿ ಮೀರಿದ್ದರೆ ಅಥವಾ ಕೋರಿತ ಪ್ರಕರಣಗಳ್ಳದೇ ಬೇರೆ ಪ್ರಕರಣಗಳ ಅಡಿಯಲ್ಲಿ ಶಿಕ್ಷೆ ನೀಡುವ ಸೂಚನೆಯಿದ್ದರೆ, ಮನವಿಯಲ್ಲಿನ ದಾಖಲೆಗಳು ದೋಷಪೂರಿತವಾಗಿದ್ದರೆ, ಹಸ್ತಾಂತರದ ಕೋರಿಕೆಯನ್ನು ನಿರಾಕರಿಸಬಹುದು. ಕೆಲವು ದೇಶಗಳು ಮೃತ್ಯುದಂಡನೆ ಚಾಲ್ತಿಯಲ್ಲಿರುವ ದೇಶಗಳಿಗೆ ಆರೋಪಿತನನ್ನು ಹಸ್ತಾಂತರಿಸುವ ಮುನ್ನ ಷರತ್ತನ್ನು ವಿಧಿಸಬಹುದು. ಅಬು ಸಲೆಮ್‘ನನ್ನು ಹಸ್ತಾಂತರಿಸುವ ಮುನ್ನ ಪೋರ್ಚುಗಲ್ ಸರ್ಕಾರವು ಆತನಿಗೆ ಮರಣದಂಡನೆ ನೀಡದಂತೆ ಷರತ್ತು ವಿಧಿಸಿದ್ದನ್ನು, ಹಾಗೂ ಅಂದಿನ ಗೃಹ ಮಂತ್ರಿ ಅಡ್ವಾಣಿಯವರು ಪೋರ್ಚುಗಲ್ ಸರ್ಕಾರಕ್ಕೆ, ಮರಣದಂಡನೆ ವಿದಿಸುವುದಿಲ್ಲವೆಂಬ ಆಶ್ವಾಸನೆ ಕೊಟ್ಟಿದ್ದನ್ನು ನೆನಪಿಸಿಕೊಳ್ಳಬಹುದು. ಕೆಲವು ಪ್ರತ್ಯರ್ಪಣ ಸಂಧಿಗಳಲ್ಲಿ ಒಂದು ದೇಶವು ತನ್ನದೇ ನಾಗರೀಕರನನ್ನು ಹಸ್ತಾಂತರಿಸಲು ನಿರಾಕರಿಸಬಹುದು. ಉದಾಹರಣೆಗೆ ಭಾರತ – ಸೌದಿಅರೇಬಿಯ ಪ್ರತ್ಯರ್ಪಣ ಸ0ಧಿ, ಭಾರತ – ಯು ಎ ಈ ಪ್ರತ್ಯರ್ಪಣ ಸ0ಧಿ.

ಗಡೀಪಾರು

ವಿದೇಶೀ ನಾಗರೀಕ ತನ್ನ ದೇಶದ ಗಡಿಯೊಳಗೆ ಆಕ್ರಮವಾಗಿ ನೆಲೆಸಿದ್ದಲ್ಲಿ, ಒಂದು ದೇಶವು ಆತನನ್ನು ತನ್ನ ದೇಶದಿಂದ ಹೊರ ಹಾಕಬಹುದು. ಇದನ್ನು ಬೇರೊಂದು ದೇಶದ ಕೋರಿಕೆಯ ಅನ್ವಯವೂ ಮಾಡಬಹುದು ಇಲ್ಲವೇ ಏಕ ಪಕ್ಷೀಯವಾಗಿ ಮಾಡಬಹುದು. ಗಡೀಪಾರಿಗೆ ಯಾವುದೇ ಒಪ್ಪಂದದ ಅಗತ್ಯವಿಲ್ಲ ಹಾಗೂ ಇದು ಆ ದೇಶದ ಆಂತರಿಕ ಕಾನೂನಿನ ಪ್ರಕ್ರಿಯೆಗಳ ಮೂಲಕ ನಡೆಯುವಂತದ್ದು. ಪ್ರತ್ಯರ್ಪಣಕ್ಕೆ ಹೊಲಿಸಿದರೆ ಇದೊಂದು ಸರಳ ಪ್ರಕ್ರಿಯೆಯಾಗಿದ್ದು, ಶೀಘ್ರವಾಗಿ ಹಸ್ತಾಂತರಿಸುವಲ್ಲಿ ಸಹಾಯಕಾರಿ. ಅಮೆರಿಕ, ಆಸ್ಟ್ರೇಲಿಯಾ, ಯುರೋಪಿನ ದೇಶಗಳು ಸೇರಿದಂತೆ ಹಲವು ದೇಶಗಳು ಪ್ರತ್ಯರ್ಪಣದ ಮೂಲಕವೇ ಆರೋಪಿಗಳನ್ನು ಹಸ್ತಾಂತರಿಸುತ್ತವೆ ಹೊರತು ಗಡಿಪಾರಿನ ಮೂಲಕವಲ್ಲ. ಏಕೆಂದರೆ ಅಲ್ಲಿನ ಕಾನೂನಿನ ವ್ಯವಸ್ಥೆ ಇದಕ್ಕೆ ಆಸ್ಪದ ಮಾಡಿಕೊಡುವುದಿಲ್ಲ. ಗಡಿಪಾರಿನ ಮೂಲಕ ಆರೋಪಿಗಳ ಹಸ್ತಾಂತರಕ್ಕೆ ಎರೆಡು ದೇಶಗಳ ನಡುವಿನ ಸೌಹಾರ್ದಯುತ ಸಂಬಂಧ ತೀರಾ ಅಗತ್ಯ.

ಛೋಟಾ ರಾಜನ್ ನನ್ನು ಭಾರತ ಸರ್ಕಾರದ ಕೋರಿಕೆಯ ಮೇರೆಗೆ ಇಂಡೋನೇಷಿಯ ಸರ್ಕಾರವು ಗಡಿಪಾರು ಮಾಡಿತು. ಹಾಗೆಯೇ, ಇತ್ತೀಚೆಗೆ ಬಾಂಗ್ಲಾದೇಶ ಸರ್ಕಾರವು ಉಲ್ಫಾದ ಮುಖಂಡ ಅನೂಪ್ ಚೇತಿಯನನ್ನು ಭಾರತಕ್ಕೆ ಗಡಿಪಾರು ಮಾಡಿತು. ಇದಕ್ಕೆ ಪ್ರತಿಯಾಗಿ ಭಾರತವು ಸಹಾ ಬಾಂಗ್ಲಾದೇಶಕ್ಕೆ ಬೇಕಾಗಿದ್ದ ನೂರ್ ಹುಸೇನ್ ನನ್ನು ಗಡಿಪಾರು ಮಾಡಿತು. ಈ ಪ್ರಕರಣಗಳು ಭಾರತ ಮತ್ತು ಬಾಂಗ್ಲಾದೇಶದ ನಡುವೆ ಹೆಚ್ಚುತ್ತಿರುವ ಭಾಂದವ್ಯದ ದ್ಯೋತಕವಾಗಿಯೂ ಗೋಚರಿಸುತ್ತವೆ.

ದಾವೂದ್ ಇಬ್ರಾಹಿಂನ ಪ್ರತ್ಯರ್ಪಣ?

1994ರ ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ ಹಾಗೂ ಅನೇಕ ಹೀನ ಅಪರಾಧಗಳಲ್ಲಿ ಶಾಮೀಲಾಗಿರುವುದಾಗಿ ಶಂಕೆಯಿರುವ ದಾವೂದ್, ಪಾಕಿಸ್ತಾನದ ರಾಜಾಶ್ರಯದಲ್ಲಿರುವುದು ಜಗತ್ತಿಗೇ ಗೊತ್ತಿರುವ ವಿಚಾರ. ಈತನನ್ನು ಹಸ್ತಾಂತರಿಸುವಂತೆ ಭಾರತವು ಪಾಕಿಸ್ತಾನವನ್ನು ಬಹುಸಮಯದಿಂದಲೂ ಕೋರುತ್ತಿದೆ. ಆದರೆ, ಪಾಕಿಸ್ತಾನವು ಆತನ ಇರುವಿಕೆಯನ್ನೆ ಅಲ್ಲಗಳೆಯುತ್ತಾ ಬಂದಿದೆ. ಆತ ಪಾಕಿಸ್ತಾನದಲ್ಲಿರುವ ಬಗ್ಗೆ ಭಾರತಕ ಖಚಿತ ಮಾಹಿತಿಯನ್ನು ನೀಡಿದ್ದು, ಪ್ರಾಮಾಣಿಕತೆಯಿದ್ದರೆ ಪಾಕ್ ಆತನನ್ನು ಹಸ್ತಾಂತರಿಸಬೇಕಿತ್ತು. ಭಾರತ – ಪಾಕ್ ನಡುವೆ ಯಾವುದೇ ಪ್ರತ್ಯರ್ಪಣ ಸಂಧಿ ಇಲ್ಲ, ಈತನನ್ನು ಹಸ್ತಾಂತರಿಸಲು ಪಾಕ್ ಸರ್ಕಾರಕ್ಕೂ ಮನಸ್ಸಿಲ್ಲ. ಇಂಥ ಸಂದರ್ಭದಲ್ಲಿ ಉಳಿದಿರುವ ಒಂದೇ ಆಯ್ಕೆಯೇನೆಂದರೆ, ಆತನ ವಿರುದ್ಧ ಹೊರಡಿಸಲಾಗಿರುವ ರೆಡ್ ಕಾರ್ನರ್ ನೋಟಿಸ್ ನ ಆಧಾರದ ಮೇಲೆ ಆತ ಪಾಕಿಸ್ತಾನದಿಂದ ಬೇರೆ ದೇಶಕ್ಕೆ ಪ್ರಯಾಣಿಸಿದಾಗ ಆತನನ್ನು ಬಂಧಿಸಿ, ಭಾರತಕ್ಕೆ ಹಸ್ತಾಂತರಿಸುವುದು. ಇದು, ಭಾರತ ಮತ್ತು ಆ ದೇಶದ ನಡುವಿನ ಸಂಭಂದ ಹಾಗೂ ಪಾಕ್ ಮತ್ತು ಆ ದೇಶದ ನಡುವಿನ ಸಂಭ0ದಗಳ ಮೇಲೆ ಅವಲಂಭಿತವಾಗಿದೆ. ಛೋಟಾ ರಾಜನ್ ವಿಷಯದಲ್ಲಿ ಇಂಡೋನೇಷಿಯಾವು ಸಹಕರಿಸಿದಂತೆ ದಾವೂದ್ ತಲುಪುವ ರಾಷ್ಟ್ರವು ಸಹಕರಿಸಿದರೆ ಈತನನ್ನು ಭಾರತಕ್ಕೆ ಕರೆತರುವುದು ಕಷ್ಟವೇನಲ್ಲ. ಭಾರತ, ಇಂಟರ್ಪೋಲ್ (INTERPOL) ನೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದು ಈ ಸಂಭಂಧವಾಗಿ ಅದು ಸಹಾಯ ಮಾಡಲಿದೆ ಎಂಬ ಆಶಾಭಾವವಿದೆ. ದಾವೂದ್ ನಂಥ ಭೂಗತ ಜಗತ್ತಿನ ಅಪರಾಧಿಗಳು, ಬೇರೆ ಬೇರೆ ಹೆಸರಿನಲ್ಲಿ ನಕಲಿ ಪಾಸ್’ಪೋರ್ಟ್ ಹೊಂದಿದ್ದೇ ಅಲ್ಲದೆ ಬೇರೊಂದು ರಾಷ್ಟ್ರದ ಶ್ರೀರಕ್ಷೆಯಲ್ಲಿರುವುದರಿಂದ, ತನಿಖಾ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದಾರೆ.

ಒಟ್ಟಿನಲ್ಲಿ, ದೇಶ-ದೇಶಗಳ ನಡುವೆ ಗಡಿ ಮಬ್ಬಾಗುತ್ತಿರುವ ಜಾಗತೀಕರಣದ ಈ ಯುಗದಲ್ಲಿ, ಭಯೋತ್ಪಾದನೆ, ಆರ್ಥಿಕ ಅಪರಾಧಗಳು ಸಾಲು ಸಾಲಾಗಿ ಘಟಿಸುತ್ತಿರುವಾಗ, ಅಪರಾಧಿಗಳು ಒಂದು ದೇಶದಲ್ಲಿ ಅಪರಾಧವೆಸಗಿ ಬೇರೊಂದು ದೇಶದಲ್ಲಿ ತಲೆ ಮರೆಸಿಕೊಳ್ಳುವ ಅಪಾರ ಸಾದ್ಯತೆಗಳಿವೆ. ಇಂಥ ಸಾದ್ಯತೆಗಳನ್ನು ಮಟ್ಟಹಾಕಲು ಜಗತ್ತಿನ ವಿವಿಧ ದೇಶಗಳ ನಡುವೆ ಸೌಹಾರ್ದಯುತ ಸಂಭಂದ ಇರಬೇಕಾದ್ದು ಅತ್ಯಗತ್ಯ. ಈ ನಿಟ್ಟಿನಲ್ಲಿ ಭಾರತವು 37 ಪ್ರಮುಖ ದೇಶಗಳೊಂದಿಗೆ ಪ್ರತ್ಯರ್ಪಣ ಸಂಧಿಯನ್ನು ಹೊಂದಿದ್ದು, ಇನ್ನೂ 8 ದೇಶಗಳೊಂದಿಗೆ ಪ್ರತ್ಯರ್ಪಣ ವ್ಯವಸ್ಥೆ (Extradition arrangements) ಹೊಂದಿದೆ. ಇಷ್ಟೇ ಅಲ್ಲದೆ ಕೆಲವು ಬಹುಪಕ್ಷೀಯ ಸಂಧಿಗಳ ಮೂಲಕವೂ (ಉ.ದಾ. ಹಿಂಸೆಯ ವಿರುದ್ದದ ಸಂಧಿ) ಆರೋಪಿಗಳ ಪ್ರತ್ಯರ್ಪಣ ನಡೆಯಬಹುದು. ಹಲವು ದೇಶಗಳೊಂದಿಗೆ ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆಗಳೂ ನಡೆಯುತ್ತಿವೆ. ಇತ್ತೀಚೆಗೆ ಪ್ರತ್ಯರ್ಪಣದ ಮನವಿಗಳ ಸ0ಖ್ಯೆಯಲ್ಲೂ ವೃದ್ದಿಯಾಗಿದೆ. ಇದನ್ನು ಪರಿಗಣಿಸಿ ಹೇಳುವುದಾದರೆ, ಅಪರಾಧಿಕ ಕೃತ್ಯಗಳ ಹತೋಟಿ ಮತ್ತು ತಡೆಗೆ ವಿಶ್ವದ ವಿವಿಧ ದೇಶಗಳು ಹಿಂದೆಂದಿಗಿಂತಲು ಹೆಚ್ಚು ಉತ್ಸುಕವಾಗಿವೆ ಎನ್ನಬಹುದು. ಇದು ಶಾಂತಿಪ್ರಿಯರಿಗೆ ಶುಭ ಸಮಾಚಾರ.

*****

ಸುಧೀರ್ ಕೀಳಂಬಿ

ಕಾನೂನು ಅಧಿಕಾರಿ

ವಿದೇಶಾಂಗ ಇಲಾಖೆ

ಭಾರತ ಸರ್ಕಾರ

P. S. ಈ ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಲೇಖಕನದ್ದೇ ಹೊರತು ಭಾರತ ಸರ್ಕಾರದ್ದಲ್ಲ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!